ಹುಡುಗುರ್ನ  ಏನ್….. ಕೇಳ್ತೀರಿ, ಬೆಳಿಗ್ಗೆ ಏಳೋದು ಸೂರ್ಯ ಹುಟ್ಟಿದಮ್ಯಾಕೆ, ಇವರ್ಗೆ ಸಂಡಾಸ್‌ಗೆ ಹೋಗಾಕೆ ಬೈಕ್ ಬೇಕು,  ಇಂತಹ ಮಕ್ಕಳ ತಂಗಂಡು ನಾವು ಹ್ಯಾಂಗೆ ಕೃಷಿ ಉದ್ದಾರ ಮಾಡಾಣಾ ಹೇಳಿ?’  ಚೆನ್ನಾರಾಯಪಟ್ಟಣದ ಸನಿಹದ ಹಳ್ಳಿ ಹಿರಿಯರು ಬೆಳ್ಳಂ ಬೆಳಿಗ್ಗೆ ಕೃಷಿ ಉವಾಚ  ಆರಂಭಿಸಿದ್ದರು.  ಊರಿನ ಎರಡು ಕಿಲೋ ಮೀಟರ್ ಆಚೆಯ ಕೆರೆ ದಂಡೆಗೆ ಹೋಗಲು  ನಡೆಯುವ ತಾಕತ್ತಿಲ್ಲದ ಪೀಳಿಗೆ ಇದೆಂದೂ, ಅದಕ್ಕೂ ಬೈಕ್  ಒಯ್ಯುತ್ತಾರೆಂದು ಬಯ್ಯುತ್ತಿದ್ದರು. ಕಾಲೇಜಿಗೆ ಹೋಗೋದಕ್ಕೆ, ನೆಂಟರ ಮನೆ ತಿರುಗಾಟಕ್ಕೆ, ಪೇಟೆ ಓಡಾಟಕ್ಕೆ  ಬೈಕ್ ಯಾನ ಗೊತ್ತಿದೆ, ಬೆಳಿಗ್ಗೆ ಸಂಡಾಸಿಗೆ ತಂಬಿಗೆ ಹಿಡಿದು ಹೋಗಬೇಕಾದವರು ಬೈಕ್ ಹಿಡಿದದ್ದು ಏಕೆ? ಪ್ರಶ್ನಿಸುವದರೊಳಗೆ ಕೆರೆ ದಂಡೆಗೆ ಹೋಗಿದ್ದ ನಾಲ್ಕಾರು ಬೈಕ್‌ಗಳು  ಊರುಕೇರಿಗೆ ಸಾಹಸ ಯಾತ್ರೆ ಮುಗಿಸಿ ಬಂದವರಂತೆ ದೂಳೆಬ್ಬಿಸಿ ಮರಳುತ್ತಿದ್ದವು. ಹೊಲದಂಚಿನ ಕೆರೆದಂಡೆಯಲ್ಲಿ ಪ್ರದರ್ಶನಕ್ಕೆ ನಿಂತಂತೆ ಬೈಕ್‌ಗಳು ಲಂಟಾನ ಪೊದೆಯಂಚುಗಳಲ್ಲಿ  ಸಾಲುಸಾಲು. ಮನೆಯ ಹಿತ್ತಲಲ್ಲಿ ಒಂದು ಶೌಚಾಲಯ ಕಟ್ಟಿಸಲು ಅಂತಹ ಬಡತನವೇನೂ  ಇಲ್ಲ, ಕೆರೆ ದಂಡೆಗೆ ಹೋಗುವ ಲಾಗಾಯ್ತಿನ ಖಯಾಲಿ ಬಿಡಲು ಮನಸ್ಸಿಲ್ಲದವರೆಲ್ಲ ಅಲ್ಲಿ ಜಮಾಯಿಸಿದ್ದರು. ಶೌಚಾಲಯ ಕಟ್ಟಿಸಿದವರೂ ದಿನದ ಚೇಂಜ್‌ಗೆಂದು  ಆಗಾಗ ದಂಡೆಗೆ ಬರುತ್ತಾರೆಂಬುದು ಕೇಳಿ ಅಚ್ಚರಿಯಾಯ್ತು!.

ಮಂಡ್ಯ, ಚೆನ್ನರಾಯಪಟ್ಟಣ ಸನಿಹಗಳ ಹಲವು ಊರುಗಳಲ್ಲಿ  ಇಂದಿಗೂ ಹೊಟ್ಟೆ ಖಾಲಿಮಾಡುವ ಕೆಲಸಕ್ಕೆ ನಿತ್ಯ ಎಷ್ಟು ಲೀಟರ್ ಪೆಟ್ರೋಲ್ ಖಾಲಿಯಾಗುತ್ತದೆಂಬ ಸಂಗತಿ  ಕುತೂಹಲ ಹುಟ್ಟಿಸುವಂತದು! ಮುಂಜಾನೆ ನಡೆದು  ಕೆರೆಗೆ ಹೋಗಿ ಬೆಳಗಿನ ಕೆಲಸ ಮುಗಿಸಿ ಹೊಲದ ಕಡೆ ಓಡಾಡಿ ಬರುವ ಪರಿಪಾಠ ಹಳ್ಳಿಯಲ್ಲಿ ಮಾಮೂಲಿಯಾಗಿತ್ತು. ಮರಳುವಾಗ ಜಾನುವಾರು ಮೇವು, ಉರುವಲು ಹೊತ್ತು ತರುತ್ತಿದ್ದರು. ಒಂದು ತಿರುಗಾಟದಲ್ಲಿ  ಎರಡು ಕೆಲಸ ಸಲೀಸಾಗಿ ನಡೆಯುತ್ತಿತ್ತು. ಸಮಯ ಉಳಿತಾಯವಾಗುತ್ತಿತ್ತು.  ಈಗಿನ ಹೊಸ ತಲೆಮಾರಿಗೆ ಕೃಷಿ ಕೆಲಸದಲ್ಲಿ ಅಂತಹ ಆಸಕ್ತಿಯಿಲ್ಲ, ಬೆಳಗಿನ ಕೆಲಸಕ್ಕೆ ಹಿತ್ತಲ ಶೌಚಾಲಯ ಮರೆತು ಕೆರೆದಂಡೆಗೆ ಬೈಕ್ ಓಡಿಸುವದು ಮಾತ್ರ  ಚಟವಾಗಿದೆ, ಹೊಲ ನೋಡುವದು ಮರೆತಿದೆ.

‘ತೋಟದ ಕಡೆಗೆ ಹೋಗಿ ಬರೋಣವೇ?’  ಬೆಳಿಗ್ಗೆ ಚಹ, ಉಪಹಾರ ಮುಗಿಸಿದ ಬಳಿಕ ಮನೆಗೆ ಬಂದ ನೆಂಟರಲ್ಲಿ  ನಮ್ಮ ಮಲೆನಾಡಿನ ಜನ ೧೫-೨೦ ವರ್ಷಗಳ ಹಿಂದೆ ಕೇಳುತ್ತಿದ್ದರು. ಮನೆಗೆ ಬಂದ ಅತಿಥಿಗಳಿಗೆ ಕೃಷಿ ದರ್ಶನ ಮಾಡಿಸುವದರ ಜತೆಗೆ ಬೆಳಗಿನ  ಏಕಾಂತದ ಕೆಲಸಕ್ಕೆ ಅನುವು ಮಾಡಿಕೊಡುವದು ಮುಖ್ಯ ಉದ್ದೇಶವಾಗಿತ್ತು. ತೋಟದ ಅಂಚಿನಲ್ಲಿ ವರ್ಷವಿಡೀ ನೀರು ಹರಿಯುವ ಹಳ್ಳ, ಕೆರೆ ದಂಡೆ ನೈಸರ್ಗಿಕ ಶೌಚಾಲಯ! ಇಲ್ಲಿ ‘ತೋಟದ ಕಡೆಗೆ ಹೋಗಿ ಬರೋಣ’  ಎಂಬ ಸಹಜ ನುಡಿಯಲ್ಲಿ  ತುರ್ತು ಕರೆಗೆ ಸ್ಥಳ ದರ್ಶನ ಮಾಡಿಸುವ ನೆಪವಿರುತ್ತಿತ್ತು. ಕೃಷಿ ಉತ್ಪಾದನೆ, ತೋಟ ನಿರ್ವಹಣೆ, ಹೊಸ ಸಸ್ಯ ನಾಟಿ ವಿಚಾರ ವಿನಿಮಯ  ಈ ಸಂದರ್ಭದ ತೋಟದ ಓಡಾಟದಲ್ಲಿ ನಡೆಯುತ್ತಿತ್ತು. ಕನಿಷ್ಟ ಒಂದರ್ಧ ತಾಸಾದರೂ ಹರಟುತ್ತ ತೋಟದಲ್ಲಿ ಓಡಾಡುತ್ತಿದ್ದರು. ತೋಟಕ್ಕೆ ರೋಗ ತಗಲಿದ್ದು, ತೆಂಗಿನ ಮರದ ಸುಳಿಯನ್ನು ದುಂಬಿ ಕೊರೆದದ್ದು ಗಮನಕ್ಕೆ ಬರುತ್ತಿತ್ತು. ಗಡಿಭೂಮಿಗಳಲ್ಲಿ ಬಿದ್ದ ಅಡಿಕೆ, ತೆಂಗು  ಹೆಕ್ಕುತ್ತಿದ್ದರು. ವನ್ಯಮೃಗ, ಕಳ್ಳಕಾಕರ ಹಾವಳಿ ನಿಯಂತ್ರಣ  ಸಾಧ್ಯವಿತ್ತು.  ಎಲ್ಲಕ್ಕಿಂತ ಮುಖ್ಯವಾಗಿ ನೆಂಟಿಷ್ಟರು, ಸ್ನೇಹಿತರ ಜತೆ ಹೋದಾಗಂತೂ  ಮನೆಯೊಳಗಿನ ಸುಖ-ದುಃಖದ  ಸಂಗತಿಗಳನ್ನು  ಜತೆ ನಡೆಯುವಾಗ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಒಂದರ್ಥದಲ್ಲಿ  ನೆಂಟರನ್ನು  ಶೌಚಕ್ಕೆ ಕರೆದೊಯ್ಯುವ  ಸಣ್ಣ ಕೆಲಸ ಕೂಡಾ ಮನದ ದುಃಖ ಹಂಚಿಕೊಳ್ಳುವ, ಕೃಷಿ ಕಲಿಯುವ  ದೊಡ್ಡ ಕೆಲಸಕ್ಕೆ  ನೆರವಾಗುತ್ತಿತ್ತು! ಇದು ಮಾನಸಿಕ ಸಲಹಾ ಕೇಂದ್ರ, ಆಪ್ತ ಸಂವಾದದಷ್ಟೇ ಮಹತ್ವದ ಕಾರ್ಯವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಅವಕಾಶವಾಗಿತ್ತು. ಇದಲ್ಲದೇ ನಿತ್ಯ ಮನೆಮಂದಿಯೂ ತೋಟದ ಕಡೆಗೆ ಹೋಗಿ ಬರುವ ಬೆಳಗಿನ ಅನಿವಾರ್ಯತೆಯಲ್ಲಿ ಕೃಷಿ ಭೂಮಿಯ ಜತೆ ನಿತ್ಯ ಒಡನಾಟವಿತ್ತು. ಮನೆ ಮಕ್ಕಳಿಗೂ ತಮ್ಮ ತೋಟದ ಗಡಿ ಗುರುತು ಅರಿಯುವ ಅವಕಾಶ.

ಈಗ ಮನೆ ಮನೆಗೆ  ಶೌಚಾಲಯ ಬಂದಿದೆ, ನಗರ ಮಾದರಿಯಂತೆ ಅಟ್ಯಾಚ್ಡ್ ಬಾತ್‌ರೂಮ್ ಸಂಸ್ಕೃತಿ ಬೆಳೆದಿದೆ. ತೋಟದಂಚಿನ ಹೊಳೆಗೆ ಬೆಳಗಿನ ಕೆಲಸಕ್ಕೆ ಹೋಗುವ ಅನಿವಾರ್ಯತೆ ಉಳಿದಿಲ್ಲ. ಇದರಿಂದ ಮಲೆನಾಡಿನ  ಹಳ್ಳಿಗಳಲ್ಲಿ ಮೂಗು ಕಟ್ಟಿಕೊಳ್ಳದೇ ಹೊಳೆದಂಡೆ ಓಡಾಟ ಕೊಂಚ  ಸಾಧ್ಯವಾಗಿದ್ದೇನೋ ನಿಜ. ಮನೆ ಹಿತ್ತಲಲ್ಲಿ ಹುಟ್ಟಿಕೊಂಡ ಶೌಚಾಲಯ ಆರೋಗ್ಯ ಸುಧಾರಿಸಲು ಸಹಾಯ ನೀಡಿದೆ ಎಂಬ ಮಾತನ್ನೂ ಒಪ್ಪೋಣ.  ಆದರೆ ಕೃಷಿ ಆರೋಗ್ಯ ಗಮನ ಹಿನ್ನಡೆಯಾಗಿದೆಯೇ? ಗಮನಿಸಬೇಕಾದ ಸಂಗತಿಗಳಿವೆ. ಈಗ ಪ್ರತಿ ನಿತ್ಯ  ತೋಟಕ್ಕೆ ಹೋಗುವದಕ್ಕೆ ಕೃಷಿಕರಿಗೆ ಬಿಡುವಿಲ್ಲ. ಫಸಲು ಕೊಯ್ಯುವಾಗ, ಔಷಧ ಸಿಂಪರಣೆ ಘಳಿಗೆಗಳಲ್ಲಿ ಮಾತ್ರ ಹೆಚ್ಚು ಓಡಾಟ. ಕೆರೆ,ಹೊಳೆ ದಂಡೆಗೆ ಹೋಗಬೇಕಾದ  ತುರ್ತು ಕರೆಯ ದಾರಿ  ಹಿತ್ತಲಿಗೆ ತಿರುಗಿದೆ, ಶೌಚಾಲಯ ಮನೆಗೆ ಹತ್ತಿರವಾದಂತೆ ತೋಟ ದೂರವಾಗಿದೆ, ನಿರಂತರ  ಕೃಷಿ ನೋಡುತ್ತಿರುವ ಅವಕಾಶ ತಪ್ಪಿದೆ.

ಮಂಡ್ಯ, ಚೆನ್ನರಾಯಪಟ್ಟಣದ ಕೆಲ ಹಳ್ಳಿಗರ  ಕೆರೆ ದಂಡೆಯ ಬೈಕ್ ಯಾತ್ರೆಯ ಕತೆ ಕೇಳಿದ ಮಲೆನಾಡಿನ ರೈತರು ನಮ್ಮದು ಇದೇ ಕತೆ ಎನ್ನಬಹುದು.  ಲೆಕ್ಕವಿಟ್ಟು ಪರಿಶೀಲಿಸಿದರೆ ತೋಟಕ್ಕೆ ಹೋಗುವದಕ್ಕಿಂತ ಪೇಟೆಗೆ ಹೋಗಿದ್ದೇ ಜಾಸ್ತಿಯಾಗಿರಬಹುದು!. ಹತ್ತಾರು ವರ್ಷಗಳ ಹಿಂದೆ ಒಬ್ಬೊಬ್ಬರಾಗಿ ನಿತ್ಯ  ತೋಟಕ್ಕೆ  ಹೋಗಿ ಬಯಲಲ್ಲಿ ಕೂತು ಬರುತ್ತಿದ್ದವರು ಈಗ ಶೌಚಾಲಯದ ಬಾಗಿಲು ಹಾಕಿ ಕೂತಿದ್ದಾರೆ. ಕೈ ತೊಳೆದು ಸ್ನಾನದ ಬಳಿಕ ಪೇಟೆಗೆ ಓಡುವ ಅವಸರ ಕಾಣುತ್ತಿದೆ. ಸ್ನಾನದ ನೀರು ತೊಂಡೆ, ಬಸಳೆ ಬಳ್ಳಿಗಳ ಚಪ್ಪರಕ್ಕೆ ಹರಿಯುತ್ತ ತರಕಾರಿಗೆ ನೆರವಾಗುತ್ತಿದ್ದ  ಅವಕಾಶ ಕಡಿಮೆಯಾಗಿದೆ, ಸ್ನಾನ, ಶೌಚದ ನೀರು ಭೂಗತ ಟ್ಯಾಂಕ್‌ಗೆ ಇಳಿದು ಭೂಮಿಗೆ ಇಂಗುತ್ತಿದೆ! ತೋಟದ ದಾರಿಗೆ ಅಡ್ಡವಾಗಿ  ಜೇಡದ ಬಲೆಗಳಿವೆ. ನಾವು  ನಮಗರಿವಿಲ್ಲದೇ ಕೃಷಿ ದಾರಿ ಮರೆಸುವ ಆಧುನಿಕತೆಯ ಬಲೆಗೆ ಬಿದ್ದಿದ್ದೇವೆ.