ಅರ್ಥದುಷ್ಟ

ನೆರೆದೂರ್ಧ್ವ-ರೇತನೊಳ್ ಪು[1]ರು-ಹಿರಣ್ಯ-ರೇ[2]ತೋತಿ-ತೀವ್ರನೊಳ್ ಮುನಿ

ವರನೊಳ್ |

ಪರಮ-ಭಗ-ಸಹಿತೆ ಮುದದಿರೆ ಪರಿಶ್ರಮಕ್ಕೆನ್ನ ನಿರ್ವಿಶೇಷನೊಳಾಗಳ್ ||೬೪||

ಶ್ರುತಿಕಷ್ಟ

ಪರದರ್ಗಾ ಪಾ[3]ರ್ವರ್ಗಾ[4]ಯ್ತರಸರ್ಗಾ ಕುಡಿಯರಪ್ಪ ನಾಲ್ವರ್ಗಾಗಳ್ |

ಸ್ಥಿ[5]ರ-ಗೋಪಾಧ್ಯಾಯ-ಕ್ಷ್ಮಾ-ಪರಿಪಾಲ್ಯ-ಕ್ಷೇತ್ರ-ಕರ್ಷಣಂಗಳ್ ಕ್ರಿಯೆಗಳ್ ||೬೫||

ಕಲ್ಪನೋಕ್ತಿ.ಕಷ್ಟ

ಮಸಗಿ ಬೆಸೆದಿರ್ದು ವಿವರಮನಸಿಯದಱೆ[6]ಡೆವೊತ್ತಿ ಪೊಕ್ಕು ಕೆಲನಂ ಕೊರ್ಬು- |

ತ್ತೆಸೆದು ಬಿ[7]ದಿರ್ದಾರ್ದುಮೆೞ್ದೆೞ್ದಸಮಂಜಸನಿಕ್ಕಿ ಮಿಕ್ಕನರಿ-ವಾಹಿನಿಯಂ ||೬೬||

೬೪. *‘ಅರ್ಥದುಷ್ಟಕ್ಕೆ ಉದಾಹರಣೆ-* ‘ಊರ್ಧ್ವರೇತ’ನೂ ಮಹಾ ‘ಹಿರಣ್ಯರೇತ’ನೂ ಅತಿತೀವ್ರ ತಪದವನೂ ನಿರತಿಶಯನೂ ಆದ ಮುನಿವರನಲ್ಲಿ ನೆರೆದು ‘ಪರಮ ಭಗ’ ಸಹಿತೆ ಸಂತೋಷಗೊಂಡಾಗ ನನ್ನ ಪರಿಶ್ರಮಕ್ಕೆ (ಫಲವಾಯಿತು?)!

೬೫. *‘ಶ್ರುತಿಕಷ್ಟ’ಕ್ಕೆ ಉದಾಹರಣೆ-* ವ್ಯಾಪಾರಿಗಳಿಗೆ, ಬ್ರಾಹ್ಮಣರಿಗೆ, ಅರಸರಿಗೆ, ಅಂತ್ಯವರ್ಣದವರಿಗೆ-ಹೀಗೆ ನಾಲ್ವರಿಗೂ ನಿರಂತರ ಪಶುಪಾಲನೆ, ಅಧ್ಯಯನ, ಭೂರಕ್ಷಣೆ, ನೆಲವನ್ನುಳುವುದು ಇವೇ ವೃತ್ತಿಗಳು. *ಇಲ್ಲಿ ‘ರ್ಗಾ’, ‘ರ್ಷ’ ಎಂದು ಮುಂತಾಗಿ ಮೂಲದಲ್ಲಿ ಬರುವ ಸರೇಫ ಸಂಯುಕ್ತಾರಗಳಷ್ಟೇ ದೋಷಕ್ಕೆ ಲಕ್ಷ್ಯ*.

೬೬. *‘ಕಲ್ಪನೋಕ್ತಿಕಷ್ಟ’ಕ್ಕೆ ಉದಾಹರಣೆ-) ಕನಲಿ, ಬೆಸೆದು, ತೂತನ್ನು ಆಸಿಯ ಎಡೆಗೊತ್ತಿ, ಕೆಲಬಲವನ್ನು ಕೊಬ್ಬುತ್ತ ತಳ್ಳಿಹಾಕಿ, ಚೆದುರಿಸಿ, ಅಬ್ಬರಿಸಿ, ಎದ್ದೆದ್ದು, ಅಸಮಂಜಸನು ಶತ್ರುಬಲವನ್ನು ಸದೆದು ಮೆರೆದನು. *ಇಲ್ಲಿ ಕ್ರಿಯೆಗಳ ಅನ್ವಯವಾಗಲಿ ಔಚಿತ್ಯವಾಗಲಿ ಸ್ಪಷ್ಟವಿಲ್ಲದ್ದರಿಂದ ‘ಕಷ್ಟದೋಷ’.*

ಕುಱತಂತೆ ಪೇೞ್ದ ನಾಲ್ಕುಂ ಕುಱುಪುಗಳಿಂದಱದು ಪರರ ದೋಷಂಗಳುಮಂ |

ಪೆಱವುಮನೀ ಮಾೞ್ಕೆಯೊಳಂ ತೊಱೆವುದು ತೊಱೆವಂತಸಾಧು-ಜನ-

ಸಂಗತಿಯಂ ||೬೭||

ಇವು ಅದೋಷವಾಗುವ ಪ್ರಸಂಗಗಳು

ಮಿಗೆ ದುಷ್ಕರ-ಕಾವ್ಯಂಗಳೊಳಗರ್ಹಿತ-ಪ್ರಾಯಮಕ್ಕುಮಾ ಶ್ರುತಿಕಷ್ಟಂ |

ಪಗರಣದೊಳುೞ*ದ ಮೂಱುಂ ನಗಿಸುಗುಮಪ್ಪುದಱನಲ್ಲಿಗಂತವದೋಷಂ ||೬೮||

ಮತ್ತೆ ೧೬ ದೋಷಗಳು

ಯತಿ-ಭಂಗಮರ್ಥ-ಶೂನ್ಯಂ ಸತತ-ವಿರುದ್ಧಾರ್ಥ- ಮುಕ್ತ-ಪುನರುಕ್ತಾರ್ಥಂ |

ಚ್ಯುತ-ಯಾತಾಸಂಖ್ಯಂ ವ್ಯವಹಿತಮಚ್ಛಂದಂ ವಿಸಂಧಿಕಂ ನೇಯಾರ್ಥಂ ||೬೯||

ಆಗಮ-ಸಮಯ-ನ್ಯಾಯ-ವಿಭಾಗ-ಕಳಾ-ಕಾಲ-ಲೋಕ-ದೇಶ-ವಿರುದ್ಧಂ |

ಭೋಗಿ-ವಿಷಂಬೋಲ್ ಪ್ರಾಣ-ತ್ಯಾಗಮನಾಗಿಸುಗುಮಮಳ-ಕೃತಿ-

ವಧುಗಿನಿತುಂ ||೭೦||

ಯತಿ

ಯತಿಯೊಂಬುದುಸಿರ್ವ ತಾಣಂ ಕೃತಾಸ್ಪದಂ ವೃತ್ತ-ಜಾತಿ-ಪದ-ಪದ್ಧತಿಯೊಳ್ |

ಸತತಂ ಛಂದೋ-ವಿದಿತ-ಪ್ರತೀತ-ಶಾ[8]ಸ್ತ್ರೋಕ್ತ-ಮಾರ್ಗದಿಂದಱೆವು[9]ದಿದಂ ||೭೧||

೬೭. ಮೇಲೆ ಹೇಳಿದ ಲಕ್ಷಣದ ಪ್ರಕಾರ ನಾಲ್ಕು ದೋಷಗಳ ಸ್ವರೂಪವನ್ನೂ ಬೇರೆಯವರಲ್ಲಿ ಕಂಡರೂ ಅರಿತುಕೊಂಡು, ಹೀಗೆಯೇ ಇರುವ ಮಿಕ್ಕ ದೋಷಗಳನ್ನು ಕೂಡ (ಕವಿಯ) ದುರ್ಜನರ ಸಹವಾಸವನ್ನು ತೊರೆಯುವಂತೆ ತೊರೆಯಬೇಕು.

೬೮. ‘ದುಷ್ಕರ’ವೆನಿಸುವ ಚಿತ್ರಬಂಧ ಮೊದಲಾದ ಕಾವ್ಯಗಳಲ್ಲಿ ಮಾತ್ರ ‘ಶ್ರುತಿಕಷ್ಟ’ ಕೂಡ ದೋಷವೆಂದು ನಿಂದ್ಯವಾಗದು. ಮಿಕ್ಕ ಮೂರೂ ‘ಪ್ರಕರಣ’ ಎಂಬ ಜಾತಿಯ ರೂಪಕ(=ನಾಟಕ)ದಲ್ಲಿ ನಗಿಸುವುದಕ್ಕೆ ಸಹಾಯಕವಾಗುವುದರಿಂದ, ಅಲ್ಲಿ ಅವು ದೋಷವೆನಿಸವು.

೬೯-೭೦. ‘ಯತಿಭಂಗ’, ‘ಅರ್ಥಶೂನ್ಯ’, ‘ವಿರುದ್ಧಾರ್ಥ’, ‘ಉಕ್ತ-ಪುನರುಕ್ತಾರ್ಥ’, ‘ಚ್ಯುತಯಾಥಾಸಂಖ್ಯ’, ‘ವ್ಯವಹಿತ’, ‘ಅಚ್ಛಂದ’, ‘ವಿಸಂಧಿ’, ‘ನೇಯಾರ್ಥ’, ‘ಆಗಮವಿರುದ್ಧ’, ‘ಸಮಯವಿರುದ್ಧ’, ‘ನ್ಯಾಯವಿರುದ್ಧ’, ‘ಕಲಾವಿರುದ್ಧ’, ‘ಲೋಕವಿರುದ್ಧ’, ‘ದೇಶವಿರುದ್ಧ’ -ಇವು ಒಂದಿಷ್ಟು ಸೇರಿದರೂ ಹಾವಿನ ವಿಷದಂತೆ ಕಾವ್ಯವಧುವಿನ ಪ್ರಾಣವನ್ನೇ ತೆಗೆಯುವವು.

೭೧. ‘ಯತಿ’ಯೆಂಬುದು ಉಸಿರು ನಿಲ್ಲಿಸುವ ಸ್ಥಾನ. ವರ್ಣವೃತ್ತ, ಜಾತಿ ಅಥವಾ ಮಾತ್ರಾವೃತ್ತ ಮತ್ತು ‘ಪದ’ ಅಥವಾ (ತ್ರಿಪದಿಯೇ ಮುಂತಾದ) ಹಾಡುಗಳಲ್ಲಿ *ಇಲ್ಲದೆ ಅಕ್ಷರ ಮಾತ್ರಾವೃತ್ತಗಳ ಪದಪ್ರಯೋಗಮಾರ್ಗದಲ್ಲಿ* ಯಾವಾಗಲೂ ಛಂದಶ್ಯಾಸ್ತ್ರದಲ್ಲಿ ಹೇಳಿರುವ ಲಕ್ಷಣ ನಿಯಮಾನುಸಾರವಾಗಿ ಯತಿಯಿರಬೇಕು. ಅದನ್ನು ಆ ಶಾಸ್ತ್ರಮಾರ್ಗದಿಂದಲೇ ಆರಿಯಬೇಕು.

ಯತಿಭಂಗ

ಕೇ[10]ಡಡಸಿದಂದುಬ[11]ಗೆಯುಂ ಕೂ[12]ಡದು ಕೂಡಿದುದುಮೞ*ದು

ವಿ[13]ಪರೀತಮುಮಂ |

ಮಾಡುಗುಮದಱಂ ಕರ್ಮಕ್ಕೋಡಿ ಬರ್ದುಕಲ್ಕಮ[14]ಱವರಾರ್

ಭೂ-ತಳದೊಳ್ ||೭೨||

ತ[15]ಡತಡಿಸಿ ಯತಿಯನಿಂತಿರೆ ತೊಡರ್ಚಿಕೆಡೆ ಪೇ[16]ೞ್ವೊಡಕ್ಕುಮದು ಯತಿಭಂಗಂ |

ಸ[17]ಡಿಲಿಸದಲಸದ[18]ದಂ ಪೇೞ್ದೆಡೆಯೊಳ್ ನಿಲೆ ಪೇೞಲಾರ್ಪೊಡಂ[19]ತದ

ದೋಷಂ ||೭೩||

ಯತಿಭಂಗವನ್ನು ತಿದ್ದಿದ ಪದ್ಯ

ಕೇಡಡಸಿದೊಡಂ ಬ[20]ಗೆಯುಂ ಕೂಡದು ಕೂಡಿದುದುಮಱದು ವಿಪರೀತಮುಮಂ |

ಮಾಡುಗುಮದಱಂ ಕರ್ಮಕ್ಕೋಡಿ ಬರ್ದುಂಕಲ್ಕೆ ಕಲ್ತರಾರ್ ಬಿನ್ನಣಮಂ ||೭೪||

೭೨. *ಯತಿಭಂಗಕ್ಕೆ ಉದಾಹರಣೆ-* ವಿನಾಶಕಾಲ ಬಂದಾಗ ಮನಸ್ಸೂ ಕೂಡುವುದಿಲ್ಲ; ಕೂಡಿದುದೂ ಅಳಿದು ವಿಪರೀತ ಪರಿಣಾಮವನ್ನೇ ಮಾಡುವುದು. ಆದುದರಿಂದ ಕರ್ಮವನ್ನು ತಪ್ಪಿಸಿಕೊಂಡು ಓಡಿ ಬದುಕಲು ಭೂಮಿಯಮೇಲೆ ಯಾರು ತಾನೆ ಬಲ್ಲರು? *ಇಲ್ಲಿ ನಾಲ್ಕನೆಯ ಪಾದದಲ್ಲಿ ‘ಲ್ಕಮಱವ’ ಎಂಬ ಆರನೆಯ ಗಣದ ಮೊದಲ ಲಘುವಾದ ಮೇಲೆ, ಯತಿಯಿಲ್ಲದಿರುವುದೇ ದೋಷ. ಇದನ್ನು ಇಲ್ಲಯೇ ಮುಂದೆ ೭೪ನೆಯ ಪದ್ಯದಲ್ಲಿ ‘ಲ್ಕೆ||ಕಲ್ತ’ ಎಂದು ತಿದ್ದಿ ಸರಿಪಡಿಸಲಾಗಿದೆ*.

೭೩. ಹೀಗೆ ತಡವರಿಸುತ್ತ ತೊಡರಿಕೊಳ್ಳುವಂತೆ ಯತಿಯನ್ನು ಹೇಳಿದರೆ ಅದೇ ‘ಯತಿಭಂಗ’. ಸಡಿಲಿಸದೆ, ಎಚ್ಚರದಪ್ಪದೆ, ಅದನ್ನು ಶಾಸ್ತ್ರೋಕ್ತವಾದ ಸ್ಥಾನದಲ್ಲಿ ಸರಿಯಾಗಿ ನಿಲ್ಲುವಂತೆ ಹೇಳಿದ್ದಾದರೆ ದೋಷವಿಲ್ಲವಾಗುವುದು.

೭೪. *ಯತಿಭಂಗವಿಲ್ಲದ್ದಕ್ಕೆ ಉದಾಹರಣೆ-* ಕೇಡು ಆವರಿಸಿದಮೇಲೆ ಮನಸ್ಸೂ ಕೂಡದು; ಕೂಡಿದ್ದೂ ಆಳಿದು ವಿಪರೀತ ಪರಿಣಾಮವನ್ನೇ ಮಾಡುವುದು. ಆದುದರಿಂದ ಕರ್ಮವನ್ನು ತಪ್ಪಿಸಿಕೊಂಡು ಓಡಿ ಬದುಕುವ ವಿಜ್ಞಾನವನ್ನು ಕಲಿತಿರುವವರು ಯಾರುಂಟು? *ಇಲ್ಲಿ ಯತಿ ನಿಯತಸ್ಥಾನದಲ್ಲಿ ಸರಿಯಾಗಿದೆ*.

ಕನ್ನಡದಲ್ಲಿ ಯತಿವಿಲಂಘನ

ದೋಸಮನೆ ಗುಣದವೋಲುದ್ಭಾಸಿಸಿ ಕನ್ನಡದೊಳೊಲ್ದು ಪೂರ್ವಾಚಾರ್ಯರ್ |

ದೇ[21]ಸಿಯನೆ ನಿಱಸಿ ಖಂಡ-ಪ್ರಾಸಮನತಿಶಯಮಿದೆಂದು ಯತಿಯಂ

ಮಿಕ್ಕರ್ ||೭೫||

ಅದುಗುಣವೆಂಬುದಕ್ಕೆ ಲಕ್ಷ್ಯ

ನಿರತಿಶಯಮಕ್ಕುಮದು ಬಂಧುರ-ಕವಿ-ಜನತಾ-ಪ್ರಯೋಗ-ಸಂಬಂಧನದಿಂ |

ಗುರು-ಜಘನ-ಸ್ತನ-ಭರ-ಮಂಥರ-ಲೀಲಾಲಸ-ವಿಳಾಸಿನೀ-ಚ[22]ಳಿತಂಬೋಲ್ ||೭೬||

ಯತಿನಿಯತ ಸ್ಥಾನಗಳು

ಅಂತುಂ ಯತಿಯಂ ಪೇೞ್ಗಾರ್ಪಂತಾದ್ಯದೊಳಸದಾರ್ಯೆಯೊಳ್ ಕಂದದೊಳಂ |

ಸಂತಂ ದ್ವಿತೀಯ-ಪಾದಗತಾಂತದೊಳಕ್ಕದು ಚ[23]ತುಷ್ಪದೀ-ಪದವಿಗಳೊಳ್ ||೭೭||

೭೫. ಪೂರ್ವಾಚಾರ್ಯರು *ಯಂತಿಭಂಗವೆಂಬ* ದೋಷವನ್ನೇ ಗುಣವೋ ಎನ್ನುವಂತೆ ಪ್ರತಿಪಾದಿಸಿ, ಕನ್ನಡದಲ್ಲಿ ದೇಸಿಯನ್ನೇ ಮೆಚ್ಚಿಕೊಂಡು, ಖಂಡಪ್ರಾಸವನ್ನು ಇಲ್ಲಿ ಅತಿಶಯವೆಂಬುದಾಗಿ ಕಡ್ಡಾಯಮಾಡಿ, ಯತಿಯನ್ನು ಮೀರಿದರು.

೭೬. ತುಂಬಿಕೊಂಡ ಜಘನ-ಸ್ತನಗಳ ಭಾರದಿಂದ ಮಂದಗಮನೆಯಾಗಿರುವ ತರುಣಿಯ ನಡಗೆಯಂತೆ ಕವಿಜನರ ಪ್ರಯೋಗದಲ್ಲಿ ಸುಂದರವಾಗಿ ಪ್ರಯುಕ್ತವಾದಾಗ ಅದು (ಖಂಡಪ್ರಾಸವು) ಹೆಚ್ಚಿನ ಅತಿಶಯವನ್ನು ತಳೆಯುವುದು ನಿಜ.

೭೭. ಹಾಗಿದ್ದರೂ ಕೂಡ, ಸತ್ಕವಿಯು ಆದಷ್ಟುಮಟ್ಟಿಗೆ ಮೊದಲ ಅರ್ಧದ ಕಡೆಗೆ ಆರ್ಯೆಯಲ್ಲಿಯೂ ಕಂದದಲ್ಲಿಯೂ ಯತಿಯನ್ನು ಹೇಳಬೇಕು. ಚತುಷ್ಪದಿಗಳಾದ ಪದ್ಯಗಳಲ್ಲಿ (ಎಂದರೆ ಮಿಕ್ಕ ವರ್ಣವೃತ್ತಗಳಲ್ಲಿ) ಯತಿಯು ಎರಡನೆಯ ಪಾದದ ಕಡೆಗೆ ಬರಬೇಕು. *ಮಾತ್ರಾವೃತ್ತಗಳಾದ ಪರಿಮಿತಿಯೆಂಬುದನ್ನು ಮನಗಂಡು, ಇಲ್ಲಿ ‘ಆದಯದೊಳ್’ ಎಂದರೆ ಪ್ರಥಮಾರ್ಧದ ಕಡೆಗೆ ನಿಯತಯತಿಯಿರಬೇಕೆಂದು ಈ ಗ್ರಂಥಕಾರನು ನಿಯಮ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ ಇಡಿಯ ಗ್ರಂಥದುದ್ದಕ್ಕೂ ಅದನ್ನು ಪ್ರಾಯಿಕವಾಗಿ ಪಾಲಿಸಿಯೂ ಇದ್ದಾನೆಂಬುದು ಗಮನಾರ್ಹವಾಗಿದೆ-ಸಂ.*

[24]?

ಅರ್ಥಶೂನ್ಯ

ಸಮುದಾಯಾರ್ಥಮನಾರಯೆ ಸಮನಿಸುವರ್ಥ-ಪ್ರತೀತಿ ತೋಱದೊಡೆಲ್ಲಂ |

ಕ್ರಮಮಕ್ಕುಮರ್ಥಶೂನ್ಯಂ ಸಮಸ್ತ-ಕವಿ-ವೃಷಭ-ದೂರ-ದೂಷಿತ-ಮಾರ್ಗಂ ||೭೮||

ಮುನಿ ವೀತರಾಗನೆಂದುಂ ಬ[25]ನಮಂ ಸಾರ್ತಕ್ಕುಮಾವ ತೆಱದಿಂ ಪೋಪಂ |

ಮ[26]ನಮಂಜುಗುಮಱೆಯದವಂ ಮುನಿಗುಂ ಪಗೆವಂಗೆ ಪಾಪಕರ್ಮಂ ಪೊಲ್ಲಂ ||೭೯||

ಸ್ಥಿರಮರ್ಥ*ಶೂನ್ಯಮೆಂಬುದು ದುರುಕ್ತಮಿದನಿಂತು ಪೇೞ್ದೊಡೆಲ್ಲಂ ಪೀನಂ |

ಮರುಳಂ ಮದಿರಾ-ಪರವಶ-ಶರೀರನುಂ ಪೇೞ್ಗು[27]ಮಱವನಾವಂ ಪೇೞ್ಗುಂ ||೮೦||

ವಿರುದ್ದಾರ್ಥ

ಪ[28]ರಿಗೀತಾರ್ಥಂ ಪೂರ್ವಾಪರದೊಳ್ ಬಗೆವಾಗಳೆಂದುವೊಂದಱಳೊಂದುಂ |

ದೊರೆಕೊಂಡೊಂದದೊಡದು ದುಷ್ಕರಮೆ ವಿರುದ್ಧಾರ್ಥಮೆಂಬುದಾದಂ ದೋಷಂ ||೮೧||

ಅರಿ-ನೃಪ-ಬಲಮಂ ಗೆ[29]ಲ್ದುರು-ಪರಾಕ್ರಮ-ಕ್ರಮದೆ ಶೌರ್ಯಮಂ ಪ್ರಕಟಿಸು ನೀಂ |

ನ[30]ರ-ಮಹಿತಾ ನಿನಗೇನಹಿತರುಮೊಳರೇ ಸತತ-ಪರ-ಹಿತಾಚಾರ-ಪರಾ ||೮೨||

೭೮. ಎಲ್ಲಕ್ಕೂ ಒಟ್ಟು ಒಂದು ಸಮುದಾಯಾರ್ಥವನ್ನು ವಿಚಾರಿಸಿದಾಗ, ಅಂತಹ ಒಟ್ಟಾರೆ ಅರ್ಥ ತೋರದಿರುವುದೇ ‘ಅರ್ಥಶೂನ್ಯ’ವೆಂಬ ದೋಷ; ಸಮಸ್ತ ಕವಿಶ್ರೇಷ್ಠರೂ ಈ ದೋಷದ ಹಾದಿಯನ್ನು ದೂರಗೈಯ್ಯುವರು.

೭೯. *‘ಅರ್ಥಶೂನ್ಯ’ಕ್ಕೆ ಉದಾಹರಣೆ*-‘ಮುನಿ ರಾಗವಿಮುಕ್ತನು; ಯಾವಾಗಲೂ ವನವನ್ನು ಕುರಿತು ಸಾಗುವನು; ನಾವು ಯಾವ ತೆರದಿಂದ ಹೋಗೋಣ? ಮನಸ್ಸು ಅಂಜುವುದು; ಹಗೆಯಾದವನಿಗೆ ಪಾಪಕಾರ್ಯ ಹೊಲ್ಲ !’

೮೦. ನಿಶ್ಚಿತವಾಗಿಯೂ ಮೇಲಿನ ವಾಕ್ಯಪ್ರಯೋಗ ಅರ್ಥಶೂನ್ಯವಾಗಿರುವುದರಿಂದ ದುಷ್ಟ. ಹೀಗೆ ಹೇಳುವದಿದ್ದರೆ ಯಾವನಾದರೂ ಹುಚ್ಚನೋ ಹೆಂಡದ ಅಮಲಿನಲ್ಲಿರುವವನೋ ಹೇಳಿಯಾನು. ಪ್ರಜ್ಞೆಯಿರುವ ಯಾವನು ತಾನೆ ಹೀಗೆ ಹೇಳುವನು?

೮೧. ಪೂರ್ವಾಪರ ವಚನಗಳಲ್ಲಿ ಎಂದರೆ ಮೊದಲು ಹೇಳಿದ ಮತ್ತು ಅಮೇಲೆ ಹೇಳಿದ ಮಾತುಗಳಲ್ಲಿ, ಒಂದರಲ್ಲೊಂದು ಹೊಂದಿಕೆಯಾಗುವ ಕಾರಣ ಸುಸಂಗತವಾದ ಅರ್ಥ ದುಷ್ಕರವಾದರೆ, ಅದು ‘ವಿರುದ್ಧಾರ್ಥ’ವೆಂಬ ಪ್ರಬಲ ದೋಷ. *ಉದಾಹರಣೆಗೆ-*

೮೨. ‘ನರಪೂಜಿತನೆ! ಶತ್ರುರಾಜರ ಶತ್ರುರಾಜರ ಗೆದ್ದು ಮಹಾಪರಾಕ್ರಮದ ವಿಧಾನದಿಂದ ನೀನು ಶೌರ್ಯವನ್ನು ಪ್ರಕಟಿಸು. ಪರೋಪಕಾರಿಯೆ! ಸದಾಚಾರ ತತ್ಪರನೆ ! ನಿನಗೆ ಶತ್ರುಗಳೂ ಇರುವುದುಂಟೆ?’

ಇದು ವಿದಿತ-ವಿರುದ್ಧಾರ್ಥಕ್ಕುದಾಹೃತಂ ಹರಣಮಾತ್ರಮಿನ್ನಪ್ಪುವನುಂ |

ಸದಭಿಮತ-ಕಾವ್ಯ-ಪದ-ವಿಧಿ-ವಿದೂರ-ಗತಮಾಗೆ ಪರಿಹರಿಕ್ಕೆ ಬುಧರ್ಕಳ್ ||೮೩||

ಪುನರುಕ್ತ

ಪುನರುಕ್ತಮೆಂಬುದಕ್ಕುಂ ನೆನೆಯದೆ ಪೂರ್ವೋದಿತಾರ್ಥ-ಪದ-ಪದ್ಧತಿಗೊಂ- |

ದಿನಿಸುಂ ವಿಶೇಷಮಿಲ್ಲದೆ ಜನಿಯಿಸಿದ ಪದಾರ್ಥಮದಱದೀ ದೃಷ್ಟಾಂತಂ ||೮೪||

ತ್ರಿದಶ-ಸುರ-ಲೋಕ-ವಾಸಾಸ್ಪದಮಂ ಪೆಱುಗುಂ ಮನುಷ್ಯಮನುಜಂ ನಿನ್ನಾ |

ಪದ-ಚರಣ-ಯುಗ-ದ ಯಮಂ ಮುದದೞ್ತೆಯ ಬಗೆದು ನೆನೆವನನುದಿನ

ಮೆಂದುಂ ||೮೫||

ಯಥಾಸಂಖ್ಯ

ನಿಯತೋದ್ದೇಶಿಯುಮನುದೇಶಿಯುಮ[31]ನನುವಿನಂತು ಪೇೞೆ ಯಾಥಾಸಂಖ್ಯಾ-|

ಹ್ವಯಮಕ್ಕುಮಾಗಮೋಕ್ತ್ಯಾಶ್ರಯದಿಂ ವ್ಯತಿರೇಕಮಕ್ಕುಮ[32]ಲ್ಲದವೆಲ್ಲಂ ||೮೬||

ಚ್ಯುತಯಾಥಾಸಂಖ್ಯದೋಷ

‘ಚ್ಯುತ[33]-ಯಾಥಾಸಂಖ್ಯಾರ್ಥಂ ಪ್ರತೀತ-ದೋಷಾನುವಸಥಮೆಂದಱಗೆ ಬುಧರ್ |

ಸತತಮದಱಯೆ ನಿದರ್ಶನ-ಗತಮಿಂತಕ್ಕುಂ ಪ್ರ[34]ಮಾದದಿಂ ಕವಿ-ಜನದೊಳ್ ||೮೭||

೮೩ ಇದು ‘ವಿರುದ್ಧಾರ್ಥ’ವೆಂಬ ದೋಷಕ್ಕೆ (ಮಾದರಿಗೆ) ಎತ್ತಿಕೊಟ್ಟ ಒಂದು ಉದಾಹರಣೆಯಾಯಿತು, ಹೀಗೆಯೇ ಇರುವ ಮಿಕ್ಕವನ್ನೂ ಸತ್ಕಾವ್ಯದ ಪ್ರಯೋಗಮಾರ್ಗದಿಂದ ದೂರವಿರುವಂತೆ ಬುಧಜನರು ಪರಿಹರಿಸಿಕೊಳ್ಳಬೇಕು.

೮೪. ಮೊದಲು ಹೇಳಿದ ಪದದ ಅರ್ಥಸರಣಿಗೆ ಒಂದಿಷ್ಟೂ ವ್ಯತ್ಯಾಸವಿಲ್ಲದಂತೆ ಅದೇ ಅರ್ಥವನ್ನೇ ಕೊಡುವಂತಹ ಪದಪ್ರಯೋಗವೇ ‘ಪುನರುಕ್ತ’ ದೋಷ. ಅದಕ್ಕೆ ಕೆಳಗಿನದು ಉದಾಹರಣೆ-

೮೫. ನಿನ್ನ ‘ಪದ-ಚರಣ’ಗಳ ‘ಯುಗ-ದ್ವಂದ್ವ’ (=ಜೊತೆ-ಜೋಡಿ)ವನ್ನು ‘ಮುದ-ಅರ್ತಿ’ಯಿಂದ ‘ಅನುದಿನ – ಎಂದೆಂದೂ’ ‘ಬಗೆದು-ನೆನೆವ’ ‘ಮನುಷ್ಯ-ಮನುಜ’ನು ‘ತ್ರಿದಶ-ಸುರ’ರ ಲೋಕದಲ್ಲಿ ‘ವಾಸ-ಆಸ್ಪದ’ವನ್ನು ಪಡೆಯುವನು.

೮೬-೮೭. ‘ಉದ್ದೇಶಿ’ ಅಥವಾ ಮೊದಲು ಹೇಳಿದ್ದು, ‘ಅನುದೇಶಿ’ ಎಂದರೆ ಬಳಿಕ ಹೇಳಿದ್ದು; ಈ ಉಕ್ತಿಕ್ರಮನುಗುಣವಾಗಿಯೇ ಇವನ್ನು ತಿರುಗಿ ಹೇಳಿದಾಗ ‘ಯಥಾಸಂಖ್ಯ’ವೆನಿಸುತ್ತದೆ, ಶಾಸ್ತ್ರವಿಧಿಯ ಪ್ರಕಾರ. ಹಾಗಲ್ಲದೆ ಕ್ರಮ ತಪ್ಪಿಹೇಳಿದ್ದೆಲ್ಲ ಚ್ಯುತಯಾಥಾಸಂಖ್ಯವೆಂಬ ಅರ್ಥದೋಷದ ನೆಲೆಮನೆಯಾಗುವುದೆಂದು ಬುಧರು ತಿಳಿಯಬೇಕು. ಕವಿಜನರ ಪ್ರಮಾದದಿಂದ ಈ ದೋಷ ಸಂಘಟಿಸುವುದಕ್ಕೆ ಕೆಳಗೆ ನಿದರ್ಶನ ಕೊಟ್ಟಿದೆ-

ಆಳಕಾನನ-ನಯನಂಗಳೊಳಳಿ-ನೀಳೋತ್ಪಳವಿ[35]ಲಾಸಮಂ ಗೆಲ್ದುದಱಂ |

ತಿಳಿಗೊಳನಂ ಪೋಲ್ತಿರ್ದುಂ ತಿಳಿಯದಿದೇನೆಂಬುದುಂ ತದನ್ವಯ

ಮ[36]ದಱೊಳ್ ||೮೮||*


[1] ಪುರ ‘ಕ’.

[2] ರೇತಾತಿ ‘ಅ’.

[3] ಪಾರ್ಬ್ಬ ‘ಪಾ’

[4] ರ್ಗಾದರಸ ‘ಪಾ’

[5] ಸ್ಥಿರಮೋ ‘ಕ’

[6] ಱೆಡೆಯೊತ್ತಿ ‘ಕ’

[7] ವಿದಿರ್ದಾರ್ದು ‘ಅ’, ‘ಪಾ’. ‘ಬಿದಿರ್ದಾ*ರ್ದೇ* ವ್ಗೇ’ (?) ಮತ್ತು ‘ಬಿದಿರ್ದಾ *ಮೆ*ೞ್ಗೇ(?) ಎಂಬೀ ಎರಡು ‘ಸೀ’ನಲ್ಲಿರುವ ಸೂಚಿತಪಾಠಗಳು, ಪು. ೪೩೦, ‘ವಿದಿರ್ದಾರ್ದುಮೆೞ್ದೆಸಮಂಜಸಂ’, ಮುಳಿಯ ತಿಮ್ಮಪ್ಪಯ್ಯ ಅವರ ಸೂಚಿತಪಾಠ-ಉಕ್ತಗ್ರಂಥ, ಪು. ೧೩೩.

[8] ಶಾಸ್ತ್ರಾರ್ಥ ‘ಅ’ ‘ಬ’.

[9] ದದಂ ‘ಪಾ’ ದಿವಂ ‘ಕ’.

[10] ಕೇಡಡಸಿ ತಂದು ‘ಪಾ’.

[11] ಬಗೆಯಂ ‘ಪಾ’ ‘ಮ’.

[12] ಮಾಡದು ‘ಕ’

[13] ವಿಪರೀತಮನದು | ಮೂಡುಗು ‘ಅ’ ‘ಬ’.

[14] ಮಱೆದರಾರ್ ‘ಕ’.

[15] ತಡವಡಿಸಿ ‘ಪಾ ಸೀ’.

[16] ಪೋಳ್ದಡೆ ‘ಅ ಬ’.

[17] ಲಡಲಡಿಸಿ ದಲಸಡ ‘ಅ’.

[18] ದರಂ ‘ಪಾ, ‘ಮ’

[19] ದಂತದು ದೋಷಂ ‘ಪಾ, ಮ’

[20] ಬಗೆಯಂ ‘ಪಾ’.

[21] ದೇಸಿಯೆನೆ ‘ಮ’ ದೇಸಿಯನೆ ‘ಮ’ ದೇಸೆಯನೆ ‘ಅ’

[22] ಚರಿತಂಬೋಲ್ ‘ಮ ಕ’.

[23] ಚತುಃಪದಪದವಿ ‘ಬ’

[24] ?

[25] ಜನಮಂ ‘ಪಾ’.

[26] ಮನಮಂಬುಗು ‘ಪಾ’.

[27] ಮಾನವನಱೆವಂ ‘ಮ ಕ’.

[28] ಪರ ‘ಬ’.

[29] ಗೆಲ್ದರ್ ಪರಾಕ್ರಮ ‘ಪಾ’.

[30] ನರಮಹಿಸಾ ‘ಕ’.

[31] ಮನನುಮದೆಂತುಂ ‘ಪಾ’; ಮನನಮದಂತು ‘ಬ’.

[32] ಮಲ್ಲಿದುವೆಲ್ಲಂ ‘ಕ; ಮಲ್ಲದುವೆಲ್ಲಂ ‘ಪಾ’.

[33] ಯಾಥಾಸಂಖ್ಯಾರ್ಥ ‘ಅ’, ಸೀ’.

[34] ಪ್ರಮೋದದಿಂ ‘ಸೀ’. ದೋಷಪ್ರಸಂಗದಲ್ಲಿ ಈ ಪಾಠ ಹೇಗೂ ಅನುಚಿತ.

[35] ವಿಕಾಶಮಂ ‘ಪಾ, ಸೀ’.

[36] ಮದಱಂ ‘ಕ’, ಮುಳಿಯ ತಿಮ್ಮಪ್ಪಯ್ಯನವರ ಪ್ರಕಾರ ಇದೇ ಶುದ್ಧ ಪಾಠ ‘ಕವಿರಾಜಮಾರ್ಗ ವಿವೇಕ’, ಪು. ೨೭೫.

* ೮೮ ಮತ್ತು ೭೯ ಪದ್ಯಗಳು ‘ಪಾ’ ‘ಮ’ ಗಳಲ್ಲಿ ಹಿಂದುಮುಂದಾಗಿವೆ. ಆದರೆ ಈ ಅನುಕ್ರಮ ಅರ್ಥಕ್ಕೆ ಸರಿಯಾಗುತ್ತದೆಂದು ‘ಸೀ’ ಪಾಠವನ್ನು ಅನುಸರಿಸಿದೆ.