ಒಂದೆರಡು ವರ್ಷಗಳ ಹಿಂದೆ ಮೈಸೂರಿನ ಮಹಾ ಜನ ಶಿಕ್ಷಣ ಸಂಸ್ಥೆಯಲ್ಲಿ ಒಂದು ಸಮಾರಂಭ. ನಾನು ಆ ಸಮಾರಂಭದ ಮುಖ್ಯ ಅತಿಥಿ. ಅಧ್ಯಕ್ಷರು ನನ್ನ ಆಪ್ತ ಸ್ನೇಹಿತರಾದ ಡಾ. ಪ್ರಭುಶಂಕರ. ತುಂಬ ಅಚ್ಚು ಕಟ್ಟಾದ ಕಾರ್ಯಕ್ರಮ. ಕಾರ‍್ಯಕ್ರಮಗಳೆಲ್ಲ ಸಾಂಗವಾಗಿ ನೆರವೇರಿ, ನನ್ನ ಉಪನ್ಯಾಸವೂ ಮುಗಿದು ಅಧ್ಯಕ್ಷಭಾಷಣದ ಹಂತಕ್ಕೆ ಬಂತು. ಡಾ. ಪ್ರಭುಶಂಕರ ತಮ್ಮಮಾತನ್ನು ಪ್ರಾರಂಭಿಸಿದರು: ‘ಈ ದಿನದ ಸಮಾರಂಭದ ಕೇಂದ್ರ ಬಿಂದು ಈ ಶಿವರುದ್ರಪ್ಪನವರಿದಾರಲ್ಲ, ಇವರು ನನ್ನ ಬಹುಕಾಲದ ಮಿತ್ರರು. ದೊಡ್ಡ ಕವಿಗಳು. ಆದರೆ ಇವರು ಈ ದೇಶದ ರೈತ ಜನಾಂಗದವರಿಗೆ ಮಾಡಿರುವ ಮಹಾ ಅನ್ಯಾಯವನ್ನು ನಾನು ಈ ಸಭೆಗೆ ಹೇಳಲೇ ಬೇಕು…’

ಇಡೀ ಸಭೆಗೆ ಕುತೂಹಲ. ನನಗೂ ಕೂಡ. ಏನು ಮಾತು ಇದು! ಅದೇನಪ್ಪ ನಾನು ಈ ದೇಶದ ರೈತರಿಗೆ ಮಾಡಿರಬಹುದಾದ ಅನ್ಯಾಯ? ಅದರಲ್ಲೂ ನಾನು ಕೆಲಸ ಮಾಡುತ್ತಿದ್ದದ್ದು ವಿಶ್ವವಿದ್ಯಾಲಯದಲ್ಲಿ, ನಾನೊಬ್ಬ ಅಧ್ಯಾಪಕ. ನನ್ನ ವ್ಯವಹಾರವೆಲ್ಲ ವಿದ್ಯಾರ್ಥಿಗಳ ಜತೆಗೆ. ಒಮ್ಮೆಮ್ಮೊ ಜೆ.ಪಿ. ಚಳುವಳಿ, ಕನ್ನಡ ಚಳುವಳಿಗಳಲ್ಲಿ ಭಾಗವಹಿಸಿದ್ದುಂಟು. ಇನ್ನು ರೈತ ಚಳುವಳಿಯಲ್ಲಿ ನಾನು ಪಾಲುಗೊಳ್ಳುವ  ಪ್ರಸಂಗವೇ ಬರಲಿಲ್ಲ. ಹೀಗಿರುವಾಗ ನನ್ನ ಪ್ರಿಯ ಸ್ನೇಹಿತರು ಈ ತುಂಬಿದ ಸಭೆಗೆ, ನಾನು ಈ ದೇಶದ ರೈತರಿಗೆ ಮಾಡಿರುವ ಮಹಾ ಅನ್ಯಾಯವನ್ನು ಹೇಳಲೇ ಬೇಕು ಅನ್ನುತ್ತಾರಲ್ಲ! ಅದೇನಿರಬಹುದು? ಈ ಬಗೆಯ ಚಿಂತನೆಗಳೆಲ್ಲ ಕ್ಷಣಾರ್ಧದಲ್ಲಿ ನನ್ನ ಮನಸ್ಸಿನಲ್ಲಿ ಹಾದುಹೋದವು.

ಉಸಿರು ಬಿಗಿಹಿಡಿದ ಸಭೆಗೆ ಪ್ರಭುಶಂಕರರು ಹೇಳಿದರು: ‘ಅದೇನು ಅನ್ಯಾಯ ಅನ್ನುತ್ತೀರೋ ಕೇಳಿ; ಈ ಕವಿಗಳು

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ

ಅಂತ ಪದ್ಯ ಬರೆದಿದ್ದಾರೆ. ಅನ್ಯಾಯವಲ್ಲವೆ ಇದು? ಮಳೆ ಇಲ್ಲದೆ ನೆಲವೆಲ್ಲ ಬೆಂದು ಕಂಗಾಲಾಗಿರುವ ಹೊತ್ತಿನಲ್ಲಿ ಮೋಡಗಳನ್ನು ಕುರಿತು ‘ನಾಲ್ಕು ಹನಿಯ ಚೆಲ್ಲಿ’ ಎನ್ನುತ್ತಾರಲ್ಲ, ಧಾರಾಕಾರವಾಗಿ ಸುರಿಯಿರಿ ಅಂತ ಯಾಕೆ ಹೇಳೋದಿಲ್ಲ? ಇವರು ಹೇಳುವುದು: ‘ನಾಲ್ಕು ಹನಿಯ ಚೆಲ್ಲಿ’ ಬರೀ ನಾಲ್ಕು ಹನಿ. ಸಾಲದೆ ಇವರು ಈ ದೇಶದ ರೈತರಿಗೆ ಮಾಡಿರುವ ಮಹಾ ಅನ್ಯಾಯ.’

ಇಡೀ ಸಭೆಗೆ ಸಭೆಯೇ ನಗೆಯ ಹೊನಲಲ್ಲಿ ತೇಲಿತು. ನಾನು ಕೂಡ. ವಿನೋದಪ್ರಿಯರಾದ  ಈ ಮಿತ್ರರು ನನ್ನ ಕವಿತೆಯನ್ನು ಕುರಿತು ಮುಂದೆ ಸಾಕಷ್ಟು ಮಾತನಾಡಿದರು-ತುಂಬ ಸ್ವಾರಸ್ಯವಾಗಿ.

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ.

ಮೋಡಗಳನ್ನು ಕುರಿತು ನಾನು ಬರೆದ ಕವಿತೆಯೊಳಗಿನ ಮೊದಲ ಪದ್ಯ ಇದು. ನಮ್ಮ ಸುಗಮ ಸಂಗೀತಗಾರರು ಯಾವತ್ತಿನಿಂದಲೋ ಇದನ್ನು ಹಾಡಿ ಸಾಕಷ್ಟು ಜನಪ್ರಿಯಗೊಳಿಸಿದ್ದಾರೆ. ಇದನ್ನು ನಾನು ಬರೆದದ್ದು ೧೯೫೦ರ ಕಾಲಮಾನದಲ್ಲಿ, ನನ್ನ ಕಾವ್ಯ ಜೀವನದ ಮೊದಲ ಹಂತಗಳಲ್ಲಿ. ಆಗ ನಾನಿದ್ದದ್ದು ದಾವಣಗೆರೆಯಲ್ಲಿ. ಇದರ ಹೆಸರು ‘ನೆಲದ ಕರೆ’. ಬಿರುಬಿಸಿಲಿಗೆ ಬೆಂದ ನೆಲ, ಒಂದು ಹನಿಯನ್ನೂ ಸುರಿಸದೆ ಆಕಾಶದಲ್ಲಿ ಮುನ್ನಡೆಯುವ ಮೋಡಗಳನ್ನು ಕುರಿತು ಮಾಡಿಕೊಂಡ ಕೋರಿಕೆ. ನನ್ನ ಗೆಳೆಯರು ಇದರ ಮೊದಲೆರಡು ಪಂಕ್ತಿಗಳನ್ನು ತಮ್ಮ ವಿನೋದದ ಉದ್ದೇಶಕ್ಕೆ ಚೆನ್ನಾಗಿಯೇ ಬಳಸಿಕೊಂಡರು.

ಮೋಡಗಳು ಯಾವತ್ತೂ ನನ್ನ ಮನಸ್ಸನ್ನು ಸೆಳೆದ ಜಂಗಮ ಕುತೂಹಲಗಳು. ವೇದ ಋಷಿಗಳ ಕಾಲದಿಂದ ಹಿಡಿದು ಈ ಹೊತ್ತಿನವರೆಗೂ ಉದ್ದಕ್ಕೂ ಎಲ್ಲ ದೇಶದ ಕವಿಗಳನ್ನು ಕಾಡಿದ ವಿಸ್ಮಯಗಳಿವು. ಕರುಗಳನ್ನು ನೆನೆದು ಕೊಟ್ಟಿಗೆಗೆ ಧಾವಿಸುವ ಬಿಡುಗೆಚ್ಚಲ ಧೇನುಗಳು; ಅಂತರಿಕ್ಷದಲ್ಲಿ ಹರಿಯುವ ನೀರಿನ ಪ್ರವಾಹಗಳು; ರೆಕ್ಕೆಬಂದ ಬೆಟ್ಟಗಳು-ಹೀಗೆ ಬಗೆಯಾಗಿ ವರ್ಣಿತವಾಗಿವೆ ಪ್ರಾಚೀನ ಋಷಿಗಳ ವಾಣಿಯಲ್ಲಿ. ನಾನು ನನ್ನ ಪಯಣದ ಹಾದಿಯಲ್ಲಿ ಈ ಮೋಡಗಳ ವೈಭವವನ್ನು ಕಂಡಿದ್ದೇನೆ. ನೆಲದ ಮೇಲೆ ನಿಂತು ನೋಡಿದ್ದೇನೆ ; ವಿಮಾನದಲ್ಲಿ ಕೂತು ಮೋಡಗಳಾಚೆ ಮೇಲೇರಿ ಆ ನೆಲೆಯಿಂದ ಹಾಲ್ಗಡಲಂತೆ ಹಬ್ಬಿಕೊಂಡ ಮೇಘ ಪ್ರಪಂಚದ ವಿವಿಧ ವಿನ್ಯಾಸಗಳನ್ನು ಕಂಡು ಬೆರಗಾಗಿದ್ದೇನೆ. ವಿವಿಧ ಋತು ಮಾನಗಳಲ್ಲಿ ಇವು ತಾಳುವ ಆ ಕೃತಿಗಳನ್ನು ಗಮನಿಸಿದ್ದೇನೆ. ಅದರಲ್ಲೂ  ಆಷಾಢಮಾಸದ ಮೋಡಗಳ ಚಲನೆ, ನಿಮಿಷಕ್ಕೊಂದು ಆಕಾರ ತಾಳುವ ದೃಶ್ಯ ನನ್ನನ್ನು ಹಿಡಿದು ನಿಲ್ಲಿಸಿದೆ. ಆಷಾಢ ಬಂತೆಂದರೆ ರೊಯ್ಯೆನ್ನುವ ಗಾಳಿ; ತಲೆ ಗೆದರಿಕೊಂಡು ತೂರಾಡುವ ಮರಗಳು; ದಟ್ಟವಾದ ಮೋಡಗಳ ಹೊನಲು; ಜಿಟಿ ಜಿಟಿ ಮಳೆ; ಆಷಾಢ ಬಂತೆಂದರೆ ಕಾಳಿದಾಸನ ನೆನಪು:

ಆಷಾಢದ ಪ್ರಥಮದಿನ. ಅಲಕಾವತಿಯ ಯಕ್ಷನೊಬ್ಬ ಏನೋ ತಪ್ಪು ಮಾಡಿ, ಒಂದು ವರ್ಷಕಾಲ ನಲ್ಲೆಯಿಂದ ಅಗಲಿರು ಎಂದು ತನ್ನ ಒಡೆಯನಿಂದ ಶಪಿತನಾಗಿ, ಗಡೀಪಾರಾಗಿ ರಾಮಗಿರ‍್ಯಾಶ್ರಮದಲ್ಲಿ ಹೇಗೋ ದಿನಗಳನ್ನು ನೂಕುತಿದ್ದಾನೆ. ವಿರಹದಿಂದ ಸೊರಗಿ ಅವನ ಮುಂಗೈಯ ಕಂಕಣವು ಮೊಳಕೈವರೆಗೂ ಸರಿಯುವಂತಾಗಿದೆ. ದೂರದ ಅಲಕಾವತಿಯಲ್ಲಿ ತನ್ನಂತೆಯೆ ದುಃಖಿತಳಾದ ನಲ್ಲೆಗೆ ತನ್ನ ಮನಸ್ಸಿನ ಪರಿತಾಪವನ್ನೂ, ಅವಳನ್ನು ಕುರಿತ ಪ್ರೀತಿಯ ಉತ್ಕಟತೆಯನ್ನೂ ತೋಡಿಕೊಳ್ಳಬೇಕು. ಏನು ಮಾಡಲಿ? ಯಾರ ಮೂಲಕ ಹೇಳಿ ಕಳುಹಿಸಲಿ? ನೋಡುತ್ತಾನೆ ಆಷಾಢದ ಮೊದಲದಿನ, ಮಣ್ಣನ್ನು ಬಗೆಯುವ ಆಟದಲ್ಲಿ ತೊಡಗಿರುವ ಆನೆಯಂಥ ಮೋಡವೊಂದು ಕಂಡಿತು. ಅದನ್ನೆ ತನ್ನ ಪ್ರಿಯಸಖನ ಸ್ಥಾನದಲ್ಲಿ ನಿಲ್ಲಿಸಿ ತನ್ನ ಮನಸ್ಸಿನ ಅಳಲನ್ನೆಲ್ಲ ತೋಡಿಕೊಳ್ಳುತ್ತಾನೆ. ಅದನ್ನು ತನ್ನ ಸಂದೇಶ ವಾಹಕನೆಂದು ತಿಳಿದು, ತನ್ನ ನಲ್ಲೆಯ ಬಗೆಗೆ ತನಗಿರುವ ಭಾವನೆಗಳನ್ನೂ, ಈ ವಿರಹದ ಅವಧಿ ಮುಗಿದ ನಂತರ ತಾನು ಬಂದು ಸೇರುವ ಭರವಸೆಯನ್ನೂ ಆರ್ತನಾಗಿ ನಿವೇದಿಸುತ್ತಾನೆ. ಈ ಸಂದೇಶವಾಹಕನಾದ ಮೇಘ ಮಿತ್ರನು ಅಲಕಾವತಿಗೆ ಹೋಗುವ ದಾರಿಯನ್ನು ಕುರಿತು ವರ್ಣಿಸುತ್ತಾನೆ. ಇದೊಂದು ಅಪೂರ್ವವಾದ ವಿರಹ ಭಾವಗೀತೆ. ಪ್ರತಿ ವರ್ಷವೂ ನನಗೆ ಆಷಾಢ ಮಾಸದಲ್ಲಿ ಮೋಡಗಳ ದಿಬ್ಬಣವನ್ನು ಕಂಡಾಗಲೆಲ್ಲ ಈ ವಿರಹಿ ಯಕ್ಷನ ವೇದನೆ ನನ್ನ ನೆನಪಿನಲ್ಲಿ ಪುನರಭಿನಯವಾಗುತ್ತದೆ.

ಕಾಳಿದಾಸನ ಈ ಸಂದೇಶ ಕಾವ್ಯ ಬಂದ ಮೇಲೆ ಅದೆಷ್ಟೋ ಅದರ ಅನುಸರಣಗಳೂ ಅನುರಣನಗಳೂ ವಿವಿಧ ಭಾಷೆಗಳಲ್ಲಿ ಕಾಣಿಸಿಕೊಂಡಿವೆ. ಆದರೆ ನಮ್ಮ ಕನ್ನಡ ಕವಿ ಶ್ರೀ ಸು.ರಂ.ಎಕ್ಕುಂಡಿಯವರು ಕಾಳಿದಾಸನ ಕಥೆಗೆ ಒಂದು ಪ್ರತಿಸೃಷ್ಟಿಯನ್ನು ಲಗತ್ತಿಸಿದ್ದಾರೆ. ಇದೂ ಮೋಡವನ್ನು ಕುರಿತದ್ದೆ: ಕಾಳಿದಾಸದ ಮೇಘವನ್ನು ಕುರಿತದ್ದೆ.

ಈ ಕವಿತೆಯ ಹೆಸರು ‘ಇಬ್ಬರು ರೈತರು’. ೧೯೯೨ರಂದು ಎಕ್ಕುಂಡಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದು ಕೊಟ್ಟ, ಅವರ ‘ಬಕುಲದ ಹೂವುಗಳು’ ಎಂಬ ಸಂಕಲನದೊಳಗಿದೆ ಈ ಪದ್ಯ:

ಇಬ್ಬರು ರೈತರು. ಒಬ್ಬನ ಹೆಸರು ಕುಂಭರಾಮ, ಮತ್ತೊಬ್ಬನದು ಭೈರೂಸಿಂಹ. ಇಬ್ಬರೂ ನೆರೆ ಹೊರೆಯವರು. ಬಹುಶಃ ಉತ್ತರದವರಾದ ಇವರು ಶಿವರಾತ್ರಿಯ ದಿನ ಕಾಳಿದಾಸನ ಉಜ್ಜಯಿನಿಗೆ ಯಾತ್ರೆ ಬರುತ್ತಾರೆ. ಉಜ್ಜಯಿನಿಯ ಮಹಾಕಾಲೇಶ್ವರನ ದರ್ಶನ ಮಾಡಿಕೊಂಡು ಮರುದಿನ ತಮ್ಮ ಊರಿಗೆ ಹೊರಡುವ ಮುನ್ನ, ಉಜ್ಜಯಿನಿಯೊಳಗೆ ವಾಸವಾಗಿರುವ ಕವಿ ಕಾಳಿದಾಸನನ್ನು ಕಂಡು, ತಮ್ಮ ಬೇಡಿಕೆಯೊಂದನ್ನು ಮಂಡಿಸುವ ಮನಸ್ಸಾಗುತ್ತದೆ. ಹಾಗೂ  ಹೀಗೂ ಮಾಡಿ ಕಾಳಿದಾಸನ ಮನೆಯ ಮುಂದೆ ಬರುತ್ತಾರೆ. ಅದು ಕಾಳಿದಾಸನ ಮನೆಯೇ ಎಂಬುದು ಖಚಿತವಾಗಲು ತಡವಾಗಲಿಲ್ಲ. ಯಾಕೆಂದರೆ ಅಲ್ಲಿ ಇಡೀ ಚೈತ್ರ ಮಾಸವೇ ಬಿಡಾರ ಹೂಡಿದೆ ; ಚಿಗುರೆಲೆ ಮೊಗ್ಗುಗಳು ತುಂಬಿವೆ; ಬಿರಿದ ಮೊಗ್ಗೆಯ ಸುತ್ತ ದುಂಬಿಗಳು ರೆsಂಕರಿಸುತ್ತಿವೆ. ಸಂಶಯವೇ ಇಲ್ಲ. ಇದು  ಕವಿಯ ಮನೆ, ಕಾಳಿದಾಸನ ಮನೆ.

ಇಬ್ಬರು ರೈತರೂ ಮನೆಯ ಮುಂದೆ ಕೈ ಮುಗಿದು ಕಾದರು. ಸ್ವಲ್ಪ ಹೊತ್ತಾದ ಮೇಲೆ ಕಾಳಿದಾಸನು ಮನೆಯೊಳಗಿಂದ ಹೊರಕ್ಕೆ ಬಂದನು. ‘ಮಂಜಿರದ ಮುಂಜಾವಿನಂಥ ಬಟ್ಟೆ’ ತೊಟ್ಟಿದ್ದಾನೆ. ಹೆಗಲ ಮೇಲೊಂದು ಶಾಲಿದೆ. ಮುಖದಲ್ಲಿ ಮುಗುಳು ನಗೆ. ಹೇಳಿದರು ‘ಒಳಗೆ ಬನ್ನಿ, ಏನು ಬೇಕಾಗಿತ್ತು?’

ಇಬ್ಬರು ರೈತರೂ ಒಳಕ್ಕೆ ಹೋದರು. ‘ಉಜ್ಜಯಿನಿಗೆ ಯಾತ್ರೆ ಬಂದಿದ್ದೆವು, ದೊಡ್ಡವರಾದ ನಿಮ್ಮನ್ನು ನೋಡುವ ಬಯಕೆಯಾಯಿತು. ಬಂದೆವು’ ಎಂದರು. ‘ಕವಿರತ್ನ ಕಾಳಿದಾಸ ನೀವೆ ಅಲ್ಲವೆ? ಕಣ್ವಪುತ್ರಿ ಶಕುಂತಲೆಗೆ ಒದಗಿದ ಗಂಡಾಂತರವನ್ನು ಉಂಗುರದ ಸಹಾಯದಿಂದ ತಪ್ಪಿಸಿ ಅವಳನ್ನು ಆಕೆಯ ಗಂಡನಿಗೆ ಒಪ್ಪಿಸಿದಿರಿ. ಶಿವ ಪಾರ್ವತಿಯರ ಕಲ್ಯಾಣ ಮಾಡಿಸಿದಿರಿ. ಚೆಲುವೆಯರನ್ನು ಕುರಿತು, ಬೆಟ್ಟಗಳನ್ನು ಕುರಿತು, ಮೋಡಗಳನ್ನು ಕುರಿತು ಮಾತನಾಡಿ ಕೀರ್ತಿಶಾಲಿಗಳಾದಿರಿ’

ಕಾಳಿದಾಸನಿಗೆ ಸಂತೋಷ ಮತ್ತು ಮುಜುಗರ. ಸಂತೋಷ, ತನ್ನ ಕಾಲದ ಸಾಮಾನ್ಯ ಜನರೂ ಅಷ್ಟೊ ಇಷ್ಟೊ ತನ್ನ ಕವಿತೆಯ ಬಗ್ಗೆ ಬಲ್ಲವರಾಗಿದ್ದಾರೆ-ಎಂಬ ಕಾರಣಕ್ಕೆ. ಮುಜುಗರ-ತನ್ನ ಎದುರಿಗೇ ಅವರು ತನ್ನನ್ನು ಹೊಗಳಿದ್ದಕ್ಕಾಗಿ. ಕವಿ ಕೇಳಿದರು, ‘ನನ್ನಿಂದ ನಿಮಗೆ ಆಗಬೇಕಾದುದೇನಾದರೂ ಇದೆಯೆ?’ ಭೈರೂಸಿಂಹ ಹೇಳಿದ ‘ಹೌದು ಸ್ವಾಮಿ ಇದೆ, ಅವತ್ತು ನೀವು ರಾಮಗಿರಿಯಿಂದ ಅಲಕೆಗೆ ಕಳುಹಿಸಿದಿರಲ್ಲ, -ಆ ಒಂದು ಮೋಡ, ಅದರ ಬಗ್ಗೆಯೇ ಮಾತನಾಡಬೇಕಾಗಿದೆ. ಆ ಕುರಿತು-

ಬಿನ್ನವಿಸಲೆಂದು ಬಂದದ್ದು ನಾವಿಬ್ಬರೂ.
ಬಾಯೊಣಗಿ ನಿಂತಿಹುದು ನಮ್ಮ ಪಯಿರು
ಹನಿನೀರಿಲ್ಲದೆ. ಮೋಡಕ್ಕೆ ಹೇಳುವಿರೆ?
ದಾರಿಯಲ್ಲಿವರಿಗೂ ನೀರು ಸುರಿಸು.

ಹೇಗಿದೆ ಪದ್ಯ? ಇದು ಎಕ್ಕುಂಡಿಯವರ ಕಲೆಗಾರಿಕೆ. ಆಷಾಢ ಬಂದಾಗ ಕಾಳಿದಾಸನ ‘ಮೇಘದೂತ’ ದ ನೆನಪಿನ ಜತೆಗೆ ಹೆಣೆದುಕೊಂಡು ಬರುತ್ತದೆ ಎಕ್ಕುಂಡಿಯವರ ಕವಿತೆಯೂ ಅನೇಕಾರ್ಥಗಳನ್ನು ಹೊಳೆಯಿಸುತ್ತ.

ಯಾವುದೂ ಸಣ್ಣದಲ್ಲ : ೨೦೦೪