ಇರುಳುದ್ದಕೂ ಹರಿದು ಬರುತಿದೆ ಕೂಗು :
‘ಕವಳ ತಾಯೀ ಕವಳ’

ಚಿಟುಗುಡುವ ಮಬ್ಬು ಮಳೆ ; ಸಿಳ್ಳು ಹಾಕುವ ಗಾಳಿ ;
ಸುಮ್ಮನೆಯೆ ಸದ್ದಿರದೆ ಬಿದ್ದ ಬೀದಿಯ ಬದಿಗೆ
ಏನನೋ ಜಾನಿಸುತ ನಿಂದ ದೀಪದ ಕಂಬ-
ಅದರಡಿಗೆ ಚಲಿಸುತಿವೆ ನೆರಳೆರಡು, ಕೈ ಕೈ ಹಿಡಿದು
ಬತ್ತಲೆಯ ಬೀದಿಯಲಿ ಒಂದೇ ಸಮನೆ ಕೂಗುತ್ತ ;
‘ಕವಳ ತಾಯೀ ಕವಳ’
ಒಳಗೆ ಮಗು ತೊಟ್ಟಿಲಲಿ ಕನವರಿಸುತಿದೆ ;
ಪಾರಿಜಾತದ ತೋಟ ಚಿಟ್ಟೆ ಬಳಗ,
ಚಂದುಮಾಮನ ಚಿಗುರೆ ಬೆನ್ನೇರಿ ಹಾರೋಣ
ತಾರೆ ಮಲ್ಲಿಗೆ ದಾರಿ ದೂರ ದೂರ.

ಉದ್ದಕೂ ಮುಚ್ಚಿರುವ ಬಾಗಿಲು ; ಒಳಗೆ ಎಲ್ಲೋ ಬೆಳಕು
ಮಂದ ಮಂದ.
ಮಳೆ ಬಿಸಿಲು ಗಾಳಿಯಲಿ ನಾಂದರೂ, ನಿಶ್ಚಿಂತವಾಗಿರುವ
ಗೋಪುರದ ಗಡಿಯಾರ ಹೊಡೆಯುತಿದೆ ಘಂಟೆ ಹನ್ನೊಂದ.
ಹಗಲೆಲ್ಲ ಗಾಡಿಯನೆಳೆದು ಲಾಯಕ್ಕೆ ಬಂದಿದೆ ಕುದುರೆ
ಹಾರೈಸುತಿದೆ- ‘ಮತ್ತೆ ಬೆಳಗಾಗದಿರಲಿ’,
ಆಗೊಂದು ಈಗೊಂದು ಕುಡಿದ ಕೆಂಗಣ್ತೆರೆದು ಜಾರಿ ಓಡುವ ಕಾರು
ಬೀದಿಯಲ್ಲಿ !

ಬೀದಿ ಬೆಳಕಿನ ಚಾಪೆ ದೂರ ದೂರದವರೆಗೆ ;
ದೀಪದೀಪದ ಕೆಳಗೆ ಸಾಗುತಿವೆ ನೆರಳೆರಡು,
ಕೈ ಕೈ ಹಿಡಿದು – ಎಂದಿನಿಂದಲೊ ಏನೋ-
ಕರುಳಿರಿಯುತಿದೆ ಕೂಗು ಕಿವುಡು ಬಾಗಿಲ ಹೊರಗೆ ;
‘ಕವಳ ತಾಯೀ ಕವಳ’