ಕ್ಲಾಸಿಕಲ್(classical) ಎಂಬ ಆಂಗ್ಲ ಪದಕ್ಕೆ ಸಂವಾದಿಯಾಗಿ ಇದೀಗ; ಕನ್ನಡ ಭಾಷೆಗೆ ಕ್ಲಾಸಿಕಲ್ ಸ್ಥಾನಮಾನ ಸಿಕ್ಕ ಸಂದರ್ಭದಲ್ಲಿ ‘ಶಾಸ್ತ್ರೀಯ’ ಎಂಬ ಪದವನ್ನು ಬಳಸಲಾಗುತ್ತಿದೆ. ಹಿಂದಿ ಭಾಷೆಯಲ್ಲಿ ಕ್ಲಾಸಿಕಲ್ ಲ್ಯಾಂಗ್ವೇಜಸ್ (Classical Languages) ಎಂಬುದಕ್ಕೆ ಸಂವಾದಿಯಾಗಿ ಶಾಸ್ತ್ರೀಯ ಭಾಷೆಗಳು ಎಂದು ಪ್ರಯೋಗಿಸಲಾಗಿದೆ.

ಇದನ್ನೇ ಪತ್ರಿಕೆಯವರು ಇನ್ನಿತರ ಸಮೂಹ ಮಾಧ್ಯಮದವರು ಎತ್ತಿಕೊಂಡು ಕನ್ನಡ ಭಾಷೆಗೆ ಸಿಕ್ಕ ಸ್ಥಾನ ಶಾಸ್ತ್ರೀಯ ಸ್ಥಾನವೆಂದು ಪ್ರಚಾರಗೊಳಿಸಿದುದನ್ನು ಗುರುತಿಸುವೆವು. ಕೇಂದ್ರ ಸರ್ಕಾರವೂ ಶಾಸ್ತ್ರೀಯ ಭಾಷೆಯೆಂದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಆದರೆ, ಇತ್ತೀಚೆಗೆ ವಿದ್ವಾಂಸರಲ್ಲಿ ‘ಕ್ಲಾಸಿಕಲ್’ ಪದಕ್ಕೆ ‘ಶಾಸ್ತ್ರೀಯ’ ಎಂಬ ಪದವು ಸೂಕ್ತವಾದ ಸಂವಾದಿಯಾಗಬಲ್ಲುದೇ? ಅಲ್ಲದೇ ಶಾಸ್ತ್ರೀಯ ಎಂಬ ಪದವನ್ನು ಬಿಟ್ಟು ಕನ್ನಡದ್ದೇ ಆದ ಪದವನ್ನೇಕೆ ಬಳಸಬಾರದು? ಎಂಬ ಜಿಜ್ಞಾಸೆ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಕ್ಲಾಸಿಕಲ್’ ಪದದ ಪರಿಕಲ್ಪನೆ ಹಾಗೂ ಅದಕ್ಕೆ ಸೂಕ್ತವಾದ ಪದವು ಕನ್ನಡದಲ್ಲಿ ಯಾವುದು ಎಂಬುದನ್ನಿಲ್ಲಿ ಪ್ರಸ್ತಾಪಿಸಬಹುದು.

‘ಕ್ಲಾಸಿಕಲ್’ ಎಂದರೆ ಪುರಾತನ, ಶ್ರೇಷ್ಠ, ಅಭಿಜಾತ, ಮಾರ್ಗ, ಕ್ರಮಬದ್ಧ ಎಂದರ್ಥ. ಕ್ಲಾಸಿಕಲ್ ಪರಿಕಲ್ಪನೆ ಕೇವಲ ಭಾಷೆಗಷ್ಟೇ ಸಂಬಂಧಿಸದೆ ಲಲಿತಕಲೆಗಳಾದ ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಮುಂತಾದವುಗಳಿಗೂ ಸಂಬಂಧಿಸಿರುವುದನ್ನು ಗುರುತಿಸುವೆವು. ಕ್ಲಾಸಿಕಲ್ ಡಾನ್ಸ್(Classical Dance), ಕ್ಲಾಸಿಕಲ್ ಮ್ಯೂಸಿಕ್ (Classical Music), ಕ್ಲಾಸಿಕಲ್ ಆರ್ಟ್(Classical Art), ಕ್ಲಾಸಿಕಲ್ ಡ್ರಾಮಾ(Classical Drama) ಎಂದೆಲ್ಲ ಪ್ರಯೋಗಿಸುವೆವು. ಸಾಮಾನ್ಯವಾಗಿ ‘ಕ್ಲಾಸಿಕಲ್’ ಪದವು ಹಳೆಯದಾದುದನ್ನು, ಪುರಾತನವಾದುದನ್ನು ಸೂಚಿಸುವಂತಾಗಿದೆ.

ಜೊತೆಗೆ ಈ ಪದವು ಶ್ರೇಷ್ಠ, Refined, Relating to ancient Books, ಸಾಧು, ಅಧಿಕೃತ, ಸಮೃದ್ಧ, ದೃಢೀಕೃತ, ನಂಬಲರ್ಹ, ಕ್ರಮಬದ್ಧ, ಜ್ಞಾನಪೂರ್ಣ, ಸಾಂಪ್ರದಾಯಿಕ ಮತ್ತು ಶಾಸ್ತ್ರ ಸಮ್ಮತ ಎಂಬರ್ಥಗಳನ್ನು ಒಳಗೊಂಡಿದೆ. ಶಾಸ್ತ್ರವೆಂಬ ಶಬ್ದವೂ ಇಷ್ಟೆಲ್ಲ ಅರ್ಥಗಳನ್ನು ಹೆಚ್ಚೂ ಕಡಿಮೆ ಒಳಗೊಂಡಂಥದೇ ಆಗಿದೆ. ಸಾಮಾನ್ಯವಾಗಿ ನಾವು ತುಂಬ ಓದಿಕೊಂಡ ಜ್ಞಾನಿಯಾದ, ಪಾಂಡಿತ್ಯ ಹೊಂದಿದ ವ್ಯಕ್ತಿಗಳಿಗೆ ಶಾಸ್ತ್ರಿ ಎಂದು ಕರೆಯುವೆವು. ‘ಶಾಸ್ತ್ರಿ’ ಎಂದರೆ ‘A Learned Man’ ಎಂದರ್ಥ. ಶಾಸ್ತ್ರಗಳನ್ನು ಬೋಧಿಸುವ ಶಿಕ್ಷಕ ಎಂದೂ ಅರ್ಥೈಸಬಹುದು.

ಇದರಂತೆಯೇ ಪುರಾತನವಾದ, ಅಧಿಕೃತ ದಾಖಲೆಗಳನ್ನು ಸಂಪದ್ಭರಿತ ಸಂಸ್ಕೃತಿ, ಸಾಹಿತ್ಯವನ್ನು ಒಳಗೊಂಡ ಗ್ರಂಥಗಳನ್ನು ಹೊಂದಿದ ಭಾಷೆಗೆ ಕ್ಲಾಸಿಕಲ್ ಭಾಷೆ ಎನ್ನುವುದುಂಟು. ಸಂಸ್ಕೃತಿಯನ್ನು ಸಂಪದ್ಭರಿತಗೊಳಿಸುವ ಭಾಷೆಯೇ ಒಂದರ್ಥದಲ್ಲಿ ಕ್ಲಾಸಿಕಲ್ ಭಾಷೆಯಾಗಿದೆ. ಪ್ರಾಚೀನ ಕಾಲದಿಂದಲೂ ಮಹತ್ವ ಪಡೆಯುತ್ತ ಬಂದ, ಸಂಸ್ಕೃತಿ ಸಂಪನ್ನತೆಯಿಂದ ಕೂಡಿದ, ಅಧ್ಯಯನಕ್ಕೆ ತುಂಬ ಆಕರಗಳನ್ನು ಒದಗಿಸುವ ಹಾಗೂ ಎಲ್ಲಾ ದೃಷ್ಟಿಯಿಂದಲೂ ಸಮೃದ್ಧಿ ಹೊಂದಿದ ಭಾಷೆಗಳಿಗೆ ಸಾಮಾನ್ಯವಾಗಿ ನಾವು ಕ್ಲಾಸಿಕಲ್ ಭಾಷೆಗಳೆಂದು ಕರೆಯುವೆವು.

ಉದಾ: ಸಂಸ್ಕೃತ, ಗ್ರೀಕ್, ಪರ್ಶಿಯನ್, ಲ್ಯಾಟಿನ್, ಹೀಬ್ರು, ತಮಿಳು, ಕನ್ನಡ, ತೆಲುಗು ಮುಂತಾದ ಭಾಷೆಗಳು ಪ್ರಾಚೀನ ಕಾಲದ ಜನತೆಯ ಜೀವನ ವಿಧಾನವನ್ನು ಒಳಗೊಂಡ ಅಪಾರ ಗ್ರಂಥ ಸಂಪತ್ತನ್ನು ಹೊಂದಿದ್ದು, ಈ ಭಾಷೆಗಳಲ್ಲಿನ ಗ್ರಂಥಗಳು ಈಗಿನವರಿಗೂ ದಾರಿದೀಪವಾಗುವಂತಿವೆ. ಇವುಗಳಲ್ಲಿ ಧರ್ಮ, ಶಿಕ್ಷಣ, ಸಂಸ್ಕೃತಿ, ರಾಜಕೀಯ, ಆಡಳಿತ, ಜೀವನಮೌಲ್ಯ ಮುಂತಾದ ವಿಷಯ ಹಾಗೂ ಕ್ಷೇತ್ರಗಳಿಗೆ ಸಂಬಂಧಿಸಿದ ಸಮೃದ್ಧ ಮಾಹಿತಿ ಇದ್ದು, ಈ ಮಾಹಿತಿ ಮುಂದಿನ ಜನತೆಗೂ ಪ್ರಯೋಜನಕಾರಿಯಾಗಬಲ್ಲುದು.

ಈ ಭಾಷೆಗಳಲ್ಲಿನ ಗ್ರಂಥಗಳ ಅಧ್ಯಯನ, ಅನುವಾದ, ಪುನಾಸೃಷ್ಟಿ ಮಾಡಲು ತುಂಬ ಅವಕಾಶಗಳುಂಟು. ಈ ಕಾರಣಗಳಿಂದಾಗಿ ಇಂಥ ಭಾಷೆಗಳಿಗೆ ಕ್ಲಾಸಿಕಲ್ ಭಾಷೆಗಳೆಂದು ಕರೆಯುವುದುಂಟು. ಕೆಲವರು ಪ್ರಾಚೀನ ಕಾಲದಲ್ಲಿ ತುಂಬ ಮಹತ್ವಪಡೆದು ಪ್ರಚಲಿತದಲ್ಲಿದ್ದು, ಈಗ ಪ್ರಚಲಿತದಲ್ಲಿರದ; ಅಂದರೆ ಪ್ರಯೋಗದಲ್ಲಿರದ ಭಾಷೆಗಳಿಗೆ ಮಾತ್ರ ಕ್ಲಾಸಿಕಲ್ ಭಾಷೆಗಳೆನ್ನುವರು. ಆದರೆ ಇದು ಸಮಂಜಸವಾದುದಲ್ಲ.

ಕ್ಲಾಸಿಕಲ್ ಪದಕ್ಕೆ ಈಗ ಸಂವಾದಿ ಪದವಾಗಿ ಬಳಕೆಗೊಳ್ಳುತ್ತಿರುವ ‘ಶಾಸ್ತ್ರೀಯ’ ಎಂಬ ಪದವು ಸೂಕ್ತವಾದುದಲ್ಲ. ‘ಕ್ಲಾಸಿಕಲ್’ ಪದವು ಹೊಂದಿದ ಅರ್ಥವ್ಯಾಪ್ತಿಯನ್ನು ಈ ಪದವು ಹೊಂದಿಲ್ಲ. ಆದ್ದರಿಂದ ಇದನ್ನು ಕೈಬಿಟ್ಟು ‘ಕ್ಲಾಸಿಕಲ್’ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಪಾರಂಪಾರಿಕ, ಅಭಿಜಾತ, ಚೆನ್ನುಡಿ, ನಲ್ಗನ್ನಡ, ಅನುಪಮ, ಪಳಮೈ ಕನ್ನಡ ಎಂಬ ಪದಗಳನ್ನು ಪ್ರಯೋಗದಲ್ಲಿ ತರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿರುವರು. ಅವರ ಅಭಿಪ್ರಾಯಗಳನ್ನಿಲ್ಲಿ ಒಂದೊಂದಾಗಿ ನೋಡಬಹುದು.

ಡಾ.ಎಂ. ಚಿದಾನಂದ ಮೂರ್ತಿಯವರು ‘ಕ್ಲಾಸಿಕಲ್’ ಪದಕ್ಕೆ ಸಂವಾದಿಯಾಗಿ ‘ಅಭಿಜಾತ’ವೆಂಬ ಪದ ಸೂಕ್ತವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗ ಬಳಕೆಗೊಳ್ಳುತ್ತಿರುವ ‘ಶಾಸ್ತ್ರೀಯ’ ಎಂಬ ಪದವು ಹೊಂದಿದ ಅರ್ಥವ್ಯಾಪ್ತಿಯನ್ನು ಹೊಂದಿಲ್ಲವೆನ್ನುವರು. ಅಲ್ಲದೇ ಇದು ಸಾಂಪ್ರದಾಯಿಕ ನಿಯಮಬದ್ಧ ಅರ್ಥಗಳನ್ನಷ್ಟೇ ಹೊಂದಿದೆ. ‘ಅಭಿಜಾತ’ ಪದವು ಅತ್ಯುತ್ತಮ, ಶ್ರೇಷ್ಠ, ಪುರಾತನ, ಚಿರಂತನ ಎಂಬೆಲ್ಲ ಅರ್ಥಗಳನ್ನು ಹೊಂದಿದೆ. ಆದ್ದರಿಂದ ‘ಅಭಿಜಾತ’ ಪದವೇ ‘ಕ್ಲಾಸಿಕಲ್’ ಪದಕ್ಕೆ ಕನ್ನಡದಲ್ಲಿ ಸೂಕ್ತವಾದ ಸಂವಾದಿ ಪದವೆನ್ನುವರು.

ಪ್ರೊ. ಲಿಂಗದೇವರು ಹಳೇಮನೆ ಅವರು ಕ್ಲಾಸಿಕಲ್ ಪದಕ್ಕೆ ತಕ್ಕ ಸಂವಾದಿ ಪದವನ್ನು ಕನ್ನಡದಲ್ಲೇ ಹುಡುಕಬೇಕು ಎಂಬ ಕಳಕಳಿಯನ್ನು ವ್ಯಕ್ತಪಡಿಸುತ್ತ, ಪಳಮೈಕನ್ನಡ(ಹಳೆಗನ್ನಡ) ಎಂದು ಪ್ರಯೋಗಿಸಬೇಕೆನ್ನುವರು. ಈ ಪದವು ಪುರಾತನ, ಹಳೆಯ ಭಾಷೆಯನ್ನು ಸೂಚಿಸುವುದು ‘ಕ್ಲಾಸಿಕಲ್’ ಪದದ ಅರ್ಥವೂ ಪುರಾತನ, ಪ್ರಾಚೀನವೆಂದೇ ಆಗಿದೆ. ಕನ್ನಡ ಭಾಷೆಯ ಹಲವು ಅವಸ್ಥೆಗಳನ್ನು ಹೊಂದಿದ್ದರೂ ಅದರಲ್ಲಿ ಸ್ಥೂಲವಾಗಿ ಹಳೆಯದು, ಹೊಸದು ಎಂಬೆರಡು ಅವಸ್ಥೆಗಳನ್ನು ಮಾಡಬಹುದೆನ್ನುತ್ತ, ‘ಕ್ಲಾಸಿಕಲ್’ ಭಾಷೆಯು ಹಳಗನ್ನಡವನ್ನು ಸೂಚಿಸುತ್ತದೆ. ಆದ್ದರಿಂದ ಇದಕ್ಕೆ ಸೂಕ್ತ ಸಂವಾದಿ ಪದವೆಂದರೆ ‘ಪಳಮೈ ಕನ್ನಡ’ವೇ ಆಗಿದೆಯೆನ್ನುವರು. ಇದನ್ನೇ ಇನ್ನು ಮುಂದೆ ಪ್ರಯೋಗಿಸಬೇಕೆನ್ನುತ್ತ ಕನ್ನಡ ಭಾಷೆಯ ಮೇಲಿರಿಸಿದ ತಮ್ಮ ಭಾಷಾಭಿಮಾನವನ್ನು, ಕಳಕಳಿಯನ್ನೂ ಅವರು ವ್ಯಕ್ತಪಡಿಸಿದ್ದು ಸ್ವಾಗತಾರ್ಹವಾಗಿದೆ. ಕನ್ನಡ ಭಾಷೆಗೆ ಕ್ಲಾಸಿಕಲ್ ಸ್ಥಾನಮಾನ ಸಿಕ್ಕ ಸಂದರ್ಭದಲ್ಲಾದರೂ ನಾವು ಕನ್ನಡಪದ ‘ಪಳಮೈ ಕನ್ನಡ’ವನ್ನು ಬಳಸುವುದು ಸೂಕ್ತವೆನ್ನುವರು.

ಡಾ.ಕೆ.ವಿ. ನಾರಾಯಣ ಅವರು ‘ಕ್ಲಾಸಿಕಲ್’ ಪದಕ್ಕೆ ಸೂಕ್ತ ಸಂವಾದಿ ಪದ ಪಾರಂಪಾರಿಕ ಎನ್ನುವರು. ಕನ್ನಡ ಭಾಷೆಗೆ ಸುದೀರ್ಘವಾದ ಪರಂಪರೆ ಇದೆ. ಈ ಪರಂಪರೆಯನ್ನು ಗುರುತಿಸುವುದಕ್ಕಾಗಿಯೇ ಕನ್ನಡ ಭಾಷೆಗೆ ‘ಕ್ಲಾಸಿಕಲ್’ ಸ್ಥಾನ ಲಭ್ಯವಾಗಿದೆಯೆನ್ನುವರು. ‘ಶಾಸ್ತ್ರೀಯ’ ಪದಕ್ಕಿಂತಲೂ ‘ಪಾರಂಪರಿಕ’ ಪದವು ‘ಕ್ಲಾಸಿಕಲ್’ ಪದಕ್ಕೆ ಸೂಕ್ತ ಸಂವಾದಿಯಾಗಬಲ್ಲುದು ಎಂದು ಅವರು ಅಭಿಪ್ರಾಯಪಡುವರು.

ಇನ್ನು ಕೆಲವು ವಿದ್ವಾಂಸರು ‘ಕ್ಲಾಸಿಕಲ್’ ಪದಕ್ಕೆ ‘ನಲ್ಗನ್ನಡ’, ‘ಚೆನ್ನುಡಿ’, ‘ಅನುಪಮ’ ಎಂಬ ಸಂವಾದಿ ಪದಗಳನ್ನು ಸೂಚಿಸಿರುವರು.

‘ಕ್ಲಾಸಿಕಲ್’ ಪದಕ್ಕೆ ‘ಅಭಿಜಾತ’ ಎಂಬ ಪದವು ಸೂಕ್ತ ಸಂವಾದಿಯಾಗಬಲ್ಲುದು ಎಂದು ಡಾ.ಎಂ. ಚಿದಾನಂದ ಮೂರ್ತಿ ಅವರು ಅಭಿಪ್ರಾಯಪಟ್ಟುದನ್ನು ಒಪ್ಪಿಕೊಳ್ಳುವುದು ಕಷ್ಟವಾಗುವುದು. ಅಭಿಜಾತ ಪದವನ್ನು ಲಲಿತಕಲೆಗಳಿಗೆ ಬಳಸುವ ರೂಢಿ ಕನ್ನಡದಲ್ಲಿ ಮೊದಲಿನಿಂದಲೂ ಇದೆ. ಅದರಲ್ಲೂ ಅಭಿಜಾತ– ಪದವು ಸಾಹಿತ್ಯವನ್ನು ಸೂಚಿಸುವುದು. ಅಭಿಜಾತ ಸಾಹಿತ್ಯವೆಂದು ನಾವು ಈಗಾಗಲೇ ಸಾಹಿತ್ಯದ ಸಂದರ್ಭದಲ್ಲಿ ಬಳಸುತ್ತಿದ್ದೇವೆ. ಭಾಷೆಗೆ ಈ ಪದ ಅಷ್ಟಾಗಿ ಹೊಂದಿಕೆಯಾಗದು.

ಪ್ರೊ. ಲಿಂಗದೇವರು ಹಳೇಮನೆ ಅವರು ಸೂಚಿಸಿದ ‘ಪಳಮೈ ಕನ್ನಡ’ ಪದವೂ ಕನ್ನಡ ಭಾಷೆಯ ಹಳಮೆ, ಪ್ರಾಚೀನತೆಯನ್ನು ಸೂಚಿಸುತ್ತದೆಯೇ ವಿನಾ ಶ್ರೇಷ್ಠತೆ, ಕ್ರಮಬದ್ಧತೆ, ಚಿರಂತನತೆ, ಸಮೃದ್ಧತೆ, ಅಧಿಕೃತತೆ ಮುಂತಾದ ಅರ್ಥಗಳನ್ನು ಸೂಚಿಸದು. ಈ ಪದವು ಕನ್ನಡ ಭಾಷೆಯ ಅನನ್ಯತೆ, ಆಸ್ಮಿತೆ, ಕನ್ನಡಿಗರ ಸಂಸ್ಕೃತಿ, ಸಾಹಿತ್ಯ, ಧರ್ಮ, ಪರಂಪರೆ ಈ ಮುಂತಾದವುಗಳ ಅರ್ಥವ್ಯಾಪ್ತಿ, ವೈಶಾಲ್ಯತೆಯನ್ನು ಒಳಗೊಳ್ಳದು.

ಡಾ.ಕೆ.ವಿ. ನಾರಾಯಣ ಅವರು ಸೂಚಿಸಿದ ‘ಪಾರಂಪರಿಕ’ ಎನ್ನುವ ಸಂವಾದಿ ಪದವೂ ಈ ಮೇಲಿನ ಅರ್ಥವ್ಯಾಪ್ತಿಯನ್ನು ಹೊಂದಿಲ್ಲ. ಕೇವಲ ಇದು ಕನ್ನಡ ಭಾಷೆಯ ಪರಂಪರೆಯನ್ನು ಸೂಚಿಸುವುದು. ಪರಂಪರೆಯ ಜೊತೆಗೆ ಶ್ರೇಷ್ಠತೆ, ಅಧಿಕೃತತೆ, ಚಿರಂತನತೆ ಇವೂ ಒಳಗೊಳ್ಳಬೇಕಾಗುವುದು. ಆದುದರಿಂದ ಈ ಪದವೂ ಸೂಕ್ತ ಸಂವಾದಿಯೆನ್ನಿಸದು. ಇನ್ನು ಕೆಲವು ವಿದ್ವಾಂಸರು ‘ಕ್ಲಾಸಿಕಲ್’ ಪದಕ್ಕೆ ‘ನಲ್ಗನ್ನಡ’ ‘ಚೆನ್ನುಡಿ’, ‘ಅನುಪಮ’ ಎಂದೆಲ್ಲ ಗುಣವಾಚಕ ವಿಶೇಷಣಗಳನ್ನು ಬೆರೆಸಿದ ಸಂವಾದಿ ಪದಗಳನ್ನು ಪ್ರಯೋಗಿಸಬೇಕೆನ್ನುವುದೂ ಸಮಂಜಸವೆನ್ನಿಸದು. ಏಕೆಂದರೆ, ಈ ಪದಗಳು ‘ಕ್ಲಾಸಿಕಲ್’’ ಪದದ ಅರ್ಥವ್ಯಾಪ್ತಿಯನ್ನು ಹೊಂದಿಲ್ಲವೆಂಬುದನ್ನು ಯಾರೂ ಗುರುತಿಸಬಹುದು.

ಈಗಾಗಲೇ ‘ಕ್ಲಾಸಿಕಲ್’ ಪದಕ್ಕೆ ‘ಶಾಸ್ತ್ರೀಯ’ ವೆಂದು ಸೂಚಿಸಿದ ಸಂವಾದಿ ಪದವನ್ನೇ ಭಾಷಾಭಿಮಾನಕ್ಕೆ ಕಟ್ಟು ಬೀಳದೆ ಸ್ವೀಕರಿಸಬಹುದಾಗಿದೆ. ಏಕೆಂದರೆ, ಕೇಂದ್ರ ಸರ್ಕಾರವೂ ಈಗಾಗಲೇ ಶಾಸ್ತ್ರೀಯ ಭಾಷೆಗಳೆಂದೇ ತನ್ನ ಅಧಿಸೂಚನೆಗಳಲ್ಲಿ ಬಳಸಿದೆ. ‘ಶಾಸ್ತ್ರೀಯ’ ಎನ್ನುವ ಪದವು ಹೆಚ್ಚೂ ಕಡಿಮೆ ‘ಕ್ಲಾಸಿಕಲ್’ ಪದವು ಹೊಂದಿದ ಅರ್ಥವ್ಯಾಪ್ತಿಯನ್ನೇ ಒಳಗೊಂಡಿದೆ. ಕ್ರಮಬದ್ಧ, ಪ್ರಮಾಣಭೂತ, ಪುರಾತನ, ಚಿರಂತನ, ಜ್ಞಾನಪೂರ್ಣ, ಸಮೃದ್ಧ ಈ ಮುಂತಾದ ಅರ್ಥಗಳನ್ನು ‘ಶಾಸ್ತ್ರೀಯ’ ಪದವು ಹೊಂದಿದೆ.

ಈ ಪದವು ‘ಕ್ಲಾಸಿಕಲ್’ ಪದಕ್ಕೆ ಸೂಕ್ತ ಸಂವಾದಿಯೇ? ಎಂಬ ಜಿಜ್ಞಾಸೆ ವಿದ್ವಾಂಸರ ಮಧ್ಯೆ ಇದೆಯೇನೋ ನಿಜ. ಆದರೆ ಈ ಪದವು ಜನಾಂದೋಲನವೊಂದರ ಮೂಲಕ– ವ್ಯಾಪಕವಾಗಿ ಬಳಕೆಯಾಗುತ್ತಾ ಬಂದಿದೆಯೆನ್ನುವುದೂ ಅಷ್ಟೇ ನಿಜ. ಇದು ರೂಢನಾಮವಾಗಿ ಈಗಾಗಲೇ ಹೊರಹೊಮ್ಮಿದೆ. ಭಾಷೆಯಲ್ಲಿ ಪದಗಳ ಬಳಕೆ ಜನತೆಯನ್ನೇ ಅವಲಂಬಿಸಿದೆ. ಅದು ಸರಿ ಇರಲಿ, ತಪ್ಪಿರಲಿ, ಸೂಕ್ತವಿರಲಿ, ಇಲ್ಲದೇ ಇರಲಿ, ಅದು ಜನತೆಯ ಒಪ್ಪಿಗೆಯ ಮುದ್ರೆಯನ್ನೊತ್ತಿಸಿಕೊಂಡು ಚಲಾವಣೆಗೆ ಬಂತೆಂದರೆ ಮುಗಿಯಿತು. ವಿದ್ವಾಂಸರು ಎಷ್ಟೇ ವಾದಗಳನ್ನು ಮಂಡಿಸಿದರೂ, ಸೂಕ್ತ ಪದಗಳನ್ನು ಸೂಚಿಸಿದರೂ ಜನ ರೂಢಿಯಲ್ಲಿ ತರುವುದು ಕಷ್ಟ.

‘ಕ್ಲಾಸಿಕಲ್’ ಪದಕ್ಕೆ ಸೂಕ್ತ ಸಂವಾದಿ ಪದವನ್ನು ಕನ್ನಡ ಭಾಷೆಯಿಂದಲೇ ಆಯ್ದು ಪ್ರಯೋಗಿಸಬೇಕೆನ್ನುವ ವಿದ್ವಾಂಸರ ಸೂಚನೆಯೇನೋ ಸ್ವಾಗತಾರ್ಹ. ಆದರೆ ಸೂಕ್ತ ಸಂವಾದಿ ಪದ ನಮ್ಮ ಭಾಷೆಯಲ್ಲಿ ಸಿಗದೇ ಹೋದಾಗ ಬೇರೆ ಭಾಷೆಗಳ ಪದಗಳನ್ನು ಪ್ರಯೋಗಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅದರ ಸನಿಹದ ಅರ್ಥ ನೀಡುವ, ಗುಣವಾಚಕಗಳಿಂದ ಕೂಡಿದ ಪದಗಳನ್ನು ಪ್ರಯೋಗಿಸುವುದು ಔಚಿತ್ಯಪೂರ್ಣವೆನ್ನಿಸದು. ಏಕೆಂದರೆ ಭಾಷೆಯನ್ನು ಬಳಸುವಾಗ, ಪ್ರಯೋಗಿಸುವಾಗ ಇದೇ ಭಾಷೆಯ ಶಬ್ದಗಳನ್ನು ಬಳಸಬೇಕು, ಆ ಭಾಷೆಯ ಶಬ್ದಗಳನ್ನು ಬಳಸಬಾರದು ಎಂಬ ಮಡಿವಂತಿಕೆಯನ್ನು ಇಟ್ಟುಕೊಳ್ಳಬಾರದು.

ಹಾಗೆ ನೋಡಿದರೆ ನಮ್ಮ ಭಾಷೆಯಲ್ಲಿ ನಾವು ದಿನ ನಿತ್ಯ ಸಂಸ್ಕೃತ, ಇಂಗ್ಲೀಷ್, ಹಿಂದಿ, ಮರಾಠಿ, ಉರ್ದು ಮುಂತಾದ ಭಾಷೆಗಳ ಎಷ್ಟೊಂದು ಶಬ್ದಗಳನ್ನು ಬಳಸುತ್ತಿದ್ದೇವೆ. ಎಷ್ಟೊಂದು ಬೇರೆ- ಬೇರೆ ಭಾಷೆಗಳ ಶಬ್ದಗಳು ನಮ್ಮ ಭಾಷಾಕೋಶದಲ್ಲಿ ಸೇರಿ ಹೋಗಿವೆ. ಇದನ್ನು ನೋಡಿದಾಗ ನಮಗೆ ಆಶ್ಚರ್ಯವಾಗದೇ ಇರದು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮುಖ, ಶಾಸ್ತ್ರ, ಖೇದ, ಶ್ರೇಷ್ಠ, ದೃಷ್ಟಿ, ಪಾಠ, ಸಂಸ್ಥೆ, ಸ್ಪರ್ಶ, ಜ್ಞಾನ, ಪ್ರತಿವಕ್ರ, ಧರ್ಮ, ಸಭ್ಯ, ಮಹೂರ್ತ, ಉತ್ಸವ, ಪಾನಕ, ಸನ್ನಿಧಿ, ಸುವಾರ್ತೆ, ಶ್ರಾದ್ಧ, ಜಂಗಮ, ಕಾಯಕ, ಲಕ್ಷ್ಮಿ ಈ ಮುಂತಾದ ಸಂಸ್ಕೃತ ಶಬ್ದಗಳನ್ನು ನಾವು ನಮ್ಮ ನಿತ್ಯದ ಮಾತು- ಕತೆಗಳಲ್ಲಿ ಪ್ರಯೋಗಿಸುವೆವು.

ಇವುಗಳಂತೆಯೇ ಪರೇಶಾನ್, ನಾಲಾಯಕ್, ತಾರಿಫ್, ಬಾರಿಕ್, ಬಯಾನ್, ಸರ್ದಿ, ಸಡಕ್, ಮುಂತಾದ ಉರ್ದು ಪದಗಳನ್ನೂ, ಠಿಕಾಣಿ, ಖಿಚಡಿ, ದಗದ್, ಠೀಕ್, ಮಾಂವಸಿ, ಝಣಕ್, ಥಾಲಿ, ಭಕ್ರಿ ಮುಂತಾದ ಮರಾಠಿ ಶಬ್ದಗಳನ್ನು ಪ್ರಯೋಗಿಸುವೆವು. ಭಾಷೆಯನ್ನು ಪ್ರಯೋಗಿಸುವಾಗ ಯಾರೂ ಈ ಭಾಷೆಯ ಶಬ್ದ, ಆ ಭಾಷೆಯ ಶಬ್ದ ಎಂದು ಎಣಿಸಿ, ಗುಣಿಸಿ ಪ್ರಯೋಗಿಸುವುದಿಲ್ಲ. ಶಬ್ದಗಳ ಬಳಕೆಯಲ್ಲಿ ಮಡಿವಂತಿಕೆ ಸಲ್ಲದು. ಯಾವ ಶಬ್ದವು ಆ ಸಂದರ್ಭಕ್ಕೆ ಹೊಂದಿಕೆಯಾಗುತ್ತದೆಯೋ, ಸಮರ್ಪಕ ಅರ್ಥವನ್ನು ಕೊಡುತ್ತದೆಯೋ ಅಂಥ ಶಬ್ದಗಳನ್ನು ಬಳಸುವುದರಲ್ಲಿ ಯಾವ ತಪ್ಪೂ ಇಲ್ಲ. ಭಾಷೆ ಹರಿಯುವ ನದಿ ಇದ್ದಂತೆ. ಅದೊಂದು ಜೀವಂತ ಪ್ರಕ್ರಿಯೆ. ಅದು ಯಾರ ಸೊತ್ತೂ ಅಲ್ಲ. ತೊತ್ತೂ ಅಲ್ಲ. ಯಾರ ಹೇಳಿಕೆ, ನಿರ್ದೇಶನದ ಮೇಲೆ ನಡೆಯುವಂಥದೂ ಅಲ್ಲ.

ಈ ಹಿನ್ನೆಲೆಯಲ್ಲಿ ನಾವಿಂದು ಭಾಷೆಗಳನ್ನು ಪರಿಭಾವಿಸಬೇಕಿದೆ. ಭಾಷೆಯ ಮೇಲೆ ಅಭಿಮಾನವಿರಕೂಡದು ಎಂದು ಅರ್ಥವಲ್ಲ. ಅಭಿಮಾನವಿರಿಸಿಕೊಳ್ಳುವುದರ ಜೊತೆಗೆ ಅದರ ಪ್ರಾಯೋಜನಿಕ ದೃಷ್ಟಿಯನ್ನು ನಾವು ಗಮನದಲ್ಲಿಡಬೇಕು. ಅಂದಾಗ ಭಾಷಾಧ್ಯಯನವು ಸಾರ್ಥಕವೆನ್ನಿಸುವುದು. ಈ ದೃಷ್ಟಿಯಿಂದ ನಾವು ಈಗ ನಮ್ಮ ಭಾಷೆಯ ಅಧ್ಯಯನವನ್ನೀಗ ನಡೆಸಬೇಕಿದೆ. ಕನ್ನಡ ಭಾಷೆಯು ತುಂಬಾ ಪ್ರಾಚೀನತೆಯನ್ನು ಹೊಂದಿದ್ದು, ಸಾಹಿತ್ಯ ಸಂಸ್ಕೃತಿ ದೃಷ್ಟಿಯಿಂದಲೂ ಸಮೃದ್ಧಿ ಹೊಂದಿದೆ.

ಪ್ರಾಚೀನತನವೂ, ಮೌಲಿಕವೂ, ಸಮೃದ್ಧ ಮಾಹಿತಿಯನ್ನು ಒಳಗೊಂಡಂಥವೂ ಆದ ಅನೇಕ ಗ್ರಂಥಗಳಿಂದ ತುಂಬಿದ ನಮ್ಮ ಭಾಷೆಯ ಅಧ್ಯಯನವೀಗ ಅನ್ಯಜ್ಞಾನ ಶಿಸ್ತುಗಳ ಬೆಳಕಿನಡಿಯಲ್ಲಿ ಸಮಗ್ರವಾಗಿ ನಡೆಯಲೆಂಬ ಸದುದ್ದೇಶದಿಂದ ಇದೀಗ ನಮ್ಮ ಭಾಷೆಗೆ ಕ್ಲಾಸಿಕಲ್– ಶಾಸ್ತ್ರೀಯ ಸ್ಥಾನ ಲಭ್ಯವಾಗಿದೆ.