ನಾನಿದ್ದದ್ದು ಇಂಗ್ಲೆಂಡಿನ ಮಧ್ಯಪ್ರದೇಶವೆಂದು ಕರೆಯಲಾದ ಮಿಡ್‌ಲ್ಯಾಂಡಿನ ಬರ್ಟನ್ ಎಂಬ ಒಂದು ಊರಿನಲ್ಲಿ. ಈ ಊರು ಟ್ರೆಂಟ್ ಎಂಬ ನದಿಯ ದಡದ ಮೇಲಿರುವುದರಿಂದ ಬರ್ಟನ್ ಅಪಾನ್ ಟ್ರೆಂಟ್ ಎಂದು ಕರೆಯಲ್ಪಡುತ್ತಿದೆ. ಈ ಊರು ತೀರಾ ದೊಡ್ಡದೇನೂ ಅಲ್ಲ. ಕರ್ನಾಟಕದ ಯಾವುದೇ ಜಿಲ್ಲಾ ಕೇಂದ್ರದಷ್ಟಿರಬಹುದು. ತುಂಬ ಅಚ್ಚುಕಟ್ಟಾದ, ಹೆಚ್ಚು ಗದ್ದಲವಿಲ್ಲದ ಊರು. ಸ್ವಚ್ಛವಾದ ರಸ್ತೆಗಳು, ರಸ್ತೆಯ ಎರಡೂ ಬದಿಗೆ ಒಂದೇ ಮಾದರಿಯ – ಮಾಸಲು ಬಣ್ಣದ ಹೆಂಚಿನ ಛಾವಣಿಯ ಹಾಗೂ ಆ ಛಾವಣಿಯ ನಡುವೆ ಎದ್ದು ಕಾಣುವ ಹೊಗೆ ಚಿಮಣಿಯ – ಮನೆಗಳು. ಒಂದು ಕಾಲಕ್ಕೆ ಪ್ರತಿಯೊಂದು ಮನೆಯೊಳಗೂ ಬೆಂಕಿ ಗೂಡುಗಳು – ಹಾರ್ತ್ – ಇರುತ್ತಿದ್ದ ಕಾರಣದಿಂದ, ಅದರ  ಹೊಗೆ ಹೊರಗೆ ಹೋಗುವುದಕ್ಕೆ ಹೊಗೆ ಕೊಳವೆ ಚಿಮಣಿಗಳು ಅಗತ್ಯವಾಗಿದ್ದವು. ಆದರೆ ಈಗ ವಿದ್ಯುಚ್ಛಕ್ತಿಯು ಎಲ್ಲರಿಗೂ, ಎಲ್ಲ ಕಾಲಕ್ಕೂ ಲಭ್ಯವಾಗಿರುವ ಸಂದರ್ಭದಲ್ಲಿ ಮನೆಯನ್ನು ಬೆಚ್ಚಗಿಡಲು ಹೀಟರ್‌ಗಳನ್ನು ಅಳವಡಿಸಿರುವಾಗಲೂ, ಬಹುತೇಕ ಮನೆಗಳು ಹಿಂದಿನ ನೆನಪನ್ನು ಸಂರಕ್ಷಿಸಿಕೊಂಡಂತೆ, ಚಿಮಣಿಯ ಜುಟ್ಟು ಬಿಟ್ಟು ಕೊಂಡಿರುವುದು ಒಂದು ರೀತಿಯಲ್ಲಿ ವಿಲಕ್ಷಣವಾಗಿ ತೋರಿದರೂ, ಅದು ಇಂಗ್ಲೆಂಡಿನ ಜನರ ಸಂಪ್ರದಾಯಪ್ರಿಯತೆಯ ಸಂಕೇತವಾಗಿದೆ. ನಾನು ನನ್ನ ಸಂಚಾರದ ಉದ್ದಕ್ಕೂ, ಎರಡೂ ಬದಿಗೆ ಕಂಡ ಎಷ್ಟೋ ಊರುಗಳು ಹೀಗೆ ಒಂದೇ ಮಾದರಿಯಲ್ಲಿರುವುದನ್ನು ಗಮನಿಸಿದ್ದೇನೆ. ಅಂಥ ಹಲವು ಊರುಗಳಲ್ಲಿ ಬರ್ಟನ್ ಕೂಡ ಒಂದು. ಆದರೆ ಈ ಊರು ಇಡೀ ಇಂಗ್ಲೆಂಡಿನಲ್ಲೇ ಹೆಸರಾಗಿರುವುದು, ಅದು ಬೀರ್ ತಯಾರಿಕೆಯ ಕೇಂದ್ರವಾಗಿದೆ ಎಂಬ ಕಾರಣಕ್ಕೆ.

ಈ ಊರಲ್ಲಿ ಸುಮಾರಾಗಿ ದೊಡ್ಡದಾದ ಒಂದು ಆಸ್ಪತ್ರೆಯಿದೆ. ಆಸ್ಪತ್ರೆಗೆ ಸೇರಿಕೊಂಡಂತೆ ಅದರ ಆವರಣದಲ್ಲಿ ಡಾಕ್ಟರುಗಳಿಗಾಗಿ ವಸತಿಗಳಿವೆ. ಕೆಲವು ತಿಂಗಳುಗಳಿಂದ ಈ ಆಸ್ಪತ್ರೆಯಲ್ಲಿ – ಕ್ವೀನ್ಸ್ ಹಾಸ್ಟಿಟಲ್  ಎಂದು ಅದರ ಹೆಸರು – ನನ್ನ ಮಗ ಮತ್ತು ಸೊಸೆ ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಹೀಗಾಗಿ ಇವರಿಗೆ ನಿಗದಿತವಾದ ‘ಡಿ’ ಬ್ಲಾಕ್‌ನ ಮೊದಲ ಮಹಡಿಯ ಮೂರು ಬೆಡ್‌ರೂಂಗಳ ನಿವಾಸವೆ ಇವರ ವಸತಿ. ಅಕ್ಕಪಕ್ಕದ ಬ್ಲಾಕುಗಳಲ್ಲಿ ಇವರಂತೆಯೆ ವೈದ್ಯರ ಸಂಸಾರಗಳಿವೆ. ಅವರಲ್ಲಿ ಬಹುತೇಕ ಭಾರತದ ವಿವಿಧ ಪ್ರದೇಶಗಳಿಂದ ಬಂದವರೇ. ಈ ವಸತಿ  ಸಮುಚ್ಚಯ ಎತ್ತರವಾದೊಂದು ಹಸಿರು ಏರುವೆಯ ತಪ್ಪಲಿನಲ್ಲಿದೆ. ಈ ವಸತಿಯ ನಂತರ ಮತ್ತೆ ಇಳಿಜಾರಾದ ಹಸುರಿನ ನಡುವೆ ಒಂದು ಟೆನ್ನಿಸ್ ಕೋರ್ಟ್, ಅದರಾಚೆಗೆ ಹಾದು ಹೋಗುವ ಹೈವೇ, ಅದರ ಮೇಲೆ ಸದಾ ಬಿಟ್ಟ ಬಾಣಗಳಂತೆ ಸುಯ್ಯೆಂದು ಧಾವಿಸುವ ವಾಹನಗಳ ನಿರಂತರ ನೋಟ. ಮತ್ತೆ ಅಲ್ಲಿಂದ ಏರುವ ದಿಬ್ಬಗಳು, ಆ ದಿಬ್ಬಗಳನ್ನು ಹಚ್ಚನೆ ಜಮಖಾನದಂತೆ ತಬ್ಬಿಕೊಂಡ ಹಸಿರು. ಆ ಹಸುರಿನ ಮೇಲೆ, ಸಂಜೆ ಎಂಟು ಗಂಟೆಯಾದರೂ ಇನ್ನೂ ಮುಳುಗದ ಸೂರ್ಯನ ಸೊಂಪಾದ ಹೊಂಬಿಸಿಲು. ಸುತ್ತ ಎತ್ತ ಕಣ್ಣಾಡಿಸಿದರೂ ಕಣ್ಣಿಗೆ ತಂಪಾದ ಹಸಿರು, ಏರಿಳಿವ ಹಸಿರು, ಮತ್ತೆ ನಡುವಣ ಬೋಗುಣಿಯಾಕಾರದಲ್ಲಿ ಹರಹಿಕೊಂಡ ಊರು ಬರ್ಟನ್, ನನ್ನ ಸಂಚಾರದ ಕೇಂದ್ರ.

‘ನೀವು ಒಳ್ಳೆಯ ಹವಾಮಾನದ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದೀರಿ. ‘You are lucky’ ಎಂದರು ನನ್ನ ಮಗನ ಸಹೋದ್ಯೋಗಿಯೊಬ್ಬರು. ಜುಲೈ ತಿಂಗಳಿಂದ ನವೆಂಬರ್ ಮೊದಲರ್ಧದವರೆಗಿನ ಸುಮಾರು ನಾಲ್ಕು ತಿಂಗಳ ಕಾಲಮಾನದಲ್ಲಿ, ಇದ್ದ ನನಗೆ ಅವರ ಮಾತು ನಿಜ ಅನ್ನಿಸಿತು. ಇಂಗ್ಲೆಂಡಿನಲ್ಲಿ ನಂಬಿಕೆಗೆ ಅರ್ಹವಲ್ಲದ್ದು ಏನಾದರೂ ಇದ್ದರೆ ಅದರ ಹವಾಮಾನವೇ ಅನ್ನುತ್ತಾರೆ ಅನುಭವಿಗಳು. ವರ್ಷದಲ್ಲಿ ಹೆಚ್ಚೆಂದರೆ ನಾಲ್ಕೈದು ತಿಂಗಳು ತುಂಬ ಹಿತವಾಗಿರುತ್ತದೆ ಇಲ್ಲಿನ ಹವಾಮಾನ, ಅದೂ ಮುಖ್ಯವಾಗಿ ಬೇಸಿಗೆಯ ವಸಂತದ ದಿನಗಳಲ್ಲಿ. ಉಳಿದಂತೆ ಮಬ್ಬು, ಮೋಡ, ಛಳಿ, ಮಳೆ, ಗಾಳಿ, ಮಂಜು ಇತ್ಯಾದಿ. ಇಲ್ಲಿರುವುದು ಬಹುಶಃ ಎರಡೇ ಕಾಲಮಾನಗಳು – ಬೇಸಗೆ ಮತ್ತು ಛಳಿಗಾಲ. ಮಳೆಗಾಲ ನಮ್ಮಲ್ಲಿಯಂತೆ ಪ್ರತ್ಯೇಕವಾಗಿ ಗುರುತಿಸಬಹುದಾದ ಕಾಲಮಾನವಾಗಿಲ್ಲ. ಅದು ವರ್ಷದ ಉದ್ದಕ್ಕೂ ಯಾವಾಗೆಂದರೆ ಆವಾಗ ಹಾಜರಾಗುತ್ತಲೇ ಇರುತ್ತದೆ. ಇವತ್ತು ಸೊಗಸಾದ ಬಿಸಿಲಿದೆ, ಪೇಟೆ ಕಡೆ ಹೋಗಿ ಬರೋಣ ಅಂದುಕೊಳ್ಳುತ್ತ ನೀವು ಪ್ಯಾಂಟು ಏರಿಸಿಕೊಳ್ಳುತ್ತೀರಿ ಅನ್ನಿ. ಆ ವೇಳೆಗೆ ಆಕಾಶದಲ್ಲಿ ಎಲ್ಲೋ ಮೋಡ ಕಾಣಿಸಿಕೊಳ್ಳುತ್ತದೆ. ಕೋಟು ಹಾಕಿಕೊಂಡು, ಬೂಡ್ಸಿನ ಲೇಸು ಬಿಗಿದುಕೊಳ್ಳುವ ಹೊತ್ತಿಗೆ ಆಗಲೇ ಬಿಸಿಲು ನಾಪತ್ತೆಯಾಗಿ ಆಕಾಶದಲ್ಲಿ ಮಬ್ಬು ಕವಿದುಕೊಂಡಿರುತ್ತದೆ. ಪರವಾಗಿಲ್ಲ. ಅಂದುಕೊಳ್ಳುತ್ತ ಬಾಗಿಲು ತೆರೆದು ಹೊರಗೆ ಕಾಲಿಟ್ಟೆವೋ ಮಳೆ ಸುರಿಯತೊಡಗುತ್ತದೆ. ಹೀಗಾಗಿ ಛತ್ರಿಯಿಲ್ಲದೆ ನೀವು ಯಾವತ್ತೂ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಇದರಿಂದ ಇಂಗ್ಲೆಂಡಿನಲ್ಲಿ ಯಾರ ಕೈಯಲ್ಲಿ ಯಾವಾಗ ನೋಡಿದರೂ ಛತ್ರಿ ಅವರ ಎಡೆಬಿಡದ ಸಂಗಾತಿ. ಅಷ್ಟೆ ಅಲ್ಲ, ಅದು ಕೈಯ ಒಂದು ವಿಸ್ತರಣೆಯೋ ಅನ್ನುವಷ್ಟರ ಮಟ್ಟಿಗೆ ದೈನಂದಿನ ಬದುಕಿನ ಒಂದು ಅನಿವಾರ್ಯವಾದ ಭಾಗವಾಗಿದೆ. ಹಾಗೆ ನೋಡಿದರೆ ಇಂಗ್ಲೆಂಡಿನ ರಾಷ್ಟ್ರಧ್ವಜದಲ್ಲಿ ಅರ್ಥವತ್ತಾದ ಸಂಕೇತವಾಗಿರಲು ಅರ್ಹವಾದ ವಸ್ತು ಎಂದರೆ ಛತ್ರಿಯೇ ಎಂದು ನನ್ನ ತಿಳಿವಳಿಕೆ. ಇನ್ನೇನು ಸುರಿಮಳೆಯಲ್ಲಿ ಛತ್ರಿ ಹಿಡಿದು, ಕಾರ್ಯನಿಮಿತ್ತ ಹೋಗಲೇಬೇಕಾದ ಸಂದರ್ಭ ಬಂತಲ್ಲ ಅಂದುಕೊಂಡರೂ, ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ಬಂದ ಬಳೆ, ಬಂದ ಹಾಗೇ ತಟ್ಟನೆ ನಿಂತು ಬಾನು ಹೊಳವಾಗಿ ಮತ್ತೆ ಬಿಸಿಲು ಇಣುಕುತ್ತದೆ. ಹೀಗೆ ವರ್ಷದ ಮುಕ್ಕಾಲುಪಾಲು ಕಾಲ ಈ ಮಳೆಯ ಕಣ್ಣು ಮುಚ್ಚಾಲೆ. ಆದರೆ ಬೇಸಿಗೆ ಹಿಂದೆಗೆದಂತೆ ಮತ್ತೆ ಸದಾ ಮೋಡ ಮುಸುಕಿದ ವಾತಾವರಣಗಳಲ್ಲಿ ಪಿರಿಪಿರಿ ಮಳೆಯ ಜತೆಗೆ ಬಲವಾದ ಗಾಳಿ ಬೇರೆ ಬೀಸತೊಡಗಿತೆಂದರೆ, ನರ ನರವನ್ನೂ ಛಳಿ ಕೊರೆಯತೊಡಗುತ್ತದೆ. ಮತ್ತೆ ಛಳಿಗಾಲ ಬಂತೆಂದರೆ ಮರಗಳ ಮೇಲೆ, ಗಿಡಗಳ ಮೇಲೆ, ಮನೆಗಳ ಮೇಲೆ, ಆಕಾಶದಿಂದ ಹಕ್ಕಿಯ ತುಪ್ಪುಳದ ತುಣುಕುಗಳಂತೆ ಹಿಮ ಬೀಳತೊಡಗುತ್ತದೆ. ಸೂರ್ಯ ಮುಳುಗದ ಸಾಮ್ರಾಜ್ಯ ತಮ್ಮದೆಂದು ಒಂದು ಕಾಲಕ್ಕೆ ಘೋಷಿಸಿಕೊಂಡ ಜನದ ಈ ನಾಡಿನಲ್ಲಿ, ವರ್ಷದ ಬಹು ಕಾಲ ಸೂರ್ಯನೇ ನಾಪತ್ತೆಯಾಗಿರುತ್ತಾನೆ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ಛಳಿಗಾಲಗಳಲ್ಲಂತೂ ಮಧ್ಯಾಹ್ನ ಮೂರು ಮೂರೂವರೆಗೆ ಕತ್ತಲಾದಂತಾಗಿ, ಮಂಜಿನಮಬ್ಬು ವ್ಯಾಪಿಸಿ, ಛಳಿಗಾಳಿ ಬೀಸತೊಡಗಿತೆಂದರೆ, ಹೊರಗೆ ಹೋಗಿ ಬರುವ ಉತ್ಸಾಹವೇ ಸತ್ತು ಹೋಗುತ್ತದೆ. ನಾನು ಇಲ್ಲಿದ್ದ ಕಾಲದ, ಅಕ್ಟೋಬರ್ ಕೊನೆಯ ವೇಳೆಗೆ ಈ ಪರಿಸ್ಥಿತಿ ಪ್ರಾಪ್ತವಾಗಿ ‘Here you shall find no enemy, but, winter and rough1 weather’ ಎಂದ ಷೇಕ್ಸ್‌ಪಿಯರನ ಕವಿತೆಯ ಪಂಕ್ತಿಗಳು ನೆನಪಿಗೆ ಬರತೊಡಗಿದ್ದವು. ಇನ್ನು ತೀವ್ರವಾದ ಛಳಿಗಾಲದ ಬಿರುಬು ಇನ್ನೆಷ್ಟಿರಬೇಕು! ಅದು ನನ್ನ ಅನುಭವಕ್ಕೆ ಬಂದ ಸಂಗತಿಯಲ್ಲ. ಆದರೆ ನವೆಂಬರ್ ಮೊದಲ ವಾರದಲ್ಲಿ ಇಂಡಿಯಾಕ್ಕೆ ಹೊರಡಲು, ಒಂದು ಮುಂಜಾನೆ ಹೊರಕ್ಕೆ ಕಾಲಿಡುತ್ತೇನೆ, ಆಗಲೇ ಹಿಮಬಿದ್ದು, ನನ್ನ ಮಗನ ಕಾರಿನ ಮೇಲೆ ಎರಡಿಂಚು ಗಾತ್ರಕ್ಕೆ ಬೆಳ್ಳಗೆ ಎರಕ ಹೊಯ್ದಂತೆ ಕೂತುಕೊಂಡಿದೆ. ಬೇರೆ ದಾರಿ ತೋರದೆ, ಬಿಸಿ ಬಿಸಿ ಕಾದ ನೀರನ್ನು ಬಕೆಟ್ಟುಗಳಲ್ಲಿ ಸಾಗಿಸಿ, ಅಡುಗೆ ಉಪ್ಪಿನಿಂದ ಕಾರಿನ ಮುಂದಿನ ವಿಂಡ್‌ಸ್ಕ್ರೀನ್‌ನನ್ನು ಉಜ್ಜಿ, ಬಿಸಿ ನೀರು ಸುರುವಿ, ಅದನ್ನು ಪಾರದರ್ಶಕವನ್ನಾಗಿ ಮಾಡಿಕೊಂಡು, ಬರ್ಟನ್‌ದಿಂದ ಮ್ಯಾಂಚೆಸ್ಟರ್‌ನ ಏರ್‌ಪೋರ್ಟಿಗೆ ಬರುವ ವೇಳೆಗೆ ಸಾಕಷ್ಟು ತಡವಾಯಿತು. ಅಂತೂ ಇಂಗ್ಲೆಂಡಿನ ಛಳಿಗಾಲದ ಒಂದು ಸ್ಯಾಂಪಲ್ಲಿನ ಪರಿಚಯವಾದಂತಾಯಿತು. ನಾನು ಇದ್ದಷ್ಟು ಕಾಲವೂ, ನನ್ನ ದಿನಚರಿಯ ಒಂದು ಭಾಗವೆಂದರೆ, ಟಿ.ವಿ.ಯಲ್ಲಿ ಆಯಾ ವಾರದ ಹವಾಮಾನದ ವರದಿಯನ್ನು ಕೇಳಿ ನನ್ನ ಪ್ರವಾಸದ ಕಾರ್ಯಕ್ರಮಗಳನ್ನು ಗೊತ್ತು ಮಾಡಿಕೊಂಡದ್ದು. ಅಷ್ಟೆ ಕರಾರುವಾಕ್ಕಾಗಿ ಯಾವ ದಿನ ಮಳೆ, ಯಾವ ದಿನ ಬಿಸಿಲು, ಯಾವ ದಿನ ಗಾಳಿ-ಇತ್ಯಾದಿಗಳನ್ನು ಲೆಕ್ಕ ಹಾಕಿ, ನಿಖರವಾಗಿ ಹೇಳಲಾದ ಹವಾಮಾನದ ವರದಿಯನ್ನು ಕೇಳಿ, ನಾನು ಹೊರಗೆ ಹೋಗುವುದೊ ಬೇಡವೊ, ಹೋಗುವುದಾದರೆ ಎಷ್ಟು ಪೂರ್ವಸಿದ್ಧತೆ ಮಾಡಿಕೊಂಡು ಹೋಗಬೇಕು, ಎಂಬಿತ್ಯಾದಿಗಳನ್ನು ಕಲಿತೆ.

ನನ್ನಂಥ ಪ್ರವಾಸಪ್ರಿಯರಿಗೆ ಇಂಗ್ಲೆಂಡ್ ಹೇಳಿ ಮಾಡಿಸಿದಂಥ ದೇಶ. ನಾನಿದ್ದದ್ದು ಮಿಡ್‌ಲ್ಯಾಂಡಿನಲ್ಲಾದ ಕಾರಣ, ರೈಲಲ್ಲೋ, ಬಸ್ಸಲ್ಲೋ ಕೂತು ಮುಖ್ಯವಾದ ನಗರಗಳನ್ನೋ ಅಥವಾ ಪ್ರೇಕ್ಷಣೀಯ ಸ್ಥಳಗಳನ್ನೋ – ನೋಡಿಕೊಂಡು ಬರಲು ಅನುಕೂಲವಾದ ಕೇಂದ್ರ. ಬರ್ಟನ್‌ದಿಂದ ಬರ್ಮಿಂಗ್‌ಹ್ಯಾಂಗೆ ಅರ್ಧಗಂಟೆಯ ಪಯಣ. ಲಂಡನ್ನಿಗೆ ಎರಡೂವರೆ ಗಂಟೆಗಳ ದಾರಿ; ಮ್ಯಾಂಚೆಸ್ಟರ್‌ಗೆ ಕೇವಲ ಒಂದೂವರೆ ಗಂಟೆ ಸಾಕು; ಷೇಕ್ಸ್‌ಪಿಯರ್‌ನ ಸ್ಟ್ರಾಫರ್ಡ್ ಆಪಾನ್ ಏವನ್‌ಗೆ ಒಂದೂವರೆ ಗಂಟೆ; ವಡ್ಸ್‌ವರ್ತ್‌ನ ಲೇಕ್ ಡಿಸ್ಟ್ರಿಕ್ಟ್‌ಗೆ ಮೂರು ಗಂಟೆಗಳು; ಸ್ಕಾಟ್‌ಲೆಂಡಿಗೆ ನಾಲ್ಕು ಗಂಟೆಗಳು – ಹೀಗೆ. ಹಾಗೆ ನೋಡಿದರೆ ಇಂಗ್ಲೆಂಡ್ ಅಂಥಾ ದೊಡ್ಡ ದೇಶವೇನಲ್ಲ. ಈ ದೇಶದ ಯಾವುದೇ ತುದಿಯನ್ನು ಆರೇಳು ಗಂಟೆಗಳಲ್ಲಿ ತಲುಪಬಹುದು. ಅಷ್ಟು ಚಿಕ್ಕ ದೇಶ. ಆದರೆ ದೊಡ್ಡ ಜನ; ದೊಡ್ಡ ಸಾಧನೆ. ಒಂದು ಕಾಲಕ್ಕೆ ಜಗತ್ತಿನ ವಿವಿಧ ಭಾಗಗಳನ್ನೆ ಒಳಕೊಳ್ಳುವಷ್ಟು ವಿಸ್ತಾರವಾದ ಸಾಮ್ರಾಜ್ಯವನ್ನು ಕಟ್ಟಿದವರು ಈ ಜನ. ಇಂಗ್ಲೆಂಡಿಗಿಂತ ಎಷ್ಟೋ ಪಟ್ಟು ದೊಡ್ಡದಾದ ಇಂಡಿಯಾವನ್ನೆ ಸುಮಾರು ಎರಡು ಶತಮಾನಗಳ ಕಾಲ ತನ್ನ ಅಧೀನದಲ್ಲಿ ಇಟ್ಟುಕೊಂಡದ್ದು ಈ ಪುಟ್ಟ ದೇಶ. ಈ ಹೊತ್ತಿಗೂ – ಹಿಂದಿನ ಆ ವ್ಯಾಪಕತೆಯನ್ನು ಕಳೆದುಕೊಂಡರೂ – ರಾಜಕೀಯವಾದ ಒಂದು ಶಕ್ತಿಯಾಗಿ ತನ್ನ ಪ್ರತಿಷ್ಠೆಯನ್ನು ಕಾಯ್ದುಕೊಂಡಿದೆ ಈ ದೇಶ.

ಈ ದೇಶದಲ್ಲಿ ಸಂಜಾರ ಮಾಡುವುದು ಕಷ್ಟದ ವಿಚಾರವೇನಲ್ಲ. ಎಲ್ಲಿಗೆ ಬೇಕಾದರೂ ರೈಲು- ಬಸ್ಸುಗಳ ವೇಳಾಪಟ್ಟಿಯನ್ನು ಮೊದಲೇ ಗಮನಿಸಿ ಪಯಣವನ್ನು ಯೋಜಿಸಿಕೊಂಡರೆ ಸಲೀಸಾಗಿ ಹೋಗಿ ಬರಬಹುದು. ಅಷ್ಟು ಕರಾರುವಾಕ್ಕಾಗಿ ಚಲಿಸುವ ವಾಹನದ ವ್ಯವಸ್ಥೆಗಳಿವೆ. ಪ್ರತಿ ಹತ್ತು ಹದಿನೈದು ನಿಮಿಷಕ್ಕೆ ರೈಲುಗಳಿವೆ;  ಹಾಗೂ ಬಸ್ಸುಗಳಿವೆ. ರೈಲಿನ ವೇಳಾಪಟ್ಟಿಯಲ್ಲಿ ಏಳು ಗಂಟೆ ಹತ್ತೊಂಬತ್ತು ನಿಮಿಷಕ್ಕೆ ಒಂದು ರೈಲಿದ್ದರೆ, ಏಳು ಗಂಟೆ ಇಪ್ಪತ್ತು ನಾಲ್ಕು ನಿಮಿಷಕ್ಕೆ ಮತ್ತೊಂದು ರೈಲು. ಬರ್ಮಿಂಗ್ ಹ್ಯಾಂ ರೈಲ್ವೇ ಪ್ಲಾಟ್‌ಫಾರ್ಮಿನಿಂದ, ಹೀಗೆ ಐದು ನಿಮಿಷ, ಹತ್ತು ನಿಮಿಷ, ಹನ್ನೆರಡು ನಿಮಿಷಗಳಿಗೊಮ್ಮೆ ಹೊರಡುವ ಹಾಗೂ ಬರುವ ರೈಲುಗಳ ವ್ಯವಸ್ಥೆಯನ್ನು ಕಂಡು ಚಕಿತನಾಗಿದ್ದೇನೆ. ಇದೇನಿದು ಏಳು ಗಂಟೆ ಇಪತ್ತನಾಲ್ಕು ನಿಮಿಷ; ಏಳು ಗಂಟೆ ಇಪ್ಪತ್ತೈದು ನಿಮಿಷ ಅಲ್ಲ. ಆರು ಗಂಟೆ ಐವತ್ತೆಂಟು ನಿಮಿಷ – ಈ ಬಗೆಯ ನಮೂದನ್ನು ವೇಳಾಪಟ್ಟಿಗಳಲ್ಲಿ ಕಂಡು ಮತ್ತು ಆ ಕಾಲವನ್ನು ನಿಖರವಾಗಿ ಪಾಲಿಸುವುದನ್ನು ಕಂಡು ಯಾರೂ ಬೆರಗಾಗಬೇಕು. (ಇದಕ್ಕೆ ಅಪವಾದಗಳೂ, ಅನಿರೀಕ್ಷಿತವಾದ ತಡಗಳೂ ಇಲ್ಲವೇ ಇಲ್ಲ ಎಂದೇನೂ ತಿಳಿಯಬೇಕಾಗಿಲ್ಲ). ಅಕಸ್ಮಾತ್ ತಾಂತ್ರಿಕ  ದೋಷಗಳಿಂದ ತಡವಾಯಿತು ಎನ್ನಿ. ಆಗ ಧ್ವನಿವರ್ಧಕದ ಮೂಲಕ ಹಾಗೆ ತಡವಾದುದಕ್ಕೆ, ವಿವರಣೆಯನ್ನಲ್ಲ, ಕ್ಷಮಾಪಣೆಯನ್ನು ಘೋಷಿಸಲಾಗುತ್ತದೆ. ನಾನು ಒಂದು ಸಲ ಬರ್ಟನ್‌ನಿಂದ ಗ್ಲಾಸ್ಗೋಗೆ (ಸ್ಕಾಟ್‌ಲೆಂಡ್) ಹೊರಟಿದ್ದೆ. ಲಂಡನ್‌ನಿಂದ ಗ್ಲಾಸ್ಗೋಗೆ ಹೋಗುವ ರೈಲು ಅದು. ಕಾರಣಾಂತರದಿಂದ ಇಪ್ಪತ್ತೈದು ನಿಮಿಷ ತಡವಾಗಿ ಓಡುತ್ತಿತ್ತು. ಮತ್ತೆ ಅದು ಗ್ಲಾಸ್ಗೋ ತಲುಪಲು ಒಂದು ಗಂಟೆ ಇರುವ ಹೊತ್ತಿಗೆ, ಒಂದೆಡೆ ಏನೋ ತಾಂತ್ರಿಕ ದೋಷದಿಂದ ಇನ್ನಷ್ಟು ತಡವಾಯಿತು. ಆಗ ನಾನು ಕೂತ ಕಂಪಾರ್ಟ್‌ಮೆಂಟಿನಲ್ಲಿ ಅಳವಡಿಸಲಾದ ಧ್ವನಿವರ್ಧಕದಲ್ಲಿ : ‘ಮಹನೀಯರೆ ಮತ್ತು ಮಹಿಳೆಯರೇ, ತಾಂತ್ರಿಕ ಕಾರಣಗಳಿಂದ ಈ ರೈಲು ಗ್ಲಾಸ್ಗೋವನ್ನು ಒಂದು ಗಂಟೆ ತಡವಾಗಿ ತಲುಪುವುದರಿಂದ ನಿಮಗಾಗುವ ಅನಾನುಕೂಲಕ್ಕೆ ನಾವು ವಿಷಾದಿಸುತ್ತೇವೆ. ಮತ್ತೆ ನಿಮ್ಮ ಕ್ಷಮೆಯನ್ನು ಯಾಚಿಸುತ್ತೇವೆ. ಮುಂದೆ ಗ್ಲಾಸ್ಗೋದಿಂದ ಬೇರೆ ಬೇರೆ ಕಡೆಗಳಿಗೆ ರೈಲು ಹಿಡಿಯಬೇಕಾದವರು, ಇದು ಸರಿಯಾದ ಕಾಲಕ್ಕೆ ತಲುಪಿದ್ದರೆ ಹಿಡಿಯಬಹುದಾದ ರೈಲುಗಳ ಬದಲು, ಅನಂತರ, ಬೇರೆ ಬೇರೆ ಕಾಲಗಳಲ್ಲಿ ಹೊರಡುವ ರೈಲುಗಳನ್ನು ಹಿಡಿಯಬಹುದು. ಆ ರೈಲುಗಳ ವೇಳಾಪಟ್ಟಿ ಹೀಗಿದೆ.’ ಎಂಬ ಘೋಷಣೆ ಕೇಳಿಬಂತು. ಈ ಬಗೆಯ ಮಾತುಗಳನ್ನು ನಾವು ನಮ್ಮ ದೇಶದಲ್ಲಿ ಎಂದಾದರೂ ಕೇಳಬಹುದೆ? ಇನ್ನೊಂದು ಸಲ ನಾನು ಇಂಗ್ಲೆಂಡಿನ ದಕ್ಷಿಣದಲ್ಲಿರುವ ರೋಮನ್‌ರ ಕಾಲದ ನಗರ ‘ಬಾತ್’ ಅನ್ನು ನೋಡಲು, ಬ್ರಿಸ್ಟಲ್‌ಗೆ ಹೋಗಿ, ಅಲ್ಲಿಂದ ಹದಿನೈದು – ಇಪ್ಪತ್ತು ಮೈಲಿಗೆ  ಒಂದು ಸಣ್ಣ ಸಂಪರ್ಕ ರೈಲಿನ ಮೂಲಕ ಪಯಣ ಮಾಡಿದೆ. ನಾನು ಆ ಊರನ್ನು ನೊಡಿಕೊಂಡು ಮತ್ತೆ ಸಂಜೆಗೆ – ರಿಟರ್ನ್ ಟಿಕೆಟ್ ಅನ್ನು ಮೊದಲೇ ಕೊಂಡದ್ದರಿಂದ – ಬಾತ್‌ನಿಂದ ಬ್ರಿಸ್ಟಲ್‌ಗೆ ಹೊರಡಲೆಂದು ರೈಲು ನಿಲ್ದಾಣಕ್ಕೆ ಬಂದೆ. ಬಾತ್‌ನಿಂದ ಬ್ರಿಸ್ಟಲ್‌ಗೆ, ಈ ಕಿರಿ ಸಂಪರ್ಕ ರೈಲು (ಎರಡೋ ಮೂರೋ ಕಂಪಾರ್ಟ್‌ಮೆಂಟಿನ ರೈಲು) ಹೊರಡುವುದು ನಾಲ್ಕು ಗಂಟೆ ಇಪ್ಪತ್ತೆಂಟು ನಿಮಿಷಕ್ಕೆ ಎಂಬುದನ್ನು ವೇಳಾಪಟ್ಟಿಯ ಮೂಲಕ ಖಚಿತಪಡಿಸಿಕೊಂಡು, ಪ್ಲಾಟ್‌ಫಾರಂನಲ್ಲಿ ಸಹಪ್ರಯಾಣಿಕರೊಂದಿಗೆ ಕಾದೆ. ನಾಲ್ಕು ಗಂಟೆ ಇಪ್ಪತ್ತು ನಿಮಿಷದ ವೇಳೆಗೆ, ಧ್ವನಿವರ್ಧಕ ಮೊಳಗಿತು; ‘ಮಹನೀಯರೆ ಮತ್ತು ಮಹಿಳೆಯರೇ, ಈಗ ಇಲ್ಲಿಂದ ಬ್ರಿಸ್ಟಲ್‌ಗೆ ಹೋಗುವ ರೈಲು ಕಾರಣಾಂತರದಿಂದ ರದ್ದಾಗಿದೆ. ಈ ಅನಾನುಕೂಲಕ್ಕೆ ಕ್ಷಮಿಸಬೇಕು. ಆದರೆ ಇದೇ ಟಿಕೆಟನ್ನು ಉಪಯೋಗಿಸಿಕೊಂಡು, ನೀವು ಬ್ರಿಸ್ಟಲ್‌ಗೆ ಹೊರಡಲೆಂದು ರೈಲ್ವೆ ಇಲಾಖೆಯೇ ವ್ಯವಸ್ಥೆ ಮಾಡಿರುವ ಸುಖಾಸೀನ ಬಸ್ಸೊಂದನ್ನು, ಈ ಸ್ಟೇಷನ್ನಿನ ಮಹಾದ್ವಾರದಲ್ಲಿ ಹತ್ತಬೇಕೆಂದು ವಿನಂತಿ’. ಸರಿ, ನಾವು ರೈಲ್ವೆ ಇಲಾಖೆಯ ಲಕ್ಸುರಿ ಬಸ್ಸನ್ನೇರಿ, ಕೇವಲ ಅರ್ಧಗಂಟೆಯೊಳಗೆ ಬ್ರಿಸ್ಟಲ್ ತಲುಪಿದೆವು. ಈ ಸೌಜನ್ಯ, ಈ ವ್ಯವಸ್ಥೆ, ಅದರ ಹಿಂದಿರುವ ದಕ್ಷತೆ ನಮಗೆ ಅಪರಿಚಿತವಾದದ್ದು. ಹಾಗೆಯೇ ಈ ರೈಲುಗಳೊಳಗಣ ವ್ಯವಸ್ಥೆ ಕೂಡಾ- ತುಂಬ ಹಿತವಾದದ್ದು. ಬೋಗಿಗಳ ಒಳಗೆ ಎರಡೂ ಬದಿಗೆ ಸುಖಾಸೀನವಾದ ಎರಡೆರಡು ಸೀಟುಗಳ ಸಾಲು. ನಡುವೆ ಉಪಹಾರಕ್ಕೆಂದು ಪುಟ್ಟ ಟೇಬಲ್. ನಿಮ್ಮ ಲಗ್ಗೇಜುಗಳನ್ನು ಕೆಳಗಾಗಲಿ ಮೇಲಾಗಲಿ ಇರಿಸಿಕೊಳ್ಳುವಂಥ ವ್ಯವಸ್ಥೆ. ಒಳಗೆ ಕಮಾನಿನಾಕಾರದ ಶುಭ್ರವಾದ ವಿನ್ಯಾಸ. ನೀವೇ ಹೋಗಿ ಕಾಫಿ ಇತ್ಯಾದಿಗಳನ್ನು ಪಡೆದುಕೊಳ್ಳಬಲ್ಲ  ಏರ್ಪಾಡು ಅಥವಾ ನೀವೇ ಕೂತಲ್ಲಿಗೆ ಟ್ರಾಲಿಯ ಮೂಲಕ ತಿಂಡಿತೀರ್ಥಗಳ ವಿತರಣೆ. ಬ್ರೆಡ್ಡೋ, ಸ್ಯಾಂಡ್‌ವಿಚ್ಚೋ, ಬಿಸ್ಕತ್ತೋ, ಡೋನೆಟ್ಟೋ, ಕಾಪಿಯೋ, ಟೀನೋ, ಹಣ್ಣಿನ ರಸವೋ – ಅಚ್ಚುಕಟ್ಟಾಗಿ ದೊರೆಯುತ್ತದೆ. ಬೋಗಿಗಳ ಕಿಟಕಿಗಳಿಗೆ ನಸುನೀಲಿ ಬಣ್ಣದ ಗಾಜು. ಹವಾನಿಯಂತ್ರಿತ ವ್ಯವಸ್ಥೆ. ಛಳಿಗಾಲವಾದರೆ ಕಂಪಾರ್ಟ್‌ಮೆಂಟುಗಳನ್ನು ಬೆಚ್ಚಗಿರಿಸುವ ಹೀಟರಿನ ಅನುಕೂಲ. ಒಳಗೆ ಕೂತರೆ, ಹೊರಗಿನ ಯಾವ ಅಬ್ಬರವೂ ಒಳಗೆ ಕೇಳದಂಥ ಪ್ರಶಾಂತತೆ, ಮುಂದೆ ಬರುವ ನಿಲ್ದಾಣ ಯಾವುದು ಎಂದು ಮೊದಲೇ ಧ್ವನಿವರ್ಧಕದ ಮೂಲಕ ತಿಳಿಸುವ ಏರ್ಪಾಡು. ಸ್ಟೇಷನ್ ಬಂದೊಡನೆಯೆ, ಹಸಿರು ಬಣ್ಣದ ಗುಂಡಿಯನ್ನೊತ್ತಿದರೆ ತಾನಾಗಿಯೆ ತೆರೆದುಕೊಳ್ಳುವ ಬಾಗಿಲುಗಳು. ಈ ಎಲ್ಲ ಏರ್ಪಾಡಿನಿಂದಾಗಿ ಎಲ್ಲೂ ಪ್ರಯಾಣಿಕರಿಗೆ ಅವರ ಸಮಯವನ್ನು ವ್ಯರ್ಥ ಮಾಡುವ ಅಥವಾ ತಾಳ್ಮೆಯನ್ನು ಒರೆಗಲ್ಲಿಗೆ ಹಚ್ಚುವ ಕಿರಿಕಿರಿಗಳಿಲ್ಲ. ನಮ್ಮಲ್ಲಾದರೋ ರೈಲಿಗೋ ಬಸ್ಸಿಗೋ ಕಾಯುವುದರಲ್ಲಿಯೇ ಅರ್ಧ ಆಯುಷ್ಯ ಸವೆದು ಹೋಗುತ್ತದೆ. ನಮ್ಮ ಸಾರಿಗೆ ವ್ಯವಸ್ಥೆಗಳು ಒಡ್ಡುವ ಅನಾನುಕೂಲಗಳಿಂದ ನಮ್ಮ ಮನಸ್ಸಿನ ನೆಮ್ಮದಿ ನಾಶವಾಗುತ್ತದೆ.

ಯಾವ ರೈಲು, ಯಾವ ಬಸ್ಸು, ಯಾವ ಪ್ಲಾಟ್‌ಫಾರಂದಿಂದ ಎಷ್ಟು ಹೊತ್ತಿಗೆ ಹೊರಡುತ್ತದೆ ಎಂಬುದನ್ನು ಕಣ್ಣಿಗೆ ಕಾಣಿಸುವ, ಕಿವಿಗೆ ಕೇಳಿಸುವ ವ್ಯವಸ್ಥೆಗಳು ತುಂಬ ಸಮರ್ಪಕವಾಗಿದ್ದರೂ, ಹೊಸದಾಗಿ ಬಂದ ನನ್ನಂಥ ‘ಗಡಿಬಿಡಿಯ ಗಗ್ಗಯ್ಯ’ಗಳೂ ಒಮ್ಮೊಮ್ಮೆ ದಾರಿ ತಪ್ಪುವುದು ಅಸಂಭವವೇನಲ್ಲ. ನಾನು ಇಂಗ್ಲೆಂಡಿಗೆ ಬಂದ ಹೊಸತರಲ್ಲಿ ಒಂದು ವಾರಾಂತ್ಯದ ದಿನ ನಾನೊಬ್ಬನೇ ಬರ್ಮಿಂಗ್‌ಹ್ಯಾಂಗೆ ಒಂದರ್ಧ ದಿನ ಹೋಗಿ ಬರುವ ಪಯಣವನ್ನು ಕೈಕೊಂಡೆ. ಬರ್ಟನ್‌ನಿಂದ ಬರ್ಮಿಂಗ್‌ಹ್ಯಾಂಗೆ ರಿಟರ್ನ್ ಟಿಕೆಟ್ ತೆಗೆದುಕೊಂಡು, ಮಧ್ಯಾಹ್ನ ಹನ್ನೆರಡಕ್ಕೆ ಬರ್ಮಿಂಗ್‌ಹ್ಯಾಂ ತಲುಪಿದೆ. ರೈಲ್ವೆ ಸ್ಟೇಷನ್ನಿಗೆ ಲಗತ್ತಾಗಿರುವ ಪ್ಯಾಲಸೇಡ್ ಹಾಗೂ ಬುಲ್‌ರಿಂಗ್ ಎಂಬ ಎರಡು ವಾಣಿಜ್ಯ ಸಂಕೀರ್ಣಗಳ ಚಕ್ರವ್ಯೂಹಗಳ ಮೂರಂತಸ್ತುಗಳ ಅಂಗಡಿ ಸಾಲುಗಳನ್ನು ನೋಡುವಷ್ಟರಲ್ಲಿಯೇ ಸಂಜೆಯಾಗಿ ಬಿಟ್ಟಿತು. ಬೇರೊಂದು ದಿನ ಬಂದು ಇಡೀ ನಗರವನ್ನು ಸುತ್ತಬೇಕು ಅಂದುಕೊಂಡು ಊರಿಗೆ ಹಿಂದಿರುಗಲು ಮಾರ್ಕೆಟ್ಟಿನ ಆವರಣದಿಂದ ಕೆಳಗಿಳಿದು ಬರ್ಮಿಂಗ್ ಹ್ಯಾಂ ರೈಲ್ವೆ ಸ್ಟೇಷನ್ನಿಗೆ ಬಂದೆ. ಜಗಮಗ ಬೆಳಕಿನ ಆ ಮೊಗಸಾಲೆ, ಆ ವಿಸ್ತಾರ, ಬಹುಸಂಖ್ಯೆಯ ಪ್ಲಾಟ್‌ಫಾರಂಗಳ ಕಡೆಗೆ ತೋರಿಸುವ ರೈಲು ಹನ್ನೆರಡನೆ ನಂಬರಿನ ಪ್ಲಾಟ್‌ಫಾರಂದಿಂದ ಹೊರಡುತ್ತದೆಂದು ತಪ್ಪಾಗಿ ಗ್ರಹಿಸಿ, ಅಲ್ಲಿ ಐದು ಗಂಟೆ ಇಪ್ಪತ್ತೊಂಬತ್ತು ನಿಮಿಷಕ್ಕೆ ಹೊರಡುವ ರೈಲನ್ನು ಪ್ರವೇಶಿಸಿದೆ. ನಾನು ಇಳಿಯಬೇಕಾದ ಊರು ನಾಟಿಂಗ್‌ಹ್ಯಾಂಗೆ ಹೋಗುವ ದಿಕ್ಕಿನಲ್ಲಿದೆ ಎಂಬ ನೆನಪಿನಿಂದ ರೈಲನ್ನು ಪ್ರವೇಶಿಸಿದ ನಾನು, ಅಲ್ಲಿ ಕೂತವರನ್ನು, ಈ ರೈಲು ನಾಟಿಂಗ್ ಹ್ಯಾಂಗೆ ಹೋಗುತ್ತದಲ್ಲವೆ – ಎಂದು ಕೇಳಿದೆ. ಅವರು ‘ಯಾ’ (Yes) ಅಂದರು. ಕೂತೆ. ರೈಲು ಕಾಲಕ್ಕೆ ಸರಿಯಾಗಿ ಹೊರಟೇ ಬಿಟ್ಟಿತು. ಬರ್ಮಿಂಗ್‌ಹ್ಯಾಂ ಬಿಟ್ಟ ನಂತರ ಸಿಕ್ಕ ಮೊದಲ ಸ್ಟೇಷನ್ ಯಾಕೋ ನನ್ನಲ್ಲಿ ಕೊಂಚ ಅನುಮಾನ ಹುಟ್ಟಿಸಿತು. ಇರಲಿ ನೋಡೋಣ ಅಂತ ಕಾದೆ. ಮತ್ತೊಂದು ಸ್ಟೇಷನ್ ಬಂತು. ಅದರ ಹೆಸರು ನ್ಯೂಈಟನ್. ಅದೊಂದು ದೊಡ್ಡ ಸ್ಟೇಷನ್. ನಾನು ಬೆಳಿಗ್ಗೆ ಬರುವಾಗ ಈ ಹೆಸರಿನ ಸ್ಟೇಷನ್ ಮೂಲಕ ಬಂದಂತೆ ಜ್ಞಾಪಕವಿಲ್ಲವಲ್ಲ ಅನ್ನಿಸಿತು. ರೈಲು ಇನ್ನೂ ಮುಂದುವರಿದಾಗ ನಾನು ದಾರಿ ತಪ್ಪಿ ಬೇರಾವುದೋ ದಿಕ್ಕಿಗೆ ಹೊರಟಿದ್ದೇನೆ ಅನ್ನುವ ಸಂಗತಿ ಖಚಿತವಾಗತೊಡಗಿತು. ಕೈಗಡಿಯಾರದಲ್ಲಿ ಆಗಲೇ ಆರು ಗಂಟೆ. ಇಷ್ಟು ಹೊತ್ತಿಗೆ ನಾನು, ಸರಿಯಾದ ದಾರಿಯಲ್ಲಾಗಿದ್ದರೆ ಬರ್ಟನ್ ತಲುಪಿ ಇಳಿಯಬೇಕಾಗಿತ್ತು. ಆದರೆ ಅತ್ತಿತ್ತಣ ದೃಶ್ಯಗಳೂ, ಪರಿಚಿತವಲ್ಲದ ನಿಲ್ದಾಣಗಳ ಹೆಸರುಗಳೂ ಖಂಡಿತವಾಗಿಯೂ ನಾನು ದಾರಿ ತಪ್ಪಿದ್ದೇನೆ ಅನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದ್ದವು. ನಾನು ಸ್ವಲ್ಪ ಗಲಿಬಿಲಿಗೊಂಡರೂ ಧೈರ್ಯಮಾಡಿ, ನನ್ನ ಮುಂದಿನ ಎರಡು ಸೀಟಿನಾಚೆ ಕೂತ ಭಾರತೀಯ ದಂಪತಿಗಳ ಬಳಿ ಹೋಗಿ ಅವರಿಗೆ ನನ್ನ ಸ್ಥಿತಿಯನ್ನೂ, ನಾನು ಬರ್ಟನ್‌ಗೆ ಹೋಗಬೇಕಾದರೆ ಏನುಮಾಡಬೇಕೆಂದೂ ಕೇಳಿದೆ. ಅವರು ನಕ್ಕು ‘ಖಂಡಿತವಾಗಿಯೂ ನೀವು ದಾರಿ ತಪ್ಪಿದ್ದೀರಿ. ಈಗ ಲೆಸ್ಟರ್ ಅನ್ನುವ ಒಂದು ಸ್ಟೇಷನ್ ಬರುತ್ತದೆ. ಅಲ್ಲಿ ನೀವು ಇಳಿದು ಡಾರ್ಬಿಗೆ ಹೋಗುವ ರೈಲು ಹಿಡಿಯಿರಿ. ಅನಂತರ ಡಾರ್ಬಿಯಲ್ಲಿ ಬೇರೊಂದು ರೈಲು ಹಿಡಿದು ಬರ್ಟನ್‌ಗೆ ಹೋಗಬಹುದು’ ಎಂದರು. ಅಂತೂ ನವಿಲನ್ನೇರಿ ಪ್ರಪಂಚ ಪರ್ಯಟನಕ್ಕೆ ಹೊರಟ ಷಣ್ಮುಖನಂತೆ ನಾನು ಯಾವ್ಯಾವುದೋ ಊರ ಮೂಲಕ ಗಿರ್ಕಿ ಹೊಡೆಯುತ್ತಿದ್ದೇನೆ ಅನ್ನಿಸಿತು. ಅವರಿಗೆ ಥ್ಯಾಂಕ್ಸ್ ಹೇಳಿ ಲೆಸ್ಟರ್‌ನಲ್ಲಿ ಇಳಿದು, ಡಾರ್ಬಿ ಕಡೆ ಹೊರಡುವ ರೈಲು ಬರುವ ಪ್ಲಾಟ್‌ಫಾರಂ ಅನ್ನು ಪತ್ತೆ ಹಚ್ಚಿ, ಹತ್ತೇ ನಿಮಿಷಗಳಲ್ಲಿ ಬಂದ ರೈಲನ್ನೇರಿ ಕೂತೆ. ಸ್ವಲ್ಪ ಹೊತ್ತಿನಲ್ಲಿ ಟಿಕೆಟ್ ಚೆಕ್ ಮಾಡುವಾತ ಬಂದ. ಓಹೋ ಇನ್ನು ಮುಗಿಯಿತು ಕತೆ, ಬರ್ಟನ್‌ದಿಂದ ರಿಟರ್ನ್ ಟಿಕೆಟ್ ಪಡೆದು ಈಗ ನನ್ನ ಅವಿವೇಕದಿಂದ ಯಾವ್ಯಾವುದೋ ಮಾರ್ಗದಲ್ಲಿ ಸಂಚರಿಸುತ್ತಿದ್ದೇನೆಂಬ ಕಾರಣಕ್ಕೆ ಇನ್ನೇನು ದಂಡ ತೆರಬೇಕಾಗಬಹುದೋ ಎಂಬ ಅಳುಕಿನಿಂದ, ‘I have missed my way, here is the ticket for Burton’ ಎಂದೆ. ಆತ ನೋಡಿ ನಕ್ಕು, ‘O.K. No problem. change at Darby’ ಎಂದು ತಣ್ಣಗೆ ನುಡಿದು ಮುಂದಕ್ಕೆ ಹೊರಟೇ ಹೋದ. ಅಂತೂ ನಾನು ಡಾರ್ಬಿಯಲ್ಲಿಳಿದು, ಬರ್ಟನ್ ತಲುಪಿದಾಗ ಏಳೂವರೆ ಗಂಟೆ. ಮನೆ ತಲುಪಿದಾಗ ನನ್ನ ಮಗ ಹೇಳಿದ: ನಾವು ನಿಮ್ಮನ್ನು ಐದೂವರೆಯಿಂದ ಕಾಯುತ್ತಿದ್ದೇವೆ. ಎಲ್ಲೋ ಏನೋ ಎಡವಟ್ಟಾಗಿರಬೇಕು ಅಂದುಕೊಂಡೆವು.

ಸಾಮಾನ್ಯ ವಾಗಿ ಇಲ್ಲಿ ಎಲ್ಲರಿಗೂ ಕಾರು ಇರುವುದರಿಂದ, ರೈಲುಬಸ್ಸುಗಳನ್ನು -ವಿಶೇಷವಾಗಿ ಅವಲಂಬಿಸುವವರು ಕಡಮೆ. ನಾನೂ ಸಾಕಷ್ಟು ಸ್ಥಳಗಳಿಗೆ ನನ್ನ ಮಗನ ಕಾರಿನಲ್ಲಿ ಹೋಗಿ ಬಂದಿದ್ದೇನೆ. ಬಸ್ಸು-ಕಾರುಗಳ ರಸ್ತೆಗಳಂತೂ ತುಂಬ ಸೊಗಸಾಗಿವೆ. ಈ ದೇಶದಲ್ಲಿ ಯಾವುದೇ ಊರಿಗೆ ಹೋಗಬೇಕೆಂದವರು ಅಗತ್ಯವಾಗಿ ಮೊದಲು ಅಧ್ಯಯನ ಮಾಡಬೇಕಾದದ್ದು ರೋಡ್‌ಮ್ಯಾಪನ್ನು. ನಮ್ಮಲ್ಲಿನ ಯಾವುದಾದರೂ ಊರಿಗೆ ಹೋಗುವುದಾದರೆ ಇಂತಿಂಥ ಊರುಗಳ ಮೂಲಕ ಹೋಗುವ ರಸ್ತೆಯನ್ನು ಹಿಡಿಯಬೇಕು ಎಂಬ ಲೆಕ್ಕಾಚಾರವಿದೆ. ಆದರೆ ಇಲ್ಲಿ ದಾರಿಯಲ್ಲಿ ದೊರೆಯುವ ‘ಊರು’ ಮುಖ್ಯವಾಗುವುದಿಲ್ಲ; ಬದಲು ರಸ್ತೆಗಳ ಸಂಖ್ಯೆ – ಮುಖ್ಯ ರಸ್ತೆಗಳ, ಉಪ ಮುಖ್ಯ ರಸ್ತೆಗಳ ಸಂಖ್ಯೆ-ಮುಖ್ಯವಾಗುತ್ತದೆ. ಹೀಗೆ ಒಂದು ನಿರ್ದಿಷ್ಟವಾದ ಸಂಖ್ಯೆಯ ರಸ್ತೆ, ನಾವು ಹೋಗಬೇಕಾದ ನಗರದ ಅಥವಾ ಸ್ಥಳದ ಮಾರ್ಗದರ್ಶಿಯಾಗುತ್ತದೆ. ಕಾರಲ್ಲಿ ಹೋದಂತೆ ಉದ್ದಕ್ಕೂ ನಿರ್ದೇಶಕ ಫಲಕಗಳಿರುತ್ತವೆ. ನೀವು ಹೋಗುತ್ತಿರುವ ಸಂಖ್ಯೆಯ ರಸ್ತೆ, ಅದು ತಲುಪುವ ಊರು, ಮುಂದೆ ಎಲ್ಲಿ ಎಷ್ಟು ದೂರದಲ್ಲಿ ಕವಲೊಡೆಯುತ್ತದೆ ಅಥವಾ ಅದು ಮತ್ತಾವ ಮುಖ್ಯರಸ್ತೆಯೊಂದಿಗೆ ಸೇರಿಕೊಳ್ಳುತ್ತದೆ ಇತ್ಯಾದಿ ವಿವರಗಳು ಕಣ್ಣಿಗೆ ಬೀಳುತ್ತಲೆ ಇರುತ್ತವೆ. ಈ ಕಡೆಯಿಂದ ಹೋಗುವ ರಸ್ತೆ ಮತ್ತು ಆ ಕಡೆಯಿಂದ ಬರುವ ರಸ್ತೆ ಬೇರೆ ಬೇರೆಯಾಗಿ ಸಮಾನಾಂತರವಾಗಿ ಏಕಮುಖ ಚಲನೆಗಾಗಿ ಹಾಸಿಕೊಂಡಿವೆ. ಒಂದೊಂದು ಬದಿಗೂ  ಬಿಳಿಯ ಪಟ್ಟೆಗಳ ಮೂಲಕ ವಿಭಾಗಿಸಿದ ನಾಲ್ಕು ನಾಲ್ಕು ರಸ್ತೆಗಳು. ಅಷ್ಟು ವಿಸ್ತಾರವಾಗಿವೆ ಈ ಹೆದ್ದಾರಿಗಳು. ಈ ನಾಲ್ಕರಲ್ಲಿ ಬಲದ ತುದಿಯ ರಸ್ತೆ, ವಾಹನಗಳನ್ನು ಹಿಂದೆ (Over take) ಹಾಕುವುದಕ್ಕೆ; ಅದರ ಎಡಪಕ್ಕದ್ದು ವೇಗವಾಗಿ ಧಾವಿಸುವುದಕ್ಕೆ, ಆ ವೇಗ ಗಂಟೆಗೆ ಐವತ್ತು ಅರುವತ್ತು ಮೈಲಿಗಳಿಗೆ ಕಡಿಮೆಯಿಲ್ಲದ್ದು. ಅದರ ಎಡಪಕ್ಕದ್ದು ಕೊಂಚ ಕಡಿಮೆ ವೇಗದ ವಾಹನಗಳಿಗೆ, ಅದರ ಎಡಪಕ್ಕದ ನಾಲ್ಕನೆಯದು ವಾಹನಕ್ಕೆ ಏನಾದರೂ ತೊಂದರೆಯಾದಲ್ಲಿ ನಿಲ್ಲಿಸಿಕೊಳ್ಳುವುದಕ್ಕೆ, ಹಾಗೆ ನಿಲ್ಲಿಸಿ ಏನಾದರೂ ತೊಂದರೆ  ಯಿದ್ದರೆ ಸರಿಪಡಿಸಿಕೊಳ್ಳಬಹುದು. ಅಥವಾ ಅಲ್ಲೇ ಮೈಲಿಗೊಂದೊಂದರಂತೆ ಇರುವ ಟೆಲಿಫೋನ್ ಮೂಲಕ ನಿಮ್ಮ ವಾಹನದ ತಾಂತ್ರಿಕ ದೋಷಗಳನ್ನು ಬಂದು ಸರಿಪಡಿಸಿಕೊಡುವ ಕಂಪನಿಯವರನ್ನು ಸಂಪರ್ಕಿಸಬಹುದು. ಹೀಗಾಗಿ ಎಲ್ಲೂ ಯಾರೂ ನಿಲ್ಲದೆ ಮುಂದೆ ಹೋಗುತ್ತಲೇ ಇರುತ್ತಾರೆ. ನಿಮಗೆ ದಾರಿ ತಿಳಿಯಲಿಲ್ಲವೆಂದು ದಿಗ್‌ಭ್ರಮೆಗೊಂಡು ನಿಂತರೆ, ನಿಮಗೇನಾಗಿದೆ, ಸಹಾಯಬೇಕೆ ಎಂದು ಕೇಳಲು ಯಾರೂ ನಿಲ್ಲುವುದಿಲ್ಲ. ನಿಮ್ಮ ವಾಹನ ಕೆಟ್ಟುನಿಂತರೂ ಅಷ್ಟೇ; ಅಯ್ಯೋಪಾಪ ಎಂದು ನಿಂತು ಯಾರೂ ವಿಚಾರಿಸುವುದಿಲ್ಲ. ಅದಕ್ಕೆಲ್ಲ ದಾರಿ ಉದ್ದಕ್ಕೂ ಮೈಲಿಗೊಂದರಂತೆ ಇರುವ ಟೆಲಿಫೋನುಗಳನ್ನೆ ಮೊರೆ ಹೋಗಬೇಕು. ಉಳಿದವರು ಹೋಗುತ್ತಲೇ ಇರಬೇಕು; ಹೋಗುತ್ತಲೇ ಇರುತ್ತಾರೆ. ನಿಲ್ಲುವಂತಿಲ್ಲ. ಎಲ್ಲಾದರೂ ಹಸಿವಿಗೋ, ಬಾಯಾರಿಕೆಗೋ ನಿಲ್ಲಬೇಕು ಅನ್ನಿಸಿದರೆ, ಮಾರ್ಗದರ್ಶಕ ಫಲಕಗಳಿವೆ. ಇಲ್ಲಿಂದ ಇಂತಿಷ್ಟು ದೂರದಲ್ಲಿ Rest Area ಇದೆ ಎಂದು. ಆ Rest Area ಗಳಲ್ಲಿ ಒಳ್ಳೆ ಹೋಟಲುಗಳಿವೆ; ಬಾತ್ ರೂಂಗಳಿವೆ; ಪೆಟ್ರೋಲ್ ಬಂಕ್ ಇದೆ; ಅಲ್ಲಿ ಸುಧಾರಿಸಿಕೊಂಡು ಮತ್ತೆ ಹೆದ್ದಾರಿ ಸೇರಿದರೆ, ಇಂತಿಷ್ಟೇ ವೇಗದಲ್ಲಿ ಹೋಗಬೇಕೆಂಬ ನಿರ್ದೇಶನ ಫಲಕಗಳ ಸೂಚನೆಗೆ ಅನುಸಾರವಾಗಿ ಚಲಿಸುತ್ತಲೇ ಇರಬೇಕು. ಆ ಸೂಚನೆಗಳಿಗೆ ಕಣ್ಣು ಮುಚ್ಚಿ ಅತಿವೇಗದಲ್ಲೋ ಅಥವಾ ಮಂದಗತಿಯಲ್ಲೋ ಚಲಿಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ದಾರಿ ಉದ್ದಕ್ಕೂ ಸ್ಥಾಪಿಸಲಾಗಿರುವ ಪೊಲೀಸ್ ಕ್ಯಾಮರಾಗಳ ಕಣ್ಣು ಈ ‘ಅಪರಾಧ’ವನ್ನು ಚಕ್ಕನೆ ಗ್ರಹಿಸಿ, ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವರದಿ ಮಾಡುತ್ತದೆ. ಅನಂತರ ಈ ಸಂಖ್ಯೆಯ ರಸ್ತೆಯ, ಇಂಥ ಕಡೆ, ಈ ಸಂಖ್ಯೆಯನ್ನುಳ್ಳ ವಾಹನ, ಇಂಥ ತಪ್ಪನ್ನೆಸಗಿದೆ. ಆದ ಕಾರಣ ವಾಹನ ಚಾಲಕರಿಗೆ ಇಂತಿಷ್ಟು ದಂಡ ವಿಧಿಸಲಾಗಿದೆ ಎಂಬ ನೋಟೀಸ್ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಮನೆ ಬಾಗಿಲಿಗೆ.

ಪ್ರವಾಸಿಗಳಾಗಿ, ರೈಲಲ್ಲೋ, ಬಸ್ಸಲ್ಲೋ, ಕಾರುಗಳಲ್ಲೋ ಸಂಚಾರ ಮಾಡುವವರು, ತಾವು ನೋಡಬೇಕೆಂದು ಹೋದ ಊರುಗಳಲ್ಲಿ – ಅವು ಐತಿಹಾಸಿಕವೋ, ಸಾಂಸ್ಕೃತಿಕವೋ ಆದವುಗಳಾಗಿದ್ದರೆ – ಮೊದಲು ಕಣ್ಣಿಗೆ ಬೀಳುವುದು ಮಾಹಿತಿ ಕೇಂದ್ರ. Way to Information Centre ಎಂಬ ನಿರ್ದೇಶನವನ್ನು ಹಿಡಿದು ಹೋದರೆ ಮಾಹಿತಿ ಕೆಂದ್ರಕ್ಕೆ ಹೋಗುತ್ತೀರಿ. ಸಾಮಾನ್ಯವಾಗಿ ಇವು ರೈಲ್ವೆ ಸ್ಟೇಷನ್ ಹಾಗೂ ಬಸ್ ಸ್ಟಾಂಡ್‌ಗಳಿಗೆ ತೀರಾ ಸಮೀಪದಲ್ಲಿರುತ್ತವೆ. ಆ ಮಾಹಿತಿ ಕೇಂದ್ರದ ಕಛೇರಿಯಲ್ಲಿ, ನಿಮಗೆ ಆ ಸ್ಥಳದ, ಎಲ್ಲಾ ಮಾಹಿತಿಯನ್ನೂ ಮುದ್ರಿಸಿದ ಒಂದೆರಡು ಪುಟಗಳ ಮಡಿಕೆ (folder) ಯಲ್ಲಿ ಒದಗಿಸಲಾಗುತ್ತದೆ. ಆ ‘ಮಾಹಿತಿ ಮಡಿಕೆ’ಯಲ್ಲಿ ಆ ಊರಿನ ನಕ್ಷೆ, ನೀವು ನೋಡಬೇಕಾದ ಸ್ಥಳಗಳನ್ನು ಕುರಿತ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾದ ವಿವರಗಳು, ಈ ಸ್ಥಳಗಳಿಗೆ ಹೋಗುವ ದಾರಿಯ ಸೂಚನೆ, ಜತೆಗೆ ಮಾರ್ಕೆಟ್ಟು, ಹೋಟಲು, ಚರ್ಚು, ಥಿಯೇಟರ್ ಇತ್ಯಾದಿಗಳ ಹೆಸರುಗಳು – ಎಲ್ಲವೂ ನಮೂದಾಗಿರುತ್ತದೆ. ನೀವೇ ಈ ನಕ್ಷೆಯನ್ನು ಬಿಡಿಸಿಕೊಂಡು ನಡೆದು ನೋಡಬಹುದು. ಇಲ್ಲವೆ ಆಯಾ ಮಾಹಿತಿ ಕೇಂದ್ರಗಳಿಂದ ಗಂಟೆಗೋ ಅರ್ಧ ಗಂಟೆಗೋ ಒಂದರಂತೆ ಹೊರಡುವ ಪ್ರವಾಸಿ ಬಸ್ಸುಗಳನ್ನು ಹಿಡಿದು – ಸಂಚಾರ ಮಾಡಬಹುದು. ಇದಕ್ಕಾಗಿಯೇ ಮೀಸಲಾದ ಪ್ರವಾಸಿ ಕಂಪನಿಯ ಬಸ್ಸುಗಳು ಎಲ್ಲ ಪ್ರಮಖವಾದ ಪ್ರೇಕ್ಷಣೀಯ ಸ್ಥಳಗಳಲ್ಲಿಯೂ ಸೇವೆಗೆ ಸಿದ್ಧವಾಗಿರುತ್ತವೆ. ಈ ಬಸ್ಸುಗಳು ನೀವು ಇಡೀ ದಿನ ಸಂಚಾರ ಮಾಡಬಲ್ಲ ಟಿಕೆಟ್‌ಗಳನ್ನು ಕೊಡುತ್ತವೆ. ಬೆಳಿಗ್ಗೆಯಿಂದ ಸಂಜೆಯವರೆಗೆ, ಒಮ್ಮೆ ಕೊಂಡ ಟಿಕ್ಕೆಟ್ಟನ್ನೇ ಬಳಸಬಹುದು. ಈ ಬಸ್ಸಿನ ಸಂಚಾರ ಪಥದಲ್ಲಿ ಯಾವುದೇ ಒಂದು ಪ್ರೇಕ್ಷಣೀಯ ಸ್ಥಳದಲ್ಲಿ ಇಳಿದು ಅದನು ವಿರಾಮವಾಗಿ ವೀಕ್ಷಿಸಿ, ಮತ್ತೆ ಅದೇ ಮಾರ್ಗದಲ್ಲಿ ಒಂದರ ಹಿಂದೊಂದು ಬರುವ ಬಸ್ಸನ್ನೇರಿ, ಮುಂದಿನ ಪ್ರೇಕ್ಷಣೀಯ ಸ್ಥಳವನ್ನು ತಲುಪಬಹುದು. ಈ ಎಲ್ಲ ಬಸ್ಸುಗಳಲ್ಲಿಯೂ ತುಂಬ ಪರಿಣತರಾದ ಮಾರ್ಗದರ್ಶಿಗಳಿರುತ್ತಾರೆ. ಸೊಗಸಾದ ತರಬೇತಿಯನ್ನು ಪಡೆದುಕೊಂಡು ಈ ಮಾರ್ಗದರ್ಶಿಗಳು, ಉದ್ದಕ್ಕೂ ಧ್ವನಿವರ್ಧಕದ ಮೂಲಕ ಒಂದೇ ಸಮನೆ ನಿರರ್ಗಳವಾಗಿ ಮತ್ತು ಅಧಿಕೃತವಾಗಿ ಆಯಾ ಪರಿಸರದ ವಿವರಗಳನ್ನು ಅಂಕಿ ಅಂಶಗಳ ಸಹಿತ ನೀಡುತ್ತಾರೆ. ಬರ್ಮಿಂಗ್ ಹ್ಯಾಂ, ಎಡಿನ್‌ಬರೋ ಮತ್ತು ಆಕ್ಸ್‌ಫರ್ಡ್ ಇತ್ಯಾದಿಗಳಲ್ಲಿ ನಾನು ಸಂಚಾರ ಮಾಡಿದ್ದು ಈ ಬಗೆಯ ಬಸ್ಸುಗಳಲ್ಲಿ, ಅದರಲ್ಲೂ ಈ ಬಸ್ಸುಗಳ ಮೇಲ್ ಮಹಡಿಯ ಛಾವಣಿರಹಿತ ನೆಲೆಯಲ್ಲಿ ಅಳವಡಿಸಿದ ಸೀಟುಗಳಲ್ಲಿ ಕೂತು ಸಂಚಾರ ಮಾಡುವುದಂತೂ ತುಂಬ ಚೇತೋಹಾರಿಯಾದ ಅನುಭವ. ಈ ನಿರಾವರಣದ ನೆಲೆಯಲ್ಲಿ ಕೂತು, ದಾರಿ ಉದ್ದಕ್ಕೂ ಕಾಣುವ ನಿಸರ್ಗದ ಸೊಗಸುಗಳನ್ನೋ, ಕೋಟೆ ಕೊತ್ತಲಗಳನ್ನೋ, ನಗರದ ನಡುವೆಯಾದರೆ ಅಲ್ಲಲ್ಲಿನ ಕಟ್ಟಡಗಳ ವಾಸ್ತುಶಿಲ್ಪವನ್ನೋ, ಮುಖ್ಯವಾದ ದೇವಾಲಯ, ಚರ್ಚು, ಶೈಕ್ಷಣಿಕ ಸಂಸ್ಥೆ ಇತ್ಯಾದಿಗಳನ್ನೋ, ಮಾರ್ಗದರ್ಶಿಯ ವಿವರಗಳ ಸಹಿತ ವೀಕ್ಷಿಸಬಹುದು. ಸಾಹಿತ್ಯದ ಬಗ್ಗೆ, ಚರಿತ್ರೆಯ ಬಗ್ಗೆ, ಸಂಸ್ಕೃತಿಯ ಬಗ್ಗೆ, ಈ ಮಾರ್ಗದರ್ಶಿಗಳು, ನಿರರ್ಗಳವಾಗಿ ನಡು ನಡುವೆ ವಿನೋದಮಯವಾಗಿ ಆಡುವ ಮಾತುಗಳನ್ನಾಲಿಸುತ್ತ ಹೋದಂತೆ ಅದೊಂದು ಬಗೆಯ ಶಿಕ್ಷಣವೂ ಆಗುತ್ತದೆ ನಮ್ಮ ಪಾಲಿಗೆ.

ಕೇವಲ ಒಂದು ದಿನದ  ಪಯಣದ ಹಾದಿಯಲ್ಲಿ ಈ ಬಗೆಯ ವ್ಯವಸ್ಥೆಗಳ ಮೂಲಕ ನಾವು ಕಂಡದ್ದು ಸಾಲದು ಅನ್ನಿಸಿದರೆ, ಒಂದೊಂದು ಕಡೆ ಒಂದೆರಡು ದಿನಗಳ ಕಾಲವಾದರೂ ಇದ್ದು ವಿವರವಾಗಿ ನೋಡಬೇಕು ಅನ್ನಿಸಿದರೆ ಅದಕ್ಕೂ ಸಾಕಷ್ಟು ಅನುಕೂಲಗಳಿವೆ – ನಮ್ಮ ನಮ್ಮ ಜೇಬಿನ ಹಣಕಾಸಿನ ಅಳತೆಗೆ ತಕ್ಕಂತೆ. ತುಂಬ ದುಬಾರಿಯ ಹೋಟಲುಗಳಿಂದ ಹಿಡಿದು ಅಗ್ಗದ ಬಿ.ಬಿ.ಗಳ ವರೆಗೆ ಯಾವುದನ್ನು ಬೇಕಾದರೂ ಆಯ್ದುಕೊಳ್ಳಬಹುದು. ಅದರಲ್ಲೂ ಬಹುಮಂದಿ ಇಷ್ಟಪಡುವುದು ಈ ಬಿ.ಬಿಗಳನ್ನು, ಅಂದರೆ ಬೆಡ್ ಅಂಡ್ ಬ್ರೆಕ್ ಫಾಸ್ಟ್ ವಸತಿಗೃಹಗಳನ್ನು. ಇಂಗ್ಲೆಂಡಿನಾದ್ಯಂತ ಪ್ರೇಕ್ಷಣೀಯ ಸ್ಥಳಗಳಿರುವೆಡೆಯಲ್ಲೆಲ್ಲ ಈ ಬಿ.ಬಿ.ಗಳೆಂದು ಹೆಸರಾದ ವಸತಿಗೃಹಗಳಿವೆ. ಸಾಮಾನ್ಯವಾಗಿ ಇವುಗಳನ್ನು ನಡೆಸುವವರೆಲ್ಲ ಗೃಹಸ್ಥರೇ. ತಾವು ತಮ್ಮ ಮನೆಯ ಕೆಳ ಅಂತಸ್ತಿನಲ್ಲೋ, ಪಕ್ಕದಲ್ಲೋ ವಾಸಿಸುತ್ತ ತಮ್ಮ ಮನೆಯ ಮೇಲಂತಸ್ತುಗಳನ್ನೋ ಅಥವಾ ಮನೆಯ ಪಕ್ಕದ ಒಂದಷ್ಟು ಭಾಗವನ್ನೋ ಪ್ರವಾಸಿಗಳ ಅನುಕೂಲಕ್ಕೆ ತಕ್ಕ ವಸತಿಗಳನ್ನಾಗಿ ಪರಿವರ್ತಿಸಿ, ಪ್ರವಾಸಿಗಳನ್ನು ತುಂಬ ವಿಶ್ವಾಸದಿಂದ ನೋಡಿಕೊಳ್ಳುವ ಒಂದು ವ್ಯವಸ್ಥೆ ಇದು. ಈ ವ್ಯವಸ್ಥೆ ಅಲ್ಲಲ್ಲಿನ ಸರ್ಕಾರದ ಪ್ರವಾಸೋದ್ಯಮ ಮಂಡಲಿಯ ಅಥವಾ ಇಲಾಖೆಯ ಅನುಮತಿ ಹಾಗೂ ಅನುಮೋದನೆಯನ್ನು ಪಡೆದುಕೊಂಡಿರುತ್ತದೆ. ಒಬ್ಬ ವ್ಯಕ್ತಿಗೆ ಒಂದು ದಿನದ ಅಥವಾ ರಾತ್ರಿಯ ತಂಗಣೆಗೆ ಎಷ್ಟು ಬೆಲೆ ಎಂದು ನಿಗದಿಪಡಿಸಿರಲಾಗಿರುತ್ತದೆ. ನಾನು ಕಂಡ ಹಾಗೆ ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ ಎಂಟು ಪೌಂಡ್‌ಗಳಿಂದ ಹಿಡಿದು, ಹದಿನೈದು ಇಪ್ಪತ್ತು ಪೌಂಡುಗಳವರೆಗೆ ವಿವಿಧ ದರಗಳ ವಸತಿ ಸೌಕರ್ಯಗಳಿವೆ. ಎಷ್ಟಾದರೂ ಈ ದರಗಳು ಬೇರೆಯ ಹೋಟಲುಗಳ ದರಕ್ಕಿಂತ ಕಡಿಮೆಯೇ. ಇಲ್ಲಿ ಇರುಳು ಮಲಗಲು ಹಾಸಿಗೆ ಮತ್ತು ಬೆಳಿಗ್ಗೆ ಬ್ರೆಕ್‌ಫಾಸ್ಟ್ ದೊರೆಯುವುದರಿಂದ ಸಾಮಾನ್ಯವಾಗಿ ಪ್ರವಾಸಿಗಳು ಈ ಬಗೆಯ ಬಿ.ಬಿ.ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬೆಳಿಗ್ಗೆ ಈ ಮನೆಗಳವರು ಕೊಡುವ ಬ್ರೆಕ್‌ಫಾಸ್ಟ್‌ನ್ನು ಮುಗಿಸಿಕೊಂಡು, ಇಡೀ ದಿನ ಸಂಚಾರದಲ್ಲಿ ತೊಡಗಿ ಮತ್ತೆ ಸಂಜೆ ಬಂದು ಸುಸಜ್ಜಿತವಾದ ಕೊಠಡಿಯ ಹಾಸಿಗೆಯಲ್ಲಿ ಹಾಯಾಗಿ ವಿಶ್ರಾಂತಿ ಪಡೆಯಬಹುದು. ನಡುಹಗಲಿನ ಲಂಚ್ ಮತ್ತು ರಾತ್ರಿಯ ಭೋಜನ – ಅವರವರ ಜವಾಬ್ದಾರಿ. ಹಾಗೆ ನೋಡಿದರೆ ಈ ಪಶ್ಚಿಮ ದೇಶಗಳಲ್ಲಿ ಲಂಚ್ ಅಥವಾ ಮಧ್ಯಾಹ್ನದ ಊಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅದೆಲ್ಲಾ ಮೂರು ಹೊತ್ತೂ ತಿಂದು ತೇಗುವ ಚಪಲವುಳ್ಳ ನಮ್ಮ ದೇಶದಲ್ಲಿ ಮಾತ್ರ. ಆದರೆ ಈ ದೇಶಗಳಲ್ಲಿ ಲಂಚ್ ಅನ್ನುವುದು ತುಂಬ ಸರಳವಾಗಿ, ನಿಮಿತ್ತ ಮಾತ್ರವಾಗಿ ನಡೆಯುವ ಒಂದು ಕ್ರಿಯೆ. ನಮ್ಮ ದೈನಂದಿನ ಕೆಲಸ ಕಾರ್ಯಗಳ ನಡುವೆ, ತಾತ್ಕಾಲಿಕವಾಗಿ ಕೆಲವು ನಿಮಿಷಗಳ ವಿರಾಮವನ್ನು ಕಲ್ಪಿಸಿಕೊಂಡು, ಸ್ಯಾಂಡ್‌ವಿಚ್ಚನ್ನೋ ಮತ್ತೇನನ್ನೋ ತಾವು ಎಲ್ಲಿದ್ದರೆ ಅಲ್ಲಿ ತಿಂದು ತಮ್ಮ ದೈನಿಕವನ್ನು ಮುಂದುವರಿಸುವ ಈ ಜನಕ್ಕೆ ಬೆಳಗಿನ ಬ್ರೆಕ್‌ಫಾಸ್ಟೇ ಮುಖ್ಯವಾದದ್ದು. ಪ್ರವಾಸಿಯಾದವನಿಗೆ ‘ಬೆಡ್ ಅಂಡ್ ಬ್ರೆಕ್ ಫಾಸ್ಟ್ ಹೋಂ’ಗಳು ಒದಗಿಸುವ ಬೆಳಗಿನ ಉಪಹಾರ ಸಾಕಷ್ಟು ಪ್ರಮಾಣದ್ದೂ, ಪುಷ್ಟಿದಾಯಕವೂ ಆಗಿರುತ್ತದೆಂಬುದು ನನ್ನ ಅನುಭವ ಕೂಡಾ. ಈ ಬಿ.ಬಿ.ಗಳು ಇಂಗ್ಲೆಂಡಿನ ಪ್ರೇಕ್ಷಣೀಯವಾದ ಸ್ಥಳಗಳಲ್ಲೆಲ್ಲಾ ಇವೆ. ಲಂಡನ್ನಿನಂತಹ ಮಹಾನಗರಗಳಲ್ಲೂ ಇವೆ ಎಂದು ಕೇಳಿದ್ದೇನೆ. ಅಷ್ಟೇ ಅಲ್ಲ, ಕಾಡು – ಕಣಿವೆಗಳ ದುರ್ಗಮ ಪಥಗಳ ನಡುವೆಯೂ ಈ ಬಗೆಯ ಬಿ.ಬಿ.ಗಳು ಪ್ರವಾಸಿಗಳನ್ನು ಆಹ್ವಾನಿಸುತ್ತವೆ.

ಇನ್ನು ಊಟ ತಿಂಡಿಗಳ ಬಗ್ಗೆ ಯಾರೂ ಚಿಂತಿಸಬೇಕಾದ್ದೇ ಇಲ್ಲ. ನನ್ನಂಥ ನೂರಕ್ಕೆ ನೂರಾಹತ್ತರಷ್ಟು ಸಸ್ಯಾಹಾರಿಯಾದವನಿಗೇ ಈ ವಿಚಾರದಲ್ಲಿ ಹೇಳಿಕೊಳ್ಳುವಂಥ ಅನಾನುಕೂಲಗಳಾಗಲಿಲ್ಲ ಎಂದ ಮೇಲೆ ನಾನ್ ವೆಜಿಟೇರಿಯನ್ನರಿಗಂತೂ ಇದು ‘ರಸದ ಮಡು, ಸೊಗಸಿನ ಸುಗ್ಗಿ’ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನನಗೊದಗಿದ ಆನಾನುಕೂಲವೆಂದರೆ, ಯಾವುದರಲ್ಲಿ ಯಾವ ಮಾಂಸ ಬೆರೆತಿದೆಯೋ ಅನ್ನುವ ಅನುಮಾನದ ತುಯ್ದಾಟ. ಹೀಗಾಗಿ ತಿನ್ನಲು ಏನನ್ನಾದರು ತೆಗೆದುಕೊಳ್ಳಬೇಕಾದರೆ ನಾನು ಕೇಳುತ್ತಿದ್ದ ಮೊದಲ ಪ್ರಶ್ನೆ ಎಂದರೆ, ಈ ಪದಾರ್ಥದಲ್ಲಿ ಮೊಟ್ಟೆ ಬೆರೆತಿದೆಯೆ, ಮೀನು ಬೆರೆತಿದೆಯೆ, ಮಾಂಸ ಬೆರೆತಿದೆಯ – ಎನ್ನುವುದು. ಈ ಪ್ರಶ್ನೆಗಳಿಗೆ ‘ಇಲ್ಲ’ ಎಂಬ ಉತ್ತರ ದೊರೆತರೆ ಅವತ್ತು ನನ್ನ ಊಟ. ಎಲ್ಲಿ ಹೋದರೂ ಬ್ರೆಡ್ಡಿದೆ, ಸೀರಿಯಲ್ ಎಂದು ಕರೆಯಲಾಗುವ ಕಾರನ್ ಪ್ಲೇಕ್ಸ್ ಇದೆ, ತರಕಾರಿ ಸ್ಯಾಂಡ್‌ವಿಚ್ ಇದೆ, ಡೋನಟ್ ಇದೆ, ಪೀಜಾ ಎಂಬ ಇಟಾಲಿಯನ್ ಸಸ್ಯಾಹಾರಿ ಖಾದ್ಯವಿದೆ, ಆಲೂಗಡ್ಡೆಯ ಫ್ರೆಂಚ್ ಫ್ರೈ ಇದೆ, ಕಿಸ್ಪಗಳಿವೆ. ಹಾಲಿದೆ, ಹಣ್ಣಿದೆ, ಬಗೆಬಗೆಯ ಹಣ್ಣುಗಳ ರಸವಿದೆ. ಇವುಗಳಿಗಿಂತ ಇನ್ನೇನು ಬೇಕು? ಆದರೆ ಎಷ್ಟೋ ಸಲ ನನಗೆ ಅನ್ನಿಸಿದೆ. ನಾನ್‌ವೆಜಿಟೇರಿಯನ್‌ರೇ ಪುಣ್ಯವಂತರು, ಅವರು ಬೇಕಾದಲ್ಲಿ ಬೇಕಾದ್ದನ್ನು ನಿರಾತಂಕವಾಗಿ ತಿನ್ನಬಲ್ಲರು, ಎಂದು.

ಈ ದೇಶದ ಸಂಚಾರ ಸಮಯದಲ್ಲಿ ನನಗೆ ತುಂಬ ಇಷ್ಟವಾದದ್ದು ಪ್ರಾಕೃತಿಕವಾದ ಸಸ್ಯಸಂಪತ್ತಿನ ಚೆಲುವು. ಎಲ್ಲಿ ನೋಡಿದರೂ ಕಣ್ಣಿಗೆ ಹಬ್ಬವಾಗುವಂತೆ, ನೆಲವನ್ನು, ಗುಡ್ಡವನ್ನು ಬೆಟ್ಟವನ್ನು ತಬ್ಬಿಕೊಂಡ ಹಾಗೂ ಹಬ್ಬಿಕೊಂಡ ಹಸಿರು. ಇಂಗ್ಲೆಂಡಿನ ಮಿಡ್‌ಲ್ಯಾಂಡಿನ ಏರಿಳಿವ ದಿಬ್ಬಗಳ ಹಸಿರಂತೂ, ವಿವಿಧ ಕಾಲಮಾನಗಳಲ್ಲಿ ತಾಳುವ ವರ್ಣವಿನ್ಯಾಸಗಳು ಚೇತೋಹಾರಿಯಾಗಿವೆ. ಬೇಸಿಗೆಗೆ ಮುನ್ನ ಪಚ್ಚೆಯ ಜಮಖಾನವನ್ನು ಹೊದಿಸಿದಂಥ ಬಯಲುಗಳು ಮತ್ತು ಇಳಿಜಾರುಗಳು, ಬೇಸಗೆ ಮುಂದುವರಿದಂತೆ ಕೊಂಚ ಹಳದಿಗೆ ತಿರುಗಿ, ಸಂಜೆ – ಮುಂಜಾನೆಯ ಬೆಳಕಿನಲ್ಲಿ ಪೀತಾಂಬರವನ್ನು ಹೊದಿಸಿದಂತೆ ಹೊನ್ನ ಕಾಂತಿಯಲ್ಲಿ ಶೋಭಿಸುತ್ತವೆ. ಹೆದ್ದಾರಿಗಳಲ್ಲಿ ಅಥವಾ ರೈಲುಗಳಲ್ಲಿ ಪ್ರಯಾಣ ಮಾಡಹತ್ತಿದ್ದರೆ ಎರಡೂ ಬದಿಗೆ ಏರಿಳಿತಗಳಲ್ಲಿ ಕಣ್ಣಿಗೆ ತಣ್ಣಗೆ ಹಬ್ಬಿಕೊಂಡ ಹಸಿರೂ, ಅಲ್ಲಲ್ಲಿ ಥಟ್ಟನೆ ತೋರುವ ಕೆರೆಗಳೂ, ಕೆರೆಗಳಲ್ಲಿ ಎದೆಯುಬ್ಬಿಸಿಕೊಂಡು ತೇಲುವ ಕಂದು ಹಾಗೂ ಶುಭ್ರ ಶ್ವೇತವರ್ಣದ ಬಾತು ಕೋಳಿಗಳೂ, ಅಲ್ಲಲ್ಲಿ ಬಯಲ ನಡುವೆ ಹಸಿರು ಹೆಪ್ಪುಗಟ್ಟಿದಂತಿರುವ ‘ಗ್ರೀನ್ ಪ್ಯಾಕೆಟ್’ಗಳೂ – ಗೋಚರಿಸುತ್ತವೆ. ಹಾಗೆಯೇ ನೆಲದ ಏರುವೆಯ ಹಸಿರ ನಡುವೆ, ಬಿಳಿ ಉಂಡೆಗಳಂತೆ ಚಲಿಸಿಯೂ ಚಲಿಸದಿರುವ ಕುರಿ ಹಿಂಡುಗಳ ನೋಟವಂತೂ – ಗ್ರಾಮಾಂತರ ಪರಿಸರಗಳಲ್ಲಿ ಸದಾ ಕಣ್ಣಿಗೆ ಕಾಣುವ ದೃಶ್ಯವಾಗಿದೆ. ಹಾಗೆಯೇ ಹಳ್ಳಿ ಬಯಲುಗಳಲ್ಲಿ ಮೇಯುವ ಕೊಡಗೆಚ್ಚಲಿನ ಹಸುಗಳ ಹಿಂಡನ್ನೂ ಕಾಣಬಹುದು. ಆದರೆ ರೈಲ್ ದಾರಿಯ ಹಾಗೂ ಹೆದ್ದಾರಿಗಳ ಕಡೆಗೆ, ಆಪ್ಪಿತಪ್ಪಿ, ಯಾವುದೇ ದನವಾಗಲೀ ಕುರಿಯಾಗಲೀ ನುಸುಳಿ ಬಾರದ ಹಾಗೆ, ದೇಶಾದ್ಯಂತ ಈ ದಾರಿಯಿಕ್ಕೆಲಗಳಲ್ಲಿ ಬಲವಾದ ತಂತಿ ಬೇಲಿಗಳನ್ನು ನಿರ್ಮಿಸಲಾಗಿದೆ. ಇದರಿಂದ ವಾಹನಗಳ ವೇಗದ ಹಾಗೂ ನಿರಾತಂಕ ಚಲನೆಗೆ ಯಾವ ಅಡ್ಡಿಯೂ ಒದಗುವುದಿಲ್ಲ. ಇನ್ನು ಹೈಲ್ಯಾಂಡ್ ಎಂದು ಕರೆಯಲಾಗುವ ಲೇಕ್ ಡಿಸ್ಟ್ರಿಕ್ಟ್‌ನ ಪರಿಸರಗಳಲ್ಲಿ, ವೇಲ್ಸ್ ಮತ್ತು ಸ್ಕಾಟ್‌ಲೆಂಡಿನ ಹಲವು ಪರ್ವತಾರಣ್ಯಗಳಲ್ಲಿ ಹಸಿರು ಇನ್ನೂ ದಟ್ಟವಾಗಿ ವಿಜೃಂಭಿಸುತ್ತದೆ. ನನ್ನ ಸಂಚಾರದ ಹಾದಿಯಲ್ಲಿ ಎಲ್ಲಿಯೂ ಒಂದು ಚೂರೂ ಬರಡು ಭೂಮಿ (Waste land) ನನ್ನ ಕಣ್ಣಿಗೆ ಬೀಳಲಿಲ್ಲ. ಹವಾಮಾನದ ಕಾರಣದಿಂದಲೋ, ಸದಾ ಶೈತ್ಯವನ್ನು ತನ್ನೊಳಗೆ ಹಿಡಿದಿರಿಸಿಕೊಳ್ಳುವ ನೆಲದ ಗುಣದಿಂದಲೋ ಇಂಗ್ಲೆಂಡ್  ತನ್ನ ಹಚ್ಚ ಹಸಿರ ಸಿರಿವಂತಿಕೆಯಿಂದ ತುಂಬ ಚೆಲುವಿನ ನಾಡಾಗಿದೆ.

ಬರ್ಟನ್ ಎಂಬ ಈ ಪುಟ್ಟ ಊರು ಈ ಚೆಲುವಿಕೆಯ ಒಂದು ತುಣುಕಿನಂತಿದೆ. ಟ್ರೆಂಟ್ ಎಂಬ ಸಣ್ಣ ನದಿಯೊಂದರ ಬದಿಗೆ ಹರಡಿಕೊಂಡ ಈ ಊರು ತನ್ನೊಳಗೆ ಸಾಕಷ್ಟು ಹಸುರಿನ ಉದ್ಯಾನಗಳನ್ನು ಉಳಿಸಿಕೊಂಡಿದೆ. ಹಿಂದೆ – ಮುಂದೆ, ಸುತ್ತ ಮುತ್ತ ಕಣ್ಣಿಗೆ ತಂಪಾದ ಹಸಿರು. ಊರ ಬೀದಿಯ ಮನೆಮನೆಗಳ ಮುಂದೆ ಇಪ್ಪತ್ತು ಅಡಿ ಉದ್ದ, ಹತ್ತಡಿ ಅಗಲದ ಪ್ರಾಕಾರದೊಳಗೆ ಬಹು ಬಗೆಯ ಬಣ್ಣದ ಹೂವುಗಳು. ಅವುಗಳಲ್ಲಿ ಗುಲಾಬಿ ಹೂವಿನ ವೈಭವವೇ ವೈಭವ. ಈ ಊರ ಮಾರ್ಕೆಟ್ಟುಗಳಲ್ಲೂ ಇದೇ ಹೂವಿನ ಸುಗ್ಗಿ. ಪುಷ್ಪಪ್ರಿಯರಾದ ಈ ಜನಕ್ಕೆ ಹೂವುಗಳನ್ನು ಬೆಳೆಯಿಸುವುದರಲ್ಲಿ ತುಂಬ ಆಸಕ್ತಿ ಎಂದು ಕಾಣುತ್ತದೆ. ಒಮ್ಮೊಮ್ಮೆ ಹವಾಮಾನ ಚೆನ್ನಾಗಿದ್ದಾಗ ಆಸ್ಪತ್ರೆಯ ಬದಿಗಿದ್ದ ಹಸಿರುಗುಡ್ಡದ ಪಕ್ಕದ ದಾರಿಯಲ್ಲಿ ತಿರುಗಾಟಕ್ಕೆ ನಾನು ಹೋಗುವಾಗ, ಆಸ್ಪತ್ರೆಗೆ ನಮ್ಮ ನೆಂಟರು – ಇಷ್ಟರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗಲು ಬರುವವರ ಕೈಯ್ಯಲ್ಲಿ ಬಣ್ಣದ ಹೂವುಗಳ ಗೊಂಚಲು. ನಮ್ಮ ದೇಶದವರ ಹಾಗೆ ತಲೆಗೆ ಹೂ ಮುಡಿಯುವ ಪದ್ಧತಿ ಇಲ್ಲಿ ಅತಿ ಅಪೂರ್ವವಾದರೂ, ಎಲ್ಲ ಬಗೆಯ ಸಮಾರಂಭ ಹಾಗೂ ಸಂತೋಷಕೂಟಗಳಿಗೆ ಬರುವವರ ಕೈಯಲ್ಲಿ ಬಗೆ ಬಗೆ ಬಣ್ಣದ ಹೂವಿನ ‘ಬೊಕೆ’ಗಳಂತೂ, ಇಲ್ಲಿನ ಶಿಷ್ಟಾಚಾರದ ಒಂದು ಭಾಗವಾಗಿದೆ ಎನ್ನಬಹುದು.

ಶಿಷ್ಟಾಚಾರ ಅಂದೆನಲ್ಲ, ಈ ದೇಶದ ಜನ ಶಿಷ್ಟಾಚಾರಗಳಿಗೆ ಮೊದಲ ಸ್ಥಾನ ಕೊಡುವಂಥವರು. ಯಾರು ಯಾರೊಂದಿಗೆ, ಬೇರಾರೋ ಪರಿಚಯ ಮಾಡಿಕೊಡದ ಹೊರತು ಮೇಲೆ ಬಿದ್ದು ಮಾತನಾಡಿಸುವಂತಿಲ್ಲ. ಅಮೆರಿಕಾದ ಜನಕ್ಕೂ ಇಂಗ್ಲೆಂಡಿನ  ಜನಕ್ಕೂ ಇರುವ ವ್ಯತ್ಯಾಸವೇ ಇದು. ಅಮೆರಿಕಾದಲ್ಲಿ ನನ್ನ ಅನುಭವಕ್ಕೆ ಬಂದಂತೆ  ನೀವು ಹೋಗುತ್ತಿದ್ದರೆ ಅವರಾಗಿಯೇ – ನಿಮಗೆ ಪರಿಚಯವಿರಲಿ ಇಲ್ಲದಿರಲಿ – ಹಾಯ್ ಎಂದು ‘ಗ್ರೀಟ್’ ಮಾಡುತ್ತ ಮುಗುಳ್ನಗೆಯೊಂದಿಗೆ ಮುಂದೆ ಹೋಗುತ್ತಾರೆ. ಆದರೆ ಇಲ್ಲಿ ಯಾರು ಯಾರೊಂದಿಗೂ ಮಾತನಾಡದೆ (ಅವರ ಪೂರ್ವ ಪರಿಚಿತರಿಗೆ ಹೊರತು) ತಮ್ಮ ಪಾಡಿಗೆ ತಾವು ನಿರ್ಭಾವವಾಗಿ ಮುಂದೆ ಹೋಗುತ್ತಾರೆ. ರೈಲುಗಳಲ್ಲೋ ಬಸ್ಸುಗಳಲ್ಲೋ ಪ್ರಯಾಣ ಮಾಡುವಾಗ ತಮ್ಮ ಪಾಡಿಗೆ ತಾವು ತಮ್ಮ ಸೀಟುಗಳಲ್ಲಿ ‘ತಟಸ್ಥ’ರಂತೆ ಕೂತಿರುತ್ತಾರೆ. ಅಥವಾ ಪತ್ರಿಕೆಗಳನ್ನೋ, ಪುಸ್ತಕಗಳನ್ನೋ ಓದುತ್ತ ಅತ್ತಿತ್ತ ನೋಡದೆ, ಅದರಲ್ಲೇ ಮಗ್ನರಾಗುತ್ತಾರೆ. ಹಾಗೆಂದರೆ ಮಾತನಾಡಿಸಿದರೆ ಮಾತೇ ಆಡುವುದಿಲ್ಲವೆಂದೇನಲ್ಲ. ನಾನು ಎಷ್ಟೋ ವೇಳೆ ದಾರಿ   ತಿಳಿಯದಾಗ ಅಥವಾ ಎಲ್ಲಿ ಇಳಿಯಬೇಕೆಂಬುದು ತಿಳಿಯದಾಗ ‘ಎಕ್ಸ್‌ಕ್ಯೂಸ್ ಮಿ’ ಎಂಬ ಪೀಠಿಕೆಯೊಂದಿಗೆ ಮಾತನಾಡಿಸಿದಾಗ ಜನ ತೀರಾ ಸೌಜನ್ಯದಿಂದಲೇ ಉತ್ತರ ಕೊಟ್ಟಿದ್ದಾರೆ. ಆದರೆ ಪ್ರತಿಯೊಂದು ಮಾತಿನ ತುದಿಗೂ ‘ಥ್ಯಾಂಕ್‌ಯೂ, ಬೈ’ ಗಳು ಇದ್ದೇ ಇರಬೇಕು. ಯಾವುದಾದರೂ ಅಂಗಡಿಗೆ ಹೋಗಿ ನೀವು ಏನನ್ನಾದರೂ ಕೊಂಡುಕೊಂಡರೆ, ಅಂಗಡಿಯಾತ (ಅಥವಾ ಆಕೆ) ಕೊಡುವ ಬಿಲ್ಲಿಗೆ ನೀವು ಹಣತೆತ್ತ ಕೂಡಲೆ ‘ಥ್ಯಾಂಕ್ ಯೂ, ಬೈ’ ಎಂಬ ಧನ್ಯವಾದದ ಮಾತು ಕೇಳಿಬರುತ್ತದೆ. ಪೋಸ್ಟಾಫೀಸಿನಲ್ಲಿ, ಬಸ್ಸಿನಲ್ಲಿ, ರೈಲಿನಲ್ಲಿ, ಬ್ಯಾಂಕಿನಲ್ಲಿ, ಕೊನೆಗೆ ಏನನ್ನಾದರೂ ವಿಚಾರಿಸಲು ದೂರವಾಣಿಯ ಮೂಲಕ ಮಾತನಾಡಿಸುವಲ್ಲಿ, ನಮ್ಮ ವ್ಯವಹಾರದ ಮುಕ್ತಾಯದಲ್ಲಿ ‘ಥ್ಯಾಂಕ್‌ಯೂ, ಬೈ’ ಇದ್ದೇ ಇರುತ್ತವೆ. ಅಷ್ಟರಮಟ್ಟಿಗೆ ಈ ಸೌಜನ್ಯದ ಮಾತುಗಳು ಇಲ್ಲಿನ ಶಿಷ್ಟಾಚಾರದ ಅನಿವಾರ್ಯ ಅಂಗಗಳಾಗಿವೆ. ಇಂಥ ಸೌಜನ್ಯಾಭಿವ್ಯಕ್ತಿಯ ಸಂದರ್ಭಗಳಲ್ಲಿ ಒಂದು ಬಗೆಯ ಆತ್ಮೀಯತೆಯನ್ನೂ ನಾವು ಗುರುತಿಸಬಹುದು. ನಾನು ಯೂರೋಪು ಪ್ರವಾಸಕ್ಕೆಂದು ಹೊರಟಾಗ, ಲಂಡನ್ನಿನ ಸುರಂಗ ರೈಲಿನ ನಿಲ್ದಾಣವೊಂದರಲ್ಲಿ ನನ್ನ ಭಾರವಾದ ಪೆಟ್ಟಿಗೆಯೊಂದನ್ನು ಎತ್ತಿಕೊಂಡು ಮೆಟ್ಟಿಲ ದಾರಿಯೊಂದನ್ನು ತುಂಬ ಪ್ರಯಾಸದಿಂದ ಹತ್ತುತ್ತಿದ್ದೆ. ಆಗ ಅಲ್ಲೇ ಬದಿಗೆ ಹೋಗುತ್ತಿದ್ದ ತುಂಬ ಸಭ್ಯನಾದ ವ್ಯಕ್ತಿಯೊಬ್ಬ ‘ಮೇ ಐ ಹೆಲ್ಪ್ ಯು’ ಅನ್ನುತ್ತ, ನನ್ನ ಉತ್ತರಕ್ಕೆ ಕಾಯದೆ, ತಾನೇ ನನ್ನ ಕೈಯಿಂದ ಆ ಪೆಟ್ಟಿಗೆಯನ್ನೆತ್ತಿಕೊಂಡು ಮೇಲಿನ ಪ್ಲಾಟ್‌ಫಾರಂವರೆಗೂ ಎತ್ತಿ ತಂದು, ನಾನು ‘ಥ್ಯಾಂಕ್ ಯೂ’ ಅನ್ನುವಷ್ಟರೊಳಗೆ ಅದನ್ನಿರಿಸಿ, ‘ಬೈ’ ಎಂದು ಹೇಳಿ ಹೊರಟೇಹೋದ. ಇಂಥ ಸಂದರ್ಭಗಳಲ್ಲಿ ಕಂಡು ಬರುವ ಮಾನವೀಯತೆ ಈ ಪರಿಸರದ ಚೆಲುವಿನ ಇನ್ನೊಂದು ಭಾಗವೆಂಬಂತೆ ಭಾಸವಾಗುತ್ತದೆ.