೧-

ವರ್ತಮಾನದಲ್ಲಿ ಬದುಕುವ ನಮ್ಮ ಹಿಂದೆ ಒಂದು ಗತಕಾಲವಿದೆ. ನಮ್ಮ ಮುಂದೆ ಒಂದು ಭವಿಷ್ಯತ್ ಕಾಲವಿದೆ. ಈ ಹಿಂದು ಮುಂದುಗಳ ನಡುವಣ ಬಿಂದುವೊಂದರಲ್ಲಿ ನಿಂತ ನಾವು ಹಿಂದಿನ ಆ ಗತಕಾಲದ ನೆನಪುಗಳಿಂದ, ಮುಂದಿನ ಭವಿಷ್ಯತ್ತಿನ ಕನಸುಗಳಿಂದ ನಮ್ಮ ವರ್ತಮಾನದ ಅನುಭವಗಳನ್ನು ಕಟ್ಟಿಕೊಳ್ಳುತ್ತೇವೆ.

ಕೆಲವರು ಹೇಳಬಹುದು: ಗತಕಾಲ ನಮ್ಮ ಪಾಲಿಗೆ ಮೃತ ಕಾಲವೇ. ಯಾರು ಇಂಥ ಗತಕಾಲದ ನೆನಪುಗಳಲ್ಲಿ, ಅದನ್ನು ಹಾಡಿ-ಹೊಗಳಿ ವೈಭವಿಸಿ ಬದುಕುತ್ತಾರೋ ಅವರು ವರ್ತಮಾನದ ವಾಸ್ತವಗಳನ್ನು ಸರಿಯಾಗಿ ಗ್ರಹಿಸಲಾರರು. ಯಾರು ಕೇವಲ ನಾಳಿನ ಅಥವಾ ಭವಿಷ್ಯತ್ತಿನ ಕನಸುಗಳಲ್ಲಿ ಬದುಕುತ್ತಾರೋ, ಅವರು ವರ್ತಮಾನವನ್ನು ಸರಿಯಾಗಿ ಗ್ರಹಿಸಲಾರರು. ಆದಕಾರಣ ಈ ಜೀವಂತ ವರ್ತಮಾನವನ್ನು ಉತ್ಕಟವಾಗಿ ಬದುಕುವುದರ ಮೂಲಕ, ಈ ಲೋಕವನ್ನು ನಾವು ಸರಿಯಾಗಿ ಗ್ರಹಿಸಲು ಸಾಧ್ಯ.

ಇಲ್ಲ ; ನಾವು ಎಷ್ಟರ ಮಟ್ಟಿಗೆ ವರ್ತಮಾನಕ್ಕೆ ಸೇರಿದವರೋ, ಅಷ್ಟೇ, ಭೂತಕಾಲಕ್ಕೆ ಸೇರಿದವರೂ ಹೌದು, ಹಾಗೆಯೇ ಭವಿಷ್ಯತ್ತಿಗೆ ಸೇರಿದವರೂ ಹೌದು. ಹಾಗೆ ನೋಡಿದರೆ ಈ ಭೂತ-ವರ್ತಮಾನ-ಭವಿಷ್ಯತ್ತುಗಳಾದರೂ ಏನು? ನಿರಂತರ ಚಲನಶೀಲವಾದ ಈ ಕಾಲದ ಗತಿಯಲ್ಲಿ, ನಾವು ನೋಡನೋಡುತ್ತಲೆ ಇವತ್ತಿನ ವರ್ತಮಾನ ನಾಳೆಗೆ ‘ಭೂತ’ವಾಗುತ್ತದೆ ; ನಾಳಿನ ‘ಭವಿಷ್ಯ’ ಇವತ್ತಿನ ‘ವರ್ತಮಾನ’ ವಾಗುತ್ತದೆ. ಹೀಗಿರುವಾಗ ‘ವರ್ತಮಾನ’ ಅನ್ನುವುದಕ್ಕೆ ಏನಾದರೂ ಅರ್ಥವಿದೆಯೆ? ಅದು ಹಿಂದು ಮುಂದುಗಳ ನಡುವಣ ಚಲನಶೀಲ ಬಿಂದುವಲ್ಲವೆ!

ಈ ಅಮೂರ್ತವಾದ ಚರ್ಚೆಯನ್ನು ಬದಿಗೆ ಇರಿಸಿ, ಚರಿತ್ರೆಯ ನೆಲೆಯೊಳಗೆ ನಿಂತು ಮಾತನಾಡೋಣ. ಚರಿತ್ರೆಗೆ ಒಂದು ಕಾಲ ದೇಶಗಳ ಪರಿಗಣನೆಯುಂಟು. ಚರಿತ್ರೆ ಕೂಡ ಬದುಕನ್ನು ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸಿ ನೋಡುವ ಒಂದು ಕ್ರಮ. ಇಲ್ಲಿ ಗತಕಾಲವಿದೆ ; ವರ್ತಮಾನವಿದೆ ; ಭವಿಷ್ಯದ ವಿಚಾರ ಅದಕ್ಕೆ ದಕ್ಕದ್ದು.

ಮಹಾ ಅನುಭಾವಿ ಅಲ್ಲಮ ಪ್ರಭು ಹೇಳಿದರು : ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು : ಇಲ್ಲಿ ‘ಹಿಂದಣ ಹೆಜ್ಜೆ’ ಮತ್ತು ‘ನಿಂದ ಹೆಜ್ಜೆ’ -ಎಂಬ ಎರಡು ಮಾತುಗಳಿವೆ. ‘ಮುಂದಣ ಹೆಜ್ಜೆ’ಯ ಪ್ರಸ್ತಾಪವಿಲ್ಲ, ಇಲ್ಲಿ ಅರಿಯಬೇಕಾದದ್ದರ ಅವಧಾರಣೆ ಇರುವುದು ‘ನಿಂದ ಹೆಜ್ಜೆ’ಯ ಮೇಲೆ, ಅಂದರೆ ನಾವು ಬದುಕುತ್ತಿರುವ ವರ್ತಮಾನದ ಮೇಲೆ. ಈ ನಿಂದ ಹೆಜ್ಜೆಯ ಜತೆಗೆ ಹಿಂದಣ ಹೆಜ್ಜೆಗಳೂ ಇವೆ. ಈ ಹಿಂದಣ ಹೆಜ್ಜೆ, ಹಿಂದಿನವರು ನಡೆದು ಗುರುತು ಮಾಡಿದ ಹೆಜ್ಜೆಗಳ ಸರಣಿಯನ್ನು ಅಥವಾ ಪರಂಪರೆಯನ್ನು ಸೂಚಿಸುತ್ತದೆ. ಈ ಹಿಂದಣ ಹೆಜ್ಜೆಯ ‘ನೋಡಿ ಕಂಡಲ್ಲದೆ’ ನಾವು ನಿಂದ ಹೆಜ್ಜೆ ಅಥವಾ ವರ್ತಮಾನವನ್ನು ಅರಿಯಲು ಬಾರದು-ಎನ್ನುತ್ತದೆ ಅಲ್ಲಮನ ಉಕ್ತಿ. ಅಂದರೆ ನಮ್ಮ ಹಿಂದಿನ ಬದುಕನ್ನು ಅಥವಾ ಪರಂಪರೆಯನ್ನು ನಾವು ನೋಡಿ-ಕಾಣುವ ಮೂಲಕವೇ, ನಾವು ನಮ್ಮ ವರ್ತಮಾನವನ್ನು   ಸರಿಯಾಗಿ ಗ್ರಹಿಸಬಲ್ಲೆವು -ಎಂದಂತಾಯಿತು. ಅಲ್ಲಮನ ಈ ಉಕ್ತಿಯಲ್ಲಿ ಹಿಂದಣ ಹೆಜ್ಜೆಯನ್ನು ನೋಡುವ ಮಾತಿನ ಜತೆ, ಕಾಣುವ ವಿಷಯವೂ ಪ್ರಸ್ತಾಪಿತವಾಗಿದೆ. ನಾವು ಎಷ್ಟೋ ವಿಷಯಗಳನ್ನು ನೋಡುತ್ತೇವೆ-ಅವು ಅಲ್ಲಿವೆ ಎಂಬ ಕಾರಣಕ್ಕೆ ; ಆದರೆ ಕಾಣುವುದಿಲ್ಲ. ಹೀಗಾಗಿ ಆ ಗ್ರಹಿಕೆ ಅಪೂರ್ಣವಾಗುತ್ತದೆ. ವಾಸ್ತವವಾಗಿ ನೋಡುವುದೂ ಕಾಣುವುದು ಬೇರೆ ಬೇರೆಯೇ; ನೋಡುವುದು ಅರಿವಿನ ವ್ಯಾಪಾರ, ಕಾಣುವುದು ನಾವು ನೋಡಿದ್ದನ್ನು ಸಂವೇದನೆಯ ಮೂಲಕ ನಮ್ಮ ಪ್ರಜ್ಞೆಯ ಒಂದು ಭಾಗವನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ. ಹೀಗೆ ನಮ್ಮ ಗತ ಕಾಲ ಅಥವಾ ಪರಂಪರೆಯನ್ನು ಕೇವಲ ನೋಡುವುದು ಮಾತ್ರವಲ್ಲ ಅದನ್ನು ತನ್ನ ಪ್ರಜ್ಞೆಯ  ಬೆಳಕಿನಲ್ಲಿ ಕಾಣುವವನು ಕವಿ. ಮತ್ತೆ ಮತ್ತೆ ಕಾಣುತ್ತ  ‘ಹಿಂದಣ ಹೆಜ್ಜೆ’ ಗಳ ಕಡೆಗೆ ಹೊರಳುತ್ತಾ, ಅದನ್ನು ನೋಡುತ್ತ ಮತ್ತು ಕಾಣುತ್ತ ‘ನಿಂದ ಹೆಜ್ಜೆ’ಗಳನ್ನರಿಯುತ್ತ, ಹೊಸ ಅರ್ಥಗಳಿಂದ ವಾಸ್ತವವನ್ನು ಕಟ್ಟುತ್ತಾ ನಿರಂತರವಾಗಿ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಾನೆ ಕವಿ.

ಕವಿ ಸುಮತೀಂದ್ರ ನಾಡಿಗರು ತಮ್ಮ ‘ಪಂಚಭೂತಗಳು’ ಎಂಬ ಕೃತಿಯಲ್ಲಿ ಮಾಡಿರುವುದು, ನಿಂದ ಹೆಜ್ಜೆಯ ನೆಲೆಯಿಂದ ಹಿಂದಣ ಹೆಜ್ಜೆಗಳನ್ನು ನೋಡಿ-ಕಾಣುವ ಒಂದು ಮಹತ್ ಪ್ರಯತ್ನವನ್ನು. ಈ ದೇಶದ ಸುಮಾರು ಐದು ಸಾವಿರ ವರ್ಷಗಳ ನೆನಪುಗಳ ಚರಿತ್ರೆಯ ಕಡೆಗೆ ಹೊರಳಿ, ಅದನ್ನು ತಮ್ಮ ಸಮಕಾಲೀನ ವಾಸ್ತವದೊಂದಿಗೆ ಮುಖಾಮುಖಿಯನ್ನಾಗಿ ಮಾಡಿಕೊಂಡು ಅದರ ಜತೆಗೆ ಸಂವಾದ ನಡೆಯಿಸಿದ್ದಾರೆ. ಈ ದೇಶದ ಋಷಿ-ಮುನಿಗಳು, ಸಂತರು, ಆಚಾರ್ಯರು, ಜಿಜ್ಞಾಸುಗಳು ಈ ಜೀವ-ಜಗತ್ತು ಮತ್ತು ಅದರಾಚೆಯದನ್ನು ಕುರಿತು, ಏನು ಯೋಚಿಸಿದ್ದಾರೆ, ಏನು ಹೇಳಿದ್ದಾರೆ -ಎಂಬುದನ್ನು ವಿಸ್ತಾರವಾದ ಅಧ್ಯಯನ ಚಿಂತನೆ ಹಾಗೂ ಅನುಭವಗಳ ಮೂಲಕ ಗ್ರಹಿಸಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಇದು ಅವರು ಹಾಗೆ ಗ್ರಹಿಸಿದ್ದರ ಅನುಕರಣವಲ್ಲ, ಅನುರಣವೂ ಅಲ್ಲ ;  ಐದು  ಸಾವಿರ  ವರ್ಷಗಳ ಚರಿತ್ರೆಯನ್ನು  ತಮ್ಮ ಅನುಭವ ಪ್ರಾಮಾಣ್ಯದಲ್ಲಿ ಶೋಧಿಸುತ್ತ ತಮ್ಮದೇ ಆದ ರೂಪಕಗಳಲ್ಲಿ ಹಿಡಿದಿಡಲು ಮಾಡಿರುವ ಒಂದು ಪ್ರಯೋಗ. ಈ ಕಾವ್ಯಗುಚ್ಛ ಪ್ರಾರಂಭವಾಗುವುದೇ ನಟ್ಟ ನಡುರಾತ್ರಿ ಯಾರೋ ಗುದ್ದಲಿಯಿಂದ ನೆಲವನ್ನು ಅಗೆಯುತ್ತಿರುವ ಸದ್ದಿನ ರೂಪಕದಿಂದ;

ಇಡೀ ನಗರ ನಿದ್ದೆ ಹೋಗಿರುವಾಗ
ಅನೇಕ ರಾತ್ರಿಗಳು ಸರಿ ಹೊತ್ತಲ್ಲಿ
, ನನ್ನ ಮನೆ ಪಕ್ಕ
ನೆಲ ಅಗೆವ ಸದ್ದು ಕೇಳಿದ್ದೇನೆ
,…….. ಯಾರಿವರು ಹೀಗೆ
ಅಗೆಯುತ್ತ ಇರುವವರು
? ಏನು ಬಿತ್ತುತ್ತಾರೆ ಆ
ಆಳದಲ್ಲಿ
? ಏನು ಬೆಳೆಯುತ್ತಾರೆ? ಅಥವಾ
ಯಾವ ನಿಧಿ ಹುಡುಕುತ್ತ ಹೊರಟಿದ್ದಾರೆ
?
ಅಥವಾ ಇವರು ಭೂಗತವಾದ ಸಿಂಧೂ
, ಇಂಕಾ, ಈಜಿಪ್ಟ್
ರೋಮ್ ಮೊದಲಾದ ಸಂಸ್ಕೃತಿಯ ಹಾಗಿದ್ದ
ಇನ್ನಾವುದೋ ಅತಿ ಪುರಾತನವಾದ ಬೀಡುಗಳ ಹುಡುಕುವವರೆ
?
ಮಾನವನ ಬೇರುಗಳ ನನ್ನ ಹಾಗೆ ಇವರು ಹುಡುಕ ಹೊರಟವರೆ
?

ಇಂದು ನಾಂದಿ, ಪಂಚಭೂತಗಳ ಪ್ರಪಂಚದ ಪ್ರವೇಶಕ್ಕೆ, ತುಂಬ ಉಚಿತವಾದ ನಾಂದಿ. ಇಲ್ಲಿ ಸರಿರಾತ್ರಿಯ ಕತ್ತಲೆ ; ನೆಲ ಅಗೆವ ಗುದ್ದಲಿಯ ಸದ್ದು, ಆ ಸದ್ದು ಸೂಚಿಸುವ ಹುಡುಕಾಟ -ಎಲ್ಲವೂ ಗತಕಾಲದ ಇತಿಹಾಸದ ಕತ್ತಲಲ್ಲಿ ಹುದುಗಿದ ಪ್ರಾಚೀನ ವಾಸ್ತವಗಳ ಬೇರುಗಳನ್ನು ಶೋಧಿಸುವ ನಾಡಿಗರ ಪ್ರಯತ್ನಕ್ಕೆ ಸಂಕೇತವಾಗಿವೆ, ‘ಓದುಗರಿಗೆ’-ಎಂಬ ಕವಿತೆಯಲ್ಲಿ ನಾಡಿಗರು ಹೇಳುತ್ತಾರೆ:

ವೇದೋಪನಿಷತ್ತುಗಳು ಏನು ಹೇಳಿವೆ ಎಂದು ಕುತೂಹಲದಿಂದ
ಹೊರಟಾಗ ನಾನು ಕಂಡಿದ್ದನ್ನು
, ನನ್ನ ಅನುಭವವನ್ನು
ಹಂಚಿಕೊಂಡಿದ್ದೇನೆ
, ಈ ಕಾವ್ಯದಲ್ಲಿ. ನನ್ನ ಮಾತುಗಳಲ್ಲಿ
ಅವರಿವರು ಸೇರಿ ಹೋಗಿದ್ದಾರೆ
(-ಪು ೧೦)

೨-

ಈ ಜಗತ್ತು ಎಂದರೆ ಏನು? ಇದು ಹೇಗೆ ಸೃಷ್ಟಿಯಾಯಿತು? ಇದನ್ನು ಸೃಷ್ಟಿ ಮಾಡಿದ್ದು ಯಾರು? ಪ್ರಾಚೀನ ಋಷಿಗಳಿಂದ ಮೊದಲುಗೊಂಡು ಆಧುನಿಕ ವಿಜ್ಞಾನಿಯವರೆಗೆ ಎಲ್ಲರನ್ನೂ ಕಾಡಿದ ಪ್ರಶ್ನೆಗಳು ಇವು. ಮತ್ತು ಇನ್ನೂ ಕಾಡುತ್ತಿರುವ ಪ್ರಶ್ನೆಗಳು ಕೂಡ. ಈ ಸೃಷ್ಟಿ ಎಷ್ಟು ನಿಗೂಢವೂ, ಅಗಾಧವೂ ಅದ್ಫುತವೂ ಆಗಿದೆಯೆಂದರೆ, ಇದನ್ನು ತಿಳಿದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದರೆ ತಿಳಿದದ್ದು ಎಲ್ಲೋ ಸ್ವಲ್ಪ. ಸದ್ಯಕ್ಕೆ ದೊರೆತ ಉತ್ತರ ಈ ಜಗತ್ತು ಪಂಚಭೂತಾತ್ಮಕವಾದದ್ದು. ಇದು ಪೃಥ್ವಿ, ಅಪ್, ತೇಜಸ್, ವಾಯು, ಆಕಾಶಗಳ ಅಥವಾ ನೆಲ, ನೀರು, ಅಗ್ನಿ, ಗಾಳಿ, ಆಕಾಶಗಳ ಒಂದು ಸಂಚು. ಆದರೆ ಇದೆಲ್ಲಕ್ಕೂ ಮೂಲವಾದ ಚೈತನ್ಯವೊಂದು ತನ್ನ ಸಂಕಲ್ಪ ಶಕ್ತಿಯಿಂದ, ಏಕವಾಗಿದ್ದ ತಾನು ಅನೇಕವಾಗಿ, ಬಹುಕೋಟಿ ಚರಾಚರ ಜೀವರಾಶಿಗಳಾಗಿ ಆವಿರ್ಭವಿಸಿತು ಎಂದು ನಮ್ಮ ಪ್ರಾಚೀನ ಋಷಿಗಳು ಹಾಡಿದರು. ಈ ಪಂಚಭೂತಾತ್ಮಕವಾದ ಜಗತ್ತು, ಶತಮಾನಗಳಿಂದ ಮನುಕುಲದ, ಮತಿಯಲ್ಲಿ ಹೇಗೆ ಗೃಹೀತವಾಗಿದೆ ಎನ್ನುವುದೇ ನಾಡಿಗರ ‘ಪಂಚಭೂತಗಳು’ ಎಂಬ ಕವನಗುಚ್ಛಗಳ ವಸ್ತುವಾಗಿದೆ. ಆರು ಮಂಡಲಗಳಲ್ಲಿ ವಿಭಜನೆಗೊಂಡಿರುವ ಈ ಕೃತಿ ಒಂದು ತರ್ಕಬದ್ಧವಾದ ಕ್ರಮದಲ್ಲಿ ರಚಿತವಾದದ್ದಲ್ಲ ; ಹಾಗೂ ಆರು ಮಂಡಲದೊಳಗಿನ ಕವನಗಳೂ, -ಯಾವುದೇ ನಿರ್ದಿಷ್ಟವಾದ ಕಥಾವಸ್ತುವನ್ನವಲಂಬಿಸಿದ ನಿರೂಪಣೆಯಂತೆ ಒಂದು ‘ಐಕ್ಯತೆ’ಯನ್ನು ಪಡೆದುಕೊಂಡಿಲ್ಲ. ಆದರೆ ಒಂದು ಮತ್ತೊಂದಕ್ಕೆ ‘ರಕ್ತ ಸಂಬಂಧ’ವಿದೆ. ನಾಡಿಗರೇ ಗುರುತಿಸಿರುವಂತೆ ಇದೊಂದು ವೃಕ್ಷಬಂಧ. ಬುಡವೊಂದರಿಂದ ಹಲವು ಕೊಂಬೆಗಳನ್ನು ಚಾಚಿ, ನೋಡುವುದಕ್ಕೆ ಒಂದು ವೃಕ್ಷವನ್ನು ಹೋಲುವ ರಚನೆ. ಇದರ ಮೊದಲ ಮಂಡಲವಾದ ‘ಸೃಷ್ಟಿ ಪುರಾಣ’ದಲ್ಲಿ, ಮೊದಲು ಬರಬೇಕಾಗಿದ್ದದ್ದು ‘ನಾಸದೀಯ ಸೂಕ್ತ’ವೇ. (ಇದರ ವಿಸ್ಮಯ ಹಾಗೂ ಭವ್ಯತೆಗಳನ್ನು ನಾಡಿಗರು ಅಷ್ಟು ಪರಿಣಾಮಕಾರಿಯಾಗಿ ಗ್ರಹಿಸಿ ನಿರೂಪಿಸಿದಂತೆ ತೋರುವುದಿಲ್ಲ). ಆದರೆ ಈಗ ಇರುವಂತೆ, ‘ಸೃಷ್ಟಿಪುರಾಣ’ ತುಂಬ ಸೊಗಸಾದ ಪ್ರವೇಶವಾಗಿದೆ ಜಗತ್ತಿನ ಸೃಷ್ಟಿಯ ಚರಿತ್ರೆಯೊಳಕ್ಕೆ. ಇಲ್ಲಿ ವೇದೋಪನಿಷತ್ತುಗಳಲ್ಲಿ ಬರುವ ಸೃಷ್ಟಿಯ ವರ್ಣನೆಯ ಜತೆಗೆ, ಅಥವಾ ಅದಕ್ಕೆ ಮುಖಾಮುಖಿಯಾಗಿ, ಆಧುನಿಕ ವಿಜ್ಞಾನದ ಗ್ರಹಿಕೆಯೂ-ಮುಖ್ಯವಾಗಿ ಡಾರ್ವಿನ್ನನ ವಿಕಾಸವಾದವೂ, ಈ ವಿಕಾಸದ ಹಾದಿಯಲ್ಲಿ, ಅನ್ನ-ಕಾಮ-ಹಸಿವುಗಳ ಪ್ರೇರಣೆಯೂ, ಅಸಂಖ್ಯ ಜೀವರಾಶಿಗಳು ತಮ್ಮ ಉಳಿವಿಗಾಗಿ ನಡೆಯಿಸಿದ ಪೈಪೋಟಿ ಹಾಗೂ ಸಂಘರ್ಷಗಳ ಚಿತ್ರವೂ, ಈ ಬಹುಜೀವರಾಶಿಗಳ ಜತೆಗೆ ಮನುಷ್ಯನು ತನ್ನ ಅಸ್ತಿತ್ವವನ್ನು ಕಂಡುಕೊಂಡ ಪರಿಯೂ, ಇಂಥ ಮನುಕುಲದಲ್ಲಿ ತಮ್ಮ ಮೂಲಪುರುಷರನ್ನು ಗುರುತಿಸಿಕೊಳ್ಳುವ ನಾಡಿಗರ ಪ್ರವರವೂ -ತುಂಬ ಚೇತೋಹಾರಿಯಾಗಿ ನಿರೂಪಣೆಗೊಳ್ಳುತ್ತ, ವ್ಯಕ್ತಿಗೂ ಹಾಗೂ ಅಖಂಡ ಸೃಷ್ಟಿಗೂ ಇರುವ ಸಂಬಂಧವನ್ನು ದಾಖಲಿಸುತ್ತದೆ. ಅಷ್ಟೇ ಅಲ್ಲ, ಪ್ರಾಚೀನ ಋಷಿಗಳು ಈ ಪಂಚಭೂತಗಳನ್ನು ಕುರಿತು ಕೀರ್ತಿಸಿದ ಪರಿಯನ್ನು ಹಿಡಿದಿಡುತ್ತಲೇ, ವರ್ತಮಾನದಲ್ಲಿ ಈ ಪಂಚಭೂತಗಳು ತಮ್ಮ ಪ್ರಜ್ಞೆಯಲ್ಲಿ ಗೃಹೀತವಾಗುವ ಬಗೆಯನ್ನು ನಾಡಿಗರು ಮುಖಾ ಮುಖಿಯನ್ನಾಗಿಸುವ ಕ್ರಮ ಈ ಕೃತಿಯ ವಿಶೇಷವಾಗಿದೆ. ನಿದರ್ಶನಕ್ಕೆ ‘ಅಗ್ನಿ ಸೂಕ್ತ’ವನ್ನು ನೋಡಬಹುದು. ‘ಪ್ರಾರ್ಥನೆಗಳು’ -ಎಂಬ ಮಂಡಲದೊಳಗಿರುವ ಅಗ್ನಿಸೂಕ್ತ ತುಂಬ ಸೊಗಸಾದ ರಚನೆಯಾಗಿದೆ. ವೇದ ಋಷಿಗಳ ಕಲ್ಪನೆಯಲ್ಲಿ ಅಗ್ನಿಗೆ ಅಗ್ರಸ್ಥಾನ. ‘ಕೆಂಗೂದಲಿನವ,  ಕೆಂಪು ಗಡ್ಡದವ ಸಪ್ತಜಿಹ್ವೆಯಾತ’ -ಎನ್ನುವುದು ಋಷಿಗಳು ಕಂಡ ಆಗ್ನಿಯ ಚಿತ್ರ. ಆದರೆ ಆ ವೇದಯುಗದಿಂದ ಭಿನ್ನವಾದ ಈ ಹೊತ್ತಿನ ವೇಗ ಯುಗದಲ್ಲಿ ನಿಂತ ನಾಡಿಗರ ಅಗ್ನಿಸೂಕ್ತ ಹೀಗಿದೆ:

ವಿದ್ಯುತ್ತೇಜದ ಸೂರ್ಯ ರಶ್ಮಿಗಳ ತೈಲ ಜ್ಯೋತಿಗಳ ಅಗ್ನಿಯೆ
ಹೆಣ್ಣು ನೀರುಗಳ ಪ್ರವೇಶ ಮಾಡುವ ಫಲದಾಯಕ ಪ್ರಭು ಅಗ್ನಿಯೆ
ಪ್ರೆಟೋಲ್ ಡೀಸೆಲ್ ನೀರಲ್ಲೂ ಸಹ ಮನೆಯ ಮಾಡಿಕೊಂಡೆ
ಟ್ಯಾಂಕರ್ ಜೀಪು ಸಬ್ ಮೆರೀನುಗಳ ನಡೆಸುವುದನು ಕಂಡೆ

ಹೀಗೆ ಪ್ರಾರಂಭವಾಗುವ ಸೂಕ್ತದೊಳಗಿನ ಅಗ್ನಿ ‘ರಾಕೆಟ್ ಕ್ಷಿಪಣಿ ಉಪಗ್ರಹಗಳನು ಮೇಲೇರಿಸುವಾತ’, ‘ಅಸಂಖ್ಯ ಬಾಂಬುಗಳ ಉಗ್ರಾಣದಲ್ಲಿ ಪ್ರಳಯ ಕಾಯುವಾತ’, ಅಷ್ಟೇ ಅಲ್ಲ, ‘ಭಯೋತ್ಪಾದಕರ ಕೈಗೆ ಸಿಕ್ಕಾಗ ಆರ್ಡಿಯೆಕ್ಸೊ’ ಆಗುವ ಅಗ್ನಿಯ ತಾರಕ-ಮಾರಕ ಮುಖಗಳನ್ನು ವರ್ಣಿಸಿ-

ಅಗ್ನಿಯೆ, ನೀ ನಮ್ಮೆಲ್ಲರ ತಂದೆ, ತಾಯಿ, ಸಹೋದರ ಬಂಧು
ನಾನಾ ರೂಪಿಯೆ ಕಾಯಿ ನಮ್ಮನ್ನು ಯಾವುದೆ ರೂಪದಿ ಬಂದು

ಎಂದು ನಾಡಿಗರು ಸ್ತುತಿಸುತ್ತಾರೆ. ‘ಜಲಸೂಕ್ತ’ದಲ್ಲಿ ‘ನಾರ್ಸಿಸಿಸ್ ತನ್ನನ್ನೆ ಮೋಹಿಸಿದ ದರ್ಪಣವೆ’ ಎಂದು ಜಲವನ್ನು ವರ್ಣಿಸುವಲ್ಲಿ, ಗ್ರೀಕ್ ಪುರಾಣ ಕತೆಯ ಸ್ಮರಣೆಯೊಂದು ಬಂದು ಹೆಣೆದುಕೊಳ್ಳುತ್ತದೆ. ‘ಪ್ರಾರ್ಥನೆಗಳು’ ಭಾಗದಲ್ಲಿ ಬರುವ, ಜಲ, ಅಗ್ನಿ ಮತ್ತು ವಾಯುಗಳು, ‘ಆನಂದವಲ್ಲಿ ’ ಎಂಬ ಭಾಗದಲ್ಲಿ, ಮಳೆ, ಬೆಂಕಿ, ಗಾಳಿಗಳಾಗಿ, ಕವಿಯ ಮನಸ್ಸನ್ನು ಗೆಲ್ಲುವ ಹಾಗೂ ಆನಂದವನ್ನು ಉಂಟುಮಾಡುವ ನಿಸರ್ಗ ವ್ಯಾಪಾರಗಳಾಗಿ ಗೃಹೀತವಾಗಿವೆ. ಇಲ್ಲಿ ಬರುವ ‘ಮಳೆ’ ‘ಬೆಂಕಿ’ ‘ಗಾಳಿ’ – ಈ ಮೂರು ಕವಿತೆಗಳೂ ಸೊಗಸಾದ ಭಾವಗೀತೆಗಳಂತಿವೆ.

ನಾಡಿಗರ ‘ಪಂಚಭೂತ’ ಕವನಗುಚ್ಛದ ಮುಂದಿನ ‘ಮಂಡಲ’ ಗೃಹ್ಯ ಸೂಕ್ತಗಳು. ವಾಸ್ತವಾಗಿ ಇದು ಅವರ ‘ದಾಂಪತ್ಯ ಗೀತೆ’ದ ಮುಂದುವರಿಕೆ ಎನ್ನಬಹುದು. ಈ ಪಂಚಭೂತಗಳ ನಿರ್ಮಿತಿಯಾದ ಪ್ರಪಂಚದ ಒಂದು ಭಾಗವಾದ ಈ ಮನುಷ್ಯ ಜೀವನದ ಮಾನವೀಯ ಸಂಬಂಧಗಳನ್ನು ಕುರಿತ  ಚಿಂತನೆಗಳು ಇಲ್ಲಿ ನಿರೂಪಿತವಾಗಿವೆ. ಈ ಕೃತಿಯ ಉಳಿದೆಲ್ಲ ಮಂಡಲಗಳಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಪದ್ಯಗಳು ಇಲ್ಲಿವೆ. ಅದರಲ್ಲೂ ಗಂಡು-ಹೆಣ್ಣಿನ ಸಂಬಂಧಗಳನ್ನು ಕುರಿತ ನಿರ್ದೇಶನ ರೂಪದ, ಆದರೆ ಕೆಲವಡೆ ಆತ್ಮೀಯ ಸ್ಪರ್ಶವುಳ್ಳ ಮಾತುಗಳೇ ಮಿಗಿಲಾಗಿವೆ. ಕೆಲವಡೆ ಮಾತೇ ಪ್ರಧಾನವಾಗುವಂತೆ-ಮಾತು, ಮಾತು, ಮಾತು. ಹೀಗಾಗಿ ಪದ್ಯ ಹಿಂದಾಗಿ, ಗದ್ಯ ಮುಂದಾಗಿ ಮತ್ತು ಉಪದೇಶವಾಗಿ, ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ‘ಅವರು ತಂದೆ ತಾಯಿಗಳಾದಾಗ’, ‘ಅವರ ತಂದೆ ತಾಯಿಗಳಿಗೆ’ -ಎಂಬ ಕವಿತೆಗಳನ್ನು ಇದಕ್ಕೆ ನಿದರ್ಶನವಾಗಿ ನೋಡಬಹುದು. ಇನ್ನು ಕೊನೆಯ ಮಂಡಲ ‘ಆರಣ್ಯಕ’, ಬದುಕಿನ ಕೊನೆಯಾದ ವೃದ್ಧಾಪ್ಯವನ್ನು ಮತ್ತು ಎದುರಿಸಬೇಕಾದ ಮೃತ್ಯುವನ್ನು ಹಾಗೂ ನಿರಂತರತೆಯನ್ನು ಕುರಿತದ್ದು.

ಪ್ರಾಚೀನತೆಯ ಹಿನ್ನೆಲೆಯಲ್ಲಿ ವರ್ತಮಾನವನ್ನು ಗ್ರಹಿಸುವ, ವರ್ತಮಾನದ ಬೆಳಕಿನಲ್ಲಿ ಪ್ರಾಚೀನತೆಯೊಂದಿಗೆ ಅನುಸಂಧಾನ ನಡೆಯಿಸುವ, ನಾಡಿಗರ ಈ ಕೃತಿ ಅವರ ಮಹತ್ವಾಕಾಂಕ್ಷೆಯ ಒಂದು ಅಪರೂಪದ ಪ್ರಯೋಗವಾಗಿದೆ. ಆದರೆ ಅವರ ಇಡೀ ಕೃತಿಯ ಮೂಲದ್ರವ್ಯ, ವೇದೋಪನಿಷತ್ತುಗಳ ಮೂಲಕ ಗೃಹೀತವಾದ ಪಂಚಭೂತಗಳನ್ನು ಕುರಿತ ಚಿಂತನೆ ಹಾಗೂ ಕಲ್ಪನೆಗಳಷ್ಟೇ ಆಗಿದೆ. ವೇದಕಾಲವನ್ನೂ ಆಧುನಿಕತೆಯನ್ನೂ ಒಟ್ಟಿಗೆ ಹಿಡಿಯುವ ನಾಡಿಗರ ಪ್ರಯತ್ನ ಸಾಕಷ್ಟು ಯಶಸ್ವಿಯಾಗಿದೆಯಾದರೂ, ವೇದೋಪನಿಷತ್ತುಗಳಲ್ಲಿನದಕ್ಕಿಂತ ಭಿನ್ನವಾದ ರೀತಿಗಳಲ್ಲಿ ಪಂಚಭೂತಗಳನ್ನು ಗ್ರಹಿಸಿದ ‘ಸೃಷ್ಟಿಪುರಾಣ’ಗಳು, ನಮ್ಮ ದೇಶದ ವೈದಿಕೇತರ ಧರ್ಮಗಳವರ ಕೃತಿಗಳಲ್ಲಿವೆ ಎಂಬುದನ್ನು, ಅದಕ್ಕಿಂತ ಮಿಗಿಲಾಗಿ ದೇಶೀ ಅಥವಾ ಜಾನಪದ ಕಥನ ಪರಂಪರೆಗಳಲ್ಲಿವೆ ಎಂಬುದನ್ನು ನಾಡಿಗರು ಲೆಕ್ಕಕ್ಕೇ ತೆಗೆದುಕೊಳ್ಳದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಬಹುಮುಖೀ ಸಂಸ್ಕೃತಿಗಳ ಸಮುಚ್ಚಯದಂತಿರುವ ಈ ದೇಶದಲ್ಲಿ ಬಹುಸಂಖ್ಯೆಯ ಪ್ರಾದೇಶಿಕ ಸಾಹಿತ್ಯಗಳು (ಲಿಖಿತ ಹಾಗೂ ಅಲಿಖಿತ), ಪ್ರಧಾನ ಸಂಸ್ಕೃತಿಯ ವೇದೋಪನಿಷತ್ತುಗಳೊಂದಿಗೆ ಮುಖಾಮುಖಿಯಾಗುತ್ತ, ಅವಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ತೋರುತ್ತ ತಮ್ಮದೇ ಆದ ಕೆಲವು ಪರ್ಯಾಯ ಕಲ್ಪನೆಗಳನ್ನು ಕಟ್ಟಿಕೊಂಡಿವೆ-ಎನ್ನುವುದು ಸ್ಪಷ್ಟವಾದ ಸಂಗತಿಯಾಗಿದೆ. ಅದರಲ್ಲೂ ಕನ್ನಡದಲ್ಲಿ ಬರೆಯುವ ಒಬ್ಬ ಮುಖ್ಯ ಲೇಖಕ, ತನ್ನ ಭಾಷಾ ಸಾಹಿತ್ಯ ಪರಂಪರೆಯೊಳಗೆ, ಈ ಪಂಚಭೂತಗಳ ಕಲ್ಪನೆಗಳಿಗೆ ಕನ್ನಡ ಕವಿಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು-ಕಡೆಯ ಪಕ್ಷ ಜೈನ ಕವಿಗಳ ಹಾಗೂ ವಚನಕಾರರ ಅಭಿವ್ಯಕ್ತಿಗಳಿಂದಾದರೂ-ಗ್ರಹಿಸುವುದು ಅಗತ್ಯವಾಗಿತ್ತೆಂದು ತೋರುತ್ತದೆ. ಇನ್ನೂ ಸ್ವಾರಸ್ಯವಾದ ಸಂಗತಿಯೆಂದರೆ, ಇತ್ತೀಚೆಗೆ ಪ್ರಕಟವಾದ ಕೆಲವು ಬುಡಕಟ್ಟು ಮಹಾಕಾವ್ಯಗಳಲ್ಲಿ ಒಂದಾದ ‘ಮಂಟೇಸ್ವಾಮಿ’ ಪುರಾಣದಲ್ಲಿ ಕಲ್ಪಿತವಾದ ಸೃಷ್ಟಿಪುರಾಣದ ಸಂಗತಿ ನನ್ನನ್ನು ಚಕಿತಗೊಳಿಸಿತು: ಮಂಟೇಸ್ವಾಮಿಯವರು ಒಬ್ಬರೇ ಹುಟ್ಟಿ ಒಬ್ಬರೇ ಯೋಚನೆ ಮಾಡುತ್ತಾರಂತೆ -‘ಈ ಪ್ರಪಂಚದಲ್ಲಿ ದೇವರಾಗಿ ಹುಟ್ಟಿದ್ದಕ್ಕೆ ನಾನು ಒಂದು ಲೋಕವ ಕಟ್ಟ ಬೇಕು’, ‘ನಾನು ಒಂದು ಲೋಕವ ಕಟ್ಟ ಬೇಕು ಅನ್ನುತ್ತೇಳಿ, ಮುತ್ತಿನ ಜೋಳಿಗೆಗೆ ಕೈ ಹಾಕಿದ್ರು ನನ್ನಪ್ಪ’ ಎನ್ನುತ್ತಾನೆ ನಿರೂಪಕ, ಮತ್ತು ಮುಂದುವರಿದು ಹೇಳುತ್ತಾನೆ:

ಮುತ್ತೀನಾ ಜೋಳಿಗೆ ಒಳಗೆ ಆಗಲಿಗಾ ಮಾಯ ಮಂತ್ರದ
ಇಬತ್ತಿ ಗಟ್ಟಿ ಇತ್ತಂತೆ
ಇಬತ್ತಿ ಉಂಡೆನ ಕಣ್ಣಿಂದ ನೋಡಿ ಬುಟ್ಟು ಗುರುವು
ಅಂಗೈನ ಒಳಗೆ
ಇಬತ್ತಿ ಉಂಡಿಯ ತಾವೆ ಮಡಿಕ್ಕಂಡು
ನಾಗಬೆತ್ತ ತೆಗೆದು
ಇಬತ್ತಿ ಉಂಡೆಗೆ ಗುರುವೇ
ಒಂದೇಟ ಹೊಡೆದು
ಎರಡು ಹೋಳ ಮಾಡಿ
ಒಂದು ಹೋಳ ತೆಗೆದು
ಭೂಮಿತಾಯ ಮಾಡಿ
ಗುರುವೇ ಮತ್ತೊಂದ ತೆಗೆದರಂತೆ
ಆಕಾಶವ ಮಾಡುತಾರೆ.

ಇದು ಮಂಟೇಸ್ವಾಮಿ ಜಾನಪದ ಕಾವ್ಯದಲ್ಲಿ ಬರುವ ಸೃಷ್ಟಿಪುರಾಣ, ಇದನ್ನು ವೇದೋಪನಿಷತ್ತುಗಳ ‘ಸೃಷ್ಟಿಪುರಾಣ’ ದೊಂದಿಗೆ ಮುಖಾಮುಖಿಯನ್ನಾಗಿಸಿ ಮಾಡಲು ಸಾಧ್ಯ. ನನಗೆ ಅನಿಸುವುದೇನೆಂದರೆ : ಇಷ್ಟು ಸೊಗಸಾದ ಕೃತಿಯನ್ನು ಬರೆದ ನಾಡಿಗರು, ದೇಶೀ  ಸಂಸ್ಕೃತಿಯ ಸೃಷ್ಟಿ ಪುರಾಣಗಳನ್ನೂ ಬಳಸಿಕೊಂಡಿದ್ದರೆ ಅವರ ಕೃತಿಗೆ ಒಂದು ಬಗೆಯ ಸಮಗ್ರತೆ ಪ್ರಾಪ್ತವಾಗಬಹುದಾಗಿತ್ತು.

ಯಾವುದೂ ಸಣ್ಣದಲ್ಲ : ೨೦೦೪