• ಸೂರ್ಯನನ್ನು ಬಿಟ್ಟರೆ ನಮಗೆ ಅತಿ ಹತ್ತಿರದ ನಕ್ಷತ್ರ ಪ್ರಾಕ್ಸಿಮ ಸೆಂಟಾರಿ. ಇದರ ದೂರ 129ಪಾರ್ಸೆಕ್
  • ಆಕಾಶಗಂಗೆಯ ಕೇಂದ್ರ ಭೂಮಿಯಿಂದ 8ಕಿಲೊ ಪಾರ್ಸೆಕ್ ದೂರದಲ್ಲಿದೆ. ಆಕಾಶ ಗಂಗೆ 30ಕಿಲೊ ಪಾರ್ಸೆಕ್ ದೂರಕ್ಕೆ ವ್ಯಾಪಿಸಿದೆ.
  • ಆಂಡ್ರೊಮಿಡ ಗೆಲಕ್ಸಿ ಭೂಮಿಯಿಂದ ಸುಮಾರು 800ಕಿಲೊ ಪಾರ್ಸೆಕ್ಗಿಂತ ಸ್ವಲ್ಪ ಕಡಿಮೆ ದೂರದಲ್ಲಿದೆ.

ಖಗೋಲ ದೂರಗಳನ್ನು ಅಳೆಯಲು ದೊಡ್ಡ ಮಾನವೇ ಬೇಕು. ಪಾರ್‌ಸೆಕ್ ಅಂಥ ಒಂದು ಮಾನ. ‘ಘ್ರಿಕೋನ ಮಿತೀಯ ಸ್ಥಾನಾಭಾಸ’ (ಟ್ರಿಗ್ನೊಮ್ಯಾಟ್ರಿಕಲ್ ಪಾರಲಾಕ್ಸ್) ಎಂಬ ವಿಧಾನವನ್ನು ಖಗೋಲ ದೂರಗಳನ್ನು ಅಳೆಯಲು ಬಳಸುವಾಗ ಈ ಮಾನವೂ ಬಳಕೆಗೆ ಬಂತು. ಇದಕ್ಕಿಂತಲೂ ದೊಡ್ಡ ಮಾನ ಬೇಕಾದರೆ ಮೆಗ ಪಾರ್‌ಸೆಕ್ (ಒಂದು ಮಿಲಿಯನ್ ಪಾರ್‌ಸೆಕ್) ಅಥವಾ ಗಿಗ ಪಾರ್‌ಸೆಕ್ (1000 ಮಿಲಿಯನ್) ಪಾರ್‌ಸೆಕ್ ಗಳನ್ನು ಬಳಸಬಹುದು.

ನಾವು ಹೋಗಲಾಗದ C ಎಂಬ ಜಾಗದ ದೂರವನ್ನು ಅಳೆಯುವುದು ಜ್ಯಾಮಿತಿಯ ಪ್ರಕಾರ ಅಷ್ಟು ಕಷ್ಟವಲ್ಲ. A ಮತ್ತು B ಎಂಬ ಎರಡು ಜಾಗಗಳ ಮಧ್ಯದ ದೂರವು ABC ಮತ್ತು BAC ಎಂಬ ಎರಡು ಕೋನಗಳೂ ತಿಳಿದರೆ AC ಅಥವಾ BC (ಅಂದರೆ Cಯ ದೂರ)ಯನ್ನು ಲೆಕ್ಕಹಾಕಬಹುದು. ಈಗ ACB ಕೋನವನ್ನು Cಯ ಸ್ಥಾನಾಭಾಸ (ಪಾರಲಾಕ್ಸ್) ಎನ್ನಬಹುದು (ಚಿತ್ರೊ- 1). ಭೂಮಿಯ ಮೇಲಿನ ಸರ್ವೇಕ್ಷಣೆಯಲ್ಲಿ ಈ ವಿಧಾನ ಸರಳವಾದರೂ ಭೂಮಿಯಿಂದಾಚೆಗಿನ ಖಗೋಲ ದೂರಗಳನ್ನು ನಿರ್ಧರಿಸಲು ಈ ವಿಧಾನವನ್ನು ಉಪಯೋಗಿಸುವಾಗ ನಾವು ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಕಾರಣ ಇಷ್ಟೆ; ಅಳೆಯ ಬೇಕಾದ ದೂರಕ್ಕೆ ಹೋಲಿಸುವಾಗ ನಗಣ್ಯ ಎನಿಸದಷ್ಟು ಉದ್ದದ ಪಾದ ಅಥವಾ ಆಧಾರ ರೇಖೆಯನ್ನು ನಾವು ನೆಲದ ಮೇಲೆ ಆರಿಸಬಹುದು. ಆದರೆ ಭೂಮಿಯಿಂದ ಹೊರಗಿರುವ ಒಂದು ವಸ್ತುವಿನ ದೂರವನ್ನು ಅಳೆಯುವಾಗ ನಮಗೆ ಸಿಗುವ ಅತ್ಯಂತ ಉದ್ದದ ಆಧಾರ ರೇಖೆ ಎಂದರೆ ಭೂಮಿಯ ವ್ಯಾಸ. ಹೀಗಿದ್ದರೂ ಚಂದ್ರನ ಸ್ಥಾನಾಭಾಸವನ್ನು — ಚಂದ್ರ ಭೂಮಿಗೆ ಸಾಪೇಕ್ಷವಾಗಿ ಸನಿಹದಲ್ಲಿರುವುದರಿಂದ — ಒಂದು ಡಿಗ್ರಿ (1O) ಎಂದು ನಿರ್ಧರಿಸಬಹುದಾಯಿತು. ಆದರೆ ಸೂರ್ಯನ ಸ್ಥಾನಾಭಾಸ ಇದಕ್ಕಿಂತ ಬಹಳ ಕಡಿಮೆ ಇರುವುದರಿಂದ ಅದನ್ನು ನಿಖರವಾಗಿ ಅಳೆಯಲು ಕಷ್ಟವಾಯಿತು. ನಕ್ಷತ್ರಗಳ ದೂರವನ್ನು ಸ್ಥಾನಾಭಾಸ ನಿರ್ಣಯಿಸಿ ಅಳೆಯುವ ಕೆಲಸ ಇನ್ನೂ ಕಷ್ಟದ್ದು. ಭೂವ್ಯಾಸದ ಎರಡು ತುದಿಗಳನ್ನೊಳಗೊಂಡ ತ್ರಿಕೋನವೇ ಬಹಳ ತೆಳ್ಳಗಾಗಿ ತ್ರಿಕೋನದ ಬದಲು ಒಂದು ಸರಳ ರೇಖೆಯೇ ಇದೆಯೆಂಬ ಭಾವನೆ ಬರಲೂಬಹುದು.

ಆದರೆ ಈ ತೊಂದರೆಯನ್ನು ನೀಗಲೋ ಎಂಬಂತೆ ಹೊಸದಾದ, ಭೂವ್ಯಾಸಕ್ಕಿಂತ 23 ಸಾವಿರ ಪಟ್ಟು ಅಧಿಕವಿರುವ, ಭೂಕಕ್ಷೆಯ ವ್ಯಾಸವನ್ನೇ ಆಧಾರ ರೇಖೆಯಾಗಿ ಬಳಸುವ ಯೋಚನೆ ಹುಟ್ಟಿಕೊಂಡಿತು. ಈ ಆಧಾರ ರೇಖೆಯ ಎರಡು ತುದಿಗಳಿಂದ ಅತಿ ಹತ್ತಿರದ ನಕ್ಷತ್ರದ ಸ್ಥಾನಾಭಾಸ ಎರಡು ಚಾಪ ಸೆಕೆಂಡುಗಳಿಗಿಂತ ಹೆಚ್ಚಿಲ್ಲ. ಖಗೋಲ ಸಂಬಂಧಿ ಲೆಕ್ಕಾಚಾರಗಳಿಗೆ ಆಧಾರರೇಖೆಯ ಅರ್ಧಭಾಗ (ಭೂಕಕ್ಷೆಯ ತ್ರಿಜ್ಯ) ದೂರದ ಕಾಯದಲ್ಲಿ ಉಂಟುಮಾಡುವ ಕೋನವನ್ನು ಸ್ಥಾನಾಭಾಸ ಎಂದು ತಿಳಿಯಲಾಯಿತು. ಬಂದು ಚಾಪ ಸೆಕೆಂಡಿನ ಸ್ಥಾನಾಭಾಸವು ಭೂಕಕ್ಷೆಯ ತ್ರಿಜ್ಯದ 206,265 ಪಟ್ಟು ಅಧಿಕ ದೂರಕ್ಕೆ ಸಮಾನ. ಇದನ್ನೇ ಪಾರ್‌ಸೆಕ್ (ಪಾರಲಾಕ್ಸ್ ಸೆಕೆಂಡಿನ ಹ್ರಸ್ವರೂಪ) ಎಂದು ಕರೆಯಲಾಯಿತು. ಇದಕ್ಕೆ ಕಾರಣನಾದವನು ಹರ್ಬರ್ಟ್ ಹಾಲ್ ಟರ್ನರ್. ಅಧಿಕೃತವಾಗಿ, ಪಾರ್‌ಸೆಕ್ ಎಂಬ ಹೆಸರು 1913ರಲ್ಲಿ ಬಳಕೆಗೆ ಬಂತು.

ಮೊದಲಿಗೆ ಅಳೆದ ನಕ್ಷತ್ರ ಸ್ಥಾನಾಭಾಸ 61 ಸಿಗ್ನಿ ಎಂಬ ನಕ್ಷತ್ರದ್ದು. ಜರ್ಮನ್ ಖಗೋಲಜ್ಞ ಫ್ರೆಡರಿಕ್ ವಿಲ್‌ಹೆಲ್ಮ್ ಬೆಸೆಲ್ 1838ರಲ್ಲಿ ಈ ಅಳತೆಯನ್ನು ನಡೆಸಿದ. ಆದರೆ ಅವನ ಅಳತೆ ಅಷ್ಟು ನಿಖರವಾಗಿರಲಿಲ್ಲ. ಮುಂದೆ ಉಪಕರಣಗಳು ಸುಧಾರಿಸಿದಂತೆ ಸ್ಥಾನಾಭಾಸದ ಅಳತೆಯೂ ಹೆಚ್ಚು ನಿಖರವಾಯಿತು. 61 ಸಿಗ್ನಿ ಎಂಬ ನಕ್ಷತ್ರಕ್ಕೆ ಬೆಸೆಲ್ ನಿರ್ಣಯಿಸಿದ ಸ್ಥಾನಾಭಾಸ 0.37 ಸೆಕೆಂಡ್. ಈಗ ಒಪ್ಪಿಕೊಂಡ ಬೆಲೆ 0.30 ಸೆಕೆಂಡ್. ಇದು ಸುಮಾರು 10 ಜ್ಯೋತಿರ್ವರ್ಷಗಳಿಗೆ ಸಂವಾದಿಯಾಗಿದೆ. ಸುಮಾರು 5 ಪಾರ್‌ಸೆಕ್‌ಗಳಿಂದ (16 ಜ್ಯೋತಿರ್ವರ್ಷ) ಕಡಿಮೆ ದೂರದ ನಕ್ಷತ್ರಗಳನ್ನು ಹತ್ತಿರದವು ಎನ್ನುವುದುಂಟು. ಸ್ಥಾನಾಭಾಸ ವಿಧಾನದಿಂದ ಅಳೆಯಲು ಸಾಧ್ಯವಾಗದ ನಕ್ಷತ್ರ ದೂರಗಳನ್ನು ಅಳೆಯಲು ಬೇರೆಯೇ ವಿಧಾನಗಳು ಈಗ ರೂಢಿಯಲ್ಲಿವೆ.

ಭೂಕಕ್ಷಾ ತ್ರಿಜ್ಯಕ್ಕೆ ಸ್ಥಾನಾಭಾಸ ಕೋನ ಒಂದು ಚಾಪ ಸೆಕೆಂಡ್ ಇರುವ ಖಗೋಲ ಕಾಯವು ಸೂರ್ಯನಿಂದ ಇರುವ ದೂರವೇ ಒಂದು ಪಾರ್‌ಸೆಕ್. ಈ ವ್ಯಾಖ್ಯೆಗೆ ಅನುಗುಣವಾಗಿ ಒಂದು ಪಾರ್‌ಸೆಕ್ ಎಷ್ಟು ಜ್ಯೋತಿರ್ವರ್ಷಗಳಿಗೆ ಸಮ? ಅದನ್ನು ಹೀಗೆ ತಿಳಿಯಬಹುದು.

ಚಿತ್ರೊ- 2 ರಲ್ಲಿ ತೋರಿಸಿದಂತೆ ಭೂಮಿ ಸೂರ್ಯನನ್ನು ತನ್ನ ಕಕ್ಷೆಯಲ್ಲಿ ಸುತ್ತುತ್ತಿರುವಾಗ E1 ಸ್ಥಾನದಿಂದ ಒಂದು ನಿರ್ದಿಷ್ಟ ನಕ್ಷತ್ರ (O)ದ ನೇರಕ್ಕೆ ಹಿನ್ನೆಲೆಯಲ್ಲಿರುವ ಒಂದು ನಕ್ಷತ್ರದ ಸ್ಥಾನವನ್ನು (A) ಗುರುತಿಸಿಕೊಳ್ಳಬೇಕು. ಹಾಗೂ 6 ತಿಂಗಳ ನಂತರ ಭೂಮಿ E2 ಸ್ಥಳಕ್ಕೆ ಬಂದಾಗ, ನೇರಕ್ಕೆ ಹಿನ್ನೆಲೆಯಲ್ಲಿರುವ ನಕ್ಷತ್ರದ ಸ್ಥಾನವನ್ನು (B) ಗುರುತಿಸಿಕೊಳ್ಳಬೇಕು. ಇದರಿಂದ ಸ್ಥಾನಾಭಾಸಕೋನ E1ÔE2 ಸಿಗುತ್ತದೆ. ಅದರ ಅರ್ಧ ಬೆಲೆ  ಒಂದು ಚಾಪ ಸೆಕೆಂಡ್ ಆಗಿರಲಿ.

ಪಾರ್‌ಸೆಕ್ ಮಾನದ ಅನುಕೂಲತೆಗಳೇನು? ಕಿಲೊಮೀಟರ್‌ಗಳಂಥ ಮಾನಗಳನ್ನು ಉಪಯೋಗಿಸುವಾಗ ನಕ್ಷತ್ರ ದೂರಗಳನ್ನು ಸೂಚಿಸಲು ಬಹಳ ದೊಡ್ಡ ಸಂಖ್ಯೆಯನ್ನು ಉಪಯೋಗಿಸಬೇಕಾಗುತ್ತದೆ. ಉದಾಹರಣೆಗೆ ಅತಿ ಹತ್ತಿರದ ನಕ್ಷತ್ರದ ದೂರವು 40,000,000,000,000 ಕಿಲೊಮೀಟರ್ ಎನ್ನುವುದಕ್ಕಿಂತ ಅದು 1.31 ಪಾರ್‌ಸೆಕ್ ಎನ್ನುವುದು ಎಷ್ಟು ಸುಲಭ!

ಪಾರ್‌ಸೆಕ್‌ಗೆ ಸಮನಾದ ದೂರವನ್ನು ಜ್ಯೋತಿರ್ವರ್ಷಗಳಲ್ಲಿ ಹೇಳುವಾಗ ಭಿನ್ನಾಂಶ ಅಥವಾ ದಶಮಾಂಶ ಬರುವುದಲ್ಲ! ಅಳತೆಯ ಒಂದು ಮಾನ ಸದಾ ಮತ್ತೊಂದು ಮಾನದ ಗುಣಕವಾಗಿರಬೇಕೆಂದು ನಿರ್ಬಂಧವೇನೂ ಇಲ್ಲ. ಒಂದು ಇಂಚಿಗೆ  2.54 ಸೆಂಟಿಮೀಟರ್‌ಗಳು ತಾನೆ? ಅಳತೆಯ ಎರಡು ಬೇರೆ ಬೇರೆ ಪದ್ಧತಿಗಳಲ್ಲಿ ಈ ಸಂಬಂಧವನ್ನು ಸದಾ ತಪ್ಪಿಸಲು ಸಾಧ್ಯವಾಗದು