ಸುತ್ತ ನಾಲ್ಕರ ಮಗ್ಗಿ ವಟಗುಡುವ ಕಪ್ಪೆ ;
ಬೇಸರದ ಮುಖ ಮಂಡಿಸಿದೆ ಕುರ್ಚಿಯಲಿ
ಕೆಸರ ಕುಪ್ಪೆ !
ಯಾವ ಮಾತಾಡಿದರು ಉಸಿರಿರದ ಕುಸಿದ ದನಿ
ಸಪ್ಪೆ ಸಪ್ಪೆ.

ನೂರಾರು ತೆರೆ ಬಂದು ರಪ್ಪನಪ್ಪಳಿಸಿರಲು
ಕುಸಿವ ದಡದಂತಿರುವ ಮುರುಕು ಒಡಲು
ಜನ್ಮ ಜನ್ಮಾಂತರದ ಕರ್ಮವಂಟಿದ ಹಾಗೆ
ವಿಶ್ವಭೂಪಟದಂಥ ಹಳೆಯ ಕೋಟು !
ಈ ಮುರುಕು ಕಟ್ಟಡಕೆ ಹರುಕು ಗೋಪುರದಂತೆ
ನಿಂತ ಪೇಟ,
ಶಿವ ಶಿವಾ ಇದು ಯಾವ ಮಾಟ ?

ಇದಕೊಂದು ಮನಸೆ ?- ನೂರು ಕನಸಿನ ಜರಡಿ !
ಪಾಳು ಕಗ್ಗವಿಯಲ್ಲಿ ಮೊರೆಯುತಿವೆ ಕೇಳು ಅದೊ
ನೂರು ಹುಲಿ ಕರಡಿ ;
ಇದ್ದ ದೇಗುಲ ಭಗ್ನ, ಬಾವಲಿಯ ಗರುಡಿ !

ಸುತ್ತ ಸಾಗಿದೆ ಮಗ್ಗಿ – ಮುರುಕು ಛಾವಣಿಯ ತಟ್ಟಿ
ಟೇಬಲ್ಲಿಗಾಗಾಗ ಬೆತ್ತವನು ಕುಟ್ಟಿ
ಮಗ್ನವಾಗಿದೆ ಪ್ರಾಣಿ ಚಿಂತೆಗಳ ಮುಟ್ಟಿ.

ಹೊಡೆದೀತೆ ಗಂಟೆ ?
ಯಾವಾಗ ಮುಗಿದೀತು ಈ ಗೋಳು ಸಂತೆ ?
ಈ ಬಾಳಿಗೂ ಒಂದು ಮುಗಿವಿಲ್ಲದುಂಟೆ ?
ಹೊಡೆಯದೇ ಇನ್ನಾದರೂ ಕಡೆಯ ಬಿಡುಗಡೆಯ ಗಂಟೆ ?