ನಾನು ಪೂಜ್ಯಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಮೊದಲಿಗೆ ತೀರಾ ಹತ್ತಿರದಿಂದ ಕಂಡದ್ದು ಯಾವಾಗ ಎಂಬುದನ್ನು ಈಗ ನೆನೆಸಿಕೊಳ್ಳುತ್ತಿದ್ದೇನೆ. ನನ್ನ ವ್ಯಕ್ತಿತ್ವದ ಒಂದು ಭಾಗ, ದಾವಣಗೆರೆಯ ಜಯದೇವ ವಿದ್ಯಾರ್ಥಿನಿಲಯ, ತುಮಕೂರಿಗೆ ಹತ್ತಿರದ ಶ್ರೀ ಸಿದ್ಧಗಂಗಾಮಠ ಮತ್ತು ಮೈಸೂರಿನ ಸುತ್ತೂರು ವಿದ್ಯಾರ್ಥಿನಿಲಯ ಇವುಗಳ ಆಶ್ರಯ ಹಾಗೂ ಪೋಷಣೆಗಳಿಂದ ಬೆಳೆಯಿತಾದರೂ, ಆಯಾ ಮಠಗಳ ಶ್ರೀಗುರುಗಳನ್ನು ಕುರಿತ ಭಯ-ಭಕ್ತಿಗಳ ಕಾರಣದಿಂದಲೋ ಏನೋ, ಸಾಕಷ್ಟು ಗೌರವಪೂರ್ವಕವಾದ ದೂರದಲ್ಲೇ ನಿಂತು ವ್ಯವಹರಿಸುವ ಸಂಕೋಚ ಪ್ರವೃತ್ತಿ ನನ್ನದು. ಹೀಗಾಗಿ, ಸುತ್ತೂರು ಮಠದ ಹಿಂದಿನ ಜಗದ್ಗುರುಗಳನ್ನು ಹೇಗೋ ಹಾಗೆಯೇ ಇಂದಿನ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನೂ ಬಹುಕಾಲ ಇಂಥ ‘ದೂರ’ ದಿಂದ ಕಂಡೆನೇ ಹೊರತು, ನಾನಾಗಿಯೇ ಅವರ ಕಣ್ಣಿಗೆ ಬೀಳುವಷ್ಟು ಹತ್ತಿರಕ್ಕೆ ಹೋದವನೆ ಅಲ್ಲ. ಆದರೆ ಪೂಜ್ಯ ಸ್ವಾಮಿಗಳ ಕಾರುಣ್ಯ ಅವರ ಶ್ರೀಮಠದ ‘ಜೋಳದ ಪಾಳಿಯ’ ಬಹುಸಂಖ್ಯಾತರಲ್ಲಿ ಒಬ್ಬನಾದ ನನ್ನನ್ನು, ಸಮಯ ಬಂದರೆ ಹತ್ತಿರಕ್ಕೆ ಕರೆಯುವ ಸಂದರ್ಭವೊಂದು ಪ್ರಾಪ್ತವಾಯಿತು: ೧೯೮೯ರ ಜೂನ್ ೧೦, ೧೧ನೇ ದಿನಾಂಕಗಳಲ್ಲಿ ಮೈಸೂರಿನ ಜೆ.ಎಸ್. ಎಸ್. ಕಾಲೇಜಿನಲ್ಲಿ, ಹಿಂದಿನ ಜಗದ್ಗುರುಗಳಾದ ಪೂಜ್ಯ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸ್ಥಾಪಿಸಿದ ಶ್ರೀ ಶಿವರಾತ್ರೀಶ್ವರ ದತ್ತಿನಿಧಿಯ ಆಶ್ರಯದಲ್ಲಿ ಏರ್ಪಡಿಸಲಾದ ಅಲ್ಲಮ ಪ್ರಭುವನ್ನು ಕುರಿತ ವಿಚಾರ ಸಂಕಿರಣದ ಗೋಷ್ಠಿಯೊಂದರ ಅಧ್ಯಕ್ಷತೆ ವಹಿಸುವಂತೆ, ಅದರ ವ್ಯವಸ್ಥಾಪಕರಿಂದ ಪತ್ರವೊಂದು ನನಗೆ ಬಂದಿತು. ಈ ವಿಚಾರ ಸಂಕಿರಣದ ಸಂದರ್ಭದಲ್ಲಿ, ಬಹುಶಃ ಮೊಟ್ಟ ಮೊದಲಿಗೆ ಪೂಜ್ಯ ಸ್ವಾಮಿಗಳನ್ನು ತೀರಾ ಹತ್ತಿರದಿಂದ ನಾನು ಕಂಡದ್ದು. ಗಂಭೀರವಾದ, ಆದರೆ ಯಾವ ಬಿಗುಮಾನವೂ ಇಲ್ಲದ ನಿಲುವಿನ, ಮಂದಸ್ಮಿತ ಮುಖಮುದ್ರೆಯ, ಈ ಸ್ವಾಮಿಗಳನ್ನು ಕಂಡು ನನಗೆ ತುಂಬ ಸಂತೋಷವಾಯಿತು; ಜತೆಗೆ ಅವರು ಕರ್ನಾಟಕ ವಿಶ್ವವಿದ್ಯಾಲಯ- ದಿಂದ ಕನ್ನಡ ಎಂ.ಎ. ಪಾಸುಮಾಡಿದವರೆಂಬ ಸಂಗತಿ, ಅವರು ನನಗೆ ಇನ್ನೂ ಹೆಚ್ಚು ಪ್ರಿಯರಾಗಲು ಕಾರಣವಾಯಿತು.

ಈ ವಿಚಾರ ಸಂಕಿರಣದ ವೇಳೆಗೆ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸುತ್ತೂರು ಸಂಸ್ಥಾನದ ಪಟ್ಟಾಧಿಕಾರವನ್ನು ವಹಿಸಿಕೊಂಡು ಕೇವಲ ಮೂರು ವರ್ಷಗಳಾಗಿದ್ದವು. ಹಿಂದಿನ  ಮಹಾಸ್ವಾಮಿಗಳು ಕಟ್ಟಿ ಬೆಳೆಯಿಸಿದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳನ್ನು ವಿಸ್ತರಿಸುವ ಹಾಗೂ ಕಾಲದ ಅಗತ್ಯಕ್ಕೆ ತಕ್ಕ ಹಾಗೆ ಹೊಸ ಆಯಾಮಗಳಲ್ಲಿ ರೂಪಿಸುವ ಜವಾಬ್ದಾರಿ ಅವರ ಹೆಗಲೇರಿತ್ತು. ಅಂದು ಏರ್ಪಟ್ಟ ಅಲ್ಲಮಪ್ರಭುವನ್ನು ಕುರಿತ ವಿಚಾರ ಸಂಕಿರಣ ಕೂಡಾ ಹಿಂದಿನ ಮಹಾಸ್ವಾಮಿಗಳು ಸ್ಥಾಪಿಸಿದ ದತ್ತಿನಿಧಿಯ ಮೊದಲ ಕಾರ್ಯಕ್ರಮವಾಗಿತ್ತು. ಈ ಸಂಕಿರಣದ ಮುಕ್ತಾಯ ಸಮಾರಂಭದ ‘ಆಶೀರ್ವಚನ’ ಕಾರ್ಯಕ್ರಮ ಪೂಜ್ಯ ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳ ಪಾಲಿನದಾಗಿತ್ತು ಈ ಸಂದರ್ಭದಲ್ಲಿ ನನ್ನ ಗಮನವನ್ನು ಸೆಳೆದ ಸಂಗತಿ ಎಂದರೆ: ಶ್ರೀ ಸ್ವಾಮಿಗಳು ವಿಚಾರ ಸಂಕಿರಣದ ಎಲ್ಲ ಗೋಷ್ಠಿಗಳಲ್ಲೂ ಉಪಸ್ಥಿತರಾಗಿದ್ದದ್ದು ಮಾತ್ರವಲ್ಲದೆ, ಪ್ರತಿಯೊಬ್ಬ ಉಪನ್ಯಾಸಕರ ಮಾತಿನಲ್ಲಿ ತಮಗೆ ಸೂಕ್ತ ಎಂದು ಕಂಡ ಅಂಶಗಳನ್ನು ಒಬ್ಬ ನಿಷ್ಠಾವಂತ ವಿದ್ಯಾರ್ಥಿಯ ಹಾಗೆ ಟಿಪ್ಪಣಿ ಮಾಡಿಕೊಳ್ಳುತ್ತ ಇದ್ದದ್ದು ಮತ್ತು ತಮ್ಮ ಸಮಾರೋಪ ಭಾಷಣದಲ್ಲಿ ಆ ಎಲ್ಲ ಸಂಗತಿಗಳನ್ನು ಕ್ರೋಡೀಕರಿಸಿ ಸಮೀಕ್ಷೆ ಮಾಡಿದ್ದು. ಅಲ್ಲಿಂದೀಚೆಗೆ ನಾನು ಅವರು ‘ಸಾನ್ನಿಧ್ಯ’ ವಹಿಸಿದ ಎಷ್ಟೋ ಸಮಾರಂಭಗಳನ್ನು ನೋಡಿದ್ದೇನೆ. ಯಾವುದೇ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ಬಂದು ಕೂತುಕೊಳ್ಳುವುದರಿಂದ ಮೊದಲುಗೊಂಡು, ಹೇಳಬೇಕಾದ್ದನ್ನು ಉಚಿತವಾಗಿ ಮತ್ತು ಅಚ್ಚುಕಟ್ಟಾಗಿ ಹೇಳಿ ಸಭೆಯ ಘನತೆಯನ್ನು ಕಾಯ್ದುಕೊಳ್ಳುವ ಅವರ ಶಿಸ್ತನ್ನು ನಾನು ತುಂಬ ಮೆಚ್ಚಿಕೊಂಡಿದ್ದೇನೆ. ಅವರ ಪ್ರೀತಿಯ ಆಹ್ವಾನದ ಮೇರೆಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ‘ನೀವು ನಮ್ಮಸುತ್ತೂರನ್ನು ನೋಡಿಯೆ ಇಲ್ಲವಲ್ಲ? ಬನ್ನಿ. ಒಳ್ಳೆಯ ಗೆಸ್ಟ್ ಹೌಸ್ ಇದೆ. ಎಷ್ಟು ದಿನಗಳಾದರೂ ಇದ್ದು ನಿಮ್ಮಬರವಣಿಗೆಯ ಕೆಲಸವನ್ನು ನಿರ್ವಹಿಸಲು ಸರಿಯಾದ ಸ್ಥಳ’ -ಎಂದು ಸ್ವಾಮಿಗಳು ಹಲವು ಸಲ ಆಹ್ವಾನಿಸಿದ್ದಾರೆ. ಅದಿನ್ನೂ ಸಾಧ್ಯವಾಗಿಲ್ಲ. ಆದರೆ ಈಚೆಗೆ ಒಂದೆರಡು ಸಲ ಒಂದು ದಿನದ ಕಾರ್ಯಕ್ರಮಕ್ಕೆ ಸುತ್ತೂರಿಗೆ ನಾನು ಹೋಗಬೇಕಾಗಿ ಬಂತು. ಕಪಿಲಾನದೀತೀರದ ತುಂಬ ಪ್ರಶಾಂತವಾದ ಗ್ರಾಮ ಸುತ್ತೂರು. ಸುತ್ತೂರು ಶ್ರೀಮಠದ ಪರಂಪರೆಯ ಮೂಲ ಕರ್ತೃವಿನ ಗದ್ದುಗೆ ಇರುವ ಸ್ಥಳ. ಅಲ್ಲೆ ಅನತಿ ದೂರದಲ್ಲಿ ನೋಡುತ್ತೇನೆ: ಹೊಸ ಬಗೆಯ ವಾಸ್ತು ಶೈಲಿಯಲ್ಲಿ ನಿರ್ಮಿತವಾದ ಎರಡು ಬೃಹದಾಕೃತಿಯ ಕಟ್ಟಡಗಳು ಮೈತಳೆದು ನಿಂತಿವೆ. ಅವುಗಳಲ್ಲಿ ಒಂದು ಶಾಲೆ ಮತ್ತೊಂದು ವಿದ್ಯಾರ್ಥಿನಿಲಯ. ಆಧುನಿಕವಾದ ಎಲ್ಲ ಅನುಕೂಲಗಳನ್ನೂ ಒದಗಿಸುವ ಈ ಅಶನ- ವಸತಿ- ಶಿಕ್ಷಣ ಸಮುಚ್ಚಯಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಎರಡು ಸಾವಿರದ ಐನೂರಕ್ಕೂ ಹೆಚ್ಚಿನ ಬಡಮಕ್ಕಳು ವಾಸಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಾ ಈ ಮಾದರಿಯ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವಿಲ್ಲದ ಈ ಹೊತ್ತಿನ ಸಂದರ್ಭದಲ್ಲಿ ಪೂಜ್ಯ ದೇಶಿಕೇಂದ್ರ ಸ್ವಾಮಿಗಳು ಯಾವುದೇ ಜಾತಿಯ ಪರಿಗಣನೆಯಿಲ್ಲದೆ ಎರಡು ಸಾವಿರದ ಐನೂರಕ್ಕೂ ಮೀರಿದ ಸಂಖ್ಯೆಯ ತೀರಾ ಬಡವರಾದ ಮಕ್ಕಳಿಗೆ, ಈ ಬಗೆಯ ಸೌಲಭ್ಯ ಮತ್ತು ಅವಕಾಶಗಳನ್ನು ಇಂಥ ಗ್ರಾಮಾಂತರ ಪರಿಸರದಲ್ಲಿ ಕಲ್ಪಿಸಿರುವುದು ಒಂದು ಪವಾಡವೇ ಸರಿ. ನಾನು ಅಂದು ಭಾಗವಹಿಸಿದ ಕಾರ್ಯಕ್ರಮದ ಹೊತ್ತಿನಲ್ಲಿ, ಅಷ್ಟೂ ಮಕ್ಕಳು ನೀಲಿಯಬಣ್ಣದ ಸಮವಸ್ತ್ರಗಳನ್ನು ತೊಟ್ಟು ಶಾಲೆಯ ಅಂಗಳದಲ್ಲಿ ಕ್ರಮಬದ್ಧವಾಗಿ ಕೂತದ್ದನ್ನು ಕಂಡಾಗ ನನಗೆ ಅನ್ನಿಸಿತು: ಸುತ್ತೂರು ಸ್ವಾಮಿಗಳ ಕರುಣೆಯ ಕಿರಣದಲ್ಲಿ ಅರಳಿದ ನೀಲಿಯ ಹೂವಿನ ತೋಟ ಇದು!

ಪೂಜ್ಯ ದೇಶಿಕೇಂದ್ರ ಮಹಾಸ್ವಾಮಿಗಳ ಈ ಜೀವಕಾರುಣ್ಯದ, ಮಾನವೀಯ ಅಂತಃಕರಣ ಅನಾವರಣಗೊಂಡ ಅಪರೂಪದ ಸಂದರ್ಭವೊಂದನ್ನು ನಾನೆಂದೂ ಮರೆಯಲಾರೆ. ಸುಮಾರು ಹತ್ತುವರ್ಷದ ಹಿಂದಿನ ಮಾತು. ೧೯೯೪ನೆಯ ಇಸವಿ. ತಿಂಗಳು ಯಾವುದೆಂದು ನೆನಪಿಲ್ಲ. ಈ ವೇಳೆಗಾಗಲೇ ಪೂಜ್ಯಶ್ರೀ ದೇಶಿಕೇಂದ್ರ ಸ್ವಾಮಿಗಳು ತಮ್ಮ ಅಪೂರ್ವ ಕ್ರಿಯಾಶೀಲತೆಯಿಂದ ಸಮಾಜ ಶಿಕ್ಷಣ ಹಾಗೂ ಸಂಸ್ಕೃತಿಗೆ ಸಂಬಂಧಪಟ್ಟ ಅದೆಷ್ಟೋ ಯೋಜನೆಗಳನ್ನು ಕಾರ‍್ಯರೂಪಕ್ಕೆ ತಂದು, ಅತ್ಯಂತ ದಕ್ಷ ಹಾಗೂ ದೂರದೃಷ್ಟಿಯ ಮಠಾಧೀಶರೆಂಬ ಮನ್ನಣೆಗೆ ಪಾತ್ರರಾಗಿದ್ದರು. ನಾನು, ನನ್ನ ಸ್ವಂತ ಕೆಲಸಗಳ ಸಲುವಾಗಿ ಯಾವತ್ತೂ ಯಾವ ಮಂತ್ರಿ ಮಹೋದಯರನ್ನಾಗಲೀ, ಅಧಿಕಾರಿಗಳನ್ನಾಗಲೀ, ಮಠಾಧೀಶರನ್ನಾಗಲೀ ಹೋಗಿ ನೋಡಲು ನಿರಾಕರಿಸಿ ಬದುಕಿದ ನಾನು, ಒಬ್ಬ ಬಡಹುಡುಗಿಯ ಪರವಾಗಿ ಪೂಜ್ಯ ಸ್ವಾಮೀಜಿಯವರನ್ನು ನೋಡಲೇ ಬೇಕಾದ ಸಂದರ್ಭವೊಂದು ನನಗೆ ಒದಗಿತು.

ಈ ಹುಡುಗಿ ಬೆಂಗಳೂರಿನ ಪದ್ಮನಾಭನಗರ ಬಡಾವಣೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದವಳು. ಏಳೆಂಟು ವರ್ಷ ವಯಸ್ಸು. ಎಳೆಯಂದಿನಲ್ಲೇ ತಾಯಿಯನ್ನು ಕಳೆದುಕೊಂಡವಳು; ತಂದೆ ಮಹಾಬೇಜವಾಬ್ದಾರಿಯ ಮನುಷ್ಯ; ಐದಾರುಮಕ್ಕಳು ಬೇರೆ; ಅವುಗಳಲ್ಲಿ ಒಬ್ಬಳಾದ ಈ ಹುಡುಗಿಗೆ, ಮಲತಾಯಿಯ ಕಿರುಕುಳ; ವಾಸಕ್ಕೆ ಎಂಥದೋ ಒಂದು ಇಕ್ಕಟ್ಟಾದ ಮನೆ. ಬಡತನದ ಕಾರಣದಿಂದ ಸ್ಕೂಲು ಬಿಡಿಸಿ ಮಗಳನ್ನು ಯಾವುದೋ ಅನಾಥಾಲಯಕ್ಕೆ ಸೇರಿಸುವ ಯೋಚನೆ ಅಪ್ಪನದು. ಇದನ್ನು ತಿಳಿದ ಆ ಶಾಲೆಯ ಉಪಾಧ್ಯಾಯಿನಿಯೊಬ್ಬರು, ಮನೆಗೆಲಸ ಮಾಡಿಕೊಟ್ಟು ನೆರವಾಗಲು ಹುಡುಗಿಯೊಬ್ಬಳು ಬೇಕೆಂದು ನಮ್ಮಮನೆಯವರು ಅವರಿವರಲ್ಲಿ ವಿಚಾರಿಸುತಿದ್ದುದನ್ನು ತಿಳಿದು, ನಮ್ಮಮನೆಗೆ ಬಂದು ‘ಈ ಹುಡುಗಿಯನ್ನು ನಿಮ್ಮ ಮನೆಗೆ ಕಳಿಸುತ್ತೇನೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುತ್ತಾಳೆ. ಜತೆಗೆ ಸ್ಕೂಲಿಗೂ ಹೋಗಿ ಬರುತ್ತಾಳೆ. ಮನೆಯಲ್ಲಿ ತಾಯಿಯಿಲ್ಲ; ಬಡತನ ಬೇರೆ ಎಂದು ನಮ್ಮನ್ನು ಒಪ್ಪಿಸಿದರು. ತುಂಬ ಲವಲವಿಕೆಯ ಹುಡುಗಿ. ಒಪ್ಪಿಕೊಂಡೆವು. ಐದಾರುವರ್ಷ ಅವಳ ಶಿಕ್ಷಣದ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡೆ. ಬಿಡುವಿನವೇಳೆಯಲ್ಲಿ ಮನೆಗೆಲಸವನ್ನು ಮಾಡುತ್ತಾ ಸ್ಕೂಲಿಗೂ ಹೋಗುತ್ತ, ಎಸ್. ಎಸ್.ಎಲ್.ಸಿ ಪರೀಕ್ಷೆಯನ್ನು ಪಾಸುಮಾಡಿಯೇ ಬಿಟ್ಟಳು. ಮುಂದೆ ಅವಳು ಓದಲಿ ಎನ್ನುವುದು ನಮ್ಮ ಅಪೇಕ್ಷೆಯಾದರೂ ಆಕೆ ಒಪ್ಪಲಿಲ್ಲ. “ಅಂಕಲ್ ಮೊದಲು ನನಗೆ ಏನಾದರೊಂದು ಕೆಲಸ ಕೊಡಿಸಿ, ಮನೆಯಲ್ಲಿ ನನ್ನ ಅಪ್ಪನಿಗೊಂದಷ್ಟು ಸಹಾಯವಾದೀತು. ಇನ್ನೂ ಓದಬೇಕಾದ ತಮ್ಮಂದಿರಿದ್ದಾರೆ” ಎಂದು ಪಟ್ಟು ಹಿಡಿದಳು. ಕೇವಲ ಎಸ್.ಎಸ್.ಎಲ್.ಸಿ. ಈ ಕಾಲಕ್ಕೆ ಯಾವ ಲೆಕ್ಕ? ಆದರೂ ಯಾರ‍್ಯಾರನ್ನೋ ವಿಚಾರಿಸಿದೆ. ಪ್ರಯೋಜನವಾಗಲಿಲ್ಲ. ಆ ವೇಳೆಗೆ ಬೆಂಗಳೂರಿನ ಬನಶಂಕರಿ ಬಡಾವಣೆಯೊಳಗೆ ಸುತ್ತೂರು ಸ್ವಾಮಿಗಳ ‘ಜೆಎಸ್ಸೆಸ್ ಪಬ್ಲಿಕ್ ಸ್ಕೂಲ್’ ಹೊಸ ಕಟ್ಟಡದ ಸಮೇತ ಪ್ರಾರಂಭವಾಯಿತು. ಈ ಶಾಲೆಗೆ ಸಹಜವಾಗಿಯೇ ಈ ಹಂತದಲ್ಲಿ ಕಛೇರಿ ಕೆಲಸಕ್ಕೆ ಕೆಳದರ್ಜೆಯ ನೌಕರರನ್ನು ತೆಗೆದುಕೊಳ್ಳುವ ಅಗತ್ಯ ಇರಬಹುದೆಂದು ಭಾವಿಸಿ, ಯಾಕೆ ನಾನೇ ಹೋಗಿ ಪೂಜ್ಯ ಸ್ವಾಮಿಗಳನ್ನು ನೋಡಬಾರದು ಎನ್ನಿಸಿತು. ಮೈಸೂರಿಂದ ಸ್ವಾಮಿಗಳು ಬೆಂಗಳೂರಿಗೆ ಬಂದಾಗ ‘ಸುತ್ತೂರು ಸದನ’ದಲ್ಲಿ ಉಳಿದುಕೊಳ್ಳುತ್ತಾರೆ ಎನ್ನುವುದನ್ನು ತಿಳಿದು ಅಂಥ ಒಂದುದಿನ ಸುತ್ತೂರು ಸದನದಲ್ಲಿ ಸ್ವಾಮಿಜಿಯವರನ್ನು ಭೆಟ್ಟಿಯಾಗಲು ಹೋದೆ. ಬಹಳ ಜನ ಸಂದರ್ಶಕರಿದ್ದರು. ನನ್ನ ಸರದಿ ಬಂದಾಗ ಹೋಗಿ ಕಂಡೆ. ‘ಏನು ಸಮಾಚಾರ? ಈಚೆಗೆ ಏನು ಬರೆಯುತ್ತಿದ್ದೀರಿ’ ಇತ್ಯಾದಿ ವಿಚಾರಿಸಿದರು. ಆದರೆ ನಾನು ಪ್ರಸ್ತಾಪಿಸಲೆಂದು ಬಂದ ವಿಷಯವನ್ನು ಹೇಗೆ ಹೇಳುವುದೆಂದು ತೋಚದೆ, ಹಿಂಜರಿಕೆಯಿಂದ ಹಿಂದಕ್ಕೆ ಬಂದೆ. ಇದಾದ ಹದಿನೈದು ದಿನಗಳ ನಂತರ ಬೆಂಗಳೂರಿನಲ್ಲಿ ಒಂದು ಕಡೆ ಸ್ವಾಮಿಗಳ ಕಾರ್ಯಕ್ರಮವಿತ್ತು. ಸಭೆ ಮುಗಿದಾಗ ಕಾಣಿಸಿಕೊಂಡು ‘ತಮ್ಮಜತೆ ತುರ್ತಾಗಿ ಮಾತನಾಡಬೇಕಾಗಿದೆ’ ಎಂದೆ. ಅವರು ನಕ್ಕು ಅದಕ್ಕೇನಂತೆ, ನಾಳೆ ಬೆಳಿಗ್ಗೆ ಸುತ್ತೂರು ಸದನದಲ್ಲಿ ಎಂಟೂವರೆ ಗಂಟೆಗೆ ಬಂದು ನೋಡಿ ಎಂದರು. ಹೋದೆ. ವಿಷಯವೇನೆಂಬುದನ್ನು ಹೇಳಿದೆ. ಜೆಎಸ್ಸೆಸ್ ಪಬ್ಲಿಕ್ ಸ್ಕೂಲಿನ ಕಛೇರಿ ಸಿಬ್ಬಂದಿಯಲ್ಲಿ ಕ್ಲರ್ಕಾಗಿಯೋ, ಅದೂ ಆಗದಿದ್ದರೆ ಅಟೆಂಡರ್ ಆಗಿಯೋ ಈ ಹುಡುಗಿಗೆ ಅವಕಾಶಮಾಡಿಕೊಡಿ ಎಂದೆ. ಅವರೆಂದರು ಅಟೆಂಡರ್ ಕೆಲಸ ಬೇಡ; ಕ್ಲರ್ಕ್ ಕೆಲಸಕ್ಕೂ ಈಗ ಗರಿಷ್ಠ ವಿದ್ಯಾರ್ಹತೆ ಪಿ.ಯು.ಸಿ. ಹ್ಯಾಗೂ ಎಸ್.ಎಸ್.ಎಲ್.ಸಿ ಪಾಸಾಗಿದೆ ಅನ್ನುತ್ತೀರಿ. ಯಾವುದಾದರೂ ‘ಜಾಬ್ ಓರಿಯಂಟೆಡ್’ ಶಿಕ್ಷಣ ಕೊಡಿಸಿದರೆ ಒಳ್ಳೆಯದು. ಒಂದು ಕೆಲಸಮಾಡಿ. ಈ ಹುಡುಗಿಯನ್ನು ಮೈಸೂರಿಗೆ ಕರೆದುಕೊಂಡು ಬನ್ನಿ, ನಮ್ಮ ಕಾಲೇಜಿನಲ್ಲೆ ಯಾವುದಾದರೂ ವೃತ್ತಿ ಶಿಕ್ಷಣ ತರಬೇತಿಗೆ ಸೇರಿಸೋಣ ಎಂದರು. ನಾನೆಂದೆ ‘ಅಷ್ಟಾದರೆ ಸಾಕು ಸ್ವಾಮೀಜೀ, ಈ ಶಿಕ್ಷಣದ ಫೀಜು ಇತ್ಯಾದಿಗಳ ಜವಾಬ್ದಾರಿ ನನಗಿರಲಿ. ಆದರೆ ಅವಳ ಅಶನ ವಸತಿಯದೊಂದೇ ಸಮಸ್ಯೆ?’. ‘ಇರಲಿ ಏನಾದರೂ ಮಾಡೋಣ. ಮುಂದಿನ ವಾರವೇ ಬನ್ನಿ. ಈ ತಿಂಗಳ ಕೊನೆಯಲ್ಲಿ ನಾನು ಅಮೆರಿಕಾ ಪ್ರವಾಸ ಹೊರಟಿದ್ದೇನೆ’ ಎಂದರು ಸ್ವಾಮಿಗಳು.

ವಾರವೊಂದರ ನಂತರ ಆ ಹುಡುಗಿಯನ್ನು ಕರೆದುಕೊಂಡು ಮೈಸೂರಿಗೆ ಹೋಗಿ ಮಠದಲ್ಲಿ ಸ್ವಾಮಿಗಳನ್ನು ಭೆಟ್ಟಿಯಾದೆ. ‘ಮೊದಲು ಊಟಮಾಡಿ’- ಎಂದರು. ಅನಂತರ ಕಾಲೇಜಿನ ಪ್ರಿನ್ಸಿಪಾಲರಿಗೆ ಫೋನ್ ಮಾಡಿದರು. ಹೋದೆ. ಪ್ರಿನ್ಸಿಪಾಲ್ ಸುಬ್ಬಣ್ಣನವರು ನನ್ನ ಹಳೆಯ ಪಳಕೆಯವರು. ‘ಬುದ್ಧಿಯವರು ಅಪ್ಪಣೆ ಮಾಡಿದ ಮೇಲೆ ಮುಗೀತು. ನೀವು ನಿಶ್ಚಿಂತೆಯಿಂದ ಇರಿ’ ಎಂದರು. ಲ್ಯಾಬ್ ಟೆಕ್ನೀಷಿಯನ್ ಕೋರ್ಸ್‌ಗೆ ಸೇರಿಸಿಕೊಂಡರು. ಸಾಕಷ್ಟು ಡೊನೇಷನ್ ಕೊಟ್ಟು ಸೇರುವವರು ಸಾಲುನಿಂತ ಈ ಕೋರ್ಸಿಗೆ, ಸ್ವಾಮಿಗಳ ಕೃಪೆಯಿಂದ ಈ ಹುಡುಗಿಗೆ ಅನಾಯಾಸವಾಗಿ ಸೀಟು ಸಿಕ್ಕಿತು. ಫೀಜು ಕಟ್ಟಿ, ಆ ಹುಡುಗಿಯನ್ನು ಕರೆದುಕೊಂಡು ಮಠಕ್ಕೆ ಬಂದೆ. ಸ್ವಾಮಿಗಳ ಜತೆ ಯಾರೋ ಮಂತ್ರಿಗಳು ಮಾತನಾಡುತ್ತಿದ್ದಾರೆ, ಸ್ವಲ್ಪ ಕಾಯಿರಿ ಎಂದರು- ಬಾಗಿಲಲ್ಲಿದ್ದವರು. ಒಂದರ್ಧ ಘಂಟೆಯನಂತರ ಮಾನ್ಯ ಮಂತ್ರಿಗಳು ತಮ್ಮ ಪರಿವಾರ ಸಮೇತ ಹೊರಗೆ ಬಂದು ದೊಡ್ಡಕಾರುಗಳಲ್ಲಿ ಕೂತು ಧೂಳೆಬ್ಬಿಸಿಕೊಂಡು ಹೋದರು. ನಾನು ಒಳಗೆ ಹೋಗಿ ಸ್ವಾಮಿಗಳನ್ನು ಕಂಡು ವಿಷಯವನ್ನು ವರದಿ ಮಾಡಿದೆ. ಅವರೆಂದರು: ‘ಒಳ್ಳೆಯದು. ನೀವತ್ತ ಹೋದಮೇಲೆ ಯೋಚನೆ ಮಾಡಿದೆ, ಈ ಹುಡುಗಿಗೆ ಯಾವುದಾದರೂ ಹಾಸ್ಟಲ್‌ನಲ್ಲಿ ಅವಕಾಶ ಮಾಡಿ ಕೊಡೋಣ.’ ಹೀಗೆ ಹೇಳಿ ಫೋನ್ ತೆಗೆದುಕೊಂಡು ಸರಸ್ವತೀಪುರದ ಮಹಿಳಾವಿದ್ಯಾರ್ಥಿನಿ ನಿಲಯದ ವಾರ್ಡನ್‌ಗೆ, ಈ ಹುಡುಗಿಯನ್ನು ಸೇರಿಸಿಕೊಳ್ಳಲು ಆದೇಶಿಸಿ ‘ಅವಳಿಂದ ಅವಳ ಶಿಕ್ಷಣ ಮುಗಿಯುವವರೆಗೂ ಯಾವುದೇ ಶುಲ್ಕ ತೆಗೆದುಕೊಳ್ಳತಕ್ಕದ್ದಲ್ಲ’ -ಎಂದು  ಅಪ್ಪಣೆ ಮಾಡಿದರು. ನನಗೆ ತುಂಬ ಆಶ್ಚರ್ಯವಾಯಿತು. ಇಷ್ಟೊಂದು ದೇಶೋ ವಿಶಾಲವಾದ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಹಾಗೂ ನಿರ್ವಹಿಸುವ ಜವಾಬ್ದಾರಿ; ಬೆಳಿಗ್ಗೆಯಿಂದ ಸಂಜೆವರೆಗೆ ಬಿಡುವಿಲ್ಲದ ಕಾರ್ಯಕ್ರಮಗಳ ಭರಾಟೆ; ಬರುವ ಹೋಗುವ ಸಂದರ್ಶಕರೊಂದಿಗೆ ಮಾತುಕತೆ; ಜತೆಗೆ ವಿದೇಶ ಪ್ರವಾಸದ ಸಂದರ್ಭ ಬೇರೆ. ಈ ಎಲ್ಲದರ ನಡುವೆಯೂ ಒಬ್ಬ ಬಡ ಹುಡುಗಿಯ ಶಿಕ್ಷಣದ ವ್ಯವಸ್ಥ್ಥೆಯ ಬಗ್ಗೆ ಅದೇ ತೂಕದ ಕಾಳಜಿ. ಇದಲ್ಲವೆ ನಿಜವಾದ ಔದಾರ್ಯ ಎನ್ನಿಸಿತು. ಮನಸ್ಸು ಕೃತಜ್ಞತೆಯಿಂದ ಮೂಕವಾಯಿತು.

ಸಾಕಷ್ಟು ಸ್ಥಿತಿವಂತರ ಮಕ್ಕಳಿಗೆ ಉದ್ದೇಶಿತವಾದ, ತಿಂಗಳಿಗೆ ನಾನೂರು- ಐನೂರು ರೂಪಾಯಿಗಳ ಖರ್ಚು ತಗಲುವ, ಈ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ, ಈ ಬಡಹುಡುಗಿ ಉಚಿತವಾದ ಅವಕಾಶವನ್ನು ಪಡೆದು ಮೂರುವರ್ಷ ಓದಿ, ಉತ್ತಮದರ್ಜೆಯಲ್ಲಿ ತೇರ್ಗಡೆಯಾದಳು. ಅಷ್ಟೂವರ್ಷ ಆ ಹುಡುಗಿಯ ಕಾಲೇಜಿನ ಫೀಜು ಇತ್ಯಾದಿಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ನನಗೇನೂ ಕಷ್ಟವಾಗಲಿಲ್ಲ. ಈ ವೃತ್ತಿ ಶಿಕ್ಷಣದಿಂದ ಈ ಹುಡುಗಿಗೆ ಕೊಡಗಿನ ಆಸ್ಪತ್ರೆಯೊಂದರಲ್ಲಿ ಕೆಲಸ ಸಿಕ್ಕಿತು. ಒಂದೂವರೆ ವರ್ಷದ ಹಿಂದೆ ಮದುವೆಯೂ ಆಯಿತು.

ಕೆಲವು ತಿಂಗಳ ಹಿಂದೆ ಮೈಸೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಪೂಜ್ಯ ಸ್ವಾಮಿಗಳನ್ನು ಭೆಟ್ಟಿಯಾಗುವ ಸಂದರ್ಭಬಂತು. ಮಾತಿನ ನಡುವೆ ಸ್ವಾಮೀಜಿ ಕೇಳಿದರು. ‘ಹಿಂದೆ ನೀವು ಕರೆದುಕೊಂಡು ಬಂದಿದ್ದಿರಲ್ಲ, ಆ ಹುಡುಗಿ ಹೇಗಿದ್ದಾಳೆ,  ಎಲ್ಲಿದ್ದಾಳೆ?’ ನಾನೆಂದೆ ‘ಸ್ವಾಮೀಜಿ ಸುಮಾರು ಹತ್ತುವರ್ಷಗಳ ಹಿಂದಿನ ಸಂಗತಿ ಇದು. ಇಷ್ಟು ಸಣ್ಣ ವಿಷಯವನ್ನು ನಿಮ್ಮ ಈ ಅಸಂಖ್ಯ ಕಾರ‍್ಯಭಾರಗಳ ನಡುವೆಯೂ ನೆನಪಿಟ್ಟು ಕೊಂಡಿದ್ದೀರಲ್ಲ, ಹೇಗೆ?’ ಎಂದೆ. ಅವರು ನಕ್ಕು ಹೇಳಿದರು: ‘ಯಾವುದೂ ಸಣ್ಣದಲ್ಲ.’

ಹೌದು. ದೊಡ್ಡವರಿಗೆ ಯಾವುದೂ ಸಣ್ಣದಲ್ಲ. ಯಾವುದೂ ಸಣ್ಣದಲ್ಲ ಎಂದು ತಿಳಿದವರು ಮಾತ್ರ ದೊಡ್ಡದನ್ನು ಕಟ್ಟಬಲ್ಲರು. ದೊಡ್ಡದಾಗಿ ಬದುಕಬಲ್ಲರು.

ಯಾವುದೂ ಸಣ್ಣದಲ್ಲ : ೨೦೦೪