ಇರುಳೆಲ್ಲ ಶೆಖೆಯ ಕಾರಣ ನಿದ್ರೆಬಾರದಾಗಿತ್ತು. ಜತೆಗೆ ಬೆಳಿಗ್ಗೆ ಆದಷ್ಟು ಬೇಗ ವಿಮಾನನಿಲ್ದಾಣಕ್ಕೆ ಹೋಗಬೇಕೆಂಬ ಕಾತರ. ಹೀಗಾಗಿ ಐದೂವರೆಗೇ ಎದ್ದು ಸಿದ್ಧವಾಗಿ, ಏಳು ಗಂಟೆಯ ವೇಳೆಗೆ ಪಾಲಂ ವಿಮಾನ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಕ್ಯೂನಲ್ಲಿ ಹಾಜರಾದೆ. ಡಾ. ಮ್ಯಾಥ್ಯೂ ಅವರು ನನಗಿಂತ ಮೊದಲೇ ಬಂದು ತಮ್ಮ ಟಿಕೆಟ್ಟನ್ನು ಪರಿಶೀಲನೆಗೆ ಒಳಪಡಿಸಿ, ತಮ್ಮ ಸಾಮಾನುಗಳನ್ನು ಸಾಗಿಸುವ ಅಧಿಕಾರಿಗಳಿಗೆ ಒಪ್ಪಿಸಿ, ನನಗಾಗಿ ಕಾದಿದ್ದರು.

ದೆಹಲಿಯಿಂದ ಮಾಸ್ಕೋಗೆ ಏರ್ ಇಂಡಿಯಾ ವಿಮಾನ ವಾರಕ್ಕೆ ಎರಡು ಸಲ ಹೋಗಿ ಬರುತ್ತದೆ – ಭಾನುವಾರ ಮತ್ತು ಮಂಗಳವಾರ. ಈ ಸಲವಂತೂ ಮಂಗಳವಾರದ ವಿಮಾನ ರದ್ದಾದ್ದರಿಂದ ನಮಗೆ ಭಾನುವಾರವೇ ಹೊರಡಲು ಹೇಳಿ, ಟಿಕೆಟ್ಟುಗಳನ್ನು ಮುಂಗಡವಾಗಿ ಕೊಡಲಾಗಿತ್ತು. ವಿಮಾನ ಮಾಸ್ಕೋಗೆ, ಹೊರಡುವುದು ಬೆಳಿಗ್ಗೆ ೮.೩೦ಕ್ಕೆ. ಅದರಿಂದ ಒಂದು ಗಂಟೆ ಮೊದಲೆ ಕ್ಯೂ ಸೇರಿ ನನ್ನ ಟಿಕೆಟ್ಟಿನ ಪರಿಶೀಲನೆಗೆ ಕಾದಿದ್ದೆ.

ಸುಮಾರು ನಲವತ್ತು ನಿಮಿಷದ ವೇಳೆಗೆ ನನ್ನ ಮುಂದಿನ ಕ್ಯೂ ಕರಗಿ ನಾನು ಟಿಕೆಟ್ಟನ್ನು ಪರಿಶೀಲಿಸುವ ಅಧಿಕಾರಿಯ ಎದುರಿಗೆ  ನಿಂತೆ. ಆತ ನನ್ನ ಟಿಕೆಟ್ ಅನ್ನು ಪರಿಶೀಲಿಸುತ್ತ ಇದ್ದ ಹಾಗೆ, ಅವನ ಹಿಂದಿನ ಕೊಠಡಿಯಿಂದ ಅವಸರದಿಂದ ಮತ್ತೊಬ್ಬ ಅಧಿಕಾರಿ ಬಂದ. ನನ್ನ ಹೆಸರು ಕೇಳಿದ. ಒಡನೆಯೆ ಜೇಬಿನಿಂದ ಒಂದು ಪತ್ರವನ್ನು ತೆರೆದು ನನ್ನೆದುರು ಹಿಡಿದ. ಅದು ರಷ್ಯಾದಿಂದ ಯು. ಜಿ. ಸಿ. ಅಧಿಕಾರಿಗಳಿಗೆ ಬಂದ ಟೆಲೆಕ್ಸ್ ಸುದ್ದಿ : “ಮಾಸ್ಕೋದಲ್ಲಿ ಈಗ ವಾರಾಂತ್ಯವಾದ್ದರಿಂದ, ಇಂಡಿಯಾದಿಂದ ಬರುವ ಇಬ್ಬರು ಪ್ರೊಫೆಸರ್‌ಗಳನ್ನು ಈಗ ಏರ್ ಇಂಡಿಯಾದ ಮೂಲಕ ಕಳುಹಿಸಬೇಡಿ; ವಸತಿಯ ಬಗ್ಗೆ ಖಚಿತಪಡಿಸಿಕೊಂಡ ನಂತರ ಅವರನ್ನು ಕಳುಹಿಸುವುದು.” ಎಂದರೆ ಇದರರ್ಥ ಇನ್ನರ್ಧ ಗಂಟೆಯಲ್ಲಿ ಮಾಸ್ಕೋಗೆ ಹೊರಡಲಿರುವ ವಿಮಾನವನ್ನು ನಾವು ಏರುವಂತಿಲ್ಲ – ಎಂಬುದು ! ಸುದ್ದಿಯನ್ನು ತಿಳಿಸಿದ ಅಧಿಕಾರಿ ನಮಗಾದ ತೊಂದರೆಗೆ ವಿಷಾದಿಸಿ, ಈ ಸುದ್ದಿಯನ್ನು ನಿನ್ನೆ ಸಂಜೆಯೇ ಯು. ಜಿ. ಸಿ, ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ. ನಿಜಕ್ಕೂ ನನಗೆ ಮತ್ತು ಮ್ಯಾಥ್ಯೂ ಅವರಿಗೆ ಆಶ್ಚರ್ಯವಾಯಿತು. ಮ್ಯಾಥ್ಯೂ ಅವರ ಸಾಮಾನುಗಳು ಆಗಲೇ ನಿಲ್ದಾಣವನ್ನು ದಾಟಿ ವಿಮಾನದ ಬಳಿ ಹೋಗಿದ್ದವುಗಳನ್ನು ಕೂಡಲೆ ಹಿಂದಕ್ಕೆ ತರಿಸಿ ಅವರಿಗೆ ಟಿಕೆಟ್ ಸಮೇತ ಒಪ್ಪಿಸಲಾಯಿತು. ನಾವು ಏನು ಮಾಡಲು ತೋಚದೆ ನಿಂತಹಾಗೆಯೇ, ಮಾಸ್ಕೋಗೆ ಹೊರಡಲಿದ್ದ ಏರ್ ಇಂಡಿಯಾ ವಿಮಾನ ೮.೩೦ ಕ್ಕೆ ಸರಿಯಾಗಿ ಹೊರಟೇ ಹೋಯಿತು. ಹೊರಡಬೇಕಾಗಿದ್ದ ನಾವಿಬ್ಬರು ಅಸಹಾಯಕರಾಗಿ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ನಿಂತೆವು. ನಾಟಕದ ‘ಟ್ರಾನ್ಸ್‌ಫರ್‌ಸೀನ್’ನಂತೆ ನಡೆದ ಈ ಘಟನೆಯ ತಲೆ-ಬಾಲಗಳು ನಮಗೆ ಅರ್ಥವಾಗಲಿಲ್ಲ. ಯು. ಜಿ. ಸಿ. ಯವರಿಗೆ ಈ ಸುದ್ದಿ ನಿನ್ನೆ ಸಂಜೆಯೇ ತಿಳಿದಿದ್ದರೆ, ಅವರೇಕೆ ಮೊದಲೆ ಬಂದು ಇಲ್ಲಿ ಆ ಸುದ್ದಿಯನ್ನು ತಿಳಿಸಲಿಲ್ಲ? ಯಾವ ಪೂರ್ವಭಾವಿಯಾದ ಸಿದ್ಧತೆಗಳನ್ನೂ ಮಾಡದೆ, ನಮ್ಮ ವಸತಿ ಇತ್ಯಾದಿಗಳ ಬಗ್ಗೆ ಖಚಿತಪಡಿಸಿಕೊಳ್ಳದೆ ನಮ್ಮ ಕೈಗೆ ಟಿಕೆಟ್ಟುಗಳನ್ನು ಕೊಟ್ಟು, ಹೀಗೆ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ತ್ರಿಶಂಕುಗಳನ್ನಾಗಿ ಮಾಡಿದ್ದೇಕೆ? ಇದಕ್ಕೆ ಯಾರು ಹೊಣೆ ? ಮಾಸ್ಕೋದಂಥ ಮಹಾನಗರದಲ್ಲಿ ಇಬ್ಬರು ಭಾರತೀಯ ಪ್ರೊಫೆಸರ್‌ಗಳನ್ನು ಉಳಿಸಿಕೊಳ್ಳಲು ವಸತಿಸೌಕರ್ಯವಿಲ್ಲ ಎಂದರೆ ಏನರ್ಥ ? ಆ ಕಾರಣಕ್ಕೆ, ಹೊರಟವರನ್ನು ಹಿಂದಕ್ಕೆ ತಡೆದು ನಿಲ್ಲಿಸುವ ಅಗತ್ಯವಿತ್ತೆ ? ಮತ್ತೆ ಹೊರಡುವುದು ಯಾವಾಗ ? ಮಂಗಳವಾರದ ವಿಮಾನ ರದ್ದಾಗಿರುವಾಗ, ಮತ್ತೆ ಮುಂದಿನ ಭಾನುವಾರದವರೆಗೂ ದಿಲ್ಲಿಯಲ್ಲಿ ನಾವೇನು ಮಾಡಬೇಕು ? ಇತ್ಯಾದಿ ಪ್ರಶ್ನೆಗಳು ನಮ್ಮ ತಲೆ ತಿನ್ನತೊಡಗಿದವು. ರಷ್ಯನ್ ರಾಯಭಾರಿ ಕಛೇರಿಯ ಮುಚ್ಚುವ  ಬಿಚ್ಚುವ ಕಿಟಕಿಯ ನೆನಪು ಬಂತು. ಅಂತೂ ಮರುದಿನ ಯು. ಜಿ. ಸಿ. ಕಚೇರಿಯ ಬಾಗಿಲು ತೆರೆಯವ ತನಕ ನಾವು ಯಾರನ್ನೂ ವಿಚಾರಿಸುವ ಹಾಗಿರಲಿಲ್ಲ. ಮತ್ತೆ ಟ್ಯಾಕ್ಸಿ ಮಾಡಿಕೊಂಡು ನಮ್ಮನ್ನು ಬೀಳ್ಕೊಡಲು ಬಂದ ಗೆಳೆಯರ ಜತೆಗೆ ಭಾನುವಾರದ ಬೀದಿಯಲ್ಲಿ ಹಿಂದಕ್ಕೆ ಹೊರಟೆವು, “ನೋಡಿದಿರಾ, ಯಾವ ದೇಶಕ್ಕೆ ಬೇಕಾದರೂ ಹೋಗಬಹುದು. ಆದರೆ ರಷ್ಯಾಕ್ಕೆ ಹೋಗುವುದು ಅಷ್ಟು ಸುಲಭವೆ” ಎಂದು  ನಮ್ಮ ಮಿತ್ರರು ಹಾಸ್ಯ ಮಾಡಿದರು. “ಸರಿ, ಹೋಗದಿದ್ದರೇನಾಯಿತು. ನಿಮ್ಮ ಮನೆ ಇದೆಯಲ್ಲ; ರಷ್ಯಾದಲ್ಲಿ ಕಳೆಯಬೇಕಾದ ಮೂರು ವಾರಗಳನ್ನು ನಿಮ್ಮ ಮನೆಯಲ್ಲೇ ಕಳೆಯುತ್ತೇವೆ”  ಎಂದೆವು. ಹತ್ತೂವರೆಯ ವೇಳೆಗೆ ಹಿಂದಕ್ಕೆ ಬಂದ ನನ್ನನ್ನು ಕಂಡು ನನ್ನ ಮಿತ್ರರ ಮಡದಿ ಮಕ್ಕಳಿಗೆ ಆಶ್ಚರ್ಯಾಘಾತ.