Categories
ಕನ್ನಡ

ಉಳ್ಳೂರು ನಾಗೇಂದ್ರ ಉಡುಪ

ಸಾಂಪ್ರದಾಯಿಕವಾಗಿ, ಸಾಂಸ್ಕೃತಿಕವಾಗಿ ಬಹಳ ಸಿರಿವಂತ ಮನೆತನದಿಂದ ಬಂದವರು ಶ್ರೀ ಉಳ್ಳೂರು ನಾಗೇಂದ್ರ ಉಡುಪ. ತಂದೆ ಶ್ರೀ ಉಳ್ಳೂರು ಸುಬ್ರಾಯ ಉಡುಪ ಒಳ್ಳೆಯ ಸಂಸ್ಕೃತ ವಿದ್ವಾಂಸರು ಮತ್ತು ಸಾಹಿತ್ಯ-ಸಂಸ್ಕೃತಿಗಳ ಆರಾಧಕರು. ಸೋದರಮಾವ ಬಲವಾಡಿ ವೆಂಕಟರಮಣ ಹೆಬ್ಬಾರರು ರಾಮಾಶ್ವಮೇಧ ರಚಿಸಿದ ಮುದ್ದಣ್ಣನಿಗೆ ಮಾರ್ಗದರ್ಶನ ನೀಡಿದ ಪಂಡಿತರು. ಸುಪ್ರಸಿದ್ಧ ಮೃದಂಗ ವಿದ್ವಾಂಸರಾದ ಶ್ರೀ ಸಿ. ಸುಬ್ಬು ಅವರ ಬಳಿ ಮೃದಂಗ ಶಿಕ್ಷಣ ಪಡೆದು ವಿದ್ವತ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಶ್ರೇಯಾಂಕ ಗಳಿಸಿದ್ದ ಪ್ರತಿಭಾವಂತರು ಉಡುಪರು.

ಯಕ್ಷಗಾನ ಮದ್ದಲೆ ವಾದನದ ಮೂಲಕ ತಮ್ಮ ಕಲಾ ಪಯಣವನ್ನು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಆರಂಭಿಸಿದ ನಾಗೇಂದ್ರ ಉಡುಪರು ನಂತರ ಹಿಂದಿರುಗಿ ನೋಡಿದ್ದೇ ಇಲ್ಲ, ದೇಶ ವಿದೇಶಗಳಲ್ಲಿ ಶ್ರೀಯುತರು ಮೃದಂಗ ಪಕ್ಕವಾದ್ಯ ನುಡಿಸಿದ ಕಾರ್ಯಕ್ರಮಗಳ ಸಂಖ್ಯೆ ಮೂರು ಸಾವಿರಕ್ಕೂ ಅಧಿಕ ಅನ್ನುವುದು ವಿಶೇಷ. ಸಂಗೀತ ಕ್ಷೇತ್ರದ ದಿಗ್ಗಜರುಗಳಾದ ಎನ್‌.ರಮಣಿ, ಮ್ಠಹಾರಾಜಪುರಂ ಸಂತಾನಂ, ಕದ್ರಿ ಗೋಪಾಲನಾಥ್‌, ಆರ್.ಕೆ. ಶ್ರೀಕಂಠನ್‌, ಆರ್.ಕೆ. ಸೂರ್ಯನಾರಾಯಣ ಮುಂತಾದವರಿಗೆ ಮೃದಂಗ ಪಕ್ಕವಾದ್ಯ ನುಡಿಸಿದ ಅನುಭವ ಉಡುಪರದ್ದು. ಗಾಯನದಷ್ಟೇ ಸಮರ್ಥವಾಗಿ ಕೊಳಲು, ವೀಣೆ, ಸ್ಯಾಕ್ಸಾಫೋನ್‌, ಪಿಟೀಲು ಮುಂತಾದ ವಾದ್ಯಗಳಿಗೂ ಮೃದಂಗ ಸಹಕಾರ ನೀಡುವ ಪ್ರತಿಭಾವಂತರು ಶ್ರೀಯುತರು.

ಬೆಂಗಳೂರು, ನವದೆಹಲಿ, ಹೈದರಾಬಾದ್‌, ಕೋಲ್ಕತ್ತಾ, ತಿರುಪತಿ ಮುಂತಾದ ಭಾರತೀಯ ನಗರಗಳಲ್ಲದೆ, ನಾಗೇಂದ್ರ ಉಡುಪರು ಬ್ರಿಟನ್‌, ಇಟಲಿ, ಜರ್ಮನಿ, ಹಾಳೆಂಡ್‌, ಸ್ವಿಟ್ಸರ್ ಲ್ಯಾಂಡ್‌, ಆಸ್ಟ್ರಿಯಾ ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ.

ಶ್ರೀ ಉಳ್ಳೂರು ನಾಗೇಂದ್ರ ಉಡುಪರ ಸಂಗೀತ ಸೇವೆಯನ್ನು ಗುರುತಿಸಿ ೨೦೦೬-೦೭ರ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನಿತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.