ರಾಮಚಂದ್ರ ಹೆಗಡೆ, ಚಿಟ್ಟಾಣಿ

ಬಡಗುತಿಟ್ಟು ಯಕ್ಷಗಾನ ಕಲಾರಂಗದಲ್ಲಿ ಅದ್ಭುತ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ. ಏಳು ದಶಕಗಳ ಸುದೀರ್ಘ ರಂಗಸೇವೆಯಲ್ಲಿ ಸಾಧನೆಯ ಶಿಖರವೇರಿದ ಚಿಟ್ಟಾಣಿಯವರು 84ರ ಇಳಿವಯಸ್ಸಿನಲ್ಲೂ ಗೆಜ್ಜೆಕಟ್ಟಿ ರಂಗಮಂಚವೇರಿದರೆ ಇಪ್ಪತ್ತರ ತರುಣರನ್ನೂ ನಾಚಿಸುವಂತಿದ್ದರು.
ಉತ್ತರಕನ್ನಡದ ಹೊನ್ನಾವರ-ಹೊಸಾಕುಳಿಯ ಚಿಟ್ಟಾಣಿಯೇ ಅವರ ಹುಟ್ಟೂರು. ಸುಬ್ರಾಯ ಹೆಗಡೆ- ಗಣಪಿ ಹೆಗಡೆ ದಂಪತಿಗಳ ಸುಪುತ್ರರಾಗಿ 20-03-1932ರಲ್ಲಿ ಜನಿಸಿದರು. ಚಿಟ್ಟಾಣಿಯವರು ಓದಿದ್ದು ಕೇವಲ ಎರಡನೇ ತರಗತಿ. ಬಾಳೆಗದ್ದೆ ರಾಮಕೃಷ್ಣಭಟ್ ಇವರ ಆರಂಭಿಕ ಗುರುಗಳು. ಕೊಂಡದಕುಳಿ ರಾಮ ಹೆಗಡೆ-ಲಕ್ಷ್ಮಣ ಹೆಗಡೆ ಅವರಿಂದ ಇವರ ಕಲಾಸಕ್ತಿ ಬೆಳಸಿಕೊಂಡಿದ್ದರು. ಮೂಡ್ಕಣಿ ನಾರಾಯಣ ಹೆಗಡೆ ಹಾಗೂ ಕೆರೆಮನೆ ಶಿವರಾಮ ಹೆಗಡೆಯವರ ಕಲಾವರ್ಚಸ್ಸು ಇವರ ಮೇಲೆ ವಿಶೇಷ ಪ್ರಭಾವ ಬೀರಿತ್ತು.
ತನ್ನ 14ರ ಹರೆಯದಲ್ಲಿ ‘ಶ್ರೀ ಕೃಷ್ಣ ಪಾರಿಜಾತ’ದ ಅಗ್ನಿ ಪಾತ್ರದಲ್ಲಿ ರಂಗವೇರಿದ ಚಿಟ್ಟಾಣಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಯಕ್ಷಲೋಕದಲ್ಲಿ ‘ಅಗ್ನಿ’ಯಂತೆಯೇ ಬೆಳಗಿದವರು. ಗುಂಡಬಾಳ, ಅಮೃತೇಶ್ವರಿ, ಸಾಲಿಗ್ರಾಮ, ಪಂಚಲಿಂಗ-ಶಿರಸಿ, ಕೊಳಗಿಬೀಸ್, ಮೂರೂರು, ಶಿರಸಿ-ಮಾರಿಕಾಂಬಾ, ಬಚ್ಚಗಾರು, ಪೆರ್ಡೂರು ಮೇಳಗಳಲ್ಲಿ ಅರವತ್ತು ವರ್ಷಗಳ ಅವರ ಕಲಾವ್ಯವಸಾಯ ಸಾರ್ಥಕವಾಗಿತ್ತು.
ಯಕ್ಷಗಾನ ವೇಷಕ್ಕೆ ಹೇಳಿ ಮಾಡಿಸಿದಂತಹ ಮೈಕಟ್ಟು, ವಿಶಾಲ ಹಣೆ, ಹೊಳಪಿನ ಕಣ್ಣುಗಳು ಅವರಿಗೆ ದೈವದತ್ತವಾಗಿದ್ದವು. ಚಿಟ್ಟಾಣಿಯವರದು ಯಕ್ಷಗಾನ ನೃತ್ಯವೈಖರಿಗೆ ಹೊಸ ಆಯಾಮ ನೀಡಿ, ತನ್ನದೇ ‘ಶೈಲಿ’ ಹುಟ್ಟು ಹಾಕಿದ ಸಂಪನ್ನ ಪ್ರತಿಭೆ. ಅವರ ಲಯ ಪ್ರಜ್ಞೆ, ರಂಗನಿಲುವು, ಆಂಗಿಕವಿನ್ಯಾಸ, ಮಾತಿನ ಶೈಲಿ ಪಾತ್ರ ಚಿತ್ರಣ ಎಲ್ಲವೂ ವಿಭಿನ್ನ ಮತ್ತು ಅಸಾಧಾರಣ.
ಶ್ರೀಯುತರ ಪಾತ್ರ ತಾದಾತ್ಮ್ಯ ಅನನ್ಯ. ರಂಗಕರ್ಮದಲ್ಲೆಲ್ಲೂ ರಾಜಿ ಮಾಡಿಕೊಳ್ಳದ ನಿಷ್ಕಪಟ ಕಲಾವಿದ. ಚಿಟ್ಟಾಣಿ ನಿರ್ವಹಿಸಿದ ಭಸ್ಮಾಸುರ, ಕೀಚಕ, ಮಾಗಧ, ಕಂಸ, ಕೌರವ, ದುಷ್ಟಬುದ್ಧಿ, ರುದ್ರಕೋಪ… ಪಾತ್ರಗಳಿಗೆ ಎಂದೂ ಸಾವಿಲ್ಲ. ಅವರಿಗೆ ಅವರೇ ಸಾಟಿ. ಅಮೇರಿಕಾದಲ್ಲೂ ತನ್ನ ಅಪೂರ್ವ ಪ್ರತಿಭೆಯನ್ನು ಪ್ರಕಟಿಸಿ ರಸಿಕರ ಮನಸೂರೆಗೊಂಡಿದ್ದರು.
ಚಿಟ್ಟಾಣಿಯವರ ಧರ್ಮಪತ್ನಿ ಸುಶೀಲಾ. ‘ಲಲಿತಾ, ಸುಬ್ರಹ್ಮಣ್ಯ, ನಾರಾಯಣ, ನರಸಿಂಹ’, ಇವರ ನಾಲ್ವರು ಮಕ್ಕಳು. ಇವರ ಸುಪುತ್ರರಾದ ಸುಬ್ರಹ್ಮಣ್ಯ ಚಿಟ್ಟಾಣಿ ಹಾಗೂ ನರಸಿಂಹ ಚಿಟ್ಟಾಣಿ ವೃತ್ತಿರಂಗದ ಭರವಸೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಶ್ರೀಯುತರ ಮೇರು ಕಲಾ ಪ್ರತಿಭೆಗೆ ದೊರಕಿದ ಸನ್ಮಾನ ಗಣಿತಕ್ಕೆ ನಿಲುಕುವುದಿಲ್ಲ. ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಜಾನಪದಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಕ್ಕೆ ಅವರು ಭಾಜನರಾಗಿದ್ದವರು. ‘ರಸರಾಜ’ ಇವರಿಗೆ ಅರ್ಪಿಸಿದ ಅಭಿನಂದನ ಗ್ರಂಥ. ‘ನಮ್ಮ ಚಿಟ್ಟಾಣಿ’ ಆತ್ಮಕಥನ. ಶ್ರೀಯುತರು ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿಯ ಪ್ರಧಾನ ಕಲಾವಿದರಾಗಿ ಕಲಾಸೇವೆ ಮಾಡಿದ್ದವರು ಈಗ ನೆನಪು ಮಾತ್ರ.

-ಯಕ್ಷೋಪಾಸಕರು ಭಾಗ-೧, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು