Categories
e-ದಿನ

ಏಪ್ರಿಲ್-04

ಪ್ರಮುಖಘಟನಾವಳಿಗಳು:

1147: ಚರಿತ್ರೆಯಲ್ಲಿ ಮಾಸ್ಕೋದ ಕುರಿತು ಪ್ರಥಮ ಮಾಹಿತಿ ಈ ದಿನದಲ್ಲಿ ದಾಖಲಾಗಿದೆ.

1721: ಸರ್ ರಾಬರ್ಟ್ ವಾಲ್ ಪೋಲ್ ಅವರು ಯುನೈಟೆಡ್ ಕಿಂಗ್ಡಂನ ಪ್ರಥಮ ಪ್ರಧಾನ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು

1768: ಲಂಡನ್ನಿನಲ್ಲಿ ಫಿಲಿಪ್ ಆಸ್ಲೆ ಅವರು ಪ್ರಥಮ ಆಧುನಿಕ ಸರ್ಕಸ್ ಪ್ರದರ್ಶನ ನೀಡಿದರು

1814: ನೆಪೋಲಿಯನ್ ಪ್ರಥಮ ಬಾರಿಗೆ ಸಿಂಹಾಸನ ತ್ಯಾಗಮಾಡಿ ತನ್ನ ಮಗ ಎರಡನೆ ನೆಪೋಲಿಯನ್ ಅನ್ನು ಫ್ರೆಂಚ್ ಚಕ್ರವರ್ತಿಯಾಗಿ ಹೆಸರಿಸಿದ.

1818: ಅಮೆರಿಕದ ಧ್ವಜವು 13 ಕೆಂಪು ಮತ್ತು ಬಿಳಿ ಪಟ್ಟಿಗಳನ್ನು ಹಾಗೂ ಪ್ರತಿ ಹೊಸ ರಾಜ್ಯಕ್ಕೆ ಒಂದು ನಕ್ಷತ್ರವನ್ನು ಹೊಂದಿರಬೇಕು (ಅಂದರೆ ಒಟ್ಟು 20 ನಕ್ಷತ್ರಗಳನ್ನು ಹೊಂದಿರಬೇಕು) ಎಂದು ಅಮೆರಿಕ ಕಾಂಗ್ರೆಸ್ ನಿರ್ಧರಿಸಿತು.

1905: ಭಾರತದ ಕಾಂಗ್ರಾ ಕಣಿವೆಯಲ್ಲಿ ಭೂಕಂಪ ಉಂಟಾಗಿ 20,000 ಜನ ಸಾವಿಗೀಡಾಗಿ, ಕಾಂಗ್ರಾ, ಮೆಕ್ ಲಿಯೋಡ್ ಗಂಜ್ ಮತ್ತು ಧರ್ಮಶಾಲಾಗಳಲ್ಲಿನ ಬಹುತೇಕ ಕಟ್ಟಡಗಳು ನಾಶಗೊಂಡವು.

1957: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಮೈಸೂರು ಸರ್ಕಾರವು ತೀರ್ಮಾನಿಸಿತು.

1958: ಲಂಡನ್ನಿನಲ್ಲಿ ಪರಮಾಣು ನಿಶ್ಯಸ್ತ್ರೀಕರಣ ಪ್ರಚಾರದ (CND) ಶಾಂತಿ ಚಿಹ್ನೆಯನ್ನು ಪ್ರಪ್ರಥಮವಾಗಿ ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು.

1967: ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ‘ಬಿಯಾಂಡ್ ವಿಯೆಟ್ನಾಮ್: ಎ ಟೈಮ್ ಟು ಬ್ರೇಕ್ ಸೈಲೆನ್ಸ್’ ಭಾಷಣವನ್ನು ನ್ಯೂಯಾರ್ಕಿನ ರಿವರ್ ಸೈಡ್ ಚರ್ಚಿನಲ್ಲಿ ಮಾಡಿದರು

1968: ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಜೇಮ್ಸ್ ಅರ್ಲ್ ರೇ ಟೆನ್ನೆಸ್ಸೀಯ ಮೆಂಫಿಸ್ ನಲ್ಲಿ ಹತ್ಯೆ ಮಾಡಿದ.

1969: ಡಾ. ಡೆಂಟನ್ ಕೂಲೈ ಅವರು ಪ್ರಥಮ ಕೃತಕ ಹೃದಯವನ್ನು ಅಳವಡಿಸಿದರು

1973: ವರ್ಲ್ಡ್ ಟ್ರೇಡ್ ಸೆಂಟರ್ ಅಧಿಕೃತವಾಗಿ ನ್ಯೂಯಾರ್ಕ್ ನಗರದಲ್ಲಿ ಅರ್ಪಣೆಗೊಂಡಿತು.

1975: ಮೈಕ್ರೋಸಾಫ್ಟ್ ಸಂಸ್ಥೆಯು ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ ಅವರ ಪಾಲುದಾರಿಕೆಯಲ್ಲಿ ನ್ಯೂ ಮೆಕ್ಸಿಕೋದ ಅಲ್ಬುಕರ್ಕ್ ನಗರದಲ್ಲಿ ಪ್ರಾರಂಭಗೊಂಡಿತು.

1979: ಪಾಕಿಸ್ಥಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ರಾವಲ್ಪಿಂಡಿಯಲ್ಲಿ ಗಲ್ಲಿಗೇರಿಸಲಾಯಿತು.

1983: ಬಾಹ್ಯಾಕಾಶ ನೌಕೆ ಚಾಲೆಂಜರ್ ತನ್ನ ಪ್ರಥಮ ಗಗನಯಾನವನ್ನು ಕೈಗೊಂಡಿತು.

2006: ಬೆಂಗಳೂರಿನ ಚಿತ್ರಾ ಮಾಗಿಮೈರಾಜ್ ಅವರು ಇಂಗ್ಲೆಂಡಿನ ಕೇಂಬ್ರಿಜ್ನಲ್ಲಿ ನಡೆದ ವಿಶ್ವ ಮಹಿಳೆಯರ ಬಿಲಿಯರ್ಡ್ಸ್ ಪಂದ್ಯದಲ್ಲಿ ಇಂಗ್ಲೆಂಡಿನ ಎಮ್ಮಾ ಬಾನ್ನಿ ಅವರನ್ನು 193-164 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಕಿರೀಟ ಗೆದ್ದುಕೊಂಡರು.

2007: ವೃತ್ತಿ ರಂಗಭೂಮಿಯ ಹಿರಿಯ ನಟಿ ಜಿ.ವಿ. ಮಾಲತಮ್ಮ ಅವರು ಕರ್ನಾಟಕ ರಾಜ್ಯ ಸರ್ಕಾರವು ನೀಡುವ ‘ಗುಬ್ಬಿ ವೀರಣ್ಣ’ ಪ್ರಶಸ್ತಿಗೆ ಆಯ್ಕೆಯಾದರು.

2007: ಲೀಗ್ ಹಂತದಲ್ಲಿಯೇ ವಿಶ್ವಕಪ್ ಕ್ರಿಕೆಟಿನಿಂದ ಭಾರತವು ನಿರ್ಗಮಿಸಿದ ನಂತರ ಭುಗಿಲೆದ್ದ ವಿವಾದಗಳ ಹಿನ್ನೆಲೆಯಲ್ಲಿ ಕೋಚ್ ಗ್ರೆಗ್ ಚಾಪೆಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2013: ಮಹಾರಾಷ್ಟ್ರದ ಥಾನೆಯಲ್ಲಿ ಕಟ್ಟಡವೊಂದು ಕುಸಿದು 70 ಜನ ಮೃತರಾದರು.

ಪ್ರಮುಖಜನನ/ಮರಣ:

1826: ಪ್ರಸಿದ್ಧ ಎಲೆಕ್ಟ್ರಿಕಲ್ ತಂತ್ರಜ್ಞ ಜೆನೋಬ್ ಗ್ರಾಮ್ಮೆ ಅವರು ಬೆಲ್ಜಿಯಂ ದೇಶದ ಜೆಹಾಯ್-ಬೊಡೆಜ್ಞೆ ಎಂಬಲ್ಲಿ ಜನಿಸಿದರು. ಅವರು ಎಲೆಕ್ಟ್ರಿಕ್ ವ್ಯವಸ್ಥೆಗೆ ಪರ್ಯಾಯವಾಗಿ ತಾತ್ಕಾಲಿಕ ವಿದ್ಯುತ್ ಒದಗಿಸುವ ಡೈನಮೋದಂತಹ ಗ್ರಾಮ್ಮೆ ಯಂತ್ರವನ್ನು ಸೃಷ್ಟಿಸಿದ್ದರು. ಈ ಯಂತ್ರ ಅಂದಿನ ದಿನಗಳವರೆಗೆ ಇದ್ದ ಡೈನಮೋಗಳಿಗಿಂತ ಸುಗಮವಾಗಿ ಹೆಚ್ಚಿನ ವೋಲ್ಟೇಜ್ ಹರಿಸುವಂತಹ ಸಾಮರ್ಥ್ಯ ಹೊಂದಿತ್ತು.

1869: ಕಟ್ಟಡಗಳ ನಿರ್ಮಾಣದಲ್ಲಿ ಮಹಿಳೆಯರು ಅಪರೂಪವಾಗಿದ್ದ ಕಾಲದಲ್ಲಿ ಪ್ರಸಿದ್ಧ ಕಟ್ಟಡ ವಿನ್ಯಾಸಕಾರರಾಗಿದ್ದ ಮೇರಿ ಎಲಿಜಬೆತ್ ಕೊಲ್ಟರ್ ಅವರು ಅಮೆರಿಕದ ಪಿಟ್ಸ್ ಬರ್ಗ್ ನಗರದಲ್ಲಿ ಜನಿಸಿದರು. ಗ್ರಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್, ಹೋಪಿ ಹೌಸ್, ಹರ್ಮಿಟ್ಸ್ ರೆಸ್ಟ್, ಲುಕ್ ಔಟ್ ಸ್ಟುಡಿಯೋ, ಡೆಸರ್ಟ್ ವ್ಯೂ ವಾಚ್ ಟವರ್ ಮುಂತಾದ ಅನೇಕ ಪ್ರಸಿದ್ಧ ವಿನ್ಯಾಸಗಳಿಗೆ ಇವರು ಹೆಸರಾಗಿದ್ದಾರೆ.

1889: ಭಾರತೀಯ ಸ್ವಾತಂತ್ಯ್ರ ಹೋರಾಟಗಾರ, ಕವಿ, ನಾಟಕಕಾರ ಮತ್ತು ಪತ್ರಕರ್ತ ಮಖನಲಾಲ್ ಚತುರ್ವೇದಿ ಅವರು ಮಧ್ಯಪ್ರದೇಶದ ಬಾಬೈ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರು ಹಿಂದೀ ಭಾಷೆಯ ಛಾಯಾವಾದ್ ಪರಂಪರೆಯ ಮಹತ್ವದ ಬರಹಗಾರರೆನಿಸಿದವರು. 1968 ವರ್ಷದಲ್ಲಿ ನಿಧನರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1936: ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಬರಹಗಾರರಾದ ಶ್ರೀನಿವಾಸ ವೈದ್ಯರು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು. ಇವರ ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ 2004ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, 2008ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

1938: ಭಾರತೀಯ ಸಂಜಾತ ಅಮೇರಿಕನ್ ವಿಜ್ಞಾನಿ ಆನಂದ ಮೋಹನ್ ಚಕ್ರವರ್ತಿ ಅವರು ಪಶ್ಚಿಮ ಬಂಗಾಳದ ಸೈನ್ಥಿಯಾ ಎಂಬಲ್ಲಿ ಜನಿಸಿದರು. ಇವರು ಪ್ಲಾಸ್ಮಿಡ್ ಬಳಕೆಯ ಮೂಲಕ ಕೃತಕ ಸೂಕ್ಷ್ಮ ಜೀವಿಯನ್ನು ಅಭಿವೃದ್ಧಿ ಪಡಿಸಿ ಪೇಟೆಂಟ್ ಪಡೆಯುವಲ್ಲಿ ಯಶಸ್ವಿಯಾದರು.

1945: ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪರಿಚಿತರಾದ ಲಲಿತಾ ನಾಯಕ್ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯ ಎಂಬಲ್ಲಿ ಜನಿಸಿದರು. ಬರಹಗಾರ್ತಿಯಾದ ಇವರು ಹಲವು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿಯೂ ಕಾರ್ಯನಿರ್ವಹಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜೀವ್ ಗಾಂಧಿ ಏಕತಾ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಇವರಿಗೆ ಸಂದಿವೆ.

397: ಆರ್ಚ್ ಬಿಷಪ್ ಮತ್ತು ಸಂತರಾದ ಅಂಬ್ರೋಸ್ ಅವರು ರೋಮ್ ಸಾಮ್ರಾಜ್ಯದ ಇಟಲಿಯಲ್ಲಿ ನಿಧನರಾದರು.

1929: ಮರ್ಸಿಡಿಸ್ ಬೆಂಜ್ ಸಂಸ್ಥಾಪಕ ಕಾರ್ಲ್ ಬೆನ್ಸ್ ಜರ್ಮನಿಯ ಲಾಡೆನ್ ಬರ್ಗ್ ಎಂಬಲ್ಲಿ ನಿಧನರಾದರು.

1968: ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಜೇಮ್ಸ್ ಅರ್ಲ್ ರೇ ಟೆನ್ನೆಸ್ಸೀಯ ಎಂಬಾತ ಮೆಂಫಿಸ್ ನಲ್ಲಿ ಹತ್ಯೆ ಮಾಡಿದ.

1987: ಸಚ್ಚಿದಾನಂದ ಹೀರಾನಂದ ವಾತ್ಸಾಯನ ಅವರು ನವದೆಹಲಿಯಲ್ಲಿ ನಿಧನರಾದರು. ‘ನಯೀ ಕವಿತಾ’ ಮತ್ತು ‘ಪ್ರಯೋಗ್’ಗಳಿಗೆ ಹೆಸರಾದ ‘ಅಜ್ನೇಯಾ’ ಕಾವ್ಯನಾಮದ ಖ್ಯಾತ ಹಿಂದಿ ಕವಿಗಳಾದ ಇವರಿಗೆ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಗೋಲ್ಡನ್ ರೀತ್ ಅವಾರ್ಡ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

2007: ಬೆಂಗಳೂರಿನ ಪ್ರತಿಷ್ಠಿತ ಗಂಗಾರಾಮ್ಸ್ ಪುಸ್ತಕ ಮಳಿಗೆಯ ಮಾಲೀಕ ಎನ್. ಗಂಗಾರಾಮ್ ನಿಧನರಾದರು.

2009: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಅವರು ತಮ್ಮ 86ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜೈಲುವಾಸ ಅನುಭವಿಸಿದ್ದರು ಇವರು ಕರ್ನಾಟಕ ಏಕೀಕರಣ ಚಳವಳಿ ಮುಖಂಡರಲ್ಲಿ ಒಬ್ಬರಾಗಿದ್ದು, ವೀರಪ್ಪ ಮೊಯಿಲಿ ಸಂಪುಟದಲ್ಲಿ ಸಂಸದೀಯ ವ್ಯವಹಾರ ಹಾಗೂ ಮುಜರಾಯಿ ಸಚಿವರಾಗಿದ್ದರು ಹಾಗೂ 2000-2001ರಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.