Categories
e-ದಿನ

ಏಪ್ರಿಲ್-16

ಪ್ರಮುಖಘಟನಾವಳಿಗಳು:

1853: ಮುಂಬೈನ ಬೋರೀ ಬಂದರಿನಿಂದ ಥಾಣೆವರೆಗಿನ 34 ಕಿಲೋಮೀಟರ್ ಹಳಿಯ ಮೇಲೆ 400 ಜನರನ್ನು ಹೊತ್ತ 14 ಬೋಗಿಗಳ ರೈಲು ಸಂಚರಿಸುವುದರೊಂದಿಗೆ ಭಾರತದಲ್ಲಿ ರೈಲು ಸಂಚಾರ ಆರಂಭಗೊಂಡಿತು.

1912: ಅಮೆರಿಕದ ವಿಮಾನಯಾನಿ ಹ್ಯಾರಿಯೆಟ್ ಕ್ವಿಂಬೆ ಅವರು ಇಂಗ್ಲಿಷ್ ಕಡಲ್ಗಾಲುವೆ ದಾಟಿದ ಮೊತ್ತ ಮೊದಲ ಮಹಿಳೆ ಎನಿಸಿದರು. 50 ಹಾರ್ಸ್ ಪವರ್ ಮಾನೋಪ್ಲೇನ್ ಮೂಲಕ 59 ನಿಮಿಷಗಳ ಹಾರಾಟದ ಬಳಿಕ ಕ್ವಿಂಬೆ ಅವರು ಫ್ರಾನ್ಸಿನ ಹಾರ್ಡೆಲೊಟ್ ಸಮೀಪ ಇಳಿದರು.

1917: ಸ್ವಿಟ್ಜರ್ಲ್ಯಾಂಡಿಗೆ ಗಡೀಪಾರುಗೊಂಡಿದ್ದ ವ್ಲಾಡಿಮಿರ್ ಲೆನಿನ್ ಅವರು ರಷ್ಯಾದ ಪೆಟ್ರೋಗ್ರಾಡ್ ಪ್ರದೇಶಕ್ಕೆ ಹಿಂದಿರುಗಿದರು.

1919: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಸಗಿದ ಬ್ರಿಟಿಷರ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಮಹಾತ್ಮ ಗಾಂಧೀಜಿ ಅವರು ಒಂದು ದಿನದ ಪ್ರಾರ್ಥನೆ ಮತ್ತು ಉಪವಾಸವನ್ನು ಆಯೋಜಿಸಿದರು.

1945: ಸೋವಿಯತ್ ಜಲಾಂತರ್ಗಾಮಿಯ ದಾಳಿಗೆ ಮುಳುಗಿದ ‘ಗೋಯಾ’ ಹಡಗಿನಲ್ಲಿದ್ದ 7000ಕ್ಕೂ ಹೆಚ್ಚು ಜರ್ಮನ್ ನಿರಾಶ್ರಿತರು ನೀರು ಪಾಲಾದರು.

1963: ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಜೈಲಿನಲ್ಲಿ ಬಂಧಿಯಾಗಿದ್ದಾಗ ‘ಲೆಟರ್ ಫ್ರಮ್ ಬರ್ಮಿಂಗ್ ಹ್ಯಾಮ್’ ಲಿಖಿಸಿದರು.

1982: ಅಶೋಕನಾಥ ಬ್ಯಾನರ್ಜಿ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಇವರು ಐ.ಎ.ಎಸ್. ಶ್ರೇಣಿಯ ಸರ್ಕಾರಿ ಅಧಿಕಾರಿಗಳಾಗಿದ್ದರು.

2007: ಖ್ಯಾತ ಹಿನ್ನೆಲೆ ಗಾಯಕರಾದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ 2007ನೇ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಲು ಬಸವ ವೇದಿಕೆ ನಿರ್ಧರಿಸಿತು.

2008: ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ ಪ್ರತಿಮೆ ನಿರ್ಮಿಸಲು ಸಮನ್ವಯ ಪರಿವಾರ್ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಗೆ ಲಂಡನ್ನಿನ ಲೀಸೆಸ್ಟರ್ ನಗರಸಭೆ ಅನುಮೋದನೆ ನೀಡಿತು.

2009: ಸತ್ಯಂ ಕಂಪ್ಯೂಟರ್ಸ್ ಅನ್ನು ಸ್ವಾಧೀನ ಪಡಿಸಿಕೊಳ್ಳಲು, ಟೆಕ್ ಮಹೀಂದ್ರಾ ನೀಡಿದ್ದ, ಷೇರಿಗೆ ತಲಾ ರೂ 58 ನೀಡುವ ಪ್ರಸ್ತಾಪವನ್ನು, ಆ ಕಂಪೆನಿಯ ಕಾನೂನು ಮಂಡಳಿ (ಸಿಎಲ್‌ಬಿ) ಅಂಗೀಕರಿಸಿತು.

ಪ್ರಮುಖಜನನ/ಮರಣ:

1813: ಟ್ರಾವಂಕೂರು ಪ್ರಾಂತ್ಯದ ಮಹಾರಾಜರಾದ ಸ್ವಾತಿ ತಿರುನಾಳ್ ರಾಮ ವರ್ಮ ಅವರು ಟ್ರಾವಂಕೂರಿನಲ್ಲಿ ಜನಿಸಿದರು. ಶ್ರೇಷ್ಠ ವಾಗ್ಗೇಯಕಾರರಾದ ಇವರು ಸುಮಾರು 400 ಶಾಸ್ತ್ರೀಯ ಕೃತಿಗಳನ್ನು ಕರ್ನಾಟಕ ಮತ್ತು ಹಿಂದೂಸ್ಥಾನಿಯ ಪದ್ಧತಿಗಳಲ್ಲಿ ರಚಿಸಿದ್ದಾರೆ ಎಂದು ಹೇಳಲಾಗಿದೆ. ಇವರು ಶಿಸ್ತುಬದ್ಧ ಆಡಳಿತಕ್ಕೂ ಹೆಸರಾಗಿದ್ದರು.

1844: ಫ್ರೆಂಚ್ ಪತ್ರಕರ್ತ ಮತ್ತು ಸಾಹಿತಿ ಅನಟೋಲೆ ಫ್ರಾನ್ಸ್ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು. ಇವರಿಗೆ 1921 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1848: ಸಮಾಜ ಸುಧಾರಕ ಮತ್ತು ಬರಹಗಾರರಾದ ಬಹಾದ್ದೂರ್ ಕಂಡುಕುರಿ ವೀರೇಶ ಲಿಂಗಂ ಪಂತುಲು ಅವರು ರಾಜಮಂಡ್ರಿಯಲ್ಲಿ ಜನಿಸಿದರು. ಮಹಿಳಾ ಶಿಕ್ಷಣ, ವಿಧವಾ ವಿವಾಹ, ವರದಕ್ಷಿಣೆ ವಿರೋಧ ಮುಂತಾದ ಸಮಾಜ ಸುಧಾರಣೆಗಳಲ್ಲಿ ಮುಖ್ಯ ಪಾತ್ರವಹಿಸಿದ್ದ ಇವರು ದೊವಲೈಸ್ವರಂ ಎಂಬಲ್ಲಿ ಶಾಲೆಯನ್ನೂ ನಿರ್ಮಿಸಿದ್ದರು. ಇವರು ರಚಿಸಿದ ‘ರಾಜಶೇಖರ ಚರಿತ್ರಮು’ ತೆಲುಗಿನ ಪ್ರಥಮ ಕಾದಂಬರಿ ಎನಿಸಿದ್ದು, ‘ಸ್ವೀಯ ಚರಿತ್ರಮು’ ಎಂಬುದು ಅವರ ಆತ್ಮಕಥನವಾಗಿದೆ.

1867: ಅಮೆರಿಕಾದ ಸಂಶೋಧಕ ಹಾಗೂ ಮುಂಚೂಣಿಯ ವಿಮಾನ ವಿಮಾನ ಚಾಲಕರಾದ ವಿಲ್ಬರ್ ರೈಟ್ ಅವರು ಮಿಲ್ವಿಲ್ಲೆ ಎಂಬಲ್ಲಿ ಜನಿಸಿದರು. ಇವರು ತಮ್ಮ ಸಹೋದರ ಓರ್ವಿಲ್ಲೆ ರೈಟ್ ಅವರೊಂದಿಗೆ ಮೊಟ್ಟ ಮೊದಲ ವಿಮಾನ ಹಾರಾಟ ನಡೆಸಿದರು.

1881: ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಇರ್ವಿನ್ ಎಂದು ಹೆಸರಾದ ಎಡ್ವರ್ಡ್ ಫ್ರೆಡ್ರಿಕ್ ಲಿಂಡ್ಲೈ ವುಡ್ ಅವರು ಇಂಗ್ಲೆಂಡಿನ ಪೌಡರ್ಹ್ಯಾಮ್ ಕ್ಯಾಸಲ್ ಎಂಬಲ್ಲಿ ಜನಿಸಿದರು. ಇವರು 1925-1931ರ ಅವಧಿಯಲ್ಲಿ ಭಾರತದ ವೈಸ್ ರಾಯ್ ಆಗಿದ್ದರು. ಭಾರತೀಯ ನಾಯಕತ್ವದೊಡನೆ ಮಾತುಕತೆಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲು ಯತ್ನಿಸಿದ ಇವರ ಪ್ರಾಮಾಣಿಕತೆಯ ಬಗ್ಗೆ ಮಹಾತ್ಮ ಗಾಂಧೀಯವರಿಗೆ ಮೆಚ್ಚುಗೆ ಇತ್ತು.

1889: ಮಹಾನ್ ನಟ, ನಿರ್ಮಾಪಕ, ನಿರ್ದೇಶಕ, ಸಂಯೋಜಕ ಚಾರ್ಲಿ ಚಾಪ್ಲಿನ್ ಅವರು ದಕ್ಷಿಣ ಲಂಡನ್ನಿನ ವಾಲ್ವರ್ತ್ ಬಳಿಯ ಈಸ್ಟ್ ಸ್ಟ್ರೀಟ್ ಎಂಬಲ್ಲಿ ಜನಿಸಿದರು. ‘ದಿ ಟ್ರಾಪ್’ ಚಿತ್ರದಲ್ಲಿನ ತಮ್ಮ ಅಮೋಘ ತೆರೆಯ ಮೇಲಿನ ಅಭಿವ್ಯಕ್ತಿಯಿಂದ ಮೂಕಿ ಯುಗದ ಮಹಾನ್ ಕಲಾವಿದರಾಗಿ ಹೊರಹೊಮ್ಮಿದ ಇವರು ಚಿತ್ರರಂಗದಲ್ಲಿ ಸುಮಾರು 75 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1977ರ ವರ್ಷದಲ್ಲಿ ನಿಧನರಾದ ಇವರು 1972 ವರ್ಷದಲ್ಲಿ ಅಕಾಡೆಮಿ ಪ್ರಶಸ್ತಿ ಗೌರವವನ್ನು ಸ್ವೀಕರಿಸಿದರು.

1900: ‘ಆನಂದಕಂದ’ ಕಾವ್ಯ ನಾಮಾಂಕಿತ ಬೆಟಗೇರಿ ಕೃಷ್ಣಶರ್ಮ ಅವರು 1900ನೆಯ ಏಪ್ರಿಲ್ ತಿಂಗಳ 16ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದರು. ಎಲ್ಲ ವಿಧದ ಸಾಹಿತ್ಯಗಳಲ್ಲೂ ಮಹತ್ವದ ಸೇವೆ ಸಲ್ಲಿಸಿದ್ದ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿದ್ದವು.

1924: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ರಾಯಭಾರಿ, ಲೋಕೋಪಕಾರಿ ಮತ್ತು ಯುನೆಸ್ಕೋ ಅಧಿಕಾರಿಗಳಾಗಿದ್ದ ಮದನ್ಜೀತ್ ಸಿಂಗ್ ಅವರು ಲಾಹೋರಿನಲ್ಲಿ ಜನಿಸಿದರು. ಕೋಮು ಸೌಹಾರ್ಧತೆ, ಸಹಿಷ್ಣುತೆ, ಅಹಿಂಸೆ ಮತ್ತು ಶಾಂತಿ ಪಾಲನೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಇವರ ಗೌರವಾರ್ಥವಾಗಿ ಯುನೆಸ್ಕೋ 1995ರ ವರ್ಷದಲ್ಲಿ ‘ಯುನೆಸ್ಕೋ-ಮದನ್ಜೀತ್ ಸಿಂಗ್ ಪ್ರೈಜ್ ಫಾರ್ ದಿ ಪ್ರೊಮೋಷನ್ ಆಫ್ ಟಾಲರೆನ್ಸ್ ಅಂಡ್ ನಾನ್-ವಯಲೆನ್ಸ್’ ಪ್ರಶಸ್ತಿಯನ್ನು ಸ್ಥಾಪಿಸಿತು.

1951: ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ರಾಘವೇಂದ್ರ ಪಾಟೀಲ್ ಅವರು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಜನಿಸಿದರು.ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿಗಳಾಗಿರುವ ಇವರಿಗೆ ‘ತೇರು’ ಕಾದಂಬರಿಗೆ ಕೇಂದ್ರ ಸಾಹಿಯ ಅಕಾಡೆಮಿ ಪ್ರಶಸ್ತಿ, ಹಲವು ರಾಜ್ಯ ಸಾಹಿತ್ಯ ಅಕಾಡೆಮಿ ಗೌರವಗಳೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

1961: ಅರುಣಾಚಲ ಪ್ರದೇಶದ ಏಳನೇ ಮುಖ್ಯಮಂತ್ರಿಗಳಾದ ಜಾರ್ಬೋಂ ಗ್ಯಾಮ್ಲಿನ್ ಅವರು ಅಲಾಂಗ್ ಎಂಬಲ್ಲಿ ಜನಿಸಿದರು.

1972: ಜಪಾನೀ ಸಾಹಿತಿ ಯಸುನರಿ ಕವಬಟ ಅವರು ಜುಷಿ ಎಂಬಲ್ಲಿ ನಿಧನರಾದರು. ಇವರಿಗೆ 1968 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.