Categories
e-ದಿನ

ಏಪ್ರಿಲ್-22

ದಿನಾಚರಣೆಗಳು:

ಭೂಮಿ ದಿನ

ಏಪ್ರಿಲ್ 22 ದಿನವನ್ನು ವಿಶ್ವದಾದ್ಯಂತ ಭೂಮಿ ದಿನವನ್ನಾಗಿ (Earth Day) ಆಚರಿಸಲಾಗುತ್ತಿದೆ. 1969ರ ವರ್ಷದಲ್ಲಿ ಯುನೆಸ್ಕೋದಲ್ಲಿ ಶಾಂತಿ ಕಾರ್ಯಕರ್ತರಾದ ಜಾನ್ ಮೆಕೊನೆಲ್ ಅವರು ಭೂಮಿಯನ್ನು ಗೌರವಿಸುವ ಇಂತಹ ಒಂದು ದಿನದ ಪ್ರಸಾಪವನ್ನು ಮಂಡಿಸಿದ್ದ ಮೇರೆಗೆ, ಮೊದಲ ಬಾರಿಗೆ 1970ರ ಏಪ್ರಿಲ್ 22ರಂದು ಭೂಮಿ ದಿನವನ್ನು ಆಚರಿಸಲಾಯಿತು. ಭೂಮಿ ದಿನ ಸಂಪರ್ಕಸೇತು ವ್ಯಾಪಿಸಿದಂತೆ 193 ದೇಶಗಳಲ್ಲಿ ಈ ಆಚರಣೆ ವ್ಯಾಪಿಸಿದೆ.

ಪ್ರಮುಖಘಟನಾವಳಿಗಳು:

1500: ಪೋರ್ಚುಗೀಸ್ ನಾವಿಕರಾದ ಪೆಡ್ರೋ ಅಲ್ವರೆಸ್ ಕಬ್ರಾಲ್ ಅವರು ಬ್ರೆಜಿಲ್ನಲ್ಲಿ ಪಾದಾರ್ಪಣ ಮಾಡಿದರು. ಅದಕ್ಕೆ ಅವರು ‘ಐಲ್ಯಾಂಡ್ ಆಫ್ ಟು ಕ್ರಾಸ್’ ಎಂದು ಹೆಸರಿಟ್ಟರು. ಕಾಲಕ್ರಮೇಣದಲ್ಲಿ ಅದು ‘ಹೋಲಿ ಕ್ರಾಸ್’, ನಂತರ ‘ಬ್ರೆಜಿಲ್’ ಎನಿಸಿತು. ಅಲ್ಲಿ ಸಿಗುವ ‘ಪೌ-ಬ್ರೆಜಿಲ್’ ಎಂಬ ಬಣ್ಣದ ಮರ ಈ ಹೆಸರಿಗೆ ಕಾರಣವೆನಿಸಿದೆ.

1864: ಅಮೆರಿಕದ ಕಾಂಗ್ರೆಸ್ಸು ನಾಣ್ಯಗಳ ಕುರಿತಾದ ಕಾನೂನನ್ನು ಜಾರಿಗೊಳಿಸಿ ಎಲ್ಲ ನಾಣ್ಯಗಳ ಮೇಲೆ ‘ಇನ್ ಗಾಡ್ ವಿ ಟ್ರಸ್ಟ್’ ಎಂದು ಲಿಖಿಸುವುದನ್ನು ಖಡ್ಡಾಯಗೊಳಿಸಿತು.

1889: ‘ಲ್ಯಾಂಡ್ ರಷ್ ಆಫ್ 1989’ ಎಂಬ ಘಟನೆಯಲ್ಲಿ ಈ ದಿನದ ಮಧ್ಯಾಹ್ನದ ವೇಳೆಗೆ ಸಹಸ್ರಾರು ಜನರು ಒಕ್ಲಹೋಮಾ ಮತ್ತು ಗುತ್ರೀ ನಗರಗಳಲ್ಲಿ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಓಡೋಡಿ ಬಂದರು. ಕೆಲವೇ ತಾಸುಗಳಲ್ಲಿ ಈ ನಗರಗಳಲ್ಲಿನ ಜನಸಂಖ್ಯೆ 10,000ವನ್ನು ದಾಟಿತು.

1915: ಮೊದಲನೇ ಮಹಾಯುದ್ಧದ, ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಅನಿಲವನ್ನು ರಾಸಾಯನಿಕ ಅಸ್ತ್ರವಾಗಿ ಪ್ರಯೋಗಿಸಿದಾಗ, ವಿಷಪೂರಿತ ಅನಿಲಗಳ ಬಳಕೆ ಮೇರೆ ಮೀರಿದ ವಾತಾವರಣ ಮೂಡಿಸಿತು.

1944: ಚೈನಾ ಬರ್ಮಾ ಇಂಡಿಯಾ ಥಿಯೇಟರಿನಲ್ಲಿ ಮೊದಲನೇ ಏರ್ ಕಮಾಂಡೋ ತಂಡವು ‘ಸಿಕ್ರೋಸ್ಕೈ ಆರ್-4’ ಹೆಲಿಕಾಪ್ಟರುಗಳನ್ನು ಬಳಸಿ ಯುದ್ಧದಲ್ಲಿನ ಹುಡುಕುವಿಕೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಅವುಗಳ ಬಳಸುವಿಕೆಯನ್ನು ಪ್ರದರ್ಶಿಸಿತು. ಇದು ಹೆಲಿಕಾಪ್ಟರುಗಳ ಮೊಟ್ಟ ಮೊದಲ ಬಳಕೆಯಾಗಿದೆ.

1945: ಸೋವಿಯತ್ ಪಡೆಗಳು ಎಬರ್ಸ್ ವಾಲ್ಡೆಯನ್ನು ಯಾವುದೇ ಹೋರಾಟವಿಲ್ಲದೆ ವಶಕ್ಕೆ ತೆಗೆದುಕೊಂಡುದನ್ನು ಅರಿತ ಹಿಟ್ಲರ್, ತನ್ನ ಸೋಲನ್ನು ಒಪ್ಪಿಕೊಂಡು, ಆತ್ಮಹತ್ಯೆಯೊಂದೇ ತನ್ನ ಮುಂದಿರುವ ಆಯ್ಕೆ ಎಂದು ತಿಳಿಸಿದ.

1970: ಅಮೆರಿಕವು ಮೊಟ್ಟ ಮೊದಲ ಬಾರಿಗೆ ‘ಅರ್ಥ್ ಡೇ’ ಆಚರಿಸಿತು.

1977: ಮೊಟ್ಟಮೊದಲ ಬಾರಿಗೆ ದೂರವಾಣಿ ಸಂಪರ್ಕಗಳಿಗೆ ಆಪ್ಟಿಕಲ್ ಫೈಬರ್ ಬಳಸಲಾಯಿತು.

2005: ಜಪಾನಿನ ಪ್ರಧಾನಿ ಜುನಿಚಿರೋ ಕೊಯ್ಜುಮಿ ಅವರು ಜಪಾನಿನ ಯುದ್ಧ ಚರಿತ್ರೆಗಳಿಗೆ ಕ್ಷಮೆ ಯಾಚಿಸಿದರು.

2006: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ ಮಹಾಜನ್ ಅವರ ಮೇಲೆ ಅವರ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗೆದ್ದು ಗುಂಡು ಹಾರಿಸಿದ.

2007: ಪ್ರಖ್ಯಾತ ಕ್ರಿಕೆಟ್ ಆಟಗಾರ ವೆಸ್ಟ್ ಇಂಡೀಸ್ ತಂಡದ ಬ್ರಿಯಾನ್ ಲಾರಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ವಿದಾಯ ಹೇಳಿದರು.

2007: ಭಾರತ-ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ನೌಕಾಪಡೆಗಾಗಿ ಅಭಿವೃದ್ಧಿ ಪಡಿಸಲಾದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದ ಕ್ಷಿಪಣಿ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
2008: ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಅವರ `ವೈಲ್ಡ್ ಡಾಗ್ ಡೈರಿಸ್’ಗೆ ಫ್ರಾನ್ಸಿನ ಪ್ರತಿಷ್ಠಿತ ಪ್ರಶಸ್ತಿ
ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಅವರ `ವೈಲ್ಡ್ ಡಾಗ್ ಡೈರಿಸ್’ಗೆ ಫ್ರಾನ್ಸಿನ ಪ್ರತಿಷ್ಠಿತ ಪ್ರಶಸ್ತಿ ಸಂದಿತು.

2016: ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಸಿಂಹಸ್ತ ಕುಂಭಮೇಳಕ್ಕೆ ಚಾಲನೆ ದೊರಕಿತು. ಒಂದು ತಿಂಗಳಿಡೀ ನಡೆದ ಈ ಕುಂಭಮೇಳದಲ್ಲಿ 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದರೆಂದು ಹೇಳಲಾಗಿದೆ. ಉಜ್ಜೈನಿಯಲ್ಲಿರುವ ಮಹಾಕಾಲೇಶ್ವರ ಲಿಂಗವು ದೇಶಾದ್ಯಂತ ಇರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿತಗೊಂಡಿದೆ.

2016: ವಿಶ್ವಸಂಸ್ಥೆಯು ಹವಾಮಾನದಲ್ಲಿ ಉಂಟಾಗುತ್ತಿರುವ ಪ್ರತೀಕೂಲ ಬದಲಾವಣೆಗಳ ಬಗ್ಗೆ ಕಾಳಜಿ ವಹಿಸುವ ಪ್ಯಾರಿಸ್ ಒಡಂಭಡಿಕೆಗೆ ಸಹಿ ಮಾಡಿತು. ಇದು 195 ಸದಸ್ಯ ರಾಷ್ಟ್ರಗಳ ಒಮ್ಮತದಿಂದ ಏರ್ಪಟ್ಟಿತು.

ಪ್ರಮುಖಜನನ/ಮರಣ:

1854: ಬೆಲ್ಜಿಯನ್ ಬರಹಗಾರ ಮತ್ತು ಶಾಂತಿ ಕಾರ್ಯಕರ್ತ ಹೆನ್ರಿ ಲಾ ಫಾಂಟೈನ್ ಅವರು ಬ್ರಸ್ಸೆಲ್ಸ್ ನಗರದಲ್ಲಿ ಜನಿಸಿದರು. ಇವರಿಗೆ ಯೂರೋಪಿನಲ್ಲಿ ಶಾಂತಿ ಸ್ಥಾಪಿಸಲು ನಡೆಸಿದ ಮಹತ್ವದ ಪ್ರಯತ್ನಗಳಿಗಾಗಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1876:  ಆಸ್ಟ್ರಿಯನ್-ಸ್ವೀಡಿಷ್ ವೈದ್ಯಶಾಸ್ತ್ರಜ್ಞ ರಾಬರ್ಟ್ ಬರಾನಿ ಅವರು ವಿಯೆನ್ನಾದಲ್ಲಿ ಜನಿಸಿದರು. ‘ವೆಸ್ಟಿಬ್ಯುಲಾರ್ ಅಪಾರಟಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1914 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತು.

1904: ಖ್ಯಾತ ಪತ್ರಿಕೋದ್ಯಮಿ, ಇಂಡಿಯನ್ ಎಕ್ಸ್ಪ್ರೆಸ್ ಸಮೂಹ ಸ್ಥಾಪಕ ರಾಮನಾಥ ಗೋಯೆಂಕಾ ಅವರು ಬಿಹಾರದ ದರ್ಭಾಂಗ ಎಂಬಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿನ ಮಹತ್ಸಾಧಕಾರಿಗೆ ಇವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

1909: ಇಟಾಲಿಯನ್ ವೈದ್ಯಶಾಸ್ತ್ರಜ್ಞೆ ರೀಟಾ ಲೆವಿ-ಮೊಂಟಾಲ್ಸಿನಿ ಅವರು ಇಟಲಿಯ ಟ್ಯುರಿನ್ ಎಂಬಲ್ಲಿ ಜನಿಸಿದರು. ಇವರಿಗೆ ‘ನರ್ವ್ ಗ್ರೋಥ್ ಫ್ಯಾಕ್ಟರ್’ ಕುರಿತಾದ ಸಂಶೋಧನೆಗಾಗಿ 1986 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1914: ಪ್ರಖ್ಯಾತ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಬಲದೇವ್ ರಾಜ್ ಚೋಪ್ರಾ ಅವರು ಪಂಜಾಬಿನ ಲೂಧಿಯಾನದಲ್ಲಿ ಜನಿಸಿದರು. ಪ್ರಖ್ಯಾತ ಚಲನಚಿತ್ರಗಳಾದ ನಯಾ ದೌರ್, ಕಾನೂನ್, ಗುಮ್ರಾಹ್, ಹಮ್ರಾಜ್ ಮುಂತಾದವುಗಳಲ್ಲದೆ ದೂರದರ್ಶನದಲ್ಲಿ ಪ್ರಖ್ಯಾತಗೊಂಡ ಮಹಾಭಾರತ ಧಾರವಾಹಿಯನ್ನು ರೂಪಿಸಿದ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಮತ್ತು ಪದ್ಮಭೂಷಣ ಗೌರವಗಳು ಸಂದಿದ್ದವು.

1919: ಅಮೆರಿಕದ ರಸಾಯನ ಶಾಸ್ತ್ರಜ್ಞ ಡೊನಾಲ್ಡ್ ಜೆ ಕ್ರಾಮ್ ಅವರು ವೆರ್ಮೌಂಟ್ ಬಳಿಯ ಚೆಸ್ಟರ್ ಎಂಬಲ್ಲಿ ಜನಿಸಿದರು. ‘ಮೊಲೆಕ್ಯುಲ್ಸ್ ವಿಥ್ ಸ್ಟ್ರಕ್ಚರ್ ಸ್ಪೆಸಿಫಿಕ್ ಇಂಟರಾಕ್ಷನ್ಸ್ ಆಫ್ ಹೈ ಸೆಲೆಕ್ಟಿವಿಟಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1987 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1935: ಭಾರತೀಯ-ಅಮೆರಿಕನ್ ಗಣಿತಜ್ಞೆ ಭಾಮಾ ಶ್ರೀನಿವಾಸನ್ ಅವರು ಚೆನ್ನೈನಲ್ಲಿ ಜನಿಸಿದರು. ಇವರು ‘ರೆಪ್ರೆಸೆಂಟೇಶನ್ ಥಿಯರಿ ಆಫ್ ಫೈನೈಟ್ ಗ್ರೂಪ್ಸ್’ ಸಿದ್ಧಾಂತಕ್ಕೆ ಪ್ರಸಿದ್ಧರಾಗಿದ್ದು ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ.

1945: ಭಾರತೀಯ ಆಡಳಿತ ಸೇವೆಯ ಅಧಿಕಾರಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧೀ ಜನಿಸಿದರು. ಇವರು ತಂದೆಯ ಕಡೆಯಿಂದ ಮಹಾತ್ಮ ಗಾಂಧೀ ಅವರ ಮೊಮ್ಮಗ ಮತ್ತು ತಾಯಿಯ ಕಡೆಯಿಂದ ರಾಜಾಜಿ ಅವರ ಮೊಮ್ಮಗ.

1945: ಪ್ರಸಿದ್ಧ ಹಾಸ್ಯನಟರಾದ ಎಂ.ಎಸ್. ಉಮೇಶ್ ಅವರು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ರಂಗಪ್ರವೇಶಿಸಿ ಮುಂದೆ ಚಲನಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರಿಗೆ ಕಥಾ ಸಂಗಮ ಚಿತ್ರದಲ್ಲಿನ ಪೋಷಕ ಪಾತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಪ್ರಶಸ್ತಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಗೌರವಗಳು ಸಂದಿವೆ.

1974: ಪ್ರಖ್ಯಾತ ಇಂಗ್ಲಿಷ್ ಕತೆಗಾರ, ಪ್ರಕಾಶಕ ಮತ್ತು ಇಂಗ್ಲಿಷ್-ಹಿಂದೀ ಪತ್ರಿಕೆಗಳ ಅಂಕಣಕಾರ, ಮತ್ತು ಚಲನಚಿತ್ರ ಕತೆಗಾರರಾದ ಚೇತನ್ ಭಗತ್ ನವದೆಹಲಿಯಲ್ಲಿ ಜನಿಸಿದರು.

1933: ಐಶಾರಾಮಿ ಕಾರುಗಳ ನಿರ್ಮಾಣಕ್ಕೆ ಪ್ರಸಿದ್ಧವಾದ ರೋಲ್ಸ್ ರಾಯ್ಸ್ ಸಂಸ್ಥೆಯ ಸಹಸಂಸ್ಥಾಪಕ ಹೆನ್ರಿ ರಾಯ್ಸ್ ಅವರು, ಇಂಗ್ಲೆಂಡಿನ ಸಸ್ಸೆಕ್ಸ್ ಬಳಿಯ ವೆಸ್ಟ್ ವಿಟ್ಟರಿಂಗ್ ಎಂಬಲ್ಲಿ ನಿಧನರಾದರು.

1989: ಇಟಾಲಿಯನ್-ಅಮೆರಿಕನ್ ಭೌತಶಾಸ್ತ್ರಜ್ಞ ಎಮಿಲೋ ಜಿ. ಸೆಗ್ರೆ ಅವರು ಕ್ಯಾಲಿಫೋರ್ನಿಯಾ ಬಳಿಯ ಲಫಾಯೆಟ್ಟೆ ಎಂಬಲ್ಲಿ ನಿಧನರಾದರು. ಟೆಕ್ನೀಟಿಯಂ, ಅಸ್ಟಾಟೈನ್, ಆ್ಯಾಂಟಿ ಪ್ರೊಟಾನ್, ಸಬ್-ಆಟೋಮಿಕ್ ಪಾರ್ಟಿಕಲ್ ಮುಂತಾದವುಗಳನ್ನು ಕಂಡುಹಿಡಿದ ಇವರಿಗೆ 1959 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1994: ಅಮೆರಿಕದ 37ನೇ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಅವರು ತಮ್ಮ 81ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು.

2007: ಬುದ್ಧಿ ಮಾಂದ್ಯ ಮಕ್ಕಳ ಮಧುರಂ ನಾರಾಯಣನ್ ಕೇಂದ್ರದ ಸಂಸ್ಥಾಪಕ ಹಾಗೂ ಮಾಜಿ ಏರ್ ವೈಸ್ ಮಾರ್ಷಲ್ ವಿ. ಕೃಷ್ಣಸ್ವಾಮಿ ಅವರು ತಮ್ಮ 81ನೆಯ ವಯಸ್ಸಿನಲ್ಲಿ ಚೆನ್ನೈಯಲ್ಲಿ ನಿಧನರಾದರು. ಅವರು ತಮಿಳುನಾಡಿನ ವಾಯುಪಡೆ ಮತ್ತು ಹಿರಿಯರ ಸೇವಾ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬುದ್ಧಿಮಾಂದ್ಯ ಮಕ್ಕಳಿಗಾಗಿ ಸ್ಥಾಪಿಸಿದ ಮಧುರಂ ನಾರಾಯಣನ್ ಕೇಂದ್ರಕ್ಕಾಗಿ 2004ರಲ್ಲಿ ಅವರನ್ನು ರಾಷ್ಟ್ರಪತಿಗಳು ಗೌರವಿಸಿದ್ದರು.

2009: ಕನ್ನಡದ ಹಿರಿಯ ಕವಿ, ಕತೆಗಾಗಾರ, ವಿಮರ್ಶಕ ‘ದೇಶ ಕುಲಕರ್ಣಿ’ ಎಂಬ ಕಾವ್ಯನಾಮದಿಂದ ಪ್ರಸಿದ್ದರಾದ ಡಿ.ಎಲ್.ಉಪೇಂದ್ರನಾಥ್ ಅವರು ಬೆಂಗಳೂರಿನಲ್ಲಿ ನಿಧನರಾದರು.

2011: ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕಾರ ಪಂಡಿತ್ ಮಾಧವ ಗುಡಿ ಅವರು ಧಾರವಾಡದಲ್ಲಿ ನಿಧನರಾದರು. ಪಂಡಿತ್ ಭೀಮಸೇನ ಜೋಶಿ ಅವರ ಆಪ್ತ ಶಿಷ್ಯರಾಗಿ ಮಹತ್ವದ ಸಾಧನೆ ಮಾಡಿದ ಇವರಿಗೆ ಕರ್ನಾಟಕ ಸಂಗೀತ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

2013: ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರಾದ ಜೆ.ಎಸ್. ವರ್ಮಾ ಅವರು ಹರ್ಯಾಣಾದ ಗುರ್ಗಾಂವ್ ಎಂಬಲ್ಲಿ ತಮ್ಮ 80ನೆಯ ವಯಸ್ಸಿನಲ್ಲಿ ನಿಧನರಾದರು.

2013: ಪ್ರಸಿದ್ಧ ಸಂಗೀತ ವಿದ್ವಾಂಸ ಮತ್ತು ಪಿಟೀಲು ವಾದಕ ಲಾಲ್ಗುಡಿ ಜಯರಾಮನ್ ಅವರು ಚೆನ್ನೈನಲ್ಲಿ ತಮ್ಮ 82ನೆಯ ವಯಸ್ಸಿನಲ್ಲಿ ನಿಧನರಾದರು. ಪದ್ಮಭೂಷಣ, ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಶೃಂಗಾರಂ ಚಿತ್ರದ ಸಂಗೀತಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

2013: ‘99 ಸೆಂಟ್ಸ್ ಓನ್ಲಿ’ ಮಾರಾಟ ಮಳಿಗೆಗಳ ಸ್ಥಾಪಕ, ಅಮೆರಿಕದ ಉದ್ಯಮಿ ಡೇವ್ ಗೋಲ್ಡ್ ಅವರು ಲಾಸ್ ಏಂಜೆಲಿಸ್ ನಗರದಲ್ಲಿ ನಿಧನರಾದರು.