ಕರಾಚಿ ಕಾಂಗ್ರೆಸ್ ಮಹಾಧಿವೇಶನ ೧೯೩೧ನೇ ಮಾರ್ಚಿ ೨೬ರಲ್ಲಿ ಆರಂಭವಾಯಿತು. ವಲ್ಲಭಭಾಯಿ ಪಟೇಲರು ಅಧ್ಯಕ್ಷರು. ಕೆಂಪು ಷರ್ಟು ಧಾರಿಗಳಾದ ಅನೇಕ ಯುವಕರು ಗಾಂಧೀಜಿಗೆ ಕರಿಯ ಬಾವುಟ ಪ್ರದರ್ಶನವನ್ನೂ ಮಾಡಿದರು. ಕಾಂಗ್ರೆಸ್ ಅಧಿವೇಶನದಲ್ಲಿಯೂ ಯುವಕರು ಅಸಮಾಧಾನ ಸೂಚಿಸಿದರು. ಇದಕ್ಕೆ ಕಾರಣ ಭಗತ್‌ಸಿಂಗ್ ಮತ್ತು ಸುಖದೇವರನ್ನು ಸರ್ಕಾರ ಗಲ್ಲಿಗೆ ಹಾಕಿದ್ದೇ. ಗಾಂಧೀಜಿ ಅವರಿಗೆಲ್ಲಾ ಸಮಾಧಾನ ಹೇಳಿ ಅಹಿಂಸೆಯೇ ಸರಿಯಾದ ದಾರಿ ಎಂದು ಭೋಧಿಸಿದರು. ಕೆಂಪು ಷರ್ಟ್ ಅಹಿಂಸೆಯೇ ಸರಿಯಾದ ದಾರಿ ಎಂದು ಬೋಧಿಸಿದರು. ಕೆಂಪು ಷರ್ಟ್ ಯುವಕರ ಮುಖಂಡ ಸುಭಾಷ್ ಚಂದ್ರ ಬೋಸರನ್ನೂ ಕರೆಸಿ ಅವರೊಡನೆ ಮಾತನಾಡಿದರು. ಕರಾಚಿ ಕಾಂಗ್ರೆಸ್ಸಿನ ವಿಷಯ ಸಮಿತಿಯಲ್ಲಿಯೂ ಬಹಳ ಚರ್ಚೆ ನಡೆಯಿತು. ಆದರೂ ಎಲ್ಲರೂ ಕಾಂಗ್ರೆಸ್ ಸಂಸ್ಥೆಯ ಮರ್ಯಾದೆಯನ್ನು ಹಾಳುಮಾಡುವುದಿಲ್ಲವೆಂದು ಭರವಸೆಯಿತ್ತರು ಈ ಅಧಿವೇಶನದಲ್ಲಿ ಜವಹರಲಾಲ್ ನೆಹರು ಗಾಂಧೀಜಿಯ ಹನ್ನೊಂದು ಅಂಶಗಳನ್ನೊಳಗೊಂಡ ಮೂಲಭೂತ ಹಕ್ಕುಗಳ ನಿರ್ಣಯವನ್ನು ತಂದರು. ಇದು ಕಾಂಗ್ರೆಸಿನಲ್ಲಿ ಅನುಮೋಧನೆಯಾಯಿತು. ಒಟ್ಟಿನಲ್ಲಿ ಕರಾಚಿ ಅಧಿವೇಶನ ಗಾಂಧೀಜಿಗೆ ಸ್ವಲ್ಪ ವಿರೋಧ ಪ್ರಕಟಿಸಿದರೂ ಕಡೆಗೆ ಅವರ ನಿರ್ಣಯಗಳನ್ನು ಒಪ್ಪಿ, ಗಾಂಧೀಜಿಯವರ ಪ್ರಭಾವವನ್ನು  ಹೆಚ್ಚಿಸಿತು.

ಲಾರ್ಡ್ ಅವಿರ್ನ ವೈಸ್‌ರಾಯ್ ಪದವಿಯಿಂದ ನಿವೃತ್ತರಾಗಿ, ಏಪ್ರಿಲ್ ೧೮ಕ್ಕೆ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಗಾಂಧೀಜಿ ಬೊಂಬಾಯಿಗೆ, ಬಂದು ಅವರಿಗೆ ಸುಖ ಪ್ರಯಾಣ ಬಯಸಿದರು.

ಗಾಂಧೀಜಿ ಒಪ್ಪಂದವನ್ನು ಪಾಲಿಸಲು ಬಹುವಾಗಿ ಪ್ರಯತ್ನಪಟ್ಟರೂ ಸರ್ಕಾರದ ಅಧಿಕಾರಿಗಳು ಆ ಒಪ್ಪಂದಕ್ಕೆ ವಿರುದ್ಧವಾಗಿ ನಡೆದು, ದೇಶದಲ್ಲಿ ಪುನಃ ಕ್ಷೋಭೆಯುಂಟುಮಾಡಲು ತೊಡಗಿದರು. ಲಾರ್ಡ್ ವಿಲ್ಲಿಂಗ್‌ಡನ್ ವೈಸರಾಯರಾದರು. ಗಾಂಧೀಜಿ ರೌಂಡ್ ಟೇಬಲ್ ಸಮ್ಮೇಳನಕ್ಕೆ ಹೋಗಬೇಕೆಂದು ನಿರ್ಧಾರವಾಗಿದ್ದರೂ ದೇಶದ ನಾನಾ ಭಾಗಗಳಲ್ಲಿ ಅಧಿಕಾರಿಗಳು ನಡೆಸುತ್ತಿದ್ದ ದಬ್ಬಾಳಿಕೆ ಗಾಂಧೀ – ಅವಿರ್ನ ಒಪ್ಪಂದಕ್ಕೆ ವಿರೊಧವಾಗಿತ್ತು. ಗಾಂಧೀಜಿ ವೈಸರಾಯರಿಗೆ ಬರೆದರು; ಬೊಂಬಾಯಿ ಗವರ್ನರಿಗೆ ಬರ್ಡೋಲಿ ರೈತರಿಗೆ ಆಗುತ್ತಿದ್ದ ಹಿಂಸೆಗಳ ಬಗ್ಗೆ ಬರೆದರು. ಯಾವ ಸಮಾಧಾನಕರವಾದ ಉತ್ತರವೂ ಬರಲಿಲ್ಲ. ಇದನ್ನೆಲ್ಲಾ ಕಂಡು ಗಾಂಧೀಜಿ ತಾವು ಲಂಡನ್ನಿಗೆ ಹೋಗಬೇಕಾಗಿಲ್ಲ ಎಂದು ನಿರ್ಣಯ ಮಾಡಿದರು.

ಗಾಂಧೀಜಿ ತಾವು ರೌಂಡ್ ಟೇಬಲ್ ಸಮ್ಮೇಳನಕ್ಕೆ ಹೋಗದೆ ಇರಲು ಕಾರಣ ಸಹ ತಿಳಿಸಿದರು. ವೈಸರಾಯರಿಗೂ ಬರೆದರು. ಗಾಂಧೀಜಿ ಲಂಡನ್ನಿಗೆ ಹೋಗುವುದಿಲ್ಲವೆಂಬ ನಿರ್ಧಾರವನ್ನು ಸಪ್ರು, ಜಯಕರ್ ಮುಂತಾದ ಲಿಬರಲ್ ಮುಖಂಡರು ತಿಳಿದು, ವೈಸರಾಯನ್ನು ಕಂಡು ಮಾತನಾಡಿದರು. ಪುನಃ ವೈಸರಾಯರಿಗೂ ಗಾಂಧೀಜಿಯವರಿಗೂ ಭೇಟಿಯಾಗಿ, ವೈಸರಾಯರು ತಕ್ಕ ಪರಿಹಾರಗಳನ್ನು ಮಾಡುವುದಾಗಿ ಭರವಸೆ ಕೊಡುವುದಾಗಿ ಹೇಳಿ ಗಾಂಧೀಜಿಯವರು ಲಂಡನ್ನಿನಲ್ಲಿ ನಡೆಯುವ ರೌಂಡ್ ಟೇಬಲ್ ಸಮ್ಮೇಳನಕ್ಕೆ ಹೋಗಬೇಕೆಂದು ಪ್ರಾರ್ಥಿಸಿದರು.

ಗಾಂಧೀಜಿ ಸೆಪ್ಟಂಬರ್ ೫ನೇ ತಾರೀಖು ಲಂಡನ್ನಿಗೆ ಪ್ರಯಾಣ ಮಾಡಿದರು. ಡಾ|| ಅನ್‌ಸಾರಿಯವರನ್ನು ಒಬ್ಬ ಪ್ರತಿನಿಧಿಯಾಗಿ ಬರಲು ವೈಸರಾಯರ ಅಪ್ಪಣೆ ಕೇಳಿದರು. ವೈಸರಾಯರು ನಿರಾಕರಿಸಿದರು. ಕಡೆಗೆ ಪಂಡಿತ ಮದನ ಮೋಹನ ಮಾಳವೀಯ ಮತ್ತು ಶ್ರೀಮತಿ ಸರೋಜಿನಿ ನಾಯ್ಡು ಇವರಿಬ್ಬರೂ ಪ್ರತಿನಿಧಿಗಳಾಗಿ ಗಾಂಧೀಜಿಯವರೊಡನೆ ಹೊರಟರು. ಗಾಂಧೀಜಿಯೊಡನೆ ಅವರ ಪರಿವಾರದಲ್ಲಿ ದೇವ್‌ದಾಸ್ ಗಾಂಧೀ, ಮಿರಾರ್ಬೆ, ಮಹದೇವ್ ದೇಸಾಯಿ ಮತ್ತು ಜಿ.ಡಿ.ಬಿರ್ಲಾ ಇವರುಗಳು ಹೊರಟರು. ಗಾಂಧೀಜಿ ಪ್ರಯಾಣ ಮಾಡಿದ ಹಡಗಿನ ಹೆಸರು “ರಾಜಪುಟಾನ” ಎಂದು. ಗಾಂಧೀಜಿ ಲಂಡನ್ನನ್ನು ಸೆಪ್ಟಂಬರ್ ೧೨ನೇ ತಾರೀಖು ತಲಪಿದರು. ಅಲ್ಲಿ ಮ್ಯೂರಿಯಲ್ ಲಿಸ್ಟರ್‌ರವರಲ್ಲಿ ಇಳಿದುಕೊಂಡರು. ಇದು ಲಂಡನ್ನಿನ ಬಡಜನರು ವಾಸಿಸುವ ಪ್ರದೇಶ. ತಾವು ಲಂಡನ್ನಿನಲ್ಲಿರುವವರೆಗೂ ಗಾಂಧೀಜಿ ಇಲ್ಲಿಯೇ ಇದ್ದರು.

ಸೆಪ್ಟಂಬರ್ ೧೪ನೇ ತಾರೀಖು ಪ್ರಥಮತಃ ಗಾಂಧೀಜಿ ರೌಂಡ್‌ಟೇಬಲ್ ಸಮ್ಮೇಳನದಲ್ಲಿ ಭಾಗಿಯಾಗಿದರು.

ಆ ಹೊತ್ತು ಲಾರ್ಡ್ ಸ್ಯಾಂಕಿಯವರ ಅಧ್ಯಕ್ಷತೆಯಲ್ಲಿ ಫೆಡರಲ್ ಸ್ಟ್ರಕ್ಚರ್ ಕಮಿಟಿಯ ಸಭೆ ನಡೆಯಿತು. ಮರು ದಿವಸ, ಎಂದರೆ ೧೫ನೇ ತಾರೀಖು ಗಾಂಧೀಜಿ ಭಾಷಣ ಮಾಡಿದರು. ಕಾಂಗ್ರೆಸ್ ಪರವಾಗಿ ಅವರು ಮಾತನಾಡುವುದಾಗಿ ತಿಳಿಸಿ, “ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯದ ಗುರಿಯನ್ನು ಹೊಂದಿದೆ; ಅದನ್ನು ಬದಲಾಯಿಸುವ ಹಾಗಿಲ್ಲ” ಎಂದರು. ಮುಸ್ಲಿಮರೂ, ಇತರ ಕೋಮಿನವರೂ ಸಂಪೂರ್ಣ ಸ್ವಾತಂತ್ರ್ಯದ ಗುರಿಗೆ ಬೆಂಬಲವೀಯಬೇಕೆಂದು ಕೋರಿದರು.

ಆದರೆ ಈ ಸಮ್ಮೇಳನದಲ್ಲಿ ಸರ್ಕಾರದವರು ತಮ್ಮ ಉದ್ದೇಶವನ್ನು ಸ್ಪಷ್ಟ ಪಡಿಸಲಿಲ್ಲ. ಯಾವ ನೀತಿ ನಿಯಮಗಳಿಂದಲೂ ಬದ್ಧರಾಗದ ಪ್ರತಿನಿಧಿಗಳು ತಮ್ಮ ಮೂಗಿನ ನೇರಕ್ಕೆ ಮಾತನಾಡಿದರು. ರಾಜರುಗಳೂ ಈ ಸಭೆಯಲ್ಲಿದ್ದರು. ಅವರು ತಮ್ಮ ಕೌಲು ಕರಾರುಗಳ ಬಗ್ಗೆ ಮಾತನಾಡಿದರು. ಮೈನಾರಿಟಿಗಳ ಸಮಸ್ಯೆಯೇ ಬಹಳ ಪ್ರಧಾನವಾಯಿತು. ಅದರ ಬಗ್ಗೆ ತೀರ್ಮಾನವಾದ ಹೊರತು, ಒಂದು ಹೆಜ್ಜೆಯನ್ನೂ ಮುಂದೆ ಇಡುವ ಹಾಗಿರಲಿಲ್ಲ. ಮೈನಾರಿಟೀಸ್ ಸಬ್‌ಕಮಿಟಿಯಲ್ಲಿ ಪ್ರತಿನಿಧಿಗಳು ಯಾವ ತೀರ್ಮಾನಕ್ಕೂ ಬರಲಿಲ್ಲ. ಪ್ರಧಾನ ಮಂತ್ರಿ ಮೆಕ್‌ಡೊನಾಲ್ಡ್‌ರು ತಾವು ಅದರ ಬಗ್ಗೆ ತೀರ್ಪು ಕೊಡುವುದಾಗಿಯೂ, ಅದನ್ನು ಎಲ್ಲರೂ ಒಪ್ಪಬೇಕೆಂದೂ ಕೋರಿದರು. ಡಾ. ಅಂಬೇಡ್ಕರ‍್ರು ಅಸ್ಪ್ರೃಶ್ಯರನ್ನು ಹಿಂದೂಗಳಿಂದ ಬೇರ್ಪಡಿಸಿ ಅವರಿಗೆ ಮುಸ್ಲಿಂ ಮುಂತಾದವರುಗಳಂತೆ ಚುನಾವಣೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯತೆಯನ್ನು ಕೋರಿದರು. ಗಾಂಧೀಜಿ ಇದನ್ನು ಬಲವಾಗಿ ವಿರೋಧಿಸಿದರು. ಅಸ್ಪ್ರೃಶ್ಯರನ್ನು ಹಿಂದೂಗಳಿಂದ ಬೇರ್ಪಡಿಸಿ ಅವರಿಗೆ ಪ್ರತ್ಯೇಕ ಪ್ರಾತಿನಿಧ್ಯೆತೆ ಕೊಡುವುದನ್ನು ಖಂಡಿಸಿದರು; ತಮ್ಮ ಜೀವವನ್ನು ಪಣವಿಟ್ಟು ಅದನ್ನು ವಿರೋಧಿಸುವುದಾಗಿ ತಿಳಿಸಿದರು.

ಇಷ್ಟರಲ್ಲಿ, ಇಂಗ್ಲೆಂಡಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಕನಸರ್ವೆಟಿವ್‌ಗಳು ದೊಡ್ಡ ಸಂಖ್ಯೆಯಲ್ಲಿ ಪಾರ್ಲಿಮೆಂಟಿಗೆ ಬಂದರು. ಕೆಲವು ಲೇಬರ್ ಪಂಗಡದವರನ್ನು ಸೇರಿಸಿಕೊಂಡು, ನ್ಯಾಷನಲ್ ಸರ್ಕಾರ ಬ್ರಿಟನ್ನಿನಲ್ಲಿ ರಚನೆಯಾಯಿತು. ಲೇಬರ್ ಪಾರ್ಟಿಯವರ ಕೈಯಿಂದ ಅಧಿಖಾರ ತಪ್ಪಿ ಹೋದರೂ ರಾಮ್ಸೆ ಮೆಕ್‌ಡೊನಾಲ್ಡ್‌ರವರೇ ಪ್ರಧಾನ ಮಂತ್ರಿಯಾದರು.

ಸಫ್ರು ಮುಂತಾದವರು ಒಂದು ಹೇಳಿಕೆ ಹೊರಡಿಸಿ “ಇಂಡಿಯಕ್ಕೆ ಬರೀ ಪ್ರಾಂತ್ಯ ಸರ್ಕಾರಗಳ ಸ್ವಾಯತ್ತತೆ ಸಾಲದು, ಇದಕ್ಕಾಗಿ ನಾವು ಲಂಡನ್ನಿಗೆ ಬರಬೇಕಾಗಿರಲಿಲ್ಲ. ಅದು ಸೈಮಿನ್ ಕಮಿಷನ್‌ನ ಶಿಫಾರಸಿನಲ್ಲಿಯೇ ಇತ್ತು. ಕೇಂದ್ರದಲ್ಲಿ ನಮಗೆ ಜವಾಬ್ದಾರಿ ದೊರೆತ ಹೊರತು ನಮಗೆ ಸಮಾಧಾನವಾಗುವುದಿಲ್ಲ” ಎಂದು ತಿಳಿಸಿದರು.

ನವೆಂಬರ್ ೨೭ರಲ್ಲಿ ನಡೆದ ಪ್ಲಿನರಿ ಅಧಿವೇಶನದಲ್ಲಿ ಇಂಗ್ಲೆಂಡಿನ ಪ್ರಧಾನ ಮಂತ್ರಿ ರಾಂಸೆ ಮೆಕ್‌ಡೊನಾಲ್ಡರು ಮಾತನಾಡಿ “ಈಗಿನ ಸನ್ನಿವೇಶದಲ್ಲಿ ಕೇಂದ್ರದಲ್ಲಿ ವೈಸರಾಯರೇ (೧) ಡಿಫನ್ಸ್ (೨) ಎಕ್ಸ್‌ಟರ್ನಲ್ ಆಫೇರ್ಸ್ ಮತ್ತು (೩) ಫಿನಾನ್ಸ್ ತಮ್ಮ ಕೈಯಲ್ಲಿಟ್ಟುಕೊಳ್ಳಬೇಕಾಗುವುದು. ಉಳಿದ ಅಂಶಗಳನ್ನು ಶಾಸನ ಸಭೆಗಳ ಜವಾಬ್ದಾರಿಗೆ ಬಿಡಲು ಸಾಧ್ಯ” ಎಂದರು.

ಗಾಂಧೀಜಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದವೀಯುತ್ತಾ “ಕಾಂಗ್ರೆಸಿನ ಗುರಿ ನಿಮಗೇನೆಂದು ತಿಳಿದಿದೆ? ಇಂಡಿಯಾನಕ್ಕೆ ನಿಜವಾದ ಸ್ವಾತಂತ್ರ್ಯ ಬೇಕು. ಅದನ್ನು ಯಾವ ಹೆಸರಿನಿಂದಲಾದರೂ ಕರೆಯಿರಿ. ಗುಲಾಬಿಯನ್ನು ಯಾವ ಹೆಸರಿನಿಂದಲಾದರೂ ಕರೆಯಿರಿ. ನಮಗೆ ನಿಜವಾದ ಪರಿಮಳದ ಪುಷ್ಪಬೇಕು. ಕಾಗದದ ಹೂವನ್ನು ನಾನು ಸ್ವೀಕರಿಸಲಾರೆವು. ನಾವು ಎಲ್ಲಾ ರಾಜಿಗೂ ಸಿದ್ಧ. ಆದರೆ ನಾವಿಬ್ಬರೂ ಒಂದೇ ಒಂದು ಗುರಿಯನ್ನು ಹೊಂದಿರಬೇಕು. ಇಲ್ಲದಿದ್ದರೆ ರಾಜಿ ಹೇಗೆ ಸಾಧ್ಯ?” ಎಂದು ಹೇಳಿದರು.

ಎರಡನೆ ರೌಂಡ್ ಟೇಬಲ್ ಸಮ್ಮೇಳನ ಯಾವ ಫಲಿತಾಂಶವೂ ಇಲ್ಲದೆ ಮುಕ್ತಾಯವಾಯಿತು. ಗಾಂಧೀಜಿಗಂತು ಯಾವ ಸಮಾಧಾನವೂ ಆಗಲಿಲ್ಲ. ಸಮ್ಮೇಲನ ಮುಗಿದಮೇಲೆ  ಇಂಗ್ಲೆಂಡಿನ ಇತರ ಪ್ರದೇಶಗಳಲ್ಲಿ ಸಂಚರಿಸಿ ಸಾಮಾನ್ಯ ಜನರ ಮತ್ತು ಕೆಲವು ಪ್ರಮುಖರ ಪರಿಚಯ ಮಾಡಿಕೊಂಡರು.

ಇಂಗ್ಲೆಂಡ್ ಸಂಚಾರ ಮುಗಿಸಿಕೊಂಡು ಗಾಂಧೀಜಿ ಆ ದೇಶವನ್ನು ಡಿಸೆಂಬರ್ ೫ನೇ ತಾರೀಖು ಬಿಟ್ಟರು. ಹಿಂತಿರುಗುವಾಗ ಒಂದು ದಿನ ಪ್ಯಾರಿಸಿನಲ್ಲಿದ್ದರು. ಸ್ಟಿಟ್‌ಜರ್ ಲೆಂಡ್‌ಗೆ ಹೋಗಿ ರೊಮೇನ್ ರೋಲೆಂಡರನ್ನು ಭೇಟಿ ಮಾಡಿದರು. ಅಲ್ಲಿಂದ ಇಟಲಿಗೆ ಹೋಗಿ ಮಸೋಲಿನಿಯನ್ನು ಭೇಟಿ ಮಾಡಿದರು. ಪೋಪ್‌ರನ್ನು ನೋಡಲಾಗಲಿಲ್ಲ. ಡಿಸೆಂಬರ್ ೧೪ರಲ್ಲಿ ಇಂಡಿಯಾಕ್ಕೆ ಸಮುದ್ರ ಪ್ರಯಾಣ ಮಾಡಿದರು. ಇಂಡಿಯಾಕ್ಕೆ ಡಿಸೆಂಬರ್ ೨೮ರಲ್ಲಿ ಹಿಂತಿರುಗಿ ಬಂದರು.

ಇಂಡಿಯಾಕ್ಕೆ ಬಂದು ನೋಡಿದರೆ, ಸ್ಥಿತಿ ಬಹಳ ಹದಗೆಟ್ಟಿತ್ತು. ಉತ್ತರ ಪ್ರದೇಶ, ಸರಹದ್ದಿನ ಪ್ರಾಂತ ಮತ್ತು ಬಂಗಾಳದಲ್ಲಿ ಸರ್ಕಾರ ಪುನಃ ದಬ್ಬಾಳಿಕೆ ಆರಂಭಿಸಿಬಿಟ್ಟಿತ್ತು. ಆರ್ಡಿನೆನ್ಸುಗಳನ್ನು ಜಾರಿ ಮಾಡಿ ಸರ್ಕಾರ  ಎಷ್ಟು ದಬ್ಬಾಳಿಕೆ ನಡೆಸುತ್ತಿದೆ ಎಂಬುದರ ವಿವರವನ್ನು ಜವಹರಲಾಲ್ ನೆಹರು ಗಾಂಧೀಜಿಗೆ ತಿಳಿಸಿದ್ದರು. ಡಿಸೆಂಬರ್ ೨೮ರಲ್ಲಿ ಗಾಂಧೀಜಿ ಮುಂಬಯಿನಲ್ಲಿ ಹಡಗು ಇಳಿಯುವುದಕ್ಕೆ ಮುಂಚೆಯೇ ಉತ್ತರ ಪ್ರದೇಶ ಕಾಂಗ್ರೆಸ್ ಕಂದಾಯ ಕೊಡದ ಚಳುವಳಿಯನ್ನು ಆರಂಭಿಸಿತ್ತು. ಉತ್ತರ ಪ್ರದೇಶ ಸರಹದ್ದು ಪ್ರಾಂತ್ಯ ಮತ್ತು ಬಂಗಾಳದಲ್ಲಿ ಸರ್ಕಾರ ಆರ್ಡಿನೆನ್ಸ್ ಜಾರಿಗೆ ತಂದಿತ್ತು. ಡಿಸೆಂಬರ್ ೨೫ರಲ್ಲಿ ಖಾನ್ ಅಬ್ದುಲ್ ಗಫಾರ್ ಖಾನರನ್ನು ಇತರರನ್ನೂ ದಸ್ತಗಿರಿ ಮಾಡಿತು. ಒಂದು ವಾರದೊಳಗೆ ೧,೦೦೦ ಕೆಂಪು ಷರ್ಟಿನವರನ್ನು ಬಂಧಿಸಿತು. ಮುಂಬಯಿನಲ್ಲಿ ಗಾಂಧೀಜಿಯನ್ನು ಸ್ವಾಗತಿಸಲು ಹೊರಟಿದ್ದ ಜವಹರಲಾಲ್ ನೆಹರೂರವನ್ನು ದಸ್ತಗಿರಿ ಮಾಡಿತು. ಅವರ ವಿಚಾರಣೆ ನಡೆಸಿ, ಅವರಿಗೆ ಭಾರೀ ಶಿಕ್ಷೆ ವಿಧಿಸಿತು.

ಬೊಂಬಾಯಿನಲ್ಲಿ ಹಡಗಿನಿಂದ ಇಳಿದ ಮೇಲೆ ಗಾಂಧೀಜಿಗೆ ಭಾರೀಸ್ವಾಗತವಾಯಿತು. ಕೂಡಲೆ ಅವರು ವೈಸರಾಯರಿಗೆ ಭೇಟಿಗಾಗಿ ಪತ್ರ ಬರೆದರು. ವೈಸರಾಯರು ಉತ್ತರವೀಯುತ್ತಾ ಆರ್ಡಿನೆನ್ಸ್ ಮತ್ತು ದಸ್ತಗಿರಿ ವಿಷಯಗಳನ್ನು ತಾವು ಚರ್ಚಿಸುವುದಿಲ್ಲವೆಂದೂ, ಬೇಕಾದರೆ ರೌ.ಟೇ.ಸ.ದ ವಿಷಯವನ್ನು ಚರ್ಚಿಸಬಹುದೆಂದೂ ಉತ್ತರವಿತ್ತರು.

ವೈಸರಾಯರ ಈ ಉತ್ತರವನ್ನು ಮತ್ತು ಸರ್ಕಾರದ ದಬ್ಬಾಳಿಕೆಯನ್ನು ಪರಿಶೀಲಿಸಲು ಕಾಂಗ್ರೆಸ್ ವರ್ಕಿಂಗ್ ಕಮಿಟಿ ೧೯೩೧ನೇ ಡಿಸೆಂಬರ್ ೩೧ರಲ್ಲಿ ಸಭೆ ಸೇರಿತು. ರೌಂ.ಟೇ.ಸ.ದ ನಡೆವಳಿಕೆಗಳು ತೃಪ್ತಿಕರವಾಗಿಲ್ಲವೆಂದು ವರ್ಕಿಂಗ್ ಕಮಿಟಿ ತೀರ್ಮಾನಿಸಿತು. ಆರ್ಡಿನೆನ್ಸ್‌ಗಳ ಜಾರಿಯಿಂದ ಆದ ದಸ್ತಗಿರಿಗಳ ಮತ್ತು ಪೊಲೀಸ್ ಅತ್ಯಾಚಾರಗಳ ಬಗ್ಗೆ ಸರ್ಕಾರ ಬಹಿರಂಗ ವಿಚಾರಣೆ ನಡೆಸಬೇಕೆಂದು ಹೇಳಿತು. ಸರ್ಕಾರ ತೃಪ್ತಿ ಕರವಾದ ಉತ್ತರ ಕೊಡದಿದ್ದರೆ, ನಿಲ್ಲಿಸಿದ್ದ ಕಾನೂನುಭಂಗ ಚಳುವಳಿಯನ್ನು ಪುನಃ ಆರಂಭಿಸಲು ದೇಶಕ್ಕೆ ಸಂದೇಶ ಕಳುಹಿಸಲಾಗುವುದೆಂದೂ ನಿರ್ಧರಿಸಿತು.

ಗಾಂಧೀಜಿ ವೈಸರಾಯರ ಭೇಟಿಗಾಗಿ ಪುನಃ ಬರೆದರು. ಸರಿಯಾದ ಉತ್ತರ ಬರಲಿಲ್ಲ. ಅದರ ಬದಲಾಗಿ ೧೯೩೨ನೇ ಜನವರಿ ೪ನೇ ತಾರೀಖು ಬೆಳಗಿನ ಜಾವ ೩  ಗಂಟೆಗೆ ಗಾಂಧೀಜಿಯನ್ನು ದಸ್ತಗಿರಿ ಮಾಡಲಾಯಿತು. ಆಗ ಗಾಂಧೀಜಿ ಮಣಿಭವನದಲ್ಲಿ ಮೇಲ್ಮಚ್ಛಿನಲ್ಲಿ ನಿದ್ರೆ ಮಾಡುತ್ತಿದ್ದರು. ಇದೇ ಕಾಲದಲ್ಲಿ ವಲ್ಲಭಭಾಯಿ ಪಟೇಲ್‌, ಸುಭಾಷ್ ಚಂದ್ರಬೋಸ್, ರಾಜೇಂದ್ರ ಪ್ರಸಾದ್, ಅನ್‌ಸಾರಿ, ಕಮಲಾ ನೆಹ್ರು, ಕಸ್ತೂರಿಬಾ, ಮಣಿ ಬೆನ್‌ಪಟೇಲ್ ಇವರನ್ನೆಲ್ಲಾ ದಸ್ತಗಿರಿ ಮಾಡಲಾಯಿತು. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಇವುಗಳನ್ನು ಕಾನೂನು ಬಾಹಿರ ಸಂಸ್ಥೆಗಳೆಂದು ಸರ್ಕಾರ ಸಾರಿತು. ಇಡೀ ದೇಶದಲ್ಲಿ ೧೫,೦೦೦ ಕಾಂಗ್ರೆಸ್ ಮುಖಂಡರನ್ನು ದಸ್ತಗಿರಿ ಮಾಡಲಾಯಿತು.

ಸರ್ಕಾರದ ದಬ್ಬಾಳಿಕೆ ನಗ್ನ ನರ್ತನ ಮಾಡುತ್ತಿತ್ತು, ಕಾಂಗ್ರೆಸ್ ಜನರು ಕಾನೂನು ಭಂಗವನ್ನು ಆಚರಿಸುತ್ತಿದ್ದರು. ಕರ್ನಾಟಕದ ಅಂಕೋಲಾ ಸಿದ್ಧಾಪುರ, ಸಿರಿಸಿ ಈ ಪ್ರದೇಶಗಳಲ್ಲೂ, ಗುಜರಾತಿನ ರಾಸ್ ಎಂಬಲ್ಲಿಯೂ ರೈತರ ಕರನಿರಾಕರಣ ಚಳುವಳಿ ಬಹಳ ಜೋರಿನಿಂದ ನಡೆಯಿತು. ೧೯೩೨ನೇ ಜನವರಿಯಿಂದ ಆರಂಭವಾದ ಸತ್ಯಾಗ್ರಹ ಭರದಿಂದ ನಡೆಯಿತು. ಪತ್ರಿಕೆಗಳಿಗೆ ಪೋಸ್ಟಲ್ ರಿಯಾಯತಿಯನ್ನು ಸರ್ಕಾರದವರು ನಿಲ್ಲಿಸಿದರು. ಅನೇಕ ಪತ್ರಿಕೆಗಳನ್ನು ಮುಟ್ಟಕೋಲು ಹಾಕಿದರು. ಕಾನೂನುಭಂಗ ಮಾಡಿದವರಿಗೆ ಭಾರಿ ಜುಲ್ಮಾನೆಗಳನ್ನು ವಿಧಿಸಲಾಯಿತು. ಕಾನೂನುಭಂಗ ಮಾಡುವವರು ತಮ್ಮ ಕೆಲಸಗಳನ್ನು ಸಡಲಿಸಲಿಲ್ಲ. ಜನವರಿ ತಿಂಗಳಲ್ಲಿ ೧೫,೦೦೦ ಫೆಬ್ರವರಿಯಲ್ಲಿ ೧೮,೦೦೦ ಜನರ ದಸ್ತಗಿರಿ ಮತ್ತು ಶಿಕ್ಷೆಯಾಯಿತು. ಹಲವೇ ತಿಂಗಳುಗಳಲ್ಲಿ ೭೦,೦೦೦ ಜನರವರೆಗೂ ದಸ್ತಗಿರಿ ಮತ್ತು ಶಿಕ್ಷೆಯಾಯಿತು. ಕಾನೂನುಭಂಗ ೧೯೩೩ ಮೇ ತಿಂಗಳಿನವರೆಗೂ ನಡೆಯಿತು.

೧೯೩೨ನೇ ಆಗಸ್ಟ್ ೧೭ರಲ್ಲಿ ಇಂಗ್ಲೆಂಡಿನ ಪ್ರಧಾನ ಸಚಿವರು ಕಮ್ಯುನಲ್ ಅವಾರ್ಡ್ ಮೂಲಕ ವಿವಿಧ ಕೋಮುಗಳಿಗೆ ಯಾವ ರೀತಿ ಚುನಾವಣೆ ನಡೆಯಬೇಕೆಂಬುದನ್ನು ಸೂಚಿಸಿದರು; ಅಸ್ಪ್ರೃಶ್ಯ ವರ್ಗದವರಿಗೂ ಮುಸ್ಲಿಮರಿಗೂ ಮತ್ತು ಯುರೋಪಿಯನ್ನರಿಗೂ ವಿಧಿಸಿದಂತೆ ಪ್ರತ್ಯೇಕ ಚುನಾವಣಾ ಪದ್ಧತಿಯನ್ನು ಆಚರಣೆಗೆ ತರಬೇಕೆಂದು ಸಲಹೆ ಮಾಡಿದರು. ಇದು ಗಾಂಧೀಜಿಗೆ ಬಹಳ ಅಸಮಾಧಾನ ಉಂಟುಮಾಡಿತು.

ಈ ಪದ್ಧತಿಯನ್ನು ಅನುಸರಿಸಿದರೆ ಅಸ್ಪ್ರೃಶ್ಯರನ್ನು ಹಿಂದೂ ಜನಾಂಗದಿಂದ ಪ್ರತ್ಯೇಕ ಮಾಡಿದಂತೆಯೇ ಆಗುತ್ತದೆಂದೂ, ಇದರಿಂದ ಹಿಂದೂಗಳಿಗೂ ಮತ್ತು ಹಿಂದೂ ಜನಾಂಗಕ್ಕೂ ಅನ್ಯಾಯವಾಗುತ್ತದೆಂದೂ ರೌಂಡ್ ಟೇಬಲ್ ಸಮ್ಮೇಳನಲ್ಲಿಯೇ ಗಾಂಧೀಜಿ ತಮ್ಮ ಭಾಷಣದಲ್ಲಿ ಪ್ರಧಾನ ಸಚಿವರಿಗೆ ತಿಳಿಸಿದ್ದರು. ಅಸ್ಪ್ರೃಶ್ಯರಿಗೆ ಪ್ರತ್ಯೇಕ ಚುನಾವಣಾಧಿಕಾರವನ್ನು ಕೊಟ್ಟರೆ ಅದನ್ನು ತಾವು ತಮ್ಮ ಪ್ರಾಣವಿರುವವರೆಗೂ ಎದುರಿಸುವುದಾಗಿ ಹೇಳಿದ್ದರು. ಈಗ ಆ ಸನ್ನಿವೇಶ ಬಂದಿತು. ಗಾಂಧೀಜಿ ಈಗ ಜೈಲಿನಲ್ಲಿದ್ದರೂ ಇಂಗ್ಲೆಂಡಿನ  ಪ್ರಧಾನ ಸಚಿವರಿಗೂ ಸೆಕ್ರಟರಿ ಆಫ್ ಸ್ಟೇಟರಿಗೂ ಸೆಪ್ಟಂಬರ್ ೧೩ರಲ್ಲಿ ಪತ್ರ ಬರೆದು, ಅಸ್ಪ್ರೃಶ್ಯರಿಗೆ ಪ್ರತ್ಯೇಕ ಚುನಾವಣಾ ಪದ್ಧತಿಯನ್ನು ತೆಗೆಯದಿದ್ದರೆ ತಾವು ಅಮರಣಾಂತ ಉಪವಾಸ ಮಾಡುವುದಾಗಿ ತಿಳಿಸಿದರು. ಸೆಪ್ಟಂಬರ್ ೧೯ರಿಂದ ಯರವಾಡಾ ಕಾರಾಗೃಹದಲ್ಲಿಯೇ ಉಪವಾಸ ಪ್ರಾರಂಭಿಸಿದರು. ಇಡೀ ದೇಶದಲ್ಲಿ ಹಾಹಾಕಾರ ಉಂಟಾಯಿತು. ಏನಾದರೂ ಮಾಡಿ ಗಾಂಧೀಜಿಯ ಪ್ರಾಣವನ್ನು ಉಳಿಸಬೇಕೆಂದು ಪ್ರಯತ್ನಗಳು ನಡೆದವು. ದೇಶದಲ್ಲೆಲ್ಲಾ ಸಭೆಗಳು ನಡೆದು, ಇಂಗ್ಲೆಂಡಿನ ಪ್ರಧಾನ ಸಚಿವರಿಗೂ ಇಂಡಿಯಾ ಸರ್ಕಾರಕ್ಕೂ ತಂತಿ ಕಳುಹಿಸಲಾಯಿತು. ಸರ್ಕಾರ ಮುಖಂಡರಿಗೆ ಗಾಂಧೀಜಿಯವರೊಡನೆ ಮಾತನಾಡಿ ಬೇರೆ ಯಾವುದಾದರೂ ಒಪ್ಪಿಕೆಯಾಗುವ ಸಲಹೆಗೆ ಬರಬಹುದೆಂದು ತಿಳಿಸಿತು. ಅಸ್ಪ್ರೃಶ್ಯರಿಗೆ ಪ್ರತ್ಯೇಕ ಚುನಾವಣೆಯಿರಬೇಕೆಂದು ರೌಂ.ಟೇ.ಸ.ದಲ್ಲಿ ಸಲಹೆ ಕೊಟ್ಟವರು ಡಾ. ಅಂಬೇಡ್ಕರ್. ಇವರು ಅಸ್ಪ್ರೃಶ್ಯರಲ್ಲಿ ಭಾರಿ ಮುಖಂಡರು, ದೊಡ್ಡ ವಿದ್ವಾಂಸರು, ಕಾನೂನು ಪಂಡಿತರು, ಬೊಂಬಾಯಿ ಪ್ರದೇಶದಲ್ಲಿ ಬಹಳ ಪ್ರತಿಭಾಶಾಲಿಗಳು. ಇವರು ಗಾಂಧೀಜಿಯ ಉಪವಾಸವನ್ನು ಟೀಕಿಸಿದರು; ಇದೊಂದು “ಸ್ಟಂಟ್” ಎಂದರು: ಏನೇ ಆಗಲಿ ಹರಿಜನರಿಗೆ ಪ್ರತ್ಯೇಕ ಚುನಾವಣಾ ಪದ್ಧತಿಯನ್ನು ತೆಗೆದು ಹಾಕಲು ಅವಕಾಶ ಕೊಡುವುದಿಲ್ಲವೆಂದು ಹಠ ಹಿಡಿದರು.

ಬೇರೆ ಮುಖಂಡರಿಗೆ ಇದು ಬಹಳ ಕಷ್ಟದ ಪ್ರಸಂಗವಾಯಿತು. ಸಿ.ರಾಜಗೋಪಾಲಾಚಾರಿ ಮುಂತಾದವರು ಬಹಳ ಬುದ್ಧಿ ಉಪಯೋಗಿಸಿ ಡಾ. ಅಂಬೇಡ್ಕರ್‌ರವರಿಗೂ ಗಾಂಧೀಜಿಯವರಿಗೂ ಒಪ್ಪಿಗೆಯಾದ ಒಂದು ಸೂತ್ರವನ್ನು ಕಂಡುಹಿಡಿದರು. ಇದು ಆಗಬೇಕಾದರೆ ಐದು ದಿವಸ ಹಿಡಿಯಿತು. ಈ ಒಪ್ಪಂದಕ್ಕೆ ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರೂ ರುಜು ಮಾಡಿದರು. ಇದಕ್ಕೆ ಯರವಾಡಾ ಫ್ಯಾಕ್ಟ್ ಅಥವಾ ಪೂನಾ ಫ್ಯಾಕ್ಟ್ ಎಂದು ಹೆಸರು. ಈ ಒಪ್ಪಂದದ ಪ್ರಕಾರ ಹರಿಜನ ಪ್ರತಿನಿಧಿಯನ್ನು ಸಂಯುಕ್ತ ಚುನಾವಣಾ ಪದ್ಧತಿಯಿಂದಲೇ ಆರಿಸತಕ್ಕದ್ದು; ಆದರೆ ಅಸ್ಪ್ರೃಶ್ಯ ಉಮೇದುವಾರರನ್ನು ಆರಿಸುವುದರಲ್ಲಿ ಅವರಲ್ಲಿಯೇ ಒಂದು ಚುನಾವಣೆ ನಡೆದು ಪ್ರತಿಯೊಂದು ಕ್ಷೇತ್ರಕ್ಕೂ ನಾಲ್ವರನ್ನು ಆರಿಸತಕ್ಕದ್ದು. ಈ ನಾಲ್ವರು ಸಂಯುಕ್ತ ಚುನಾವಣೆಯಲ್ಲಿ ಆಕ್ಷೇತ್ರಕ್ಕೆ ಉಮೇದುವಾರರಾಗಿರತಕ್ಕದ್ದು; ಈ ನಾಲ್ವರಲ್ಲಿ ಒಬ್ಬರನ್ನು ಸಂಯುಕ್ತ ಚುನಾವಣಾ ಪದ್ಧತಿಯಿಂದ ಆರಿಸತಕ್ಕದ್ದು; ಇಡೀ ಚುನಾವಣಾ ಕ್ಷೇತ್ರದಲ್ಲಿ ಇಂತಿಷ್ಟು ಜನ ಅಸ್ಪ್ರೃಶ್ಯ ಉಮೇದುವಾರರು, ಅವರ ಚುನಾವಣಾ ಕ್ಷೇತ್ರ ಇಂತಹುದೆಂದು ನಿರ್ಧಾರ ಮಾಡತಕ್ಕದ್ದು; ಇದರಿಂದ ಅಸ್ಪ್ರೃಶ್ಯರೂ ತಮ್ಮ ಉಮೇದುವಾರರನ್ನು ಚುನಾಯಿಸಿದ ಹಾಗಾಯಿತು ಮತ್ತು ಸಂಯುಕ್ತ ಚುನಾವಣಾ ಪದ್ಧತಿಯಿಂದ ಸಾಮಾನ್ಯ ಕ್ಷೇತ್ರದಿಂದಲೂ ಅವರ ಚುನಾವಣೆ ನಡೆದ ಹಾಗಾಯಿತು. ಹೀಗೆ ಅಸ್ಪ್ರೃಶ್ಯರಿಗೆ ಎರಡು ರೀತಿಯ ಚುನಾವಣೆ ನಿಗದಿಯಾಯಿತು. ಇದೇ ಪದ್ಧತಿಯನ್ನು ಇಂಗ್ಲೆಂಡ್ ಪ್ರಧಾನ ಮಂತ್ರಿಯವರೂ ಒಪ್ಪಿದರು.

ಈ ರೀತಿಯಾಗಿ ಒಂದು ಗಂಡಾಂತರ ತಪ್ಪಿತು. ಈ ಉಪವಾಸದಿಂದ ಒಂದು ಮಹೋಪಕಾರವಾಯಿತು. ದೇಶದ ಎಲ್ಲಾ ಕಡೆಯೂ ಅಸ್ಪ್ರೃಶ್ಯತಾ ನಿವಾರಣಾ ಕಾರ್ಯದ ಬಗ್ಗೆ ಜಾಗೃತಿ ಉಂಟಾಯಿತು. ಎಲ್ಲೆಲ್ಲಿಯೂ ಕಾಂಗ್ರೆಸಿಗರೂ, ಸಾಮಾನ್ಯ ಹಿಂದೂಗಳೂ ಅಸ್ಪ್ರೃಶ್ಯತೆಯ ನಿವಾರಣೆಗೆ ವಿಶೇಷ ಗಮನ ವಿತ್ತರು. ಗಾಂಧೀಜಿ ಜೈಲಿನಿಂದಲೇ ಅಸ್ಪ್ರೃಶ್ಯರ ಏಳಿಗೆಯ ಕಾರ್ಯವನ್ನು ನಡೆಸುತ್ತ ಬಂದರು.

ಯರವಾಡಾ ಒಪ್ಪಂದವಾಗುವವರಿಗೆ ಗಾಂಧೀಜಿಯ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಲಾಗಿತ್ತು. ಈ ಒಪ್ಪಂದವಾದ ಮೇಲೆ ಗಾಂಧೀಜಿಯ ಮೇಲೆ ಜೈಲಿನ ನಿರ್ಬಂಧಗಳನ್ನು ಹಾಕಲಾಯಿತು. ಗಾಂಧೀಜಿ ಅಸ್ಪ್ರೃಶ್ಯತಾ ನಿವಾರಣಾ ಕಾರ್ಯಗಳಿಗೆ ಯಾವ ನಿರ್ಬಂಧವೂ ಇರಕೂಡದೆಂದು ಸರ್ಕಾರಕ್ಕೆ ಬರೆದರು. ನವೆಂಬರ್ ೪ರಿಂದ ಅವರ ಮೇಲಿದ್ದ ಕೆಲವು ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಅಸ್ಪ್ರೃಶ್ಯರನ್ನು ದೇವರ ಮಕ್ಕಳೆಂದು ಭಾವಿಸಬೇಕು, ಅವರನ್ನು ಹರಿಜನ ಎಂದು ಕರೆಯಬೇಕು ಎಂದು ಜೈಲಿನಿಂದಲೇ ಪ್ರಚಾರ ಮಾಡಿದರು. ಅಸ್ಪ್ರೃಶ್ಯರನ್ನು ಜನ ಹರಿಜನರು ಎಂದು ಕರೆಯಲಾರಂಭಿಸಿದರು.

೧೯೩೩ನೇ ಮೇ ನಲ್ಲಿ ಆತ್ಮಶುದ್ಧಿಗೋಸ್ಕರ ಗಾಂಧೀಜಿ ಜೈಲಿನಲ್ಲಿಯೇ ೨೧ ದಿವಸಗಳ ಉಪವಾಸ ಪ್ರಾರಂಭಿಸಿದರು. ಸರ್ಕಾರ ಕೂಡಲೇ ಅವರನ್ನು ಬಿಡುಗಡೆ ಮಾಡಿತು. ಗಾಂಧೀಜಿ ಉಪವಾಸವನ್ನು ಪೂನಾದ ಪರ್ಣಕುಟಿಯಲ್ಲಿ ಯಶಸ್ವಿಯಾಗಿ ಮುಗಿಸಿದರು. ಗಾಂಧೀಜಿ ಉಪವಾಸ ಮುಗಿದ ಕೆಲವು ದಿವಸಗಳಾದ ಮೇಲೆ ವೈಯಕ್ತಿಕ ಕಾನೂನುಭಂಗವನ್ನು ಆಚರಿಸುವುದಾಗಿ ಹೊರಟರು. ಸರ್ಕಾರ ೧೯೩೩ನೇ ಆಗಸ್ಟ್ ೧ರಲ್ಲಿ ಅವರನ್ನು ಪುನಃ ಬಂಧೀಸಿ ಕಾರಾಗೃಹದಲ್ಲಿ ಇಟ್ಟುದಲ್ಲದೆ, ಹರಿಜನ ಕಾರ್ಯವನ್ನು ಜೈಲಿನಿಂದ ನಡೆಸಲು ಅನುಮತಿಯೀಯಲಿಲ್ಲ. ಗಾಂಧೀಜಿ ಪುನಃ ಉಪವಾಸ ಮಾಡಿದರು. ಸರ್ಕಾರ ಅವರನ್ನು ಕಾರಾಗೃಹದಿಂದ ಖುಲಾಸೆ ಮಾಡಿತು. ಒಂದು ವರ್ಷ ಕಾಲ ತಮ್ಮ ದೇಹಾರೋಗ್ಯವನ್ನು ಲೆಕ್ಕಿಸದೆ, ಇಡೀ ದೇಶದಲ್ಲಿ ಸಂಚರಿಸಿ, ಹರಿಜನರ ಬಗ್ಗೆ ಸವರ್ಣ ಹಿಂದೂಗಳನ್ನು ಎಚ್ಚರಿಸಿದರು. ಅಸ್ಪ್ರೃಶ್ಯತೆ ಎಂಬುದು ಹಿಂದೂ ಜನಾಂಗಕ್ಕೆ ಕಳಂಕ; ಅದನ್ನು ನಿರ್ಮೂಲ ಮಾಡದೆ ಹೋದರೆ ಹಿಂದೂ ಧರ್ಮ ಉಳಿಯುವುದಿಲ್ಲ; ಇದುವರೆಗೂ ಹರಿಜನರನ್ನು ಹಿಂದೆ ದಬ್ಬಿ ಅವರಿಗೆ ನಾನಾ ಹಿಂಸೆಗಳನ್ನು ಕೊಟ್ಟಿದ್ದರಿಂದ ಪ್ರಾಯಶ್ಚಿತ್ತಾರ್ಥವಾಗಿ ನಾವು ಹರಿಜನರನ್ನು ಮೇಲಕ್ಕೆ ಎತ್ತಬೇಕು ಎಂದರು. ಈ ಉದ್ದೇಶ ಸಾಧಾನೆಗಾಗಿ ಅಖಿಲ ಭಾರತ ಹರಿಜನ ಸೇವಕ ಸಂಘವನ್ನು ಸ್ಥಾಪಿಸಿ, ಅದರ ಶಾಖೆಗಳನ್ನು ದೇಶದ ನಾನಾ ಭಾಗಗಳಲ್ಲಿ ತೆರೆದರು. ಇನ್ನೂ ಕೆಲವು ವರ್ಷಗಳು ಗಾಂಧೀಜಿ ತಮ್ಮ ಜೀವಮಾನವನ್ನು ಹರಿಜನರ ಏಳಿಗೆಗಾಗಿಯೇ ವಿನಿಯೋಗಿಸಿದರು. ಇಷ್ಟೇ ಅಲ್ಲದೆ ನಿಂತುಹೋಗಿದ್ದ “ಯಂಗ್ ಇಂಡಿಯಾ” ಬದಲು “ಹರಿಜನ” ಎಂಬ ವಾರ ಪತ್ರಿಕೆಯನ್ನು ಗಾಂಧೀಜಿ ಹೊರಡಿಸಿ ತನ್ಮೂಲಕ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದರು.

೧೯೩೭ನೇ ಜನವರಿಯಲ್ಲಿ ಆರಂಭಿಸಿದ್ದ ಸತ್ಯಾಗ್ರಹ ಮಂದಗತಿಯಲ್ಲಿ ನಡೆಯತ್ತಿತ್ತು. ಗಾಂಧೀಜಿ ಅಸ್ಪ್ರೃಶ್ಯರಿಗಾಗಿ ಮಾಡಿದ ಉಪವಾಸದ ಕಾರಣ, ಜನರ ಮನಸ್ಸೆಲ್ಲಾ ಹರಿಜನರ ಏಳಿಗೆ ಕಡೆ ತಿರುಗಿತು. ಕಾಂಗ್ರೆಸ್ ಆಕ್ಟಿಂಗ್ ಪ್ರೆಸಿಡೆಂಟ್, ರಾಜೇಂದ್ರಪ್ರಸಾದರನ್ನು ೧೯೩೩ ನೇ ಜನವರಿಯಲ್ಲಿಯೇ ದಸ್ತಗಿರಿ ಮಾಡಲಾಗಿತ್ತು. ಆ ಮೇಲೆ ಆಣೆ ಅಧ್ಯಕ್ಷರಾದರು; ಅವರ ದಸ್ತಗಿರಿಯಾಯಿತು. ಹೀಗೆಯೇ ಕ್ರಮವಾಗಿ ಅಧ್ಯಕ್ಷರಾದ ಡಾ. ಅನ್‌ಸಾರಿ, ಸರದಾರ್ ಶಾರ್ದೂಲ್‌ಸಿಂಗ್ ಕವೀಶರ್, ಗಂಗಾಧರರಾವ್ ದೇಶಪಾಂಡೆ, ಡಾ. ಕಿಚ್ಲು, ಸಿ. ರಾಜಗೋಪಾಲಾಚಾರಿ ಇವರುಗಳ ದಸ್ತಗಿರಿಯಾಯಿತು. ೧೯೩೩ನೇ ಜುಲೈನಿಂದ ಕಾಂಗ್ರೆಸ್ ಕೆಲಸ ನಿಂತು ಹೋಯಿತು: ಆದರೆ ಜಯಪ್ರಕಾಶ ನಾರಾಯಣ ಮತ್ತು ಮಿತ್ರರು ಹೇಗೋ ಕೆಲಸವನ್ನು ಮುಂದುರಿಸಿಕೊಂಡು ಬಂದರು. ಕಾಂಗ್ರೆಸು ಸೇರಲು ಪ್ರತಿಬಂಧಿಕವಿದ್ದರೂ, ೧೯೩೩ರಲ್ಲಿ ಕಲ್ಕತ್ತಾದಲ್ಲಿ ಕಾಂಗ್ರೆಸ್ ಅಧಿವೇಶನ ಸೇರಬೇಕೆಂದು ನಿರ್ಧಾರವಾಯಿತು, ಅಧಿವೇಶನ ನಡೆದದ್ದು ಮಾರ್ಚಿ ೩೧. ಸ್ವಾಗತ ಸಮಿತಿ ಅಧ್ಯಕ್ಷರು ಡಾ. ಪ್ರಫ್ರುಲ್ಲಘೋಷ್, ಅಧಿವೇಶನಾಧ್ಯಕ್ಷರು ಪಂಡಿತ ಮದನ ಮೋಹನ ಮಾಳವೀಯರು. ಸರ್ಕಾರ ಈ ಅಧಿವೇಶನ ನಡೆಯದಂತೆ ಪ್ರತಿಬಂಧಕಗಳನ್ನು ಒಡ್ಡಿತು. ಪಂಡಿತ ಮಾಳವೀಯರನ್ನು ಕಲ್ಕತ್ತಾಕ್ಕೆ ಬರದಂತೆ, ಅವರನ್ನು ಅಸನ್‌ಸೋಲ್ ಸ್ಟೇಷನ್ನಿನಲ್ಲಿ ದಸ್ತಗಿರಿ ಮಾಡಲಾಯಿತು. ಅವರ ಸಂಗಡವೇ ಸ್ವರೂಪರಾಣಿ ನೆಹರು (ಜವಹರಲಾಲ್ ನೆಹರೂರವರ ವೃದ್ಧ ಮಾತೆ), ಡಾ. ಸೈಯದ್ ಮಹಮೂದ್ ಇವರನ್ನೂ ದಸ್ತಗಿರಿ ಮಾಡಲಾಯಿತು.ಆಕ್ಟಿಂಗ್ ಪ್ರೆಸಿಡೆಂಟ್ ಆಣೆಯವರನ್ನು ದಸ್ತಗಿರಿ ಮಾಡಲಾಯಿತು. ಒಂದು ಸಾವಿರ ಪ್ರತಿನಿಧಿಗಳನ್ನು ದಸ್ತಗಿರಿ ಮಾಡಲಾಯಿತು. ಪ್ರತಿಬಂಧಕವಿದ್ದರೂ ೧,೧೦೦ ಜನ ಡೆಲಿಗೇಟುಗಳು ಅಧಿವೇಶನ ಸ್ಥಳಕ್ಕೆ ಬಂದಿದ್ದರು. ಪೊಲೀಸರು ಈ ಡೆಲಿಗೇಟುಗಳ ಮೇಲೆ ಲಾಠಿ ಪ್ರಹಾರ ಮಾಡಿದರು. ಶ್ರೀಮತಿ ಸೆನಗುಪ್ತ ಮತ್ತು ಇತರ ಮುಖ್ಯ ಕಾಂಗ್ರೆಸಿನವರನ್ನು ದಸ್ತಗಿರಿ ಮಾಡಲಾಯಿತು. ಆದಾಗ್ಯೂ ಪ್ರತಿನಿಧಿಗಳು ಕದಲದೆ ಏಳು ನಿರ್ಣಯಗಳನ್ನು ಮಾಡಿದರು. ಶ್ರೀಮತಿ ಸೆನ್ ಗುಪ್ತರಿಗೆ ೬ ತಿಂಗಳ ಶಿಕ್ಷೆ ವಿಧಿಸಲಾಯಿತು.

ಏಪ್ರಿಲ್ ೩ರಲ್ಲಿ ಖುಲಾಸೆಯಾದ ಪಂಡಿತ ಮಾಳವೀಯ ಕಲ್ಕತ್ತಾಕ್ಕೆ ಬಂದು, ಈ ಕಾಂಗ್ರೆಸ್ ಅಧಿವೇಶನ ಸಮಯದಲ್ಲಿ ಪೊಲೀಸರು ನಡೆಸಿದ ಅತ್ಯಾಚಾರಗಳನ್ನು ಬಹಿರಂಗ ಪಡಿಸಿ, ಸರ್ಕಾರ ವಿಚಾರಣೆ ನಡೆಸಬೇಕೆಂದು ಸೂಚಿಸಿದರು. ಈ ಸೂಚನೆಯನ್ನು ಸರ್ಕಾರ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಈ ಅಧಿವೇಶನ ಕಾನೂನುಭಂಗ ಕಾರ್ಯಕ್ರಮವನ್ನು ಮುಂದುವರಿಸಬೇಕೆಂದು ತೀರ್ಮಾನ ಮಾಡಿತು.

ಮೇ ೮ರಲ್ಲಿ ಗಾಂಧೀಜಿಯ ದಸ್ತಗಿರಿಯಾಯಿತು. ಅವರು ಆರು ವಾರ ಸಾಮೂಹಿಕ ಕಾನೂನುಭಂಗವನ್ನು ನಿಲ್ಲಿಸಿದರು. ಪುನಃ ಜುಲೈ ೧೨ರಲ್ಲಿ ಆಣೆಯವರ ಮುಖಂಡತ್ವದಲ್ಲಿ ಕಾಂಗ್ರೆಸ್ ಸದಸ್ಯರ ಸಮ್ಮೇಳನ ನಡೆದು ಗಾಂಧೀಜಿ ವೈಸರಾಯರ ಭೇಟಿ ಮಾಡಿ, ಎಲ್ಲ ಸಂಗತಿಗಳನ್ನೂ ಪುನರ್ವಿಮರ್ಶಿಸಬೇಕೆಂದು ಕೋರಲಾಯಿತು. ಗಾಂಧೀಜಿಗೆ ವೈಸರಾಯರ ಭೇಟಿ ದೊರೆಯಲಿಲ್ಲ. ಆದ್ದರಿಂದ, ರಾಷ್ಟ್ರದ ಮರ್ಯಾದೆ ಕಾಪಾಡಿಕೊಳ್ಳಲು ಸಾಮುದಾಯಕ ಕಾನೂನು ಭಂಗವನ್ನು ಸದ್ಯ ನಿಲ್ಲಿಸಿ ವೈಯಕ್ತಿಕ ಕಾನೂನು ಭಂಗವನ್ನು ಮುಂದರಿಸಬೇಕೆಂದು ನಿರ್ಧರಿಸಲಾಯಿತು. ವಿಯನ್ನಾದಲ್ಲಿ ಚಿಕಿತ್ಸೆಯಲ್ಲಿದ್ದ ವಿಠಲಬಾಯಿ ಪಟೇಲರೂ ಸುಭಾಷ್ ಚಂದ್ರಬೋಸರೂ ಕಾಂಗ್ರೆಸ್ ಮುಖಂಡರಿಗೆ ಪತ್ರ ಬರೆದು, ಗಾಂಧೀಜಿಯ ಕಾನೂನುಭಂಗ ಚಳುವಳಿಯಿಂದ ತಮಗೆ ಏನೂ ಲಭಿಸಲಿಲ್ಲವೆಂದೂ, ಕಾಂಗ್ರೆಸನ್ನು ಪುನರ್ವ್ಯವಸ್ಥೆ ಗೊಳಿಸಿ ಬೇರೆ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕೆಂದೂ ತಿಳಿಸಿದರು.

ದೇಶದಲ್ಲಿ ವೈಯಕ್ತಿಕ ಸತ್ಯಾಗ್ರಹ ಮುಂದುವರಿಯಿತು. ಗಾಂಧೀಜಿ ಸಬರ್ಮತಿ ಆಶ್ರಮವನ್ನು ಹರಿಜನ ಆಶ್ರಮವನ್ನಾಗಿ ಪರಿವರ್ತಿಸಿ, ವಾರ್ದಾ ಎಂಬ ಊರಿಗೆ ಕಾನೂನುಭಂಗಕ್ಕಾಗಿ ಹೊರಟರು. ಆದರೆ ಅರ್ಧರಾತ್ರಿಯಲ್ಲಿ ಗಾಂಧೀಜಿಯವರನ್ನೂ ಅವರ ಪರಿವಾರವನ್ನು ದಸ್ತಗಿರಿ ಮಾಡಲಾಯಿತು. ಗಾಂಧೀಜಿಯನ್ನು ಯರವಾಡಾ ಸರಹದ್ದನ್ನು ಬಿಟ್ಟು ಪೂನಾಕ್ಕೆ ಹೋಗಬೇಕೆಂದು ಆರ್ಡರ್ ಮಾಡಿತು.

ಗಾಂಧೀಜಿ ಈ ಆಜ್ಞೆಯನ್ನು ಪಾಲಿಸುವುದಿಲ್ಲವೆಂದು ಕಾನೂನು ಭಂಗ ಮಾಡಿದರು. ಕಡೆಗೆ ಗಾಂಧೀಜಿಯ ವಿಚಾರಣೆಯಾಗಿ ಒಂದು ವರ್ಷ ಶಿಕ್ಷೆಯಾಯಿತು. ಗಾಂಧೀಜಿಗೆ ಶಿಕ್ಷೆಯಾಯಿತೆಂದು ತಿಳಿದಕೂಡಲೆ ದೇಶದ ಎಲ್ಲಾ ಕಡೆಯೂ ಕಾಂಗ್ರೆಸಿಗರು ವೈಯಕ್ತಿಕ ಕಾನೂನು ಭಂಗವನ್ನಾಚರಿಸಿದರು. ೧೯೩೩ನೇ ಆಗಸ್ಟ್‌ನಿಂದ ೧೯೩೪ನೇ ಮಾರ್ಚ್‌‌ವರಿಗೆ ವೈಯಕ್ತಿಕ ಕಾನೂನುಭಂಗ ದೇಶದಲ್ಲೆಲ್ಲಾ ನಡೆಯಿತು.

ಗಾಂಧೀಜಿ ಆಗಸ್ಟ್ ೧೫ರಲ್ಲಿ ಉಪವಾಸ ಆರಂಭಿಸಿದರು. ಐದು ದಿವಸ ಉಪವಾಸವಾದ ಮೇಲೆ ಗಾಂಧೀಜಿ ಬಹಳ ನಿಶ್ಯಕ್ತರಾದರು. ಸರ್ಕಾರ ೨೦ನೇ ತಾರೀಖು ಸಸೂನ್ ಆಸ್ಪತ್ರೆಗೆ ಗಾಂಧೀಜಿಯನ್ನು ಸೇರಿಸಿತು. ಅವರ ಸ್ಥಿತಿ ಉತ್ತಮವಾಗದೆ ಇದ್ದದ್ದರಿಂದ ಆಗಸ್ಟ್ ೨೭ರಲ್ಲಿ ಅವರನ್ನು ಯಾವ ಷರತ್ತೂ ಇಲ್ಲದೆ ಖುಲಾಸೆ ಮಾಡಿತು. ತಾವೇ ೧೯೩೪ನೇ ಆಗಸ್ಟ್ ೩ರವರಿಗೆ ಕಾನೂನು ಭಂಗ ಮಾಡುವುದಿಲ್ಲವೆಂದೂ, ಈ ಕಾಲದಲ್ಲಿ ಹರಿಜನ ಕಾರ್ಯ ಮಾಡುವುದೆಂದೂ ತೀರ್ಮಾನ ಮಾಡಿಕೊಂಡರು.

ಜವಹರ್‌ಲಾಲರ ಖುಲಾಸೆಯಾಯಿತು, ಇದಕ್ಕೆ ಕಾರಣ ಅವರ ತೀವ್ರ ಕಾಯಿಲೆ. ಜವಹರ್‌ಲಾಲರು ಗಾಂಧೀಜಿಯವರೊಡನೆ ಕಲೆತು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ೧೯೩೧ರಲ್ಲಿ ಜವಹರಲಾಲ್ ಗಾಂಧೀಜಿಯನ್ನು ಸಂಧಿಸಿ, ಮಾತನಾಡಿದ್ದರು. ಗಾಂಧೀಜಿ ರೌಂಡ್ ಟೇಬಲ್ ಸಮ್ಮೇಳನದಿಂದ ಹಿಂತಿರುಗಿದಾಗ, ಜವಹರಲಾಲ್‌ರ ದಸ್ತಗಿರಿಯಾಗಿತ್ತು. ಆದ್ದರಿಂದ ೩ ವರ್ಷವಾಗಿತ್ತು ಪರಸ್ಪರ ನೋಡಿ.

ಗಾಂಧೀಜಿ ಹರಿಜನ ಪ್ರವಾಸ ಕೈಕೊಳ್ಳುತ್ತಿದ್ದರು. ಪೂನಾದಲ್ಲಿ ಇವರ ಕಾರಿನ ಮೇಲೆ ಯಾರೋ ಬಾಂಬು ಎಸೆದರು. ದೈವಾಧೀನದಿಂದ ಗಾಂಧೀಜಿಯ ಮೇಲೆ ಆ ಬಾಂಬು ಬೀಳಲಿಲ್ಲ. ಪ್ರಾಣಾಪಾಯದಿಂದ ಉಳಿದುಕೊಂಡರು.

೧೯೩೩ನೇ ಜುಲೈನಲ್ಲಿ ಕೆಲವು ಪ್ರಮುಖ ಕಾಂಗ್ರೆಸಿಗರು ಸೇರಿ ಆರ್ಡಿನೆನ್ಸ್ ಆಡಳಿತದ ಹಾವಳಿಯನ್ನು ಕುಳಿತು ಆಲೋಚಿಸಿದರು. ಇನ್ನು ಏನಾದರೂ ಕಾರ್ಯವನ್ನು ಆರಂಭಿಸಿ ಕಾಂಗ್ರೆಸ್ಸನ್ನು ಉಜ್ವಲಿಸಬೇಕು ಎಂದು ನಿರ್ಧರಿಸಿದರು. ೧೯೩೩ನೇ ಮಾರ್ಚ್ ೩೧ರಲ್ಲಿಯೇ ದೆಹಲಿಯಲ್ಲಿ ಅನ್‌‌ಸಾರಿಯವರ ಮನೆಯಲ್ಲಿ ಸಭೆ ನಡೆದು ಸ್ವರಾಜ್ಯ ಪಾರ್ಟಿಯನ್ನು ಪುನರುಜ್ಜೀವಿಸಬೇಕೆಂದು ನಿರ್ಧಾರವಾಯಿತು. ಗಾಂಧೀಜಿ ಹಾಕಿಕೊಟ್ಟ ರಚನಾತ್ಮಕ ಕಾರ್ಯವನ್ನು ಕಾರಾಗೃಹದಲ್ಲಿನ ಎಲ್ಲಾ ಕಾಂಗ್ರೆಸ್‌ನವರು ನಡೆಸಬೇಕೆಂದೂ ನಿರ್ಧಾರವಾಯಿತು. ಮುಂದಿನ ಶಾಸನಸಭಾ ಚುನಾವಣೆಗಳಲ್ಲಿ ಕಾಂಗ್ರೆಸು ಭಾಗವಹಿಸಬೇಕೆಂದೂ ತೀರ್ಮಾನವಾಯಿತು. ಅನಸಾರಿ, ವಲ್ಲಭಭಾಯ್ ದೇಸಾಯ್, ಬಿಪಿನ್‌ಚಂದ್ರಪಾಲ್ ಇವರುಗಳು ಪಾಟ್ನಾದಲ್ಲಿ ಗಾಂಧೀಜಿಯನ್ನು ಭೇಟಿ ಮಾಡಿ, ಸ್ವರಾಜ್ಯ ಪಾರ್ಟಿಯನ್ನು ಪುನಶ್ಚೇತನಗೊಳಿಸಲು ಅವರ ಆಶೀರ್ವಾದವನ್ನು ಪಡೆಯಬೇಕೆಂದು ನಿರ್ಧರಿಸಿದರು.

೧೯೩೪ನೇ ಏಪ್ರಿಲ್ ೭ರಲ್ಲಿ ಪಾಟ್ನಾದಿಂದ ಗಾಂಧೀಜಿ ಇನ್ನು ಮುಂದೆ ಕಾಂಗ್ರೆಸಿಗರು ಯಾರೂ ಸ್ವರಾಜ್ಯಕ್ಕಾಗಿ ವೈಯಕ್ತಿ ಸತ್ಯಾಗ್ರಹವನ್ನು ನಡೆಸಬೇಡವೆಂದೂ, ತಾವೊಬ್ಬರೇ ವೈಯಕ್ತಿಕ ಸತ್ಯಾಗ್ರಹ ಅಧಿಕಾರವನ್ನು ಇಟ್ಟುಕೊಳ್ಳುವುದಾಗಿಯೂ ಹೇಳಿಕೆ ಕೊಟ್ಟರು. ಇದರಿಂದ ವೈಯಕ್ತಿಕ ಸತ್ಯಾಗ್ರಹ ಚಳುವಳಿಯನ್ನೂ ಗಾಂಧೀಜಿ ವಾಪಸು ತೆಗೆದುಕೊಂಡ ಹಾಗಾಯಿತು. ೧೯೨೨ನೇ  ಮೇನಲ್ಲಿಯೇ ಸಾಮೂಹಿಕ ಕಾನೂನು ಭಂಗವನ್ನು ವಾಪಸು ತೆಗೆದುಕೊಳ್ಳಲಾಗಿತ್ತು. ಈ ರೀತಿಯಾಗಿ ೧೯೩೪ನೇ ಏಪ್ರಿಲ್ ೭ರಲ್ಲಿ ಸ್ವರಾಜ್ಯ ಸ್ಥಾಪನೆಗಾಗಿ ೧೯೩೨ರಲ್ಲಿ ಪುನಃ ಆರಂಭಿಸಿದ್ದ ಕಾನೂನು ಭಂಗ ಚಳುವಳಿ ನಿಂತ ಹಾಗಾಯಿತು. ಆದರೆ, ಕಾಂಗ್ರೆಸಿನ ರಚನಾತ್ಮಕ ಕಾರ್ಯವನ್ನು ನಿಲ್ಲಿಸುವ ಹಾಗಿಲ್ಲ. ಕೈನೂಲಿನ ಕಾರ್ಯದ ಜತೆಗೆ ಹರಿಜನ ಸೇವೆಯ ನೂತನ ಕಾರ್ಯಕ್ರಮ ದೇಶದಲ್ಲಿ ನಡೆಯಬೇಕೆಂದು ಗಾಂಧೀಜಿ ಮತ್ತು ಅವರ ಅನುಯಾಯಿಗಳು ಹರಿಜನ ಸೇವೆಯ ದೀಕ್ಷೆ ವಹಿಸಿ, ದೇಶದಲ್ಲೆಲ್ಲಾ ಸಂಚರಿಸಿದರು.

ಪುನರುಜ್ಜೀವನಗೊಂಡ ಸ್ವರಾಜ್ಯ ಪಕ್ಷದ ಕಾರ್ಯಕ್ಕೂ ಗಾಂಧೀಜಿಯ ಆಶೀರ್ವಾದ ದೊರೆಯಿತು. ಶಾಸನ ಸಭೆಗಳ ಕಾರ್ಯದಲ್ಲಿ ಆಸಕ್ತಿಯಿರುವವರು ಮುಂದಿನ ಚುನಾವಣೆಗಳಲ್ಲಿ ಭಾಗವಹಿಸಲು ಭರದಿಂದ ತಮ್ಮ ಕಾರ್ಯವನ್ನಾರಂಭಿಸಿದರು. ೧೯೩೪ನೇ ಮೇ ೩ರಲ್ಲಿ ನಡೆದ ಸ್ವರಾಜಿಸ್ಟರ ಸಮ್ಮೇಳನದಲ್ಲಿ ಶಾಸನಸಭಾ ಪ್ರವೇಶ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಬೇಕೆಂದು ತೀರ್ಮಾನವಾಯಿತು.

ಮೇ ೧೮ ಮತ್ತು ೧೯ರಲ್ಲಿ ನಡೆದ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸಭೆಯಲ್ಲಿ ಗಾಂಧೀಜಿ ಕಾನೂನುಭಂಗ ಚಳುವಳಿಯನ್ನು ಹಿಂತೆಗೆದುಕೊಳ್ಳಬೇಕೆಂದು ಶಿಫಾರಸು ಮಾಡಿದರು. ಹಾಗೆಯೇ ತೀರ್ಮಾನವಾಯಿತು. ಅನಂತರ ಶಾಸನಸಭಾ ಚುನಾವಣೆಗಳನ್ನು ನಡೆಸಲು ೨೫ ಜನರನ್ನೊಳಗೊಂಡ ಒಂದು ಪಾರ್ಲಿಮೆಂಟರಿ ಬೋರ್ಡನ್ನು ರಚಿಸಲಾಯಿತು.

ಮೇ ೧೮, ೧೯, ಮತ್ತು ೨೦ರಲ್ಲಿ ನಡೆದ ವರ್ಕಿಂಗ್ ಕಮಿಟಿ ಸಭೆ ಕಾನೂನುಭಂಗ ಕಾರ್ಯಕ್ರಮವನ್ನು ತೆಗೆದುಕೊಂಡಿತು ಮತ್ತು ಶಾಸನ ಸಭಾ ಪ್ರವೇಶಕಾರ್ಯಕ್ಕೂ ಅನುಮತಿ ಕೊಟ್ಟಿತು. ಕಾಂಗ್ರೆಸ್ ಅಧ್ಯಕ್ಷರು ಎಲ್ಲಾ ಕಾಂಗ್ರೆಸ್ ಸಮಿತಿಗಳನ್ನು ಜೀವಿತಗೊಳಿಸಬೇಕೆಂದೂ, ಮಾಮೂಲಿನಂತೆ ರಚನಾತ್ಮಕ ಕಾರ್ಯಗಳನ್ನು ನಡೆಸಬೇಕೆಂದೂ ಅಪ್ಪಣೆ ಮಾಡಿದರು.

ಬ್ರಿಟಿಷ್ ಸರ್ಕಾರ ೧೯೩೨ನೇ ಆಖೈರಿನಲ್ಲಿ ಲಂಡನ್ನಿನಲ್ಲಿ ಮೂರನೆ ರೌಂಡ್ ಟೇಬಲ್ ಸಮ್ಮೇಳನವನ್ನು ನಡೆಸಿತು. ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರೀ, ಸರ್ ಫಿರೋಜ್ ಸೇತ್ನಾ, ಸಿ.ವೈ. ಚಿಂತಾಮಣಿ, ಜಿನ್ಹಾ, ರಾಷ್ಟ್ರೀಯ ಮುಸ್ಲಿಮರು ಇವರಾರೂ ಈ ಸಮ್ಮೇಳನಕ್ಕೆ ಆಹ್ವಾನಿತರಾಗಲಿಲ್ಲ, ಕಾಂಗ್ರೆಸ್ಸಂತೂ ಇಲ್ಲವೇ ಇಲ್ಲ. ಸರ್‌ತೇಜ್ ಬಹದೂರ್ ಸಪ್ರು ಮತ್ತು ಸರ್ ಚಿರ್ಮಲಾಲ್ ಸೆಡಲ್‌ವಾಡರು ಕಾಂಗ್ರೆಸಿನ ಸಹಕಾರವಿಲ್ಲದೆ ಯಾವ ವಿಧವಾದ ರಾಜ್ಯಾಂಗ ರಚನೆಯನ್ನೂ ಇಂಡಿಯಾದಲ್ಲಿ ನಡೆಸಲಾಗುವುದಿಲ್ಲವೆಂದು ಸಮ್ಮೇಳನದಲ್ಲಿ ಸ್ಪಷ್ಟಪಡಿಸಿದರು. ಬ್ರಿಟಿಷ್ ಸರ್ಕಾರ ಇದನ್ನು ಲಕ್ಷಿಸಲಿಲ್ಲ. ಸಮ್ಮೇಳನ ಐದು ವಾರ ನಡೆಯಿತು; ಆದರೆ ಪರಿಣಾಮಕಾರಿಯಾದ ತೀರ್ಮಾನವೇನೂ ಆಗಲಿಲ್ಲ.

೧೯೩೪ನೇ ಅಕ್ಟೋಬರ್ ೨೬, ೨೭, ೨೮ನೇ ತಾರೀಖುಗಳಲ್ಲಿ ಬೊಂಬಾಯಿನಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ರಾಜೇಂದ್ರ ಬಾಬು ಅಧ್ಯಕ್ಷರಾಗಿದ್ದರು. ಸರಿಯಾದ ಕಾಂಗ್ರೆಸ್ ಅಧಿವೇಶನ ನಡೆದು ಮೂರುವರೆ ವರ್ಷವಾಗಿತ್ತು; ಮಧ್ಯೆ ಕಾನೂನುಭಂಗ ಚಳುವಳಿ ಬಹಳ ಜೋರಾಗಿ ನಡೆದಿತ್ತು. ಸದಸ್ಯರಲ್ಲಿ ಉತ್ಸಾಹವಿತ್ತು.

ಈ ಮಧ್ಯೆ ಬ್ರಿಟಿಷ್ ಸರ್ಕಾರ ತಾವು ಕೊಡುವ ಮುಂದಿನ ಸುಧಾರಣೆಗಳ ಬಗ್ಗೆ ಒಂದು ಶ್ವೇತಪತ್ರವನ್ನು ಹೊರಡಿಸಿತ್ತು. ಕೋಮುವಾರು ಆವಾರ್ಡು ಎಂಬ ತೀರ್ಮಾನವು ದೇಶದ ಮುಂದೆ ಇತ್ತು. ಸ್ವರಾಜಿಸ್ಟ್ ಪಾರ್ಟಿ ಪುನಃ ತಲೆಯೆತ್ತಿ ಶಾಸನ ಸಭಾ ಕಾರ್ಯಕ್ರಮಗಳನ್ನು ಆರಂಭಿಸಿತ್ತು. ಸೋಷಲಿಸ್ಟ್ ಪಾರ್ಟಿ ಸ್ಥಾಪನೆಯಾಗಿತ್ತು.

ಈ ಅಧಿವೇಶನಕ್ಕೆ ಮುಂಚೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ವಾರ್ಧಾದಲ್ಲಿ ಜೂನ್ ೧೨,೧೩ನೇ ತಾರೀಖುಗಳಲ್ಲಿಯೂ, ಪುನಃ ಬೊಂಬಾಯಿನಲ್ಲಿ ಜೂನ್ ೧೭, ೧೮ನೇ ತಾರೀಖುಗಳಲ್ಲಿಯೂ ನಡೆಯಿತು. ಸರ್ಕಾರ ಕಾಂಗ್ರೆಸ್ ಸಂಸ್ಥೆಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ್ದಾಗ್ಯೂ, ಸರಹದ್ದಿನ “ಖುದೈ ಖಿದ್‌ಮತ್‌ಗಾರ್” ಸಂಸ್ಥೆಯ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿರಲಿಲ್ಲ. ಕಮ್ಯೂನಲ್ ಅವಾರ್ಡ್ ಬಗ್ಗೆ ಪಂಡಿತ ಮಾಳವೀಯ ಮತ್ತು ಎಂಎಸ್.ಆಣೆ ಇವರಿಗೂ ಕಾಂಗ್ರೆಸಿನ ಇತರ ಮುಖಂಡರಿಗೂ ಭಿನ್ನಾಭಿಪ್ರಾಯವುಂಟಾಗಿತ್ತು. ಪಂಡಿತ ಮಾಳವೀಯರು ಕಮ್ಯೂನಲ್ ಅವಾರ್ಡನ್ನು ತಿರಸ್ಕರಿಸಬೇಕೆಂಬ ಅಭಿಪ್ರಾಯ ಹೊಂದಿದ್ದರು. ವರ್ಕಿಂಗ್ ಕಮಿಟಿಯ ಅಭಿಪ್ರಾಯ “ಅದರ ಬಗ್ಗೆ ಒಪ್ಪಿಗೆಯನ್ನಾಗಲೀ, ನಿರಾಕರಣೆಯನ್ನಾಗಲೀ ಮಾಡಬಾರದು, ಏಕೆಂದರೆ ಕಾಂಗ್ರೆಸ್ ಎಲ್ಲಾ ಕೋಮುಗಳ ಪ್ರತಿನಿಧಿಯಾಗಿದೆ” ಎಂದಿತ್ತು. ಸರ್ಕಾರ ಎಲ್ಲಾ ಕಾನೂನುಭಂಗ ಕೈದಿಗಳನ್ನೂ ಖುಲಾಸೆ ಮಾಡಿರಲಿಲ್ಲ. ವಲ್ಲಭಭಾಯಿ, ಪಂಡಿತ ಜವಹರಲಾಲ್, ಖಾನ್ ಅಬ್ದುಲ್ ಗಫಾರ್ ಖಾನ್ ಇವರನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಆದರೆ, ವಲ್ಲಭಭಾಯಿಯವರಿಗೆ ಮೂಗಿನ ವ್ಯಾಧಿಯು ಬಹಳ ತೊಂದರೆ ಕೊಡುತ್ತಿತ್ತು. ಮೆಡಿಕಲ್ ಬೋರ್ಡಿನ ಶಿಫಾರಸಿನಂತೆ ಅವರನ್ನು ಜುಲೈ ೧೪ರಲ್ಲಿ ಬಿಡುಗಡೆ ಮಾಡಲಾಯಿತು.

ಕಮ್ಯೂನಲ್ ಆವಾರ್ಡಿನ ಬಗ್ಗೆ ಅಭಿಪ್ರಾಯ ಉಂಟಾದ್ದರಿಂದ ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಮಾಳವೀಯರು ರಾಜೀನಾಮೆಯಿತ್ತರು. ಆಣೆಯವರು ವರ್ಕಿಂಗ್ ಕಮಿಟಿ ಸದಸ್ಯತ್ವಕ್ಕೆ ರಾಜೀನಾಮೆಯಿತ್ತರು. ಒಂದು ಹೊಸ ಪಾರ್ಟಿಯನ್ನು ಕಟ್ಟಿ ಅದಕ್ಕೆ ಬೆಂಬಲಗಾರರನ್ನು ಪಡೆಯಲು ಯತ್ನಿಸಿದರು ಮತ್ತು ಶಾಸನಸಭೆಗೆ ನಿಲ್ಲಲು ಉದ್ಯುಕ್ತರಾದರು.

ಖಾನ್ ಅಬ್ದುಲ್ ಗಫಾರ್ ಖಾನ್‌ರನ್ನೂ ಅವರ ಸಹೋದರ ಡಾ. ಖಾನ್ ಸಾಹೇಬರನ್ನೂ ಆಗಸ್ಟ್ ಕಡೆಯ ವಾರದಲ್ಲಿ ಖುಲಾಸೆ ಮಾಡಲಾಯಿತು.

ಸೆಪ್ಟೆಂಬರ್ ೭ರಲ್ಲಿ ಗಾಂಧೀಜಿ ಒಂದು ದೊಡ್ಡ ಹೇಳಿಕೆ ಕೊಟ್ಟು ತಾವು ಕಾಂಗ್ರೆಸನ್ನು ಬಿಡುವುದಾಗಿ ತಿಳಿಸಿದರು. ಕಾಂಗ್ರೆಸಿನಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳು ಉದಯವಾಗಿರುವುದರಿಂದ ತಾವು ಆವಕ್ಕೆ ಅಡ್ಡಿಯಾಗಿರಬಾರದೆಂದರು. ಕಾಂಗ್ರೆಸನ್ನು ತಮ್ಮ ಪ್ರಭಾವದಿಂದ ಅದು ಹೋಗುತ್ತಿರುವ ದಾರಿಯಿಂದ ತಪ್ಪಿಸಬಾರದೆಂಬ ಉದ್ದೇಶದಿಂದ ಕಾಂಗ್ರೆಸಿನಿಂದ ಹೊರಗಿರುವುದಾಗಿಯೂ ತಿಳಿಸಿದರು. ತಮ್ಮ ನಿರ್ಧಾರವನ್ನು ಮುಂಬಯಿ ಕಾಂಗ್ರೆಸ್ ಅಧಿವೇಶನ ಮುಗಿದ ಮೇಲೆ ಜಾರಿಗೆ ತರುವುದಾಗಿಯೂ ತಿಳಿಸಿದರು.

ಆದ್ದರಿಂದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನ ವಿಷಮ ಸನ್ನಿವೇಶದಲ್ಲಿ ನಡೆಯಿತು. ಗಾಂಧೀಜಿಯ ನಿರ್ಧಾರವನ್ನು ಬದಲಿಸಲು ಪ್ರಯತ್ನ ಮಾಡಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಕಡೆಗೆ, ಕಾಂಗ್ರೆಸು ಅವರ ಮೇಲೆ ಪುನರ್ವಿಶ್ವಾಸ ನಿರ್ಣಯವನ್ನು ಅಂಗೀಕರಿಸಿ, ಬೇಕಾದಾಗ ಅವರ ಸಲಹೆ ಬುದ್ಧಿವಾದಗಳು ಕಾಂಗ್ರೆಸಿಗೆ ದೊರೆಯುವವೆಂಬ ಭರವಸೆಯಿಂದ, ಅವರ ಆಗಿನ ನಿರ್ಧಾರವನ್ನು ಮನಸ್ಸಿಲ್ಲದೆ ಒಪ್ಪಿಕೊಳ್ಳುವುದಾಗಿ ತಿಳಿಸಿತು. ಬಾಬು ರಾಜೇಂದ್ರ ಪ್ರಸಾದರು ತಮ್ಮ ಅಧ್ಯಕ್ಷತೆಯನ್ನು ಚಾಕಚಾಕ್ಯತೆಯಿಂದ ನಿರ್ವಹಿಸಿದರು. ಈ ಅಧಿವೇಶನ ಶಾಂತಿಯಿಂದ ಮುಕ್ತಾಯವಾಯಿತು.

ಇನ್ನು ಮುಂದೆ ದೇಶದ ಇಡೀ ದೃಷ್ಟಿ ಶಾಸನ ಸಭೆಗಳ ಚುನಾವಣೆಗಳ ಕಡೆ ಹೊರಳಿತು. ಕೇಂದ್ರ ಶಾಸನ ಸಭೆಗೆ ೪೪ ಕಾಂಗ್ರೆಸ್ ಸದಸ್ಯರು ಚುನಾಯಿತರಾದರು. ಪಂಡಿತ ಮಾಳವೀಯ ಮತ್ತು ಎಂ.ಎಸ್.ಆಣೆಯವರೂ ಚುನಾಯಿತರಾದರು. ಇವರೂ ಇತರ ನ್ಯಾಷನಲಿಸ್ಟರೂ ಕಾಂಗ್ರೆಸಿನ ಕಡೆಗೇ ಓಟು ಮಾಡುವುದಾಗಿ ತೀರ್ಮಾನವಾಯಿತು. ಅಸೆಂಬ್ಲಿ ಅಧ್ಯಕ್ಷ ಪದವಿಗೆ ಟಿ.ಎ.ಕೆ.ಶರ್ವಾನಿಯನರನ್ನು ಕಾಂಗ್ರೆಸ್ ಪಕ್ಷ ನಿಲ್ಲಿಸಿತು. ಸರ್ಕಾರ ಮತ್ತು ಅದರ ಅನುಯಾಯಿ ಪಕ್ಷಗಳು ಆರ್. ಕೆ.ಷಣ್ಮುಗಂ ಶೆಟ್ಟಿಯವರನ್ನು ನಿಲ್ಲಿಸಿದುವು. ಚುನಾವಣೆಯಲ್ಲಿ ಕಾಂಗ್ರೆಸಿಗೆ ಸೋಲಾಯಿತು. ಸರ್ಕಾರದ ಅಧಿಕಾರಿಗಳು ಓಟು ಮಾಡದೆ ಇದ್ದಿದ್ದರೆ ಕಾಂಗ್ರೆಸಿಗೇ ಜಯವಾಗುತ್ತಿತ್ತು.

ಗಾಂಧೀಜಿ ಕಾಂಗ್ರೆಸಿನ ಸದಸ್ಯತ್ವವನ್ನು ಬಿಟ್ಟರೂ ಕೂಡ ಕಾಂಗ್ರೆಸಿನ ಸಾಮೀಪ್ಯವನ್ನು ಬಿಡಲಿಲ್ಲ. ರಾಜಕೀಯ ವಿಷಯಗಳಲ್ಲಿ ಕೈಹಾಕದಿದ್ದರೂ, ರಚನಾತ್ಮಕ ಕಾರ್ಯಗಳಲ್ಲಿ ಪೂರ್ಣ ಆಸಕ್ತರಾಗಿ ಕೆಲಸ ಮಾಡುತ್ತಿದ್ದರು. ಅಖಿಲ ಭಾರತ ಕೈನೂಲುವವರ ಸಂಘ, ಅಖಿಲ ಭಾರತ ಹರಿಜನ ಸೇವಕ ಸಂಘ, ಅಖಿಲ ಭಾರತ ಗ್ರಾಮ ಕೈಗಾರಿಕೆಗಳ ಸಂಘ ಇವುಗಳನ್ನು ಕಾಂಗ್ರೆಸಿನಿಂದ ಬೇರೆಯಾಗಿ ಸ್ಥಾಪಿಸಿ, ತನ್ಮೂಲಕ ಕೆಲಸ ಕಾರ್ಯಗಳನ್ನು ನಡೆಸಿದರು. ರಾಜಕೀಯದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದುದಕ್ಕಿಂತಲೂ ಹೆಚ್ಚು ಕಾಲವನ್ನೂ ಶಕ್ತಿಯನ್ನೂ ಈ ಕಾರ್ಯಗಳಿಗಾಗಿ ವಿನಿಯೋಗಿಸುತ್ತಿದ್ದರು. ಮಧ್ಯೆ ಮಧ್ಯೆ ಬಹಳ ಸುಸ್ತಾಗಿಬಿಡುತ್ತಿದ್ದರು. ಇಷ್ಟೇ ಅಲ್ಲದೆ ಅನೇಕ ಕಡೆ ಪಾದ ಸಂಚಾರ ಹೊರಡುತ್ತಿದ್ದುದರಿಂದ ಇವರ ಶಕ್ತಿ ಇನ್ನೂ ಕುಂದಿತು. ವಾರ್ಧಾ ಹತ್ತಿರ ಸೇವಾಗ್ರಾಮವನ್ನು ಸ್ಥಾಪಿಸಿ, ಅವಶ್ಯಕವಾದಾಗ ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅಲ್ಲಿಯ ಆಶ್ರಮ ಕೂಡ ಸಬರ್ಮತಿಯ ಆಶ್ರಮದ ಮಾದರಿಯೇ. ಅದೇ ವ್ರತಗಳು; ಬೆಳಿಗ್ಗೆ ಮತ್ತು ಸಾಯಂಕಾಲ ಪ್ರಾರ್ಥನೆ ಇವರು ರೈಲಿನಲ್ಲಾಗಲೀ, ಕಾರಿನಲ್ಲಾಗಲೀ ಪ್ರಯಾಣ ಮಾಡುತ್ತಿದ್ದರೂ, ಬೆಳಗಿನ ಮತ್ತು ಸಂಜೆಯ ಪ್ರಾರ್ಥನೆಯನ್ನು ಬಿಡುತ್ತಿರಲಿಲ್ಲ.

ಅಹಿಂಸೆಯಲ್ಲಿ ಇವರ ನಂಬಿಕೆ ಇನ್ನೂ ಹೆಚ್ಚಾಯಿತು. ಅಹಿಂಸೆಯಿಂದ ಎಲ್ಲವನ್ನೂ ಸಾಧಿಸಬಹುದು, ಆದರೆ ಸಾಕಾದಷ್ಟು ಅಹಿಂಸೆ ಬೇಕು ಎಂದು ಹೇಳುತ್ತಿದ್ದರು. ಇದುವರೆಗೂ ಆದ ಸತ್ಯಾಗ್ರಹಗಳಲ್ಲಿ ಅಹಿಂಸೆ ಸಾಕಾದಷ್ಟು ಇರಲಿಲ್ಲ ಎಂದು ಹೇಳುತ್ತಿದ್ದರು. ಗಾಂಧೀಜಿ ಇನ್ನೊಂದು ಸತ್ಯಾಗ್ರಹವನ್ನು ಪ್ರಾರಂಭ ಮಾಡುವವರಿಗೂ ಬಹಳ ನಿಷ್ಠೆಯಿಂದ ಹರಿಜನ ಕಾರ್ಯವನ್ನು ಮಾಡಿದರು. ಇವರ ಕೆಲಸದ ಪರಿಣಾಮವಾಗಿ ಶಾಸನ ಸಭೆಗಲ್ಲಿ ಹರಿಜನರಿಗೆ ದೇವಸ್ಥಾನಗಳ ಪ್ರವೇಶ ದೊರೆಯಲು ಮಸೂದೆಗಳು ಬಂದವು. ಬ್ರಿಟಿಷ್ ಇಂಡಿಯಾದಲ್ಲಿ ಸರ್ಕಾರ ಉದಾಸೀನವಾಗಿತ್ತು. ತಿರುವಾಂಕೂರು ಮೊದಲಾದ ದೇಶೀಯ ಸಂಸ್ಥಾನಗಳಲ್ಲಿ ಹರಿಜನರಿಗೆ ದೇವಸ್ಥಾನ ಪ್ರವೇಶ ಸೌಕರ್ಯಗಳು ದೊರೆತವು.

ತಿರುವಾಂಕೂರಿಗೆ ಗಾಂಧೀಜಿ ಖುದ್ದಾಗಿ ಹೋಗಿ ಹರಿಜನರ ದೇವಸ್ಥಾನ ಪ್ರವೇಶ ಕಾರ್ಯದ ಆರಂಭೋತ್ಸವ ನಡೆಸಿದರು. ರೈಲಿನಲ್ಲಿ ಹೋಗುವಾಗ ಕಿಟಕಿಯಲ್ಲಿ ಕೈ ನೀಡಿ ಗಾಂಧೀಜಿ ಹರಿಜನ ನಿಧಿಯನ್ನು ವಸೂಲು ಮಾಡುತ್ತಿದ್ದರು. ಸಭೆಗಳಲ್ಲಿಯೂ ಇದೇ ಕೆಲಸ. ಹೀಗೆ ಅಹರ್ನಿಶಿ ಗಾಂಧೀಜಿ ಹರಿಜನರ ಅಭಿವೃದ್ಧಿಗಾಗಿ ಪ್ರಚಾರ ನಡೆಸಿದರು. ಇದರಿಂದ ಹರಿಜನರ ವಿಷಯದಲ್ಲಿ ಉಳಿದವರ ಮನೋಭಾವ ಬಹಳ ಉದಾರವಾಗುತ್ತ ಬಂದಿತು.

ಇನ್ನೊಂದು ಹೊಸ ಕೆಲಸ ಆರಂಭವಾಯಿತು. ಅದು ವಿದ್ಯಾಭ್ಯಾಸದ ಸುಧಾರಣೆಯ ಕೆಲಸ. ಮಕ್ಕಳಿಗೆ ಚಿಕ್ಕಂದಿನಿಂದ ಮೂಲ ವಿದ್ಯಾಭ್ಯಾಸ ಶಿಕ್ಷಣ. ಡಾ. ಜಾಕೀರ್ ಹುಸೇನ್, ಜಿ.ರಾಮಚಂದ್ರನ್, ಆರ್ಯನಾಯಕಮ್, ಮುಂತಾದವರು ಗಾಂಧೀಜಿಯ ಮೂಲ ಶಿಕ್ಷಣದ ಬಗ್ಗೆ ಬಹಳ ಬೆಂಬಲ ವಿತ್ತು, ಪ್ರಚಾರ ಮಾಡಿದರು. ಚಿಕ್ಕಂದಿನಲ್ಲಿಯೇ ಪ್ರೈಮರಿ ಹಂತದಲ್ಲಿ ಒಂದು ಉದ್ಯೋಗದ ಮೂಲಕ ಶಿಕ್ಷಣ ಕಲಿಸುವುದು; ಸದ್ಯಕ್ಕೆ ಕೈರಾಟೆಯ ನೂಲುವಿಕೆಯಂದ ವಿದ್ಯಾಭ್ಯಾಸ ಆರಂಭಿಸಬೇಕು ಎಂಬುದೇ ಮೂಲ ಶಿಕ್ಷಣದ ರಹಸ್ಯ. ಮಕ್ಕಳಲ್ಲಿ ಚಿಕ್ಕಂದಿನಿಂದ ಸ್ವಾವಲಂಬನೆ ಬೆಳೆಯುವಂತೆ ಮಾಡುವುದು; ವಿದ್ಯಾರ್ಥಿಗಳಲ್ಲಿ ಸಮಾನತೆ, ಪರಸ್ಪರ ಸೌಹಾರ್ದವನ್ನು ಅಭಿವೃದ್ಧಿಗೊಳಿಸುವುದು ಇವೇ ಮುಂತಾದವು ಮೂಲ ಶಿಕ್ಷಣದ ಧ್ಯೇಯಗಳು.

ಗಾಂಧೀಜಿ ರಚನಾತ್ಮಕ ಕಾರ್ಯಗಳಿಗಾಗಿಯೇ ಪ್ರತ್ಯೇಕ ಕೆಲಸಗಾರರನ್ನು ತಯಾರು ಮಾಡಿದರು. ರಾಜಕೀಯ ಗೊಡವೆ ಇಲ್ಲದ ಗಂಡಸರು ಹೆಂಗಸರು ಹೇರಳವಾಗಿ ರಚನಾತ್ಮಕ ಕಾರ್ಯಕ್ರದಲ್ಲಿ ತೊಡಗಿದರು. ಸಾಮಾನ್ಯ ವಿದ್ಯಾರ್ಥಿಗಳನ್ನೂ ರಚನಾತ್ಮಕ ಕಾರ್ಯದಲ್ಲಿ ತೊಡಗಿದರು. ಸಾಮಾನ್ಯ ವಿದ್ಯಾರ್ಥಿಗಳನ್ನೂ ರಚನಾತ್ಮಕ ಕಾರ್ಯದಲ್ಲಿ ಭಾಗವಹಿಸುವಂತೆ ಕರೆದರು. ರಜಾದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಕ್ಯಾಂಪ್ ಮಾಡಿ ಗ್ರಾಮನೈರ್ಮಲ್ಯ ಮುಂತಾದ ಕಾರ್ಯಗಳಲ್ಲಿ ತೊಡಗಿದರು. ಮಹಿಳೆಯರಂತೂ ವಿಶೇಷವಾಗಿ ರಚನಾತ್ಮಕ ಕಾರ್ಯಗಳಲ್ಲಿ ಭಾಗಿಯಾಯಾದರು. ಸಾವಿರಾರು ಜನರು, ಹತ್ತು – ಇಪ್ಪತ್ತು ಸಾವಿರ ಜನರು ದಿನವಹಿ ಅರ್ಧ ಗಂಟೆಯಾದರೂ ಕೈರಾಟೆಯಲ್ಲಿ ನೂಲುತ್ತಿದ್ದರು. ಖಾದಿ ಬಟ್ಟೆಯನ್ನು ಧರಿಸುವುದು ಫ್ಯಾಷನ್ ಆಯಿತು. ಗಾಂಧೀಜಿಯ ಪ್ರೆರಣೆಯಿಂದ ಸಾಮಾನ್ಯ ಜನರು ದೇಶಭಕ್ತಿಯಿಂದ ತುಂಬಿ, ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಲು ಆರಂಭಿಸಿದರು. ಜನರಲ್ಲಿ ಸಾತ್ವಿಕ ಭಾವನೆ ಉಂಟಾಗುವಂತೆ ಗಾಂಧೀಜಿ ಪ್ರೇರೇಪಿಸುತ್ತ ಬಂದರು.

ಗಾಂಧೀಜಿಗೆ ಭಗವದ್ಗೀತೆ ಎಂದರೆ ತಾಯಿಯ ಹಾಗೆ. ಅದನ್ನು ಪ್ರವಾಸ ಕಾಲದಲ್ಲಿ ಪ್ರತಿದಿನವೂ ಬೆಳಿಗ್ಗೆ ಮತ್ತು ಸಾಯಂಕಾಲ ಪ್ರಾರ್ಥನೆಯ ಸಮಯದಲ್ಲಿ ಪಠಿಸುತ್ತಿದ್ದರು. ತಾವೇ ಗೀತೆಗೆ ಅರ್ಥವನ್ನು ಬರೆದಿದ್ದರು. ಇದಕ್ಕೆ ಅನಾಸಕ್ತಿಯೋಗ ಎಂಬ ಹೆಸರಿಟ್ಟರು. ಈ ಪುಸ್ತಕವನ್ನು ಜನಸಾಮಾನ್ಯರು ಓದಲಾರಂಭಿಸಿದರು.

ಗೋಸೇವೆಯನ್ನು ಗಾಂಧೀಜಿ ಪ್ರಚಾರ ಮಾಡುತ್ತಿದ್ದರು. ಹೀಗೆ ನಾನಾ ರೀತಿಯಾಗಿ ಗಾಂಧೀಜಿ ಜನರಲ್ಲಿ ರಚನಾತ್ಮಕ ಬುದ್ಧಿಯನ್ನು ಬೆಳೆಸುತ್ತ ಬಂದರು. ಸತ್ಯಾಗ್ರಹ ನಿಂತರೂ ಗಾಂಧೀ ಪ್ರಭಾವ ದೇಶದಲ್ಲಿ ಬೆಳೆಯುತ್ತ ಬಂದಿತು.

ಪಾರ್ಲಿಮೆಂಟರಿ ಕಾರ್ಯದಲ್ಲಿ ನಿರತರಾದ ಕಾಂಗ್ರೆಸಿಗರು ಶಾಸನ ಸಭೆಗಳಲ್ಲಿ ಸರ್ಕಾರವನ್ನು ಹೆಜ್ಜೆಗೂ ವಿರೋಧಿಸುತ್ತಿದ್ದರು. ಏತನ್ಮಧ್ಯೆ ೧೯೩೫ರಲ್ಲಿ ಹೊಸ ರಾಜಕೀಯ ಸುಧಾರಣೆಗಳು ಜಾರಿಗೆ ಬಂದವು. ಇವುಗಳ ಪ್ರಕಾರ ಪ್ರಾಂತಗಳಿಗೆ ಅಟಾನಮಿ (ಸ್ವನಿಯಂತ್ರಣ) ದೊರೆಯಿತು. ಗವರ್ನರಿಗೆ ಮಾತ್ರ ಕೆಲವು ವಿಶೇಷಾಧಿಕಾರಗಳಿದ್ದವು. ಕೇಂದ್ರದಲ್ಲಿ ಫೆಡರಲ್ ರೀತಿಯ ಸರ್ಕಾರ ರಚನೆ. ಇದರಲ್ಲಿ ಬ್ರಿಟಿಷ್ ಇಂಡಿಯಾದ ಹಾಗೂ ದೇಶಿಯ ರಾಜರ ಪ್ರತಿನಿಧಿಗಳು. ಇರುವವರು. ಕೇಂದ್ರದಲ್ಲಿ ಗವರ್ನರ್ – ಜನರಲ್ ಇರುವರು. ಹಣಕಾಸು, ದೇಶದ ರಕ್ಷಣೆ (ಸೈನ್ಯ) ಮತ್ತು ಸಾರಿಗೆ (ರಸ್ತೆ, ರೈಲ್ವೆ, ಹಡಗು) ಇವು ಕೇಂದ್ರ ಸರ್ಕಾರಕ್ಕೆ ಒಳಪಟ್ಟಿರುವುದು. ಹೊಸ ಸುಧಾರಣೆಗಳು ಕೇಂದ್ರದಲ್ಲಿ ಜನಗಳ ಪ್ರತಿನಿಧಿಗಳಿಗೆ ಕೊಡುವ ಅಧಿಕಾರ ತೃಪ್ತಿಕರವಾಗಿರಲಿಲ್ಲ.

ಏತನ್ಮಧ್ಯೆ ಭಾರತೀಯರ ದುರದೃಷ್ಟದಿಂದ ಎರಡು ದೊಡ್ಡ ಭೂಕಂಪಗಳು ನಡೆದವು. ೧೯೩೪ನೇ ಜನವರಿಯಲ್ಲಿ ಬಿಹಾರಿನಲ್ಲಿ ದೊಡ್ಡ ಭೂಕಂಪ ನಡೆದು ಬಹಳ ನಷ್ಟವಾಯಿತು. ಬಾಬು ರಾಜೇಂದ್ರ ಪ್ರಸಾದರು ಬಿಹಾರ್ ಅರ್ತ್‌ಕ್ವೇಕ್ ಫಂಡ್ ಎಂಬ ಒಂದು ವಿಧಿಯನ್ನು ಎತ್ತಿ ಹಣವನ್ನು ಶೇಖರಿಸಿ, ಭೂಕಂಪದಲ್ಲಿ ಕಷ್ಟಪಟ್ಟವರಿಗೆ ಸಹಾಯ ಮಾಡಿದರು. ೧೯೩೫ನೇ ಮೇ.ನಲ್ಲಿ ಕ್ವೆಟ್ವಾದಲ್ಲಿ ಇನ್ನೊಂದು ಭೂಕಂಪ ಸಂಭವಿಸಿತು. ಕ್ವೆಟ್ವಾ, ಮಿಲಿಟರಿ ಕ್ಷೇತ್ರವಾದುದರಿಂದ ಹೊರಗಿನವರನ್ನಾರನ್ನೂ ಅಲ್ಲಿ ಪರಿಹಾರ ಕಾರ್ಯ ಮಾಡಲು ಬಿಡಲಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಲಿ ಗಾಂಧೀಜಿಯಾಗಲಿ ಅಲ್ಲಿ ಹೋಗುವ ಹಾಗೆ ಇರಲಿಲ್ಲ. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸರ್ಕಾರದ ಈ ನೀತಿಯನ್ನು ಬಲವಾಗಿ ಖಂಡಿಸಿತು.

೧೯೩೬ನೇ ಏಪ್ರಿಲ್‌ನಲ್ಲಿ ಲಾರ್ಡ್ ವಿಲ್ಲಿಂಗ್‌ಡನ್ ವೈಸ್ರಾಯ್ ಪದವಿಯಿಂದ ನಿವೃತ್ತರಾಗಿ, ಲಾರ್ಡ್‌ ಲಿನ್‌ಲಿತ್‌ಗೊ ವೈಸ್‌ರಾಯರಾಗಿ ಆಳ್ವಿಕೆಯನ್ನು ಆರಂಭಿಸಿದರು.

* * *