Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಗಿರೀಶ್ ಕಾರ್ನಾಡ್

ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯ ಹಾಗೂ ನಾಟಕ ಕ್ಷೇತ್ರದ ಮೇರು ದಿಗ್ಗಜ ಗಿರೀಶ್ ಕಾರ್ನಾಡ್. ಭಾರತದಲ್ಲೇ ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು.

ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ| ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಪ್ರಗತಿಶೀಲ ಮನೋಭಾವದ ಡಾ| ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಬೆಳವಣಿಗೆಯಲ್ಲಿ ಸಹಾಯವಾಯಿತು. ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗು ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು.ಆ ಬಳಿಕ Rhodes scholorship ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಶಿಯನ್ ಆಗಿದ್ದಾರೆ.ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು. ಬಹುಶಃ ಕನ್ನಡದ ಒಬ್ಬ ನಾಟಕಕಾರ ಇಷ್ಟೊಂದು ಭಾಷೆಗೆ ಪರಿಚಯವಾದದ್ದು ಪ್ರಥಮ. ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ನೌಕರಿಯಲ್ಲಿದ್ದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

ಇಂಗ್ಲಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯಕೃತಿ “ಯಯಾತಿ” ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನಿಂದ ಮರಳಿದ ಬಳಿಕ “ತುಘಲಕ” ಹಾಗೂ “ಹಯವದನ” ಪ್ರಕಟವಾದವು. ನಂತರ “ಅಂಜುಮಲ್ಲಿಗೆ”, “ನಾಗಮಂಡಲ”, “ತಲೆದಂಡ” ಹಾಗು “ಅಗ್ನಿ ಮತ್ತು ಮಳೆ” ಮುಂತಾದ ನಾಟಕಗಳನ್ನು ಬರೆದು ಉತ್ತಮ ನಾಟಕಕಾರರೆಂದು ಪ್ರಸಿದ್ಧರಾದರು. ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ ಇವರಿಗಾಗಿ ಬರೆದುಕೊಟ್ಟ ನಾಟಕ:”ಟಿಪ್ಪುವಿನ ಕನಸುಗಳು”.

ಚಿತ್ರರಂಗದಲ್ಲೂ ಕಾರ್ನಾಡ್ ರ ಪಾತ್ರ ಗಣನೀಯವಾದದ್ದು. ಯು,ಆರ್. ಅನಂತಮೂರ್ತಿ ಯವರ ವಿವಾದತ್ಮಕ ಕಾದಂಬರಿ “ಸಂಸ್ಕಾರ” ವನ್ನು ಚಲನಚಿತ್ರವನ್ನಾಗಿ ಮಾಡಿದ್ದಲ್ಲದೇ, ಆ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು., ಈ ಈ ಚಿತ್ರ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ತಂದು ಕೊಟ್ಟಿತು. ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ಮುಂದೆ “ತಬ್ಬಲಿಯು ನೀನಾದೆ ಮಗನೆ”, “ಕಾಡು”, “ಒಂದಾನೊಂದು ಕಾಲದಲ್ಲಿ” ಚಿತ್ರಗಳನ್ನು ನಿರ್ದೇಶಿಸಿದರು. “ಕಾಡು” ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ “ಉತ್ಸವ”, “ಗೋಧೂಳಿ” ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ “ಕಾನೂರು ಹೆಗ್ಗಡಿತಿ” ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಇದಲ್ಲದೆ”ಕನಕ ಪುರಂದರ”,”ದ.ರಾ.ಬೇಂದ್ರೆ” ಹಾಗು “ಸೂಫಿ ಪಂಥ” ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು “ಚೆಲುವಿ” ಕಿರಚಿತ್ರವನ್ನು ನಿರ್ದೇಶಿಸಿದರು. ೨೦೦೭ ರಲ್ಲಿ ತೆರೆ ಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ. ರಂಗಭೂಮಿ, ಚಲನಚಿತ್ರ ಕ್ಷೇತ್ರದಂತೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ವೋ ಘರ್’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್ ಮುಂತಾದ ಪ್ರತಿಭಾವಂತ ನಿರ್ದೇಶಕರ ನಿರ್ದೇಶನದಲ್ಲಿ ಹಲವಾರು ಚಲನಚಿತ್ರಗಳಲ್ಲಿ, ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ೧೯೭೭ ರಲ್ಲಿ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೌಲ್ಯ ನಿರ್ಣಾಯಕರಲ್ಲಿ ಒಬ್ಬರಾಗಿದ್ದರು. ಲಂಡನ್ನಿನಲ್ಲಿ ನಡೆದ ಭಾರತ ಉತ್ಸವ(ಫೆಸ್ಟಿವಲ್ ಆಫ್ ಇಂಡಿಯಾ, ೧೯೮೨) ಹಾಗೂ ಮಾಂಟ್ರಿಯಲ್ ಚಲನಚಿತ್ರೋತ್ಸವಗಳಲ್ಲಿ ಭಾರತದ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಿದರು. ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯನ್ನು ಬಿಂಬಿಸುವ, ವಿಜ್ಞಾನಿ ಯಶ್‌ಪಾಲ್ ಮಾರ್ಗದರ್ಶನದ ‘ದಿ ಟರ್ನಿಂಗ್ ಪಾಯಿಂಟ್’ ಎನ್ನುವ ದೂರದರ್ಶನದ ಧಾರವಾಹಿಯಲ್ಲಿ ಮುಖ್ಯ ನಿರೂಪಕರಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯ ಕಾರ್ನಾಡರ ಸಾಹಿತ್ಯ-ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. “ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಯಶಸ್ಸು, ಸೋಲು ಎರಡೂ ಅಡಗಿದೆ.” ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ.

ಕಾರ್ನಾಡರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆಕಿದೆ. ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರ, ಬಿರುದು:

೯೬೨: ಯಯಾತಿ ನಾಟಕಕ್ಕೆ ರಾಜ್ಯಪ್ರಶಸ್ತಿ.
೧೯೭೦: ರಾಜ್ಯೋತ್ಸವ ಪ್ರಶಸ್ತಿ.
೧೯೭೦-೭೨: ಹೋಮಿಭಾಭಾ ಫೆಲೋಶಿಪ್-ಜನಪದ ರಂಗಭೂಮಿಯಲ್ಲಿನ ಸೃಜನಶೀಲ ಕಾರ್ಯಕ್ಕಾಗಿ.
೧೯೭೨: ನಾಟಕ ರಚನೆಗಾಗಿ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ;ವರ್ಷದ ಅತ್ಯುತ್ತಮ ನಾಟಕಕ್ಕಾಗಿ ಭಾರತೀಯ ನಾಟ್ಯ ಸಂಘದ ಕಮಲಾ ದೇವಿ ಪ್ರಶಸ್ತಿ(ಹಯವದನ ನಾಟಕಕ್ಕಾಗಿ)
೧೯೭೪: ಭಾರತ ಸರ್ಕಾರದಿಂದ’ಪದ್ಮಶ್ರೀ’ ಪ್ರಶಸ್ತಿ
೧೯೮೪: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.
೧೯೮೯: ಕೊಲ್ಕತ್ತಾದ ನಂದೀಕರ್ ಪ್ರಶಸ್ತಿ
೧೯೯೦: ‘ಗ್ರಂಥಲೋಕ’ ದ ವರ್ಷದ ಲೇಖಕ ಪ್ರಶಸ್ತಿ.
೧೯೯೨: ‘ಪದ್ಮಭೂಷಣ’ ಪ್ರಶಸ್ತಿ-ಭಾರತ ಸರ್ಕಾರದಿಂದ;ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-ಅತ್ಯುತ್ತಮ ನಾಟಕಕ್ಕಾಗಿ(ತಲೆದಂಡ)
ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-ಅತ್ಯುತ್ತಮ ಸೃಜನಶೀಲ ನಾಟಕಕ್ಕಾಗಿ(ನಾಗಮಂಡಲ).
ದಕ್ಷಿಣ ಭಾರತ ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ;ಬಿ.ಎಚ್.ಶ್ರೀಧರ್ ಪ್ರಶಸ್ತಿ.
೧೯೯೩: ತಲೆದಂಡ ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
೧೯೯೪:ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪುರಸ್ಕಾರ;ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ-ತಲೆದಂಡಕ್ಕಾಗಿ.
೧೯೯೭: ಗುಬ್ಬಿ ವೀರಣ್ಣ ಪ್ರಶಸ್ತಿ.
೧೯೯೮: ಕಾಳಿದಾಸ್ ಸಮ್ಮಾನ್.
೧೯೯೯: ಭಾರತೀಯ ಜ್ಞಾನಪೀಠ ಪ್ರಶಸ್ತಿ.

ನಾಟಕ ರಚನೆ

ನಾಟಕಗಳು

  1. ಮಾ ನಿಷಾಧ – ಏಕಾಂಕ ನಾಟಕ
  2. ಯಯಾತಿ – ೧೯೬೧
  3. ತುಘಲಕ್ – ೧೯೬೪
  4. ಹಯವದನ – ೧೯೭೨(ನಾಟ್ಯರಂಗ ಪ್ರಶಸ್ತಿ )
  5. ಅಂಜುಮಲ್ಲಿಗೆ – ೧೯೭೭
  6. ಹಿಟ್ಟಿನ ಹುಂಜ ಅಥವಾ ಬಲಿ – ೧೯೮೦
  7. ನಾಗಮಂಡಲ – ೧೯೯೦
  8. ತಲೆದಂಡ – ೧೯೯3
  9. ಅಗ್ನಿ ಮತ್ತು ಮಳೆ – ೧೯೯೫
  10. ಟಿಪ್ಪುವಿನ ಕನಸುಗಳು – ೧೯೯೭
  11. ಒಡಕಲು ಬಿಂಬ – ೨೦೦೫
  12. ಮದುವೆ ಅಲ್ಬಮ್
  13. ಫ್ಲಾವರ್ಸ – ೨೦೧೨
  14. ಬೆಂದ ಕಾಳು ಆನ್ ಟೋಸ್ಟ- ೨೦೧೨

ಆತ್ಮ ಚರಿತ್ರೆ

ಆಡಾಡತ ಆಯುಷ್ಯ (೨೦೧೧)

ಚಿತ್ರರಂಗ

  • ‘ಸಂಸ್ಕಾರ'(೧೯೭೦) ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ. ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ-ಪ್ರಾಣೇಶಾಚಾರ್ಯರದು. ಪಿ.ಲಂಕೇಶ ಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ-ನಾರಣಪ್ಪನದು. ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು ಮತ್ತು ಚಿತ್ರಕಥೆ ಗಿರೀಶ ಕಾರ್ನಾಡರದ್ದು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ.
  • ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ(೧೯೭೨) ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ನಿರ್ಮಾಣ: ಜಿ.ವಿ.ಅಯ್ಯರ್.
  • ಮುಂದೆ ‘ತಬ್ಬಲಿಯು ನೀನಾದೆ ಮಗನೆ'(೧೯೭೭), ‘ಕಾಡು'(೧೯೭೪), ‘ಒಂದಾನೊಂದು ಕಾಲದಲ್ಲಿ'(೧೯೭೮) ಚಿತ್ರಗಳನ್ನು ನಿರ್ದೇಶಿಸಿದರು. ‘ಕಾಡು’ ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು.
  • ನಂತರ ಉತ್ಸವ್ಗೋಧೂಳಿ ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು.
  • ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ “ಕಾನೂರು ಹೆಗ್ಗಡಿತಿ”(೧೯೯೯) ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.
  • ಇದಲ್ಲದೆ ಕನಕ ಪುರಂದರದ.ರಾ.ಬೇಂದ್ರೆ ಹಾಗು ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು.
  • ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು.
  • ೨೦೦೭ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.