Categories
e-ದಿನ

ಜನವರಿ-01

ಪ್ರಮುಖಘಟನಾವಳಿಗಳು:

ಕ್ರಿಸ್ತಪೂರ್ವ 45: ರೋಮನ್ ಚಕ್ರಾಧಿಪತ್ಯವು ಜೂಲಿಯನ್ ಕ್ಯಾಲೆಂಡರನ್ನು ತನ್ನ ಸಾರ್ವಜನಿಕವಾಗಿ   ಅಳವಡಿಸಿಕೊಂಡು, ಜನವರಿ 1ನೇ ದಿನಾಂಕವನ್ನು ವರ್ಷದ ಪ್ರಾರಂಭದ ದಿನ ಎಂದು ಘೋಷಿಸಿತು.

1582: ಫ್ರಾನ್ಸ್, ಪೋರ್ಚುಗಲ್, ಇಟಲಿ ಮತ್ತು ಸ್ಪೇನ್ ರಾಷ್ಟ್ರಗಳಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂದು, ಜನವರಿ 1 ದಿನ ‘ಹೊಸ ವರ್ಷದ ದಿನ’ವೆಂದು ಪರಿಗಣಿತಗೊಂಡಿತು. ಗ್ರೇಟ್ ಬ್ರಿಟನ್ ದೇಶವು ಈ ಪದ್ಧತಿಯನ್ನು  1752ರಲ್ಲಿ ಅಂಗೀಕರಿಸಿತು. ಗ್ರೆಗೋರಿಯನ್ ಕ್ಯಾಲೆಂಡರ್ ಬಹುತೇಕವಾಗಿ ವಿಶ್ವದೆಲ್ಲೆಡೆ ಅಳವಡಿತಗೊಂಡಿದೆ. ಅಲೋಸಿಯಸ್ ಲಿಲಿಯಸ್ಎಂಬಾತನಿಂದ  ರೂಪಿಸಲ್ಪಟ್ಟ  ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ವ್ಯಾಪ್ತಿಯನ್ನು ಜೂಲಿಯನ್ ಕ್ಯಾಲೆಂಡರಿನಿಂದ ಶೇಕಡಾ 0.002ರಷ್ಟು ಬದಲಿಸಿಕೊಂಡಿದೆ. ಪೋಪ್ ಗ್ರೆಗೋರಿ-13, ಈ ಪದ್ಧತಿಯ ಅನುಸರಣೆಯನ್ನು  ಅಕ್ಟೋಬರ್ 1582 ವರ್ಷದಲ್ಲಿ ಆದೇಶಿಸಿದರು.  ಹೀಗಾಗಿ ಅವರ ಹೆಸರನ್ನೇ ಪಡೆದುಕೊಂಡ ಈ ಪದ್ಧತಿ ‘ಗ್ರೆಗೋರಿಯನ್ ಕ್ಯಾಲೆಂಡರ್’ ಆಗಿದೆ.

1772: ಪ್ರಥಮ ಬಾರಿಗೆ ಟ್ರಾವೆಲರ್ಸ್ ಚೆಕ್ಕುಗಳು ಲಂಡನ್ನಿನಲ್ಲಿ ಬಳಕೆಗೆ ಬಂದವು. ಪ್ರಯಾಣದಲ್ಲಿರುವಾಗ ಹೆಚ್ಚಿನ ಹಣವನ್ನು ತೆಗೆದುಕೊಂಡು ಹೋಗುವುದನ್ನು ತಪ್ಪಿಸಲು ನಿಗದಿತ ಹಣಕಾಸು ವಿನಿಮಯ ಕೇಂದ್ರಗಳಲ್ಲಿ ನಗದು ಮಾಡಿಕೊಳ್ಳಬಹುದಾದ ಈ ಟ್ರಾವೆಲರ್ಸ್ ಚೆಕ್ಕುಗಳನ್ನು, ಪ್ರಾರಂಭಿಕವಾಗಿ 90 ವಿವಿಧ ನಗರಗಳಲ್ಲಿ ನಗದು ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಟ್ರಾವೆಲರ್ಸ್ ಚೆಕ್ಕುಗಳು 20ನೇ ಶತಮಾನದ ಅಂತ್ಯದವರೆವಿಗೂ ಪ್ರಾಮುಖ್ಯತೆ ಹೊಂದಿತ್ತು.  ಮುಂದುವರೆದ  ಅಂತರರಾಷ್ಟ್ರೀಯ ಮಟ್ಟದ  ಬ್ಯಾಂಕಿಂಗ್ ಮತ್ತು ವಾಣಿಜ್ಯ ವ್ಯವಹಾರದ ಆಧುನಿಕ ವ್ಯವಸ್ಥೆಯ ಮಾದರಿಗಳಾದ ವಿವಿಧ ಕಾರ್ಡುಗಳು ಮತ್ತು ಅಂತರಜಾಲ ಹಣ ವರ್ಗಾವಣೆ ವ್ಯವಸ್ಥೆಗಳ ಚಲಾವಣೆಯಿಂದ, ‘ಟ್ರಾವೆಲರ್ಸ್ ಚೆಕ್’ ಉಪಯೋಗ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖಗೊಂಡಿದೆ.

1788: ಪ್ರಸಿದ್ಧ ವಾರ್ತಾಪತ್ರಿಕೆ ‘ದಿ ಟೈಮ್ಸ್’ನ ಮೊದಲ ಸಂಚಿಕೆ ಇಂಗ್ಲೆಂಡಿನಲ್ಲಿ ಪ್ರಕಟವಾಯಿತು.  1785ರ ವರ್ಷದಲ್ಲಿ ಪ್ರಾರಂಭಗೊಂಡ ಈ  ಪತ್ರಿಕೆ ಪ್ರಾರಂಭಿಕ ವರ್ಷಗಳಲ್ಲಿ  ‘ದಿ ಡೈಲಿ ಯೂನಿವರ್ಸಲ್ ರಿಜಿಸ್ಟರ್’ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು.

1808: ಅಮೆರಿಕವು ಜೀತದಾಳುಗಳನ್ನು ಆಮದು ಮಾಡಿಕೊಳ್ಳುವ ಪದ್ಧತಿಯನ್ನು ನಿಲ್ಲಿಸಿತು.

1877: ಇಂಗ್ಲೆಂಡಿನ ವಿಕ್ಟೋರಿಯಾ ರಾಣಿಯನ್ನು ‘ಭಾರತದ ರಾಣಿ’ ಎಂದು ಘೋಷಿಸಲಾಯಿತು.

1906: ಬ್ರಿಟಿಷ್ ಆಡಳಿತದ ಭಾರತ ಸರ್ಕಾರವು ಅಧಿಕೃತವಾಗಿ ” ಭಾರತೀಯ ಕಾಲಮಾನ (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ಅನ್ನು ಅಳವಡಿಸಿಕೊಂಡಿತು.

1949: ವಿಶ್ವಸಂಸ್ಥೆಯ ಯುದ್ಧವಿರಾಮದ ಆದೇಶದಂತೆ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಮಧ್ಯರಾತ್ರಿಗೆ ಒಂದು ನಿಮಿಷ ಮುಂಚಿತವಾಗಿ ಕಾಶ್ಮೀರದಲ್ಲಿನ ಯುದ್ಧವನ್ನು ನಿಲ್ಲಿಸಿದವು.

1978: ಏರ್ ಇಂಡಿಯಾ 747 ‘ಎಂಪರರ್ ಅಶೋಕ ವಿಮಾನವು ಮುಂಬೈ ಬಳಿ ಸಮುದ್ರಕ್ಕೆ ಅಪ್ಪಳಿಸಿ ಅದರಲ್ಲಿದ್ದ 213 ಪ್ರಯಾಣಿಕರು ಮೃತರಾದರು.

1995: ಅಂತರರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳನ್ನು ನಿಯಂತ್ರಿಸುವ ‘ವಿಶ್ವ ವಾಣಿಜ್ಯ ಒಕ್ಕೂಟ’ WTO (ದಿ ವರ್ಲ್ಡ್ ಟ್ರೇಡ್ ಆರ್ಗನೈಸೇಷನ್) ಅಸ್ತಿತ್ವಕ್ಕೆ ಬಂತು. ಈ ಒಕ್ಕೂಟದ ಪ್ರಧಾನ ಕಚೇರಿ ಸ್ವಿಟ್ಜರ್ ಲ್ಯಾಂಡ್ ದೇಶದ ಜಿನೀವಾ ನಗರದಲ್ಲಿದೆ.

1999: ಹನ್ನೊಂದು ಐರೋಪ್ಯ ರಾಷ್ಟ್ರಗಳು `ಯುರೋ’ ಹೆಸರಿನ ಏಕರೂಪ ಹಣದ ಚಲಾವಣೆಯನ್ನು ಜಾರಿಗೆ ತಂದವು.

2001: ಕಲ್ಕತ್ತಾ ನಗರವನ್ನು ‘ಕೊಲ್ಕತ್ತಾ’ ಎಂದು ಮರುನಾಮಕರಣಗೊಂಡಿತು.

2000: ಎಲ್ಲ ಎಲೆಕ್ಟ್ರಾನಿಕ್ ವಾಣಿಜ್ಯ  ವ್ಯವಹಾರಕ್ಕೆ ಅಂತಾರಾಷ್ಟ್ರೀಯ ಮಾನಕವಾಗಿ ಬ್ರಿಟನ್ನಿನಲ್ಲಿ ‘ಗ್ರೀನ್-ವಿಚ್ ಎಲೆಕ್ಟ್ರಾನಿಕ್ ಟೈಮ್’ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ ಜಗತ್ತಿನಾದ್ಯಂತ ಇರುವ ಇಂಟರ್ ನೆಟ್ ಸೇವಾ ಮಾರಾಟಗಾರರು ಮತ್ತು ಬಳಕೆದಾರರು,  ಒಂದೇ ನಿರ್ದಿಷ್ಟ ಕಾಲಮಾಪನ ವ್ಯವಸ್ಥೆಯಲ್ಲಿ  ವೇಳೆಯನ್ನು ಅನುಸರಿಸುವುದು ಸಾಧ್ಯವಾಗಿದೆ.

ಪ್ರಮುಖಜನನ/ಮರಣ:

1863: ಫ್ರೆಂಚ್ ಇತಿಹಾಸಕಾರರೂ, ಶಿಕ್ಷಣ ತಜ್ಞರೂ, ಅಂತರರಾಷ್ಟ್ರೀಯ ಒಲಿಂಪಿಕ್ ” open=”no”]<p>ಸಮಿತಿಯ ಸಂಸ್ಥಾಪಕರೂ ಆದ  ಪಿಯೆರ್ರೆ ಡಿ ಕೌಬರ್ಟಿನ್ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು.

1892: ಮಹಾತ್ಮ ಗಾಂಧೀಜಿಯವರ ಆಪ್ತ ಕಾರ್ಯದರ್ಶಿಯಾಗಿ 25 ವರ್ಷಗಳ ಕಾಲ ಗಾಂಧೀಜಿಯವರ ಬದುಕನ್ನು ಆಪ್ತವಾಗಿ ದಾಖಲಿಸಿದ, ಸ್ವಾತಂತ್ರ್ಯ ಹೋರಾಟಗಾರ ಮಹದೇವ ದೇಸಾಯಿ ಅವರು ಗುಜರಾತಿನ ಸೂರತ್ ಜಿಲ್ಲೆಗೆ ಸೇರಿದ ಸರಸ್ ಎಂಬಲ್ಲಿ ಜನಿಸಿದರು.  ಮಹದೇವ ದೇಸಾಯಿ ಮತ್ತು ಅವರ ಪತ್ನಿ ಇಬ್ಬರೂ ಗಾಂಧೀಜಿಯವರ ಆಶ್ರಮದಲ್ಲಿದ್ದು ಅಪಾರ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾದರು.  ದೇಸಾಯಿ ಅವರು 13 ನವೆಂಬರ್ 1917ರ ದಿನದಿಂದ ತಾವು ನಿಧನರಾಗುವ ಮುನ್ನಾದಿನವಾದ 14 ಆಗಸ್ಟ್ 1942ರವರೆಗೂ ಗಾಂಧೀಜಿಯವರ ದಿನಚರಿಯನ್ನು ಕಾಲಾನುಕ್ರಮದ ಘಟನೆಗಳಾಗಿ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ.  ಗಾಂಧೀಜಿಯವರ ಜೊತೆ ಆಘಾಖಾನ್ ಅರಮನೆಯಲ್ಲಿ ಬಂಧಿತರಾಗಿದ್ದ ದೇಸಾಯಿ ಅವರು ಆಗಸ್ಟ್ 15, 1942ರಂದು ಹೃದಯಾಘಾತದಿಂದ ನಿಧನರಾದರು.  ಮಹದೇವ ದೇಸಾಯಿ ಅವರ ಜೀವನ ಚರಿತ್ರೆಯನ್ನು ‘ದಿ ಫೇರ್ ಅಂಡ್ ದಿ ರೋಸ್’ ಹೆಸರಿನಲ್ಲಿ ಅವರ ಪುತ್ರ ನಾರಾಯಣ ದೇಸಾಯಿ ಅವರು ರಚಿಸಿದ್ದಾರೆ.

1894: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಖ್ಯಾತ ಭೌತವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಜನಿಸಿದರು. (Quantum Theory) ಕ್ವಾಂಟಮ್ ಚಲನವನ್ನಾಧರಿಸಿದ ಬೋಸ್-ಐನ್‌ಸ್ಟೀನ್ ಸಂಖ್ಯಾಶಾಸ್ತ್ರ ಪ್ರವರ್ತಕರು. ‘ಯಾವುದೇ ನಿಶ್ಚಿತ ಸ್ಥಿತಿಯಲ್ಲಿ ಇರಬಹುದಾದ ಪೋಟಾನ್‌ಗಳ ಸಂಖ್ಯೆಗೆ ಮಿತಿ ಇರುವುದಿಲ್ಲ’ ಎಂದು ವಿಜ್ಞಾನ ಕ್ಷೇತ್ರದಲ್ಲಿ ಬೋಸ್ ನಿರೂಪಿಸಿದರು. ಫೋಟಾನ್‌ಗಳಂಥ ಕಣಗಳು ಮುಂದೆ ‘ಬೋಸಾನ್’ಗಳೆಂದು ಹೆಸರಾದುವು. ಬೋಸ್ ಅವರ ಸಂಶೋಧನೆಯನ್ನು ಮೆಚ್ಚಿದ ಐನ್‌ಸ್ಟೈನ್ ಅವರು ಫೋಟಾನ್‌ಗಳ ಶಕ್ತಿಯ ಹಂಚಿಕೆಯ ಅಧ್ಯಯನವನ್ನು ಪರಮಾಣುಗಳಿಗೂ ವಿಸ್ತರಿಸಿದರು. ಹೀಗೆ ಹುಟ್ಟಿಕೊಂಡ ಶಕ್ತಿ ಹಂಚಿಕೆಯ ಕ್ರಮ ‘ಬೋಸ್-ಐನ್‌ಸ್ಟೈನ್  ಸ್ಟಾಟಿಸ್ಟಿಕ್ಸ್’ ಅಥವಾ ‘ಬೋಸ್ ಐನ್‌ಸ್ಟೈನ್ ಹಂಚಿಕೆ’ ಎಂದೇ ಖ್ಯಾತವಾಯಿತು. ಈ ಹಂಚಿಕೆಯನ್ನು ಅವಲಂಬಿಸಿಯೇ ‘ಬೋಸ್ ಸಾಂದ್ರೀಕರಣ’ [ಬೋಸ್ ಕಂಡೆನ್ಸೇಷನ್] ಎಂಬ ವಿಶಿಷ್ಟ ವಸ್ತುಸ್ಥಿತಿಯನ್ನು ಐನ್‌ಸ್ಟೈನ್ 1925ರಲ್ಲಿ ಕಲ್ಪಿಸಿದರು. 1995ನೇ ಜೂನ್ 5 ರಂದು ಕೊಲರಾಡೊ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ  ಶುದ್ಧವಾದ ಬೋಸ್ ಸಾಂದ್ರೀಕರಣ ಸಾಧ್ಯವಾಯಿತು.

1895: ದೀರ್ಘ, ಸುಸ್ಥಿರ, ಮೋಹಕ ದಾಖಲೆಯನ್ನು ಕರ್ನಾಟಕ ಗೀತದಲ್ಲಿ ಮೂಡಿಸಿದ ಪ್ರಮುಖರಲ್ಲೊಬ್ಬರಾದ ಪಿಟೀಲು ವಾದಕ ಟಿ. ಚೌಡಯ್ಯನವರು ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ಬಿಡಾರಂ ಕೃಷ್ಣಪ್ಪನವರ  ಬಳಿ ಸುದೀರ್ಘ ಕಾಲ ಸಂಗೀತವನ್ನು ತಪಸ್ಸಿನಂತೆ ಅಭ್ಯಾಸ ಮಾಡಿದ ಚೌಡಯ್ಯನವರು ಕಛೇರಿಗಳಲ್ಲಿ ಪಿಟೀಲಿನಲ್ಲಿ ನಾಲ್ಕು ತಂತಿಗಳ ಬದಲಿಗೆ ಏಳು ತಂತಿಗಳನ್ನು ಬಳಕೆಗೆ ತಂದು ಪ್ರಸಿದ್ಧಿ ಪಡಿಸಿದರು. ಸ್ವಯಂ ವೀಣೆ ಶೇಷಣ್ಣನವರೇ  ಚೌಡಯ್ಯನವರ ಸಪ್ತತಂತಿಗಳಿಂದ ಮೂಡಿಬಂದ ನಾದ ಸೊಗಸಾಗಿದೆ ಎಂದು ಬೆನ್ನುತಟ್ಟಿದರು. ತನಿವಾದ್ಯ ಹಾಗೂ ಪಕ್ಕವಾದ್ಯ ಕಲಾವಿದರಾಗಿ ತಮ್ಮ ಕಾಲದ ಎಲ್ಲಾ ವಿದ್ವಾಂಸರ ನಡುವೆಯೂ ಅವರು ಅಪಾರ  ಮೆಚ್ಚುಗೆ ಗಳಿಸಿದ್ದರು. ‘ವಾಣಿ’ ಎಂಬ ಚಲನಚಿತ್ರದಲ್ಲಿ ಸಂಗೀತಗಾರರಾಗಿ ಇವರ ಅಭಿನಯ ಅಪಾರ ಜನಪ್ರಿಯತೆ ಗಳಿಸಿತ್ತು.  ಮೈಸೂರು ಮಹಾರಾಜರಾದ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸಂಗೀತ ರತ್ನ ಬಿರುದು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಮದರಾಸ್ ಮ್ಯೂಸಿಕ್ ಅಕಾಡೆಮಿ  ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾನಿಧಿ ಬಿರುದು, ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.  1967 ಜನವರಿ 19ರಂದು ನಿಧನರಾದರು. ಅವರ ಹೆಸರಿನಲ್ಲಿ 1980ರ ವರ್ಷದಲ್ಲಿ ನಿರ್ಮಿತಗೊಂಡಿರುವ  ಟಿ.ಚೌಡಯ್ಯ ಮೆಮೋರಿಯಲ್ ಹಾಲ್ ಬೆಂಗಳೂರಿನ ಕಲಾರಸಿಕರ ಪ್ರತಿಷ್ಟಿತ ತಾಣವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಟಿ.ಚೌಡಯ್ಯ ರಾಷ್ಟ್ರೀಯ ಪುರಸ್ಕಾರವನ್ನು ವಾದ್ಯಸಂಗೀತದಲ್ಲಿ ಸಾಧನೆ ಮಾಡಿದ ಪ್ರಮುಖರಿಗೆ ನೀಡಲಾಗುತ್ತಿದೆ.

1900: ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾದ ಶ್ರೀಕೃಷ್ಣ ನಾರಾಯಣ ರತನಜಂಕರ್ ಮುಂಬೈನಲ್ಲಿ ಜನಿಸಿದರು. ಆಗ್ರಾ ಘರಾಣಾದ  ದ್ರುಪದ್, ಖಯಾಲ್ ಶೈಲಿಯ ಗಾಯನಕ್ಕೆ ಹೆಸರಾದ ಅನೇಕ ಮಹತ್ವದ ಸಂಗೀತ ಸಾಧಕರ ಗುರುಗಳು. ಅವರು ಮಧ್ಯಪ್ರದೇಶದ ಇಂದಿರಾ ಸಂಗೀತ ಕಲಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. ಅವರು ಸುಜನ್ ಎಂಬ ಹೆಸರಿನಲ್ಲಿ 800ಕ್ಕೂ ಕೃತಿಗಳನ್ನು ಸಂಯೋಜಿಸಿದ್ದರಲ್ಲದೆ, ಹಲವಾರು ನವೀನ ರಾಗಗಳ ಸೃಷ್ಟಿಕರ್ತರೂ  ಆಗಿದ್ದರು.  ಫೆಬ್ರುವರಿ 14, 1974ರಂದು ನಿಧನರಾದ ಅವರ ಸಾಧನೆಗೆ ಪದ್ಮಭೂಷಣ ಪ್ರಶಸ್ತಿ, ಕೇಂದ್ರ  ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್  ಹಾಗೂ ಇನ್ನಿತರ ಹಲವಾರು ಪ್ರತಿಷ್ಟಿತ ಗೌರವಗಳು ಅವರನ್ನರಸಿ ಬಂದಿದ್ದವು.

1916: ‘ಚದುರಂಗ’ ಎಂದೇ ಖ್ಯಾತರಾದ ಸುಬ್ರಹ್ಮಣ್ಯ ರಾಜು ಅರಸು ಅವರು ಹುಣಸೂರಿನ  ಕಲ್ಲಹಳ್ಳಿಯಲ್ಲಿ ಜನಿಸಿದರು.‘ಸರ್ವಮಂಗಳ’, ‘ಉಯ್ಯಾಲೆ’, ‘ವೈಶಾಖ’, ‘ಹೆಜ್ಜಾಲ’ ಕಾದಂಬರಿಗಳನ್ನು ರಚಿಸಿದರು. ಅವರ ‘ವೈಶಾಖ’ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು. ಸಣ್ಣಕತೆ, ನಾಟಕಗಳು, ಕವನ ಸಂಕಲನವೊಂದನ್ನೂ ಸಹ ಚದುರಂಗರು ರಚಿಸಿದ್ದರು. 1998ರ ಅಕ್ಟೋಬರ್ 19ರಂದು ಮೈಸೂರಿನಲ್ಲಿ ನಿಧನರಾದ ಚದುರಂಗರು ‘ಭಕ್ತ ರಾಮದಾಸ’ ಚಿತ್ರದ ಕಥಾಲೇಖಕರಾಗಿ, ‘ಮಾಯಾ’ ಇಂಗ್ಲಿಷ್ ಚಿತ್ರದ ಸಹ ನಿರ್ದೇಶಕರಾಗಿ, ‘ಸರ್ವಮಂಗಳ’ ಮತ್ತು ‘ಉಯ್ಯಾಲೆ’ ಎಂಬ ಪ್ರಶಸ್ತಿವಿಜೇತ ಚಿತ್ರಗಳ ನಿರ್ಮಾಪಕರಾಗಿ, ವೆಂಕಟಲಕ್ಷಮ್ಮ ಮತ್ತು ಕುವೆಂಪು ಸಾಕ್ಷ್ಯಚಿತ್ರಗಳ ನಿರ್ದೇಶಕರಾಗಿ ಸಹ ಚಿತ್ರರಂಗದ ವಿವಿಧ ಸಾಧನೆಗಳಲ್ಲಿ ಛಾಪು ಮೂಡಿಸಿದವರು.

1931: ಕವಿ ಅರವಿಂದ ನಾಡಕರ್ಣಿಯವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ಓದಿನ ದಿನಗಳಲ್ಲಿ  ಗೌರೀಶ ಕಾಯ್ಕಿಣಿ, ಸು.ರಂ.ಎಕ್ಕುಂಡಿ ಅವರ ಪ್ರಭಾವದಿಂದ ಕವಿತೆಯ ಗೀಳು ಮೂಡಿತು.  ಮುಂಬೈನಲ್ಲಿ ವೃತ್ತಿ ಜೀವನದಲ್ಲಿದ್ದ ನಾಡಕರ್ಣಿ ಅವರು ಮುಂಬೈ ಕನ್ನಡ ಸಂಘದ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದರು. ಹಲವು ವೈಚಾರಿಕ ಲೇಖನಗಳು ಮತ್ತು ಕವನ ಸಂಕಲನಗಳನ್ನು ರಚಿಸಿರುವ ಇವರಿಗೆ ಭಟ್ಕಳದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಸಮ್ಮೇಳದ ಅಧ್ಯಕ್ಷತೆ, ಶಂಬಾ ಜೋಶಿಯವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ 1981 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ‘ಆತ್ಮಭಾರತ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂತಾದ ಗೌರವಗಳು ಸಂದಿದ್ದವು. 2008ರ ಮೇ 19ರಂದು ಈ ಲೋಕವನ್ನಗಲಿದರು.

1944: ಇಂಗ್ಲಿಷ್ ಶಿಲ್ಪಿ ಸರ್ ಎಡ್ವಿನ್ ಲ್ಯುಟಿಯೆನ್ಸ್ (1869-1944) ತಮ್ಮ 74ನೇ ವಯಸ್ಸಿನಲ್ಲಿ ಮೃತರಾದರು. ಅವರು ನವದೆಹಲಿ ನಗರ ಯೋಜನೆ ಹಾಗೂ ರಾಷ್ಟ್ರಪತಿ ಭವನದ (ಮೊದಲಿಗೆ ವೈಸ್ ರಾಯ್ ಹೌಸ್) ವಿನ್ಯಾಸಕ್ಕಾಗಿ ಖ್ಯಾತರಾದವರು.

1955: ಭಾರತೀಯ ವಿಜ್ಞಾನಿ ಶಾಂತಿ ಸ್ವರೂಪ್ ಭಟ್ನಾಗರ್  ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು. ಅನೇಕ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರಸಿದ್ಧರಾಗಿದ್ದ ಭಟ್ನಾಗರ್ ಅವರು  ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಹಲವಾರು ವೈಜ್ಞಾನಿಕ ಸಂಶೋಧನಾಲಯಗಳನ್ನು ಸ್ಥಾಪಿಸಿ  ಸ್ವತಂತ್ರ ಭಾರತದ ಪ್ರಪ್ರಥಮ ‘ವೈಜ್ಞಾನಿಕ ಶಿಲ್ಪಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ.ಎಸ್.ಐ.ಆರ್) ಸಂಸ್ಥೆಯ ಪ್ರಥಮ ಡೈರೆಕ್ಟರ್ ಜನರಲ್  ಹುದ್ದೆಯನ್ನು ನಿರ್ವಹಿಸಿದ್ದರಲ್ಲದೆ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ನಿನ ಪ್ರಥಮ ಚೇರ್ಮನ್ ಆಗಿದ್ದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧಕರಿಗೆ  ಪ್ರತಿಷ್ಟಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ನೀಡಲಾಗುತ್ತಿದೆ.

1879: ಪ್ರಸಿದ್ಧ ಇಂಗ್ಲಿಷ್ ಸಾಹಿತಿ ಇ. ಎಮ್. ಫಾರ್ಸ್ಟರ್ ಲಂಡನ್ನಿನಲ್ಲಿ ಜನಿಸಿದರು. ಅವರು  20 ನೇ ಶತಮಾನದ ಬ್ರಿಟಿಷ್ ಸಮಾಜದಲ್ಲಿ ವ್ಯಾಪಕವಾಗಿದ್ದ  ವರ್ಗ ಭಿನ್ನತೆ ಮತ್ತು ಬೂಟಾಟಿಕೆಗಳನ್ನು ಮಾರ್ಮಿಕವಾಗಿ  ಅಭಿವ್ಯಕ್ತಿಸುವ ತಮ್ಮ  ಸಮರ್ಥ ಬರವಣಿಗೆಗಳಿಂದ  ಪ್ರಸಿದ್ಧಿ ಪಡೆದಿದ್ದಾರೆ. 1924ರಲ್ಲಿ ಅವರು ರಚಿಸಿದ ‘ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿ  ಅಪಾರ  ಯಶಸ್ಸು ಪಡೆಯಿತು.   ವೇರ್ ಏಂಜೆಲ್ಸ್ ಫಿಯರ್ ಟು ಟ್ರೀಡ್, ದಿ ಲಾಂಗೆಸ್ಟ್ ಜರ್ನಿ, ಎ ರೂಮ್ ವಿತ್ ಎ ವ್ಯೂ,  ಹೊವಾರ್ಡ್ಸ್  ಎಂಡ್, ಮೌರೈಸ್  ಅವರ ಇತರ ಕಾದಂಬರಿಗಳು.   ಅನೇಕ ಕಥಾ ಸಂಕಲನಗಳು, ನಾಟಕಗಳು, ಲಲಿತ ಪ್ರಬಂಧಗಳು, ಪ್ರವಾಸಿ ಬರಹಗಳು ಮತ್ತು ಇನ್ನಿತರ ಹಲವಾರು ರೀತಿಯ ಬರಹಗಳು ಸಹಾ ಅವರ ಲೇಖನಿಯಿಂದ ಹರಿದಿವೆ.  ನೊಬೆಲ್ ಸಾಹಿತ್ಯ ಪ್ರಶಸ್ತಿಗಾಗಿ ಅವರ ಹೆಸರು 16 ಬಾರಿ ಸೂಚಿಸಲ್ಪಟ್ಟಿತ್ತು.  ಜೂನ್ 7, 1970ರಲ್ಲಿ ನಿಧನರಾದರು.
ದಿನಾಚರಣೆಗಳು:

ಪಬ್ಲಿಕ್ ಡೊಮೇನ್ ಡೇ:ಕಾಪಿರೈಟ್ ಕಾನೂನುಗಳಿಗೆ ಒಳಪಟ್ಟ ಪ್ರಕಟಣೆಗಳು ಆಯಾ ದೇಶಗಳ ಕಾನೂನುಗಳಿಗೆ ಅನುಗುಣವಾಗಿ ನಿಯಮಿತ ವರ್ಷಾವಧಿಗಳ ನಂತರದಲ್ಲಿ  ಜನವರಿ 1 ದಿನಾಂಕದಂದು ಮುಕ್ತ ಸಾರ್ವಜನಿಕ ವಲಯಕ್ಕೆ ಅಥವ ಪಬ್ಲಿಕ್ ಡೊಮೇನಿಗೆ  ಬರುತ್ತವೆ.  ಹೀಗಾಗಿ  ಈ ದಿನವನ್ನು ‘ಪಬ್ಲಿಕ್ ಡೊಮೇನ್ ಡೇ’ ಎಂದು ಪರಿಗಣಿಸಲಾಗುತ್ತಿದೆ.