Categories
e-ದಿನ

ಜನವರಿ-11

ದಿನಾಚರಣೆಗಳು:

ಜರ್ಮನ್ ಆಪಲ್ಸ್ ಡೇ

ಜರ್ಮನಿಯಲ್ಲಿ ಜನರ ಗಮನವನ್ನು ಆಪಲ್ ಗಿಡಗಳತ್ತ ಸೆಳೆದು ಅವುಗಳನ್ನು ದೇಶದಾದ್ಯಂತ ಹೆಚ್ಚು ಜನಪ್ರಿಯಗೊಳಿಸಲು ಜನವರಿ 11ದಿನವನ್ನು ಆಪಲ್ ದಿನವಾಗಿ ಆಚರಿಸಲಾಗುತ್ತಿದೆ.  ಈ ಆಚರಣೆ 2010ರ ವರ್ಷದಿಂದ ಆರಂಭಗೊಂಡಿದೆ.

ಅಮೆರಿಕದಲ್ಲಿ ‘ನ್ಯಾಷನಲ್ ಹ್ಯುಮನ್ ಟ್ರಾಫಿಕಿಂಗ್ ಅವೇರ್ನೆಸ್ ಡೇ’

ಜೀತಪದ್ಧತಿ  ಮತ್ತು ಮನುಷ್ಯರನ್ನು ಸಾಗಣೆ ಮಾಡುವ ವ್ಯವಸ್ಥೆಗಳ ವಿರುದ್ಧ ಜನಜಾಗೃತಿ ಮೂಡಿಸುವ  ಕುರುಹಾಗಿ ಅಮೆರಿಕದಲ್ಲಿ  ‘ನ್ಯಾಷನಲ್ ಹ್ಯುಮನ್ ಟ್ರಾಫಿಕಿಂಗ್ ಅವೇರ್ನೆಸ್ ಡೇ’ ಆಚರಿಸಲಾಗುತ್ತದೆ.

ಪ್ರಮುಖಘಟನಾವಳಿಗಳು:

532: ಕಾನ್ ಸ್ಟಾಂನ್ಟಿನೋಪಾಲ್ನಲ್ಲಿ ರಥದ ಓಟಸ್ಪರ್ಧೆ ಏರ್ಪಾಡಾದ ಸಂದರ್ಭದಲ್ಲಿ, ವಿವಿಧ ರಥ ಓಡಿಸುವ ಸ್ಪರ್ಧಿಗಳ  ಬೆಂಬಲಿಗರ ನಡುವೆ ವಾಗ್ವಾದಕ್ಕೆ  ಮೊದಲಾಗಿ, ಅದು ಹಿಂಸಾತ್ಮಕ ಹೋರಾಟಕ್ಕೆ ತಿರುಗಿತು.

1569: ಇಂಗ್ಲೆಂಡಿನಲ್ಲಿ  ಮೊದಲಬಾರಿಗೆ ‘ಲಾಟರಿ’ಯೊಂದನ್ನು ಗುರುತಿಸಿ ದಾಖಲಿಸಲಾಯಿತು.

1693: ಭೀಕರ ಭೂಕಂಪದಲ್ಲಿ ಸಿಸಿಲಿ ಮತ್ತು ಮಾಲ್ಟಾದ ಹಲವು ಭಾಗಗಳು ನಾಶಗೊಂಡವು.

1759: ಪೆನ್ಸಿಲ್ ವೇನಿಯಾದ ಫಿಲಡೆಲ್ಫಿಯಾದಲ್ಲಿ ಅಮೆರಿಕದ ಮೊದಲ ಜೀವಾ ವಿಮಾ ಸಂಸ್ಥೆ ಪ್ರಾರಂಭಗೊಂಡಿತು

1779: ಚಿಂಗ್–ಥಾಂಗ್ ಕ್ಹೊಮ್ಬಾ ಮಣಿಪುರದ ಅರಸರಾಗಿ ಸಿಂಹಾಸನರೂಢರಾದರು.

1787: ವಿಲಿಯಂ ಹರ್ಷೆಲ್ ಅವರು ಯುರೇನಸ್ ಗ್ರಹದ ಎರಡು ಚಂದ್ರರನ್ನು ಅನ್ವೇಷಿಸಿದರು.

1922: ಮಧುಮೇಹ ರೋಗಕ್ಕೆ  ಸಿಲುಕಿ ಮರಣಾವಸ್ಥೆಯಲ್ಲಿದ್ದ  14 ವರ್ಷದ  ಬಾಲಕ ಲಿಯೋನಾರ್ಡ್ ಥಾಂಪ್ಸನ್ ಗೆ ಟೊರೊಂಟೋ ಜನರಲ್ ಆಸ್ಪತ್ರೆಯಲ್ಲಿ ಇನ್ಸುಲಿನ್ ನೀಡಲಾಯಿತು. ಇದಕ್ಕೆ ಒಂದು ವರ್ಷಕ್ಕೆ ಮೊದಲು ಟೊರೊಂಟೋದ ಪ್ರಯೋಗಾಲಯದಲ್ಲಿ ಕೆನಡಾದ ವಿಜ್ಞಾನಿಗಳಾದ ಫ್ರೆಡರಿಕ್ ಗ್ರ್ಯಾಂಟ್ ಬಂಟಿಂಗ್ ಮತ್ತು ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ ಅವರು ಈ ಹಾರ್ಮೋನನ್ನು ಸಂಶೋಧಿಸಿ ಪ್ರತ್ಯೇಕಿಸಿದ್ದರು.

1927: ಮೆಟ್ರೋ ಗೋಲ್ಡ್ವಿನ್ ಮೇಯರ್ ಸಂಸ್ಥೆಯ ಮುಖ್ಯಸ್ಥರಾದ ಲೂಯಿಸ್ ಬಿ ಮೇಯರ್ ಅವರು ಕ್ಯಾಲಿಫೋರ್ನಿಯಾದ ಲಾಸ್ ಏಂಜೆಲಿಸ್ನಲ್ಲಿನ ಕೂಟವೊಂದರಲ್ಲಿ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್’ ಸ್ಥಾಪನೆಯನ್ನು ಘೋಷಿಸಿದರು.

1935: ‘ಅಮೇಲಿಯಾ ಇಯರ್ ಹಾರ್ಟ್’ ಅವರು ಹವಾಯಿಯಿಂದ ಕ್ಯಾಲಿಫೋರ್ನಿಯಾಕ್ಕೆ ಏಕಾಂಗಿಯಾಗಿ ಹಾರಾಟ ನಡೆಸಿದ ಪ್ರಥಮ ವ್ಯಕ್ತಿ ಎನಿಸಿದರು.

1942: ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಪಡೆಗಳು ಕೌಲಾಲಂಪುರವನ್ನು ಆಕ್ರಮಿಸಿದವು.

1943: ಎರಡನೇ ವಿಶ್ವಮಹಾಯುದ್ಧದಲ್ಲಿ  ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಚೈನಾದಲ್ಲಿನ ವಸಾಹತುಗಳ ಮೇಲೆ ತಮಗಿದ್ದ ಅಧಿಪತ್ಯವನ್ನು ಬಿಟ್ಟುಕೊಟ್ಟವು

1943: ಪತ್ರಕರ್ತ ಮತ್ತು  ಕಾರ್ಮಿಕ ನಾಯಕ ‘ಕಾರ್ಲೋ ಟ್ರೆಸ್ಕಾ’ ನ್ಯೂಯಾರ್ಕ್ ನಗರದಲ್ಲಿ ಹತ್ಯೆಗೀಡಾದರು. ಇವರು ಮುಸಲೋನಿಯ ಸರ್ವಾಧಿಕಾರತ್ವ,  ಸೋವಿಯತ್ ಯೂನಿಯನ್ನಿನ  ಸ್ಟ್ಯಾಲಿನ್ ತತ್ವ  ಮತ್ತು ಕಾರ್ಮಿಕ ಒಕ್ಕೂಟಗಳಲ್ಲಿ ಮಾಫಿಯಾ ಪ್ರವೇಶಗಳ ವಿರುದ್ಧ ಮುಕ್ತ ಟೀಕಾಕಾರರಾಗಿದ್ದರು.  ಜನಸಂಖ್ಯಾ ನಿಯಂತ್ರಣದ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ಮುದ್ರಿಸಿ ಜೈಲಿಗೂ ಹೋಗಿದ್ದ ಅವರು ಅಮೆರಿಕದಾದ್ಯಂತ  ನಡೆದ ಅಸಂಖ್ಯಾತ ಚಳವಳಿಗಳ ನೇತಾರರಾಗಿದ್ದರು.

1949: ಪೆನ್ಸಿಲ್ವೇನಿಯಾದ  ಪಿಟ್ಸ್ ಬರ್ಗಿನ KDKA-TV ಯಲ್ಲಿ ಪೂರ್ವ  ತೀರದಲ್ಲಿನ ಕಾರ್ಯಕ್ರಮಗಳೊಂದಿಗೆ,  ಮಧ್ಯ-ಪಶ್ಚಿಮ ಪ್ರಾಂತ್ಯದಲ್ಲಿನ  ಕಾರ್ಯಕ್ರಮದ ಜೊತೆ ಸಂಪರ್ಕ ಕಲ್ಪಿಸಿ ಭಿತ್ತರಿಸಲಾಯಿತು.  ಇದು ಪ್ರಥಮ  ಸಂಪರ್ಕ ನೆಟ್ ವರ್ಕ್ ಸಂಯೋಗದ ಪ್ರಥಮ ಕಾರ್ಯಕ್ರಮವೆನಿಸಿತು.

1962: ಪೆರುವಿನ ಹುವಾಸ್ ಕರನ್ ಎಂಬಲ್ಲಿ  ಉಂಟಾದ  ಹಠಾತ್  ಹಿಮಪಾತ (avalanche)ದಲ್ಲಿ ನಾಲ್ಕು ಸಾವಿರ ಸಾವುಗಳು ಸಂಭವಿಸಿದವು

1963: ದಿ ‘ವಿಸ್ಕಿ ಎ ಗೋ-ಗೋ’ ಲಾಸ್ ಏಂಜೆಲಿಸ್ ನಗರದಲ್ಲಿ ಪ್ರಾರಂಭಗೊಂಡಿತು.  ಇದು ಅಮೇರಿಕದಲ್ಲಿ ಪ್ರಾರಂಭವಾದ ಪ್ರಥಮ್ ಡಿಸ್ಕೋ ಎನಿಸಿದೆ.

1964: ಅಮೆರಿಕದ ಸರ್ಜನ್ ಜನರಲ್ ಡಾ.ಲೂಥರ್ ಟೆರ್ರಿ ಅವರು ‘ಧೂಮ್ರಪಾನವು ಆರೋಗ್ಯಕ್ಕೆ ಹಾನಿಕರವೆಂದು’ ತಮಗೆ ವಿಶೇಷ ತಜ್ಞರ ಸಲಹಾ ಸಮಿತಿ ಸಲ್ಲಿಸಿದ್ದ ವರದಿಯನ್ನು ಪ್ರಕಟಿಸಿದರು.  ಇದು ಅಮೇರಿಕಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಧೂಮ್ರಪಾನದ ದುಷ್ಪರಿಣಾಮಗಳ ಕುರಿತಾದ  ತಿಳುವಳಿಕೆಗಳನ್ನು ಮೂಡಿಸಲು ಪ್ರೇರಣೆಯಾದ ಘಟನೆಯಾಯ್ತು.

1972: ಪಶ್ಚಿಮ ಪಾಕಿಸ್ತಾನದ ಹೆಸರು ಬಾಂಗ್ಲಾದೇಶವೆಂದು ಬದಲಾಯಿತು. ಷೇಕ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಪ್ರಥಮ ಅಧ್ಯಕ್ಷರಾದರು.

1966: ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಧನದ ದೆಸೆಯಿಂದ ಗುಲ್ಜಾರಿಲಾಲ್ ನಂದಾ ಅವರು ಭಾರತದ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡರು.

1996: ನಾಸಾದ ಎಸ್.ಟಿ.ಎಸ್-72 ಕೆನಡಿ ಸ್ಪೇಸ್ ಸೆಂಟರಿನಿಂದ ಬಾಹ್ಯಾಕಾಶಕ್ಕೆ ಚಿಮ್ಮಿತು.  ಇದು ನಾಸಾದ 74ನೇ ಸ್ಪೇಸ್ ಶಟಲ್ ಮಿಷನ್ ಹಾಗೂ ಎಂಡೀವರಿನ ಹತ್ತನೇ ಫ್ಲೈಟ್ ಎನಿಸಿತು.

2009: ಹುಬ್ಬಳ್ಳಿ ನ್ಯಾಯಾಲಯದಲ್ಲಿನ ಬಾಂಬ್ ಸ್ಛೋಟ, ಧಾರವಾಡ ಸಮೀಪದ ವೆಂಕಟಾಪುರ ಗ್ರಾಮದ ಬಳಿ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್‌ಗಳನ್ನು ಹುದುಗಿಸಿಟ್ಟಿದ್ದ ಪ್ರಕರಣ ಮತ್ತು  ಹಲವಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಅಕ್ಟೋಬರ್ 29, 2008ರಂದು  ನಡೆದ ವ್ಯಾಪಾರಿ ಕಿರಣ ಕುಮಟಗಿ ಎಂಬವರ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಹುಬ್ಬಳ್ಳಿ ಬಾಂಬ್ ಸ್ಛೋಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದ ದುಷ್ಕರ್ಮಿಗಳ ಜಾಲವನ್ನು ಭೇದಿಸಿದರು.

2008: 2007- 08ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಜೀವಮಾನದ ಸಾಧನೆ ಪ್ರಶಸ್ತಿಗಾಗಿ ಹಿರಿಯ ನಿರ್ದೇಶಕ ರೇಣುಕಾ ಶರ್ಮ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಡಾ. ವಿಷ್ಣುವರ್ಧನ್ ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ನಿರ್ಮಾಪಕಿ  ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಗುಲಾಬಿ ಟಾಕೀಸ್’ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತು. ಪಿ.ಆರ್. ರಾಮದಾಸ ನಾಯ್ಡು ನಿರ್ದೇಶನದ ‘ಮೊಗ್ಗಿನ ಜಡೆ’ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರಗಳು ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು. ‘ಮಿಲನ’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರು ಸುಬ್ಬಯ್ಯ ನಾಯ್ಡು (ಅತ್ಯುತ್ತಮ ನಟ) ಪ್ರಶಸ್ತಿ ಪಡೆದರು. ಗುಲಾಬಿ ಟಾಕೀಸ್ ಚಿತ್ರದಲ್ಲಿನ ನಟನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಉಮಾಶಂಕರ ಸ್ವಾಮಿ ನಿರ್ದೇಶನದ ‘ಬನದ ನೆರಳು’ ಚಿತ್ರವನ್ನು ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಏಕಲವ್ಯ’ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ದೊರಕಿತು. ತುಳು ಚಿತ್ರ ‘ಬಿರ್ಸೆ’ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ಗಳಿಸಿತು.

2009: ಕೇಂದ್ರ ಸರ್ಕಾರ ಐಟಿ ಕ್ಷೇತ್ರ ಪರಿಣತ, ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪಾರೇಕ್ ಮತ್ತು ಕೇಂದ್ರ ಸರ್ಕಾರದ ಕಾನೂನು ಸಲಹೆಗಾರ ಅಚ್ಯುತನ್ ಅವರನ್ನು ಸತ್ಯಂ ಕಂಪ್ಯೂಟರ್‌ನ ಹೊಸ ನಿರ್ದೇಶಕರಾಗಿ ಭಾನುವಾರ ನೇಮಿಸಿತು.

2008: ತಮಿಳುನಾಡಿನಲ್ಲಿ ಪೊಂಗಲ್ ಸಂದರ್ಭದಲ್ಲಿ ನಡೆಯುವ ಗೂಳಿ ಕಾಳಗ ನಡೆಸದಂತೆ ನೀಡಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಲು ತಮಿಳು ನಾಡು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿತು. ಪ್ರಾಣಿ ಹಿಂಸೆಗೆ ಪ್ರಚೋದನೆ ನೀಡುವ ಈ ಕ್ರೀಡೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಪ್ರಾಣಿ ಕಲ್ಯಾಣ ಮಂಡಳಿ ಕಳೆದ ವರ್ಷ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು. ಆದರೆ ಸಾಂಸ್ಕೃತಿಕ ಇತಿಹಾಸ ಹೊಂದಿದ ಈ ಕ್ರೀಡೆ ನಡೆಸಲು ಅವಕಾಶ ನೀಡಬೇಕೆಂದು ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ಪೀಠವು ಈ ಅರ್ಜಿಯನ್ನು ತಳ್ಳಿಹಾಕಿತು.

ಪ್ರಮುಖಜನನ/ಮರಣ:

1853: ಗ್ರೀಕ್ ವರ್ಣಚಿತ್ರಕಾರ ಗಿಯೋರ್ಗಿಯೋಸ್ ಜಾಕೋಬೈಡ್ಸ್ ಅವರು ಒಟ್ಟೋಮನ್ ಸಾಮ್ರಾಜ್ಯದ ಲೆಸ್ಬೋಸ್ ಎಂಬಲ್ಲಿ ಜನಿಸಿದರು.  ಅವರು ಮ್ಯೂನಿಚ್ ಸ್ಕೂಲಿನ ಗ್ರೀಕ್ ಕಲಾ ಪರಂಪರೆಯ ಪ್ರಮುಖ ಪ್ರತಿನಿಧಿಗಳಲ್ಲಿ ಒಬ್ಬರು.  ಅಥೆನ್ಸ್ ನಗರದಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಗ್ರೀಸ್ ಸ್ಥಾಪಕರಾಗಿ ಹಾಗೂ ಪ್ರಥಮ ಮೇಲ್ವಿಚಾರಕರಾಗಿ ಅವರು ಸೇವೆ ಸಲ್ಲಿಸಿದ್ದರು.  ದಿ ಚಿಲ್ರನ್ಸ್ ರಿಸೈಟಲ್, ದಿ ಫಸ್ಟ್ ಸ್ಟೆಪ್ಸ್, ದಿ ವೈಫ್ ಅಂಡ್ ಸನ್ ಆಫ್  ದಿ ಆರ್ಟಿಸ್ಟ್ ಮುಂತಾದವು ಅವರ ಪ್ರಸಿದ್ಧ ಕೃತಿಗಳಲ್ಲಿ ಸೇರಿವೆ.

1859:  ದಿ ಲಾರ್ಡ್ ಕರ್ಜನ್ ಆಫ್ ಕೆಡ್ಲೆಸ್ಟನ್ ಡರ್ಬಿಷೈರ್ನಲ್ಲಿ ಜನಿಸಿದರು. ಅವರು   ಬ್ರಿಟಿಷ್ ಭಾರತ ಸರ್ಕಾರದ 35ನೇ ಗೌರ್ನರ್ ಜನರಲ್ ಆಫ್ ಇಂಡಿಯಾ ಆಗಿದ್ದರು. ಪೂರ್ವ ಬಂಗಾಳ ಮತ್ತು ಅಸ್ಸಾಂಗಳನ್ನು ಇವರು ಸೃಜಿಸಿದರು.

1896: ನಾಟಕಕಾರ ಕಂದಗಲ್ಲ ಹನುಮಂತರಾಯ ಅವರು ವಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲದಲ್ಲಿ ಜನಿಸಿದರು. ಅನೇಕ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದ್ದ ಇವರ ರಂಗತಾಲೀಮಿನಲ್ಲಿ  ಮಲ್ಲಿಕಾರ್ಜುನ ಮನಸೂರಬಸವರಾಜ ರಾಜಗುರು, ಏಣಗಿ ಬಾಳಪ್ಪ, ಗರೂಡ ಸದಾಶಿವರಾಯರು ಮುಂತಾದ ಅನೇಕ ಪ್ರಸಿದ್ಧರು  ಶಿಷ್ಯವೃತ್ತಿ ನಡೆಸಿದ್ದರು.

1906: ಮನೋರೋಗಗಳಲ್ಲಿನ ಉದ್ವೇಗಿಕ ಪರಿಸ್ಥಿತಿಗಳನ್ನು ನಿಭಾಯಿಸಲು ಉಪಯೋಗಿಸುವ ಎಲ್.ಎಸ್.ಡಿ (ಲೈಸೆರ್ಜಿಕ್ ಆಸಿಡ್ ಡೈಥೈಲಮೈಡ್) ಕಂಡುಹಿಡಿದ ಸ್ವಿಟ್ಜರ್ಲ್ಯಾಂಡ್ ದೇಶದ ಔಷದ ತಜ್ಞ ‘ಆಲ್ಬರ್ಟ್ ಹಾಫ್ ಮ್ಯಾನ್’ ಅವರು ಬರ್ಗಿಮ್ ಲಿಮೆಂಟಲ್ ಎಂಬಲ್ಲಿ ಜನಿಸಿದರು.

1924: ಫ್ರೆಂಚ್ ಅಮೆರಿಕನ್ ವೈದ್ಯ ಮತ್ತು ‘ಅಂತಃಸ್ರಾವ ಶಾಸ್ತ್ರಜ್ಞ’ (ಎಂಡೋಕ್ರಿನಾಲಜಿಸ್ಟ್) ಆದ ‘ರೋಜರ್ ಗುಯಲ್ಲೆಮಿನ್’ ಫ್ರಾನ್ಸಿನ ಡಿಜೋನ್ ಎಂಬಲ್ಲಿ ಜನಿಸಿದರು. ನ್ಯೂರೋ ಹಾರ್ಮೋನ್ಸ್ ಕುರಿತಾದ ಸಂಶೋಧನೆಗೆ ಅವರಿಗೆ 1977ರ ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1954: ಮಕ್ಕಳ ಹಕ್ಕುಗಳ ಹೋರಾಟಗಾರರಾದ ನೊಬೆಲ್ ಪ್ರಶಸ್ತಿ ಸಮ್ಮಾನಿತ ಕೈಲಾಶ್ ಸತ್ಯಾರ್ಥಿ ಮಧ್ಯಪ್ರದೇಶದ ವಿದಿಶಾದಲ್ಲಿ ಜನಿಸಿದರು.  ‘ಬಚಪನ್ ಬಚಾವೋ ಆಂದೋಲನ್’ ಪ್ರವರ್ತಕರಾಗಿ ಅವರು 144 ದೇಶಗಳಲ್ಲಿನ 83,000 ಕ್ಕೂ ಹೆಚ್ಚು ಮಕ್ಕಳನ್ನು ಶೋಷಣೆಯಿಂದ ಮುಕ್ತಗೊಳಿಸಿದ್ದಾರೆ.  ಕಾರ್ಮಿಕತನದಿಂದ ಮುಕ್ತಗೊಂಡ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮುಂದೆ ಸ್ವಂತಕಾಲಿನಮೇಲೆ ನಿಲ್ಲುವಂತಹ ಶಕ್ತಿಯನ್ನೂ ತುಂಬುತ್ತಿದ್ದಾರೆ.  ಇವರಿಗೆ 2014ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರದ ಗೌರವವೇ ಅಲ್ಲದೆ ಅನೇಕ ಅಂತರರಾಷ್ಟ್ರೀಯ ಗೌರವಗಳು ಸಂದಿವೆ.

1973: ಕರ್ನಾಟಕದಿಂದ ರಾಷ್ಟ್ರವನ್ನು ಪ್ರತಿನಿಧಿಸಿ ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರು ಮಧ್ಯಪ್ರದೇಶದ ಇಂದೂರಿನಲ್ಲಿ ಜನಿಸಿದರು.  ಟೆಸ್ಟ್ ಕ್ರಿಕೆಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳೆರಡೂ ವಿಭಾಗಗಳಲ್ಲೂ ಹತ್ತು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ವಿಶ್ವದ ಎಲ್ಲಾ ಟೆಸ್ಟ್ ಕ್ರಿಕೆಟ್ ತಂಡಗಳ ವಿರುದ್ದವೂ ಶತಕ ಬಾರಿಸಿದ ಮೊದಲ ಆಟಗಾರರಾಗಿದ್ದಾರೆ.  ಅನೇಕ ಮಹತ್ವದ ದಾಖಲೆಗಳನ್ನು ಕ್ರಿಕೆಟ್ ಚರಿತ್ರೆಯಲ್ಲಿ ದಾಖಲಿಸಿರುವ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯಲ್ಲದೆ ವಿಶ್ವದ ಶ್ರೇಷ್ಠ ಕ್ರಿಕೆಟ್ಟಿಗರಿಗೆ ಸಲ್ಲುವ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

1984: ಅಂತರಜಾಲದಲ್ಲಿ ಆನ್ ಲೈನ್  ಸೋಶಿಯಲ್ ಮೀಡಿಯಾ ಉದ್ಯಮಿಯಾಗಿ ಹಾಗೂ ಪ್ರಖ್ಯಾತ ಅಂತರಜಾಲ ಸಾಧನಗಳ ಸೃಷ್ಟಿಕರ್ತರಾಗಿ ಪ್ರಸಿದ್ಧಿ ಪಡೆದಿರುವ,  ‘ಮ್ಯಾಟ್ ಮುಲ್ಲೆನ್ ವೆಗ್’ ಅವರು ಅಮೇರಿಕಾದ ಹೌಸ್ಟನ್ ನಗರದಲ್ಲಿ  ಜನಿಸಿದರು.  ಆಧುನಿಕ ಅಂತರಜಾಲ ತಾಣ ನಿರ್ಮಾಣ ವ್ಯವಸ್ಥೆಗಳಲ್ಲಿ ಪ್ರಖ್ಯಾತವಾಗಿರುವ  ‘ವರ್ಡ್ ಪ್ರೆಸ್’ ಸಾಧನವನ್ನು ತಮ್ಮ ‘ಆಟೋಮ್ಯಾಟಿಕ್’ ಉದ್ಯಮದ  ಮೂಲಕ  ನಿರ್ಮಿಸಿದ ಕೀರ್ತಿ ಇವರದ್ದಾಗಿದೆ.  ಇದಲ್ಲದೆ ಅಕಿಸ್ ಮೆಟ್, ಗ್ರವತಾರ್, ವಾಲ್ಟ್ ಪ್ರೆಸ್, ಇಂಟೆನ್ಸ್ ಡಿಬೇಟ್, ಪೋಲ್ ಡ್ಯಾಡಿ ಮುಂತಾದ ಅನೇಕ ಅಂತರಜಾಲ ವ್ಯವಸ್ಥೆಗಳನ್ನು ನಿರ್ಮಿಸುತ್ತಾ ಸಾಗಿದ್ದಾರೆ.

1928: ಇಂಗ್ಲಿಷ್ ಕವಿ ಮತ್ತು  ಕಾದಂಬರಿಕಾರ ಥಾಮಸ್ ಹಾರ್ಡಿ ಇಂಗ್ಲೆಂಡಿನ ಡಾರ್ಸೆಟ್ ಪ್ರಾಂತ್ಯದ ಡಾರ್ಚೆಸ್ಟರ್ ಎಂಬಲ್ಲಿ ನಿಧನರಾದರು.   ಬಹಳಷ್ಟು ಕವಿತೆಗಳೇ  ಅಲ್ಲದೆ, ‘ಫಾರ್ ಫ್ರಮ್ ದಿ ಮ್ಯಾಡಿಂಗ್  ಕ್ರೌಡ್’, ‘ದಿ ಮೇಯರ್ ಆಫ್ ಕಾಸ್ಟರ್ ಬ್ರಿಡ್ಜ್’, ‘ಟೆಸ್ ಆಫ್ ದಿ ಡಿ’ಅರ್ಬರ್ ವಿಲ್ಲೆಸ್’  ಮತ್ತು  ‘ಜೂಡ್ ಅಂಡ್ ದಿ ಅಬ್ಸ್ ಕ್ಯೂರ್’ ಅವರ ಪ್ರಖ್ಯಾತ ಕಾದಂಬರಿಗಳಾಗಿವೆ.

1966: ಪ್ರಾಮಾಣಿಕತೆಗೆ ದೊಡ್ಡ ಹೆಸರಾದ ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರು ತಾಷ್ಕೆಂಟಿನಲ್ಲಿ ನಿಧನರಾದರು. ಹಿಂದಿನ ದಿನವಷ್ಟೇ ಅವರು ಪಾಕಿಸ್ಥಾನದ ಅಯೂಬ್ ಖಾನ್ ಜೊತೆಗೆ ‘ತಾಷ್ಕೆಂಟ್ ಒಪ್ಪಂದ’ಕ್ಕೆ ಸಹಿ ಮಾಡಿದ್ದರು.

1988: ಭೌತಶಾಸ್ತ್ರ ಮತ್ತು ಶಿಕ್ಷಣದಲ್ಲಿ ಹೆಸರಾಗಿದ್ದ ‘ಇಸಿಡರ್ ಐಸಾಕ್ ರಬಿ’  ಪೋಲೆಂಡ್ ದೇಶದಲ್ಲಿ ಜನಿಸಿದರು.  ಮುಂದೆ ಅಮೆರಿಕನ್ ನಿವಾಸಿಯಾದ ಅವರ ‘ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನಾನ್ಸ್’ ಸಂಶೋಧನೆಗಾಗಿ 1944ರ ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು.

1991: ಅಮೆರಿಕದ ಭೌತಶಾಸ್ತ್ರಜ್ಞ ‘ಕಾರ್ಲ್ ಡೇವಿಡ್ ಅಂಡರ್ಸನ್’ ಅವರು ಕ್ಯಾಲಿಫೋರ್ನಿಯಾದ, ಸಾನ್ ಮರಿನೋ ಎಂಬಲ್ಲಿ ನಿಧನರಾದರು.  ‘ಪೊಸಿಟ್ರಾನ್’ ಸಂಶೋಧನೆಗಾಗಿ ಅವರಿಗೆ 1936ರಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು.

2006: ಸಿಜಿಕೆ ಎಂದೇ ಖ್ಯಾತರಾಗಿದ್ದ ಹೆಸರಾಂತ ರಂಗ ನಿರ್ದೇಶಕ, ಸಂಘಟಕ, ಸಿ.ಜಿ. ಕೃಷ್ಣಸ್ವಾಮಿ  ದಾವಣಗೆರೆಯಲ್ಲಿ ನಿಧನರಾದರು. 1950ರ ಜೂನ್ 27ರಂದು ಮಂಡ್ಯದಲ್ಲಿ ಜನಿಸಿದ ಸಿಜಿಕೆ ಸುಮಾರು 12 ನಾಟಕಗಳನ್ನು ರಚಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಥಮ ಅಂಬೇಡ್ಕರ್ ಪ್ರಶಸ್ತಿ ಮತ್ತು  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಅನೇಕ ಪ್ರಸಿದ್ಧ ನಾಟಕಗಳನ್ನು ನಿರ್ದೇಶಿಸಿದ್ದರ ಜೊತೆಗೆ ಕೆಲವು ಚಲನಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದರು.

2008:  ಪ್ರಸಿದ್ಧ ಪರ್ವತಾರೋಹಿ ಮತ್ತು ಅನ್ವೇಷಕ ಪ್ರವೃತ್ತಿಯ ಸಾಹಸಕಾರ ‘ಎಡ್ಮಂಡ್ ಪೆರ್ಕಿವಲ್ ಹಿಲೆರಿ’ ಅವರು ನ್ಯೂಜಿಲೆಂಡಿನ ಆಕ್ಲೆಂಡ್ ನಗರದಲ್ಲಿ ನಿಧನರಾದರು.  ತೇನ್ಸಿಂಗ್ ಜೊತೆಗೂಡಿ ಮೌಂಟ್ ಎವರೆಸ್ಟ್ ಆರೋಹಿಸಿದ ವಿಶ್ವಪ್ರಥಮರಾದ ಅವರು ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವಗಳೆರಡನ್ನೂ ತಲುಪಿದ ಸಾಧನೆಯನ್ನೂ ಮಾಡಿದ್ದರು.  ಈ ಮೂರೂ ಸಾಧನೆಯನ್ನು ಮಾಡಿದ ಏಕೈಕ ಸಾಹಸಿ ಎನಿಸಿದ್ದಾರೆ.