Categories
e-ದಿನ

ಜನವರಿ-25

ದಿನಾಚರಣೆಗಳು:
ರಾಷ್ಟ್ರೀಯ ಮತದಾರರ ದಿ
ಭಾರತದ ಚುನಾವಣಾ ಆಯೋಗವು 1950ರ ವರ್ಷದಲ್ಲಿ ಜನವರಿ 25ರ ಈ ದಿನದಂದು ಸ್ಥಾಪನೆಗೊಂಡಿತು. ಭಾರತದಲ್ಲಿ ಮತದಾನವನ್ನು ಚಲಾಯಿಸುವ ಹಕ್ಕು ಹೊಂದಿರುವ ಪ್ರತಿಯೋರ್ವರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮಾಡುವ ಉದ್ದೇಶದಿಂದ 2011ರಿಂದ ಪ್ರಾರಂಭಗೊಂಡಂತೆ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1881: ಪ್ರಖ್ಯಾತ ಸಂಶೋಧಕರುಗಳಾದ ಥಾಮಸ್ ಆಲ್ವಾ ಎಡಿಸನ್ ಮತ್ತು ಅಲೆಗ್ಸಾಂಡರ್ ಗ್ರಹಾಮ್ ಬೆಲ್ ಅವರು ಜೊತೆಗೂಡಿ ಓರಿಯೆಂಟಲ್ ಟೆಲಿಫೋನ್ ಕಂಪೆನಿ ಸ್ಥಾಪಿಸಿದರು.

1890: ಅಮೆರಿಕದ ಪ್ರಸಿದ್ಧ ಪತ್ರಕರ್ತೆ, ಬರಹಗಾರ್ತಿ ಮತ್ತು ಸಾಹಸಿ ನೆಲ್ಲಿ ಬ್ಲೈ ಎಂಬಾಕೆ 72ದಿನಗಳಲ್ಲಿ ವಿಶ್ವ ಪರ್ಯಟನೆ ನಡೆಸಿದ ದಾಖಲೆ ಸ್ಥಾಪಿಸಿದರು.

1909: ರಿಚರ್ಡ್ ಸ್ಟ್ರಾಸ್ ಅವರ ಪ್ರಸಿದ್ಧ ‘ಎಲೆಕ್ಟ್ರಾ’ ಒಪೇರಾ ತನ್ನ ಮೊದಲ ಪ್ರದರ್ಶನವನ್ನು ಜರ್ಮನಿಯ ‘ಡ್ರೆಸ್ಡನ್ ಸ್ಟೇಟ್ ಒಪೇರಾ’ ಎಂಬಲ್ಲಿ ನೀಡಿತು.

1915: ಟೆಲಿಫೋನ್ ಸಂಶೋಧಕ ಅಲೆಗ್ಸಾಂಡರ್ ಗ್ರಹಾಂಬೆಲ್ ಅವರು ನ್ಯೂಯಾರ್ಕಿನಿಂದ, 3500 ಮೈಲಿಗಳ ದೂರದಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿದ್ದ ತಮ್ಮ ಮಾಜಿ ಸಹೋದ್ಯೋಗಿ ವಾಟ್ಸನ್ ಅವರೊಂದಿಗೆ ಟೆಲಿಫೋನ್ ಸಂಭಾಷಣೆಯನ್ನು ನಡೆಸುವುದರ ಮೂಲಕ ನ್ಯೂಯಾರ್ಕ್ ಮತ್ತು ಸಾನ್ ಫ್ರಾನ್ಸಿಸ್ಕೊ ನಡುವಣ ಖಂಡಗಳ ನಡುವಣ ಟೆಲಿಫೋನ್ ಸೇವೆಯನ್ನು (ಟ್ರಾನ್ಸ್ ಕಾಂಟಿನೆಂಟಲ್ ಟೆಲಿಫೋನ್ ಸರ್ವೀಸ್) ಉದ್ಘಾಟಿಸಿದರು.

1924: ಫ್ರೆಂಚ್ ಆಲ್ಫಿನ ಚಾಮೊನಿಕ್ಸಿ ಎಂಬಲ್ಲಿ ಮೊದಲಬಾರಿಗೆ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಸ್ಪರ್ಧೆಗಳು (ವಿಂಟರ್ ಒಲಿಂಪಿಕ್ ಗೇಮ್ಸ್) ಆರಂಭಗೊಂಡವು.

1937: ಅತ್ಯಂತ ಸುದೀರ್ಘ ಕಾಲ ಪ್ರದರ್ಶಿಸಲ್ಪಟ್ಟ ಕಾರ್ಯಕ್ರಮವೆಂಬ ದಾಖಲೆಗೆ ಪಾತ್ರವಾಗಿರುವ ‘ದಿ ಗೈಡಿಂಗ್ ಲೈಟ್’ ಮೊದಲಬಾರಿಗೆ ರೇಡಿಯೋ ಕಾರ್ಯಕ್ರಮವಾಗಿ ಚಿಕಾಗೋದ ಎನ್.ಬಿ.ಸಿ ರೇಡಿಯೋದಲ್ಲಿ ಪ್ರಸರಣಗೊಂಡಿತು. ಮುಂದೆ ಸಿ.ಬಿ.ಎಸ್. ಟೆಲಿವಿಷನ್ನಿಗೆ ಬಂದ ಈ ಕಾರ್ಯಕ್ರಮವು ‘ದಿ ಗೈಡಿಂಗ್ ಲೈಟ್’ ಸೋಪ್ ಒಪೇರಾ ಎಂಬ ಪ್ರಸಿದ್ಧಿಯೊಂದಿಗೆ ಸೆಪ್ಟೆಂಬರ್ 18, 2009 ವರ್ಷದ ವರೆವಿಗೆ ನಿರಂತರ ಪ್ರಸರಣಗೊಂಡ ಅಪೂರ್ವ ದಾಖಲೆ ಸೃಷ್ಟಿಸಿತು.

1947: ಅಮೆರಿಕದ ಥಾಮಸ್ ಗೋಲ್ಡ್ ಸ್ಮಿತ್ ಜೂನಿಯರ್ ಅವರು ‘ಕೆಥೋಡ್ ರೇ ಟ್ಯೂಬ್ ಅಮ್ಯೂಸ್ಮೆಂಟ್ ಡಿವೈಸ್ ಎಂಬ ತಮ್ಮ ಆಟದ ಸಂಶೋಧಕ್ಕೆ ಪೇಟೆಂಟ್ ಕೋರಿಕೆ ಅರ್ಜಿ ಸಲ್ಲಿಸಿದರು. ಇದು ವಿಶ್ವದ ಮೊಟ್ಟಮೊದಲ ಎಲೆಕ್ಟ್ರಾನಿಕ್ ಗೇಮ್ ಎಂಬ ಕೀರ್ತಿಗೆ ಪಾತ್ರವಾಗಿದೆ.

1949: ಮೊಟ್ಟ ಮೊದಲ ಎಮ್ಮಿ ಅವಾರ್ಡ್ ನೀಡಿಕೆ ಕಾರ್ಯಕ್ರಮವು ಹಾಲಿವುಡ್ ಅಥ್ಲೆಟಿಕ್ ಕ್ಲಬ್ಬಿನಲ್ಲಿ ನಡೆಯಿತು.

1950: ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಮುಖ್ಯ ಚುನಾವಣಾ ಕಮೀಷನರ್ ಒಬ್ಬರೇ ಅದರ ಮುಖ್ಯಸ್ಥರಾಗಿದ್ದರು. ನಂತರ ಇಬ್ಬರು ಹೆಚ್ಚುವರಿ ಕಮೀಷನರುಗಳನ್ನು ನೇಮಿಸಲಾಯಿತು. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ರಾಷ್ಟ್ರದ ಬೃಹತ್ ಸಂಖ್ಯಾ ಮತದಾರರನ್ನು ಬಾಗಿಯಾಗಿಸಿ ವಿವಿಧ ರೀತಿಯ ರಾಜ್ಯ ಮತ್ತು ರಾಷ್ಟ್ರಮಟ್ಟದ ಚುನಾವಣೆಗಳನ್ನು ಪ್ರಜಾಪ್ರಭುತ್ವದ ನಿಯಮಾವಳಿಗಳ ಪ್ರಕಾರವಾಗಿ ನಿಗಧಿತ ಅವಧಿಗಳಲ್ಲಿ ನಡೆಸುತ್ತಾ ಬಂದಿರುವ ಕೀರ್ತಿ ಇದರದ್ದಾಗಿದೆ.

1961:  ವಾಷಿಂಗ್ಟನ್ ನಗರದಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನ್ನೆಡಿ ಅವರು ಪ್ರಥಮಬಾರಿಗೆ ನೇರ ಟೆಲಿವಿಷನ್ ಪತ್ರಿಕಾ ಗೋಷ್ಠಿಯನ್ನು ನಡೆಸಿದರು.

1964: ಒರಿಗಾನ್ ವಿಶ್ವವಿದ್ಯಾಲಯದಲ್ಲಿ ಟ್ರಾಕ್ ಮತ್ತು ಫೀಲ್ಡ್ ಅಥ್ಲೆಟ್ಟುಗಳಿಗಾಗಿ ‘ಬ್ಲೂ ರಿಬ್ಬನ್ ಸ್ಪೋರ್ಟ್ಸ್’ ಪ್ರಾರಂಭಗೊಂಡಿತು. ಇದು ಮುಂದೆ ಪ್ರಸಿದ್ಧ ‘ನೈಕಿ’ ಸಮೂಹವಾಗಿ ರೂಪುಗೊಂಡಿತು.

1971: ಉಗಾಂಡದಲ್ಲಿ ನಡೆದ ದಂಗೆಯಲ್ಲಿ ಮಿಲ್ಟನ್ ಒಬೋಟೆಯನ್ನು ಪದಚ್ಯುತಿಗೊಳಿಸಿ ಇದಿ ಅಮೀನ್ ಅಧಿಕಾರ ವಹಿಸಿಕೊಂಡರು.

1971: ಹಿಮಾಚಲ ಪ್ರದೇಶ ಭಾರತದ ಒಂದು ರಾಜ್ಯವಾಯಿತು. 1948ರಿಂದ ಇಲ್ಲಿಯವರೆಗೆ ಇದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1980: ಮದರ್ ತೆರೇಸಾ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಲಾಯಿತು.

1995: ನಾರ್ವೆಯ ಸಂಶೋಧನಾ ರಾಕೆಟ್ ಒಂದನ್ನು ಅಮೇರಿಕಾದ ಟ್ರೈಡೆಂಟ್ ಮಿಸ್ಸೈಲ್ ಎಂದು ತಪ್ಪಾಗಿ ಗ್ರಹಿಸಿದ್ದ ರಷ್ಯಾವು ಅಣ್ವಸ್ತ್ರವನ್ನು ಇನ್ನೇನು ಬಳಸಿಯೇ ಬಿಡುವಂತಹ ದುಡುಕಿಗೆ ಕೈ ಹಾಕಿತ್ತು. ನಂತರದಲ್ಲಿ ಅದು ಅಪಾಯಕಾರಿ ಅಲ್ಲದ್ದು ಎಂಬ ಅಂಶ ರಷ್ಯಾ ಅರಿವಿಗೆ ಬಂತು.

1996: ಬಿಲ್ಲಿ ಬೆಯ್ಲಿ ಎಂಬಾತ ಅಮೆರಿಕದಲ್ಲಿ ಗಲ್ಲಿಗೇರಿಸಲ್ಪಟ್ಟ ಕೊನೆಯ ವ್ಯಕ್ತಿಯಾದ. ನಂತರದಲ್ಲಿ ಅಮೆರಿಕವು ನೇಣು ಹಾಕುವುದರ ಬದಲು, ಬೇರೆ ರೀತಿಯ ಮಾರಾಣಾಂತಿಕ ಶಿಕ್ಷಾ ಕ್ರಮಗಳನ್ನು ಅನುಸರಿಸುತ್ತಿದೆ.

2002: ರಷ್ಯಾದ ರಸ್ಲನ್ ಪೊನೊಮರಿವ್ ಅವರು ಮಾಸ್ಕೊದಲ್ಲಿ ವಸಿಲಿ ಇವಾಂಚುಕ್ ಅವರನ್ನು ಪರಾಭವಗೊಳಿಸುವ ಮೂಲಕ ಫಿಡೆ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡ ಅತ್ಯಂತ ಕಿರಿಯ ಆಟಗಾರರಾದರು. ಆಗ ಅವರ ವಯಸ್ಸು: 18 ವರ್ಷ, 104 ದಿನಗಳು.

2004: ನಾಸಾದ ಆಪರ್ಚುನಿಟಿ ರೋವರ್ ಮಂಗಳ ಗ್ರಹದ ಮೇಲೆ ಇಳಿಯಿತು.

2005: ಮಹಾರಾಷ್ಟ್ರದ ಮಂಧ್ರಾದೇವಿ ದೇಗುಲದ ನೂಕು ನುಗ್ಗಲಿನಲ್ಲಿ ಕಡೇಪಕ್ಷ 258 ಜನ ಸಾವಿಗೀಡಾದರು.

2006: ಎವರೆಸ್ಟ್ ಆರೋಹಣದ ಸಂದರ್ಭದಲ್ಲಿ ನಿಧನರಾದ ಕನ್ನಡಿಗ ಸ್ಕ್ವಾಡ್ರನ್ ಲೀಡರ್ ಎಸ್. ಎಸ್. ಚೈತನ್ಯ ಮತ್ತು ದೇಶದ ಪ್ರಥಮ ಮಹಿಳಾ ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ ಸಹಿತ 311 ಯೋಧರು 2006ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾದರು.

2006: ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ನಂದನ್ ನೀಲೇಕಣಿ ಅವರಿಗೆ ಪದ್ಮಭೂಷಣ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಪದ್ಮಶ್ರೀ ಸೇರಿದಂತೆ 106 ಮಂದಿ ಗಣ್ಯರು 2006ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಸಮಾಜಸೇವಕಿ ಗಾಂಧಿವಾದಿ ನಿರ್ಮಲಾ ದೇಶಪಾಂಡೆ, ಲೇಖಕಿ ಮಹಾಶ್ವೇತಾದೇವಿ ಸೇರಿದಂತೆ 9 ಗಣ್ಯರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಯಿತು.

2006: ಸ್ವಿಟ್ಜರ್ ಲ್ಯಾಂಡಿನ ದಾವೋಸಿನಲ್ಲಿ ಆರಂಭವಾದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಅವರನ್ನು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೆ ನೇಮಕಗೊಂಡಿರುವ ಭಾರತದ ಅತ್ಯಂತ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

2007: ಕರ್ನಾಟಕದ ಸಾಹಿತಿ ‘ಕಾಂತಾಪುರ’ ಖ್ಯಾತಿಯ ಹಾಸನ ರಾಜಾರಾವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಪೆಪ್ಸಿ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಒಟ್ಟು 10 ಗಣ್ಯರಿಗೆ ಪದ್ಮವಿಭೂಷಣ, 32 ಮಂದಿಗೆ ಪದ್ಮಭೂಷಣ ಮತ್ತು 79 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಪ್ರಕಟಿಸಿತು.

2007: ಕಾಶ್ಮೀರದಲ್ಲಿ ಶರಣಾಗತರಾದ ಉಗ್ರರಿಗೆ ಆರ್ಥಿಕ ಸಹಾಯ ಮತ್ತು ಮಾಸಿಕ ವೇತನ ನೀಡುವುದನ್ನು ಪ್ರಶ್ನಿಸಿ ಮಾನವ ಹಕ್ಕು ಇಲಾಖೆಯು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು. ನ್ಯಾಯಮೂರ್ತಿ ಜಿ.ಪಿ.ಮಾಥೂರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯನ್ನು ದಾಖಲು ಮಾಡಿಕೊಂಡು, ‘ಗಂಭೀರವಾದ ವಿಷಯಗಳನ್ನು ಈ ಅರ್ಜಿಯು ಎತ್ತಿದ್ದು, ವಿವರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ’ ಎಂದು ಹೇಳಿತು. ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸರ್ಕಾರಕ್ಕೆ ಶರಣಾದ ಉಗ್ರರಿಗೆ ಮರುಪಾವತಿ ಮಾಡದಂಥ 3 ಲಕ್ಷ ರೂಪಾಯಿಗಳ ಸಾಲ ನೀಡುವುದಲ್ಲದೆ ಮಾಸಿಕ 3000 ರೂಪಾಯಿಗಳ ಸ್ಟೈಪೆಂಡ್ ನೀಡುವ ಕ್ರಮವೂ ಇದೆ. ಇದು ದೇಶದ ಯುವ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ದೇಶದ ಇತರ ಕಡೆಗಳಲ್ಲಿ ಭಯೋತ್ಪಾದನೆಯ ಮಾರ್ಗ ಅನುಸರಿಸಲು ಪ್ರೋತ್ಸಾಹಿಸುವಂತಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದರು.

2008: ಬೆಂಗಳೂರಿನ ಭಾರತೀಯ ವಾಯುಪಡೆ ತರಬೇತಿ ಕೇಂದ್ರದ ಮುಖ್ಯಸ್ಥ ಏರ್ ಮಾರ್ಷಲ್ ಗುರುನಾಮ್ ಸಿಂಗ್ ಚೌಧರಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಲಭಿಸಿತು.

2008: ಅಡಿಲೇಡಿನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ತಂಡಗಳ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಹಿಡಿದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿಯಲ್ಲಿ ಹೆಚ್ಚು ಜನರನ್ನು (377 ಕ್ಯಾಚ್ ಹಾಗೂ 37 ಸ್ಟಂಪಿಂಗ್ ಮೂಲಕ) ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು.

2008: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ಐಷಾರಾಮಿ ರೈಲುಗಾಡಿಯಾದ ‘ಸುವರ್ಣ ರಥ’ ಬೆಂಗಳೂರಿನ ಹೊರವಲಯದ ವೈಟ್ ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿತು. ಮುಂದೆ ಒಂದು ವಾರದ ಅವಧಿಯಲ್ಲಿ ಒಳವಿನ್ಯಾಸೀಕರಣಗೊಂಡ ಈ ಗಾಡಿಯು, ದಕ್ಷಿಣ ಭಾರತದ ಪ್ರಥಮ ಪ್ರವಾಸಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2008: ಇನ್ಫೊಸಿಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ, ಗಾಯಕಿ ಆಶಾ ಭೋಂಸ್ಲೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹದಿಮೂರು ಗಣ್ಯರಿಗೆ ಪದ್ಮ ವಿಭೂಷಣ; ಐಸಿಐಸಿಐ ಆಡಳಿತ ನಿರ್ದೇಶಕ ಕುಂದಾಪುರ ವಾಮನ ಕಾಮತ್, ಗಾಯಕಿ ಪಿ.ಸುಶೀಲಾ, ಬಾಹ್ಯಾಕಾಶಯಾನಿ ಸುನೀತಾ ವಿಲಿಯಮ್ಸ್ ಸೇರಿದಂತೆ 35 ಗಣ್ಯರಿಗೆ ಪದ್ಮಭೂಷಣ; ಹಾಗೂ ಕವಿ ಕೆ.ಎಸ್. ನಿಸಾರ್ ಅಹಮದ್, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ವಿ.ಆರ್. ಗೌರಿಶಂಕರ್ ಸೇರಿದಂತೆ 71 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಕೊಂಕಣ್ ಮತ್ತು ಮೆಟ್ರೋ ರೈಲಿನ ಶಿಲ್ಪಿ ಈ. ಶ್ರೀಧರನ್, ವಿಶ್ವಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದನ್, ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಪರಿಸರವಾದಿ ಡಾ.ಆರ್. ಕೆ. ಪಚೂರಿ, ನಿವೃತ್ತ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಎ.ಎಸ್.ಆನಂದ್, ಎವರೆಸ್ಟ್ ಪರ್ವತಾರೋಹಿ ದಿವಂಗತ ಎಡ್ಮಂಡ್ ಹಿಲೆರಿ, ರಾಜತಾಂತ್ರಿಕ ಪಿ.ಎನ್. ಧರ್ ಹಾಗೂ ಉದ್ಯಮಿಗಳಾದ ಎಲ್.ಎನ್. ಮಿತ್ತಲ್ ಮತ್ತು ಪಿ. ಆರ್. ಎಸ್. ಒಬೆರಾಯ್ ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರ ಗಣ್ಯರಾಗಿದ್ದಾರೆ. ಪದ್ಮಭೂಷಣ ಪಡೆದವರಲ್ಲಿ ಎಚ್ ಸಿ ಎಲ್ ಸ್ಥಾಪಕ ಶಿವನಾಡರ್, ಸಿಟಿಬ್ಯಾಂಕ್ ಅಧ್ಯಕ್ಷ ವಿಕ್ರಮ್ ಪಂಡಿತ್ ಸೇರಿದ್ದಾರೆ. ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್, ನಟ ಟಾಮ್ ಆಲ್ಟರ್, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.

2009: ಕರ್ನಾಟಕದ ಮೂಲದವರಾದ ಮಾಧವನ್ ನಾಯರ್ (ಪದ್ಮವಿಭೂಷಣ), ರಾಮಚಂದ್ರ ಗುಹಾ (ಪದ್ಮಭೂಷಣ) ಹಾಗೂ ಐಶ್ವರ್ಯಾ ರೈ ಬಚ್ಚನ್, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಶಶಿ ದೇಶಪಾಂಡೆ, ಪಂಕಜ್ ಅಡ್ವಾಣಿ, ಬಿ. ಆರ್. ಶೆಟ್ಟಿ ಅವರಿಗೆ ಪದ್ಮಶ್ರೀ ಸಹಿತ 133 ಮಂದಿ ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದರು. ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ ‘ಪದ್ಮವಿಭೂಷಣ’ಕ್ಕೆ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ, ಯಶಸ್ವಿ ‘ಚಂದ್ರಯಾನ’ದ ರೂವಾರಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೀಸ್‌ನ ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ, ಖ್ಯಾತ ಅಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಸಹಿತ 10 ಮಂದಿ ಪಾತ್ರರಾದರು. ಪದ್ಮವಿಭೂಷಣಕ್ಕೆ ಪಾತ್ರರಾದ ಇತರರೆಂದರೆ ಸ್ವೀಡನ್ ಮೂಲದ ವಿಶ್ವ ಸಮುದ್ರಯಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ, ಖ್ಯಾತ ಇತಿಹಾಸಕಾರ ಡಿ. ಪಿ. ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಬೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ. ಮೂರನೇ ಅತ್ಯುನ್ನತ ಸನ್ಮಾನ ‘ಪದ್ಮಭೂಷಣ’ಕ್ಕೆ ಬೀಜಿಂಗ್ ಒಲಿಂಪಿಕ್ಸ್ ಬಂಗಾರದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅರ್ಥಶಾಸ್ತ್ರಜ್ಞ ಇಷಾರ್ ಜಜ್ ಅಹುವ್ಲಾಲಿಯಾ. ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸಹಿತ 30 ಮಂದಿ ಪಾತ್ರರಾದರು.

2009: ಸಶಸ್ತ್ರ ಪಡೆ ಸಿಬ್ಬಂದಿಗೆ 9 ಮರಣೋತ್ತರ ಅಶೋಕ ಚಕ್ರ, 13 ಕೀರ್ತಿ ಚಕ್ರ ಪ್ರಶಸ್ತಿ ಸೇರಿದಂತೆ ಒಟ್ಟು 428 ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮಟೆ ಹಾಗೂ ವಿಜಯ್ ಸಾಲಸ್ಕರ್ ಅವರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮರಣೋತ್ತರ ‘ಅಶೋಕ ಚಕ್ರ’ ಪ್ರಶಸ್ತಿ ಘೋಷಿಸಲಾಯಿತು.

2009: ಕೇಂದ್ರ ಗೃಹ ಸಚಿವರ ಆಂತರಿಕ ಭದ್ರತಾ ಸಲಹೆಗಾರರಾದ ಕೆ.ಸಿ.ವರ್ಮಾ ಅವರು ದೇಶದ ಅಗ್ರಮಾನ್ಯ ಗೂಢಚರ್ಯ ಸಂಸ್ಥೆ ‘ರಾ’ ಮುಖ್ಯಸ್ಥರಾಗಿ ನೇಮಕಗೊಂಡರು.

ಪ್ರಮುಖಜನನ/ಮರಣ:

1783: ವಿಲಿಯಂ ಕೋಲ್ಗೆಟ್ ಅವರು ಗ್ರೇಟ್ ಬ್ರಿಟನ್ನಿನ ಕೆಂಟ್ ಬಳಿಯ ಹಾಲಿಂಗ್ ಬೌರ್ನ್ ಎಂಬಲ್ಲಿ ಜನಿಸಿದರು. ಅಮೆರಿಕಕ್ಕೆ ವಲಸೆ ಬಂದ ಅವರು 1806ರಲ್ಲಿ ಕೋಲ್ಗೆಟ್ ಟೂಥ್ ಪೇಸ್ಟ್ ಕಂಪೆನಿಯನ್ನು ಪ್ರಾರಂಭಿಸಿದರು. ಮುಂದೆ ಈ ಸಂಸ್ಥೆಯು ಕೇವಲ ಟೂಥ್ ಪೇಸ್ಟ್ ಮಾತ್ರವಲ್ಲದೆ, ಕೋಲ್ಗೆಟ್ ಪಾಲ್ಮೊಲಿವ್ ಹೆಸರಿನಿಂದ ಅನೇಕ ವಸ್ತುಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದೆ.

1824: ಬಂಗಾಳಿಯ ಮಹಾನ್ ಕವಿ ಮತ್ತು ಪ್ರಮುಖ ನಾಟಕಕಾರರಾದ ಮೈಕೆಲ್ ಮಧುಸೂದನ ದತ್ತ ಅವರು ಬಂಗಾಳದ ಜೆಸ್ಸೂರು ಜಿಲ್ಲೆಯ ಬಳಿಯ ಸಾಗರ್ದಾರಿ ಎಂಬಲ್ಲಿ ಜನಿಸಿದರು.

1917: ಭೌತವಿಜ್ಞಾನಿ ಮತ್ತು ರಸಾಯನ ಶಾಸ್ತ್ರ ವಿಜ್ಞಾನಿ ಇಲ್ಯಾ ಪ್ರಿಗೊಜಿನ್ ಅವರು ಮಾಸ್ಕೋದಲ್ಲಿ ಜನಿಸಿದರು. ಮುಂದೆ ಅವರಿ ಬೆಲ್ಜಿಯಮ್ ದೇಶದಲ್ಲಿ ನೆಲೆಸಿದರು. ಇರ್ರವರ್ಸಿಬಲ್ ಥರ್ಮೋಡೈನಮಿಕ್ಸ್ ಎಂಬ ಅವರ ಸಂಶೋಧನೆಗಾಗಿ 1977ರ ವರ್ಷದಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1921: ಖ್ಯಾತ ಸಾಹಿತಿ ಮತ್ತು ಪತ್ರಕರ್ತ ನಾಡಿಗ ಕೃಷ್ಣಮೂರ್ತಿ ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ಜನಿಸಿದರು. ಪತ್ರಿಕೋದ್ಯಮ ಇತಿಹಾಸದಲ್ಲಿ ಪಿ ಎಚ್ ಡಿ ಪದವಿ ಗಳಿಸಿದ ನಾಡಿಗ ಕೃಷ್ಣಮೂರ್ತಿ ಅವರು ರಚಿಸಿದ ಕೃತಿಗಳು 40ಕ್ಕೂ ಹೆಚ್ಚು. ಅನೇಕ ರಾಷ್ಟ್ರಗಳನ್ನು ಸಂದರ್ಶಿಸಿದ ಅವರು ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪಿಸಿದರು. ರಾಜ್ಯ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದರು. 1983ರಲ್ಲಿ ನಿಧನರಾದ ಇವರಿಗೆ ಕರ್ನಾಟಕ ಸರ್ಕಾರದ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನಗಳೇ ಮೊದಲಾದ ಅನೇಕ ಗೌರವಗಳು ಸಂದಿದ್ದವು.

1923: ಸ್ವೀಡನ್ನಿನ ಫಾರ್ಮಕಾಲಜಿಸ್ಟ್ ಮತ್ತು ವೈದ್ಯಶಾಸ್ತ್ರಜ್ಞ ಅರ್ವಿಡ್ ಕಾರ್ಲ್ಸನ್ ಉಪ್ಪಸ್ಸಲ ಎಂಬಲ್ಲಿ ಜನಿಸಿದರು. ನ್ಯೂರೋ ಟ್ರಾನ್ಸ್ಮೀಟರ್ ಡೋಪಮೈನ್ ಮತ್ತು ಪಾರ್ಕಿನ್ಸನ್ ಕಾಯಿಲೆಯಲ್ಲಿ ಅವುಗಳ ಪರಿಣಾಮದ ಕುರಿತಾದ ಇವರ ಸಂಶೋಧನೆಗೆ ನೊಬೆಲ್ ವೈದ್ಯಕೀಯ ಶಾಸ್ತ್ರಕ್ಕೆ ಸಲ್ಲುವ ನೊಬೆಲ್ ಪುರಸ್ಕಾರ ಸಂದಿತು.

1939: ಪ್ರಸಿದ್ಧ ರಂಗಭೂಮಿ ಮತ್ತು ಸಿನಿಮಾ ನಟ ದಿನೇಶ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1990ರಲ್ಲಿ ನಿಧನರಾದ ಅವರು ರಂಗಭೂಮಿಯ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಎರಡೂ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ್ದರು. ಚಲನಚಿತ್ರಗಳಲ್ಲಿ ಅವರು ಹಾಸ್ಯ ಪಾತ್ರಗಳು ಮತ್ತು ಖಳಪಾತ್ರಗಳಲ್ಲಿ ಜನಪ್ರಿಯತೆ ಪಡೆದಿದ್ದರು.

1949: ನೊಬೆಲ್ ಪುರಸ್ಕೃತ ತಳಿ ತಜ್ಞ (ಜೆನೆಟಿಸಿಸ್ಟ್) ಹಾಗೂ ಜೀವ ವಿಜ್ಞಾನಿ ಪಾಲ್ ನರ್ಸ್ ಅವರು ಇಂಗ್ಲೆಂಡಿನ ನಾರ್ವಿಚ್ ಎಂಬಲ್ಲಿ ಜನಿಸಿದರು. ರಾಯಲ್ ಸೊಸೈಟಿಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದ ಅವರಿಗೆ 2001 ವರ್ಷದಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1954: ಕ್ರಾಂತಿಕಾರಿ ಹೋರಾಟಗಾರ ಮತ್ತು ಭಾರತೀಯ ಕಮ್ಮ್ಯೂನಿಸ್ಟ್ ಪಕ್ಷದ ಸ್ಥಾಪಕ ಎಂ.ಎನ್. ರಾಯ್ ನಿಧನರಾದರು. ಅವರು ತಮ್ಮ ಅನೇಕ ವೈಚಾರಿಕ ಬರಹಗಳಿಗೂ ಪ್ರಸಿದ್ಧರಾಗಿದ್ದರು.

2006: ಕರ್ನಾಟಕ ಸಂಗೀತದ ಖ್ಯಾತ ವಯೋಲಿನ್ ವಾದಕ ನೆಲ್ಲೈ ಕೃಷ್ಣಮೂರ್ತಿ ಕೇರಳದ ತಿರುವನಂತಪುರದಲ್ಲಿ ನಿಧನರಾದರು.

2007: ವಿಶ್ವದ ಹಿರಿಯಜ್ಜ ಎಂದು ಪರಿಗಣಿಸಲಾಗಿದ್ದ ಸಾನ್ ಜುವಾನಾದ (ಪೋರ್ಟೊರಿಕೊ) ಎಮಿಲಿಯಾನೊ ಮರ್ಕೆಡೊ ಡೆಲ್ ಟೊರೊ ಅವರು ತಮ್ಮ 115ನೇ ವರ್ಷದಲ್ಲಿ ನಿಧನರಾದರು. ಈ ಅಜ್ಜ ಹುಟ್ಟಿದಾಗ ಪೊರ್ಟೊರಿಕೊ ಸ್ಪೇನ್ ದೇಶದ ವಸಾಹತಾಗಿತ್ತು. ‘ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ’ ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಈ ಅಜ್ಜನ ಹೆಸರು ದಾಖಲಾದಾಗ ಕರಾವಳಿ ನಗರ ಇಸಬೆಲ್ಲಾದಲ್ಲಿ ಜನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು. 1891ರ ಆಗಸ್ಟ್ 21ರಂದು ಜನಿಸಿದ್ದ ಎಮಿಲಿಯಾನೊ ಮೆರ್ಕಡೊ ಡೆಲ್ ಟೊರೊ ಅವಿವಾಹಿತರಾಗಿದ್ದರು.