ಚೌಪದನ ಸಂಪ್ರದಾಯ:

ವಿಜಯದಶಮಿಯು ಜನರಿಗೆ “ತಮ್ಮ ಸವಿಗನಸುಗಳನ್ನು ಕಾಣುತ್ತ ತಮ್ಮ ನಾಡಿನ ಜನರ, ತಮ್ಮ ನಾಡಿನ ನೆರೆಯನ, ತಮ್ಮ ಸ್ವಂತದ ಶ್ರೇಯೋಭಿವೃದ್ಧಿಯನ್ನು ಕುರಿತು ಬಗೆಬಗೆಯಾಗಿ ಹರಕೆಗಳನ್ನು ಹೇಳುತ್ತ ಹಾಡುವದಕ್ಕೆ ಇದು ಅತ್ಯುತ್ತಮ ಕಾಲ

[1] ಈ ಕಾಲಕ್ಕೆ ಹಾಡುವ ಹಾಡುಗಳನ್ನು ಚೌಪದಿಗಳೆಂದು ಕರೆಯುವರು. ಮಾನೋಮಿ ಚೌಪದನಗಳೆಂದೇ ಇವು ಹೆಸರಾಗಿವೆ. ಈ ಪದ್ಧತಿ ವಿಶೇಷವಾಗಿ ಮೈಸೂರು ಸೀಮೆಯ ಕಡೆಗೆ ಈಗಲೂ ಇದೆ.

ಮಹಾನವಮಿ ಹಬ್ಬಕ್ಕೆ ಹಾಡಲು ತಿಂಗಳುಗಟ್ಟಲೇ ಮೊದಲಿಗೆ ಹಳ್ಳಿಯ ಹುಡುಗರನ್ನು ಸೇರಿಸಿ, ಆ ಊರಿನ ಅಕ್ಷರ ಕಲಿಸುವ ಅಯ್ಯನವರು ತಮ್ಮ ನೇತೃತ್ವದಲ್ಲಿ ಊರಿನ ಮನೆಮನೆಗೆ ‘ಚೌಪದನ ಮೇಳ’ ದ ಹುಡುಗರನ್ನು ಕರೆದುಕೊಂಡು ನಡೆಯುವರು. ಆ ಹುಡುಗರನ್ನು ನೋಡಿದ ತಕ್ಷಣ ಅವರು ‘ಚೌಪದನ ಹಾಡುವ ಹುಡುಗರು’ ಎಂದು ಗುರುತಿಸುವಷ್ಟು ಎದ್ದು ಕಾಣುತ್ತಾರೆ. ಅಷ್ಟೊಂದು ಶಿಸ್ತು- ಸ್ವರಮೇಳ ಅವರಲ್ಲಿರುತ್ತದೆ. “ಹುಡುಗರಿಗೆ ಕಸೂತಿ ಕೆಲಸ ಮಾಡಿದ ಒಂದು ಕಪ್ಪು ಬಣ್ಣದ ಮಕಮಲ್ ಟೋಪಿ, ಕರಿಯ ಅಂಗಿ, ಬಿಳಿಯ ಪೈಜಾಮ, ನಡುವಿಗೆ ಜರತಾರಿ ಪಟ್ಟಿ, ಕೈಯ್ಯಲ್ಲಿ ಸಣ್ಣಗಿರುವ ಬಣ್ಣದ ಕಾಗದದಿಂದ ಅಲಂಕೃತವಾದ ಒಂದು ಡೊಣ್ಣೆ ಅಥವಾ ಕೋಲಾಟದ ಕೋಲುಗಳೂ ಇವುಗಳಿರುತ್ತವೆ.”[2] ಹೀಗೆ ಆಕರ್ಷಕ ಮೇಳವಾಗಿ ಹುಡುಗರು ಊರಲ್ಲಿ ಮನೆ ಮನೆಗೆ ಬಂದು ‘ ಹರಕೆಯ’ ಚೌಪದಿಗಳನ್ನು ಹಾಡುವರು.

ಆಶ್ವೀಜ ಶುದ್ಧ ಮಾನೋಮಿ ಬರಲೆಂದು
ಲೇಸಾಗಿ ಹರಿಸಿದೆವು ಬಾಲಕರು ಬಂದು

ಆಯುರಾರೋಗ್ಯ ಸಂಪದ ಹೆಚ್ಚಲೆಂದು
ಕಾಯಜನ ಪಿತನೊಲುಮೆ ನಿಮಗಾಗಲೆಂದು.

ಉತ್ತರ ಕರ್ನಾಟಕದಲ್ಲಿ ಕಾಣಬಾರದ ಈ ಸಂಪ್ರದಾಯ ಮೈಸೂರು ಸೀಮೆಯಲ್ಲಿ ಮಾನೋಮಿ ಕಾಲಕ್ಕೆ ಹುಡುಗರು ಚೌಪದನಗಳನ್ನು ಹೇಳುತ್ತ, ಸುಖ-ಸಂಪತ್ತು, ಮಳೆ-ಬೆಳೆಗಳು ಅಭಿವೃದ್ಧಿಗೊಳ್ಳಲೆಂದು  ಸದಾ ಶುಭ ಹರಕೆಯನ್ನು  ಹರಿಸಿ ಮನೆಯವರಿಂದ ಉಡುಗರೆ ಬೇಡುವರು.

ಉಡುಗರೆಯ ತೇಜ ನಮ್ಮಯ್ಗಳಿಗೆ ಬೇಕು
ಕಡಲೆ ಬೆಲವು ಕೊಬರಿ ನಮಗಾಗಬೇಕು.

ಎಂದು ಹೇಳುವಲ್ಲಿ ಆಗಿನ ಕಾಲದ ಸಾಮಾಜಿಕ ಬದುಕಿನ ಸ್ಪಷ್ಟ ಚಿತ್ರಣ ದೊರಕುತ್ತದೆ. ಅಯ್ಯನವರಿಗೆ ಅದೊಂದು ವೃತ್ತಿಜೀವನದ ಅಂಗವಾಗಿದ್ದರೆ. ಹುಡುಗರಿಗೆ ಹಾಡುವ ಹುಮಸ್ಸು,  ಹಿರಿಯರಿಗೆ ಎಳೆಯ ಬಾಲಕರ ಬಾಯಿಯಿಂದ ಬಂದ ಹರಕೆಯನ್ನು ಕೇಳುವದರಲ್ಲಿಯೇ ಆತ್ಮತೃಪ್ತಿ. ಹರಕೆಯೊಂದಿಗೆ ದೇವರು. ಇತಿಹಾಸ, ರೀತಿ, ನೀತಿ ಕುರಿತಾದ ಚೌಪದಿಗಳನ್ನೂ ಹಾಡುವರು. ಈ ಚೌಪದನಗಳು “ಹಳ್ಳಿಗರ ಮನಸ್ಸಿನಲ್ಲಿ ನಲವನ್ನು ತುಂಬಿ, ದಾನ ಬುದ್ಧಿಯನ್ನು, ಮನೋವೈಶಾಲ್ಯವನ್ನು ಬೆಳೆಸುವ”[3] ದಲ್ಲದೇ “ಚೌಪದನಗಳು ನಮ್ಮ ನಡೆ ನುಡಿಯನ್ನು ತಿದ್ದಿ ಮಾರ್ಗದರ್ಶನ ಮಾಡಿದ್ದೇನು ಸುಳ್ಳಲ್ಲ”

ಜಾನಪದ ಛಂದಸ್ಸುಗಳಲ್ಲಿ ಚೌಪದನವೂ ಒಂದು. ದೀರ್ಘ ಕಥೆ-ಘಟನೆಗಳನ್ನು ಸರಾಗವಾಗಿ ಹೇಳಲು ಇದು ಉತ್ತಮ ವಾಹಕವೆನಿಸಿದೆ. ಚೌಪದನ ಛಂದಸ್ಸು ಜಾನಪದವಾಗಿದ್ದರೂ ಅದರಲ್ಲಿ ಮೂಡಿ ಬಂದ ಸಾಹಿತ್ಯ ಜಾನಪದವೆಂದು ಬೇಗ ಒಪ್ಪುವಂತಿಲ್ಲ. “ಚೌಪದನಗಳು ಸಂಪೂರ್ಣವಾಗಿ ಮಾರ್ಗಕ್ಕೂ ಸೇರಲಾರವು: ಸಂಪೂರ್ಣವಾಗಿ ದೇಶಿಗೂ ಹೊಂದಲಾರವು. ಅವೆರಡರ ಮಧ್ಯಮಾರ್ಗವನ್ನು ಇವು ಅನುಸರಿಸುತ್ತವೆ; ಆದ್ದರಿಂದಲೆ ಮಾರ್ಗೀ ಕಾವ್ಯದ ಕಣ್ಣುಕುಕ್ಕಿಸುವ ಹೊಳಪು ಇಲ್ಲಿಲ್ಲ. ದೇಶಿಯ ಕಾವ್ಯದ ಆಡಂಬರ ಅಲ್ಲಿ ಹೊಳೆಯದೇ ಹೋಗಿಲ್ಲ “[4] ಸಧ್ಯಕ್ಕಂತೂ ಇವು ಜಾನಪದ ಸಾಹಿತ್ಯ ವಿಭಾಗದಲ್ಲಿ ಸಂಕಲನ, ಸಂಪಾದನ, ವಿಮರ್ಶನಗೊಳ್ಳುತ್ತಿವೆ. ಮುಂದಾದರೂ ಚೌಪದನಗಳ ಬಗೆಗೆ ವಿಶೇಷ ಅಧ್ಯಯಗೈದು ಅವುಗಳ ವೈಶಿಷ್ಟ್ಯವನ್ನು ಎತ್ತಿ ತೋರಬೇಕಾಗಿದೆ.

ಗೊರವರ ಸಂಪ್ರದಾಯ:

ವಿಜಯದಶಮಿಯ ಕಾಲಕ್ಕೆ ವೈಶಿಷ್ಟ್ಯ ಪೂರ್ಣವಾಗಿ ಮೈಲಾರಲಿಂಗದೇವರ ಭಕ್ತರಾದ ಗೊರವರು ನಡೆಸುವ ಕಠಿಣ ವೃತ ಹಾಗೂ ಕಾಯಕಗಳು ಈಗಲೂ ಧಾರವಾಡ ಜಿಲ್ಲೆಯ, ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಕ್ಷೇತ್ರದಲ್ಲಿ ನಡೆಯುತ್ತಿದ್ದು ಅವರ ಬಗೆಗೆ ಅರಿಯುವದಗತ್ಯವಾಗಿದೆ.

ವೈಲಾರಲಿಂಗದೇವರ ಬಗೆಗೆ ಸಾಕಷ್ಟು ವಾದ-ವಿವಾದಗಳಿವೆ. ಅದರಲ್ಲಿಯೇ ಹೆಚ್ಚು ಸಮ್ಮತವೆನಿಸುವ ಸಂಗತಿ ಈ ಕೆಳಗಿನಂತಿದೆ. ಮೈಲಾರನ ಹೆಂಡತಿ ಹೆಸರು ಮಾಳಚಿ. ಇಬ್ಬರೂ ಮೂಲತಃ ಜಾನಪದ ದೇವರುಗಳು. ಕನ್ನಡ ಶಾಸನವೊಂದರಲ್ಲಿ ಇಬ್ಬರೂ ಶಾಕ್ತಮತದಿಂದ ಶಿವದೀಕ್ಷೆ ಪಡೆದರೆಂದು ತರ್ಕಿಸಲಾಗಿದೆ. “ಮೊದಲು ಸ್ಥಳೀಯ ಜಾನಪದ ದೇವಿಯಾಗಿದ್ದ ಮಾಳಚಿ ಶಾಕ್ತ ದೀಕ್ಷೆಯನ್ನು ವಹಿಸಿ ಶಕ್ತಿ ದೇವತೆಯ ರೂಪದಿಂದ ಜನತೆಯಲ್ಲಿ ತನ್ನ ವರ್ಚಸ್ಸನ್ನು ಸ್ಥಾಪಿಸಲನುವಾದಳು. ಈ ಪರಿಯಲ್ಲಿ ತನ್ನ ಅರ್ಧಾಂಗಿ ವೇಷಾಂತರಕ್ಕೆ ಅಣಿಯಾಗುತ್ತಿರುವಾಗ, ಅದರ ಮುದ್ರೆ ಆಕೆಯ ವಲ್ಲಭನಾದ ಮೈಲಾರನ ಮೇಲೆ ಮೂಡದೆ ಇರುವದು ಸಾಧ್ಯವೇ? ಈ ಪರಿವರ್ತನದ ಪ್ರವಾಹದಲ್ಲಿ ಮಾಳಚಿಯ ಪತಿಯೂ ಮೂಲತಃ ಆಕೆಯಂತೆ ಸ್ಥಳೀಯ ಜಾನಪದ ದೇವನೂ ಆದ ಮೈಲಾರನು ಶಾಕ್ತ ಸಂಪರ್ಕದಿಂದ ಶಿವನ ದೀಕ್ಷೆಯನ್ನು ಸ್ವೀಕರಿಸಿ ಮೈಲಾರಲಿಂಗನಾಗಿ ವಿರಾಜಿಸತೊಡಗಿದನು.”[5] ಈ ಮೈಲಾರನು ಶಿವನ ಭೈರವರೂಪನಾಗಿದ್ದು ಈತನಿಗಿರುವ ಶಿಷ್ಯರಿಗೆ ಗೊರವಯ್ಯ, ಗೊಗ್ಗಯ್ಯ, ಒಗ್ಗಯ್ಯ ಎಂದೆಲ್ಲಾ ಕರೆಯುವರು. ಈ ಮೈಲಾರ ಹಾಗೂ ಆತನ ಶಿಷ್ಯರ ಪೌರಾಣಿಕ-ಐತಿಹಾಸಿಕ-ಜಾನಪದ ಹಿನ್ನಲೆಯಲ್ಲಿ ವಿಶೇಷ ಅಧ್ಯಯನ ನಡೆಯಬೇಕಾಗಿದೆ. ಸದ್ಯ ಈ ಗೊರವರು ವಿಜಯದಶಮಿಗೆ ಮೈಲಾರನ ಜಾತ್ರೆಯಾಗುತ್ತಿದ್ದು ಆ ಕಾಲಕ್ಕೆ ತಮ್ಮ ಭಕ್ತಿಯನ್ನು ಹೇಗೆ ತೋರ್ಪಡಿಸುವರೆಂಬುದನ್ನು ನೋಡೋಣ.

ಕರಿಯ ಕಂಬಳಿಯ ನಿಲುವಂಗಿ, ಬಿಳಿಯ ರುಮಾಲು, ಕೈಯ್ಯಲ್ಲಿ ಡಮರು, ತ್ರಿಶೂಲ, ಹೆಗಲಲ್ಲಿ ಡೋಣಿ, ಕೊರಳಲ್ಲಿ ಭಂಡಾದರ ಚೀಲ, ನಾಗಬೆತ್ತ, ಕವಡೆಯ ನಡುಪಟ್ಟಿ. ಇವರ ವೇಷ-ಭೂಷಣಗಳು, ಹೆಚ್ಚಾಗಿ ಕುರುಬ ಜನಾಂಗದವರಾದ ಇವರು ಸದಾ ನಾಲ್ಕಾರು ಜನರು ಗುಂಪುಗೂಡಿಯೇ ಇರುತ್ತಾರೆ. ಮಾಳಚಿಯ ಭಕ್ತರಾಗಿ ಸ್ತ್ರೀಯರಿಗೂ ಬರಲು ಇವರು ಅವಕಾಶ ಕಲ್ಪಿಸಿದ್ದಾರೆ. ಮೈಲಾರ ದೇವರ ಭಕ್ತರ ಮನೆಗೆ ಬರುವಾಗ- ಹೋಗುವಾಗ “ಹರಹರ ಮಹಾದೇವ ಮಾರ್ತಾಂಡ ಮೈಲಾರಲಿಂಗ ಏಳುಕೋಟಿಗೂ “ಏಳುಕೋಟಿಗೂ” ಎಂದು ಗರ್ಜಿಸುವರು ಮೈಲಾರನನ್ನಿ ಕುರಿತ ಕಥೆ. ಮಹಿಮೆ, ಕಾರ್ಣಿಕದ ಅರ್ಥಗಳನ್ನು ಹೇಳುವದೇ ಇವರ ದರ್ಶನದ ಉದ್ದೇಶ. ಅದೇ ಅವರ ವೃತ್ತಿ. “ಏಳುಕೋಟಿ” ಎಂಬ ಶಬ್ದ ಬರಲು ಪೌರಾಣಿಕ ಕಾರಣವಿದೆ. ಶಿವ ಮೈಲಾರನ ರೂಪತಾಳಿರುವನು. “ಈತನ ಅವತಾರದ ಮುಖ್ಯ ಕಾರ್ಯ ಮಣಿ-ಮಲ್ಲರೆಂಬ ಅಸುರರ ಸಂಹಾರ. ಈ ಸಂಹಾರಕ್ಕಾಗಿ ಈತನು ಭೈರವಸ್ವರೂಪಿಯಾಗಿ ನಾಯಿ ಮತ್ತು ಏಳುಕೋಟಿ ಪರಿವಾರದೊಂದಿಗೆ ದಿಗ್ವಿಜಯ ಮಾಡಿದನೆಂದು ಕಥೆಯಲ್ಲಿ ಹೇಳಿದೆ.” [6] ಆದುದರಿಂದಲೇ ಮೈಲಾರನ ಭಕ್ತರು ‘ಏಳುಕೋಟಿ’ ಎಂಬ ಉಪಾಧಿಯನ್ನು ಬಳಸುವರು.

ಹಾಗೆಯೇ ಇನ್ನೊಂದು ಜಾನಪದ ಕಥೆಯಿದೆ. ತಿರುಪತಿ ತಿಮ್ಮಪ್ಪನಿಗೆ ಮೈಲಾರನು ಏಳುಕೋಟಿ ರೂಪಾಯಿ ಸಾಲ ಕೊಟ್ಟನಂತೆ. ಕೆಲಕಾಲದ ನಂತರ ಮರಳಿ ಮೈಲಾರನು ತಿಮ್ಮಪ್ಪನನ್ನು ಹಣ ಕೇಳಿದೆ. “ ಏಳುಕೋಟಿ ಕೊಡು ಏಳುಕೋಟಿ ಕೊಡು” ಎಂದ. ತಿಮ್ಮಪ್ಪನಲ್ಲಿ  ಹಣವಿರಲಿಲ್ಲ. ಆತ ಕೈ ಜಾಡಿಸಿ” “ಗೋವಿಂದಾ ಆ ಗೋವಿಂದಾ” ಎಂದನು. ಮೈಲಾರ ಮೊದಲೇ ಹಠಮಾರಿ. ಹಣಕ್ಕಾಗಿ ಪಟ್ಟು ಹಿಡಿದ. ಅನಿವಾರ್ಯವಾಗಿ ತಿಮ್ಮಪ್ಪ ಸಾಲ ತೀರಿಸಲು ತನ್ನ ಭಕ್ತರಿಂದ ಹುಂಡಿ ಕೇಳಲು ಪ್ರಾರಂಭಿಸಿದ. ಅವರಿಬ್ಬರ ಸಾಲದ ವ್ಯವಹಾರ ಇನ್ನೂ ಮುಗಿದಿಲ್ಲ. ಕಾರಣ ಮೈಲಾರನ ಭಕ್ತರು ‘ಏಳುಕೋಟಿ’ ಕೊಡು ಎಂದು ಕೇಳುತ್ತಲೇ ಇದ್ದಾರೆ. ತಿಮ್ಮಪ್ಪ ‘ಭಕ್ತರು ಗೋವಿಂದ, ಎಂದು ನಾಮ ಹಾಕುತ್ತಲೇ ಇದ್ದಾರೆ. ಈ ಕಾರಣದಿಂದಾಗಿಯೇ ಮೈಲಾರನ ಗೊರವರು ಹಾಗೂ ಭಕ್ತರು ಏಳುಕೋಟಿ ಏಳುಕೋಟಿ ಎನ್ನುತ್ತಲೇ ದೇವರ ಸೇವೆಗೆ ಅಣಿಯಾಗುವರು.

ಬನ್ನಿಹಬ್ಬಕ್ಕೆ ದೇವರಗುಡ್ಡದ ಜಾತ್ರೆಯಾಗುತ್ತಿದ್ದು ಆ ಕಾಲಕ್ಕೆ ಎಲ್ಲ ಗೊರವರು ಗುಡ್ಡದಲ್ಲಿ ಸಮಾವೇಷಗೊಳ್ಳುವರು. ಆಗ ಗೊರವರಲ್ಲಿಯೇ ಹಿರಿಯವನಾದವನೊಬ್ಬನ ಕರ್ತವ್ಯ ಮಹತ್ವದ್ದಾಗಿರುತ್ತದೆ. ಬನ್ನಿಹಬ್ಬಕ್ಕೆ “ಹಿಂದಿನ ಎಂಟು ದಿನಗಳು ಉಪವಾಸವಿರುವ ಈ ಗೊರವ ಕೆಸರಿನ ಮಧ್ಯದಲ್ಲಿರುವ ಎಣ್ಣೆ ಸವರಿದ ಕಂಭವನ್ನು ಬಹು ಪ್ರಯಾಸದಿಂದ ಏರಿ, ತುದಿ ಮುಟ್ಟಿದಾಗ ನಾಲ್ಕಾರು ನುಡಿಗಳನ್ನು ಹೇಳುತ್ತಾನೆ. ಕಂಭ ಏರುವುದಕ್ಕೆ ‘ಉಟ್ಲು’ ಎಂದೂ, ಅಲ್ಲಿ ಹೇಳುವುದಕ್ಕೆ ‘ಕಾರ್ಣಿಕ’ ಎಂದೂ ಹೆಸರು.”[7] ಕಾರ್ಣಿಕಕ್ಕೆ ‘ದೇವರ ಹೇಳಿಕೆ’ಗಳೆಂದು ಕರೆಯುವರು. ಅದನ್ನು ಕೇಳಲು ಸಾವಿರಾರು ಜನ ಎಲ್ಲೆಲ್ಲಿಂದಲೊ ಬಂದಿರುತ್ತಾರೆ.

ಉದಾ: ಗಿಂಡಿಲಿ ನೀರೊ
ಬಂಡಿಲಿ ಅನ್ನೊ

ಇದೊಂದು ಹೇಳಿಕೆ. ಗಿಂಡಿಲಿ ನೀರು ಎಂದರೆ ಕಡಿಮೆ ಪ್ರಮಾಣದಲ್ಲಿ ಹದವರಿತು ಮಳೆಯಾಗುವದೆಂದೂ, ಬಂಡಿಲಿ ಅನ್ನೊ ಎಂದರೆ ಸಾಕಷ್ಟು ಬೆಳೆ ಬಂದು ಅನ್ನಕ್ಕೆ ಕೊರತೆಯಾಗುವದಿಲ್ಲವೆಂಬ ಅರ್ಥದಲ್ಲಿ ಇದನ್ನು ನಂಬುತ್ತಾರೆ.

ಉದಾ: ಜೋಳ ಜೊಟ್ಟು ಆದೀತೊ
ಹತ್ತಿ ಬತ್ತಿಯಾದೀತೊ.

ಈ ಹೇಳಿಕೆಯಲ್ಲಿ ಬರಗಾಲದ ಸೂಚನೆಯಿದೆ. ಪ್ರಮುಖ ಹಿಂಗಾರು ಬೆಳೆಗಳಾದ ಜೋಳ ಬೆಳೆದರೂ ಕಾಳು ಹಿಡಿಯುವದಿಲ್ಲವೆಂದೂ, ಹತ್ತಿಬೆಳೆ ದೀಪಹಚ್ಚುವ ಬತ್ತಿಗೆ ಸಾಲುವದಿಲ್ಲವೆಂದರೆ ಕಡಿಮೆ ಬೆಳೆ ಬರುವದೆಂದೂ ಅರ್ಥೈಸುವರು.

ಉದಾ: ಅರಸ ಅಳದಾನೊ
ಕೊರಸ ಮೆರದಾನೊ

ಈ ಹೇಳಿಕೆಯಲ್ಲಿ ರಾಜಕೀಯ ಬದಲಾವಣೆಯನ್ನು ಕಾಣುತ್ತಾರೆ. ಒಟ್ಟಿನಲ್ಲಿ ಈ ‘ಕಾರ್ಣಿಕ’ಗಳು ಆ ವರುಷದ ಮಳೆ-ಬೆಳೆ-ಆಗು-ಹೋಗುಗಳನ್ನು ಕುರಿತವುಗಳಾಗಿರುತ್ತವೆ. ಇವುಗಳಡಿ ಅಪಾರ ಜನರಿಗೆ ನಂಬುಗೆಯಿದೆ. ಹಾಗೆಯೇ ಇವು ನಮ್ಮ ಜನಪದ ಸಾಹಿತ್ಯದ ಒಂದು ಪ್ರಕಾರವೆಂದು ಪರಿಗಣಿಸಬಹುದು. ಆದಿ ಅಥವಾ ಅಂತ್ಯ ಪ್ರಾಸಬದ್ಧವಾಗಿದ್ದು, ಸೊಗಸಾದ ಭಾಷೆಯ ಬಳಕೆಯಿದ್ದು. ಇವುಗಳನ್ನು ಸುಂದರ ಕಾವ್ಯದ ತುಣುಕುಗಳೆಂದು ಕರೆಯಬಹುದು. ಈ ಹೇಳಿಕೆಗಳು ಇನ್ನು ಕೆಲ ಕಡೆ ಆಗುತ್ತಿದ್ದು ಅವುಗಳ ಸಂಗ್ರಹ, ವಿಮರ್ಶಕಾರ್ಯ ನಡೆಯಬೇಕಾಗಿದೆ.

ಅದೇ ದಿನವೇ ಮೈಲಾರದೇವರ ಪರಸಿಯ ಮೇಲೆ ಗೊರವಯ್ಯಗಳು ತಮ್ಮ ‘ಆಟ’ವನ್ನು ಪ್ರದರ್ಶಿಸುತ್ತಾರೆ. ಅದನ್ನು ನೋಡಲು ಜನ ಕಿಕ್ಕಿರಿದು ನೆರೆದಿರುತ್ತದೆ. ಕಬ್ಬಿಣದ ಸರಪಳಿ ಹರಿಯುವದು. ಪಾದದಿಂದ ಮೊಣಕಾಲವರೆಗಿನ ಭಾಗದಲ್ಲಿ ಕಾಲಿನ ಹಿಂಭಾಗದ ಮಾಂಸಖಂಡದಲ್ಲಿ ನೆಲದಲ್ಲಿ ಜಡಿಯುವಂತೆ ಕಟ್ಟಿಗೆ ಗೂಟದಿಂದ ತೂತನ್ನು  ಕೊರೆಯುವರು. ಆ ತೂತಿನಲ್ಲಿ ತೊಗಲಿನ ಮಿಣಿಯನ್ನು ಒಂದು ಕಡೆಯಿಂದ ಹಾಯಿಸಿ ಇನ್ನೊಂದು ಕಡೆಗೆ ಹೊರ ತರುವರು. ಜಾಲಿಯ ಮುಳ್ಳುಗಳನ್ನು ಚುಚ್ಚಿ ಹೊರ ತೆಗೆಯುವರು. ಇನ್ನು ಕೆಲ ಅದ್ಭುತ ಹಾಗೂ ಆಶ್ಚರ್ಯಕರ ಕಾರ್ಯಗಳನ್ನು ಎಸಗುವರು. ಇಷ್ಟಾದರೂ ಅವರ ದೇಹದಿಂದ ಹನಿರಕ್ತ ಹೊರಬರುವದಿಲ್ಲ. ನೋವಾದೀತೆಂದು ನರಳುವದಿಲ್ಲ. ತಾವು ತೋಡಿಕೊಂಡ ಅಂಗದ ಗಾಯಕ್ಕೆಲ್ಲಾ ಮೈಲಾರ ಭಂಡಾರ ಸವರುವರು. ದೇಹದಂಡಿಸುವ ಈ ಗೊರವರು ನಮ್ಮ ಪೂರ್ವದ ಶೈವಧರ್ಮದ ಲಕುಲೀಶ- ಪಾಶುಪತ-ಕಾಳಾಮುಖ-ಕಾಪಾಲಿಕರ ನೆನಪನ್ನು ತರುತ್ತಿದ್ದಾರೆ. ಪ್ರಾಚೀನ ಕಾವ್ಯ ಹಾಗೂ ಶಾಸನಗಳಲ್ಲಿ ಇವರ ಬಗೆಗೆ ಪ್ರಸ್ತಾಪವಿದ್ದು ಇವರು ನಡೆಸುವ ಆಶ್ಚರ್ಯಕರ ದೇವರ ಸೇವೆಯನ್ನು ಹಾಗೂ ವೈಜ್ಞಾನಿಕವಾಗಿ ಕೂಡಲೇ ಪರಿಶೀಲನೆಯೂ ನಡೆಯಬೇಕಾಗಿದೆ.

ಧಾರ್ಮಿಕತೆ:

ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ನಮ್ಮ ಧಾರ್ಮಿಕ ಜೀವನದ ಒಂದು ಅಂಗವಾಗಿದೆ. ಪ್ರತಿವರುಷವೂ ಅವು ಬರುತ್ತಿದ್ದು ಸಡಗರದಿಂದ ನಾವು ಆಚರಿಸುತ್ತಲೇ ಬಂದಿರುವೆವು. ಇವುಗಳ ಆಚರಣೆಯಿಂದ ಆಧ್ಯಾತ್ಮಿಕ ವಿಚಾರ ಬೆಳೆಯುತ್ತಿದೆ. ಆ ಕಾಲದಲ್ಲಿ ನಡೆಸುವ ಉಪವಾಸ- ವ್ರತಗಳು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಾಗಿದ್ದು ಮಾನಸಿಕ ನೆಮ್ಮದಿಯೂ ಇವುಗಳಿಂದ  ಬೆಳೆಯುವದು. “ಈ ಹಬ್ಬ-ವ್ರತಗಳ ಹಿನ್ನಲೆಯಲ್ಲಿ ದುಷ್ಟಶಕ್ತಿಯ ದಮನ ಹಾಗೂ ಶಿಷ್ಟಶಕ್ತಿಯ ವಿಜಯದ ತತ್ವವು ಅಡಗಿದ್ದು ಬಹುಮಟ್ಟಿಗೆ ಹಬ್ಬ ಉತ್ಸವಗಳೆರಡರ ಸಂಬಂಧವಾಗಿರುವ ಕಥೆಗಳು ಈ ತತ್ವವನ್ನೇ ಪ್ರತಿಪಾದಿಸುತ್ತವೆ” [8] ವಿಜಯದಶಮಿಯಂತೂ ನೇರವಾಗಿ ಇದೇ ತತ್ವವನ್ನು ಒಳಗೊಂಡಿದೆ. ಆಚರಣೆಯ ವಿಧಾನಗಳಿಂದ ಇದು ಸ್ಪಷ್ಟವಾಗುವದು. “ಹಬ್ಬ ವ್ರತ ಉತ್ಸವ ಇತ್ಯಾದಿಗಳ ಹೆಸರಿನಲ್ಲಿ ನಡೆಸುವ ಪೂಜೆ ಉಪವಾಸ ಮೊದಲಾದ ಧಾರ್ಮಿಕ ಪರವಾದ ಕೆಲಸಕಾರ್ಯಗಳು ಧಾರ್ಮಿಕ ಗುರು ಮಠ, ಗುಡಿ, ಸಮಾಜಗಳಲ್ಲಿ ಧಾರ್ಮಿಕ ಏಕತೆಯನ್ನು ಕಾಣುವೆವು. ಇತ್ತೀಚೆಗಂತೂ ಈ ಹಬ್ಬ-ಹರಿದಿನಗಳ ಆಚರಣೆ ಕೇವಲ ಊಟ-ಉಪಚಾರಗಳಿಗೆ ಸೀಮಿತವಾಗುತ್ತಿದ್ದು ಅವುಗಳ ಆಚರಣೆಯ ಹಿನ್ನಲೆಯಲ್ಲಿಡಗಿದ ಧಾರ್ಮಿಕ ವಿಚಾರಗಳನ್ನು ಮರೆಯಲಾಗುತ್ತಿದೆ. ಧರ್ಮದಲ್ಲಿ ನಂಬುಗಯಿದ್ದರೆ ಮಾತ್ರ ಹಬ್ಬ-ಹರಿದಿನಗಳಲ್ಲಿ ನಂಬುಗೆ ಬರುವದು. ಇಂದು ಕೆಲ ಜನ ವೈಚಾರಿಕ ಮನೋಭಾವದವರೆಂಬ ಸೋಗಿನಲ್ಲಿ ಇಂಥ ಹಬ್ಬಗಳನ್ನು ಖಂಡಿಸುತ್ತಿರುವದು ವಿಷಾದನೀಯ. ಆ ಹಬ್ಬದಲ್ಲಡಗಿರುವ  ವಿಚಾರ-ಆಚಾರಗಳನ್ನು ಪುನರ್ ವಿಮರ್ಶೆಗೈದು ಆಚರಿಸುವುದೂ ಈಗ ಅಗತ್ಯವೆನಿಸಿದೆ.

ಸಾಮಾಜಿಕತೆ:

ವಿಜಯದಶಮಿಯನ್ನು ಇಡೀ ಭಾರತವೇ ಆಚರಿಸುತ್ತದೆ. ಕನ್ನಡಿಗರಿಗಂತೂ ಇದು ಮನೆಹಬ್ಬವೆನಿಸಿದೆ. ವಿಜಯನಗರ, ಕಿತ್ತೂರು, ಮೈಸೂರು ಅರಸರ ಕಾಲದಿಂದಲೂ ಈ ಹಬ್ಬದ ವೈಭವವನ್ನು ಕನ್ನಡಿಗರು ಅನುಭವಿಸುತ್ತ ಬಂದಿದ್ದಾರೆ. ಆದುದರಿಂದಲೇ ಇದನ್ನು ನಾಡಹಬ್ಬವೆಂದೂ ಕರೆಯುವರು. ರಾಜರ ದಿಗ್ವಿಜಯನ್ನು ಸಾಂಕೇತಿಕವಾಗಿ ಆಚರಿಸುವಾಗ ಮೆರವಣಿಗೆ ತೆಗೆಯುವರು. ಚತುರ್ಬಲಗಳು ಸಿಂಗಾರಾಗಿ ರಾಜಾಂಗಣದಿಂದ ಹೊರಬೀಳುವದು ಸಂಜೆಗೆ ಇದು ಊರ ಉತ್ಸವವೇ ಆಗಿ ಬಿಡುವದು. “ಊರ ಜನರೇ ಕೂಡುವರು”. ಸಾಮಾಜಿಕ ಜೀವನದಲ್ಲಿ ಇಡೀ ಸಮೂಹವನ್ನೆ ಸೃಷ್ಟಿಸುವ ಈ ಹಬ್ಬ ದಿನಕ್ಕೂ ಆದರ್ಶನೀಯವಾದುದು.

ಬನ್ನಿಹಬ್ಬವೇ ಆಗಲಿ ಯಾವ ಹಬ್ಬವೇ ಆಗಲಿ ಅವುಗಳ ಆಚರಣೆಯ ಹಿಂದೆ ಸಾಮಾಜಿಕ ಜೀವನದ ತತ್ವ ಅಡಗಿದೆ. “ಜಾತ್ರೆ ಉತ್ಸವ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಸಾವಿರಾರು ಜನರು ಒಂದೆಡೆ ಸೇರುವಂತಾಗುವದರಿಂದ ವ್ಯಾಪಾರ, ವಿಚಾರ ವಿನಿಮಯ. ರಾಷ್ಟ್ರೀಯ ಐಕ್ಯ ಭಾವನೆ, ಹೊಸ ವ್ಯಕ್ತಿಗಳ ಸಂಗತಿಗಳ ಪರಿಚಯ. ಇವುಗಳೆಲ್ಲ ಕಾರ್ಯರೂಪಗೊಳ್ಳಲು ಸಾಧ್ಯವಾಗುತ್ತದೆ. ಹಾಗಾಗುವದರಿಂದ ವ್ಯಕ್ತಿ ಹಾಗೂ ಸಾಮಾಜಿಕ ಜೀವನವು ಸುಖಮಯವೂ ಭದ್ರವೂ ಆಗಲು ಬಹು ವಿಧದಲ್ಲಿ ಸಹಾಯ ದೊರಕಿದಂತಾಗುತ್ತದೆ.” [9] ಈ ವಿಚಾರಕ್ಕೆ ನಮ್ಮ ಮೈಸೂರು ದಸರೆಯೇ ಒಂದು ಸ್ವಷ್ಟ ನಿದರ್ಶನ.

ಬನ್ನಿ ಮುಡಿಯುವ ಕಾರ್ಯ ಮನೆಮಂದಿಗೆ ಸೀಮಿತರಾಗಿರದೇ ಇಡೀ ಮಾನವ ಜನಾಂಗಕ್ಕೆ ಮುಡಿಯಬಹುದಾಗಿದ್ದುದರಿಂದ ಪರಸ್ಪರರು ಬನ್ನಿ ಮುಡಿಯುವಾಗ ಪ್ರೀತಿ-ವಿಶ್ವಾಸ-ಸಹಕಾರ ಭಾವನೆಗಳು ಹೆಚ್ಚಾಗಲು ಕಾರಣವೆನಿಸುತ್ತದೆ. ಜಾತಿಯ ತೆಯಳಿದು ‘ಮಾನವ ಜನಾಂಗ ಒಂದೇ’ ಎಂದು ಸಾರಲು ಬನ್ನಿ ಹಬ್ಬದ ಆಚರಣೆಯೇ ಸಾಕ್ಷಿ. ಬನ್ನಿ ಹಬ್ಬ ‘ನಾಡಹಬ್ಬ’ ವಾಗಿಯೂ ಆಚರಣೆಗೊಳ್ಳುತ್ತಿದೆ. “ನಾಡು ನುಡಿ, ಸಂಸ್ಕೃತಿಗಳಿಗೆ ಸಂಬಂಧಿಸಿದ ಸಂಪದ್ಯುಕ್ತಶ್ರೀಯ ಅರಿವನ್ನು ನಾಡಿನ ಜನತೆಗೆ ಮಾಡಿಕೊಡುವ ಉದ್ದೇಶದಿಂದ ಈ ನಾಡಹಬ್ಬ ಆಚರಿಸುವದುಂಟು ಇದು ಗೌರವಯುತವಾದ ಕೆಲಸ. ನವರಾತ್ರಿಗೂ ಇದಕ್ಕೂ ನೇರವಾದ ಸಂಬಂಧವಿಲ್ಲದಿರಬಹುದು. ಆದರೂ ನಾಡಹಬ್ಬವನ್ನು ಆಚರಿಸುವದಕ್ಕೆ ಈ ಆಶ್ವೀಜಮಾಸದ ನವರಾತ್ರಿಯ ಶರದೋತ್ಸವದ ಕಾಲ ಬಹು ಯೋಗ್ಯವಾಗಿದೆ. ನಾಡಿನ ಕವಿಗಳು ಕಲಾವಿದರು ದಾರ್ಶನಿಕರು ತತ್ವವೇತ್ರರು ಮೊದಲಾದವರ ಬಗ್ಗೆ ಸರಿಯಾದ ತಿಳುವಳಿಕೆಯುಂಟಾಗಿ ಈ ಮೂಲಕ ಸಾಮಾನ್ಯರ ಜೀವನಾಡಿ ಮಿಡಿದು ರಾಷ್ಟ್ರೀಯ ಅಭಿಮಾನದಿಂದ ನಾಡಿನ ಘನತೆಯ ವಿಜಯ ವೈಜಯಂತಿಯನ್ನು ಜನತೆ ಸಂತೋಷದಿಂದ ಹಾರಿಸಬೇಕು” [10] ಎಂಬ ಮಾತಿಗೆ ನಾವು ಸಿದ್ದರಾಗಬೇಕಾಗಿದೆ. ಸಾಮಾಜಿಕ  ಬದುಕಿನೊಂದಿಗೆ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಈ ಹಬ್ಬದ ಮೂಲಕ ಹೆಚ್ಚಿಸಿಕೊಳ್ಳಬಹುದಾಗಿದೆ.[1] ಮಾನೌಮಿಯ ಚೌಪದ : ಎನ್. ಅನಂತರಂಗಾಚಾರ್ಯರು ಪು. ಮುನ್ನುಡಿ – ೪

 

[2] ಮಾನವಮಿ ಚೌಪದ – ಎನ್. ಅನಂತರಂಗಾಚಾರ್ಯರು ಪು. ಮುನ್ನುಡಿ ೫.

[3] ಜನಪದ ಸಾಹಿತ್ಯ ಸಮೀಕ್ಷೆ  – ಡಾ. ಜೀ. ಶಂ. ಪರಮಶಿವಯ್ಯ ಪು. ೫೫

[4] ಜೀವನ ಜೋಕಾಲಿ (ಚೌಪದನಗಳು, ಸಂ. ಡಾ. ಎಂ.ಎಸ್. ಸುಂಕಾಪುರ ಪು. ಮು. xi

[5] Journal of the Karnataka University, Vol III No.2, Page 122

[6] Journal of the K.U. D. Vol. III No. 3, Page 123

[7] ಕರ್ನಾಟಕ ಜನಪದ ಕತೆಗಳು – ಗೊ.ರಾ. ಚನ್ನಬಸಪ್ಪ, ಪು – ೬೮

[8] ಹಿಂದೂ ಧರ್ಮದ ಪರಿಚಯ – ಏದುರ್ಕುಳ ಶಂಕರ ನಾರಾಯಣ ಭಟ್, ಪುಟ ೩೭೦.

[9] ಹಿಂದೂಧರ್ಮದ ಪರಿಚಯ ಏದರ್ಕುಳ ಶಂಕರನಾರಾಯಣ ಭಟ್, ೩೬೭

[10] ಭಾರತದ ಹಬ್ಬ – ಹರಿದಿನಗಳು – ಡಿ.ಟಿ. ರಂಗಸ್ವಾಮಿ, ಪು. ೫೪