Categories
ಕನ್ನಡ ಕುವೆಂಪು ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ ರಾಷ್ಟ್ರಕವಿ ಕೃತಿ ಸಂಚಯ

ನರಿಗಳಿಗೇಕೆ ಕೋಡಿಲ್ಲ*

ತೀರ್ಥಹಳ್ಳಿಗೆ ನಾಲ್ಕೈದು ಮೈಲಿಗಳ ದೂರದಲ್ಲಿ ಒಂದು ಬೆಟ್ಟವಿದೆ. ಅದರ ಹೆಸರು ನವಿಲುಕಲ್ಲು. ಬೆಟ್ಟಕ್ಕೆ ಹಸುರಂಗಿ ತೊಡಿಸಿದಂತೆ ಕಾಡು ದಟ್ಟವಾಗಿ ಬೆಳೆದುಕೊಂಡಿದೆ, ಅದರ ನೆತ್ತಿಯಲ್ಲಿ ನಿಂತು ನೋಡಿದರೆ ಸುತ್ತಲೂ ಮೂವತ್ತು  ನಾಲ್ವತ್ತು ಮೈಲಿಗಳ ಚೆಲುವಾದ ಮಲೆನಾಡಿನ ಕಾಡುಗಳ ನೋಟವು ಕಂಗೊಳಿಸುತ್ತಿದೆ. ಕಾಡು ಹಬ್ಬಿಕೊಂಡ ಆ ಬೆಟ್ಟದ ಸಾಲುಗಳು ಅಲೆಯಲೆಯಾಗಿ, ಬಾನಿನ ಕರೆಯಲ್ಲಿ ಮುಸುಕಾಗಿ ಮೋಡಗಳನ್ನು ಒಂದರ ಮೇಲೊಂದು ಹೇರಿ ಗುಡ್ಡೆ ಹಾಕಿದಂತೆ ಕಾಣಿಸುತ್ತವೆ. ನಡುವೆ ಕಣಿವೆಗಳಲ್ಲಿ ಗದ್ದೆಗಳೂ ಅಡಿಕೆ ತೋಟಗಳೂ ಕಣ್ಣಿಗೆ ಮುತ್ತು ಕೊಡುವಂತೆ ಹಬ್ಬಿರುವುವು. ಮರಳಿ ಹೇಳುತ್ತೇನೆ: ಆ ಬೆಟ್ಟದ ಹೆಸರು ನವಿಲುಕಲ್ಲು!

ಇಂದಿಗೆ ಸುಮಾರು ಐವತ್ತೆರಡು ವರ್ಷಗಳ ಹಿಂದೆ ಆ ನಲಿಲುಕಲ್ಲಿನಲ್ಲಿ ಒಂದು ಗುಬ್ಬಚ್ಚಿಯ ಸಂಸಾರವಿತ್ತು, ಹೆಣ್ಣು ಗುಬ್ಬಚ್ಚಿಯ ಹೆಸರು ಗುಬ್ಬಕ್ಕ. ಗಂಡು ಗುಬ್ಬಚ್ಚಿಯ ಹೆಸರು ಗುಬ್ಬಣ್ಣ.

ಅವರಿಗಿದ್ದ ಮನೆ ಸವಿಯಾದ ಮನೆ. ಅದು ಒಂದು ಹೆಮ್ಮರದ ನೆತ್ತಿಯ ಕೊಂಬೆಯ ತುದಿಯಲ್ಲಿತ್ತು. ಗಾಳಿ ಬಂದಾಗ ಆ ಕೊಂಬೆ ತೊಟ್ಟಿಲಂತೆ ತೂಗುತ್ತಿತ್ತು. ಆಗ ಆ ಗಂಡು ಹೆಣ್ಣು ಹಕ್ಕಿಗಳೆರಡೂ ಹಾಡಿ ನಲಿಯುತ್ತಿದ್ದವು. ಅವರ ಮನೆಗೆ ಬೆಲ್ಲದ ಗೋಡೆ; ಸಕ್ಕರೆ ಬಾಗಿಲು; ಕಬ್ಬಿನ ಮುಚ್ಚಿಗೆ. ಮನೆಯ ಅಂಗಳದಲ್ಲಿ ಒಂದು ಪುಟ್ಟ ಸರೋವರ. ಅದರಲ್ಲಿ ನೀರಿರಲಿಲ್ಲ; ಜೇನುತುಪ್ಪವಿತ್ತು.

ಇಷ್ಟು ಸುಖಗಳಿದ್ದರೂ ಆ ಪಕ್ಷಿ ದಂಪತಿಗಳಿಗೆ ಮಕ್ಕಳಿರಲಿಲ್ಲ. ಗುಬ್ಬಣ್ಣನು ದೇವರಿಗೆ ಮೊರೆಯಿಟ್ಟು, ಹರಕೆ ಹೊತ್ತಮೇಲೆ ಮೂರು ಮಕ್ಕಳಾದರು. ಹರಕೆ ಸಲ್ಲಿಸುವುದಕ್ಕಾಗಿ ಅವನು ಕಾಶಿಗೆ ಯಾತ್ರೆ ಹೋದನು. ಗುಬ್ಬಕ್ಕನೊಬ್ಬಳೆ ಮಕ್ಕಳನ್ನು ನೋಡಿಕೊಂಡು ಸಂಸಾರವನ್ನು ಸಾಂಗವಾಗಿ ನಡೆಸಿಕೊಂಡು ಬರುತ್ತಿದ್ದಳು.

ಹೀಗಿರುತ್ತಿರಲು ಒಂದು ದಿನ ರಾತ್ರಿ ದೊಡ್ಡ ಮಳೆ ಬಂತು. ಮಳೆ ಎಂದರೆ ಮಲೆನಾಡಿನ ಮಳೆ! ಸೋನೆ ಮಳೆಯಲ್ಲ; ಆನೆ ಮಳೆ! ಅದರ ಜೊತೆಗೆ ಗುಡುಗು, ಮಿಂಚು, ಸಿಡಿಲು, ಬಿರುಗಾಳಿ, ಆಲಿಕಲ್ಲು. ಮೇಲೆ ಕಗ್ಗತ್ತಲು! ಪಾಪ, ಗುಬಕ್ಕ ಮನೆಯ ಸಕ್ಕರೆ ಬಾಗಿಲು ಬಲವಾಗಿ ಮುಚ್ಚಿ, ಸಿಹಿಮುತ್ತಿನ ಅಗಣಿ ಹಾಕಿ, ಎಲ್ಲಿ ಬೆಲ್ಲದ ಗೋಡೆ ಕರಗಿ ಹೋಗುವುದೋ ಎಂದು ಚಿಂತಿಸಿತ್ತಾ, ಮಕ್ಕಳನ್ನು ತೊಟ್ಟಿಲಲ್ಲಿ ತೂಗುತ್ತಿದ್ದಳು. ಅಯ್ಯೋ ಪಾಪ, ಅವರ ಮನೆಯ ಜೇನುತುಪ್ಪದ ಕೊಳವಂತೂ!

ಅದೇ ಸಮಯದಲ್ಲಿ  ಆ ಬೆಟ್ಟದ ಕಿಬ್ಬಿಯಲ್ಲಿ ಆ ಮಾರಿ ಮಳೆಗೆ ಸಿಕ್ಕಿಬಿದ್ದ ಮೂವರು ಪ್ರಯಾಣಿಕರು ಬಹಳ ನರಳುತ್ತ ಬರುತ್ತಿದ್ದರು. ಒಬ್ಬನ ಹೆಸರು ಹುಲಿಯಣ್ಣ; ಒಬ್ಬನ ಹೆಸರು ಕರಡ್ಯಣ್ಣ; ಒಬ್ಬನ ಹೆಸರು ನರಿಯಣ್ಣ. ಆ ಜಡಿಯಲ್ಲಿ ಮೂವರೂ ನಡುಗುತ್ತಿದ್ದರೂ. ಎಲ್ಲಿಯಾದರೂ ಒಂದು ಆಶ್ರಯ ಸಿಕ್ಕಿದರೆ ಸಾಕಲ್ಲಾ ಎಂದು ಭಗವಂತನನ್ನು ಬೇಡಿದರು. ಹೇಗೆಂದರೆ, ಹುಲಿಯಣ್ಣ ಕಾಡು ಕಂಪಿಸುವಂತೆ ಕೂಗಿದನು; ಕರಡ್ಯಣ್ಣ ಗರ್ಜಿಸಿದನು; ನರಿಯಣ್ಣ ಬಳ್ಳಿಕ್ಕಿದನು. ಅಂತೂ ಬಹಳ ಕಷ್ಟ ಪಟ್ಟು ಬೆಟ್ಟ ಹತ್ತಿದರು. ಅವರ ಕಣ್ಣಿಗೆ ಗುಬ್ಬಕ್ಕನ ಮನೆಯ ದೀಪ ಕಾಣಿಸಿತು. ಗುಬ್ಬಕ್ಕನು ತೊಟ್ಟಿಲು ತೂಗುತ್ತ ಹೇಳುತ್ತಿದ್ದ ಜೋಗುಳದ ಹಾಡೂ ಕೇಳಿಸಿತಂತೆ, ನರಿಯಣ್ಣನಿಗೆ. ಮನೆಯನ್ನು ಕಂಡಕೂಡಲೇ ಅವರಿಗೆಲ್ಲ ಬಹಳ ಸಂತೋಷವಾಯಿತು. ಪರಿಚಯವಿಲ್ಲದಿದ್ದರೂ ಕೂಡ ಕಷ್ಟಕಾಲವಾದ್ದರಿಂದ ಗುಬ್ಬಕ್ಕನ ಮನೆಗೆ ಹೋಗಲು ನಿಶ್ಚಯಿಸಿ ಮೂವರೂ ಓಡಿದರು. ಓಡಿ ಮನೆಯ ಚಾವಡಿಗೆ ಬಂದರು. ಮಳೆ ಹೋ ಎಂದು ಸುರುಯುತ್ತಿತ್ತು. ಮೀಂಚು ಮಿಂಚುತ್ತಿತ್ತು.

ನರಿಯಣ್ಣ ಬಾಗಿಲು ತಟ್ಟಿದನು. ಒಳಗೆ ಬೆದರಿ ಕುಳಿತಿದ್ದ ಗುಬ್ಬಕ ಹೆದರಿ ನಡುಗಿದಳು, ಯಾರೋ ಏನೋ ಎಂದು. ನರಿಯಣ್ಣ ಬಲವಾಗಿ ಬಾಗಿಲು ತಟ್ಟಿದನು.

ಗುಬ್ಬಕ್ಕ “ಯಾರಪ್ಪಾ ಅದು?” ಎಂದಳು.

ನರಿಯಣ್ಣ “ನಾನವ್ವಾ!” ಎಂದನು.

“ನಾನು ಎಂದರೆ?”

“ನಾನು! ನರಿಯಣ್ಣ!”

ಗುಬ್ಬಕ್ಕ ಬೆಚ್ಚಿದಳು. ನರಿಯಣ್ಣನ ದುಷ್ಕೀರ್ತಿ ಗುಬ್ಬಕ್ಕನ ಕಿವಿಗೂ ಕೂಡ ಮುಟ್ಟಿದ್ದಿತು. ಸ್ಪಲ್ಪ ಧೈರ್ಯ ತಂದುಕೊಂಡು “ಅಪ್ಪಾ, ಬಡವರ ಮನೆ! ಬಾಗಿಲನ್ನೇಕೆ ಹಾಗೆ ಬಡಿಯುತ್ತೀಯಾ?” ಎಂದಳು.

“ಅಕ್ಕಾ, ಮಳೆಯಲ್ಲಿ ಸಿಕ್ಕಿ ಸಾಕಾಗಿದೆ. ಬೆಳಗಾಗುವ ತನಕ ಸ್ಪಲ್ಪ ಜಾಗ ಕೊಟ್ಟರೆ ಸಾಕು” ಎಂದನು ನರಿಯಣ್ಣ.

“ಅಪ್ಪಾ, ಇಲ್ಲಿ ಜಾಗವಿಲ್ಲ. ಮೂವರು ಮಕ್ಕಳು ಬೇರೆ  ಇದ್ದಾರೆ. ನಮಗೇ ಕಾಲು ಚಾಚಿ ಮಲಗಲು ತಾವಿಲ್ಲ. ನೀನು ಹೀಗೆ ದೊಂಬಿ ಮಾಡಬೇಡ ಮಾರಾಯಾ! ಮಕ್ಕಳೆದ್ದಾರು!”

ನರಿಯಣ್ಣನಿಗೆ ಯಾರೂ ಬಾಗಿಲು ತೆಗೆಯುವುದಿಲ್ಲ ಎಂದುಕೊಂಡು ಹುಲಿಯಣ್ಣ “ಅಕ್ಕಾ ಗುಬ್ಬಕ್ಕ! ನಾನು ಹುಲಿಯಣ್ಣ, ಇದ್ದೇನೆ. ದಯವಿಟ್ಟು ಬಾಗಿಲು ತೆರೆ. ನಿನಗೇನೂ ಅಪಾಯ ಬರದಂತೆ ನೋಡಿಕೊಳ್ಳುತ್ತೇನೆ. ಹೆದರಬೇಡ. ನಮ್ಮ ಸಂಗಡ ಸಾಧು ಸಜ್ಜನನಾದ ಕರಡ್ಯಣ್ಣನೂ ಇದ್ದಾನೆ” ಎಂದು ಹೇಳಿ ಬಾಗಿಲನ್ನು ದಡಬಡ ಬಡಿಯುತ್ತಿದ್ದ ನರಿಯಣ್ಣನಿಗೆ “ಲೋ ನರಿಯಾ, ಯಾಕೋ ದೊಂಬಿ? ಸುಮ್ಮನಿರೋ” ಎಂದು ಒಂದು ಗುದ್ದು ಕೊಟ್ಟನು.

ಗುಬ್ಬಕ್ಕನಿಗೆ ಸ್ಪಲ್ಪ ಧೈರ್ಯ ಬಂದು ಬಾಗಿಲು ತೆರೆದಳು. ಮೂವರು ಅತಿಥಿಗಳೂ ಒಳಗೆ ಬಂದರು. ಕಾಲೆಲ್ಲಾ ಕೆಸರಾಗಿತ್ತು. ತೊಳೆದುಕೊಳ್ಳಲು ಬಿಸಿನೀರು ಕೊಟ್ಟಳು. ಮೈಯೆಲ್ಲ ಒದ್ದೆಯಾಗಿತ್ತು. ಒರಸಿಕೊಳ್ಳಲು ಮೈವಸ್ತ್ರ ಕೊಟ್ಟಳು. ಹೊಟ್ಟೆ ತುಂಬಾ ಹಸಿವೆಯಿತ್ತು. ಹೊಸ ಪೈರಿನ ಹಸನಾದ ಕಾಳನ್ನು ಬೇಯಿಸಿ ಮಾಡಿದ ಕೂಳನ್ನು ಬಡಿಸಿದಳು. ಮೂವರೂ ತಿಂದು ತೇಗಿದರು. ತರುವಾಯ ಮುರುವಿನ ಒಲೆಯ ಬಳಿ ಬೆಂಕಿಯ ಕಾವಿನಲ್ಲಿ ಒರಗಲು ಹುಲ್ಲಿನ ಹಾಸಿಗೆಗಳನ್ನೂ ಕೊಟ್ಟಳು.

ಮೂವರೂ ಅತಿಥಿಗಳೂ ಚಳಿ ಕಾಯಿಸಿಕೊಳ್ಳುತ್ತಿದ್ದರು. ಕರಡ್ಯಣ್ಣನು ಬೆಲ್ಲದ ಗೋಡೆಯ ಮೇಲೆ ತಗುಲಿಹಾಕಿದ್ದ ಮಹಾತ್ಮಾಗಾಂಧಿಯ ಪಟವನ್ನೂ, ಶ್ರೀ ರಾಮಕೃಷ್ಣ, ವಿವೇಕಾನಂದರ ಪಟವನ್ನೂ ನೋಡಿ, “ಇವೇಕೆ ಈ ಪಟಗಳು” ಎಂದು ಕೇಳಿದನು.

“ಮಕ್ಕಳು ಈ ಮಹಾಪುರುಷರ ಸನ್ನಿಧಿಯಲ್ಲಿಯೇ ಬೆಳೆದರೆ  ಅವರೂ ಮಹಾತ್ಮಾರಾಗುತ್ತಾರೆ. ಭರತ ಮಾತೆಯ ಉದ್ಧಾರ ಮಾಡುತ್ತಾರೆ. ಅದಕ್ಕೋಸ್ಕರ ಈ ಪಟಗಳನ್ನು ಇಟ್ಟಿದ್ದೇನೆ. ಅವರಿಗೆ ದಿನವೂ ಅವರ ಕಥೆಗಳನ್ನು ಜೋಗುಳದಂತೆ ಹೇಳುತೇನೆ. ಹಾಲು ಬೆಣ್ಣೆಗಳಲ್ಲಿ ಅವರ ಮಹಿಮೆಯನ್ನು ಊಡುತ್ತೇನೆ” ಎಂದಳು ಗುಬ್ಬಕ್ಕ.

“ಎಲ್ಲಿ? ನಿನ್ನ ಮಕ್ಕಳನ್ನು ನೋಡೋಣ!” ಎಂದನು ನರಿಯಣ್ಣ.

“ತೊಟ್ಟಿಲಲ್ಲಿ ಮಲಗಿ ನಿದ್ದೆ ಹೋಗಿದ್ದಾರೆ, ಬನ್ನಿ ನೋಡಿ” ಎಂದು ಗುಬ್ಬಕ್ಕನು ಅವರನ್ನು ಕರೆದುಕೊಂಡು ಹೋಗಿ ತೋರಿಸಿದಳು. ಮೂವರು ಮಕ್ಕಳೂ ಮಿಂಚಿನುಂಡೆಗಳಂತೆ ಹೊಳೆಯುತ್ತಿದ್ದರು. ಹುಲಿಯಣ್ಣ ಕರಡ್ಯಣ್ಣ ಇಬ್ಬರೂ ಸಂತೋಷಪಟ್ಟರು. ನರಿಯಣ್ಣನೂ ಬಹಳ ಸಂತೋಷಪಟ್ಟ!

ಎಲ್ಲರೂ ಮಲಗಿಕೊಂಡರು. ಕರಡ್ಯಣ್ಣ ಗೊರಕೆ ಹೊಡೆದದ್ದೂ ಹೊಡೆದದ್ದೆ! ಆದರೆ ಮಳೆ, ಗಾಳಿ, ಗುಡುಗು ಜೋರಾಗಿದ್ದುದರಿಂದ ಅದು ಯಾರಿಗೂ ತೊಂದರೆ ಮಾಡಲಿಲ್ಲ.

ನಸುಕು ಹರಿಯಿತು. ಮಳೆ ನಿಂತಿದ್ದಿತು. ಗುಬ್ಬಕ್ಕ ಎದ್ದು ಮನೆಯನ್ನು ಗುಡಿಸಿ, ರಂಗೋಲಿ ಹಾಕಿ, ಹಾಲು ಕರೆಯಲು ಕೊಟ್ಟಿಗೆಗೆ ಹೋದಳು. ಹುಲಿಯಣ್ಣ, ಕರಡ್ಯಣ್ಣ ಎದ್ದು ಹೋಗಲನುವಾದರು. ನರಿಯಣ್ಣನನ್ನು ಕರೆದರೆ, “ಆ! ಹೂ! ಊಹೂ!” ಎಂದು ಮಲಗಿಯೆ ಇದ್ದನು. ಪಾಪ, ನರಿಯಣ್ಣನಿಗೆ  ಬಹಳ ನಿದ್ದೆ ಎಂದು ತಿಳಿದು ಹುಲಿಯಣ್ಣ ಕರಡ್ಯಣ್ಣ ಹೊರಟು ಹೋದರು. ಯಜಮಾನಿ ಸಿಕ್ಕಲಿಲ್ಲವಾದುದರಿಂದ ನಮಸ್ಕಾರ ಹೇಳಲಿಲ್ಲ.

ಅವರು ಹೊರಟುಹೋದ ಮೇಲೆ ನರಿಯಣ್ಣನು ಮೆಲ್ಲಗೆ ಎದ್ದನು. ಮನೆಯಲ್ಲಿ ಯಾರೂ ಇರಲಿಲ್ಲ. ಗುಬ್ಬಕ್ಕನ ಮಕ್ಕಳು ಆಗತಾನೆ ಎದ್ದು ಅಳುತ್ತಿದ್ದವು. ನರಿಯಣ್ಣ ಮೂರು ಮಕ್ಕಳನ್ನೂ ನುಂಗಿ ಬೇಗ ಬೇಗನೆ ಸಕ್ಕರೆಯ ಬಾಗಿಲನ್ನು ಮುರಿದುಕೊಂಡು ಓಡಿಹೋದನು!

ಸ್ಪಲ್ಪ ಹೊತ್ತಾದ ಮೇಲೆ ಗುಬ್ಬಕ್ಕ ಹಾಲು ಕರೆದುಕೊಂಡು ಬಂದು ನೋಡಿತ್ತಾಳೆ, ಮಕ್ಕಳಿಲ್ಲ ! ಅತಿಥಿಗಳೂ ಇಲ್ಲ! ಗುಬ್ಬಕ್ಕ ಗೊಳೋ ಎಂದು ರೋದಿಸತೊಡಗಿದಳು. ಕಾಡಿನಲ್ಲಿ ಕೇಳುವವರಾರು? ಬಿಕ್ಕಿ ಬಿಕ್ಕಿ ಅತ್ತು ಕಡೆಗೆ ಕಳ್ಳರನ್ನು ಹುಡುಕಿಕೊಂಡು ಹೊರಟಳು. ಎಲ್ಲೆ;ಲ್ಲಿಯೋ ಹುಡುಕಿದಳು. ಯಾರಾರನ್ನೋ ಕೇಳಿದಳು. ಕಡೆಗೆ ಹಾರುತ್ತಿರುವಾಗ ದೂರ ಒಂದು ಪರ್ವತದ ತಪ್ಪಲಿನಲ್ಲಿ ಹುಲಿಯಣ್ಣ ಕರಡ್ಯಣ್ಣ ಹೋಗುತ್ತಿದ್ದುದನ್ನು ಕಂಡಳು. ಬೇಗ ಓಡಿಹೋಗಿ ತಡೆದಳು! ಅವರಿಗೆ ಆಶ್ಚರ್ಯವಾಯಿತು. “ಗುಬ್ಬಕ್ಕ, ಏಕೆ ಅಳುತ್ತೀಯಾ?” ಎಂದರು.

“ನೀವೆಲ್ಲ ಕಳ್ಳರು! ನನ್ನ ಮಕ್ಕಳನ್ನು ತಿಂದು ಬಂದಿದ್ದೀರಿ! ನಿಮಗೆ ಮಾಡಿದ ಉಪಕಾರಕ್ಕೆ ಇದೇನೆ ಪ್ರತ್ಯುಪಕಾರ? ಅಯ್ಯೋ!” ಎಂದು ಅತ್ತಳ

ಹುಲಿಯಣ್ಣನಿಗೆ ಎದೆ ಕರಗಿಹೋಯಿತು. ಕರಡ್ಯನಿಗೆ ಕಳವಳ ಹೆಚ್ಚಾಯಿತು. ಆಗ ಹೇಳಿದರು: ತಾವು ಬರುವಾಗ ನರಿಯಣ್ಣ ಅಲ್ಲಿಯೆ ಇದ್ದನೆಂದೂ, ಮಕ್ಕಳು ನಿದ್ದೆ ಮಾಡುತ್ತಿದ್ದವೆಂದೂ! ಕಡೆಗೆ ನರಿಯಣ್ಣನೆ ಆ ಘೋರಕೃತ್ಯವನ್ನು ಮಾಡಿರಬೇಕೆಂದು ನಿರ್ಧರಿಸಿ, ಗುಬ್ಬಕ್ಕನನ್ನೂ ಜೊತೆಯಲ್ಲಿ ಕರದುಕೊಂಡು ನರಿಯಣ್ಣನ ಪತ್ತೆಗೆ ಹೊರಟರು. ಹೊರಟು ಹುಡುಕಿದರು. ಎಲ್ಲಿಯೂ ಸಿಕ್ಕಲಿಲ್ಲ. ಕಡೆಗೆ ಎದುರಿಗೆ ಬರುತ್ತಿದ್ದ ಗೂಬಮ್ಮನನ್ನು ಕೇಳಿದರು. “ನರಿಯಣ್ಣ ಎರಡು ಮೈಲಿ ಆಚೆ ಓಡುತ್ತಿದ್ದ!” ಎಂದು ಗೂಬಮ್ಮ ಹೇಳಲು ಎಲ್ಲರೂ ಓಡಿದರು. ದೂರದಲ್ಲಿ ನರಿಯಣ್ಣ ಹೋಗುತ್ತಿದ. ಅವನು ಹುಲಿಯಣ್ಣ ಕರಡ್ಯಣ್ಣ ಜೊತೆಯಲ್ಲಿ ಗುಬ್ಬಕ್ಕನ್ನು ಕಾಣಲು ತನಗೆ ಕೇಡು ಬಂತ್ತೆಂದು ತಿಳಿದು ಓಟಕಿತ್ತನು.

ಆದರೆ ಹುಲಿಯಣ್ಣನು ಮಿಂಚಿನಂತೆ ಹಾರಿಹೋಗಿ ಹಿಡಿದನು. ಕರಡ್ಯಣ್ಣನು “ಕಳ್ಳಾ! ಒಳ್ಳೇ ಮಾತಿನಿಂದ ಗುಬ್ಬಕ್ಕನ ಮಕ್ಕಳನ್ನು ಕೊಡುತ್ತೀಯೋ ಇಲ್ಲವೋ” ಎಂದನು. ನರುಯಣ್ಣನು ಏನೂ ತಿಳಿಯದವನಂತೆ ನಟಿಸಿ, ತಾನು ನಿರಪರಾಧಿ ಎಂದು ವಾದಿಸಿದನು. ಗುಬ್ಬಕ್ಕನು ಗೊಳೋ ಎಂದು ಆಳೂತ್ತಲೇ ಇದ್ದಳು. ಹುಲಿಯಣ್ಣನು ಅಳುವುದನ್ನು ಸ್ಪಲ್ಪ ನಿಲ್ಲಿಸುವಂತೆ ಹೇಳಿ, ನರಿಯಣ್ಣನ ಹೊಟ್ಟೆಯ ಹತ್ತಿರ ಕಿವಿಯನ್ನು ಚಾಚಿ ಆಲೈಸಿದನು. ಒಳಗೆ ಚೀ! ಪೀ! ಸದ್ದು!! ಕಳ್ಳ ಸಿಕ್ಕಿದ ಎಂದು ಹುಲಿಯಣ್ಣ ನರಿಯಣ್ಣನನ್ನು ಹಿಡಿದುಕೊಂಡ! ನರಿಯಣ್ಣ ತಾನು ಕೆಟ್ಟೆನೆಂದು ತಿಳಿದು ಹಲ್ಲು ಹಲ್ಲು ಕಿರಿಯುತ್ತ ದಮ್ಮಯ್ಯ ಎಂದನು.

ಕರಡ್ಯಣ್ಣನ ಹುಲಿಯಣ್ಣನನ್ನನ್ನು ಕುರಿತು “ಅವನ ಹೊಟ್ಟೆಯನ್ನು ಸೀಳಿ ಮರಿಗಳನ್ನು ಈಚೆಗೆ ತೆಗೆ!” ಎಂದನು. ಹುಲಿಯಣ್ಣನು ನರಿಯಣ್ಣನನ್ನು ಕೆಳಗೆ ಹಾಕಿಕೊಂಡು ಮೇಲೆ ಕುಳಿತುಕೊಂಡನು; ನರಸಿಂಹನು ಹಿರಣ್ಯಕಶಿಪುವಿನ ಮೇಲೆ ಕುಳಿತಂತೆ. ಇನ್ನೇನು! ಹುಲಿಯಣ್ಣನು ತನ್ನ ಕ್ರೂರ ವ್ಯಾಘ್ರನಖಗಳಿಂದ ನರಿಯಣ್ಣನ ಹೊಟ್ಟೆ ಬಗೆಯಬೇಕು. ಅಷ್ಟರಲ್ಲಿ ನರಿಯಣ್ಣ ಗುಬ್ಬಕ್ಕನನ್ನು ಕುರಿತು “ಅಕ್ಕಾ, ಗುಬ್ಬಕ್ಕ! ನಿನ್ನ ದಮ್ಮಯ್ಯ! ನನ್ನನ್ನು ಕಾಪಾಡು. ನನಗೂ ಮಕ್ಕಳಿದ್ದಾರೆ!” ಎಂದನು. ಗುಬ್ಬಕ್ಕನ ಕರುಳು ಕರಗಿತು. ಎಷ್ಟಾದರೂ ಹೆತ್ತ ಹೆಣ್ಣಲ್ಲವೇ?

“ಹುಲಿಯಣ್ಣಾ, ಬೇಡ! ಬೇಡ! ಬಿಡು” ಎಂದಳು.

“ಹಾಗಾದರೆ ನಿನ್ನ ಮಕ್ಕಳು ಉಳಿಯುವುದು ಹೇಗೆ?” ಎಂದನು ಹುಲಿಯಣ್ಣ.

“ನಾನೊಂದು ಉಪಾಯ ಹೇಳುತ್ತೇನೆ” ಎಂದಳು ಗುಬ್ಬಕ್ಕ.

“ಏನದು?” ಎಂದನು ಕರಡ್ಯಣ್ಣ.

“ಹುಲಿಯಣ್ಣ ನರಿಯಣ್ಣನನ್ನು  ಹಿಡಿದುಕೊಳ್ಳಲಿ. ಕರಡ್ಯಣ್ಣ ಅವನ ಬೆನ್ನಿನ ಮೇಲೆ ಬಲವಾಗಿ ಒಂದು ಗುದ್ದು ಹೇರಲಿ. ಆಗ ನನ್ನ ಮಕ್ಕಳು ನರಿಯಣ್ಣನ ಬಾಯಿಂದ ಈಚೆಗೆ ಬೀಳುತ್ತಾರೆ!” ಎಂದಳು ಗುಬ್ಬಕ್ಕ.

ಸರಿ, ಹುಲಿಯಣ್ಣ ಹಿಡಿದುಕೊಂಡ. ಕರಡ್ಯಣ್ಣ ಹೇರಿದ! ಬಂದರು ಈಚೆಗೆ ಗುಬ್ಬಕ್ಕನ ಮೂರು ಮಕ್ಕಳು , ಚೀ, ಪೀ, ಚೀ, ಪೀ ಎನ್ನುತ್ತ!

ಆದರೆ ಮಕ್ಕಳ ಮೈತುಂಬ ನರಿಯಣ್ಣ ನ ಜೊಲ್ಲು ತುಂಬಿ ಹೋಗಿತ್ತು!

ಗುಬ್ಬಕ್ಕ ಮರಿಗಳನ್ನು ಎತ್ತಿಕೊಂಡು ಹರ್ಷದಿಂದ ಹೋದಳು, ತನ್ನ ಸವಿಯಾದ ಮನೆಗೆ, ಸ್ನಾನ ಮಾಡಿಸಿ, ಉಣ್ಣಲಿಕ್ಕಿ, ಮಲಗಿಸಲು! ಹುಲಿಯಣ್ಣನು ನರಿಯಣ್ಣನಿಗಿದ್ದ ಎರಡು ಕೋಡುಗಳನ್ನೂ ಶಿಕ್ಷೆಗಾಗಿ ಮುರಿದನು. ಕರಡ್ಯಣ್ಣನು “ಇನ್ನು ಮೇಲೆ ನಿನ್ನ ಜಾತಿಗೆ ಕೋಡುಗಳಿರದೆ ಹೋಗಲಿ” ಎಂದು ಶಾಪ ಕೊಟ್ಟನು.

ಅಂದಿನಿಂದ ನರಿಯ ಜಾತಿಗೆ ಕೋಡುಗಳಿಲ್ಲ!

 ಕುಣಿಯುತ ಬಾ, ಕಂದಯ್ಯ

 

ಕುಣಿಯುತ ಬಾ, ಕುಣಿಯುತ ಬಾ,
ಕುಣಿಯುತ ಬಾ, ಕಂದಯ್ಯ;
ತಂದೆತಾಯಿಯರ ಕಲೆಯ ಕಣ್‌ನವಿಲ
ಕುಣಿಸಿ ತಣಿಸಿ ಬಾ, ಕಂದಯ್ಯ.
ಮಲೆಯ ಅಡವಿಯಲಿ ಚಿಮ್ಮಿ ಜಿಂಕೆಮರಿ
ತನ್ನಮ್ಮನೆಡೆಗೆ ನೆಗೆವಂತೆ ಬಾ;
ಬೆಟ್ಟನೆತ್ತಿಯಿಂದುರುಳಿ ಕಲ್ಗಳಲಿ
ಸುತ್ತಿ ಸುಳಿವ ತೊರೆಯಂತೆ ಬಾ!

ಕಂಪುಸುಗ್ಗಿಯಾ ತಂಪುದೋಂಟದಲಿ
ಎಲರಿನೊಡನೆ ನಲಿವಲರಾಗಿ;
ಹೂ ತಳಿರಸೊಂಪು, ಹಕ್ಕಿಕೊರಲಿಂಪು,
ಹಡೆದವರ ಹೆಂಪು ನೀನಾಗಿ,
ಬದುಕನೊಲಿಸಿ ಬಾ, ಬಾಳ ನಲಿಸಿ ಬಾ,
ಎದೆಯನುಲಿಸಿ ಬಾ, ಕಂದಯ್ಯ;
ತಂದೆತಾಯಿಯರ ಕಲೆಯ ಕಣ್‌ನವಿಲ
ಕುಣಿಸಿ ತಣಿಸಿ ಬಾ, ಕಂದಯ್ಯ!


* ಐವತ್ತು ವರುಷಗಳ ಹಿಂದೆ ‘ಮಕ್ಕಳ ಪುಸ್ತಕ’ ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಥೆ