Categories
e-ದಿನ

ಫೆಬ್ರವರಿ-23

ಪ್ರಮುಖಘಟನಾವಳಿಗಳು:

1455: ಗುಟೆನ್ ಬರ್ಗ್ ಬೈಬಲ್ ಸುಲಭವಾಗಿ ಕೊಂಡೊಯ್ಯಬಹುದಾದ ರೀತಿಯಲ್ಲಿ ಮುದ್ರಣಗೊಂಡ ಪ್ರಥಮ ಪಾಶ್ಚಿಮಾತ್ಯ ಪುಸ್ತಕ ಎನಿಸಿತು.

1874: ಇಂಗ್ಲಿಷ್ ವ್ಯಕ್ತಿ ಮೇಜರ್ ವಾಲ್ಟೇರ್ ವಿಂಗ್ ಫೀಲ್ಡ್ ‘ಸ್ಪೆಯಿರಿಸ್ಟಿಕ್’ (Sphairistike’) ಹೆಸರಿನಲ್ಲಿ ‘ಲಾನ್ ಟೆನಿಸ್’ ಆಟಕ್ಕೆ ಪೇಟೆಂಟ್ ಪಡೆದರು.

1886: ಚಾರ್ಲ್ಸ್ ಮಾರ್ಟಿನ್ ಹಾಲ್ ಅವರು ಹಲವರು ವರ್ಷಗಳ ನಿರಂತರ ಪರಿಶ್ರಮದಿಂದ ಪ್ರಥಮ ಬಾರಿಗೆ ತಮ್ಮ ಕೈಯಾರೆ ಅಲ್ಯೂಮಿನಿಯಮ್ ತಯಾರಿಸಿದರು. ಇದು ಪ್ರಥಮ ಮಾನವ ನಿರ್ಮಿತ ಅಲ್ಯೂಮಿನಿಯಂ ಎನಿಸಿದೆ. ಈ ಕಾರ್ಯಕ್ಕೆ ಅವರಿಗೆ ಅವರ ಹಿರಿಯ ಸಹೋದರಿ ಜೂಲಿಯಾ ಬ್ರೈನಡ ಹಾಲ್ ಅವರು ಸಹಕಾರ ನೀಡಿದರು.

1905: ಚಿಕಾಗೋದ ಅಟಾರ್ನಿ ಜನರಲ್ ಮತ್ತು ಮೂವರು ಅಮೆರಿಕದ ಉದ್ಯಮಿಗಳು ಈ ದಿನದಂದು ಊಟಕ್ಕೆ ಜೊತೆ ಸೇರಿ ವಿಶ್ವದ ಪ್ರಥಮ ನಾಗರಿಕ ಸೇವಾ ಸಂಸ್ಥೆಯಾದ ‘ರೋಟರಿ ಕ್ಲಬ್’ ಸ್ಥಾಪಿಸಿದರು. ಒಬ್ಬರ ಬಳಿಕ ಮತ್ತೊಬ್ಬ ಸದಸ್ಯರ ಕಚೇರಿಗಳಲ್ಲಿ ಸಂಸ್ಥೆಯ ಸಭೆ ನಡೆಸುವ ಪದ್ಧತಿಯನ್ನು ಅನುಸರಿಸಿದ್ದರಿಂದ ಇದಕ್ಕೆ ‘ರೋಟರಿ’ ಎಂಬ ಹೆಸರು ಬಂತು. 1912ರಲ್ಲಿ ಇದರ ಹೆಸರು ‘ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ರೋಟರಿ ಕ್ಲಬ್ಸ್’ ಎಂದು ಬದಲಾಯಿತು. ಈಗಿನ ‘ರೋಟರಿ ಇಂಟರ್ ನ್ಯಾಷನಲ್’ ಎಂಬ ಹೆಸರನ್ನು 1922ರಲ್ಲಿ ಅಂಗೀಕರಿಸಲಾಯಿತು.

1917: ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ಪ್ರಥಮ ಪ್ರತಿಭಟನಾ ಸಭೆ ನಡೆಯಿತು. ಇದು ಫೆಬ್ರವರಿ ಕ್ರಾಂತಿಗೆ ಪ್ರಾರಂಭವೆನಿಸಿತು. ಆಗಿನ ದಿನಗಳಲ್ಲಿ ರಷ್ಯಾದಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಯಲ್ಲಿ ಇರಲಿಲ್ಲ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ದಿನ ಮಾರ್ಚ್ 8 ಎಂದಾಗುತ್ತದೆ.

1927: ಜರ್ಮನಿಯ ಭೌತವಿಜ್ಞಾನಿ ವೆರ್ನರ್ ಹೀಸೆನ್ ಬರ್ಗ್ ಅವರು ತಮ್ಮ ಸಹೋದ್ಯೋಗಿ ವುಲ್ಫ್ ಗ್ಯಾಂಗ್ ಪುಲಿ ಅವರಿಗೆ ಬರೆದ ಪತ್ರದಲ್ಲಿ, ಮೊಟ್ಟ ಮೊದಲ ಬಾರಿಗೆ ‘ಅನ್ಸರ್ಟನ್ಟಿ ಪ್ರಿನ್ಸಿಪಲ್’ ಕುರಿತಾಗಿ ವಿವರಿಸಿದ್ದರು.

1941: ಡಾ. ಗ್ಲೆನ್ ಟಿ. ಸೀಬೋರ್ಗ್ ಅವರು ಮೊದಲಬಾರಿಗೆ ಪ್ಲುಟೋನಿಯಮ್ ಉತ್ಪಾದಿಸಿ ಪ್ರತ್ಯೇಕಿಸಿದರು

1954: ಮಕ್ಕಳಿಗೆ ಸಲ್ಕ್ ವ್ಯಾಕ್ಸಿನ್ ರೂಪದಲ್ಲಿ ಪೋಲಿಯೋ ನಿರೋಧಕ ಲಸಿಕೆಯನ್ನು ಸಾರ್ವಜನಿಕವಾಗಿ ನೀಡುವ ಮೊಟ್ಟ ಮೊದಲ ಕಾರ್ಯಕ್ರಮ ಪಿಟ್ಸ್ ಬರ್ಗ್ ನಗರದಲ್ಲಿ ನಡೆಯಿತು.

1997: ಸ್ಕಾಟ್ ಲ್ಯಾಂಡಿನಲ್ಲಿ ವಿಜ್ಞಾನಿಗಳು ವಯಸ್ಕ ಸ್ತನಿಯ ತದ್ರೂಪು ಸೃಷ್ಟಿಯಲ್ಲಿ (ಕ್ಲೋನಿಂಗ್) ವಿಧಾನದಲ್ಲಿ ‘ಡಾಲಿ’ ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿದರು.

2007: ಅಲ್ಕಟೆಲ್-ಲುಸೆಂಟ್ ಸಂಸ್ಥೆ ಹಕ್ಕುಸ್ವಾಮ್ಯ ಹೊಂದಿದ್ದ ಆಡಿಯೋ ತಂತ್ರಜ್ಞಾನವನ್ನು ಕೃತಿ ಚೌರ್ಯ ಮಾಡ್ದಿದಕ್ಕಾಗಿ 15.2 ಕೋಟಿ ಡಾಲರ್ (ಸುಮಾರು 6800 ಕೋಟಿ ರೂಪಾಯಿ) ನಷ್ಟ ತುಂಬಿಕೊಡಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟು ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಗೆ ಆದೇಶ ನೀಡಿತು.

2007: ನಿತಾರಿ ಮಕ್ಕಳ ಸರಣಿ ಹತ್ಯೆ ಹಿನ್ನೆಲಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಸ್ತಿತ್ವಕ್ಕೆ ಬಂತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಕ್ಕಳ ಹಕ್ಕುಗಳ ಸೂಕ್ತ ಜಾರಿ ಹಾಗೂ ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಈ ಆಯೋಗ ನೋಡಿಕೊಳ್ಳುತ್ತಿದೆ.

2008: ಕನ್ನಡದ ಖ್ಯಾತ ಸಾಹಿತಿ ಯಶವಂತ ಚಿತ್ತಾಲ ಅವರಿಗೆ ಅವರ ಕಾರ್ಯಕ್ಷೇತ್ರವಾಗಿದ್ದ ಮುಂಬೈ ನಗರದಲ್ಲಿ, ಅಲ್ಲಿನ ಅಪಾರ ಸಂಖ್ಯೆಯ ಕನ್ನಡಿಗರ ಸಮಕ್ಷಮದಲ್ಲಿ, ಕರ್ನಾಟಕ ಸರ್ಕಾರದ ‘ಪಂಪ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2009: ‘ಸ್ಲಂಡಾಗ್ ಮಿಲಿಯನೇರ್’ ಚಿತ್ರಕ್ಕೆ ಸಂಗೀತ ನೀಡಿದ ಎ ಆರ್ ರೆಹಮಾನ್ ಅವರು ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇರಳದ ಕೊಲ್ಲಮ್ ಜಿಲ್ಲೆಯ ರಸೂಲ್ ಪೂಕುಟ್ಟಿ ಅವರು ಇದೇ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಸಂಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡರು.

2009: ಕನ್ನಡ ಚಲನಚಿತ್ರ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಒಕ್ಕೂಟವು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಆಯೋಜಿಸಿದ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಚಾಲನೆ ನೀಡಿದರು.

2010: ಉತ್ತರ ಇಟಲಿಯಲ್ಲಿ ಅಘೋಷಿತ ಪಾತಕಿಗಳ ತಂಡದವರು ಲ್ಯಾಂಬ್ರೋ ನದಿಗೆ 2.5 ಮಿಲಿಯನ್ ಲೀಟರ್ ಡೀಸೆಲ್ ಮತ್ತು ಇನ್ನಿತರ ಹೈಡ್ರೋ ಕಾರ್ಬನ್ ಅಂಶಗಳನ್ನು ಚೆಲ್ಲಿ ಪರಿಸರದ ವಿನಾಶಕ್ಕೆ ಕಾರಣೀಭೂತರಾದರು.

ಪ್ರಮುಖಜನನ/ಮರಣ:

1834: ಜರ್ಮನ್ ಅನ್ವೇಷಕ ಸಹಾರಾ ಮರುಭೂಮಿಯನ್ನು ಕಂಡುಹಿಡಿದ ಗುಸ್ತಾವ್ ನಾಚ್ಟಿಗಲ್ ಅವರು ಈಚ್ ಸ್ಟೆಡ್ಟ್ ಎಂಬಲ್ಲಿ ಜನಿಸಿದರು.

1884: ಪೋಲಿಷ್-ಅಮೆರಿಕನ್ ಜೀವ ರಸಾಯನ ತಜ್ಞ, ‘ವಿಟಮಿನ್ ಶಬ್ಧವನ್ನು’ ಬಳಕೆಗೆ ತಂದ ಕಾಸಿಮೀರ್ ಫಂಕ್ ಪೋಲೆಂಡ್ ದೇಶದ ವಾರ್ಸಾ ಎಂಬಲ್ಲಿ ಜನಿಸಿದರು.

1908: ಕನ್ನಡ ಚಿತ್ರರಂಗದ ಚಿತ್ರಕಥಾ ಸಾಹಿತಿ ಹಾಗೂ ಗೀತರಚನಕಾರರಾದ ಚಿ. ಸದಾಶಿವಯ್ಯನವರು ಜನಿಸಿದರು. ಅವರು ಹಲವಾರು ನಾಟಕ ಹಾಗೂ ಕಾದಂಬರಿಗಳನ್ನೂ ಬರೆದರು. ಕನ್ನಡ ಚಿತ್ರರಂಗದ ಸಾಹಿತಿ ಚಿ. ಉದಯಶಂಕರ್ ಹಾಗೂ ಚಿತ್ರ ನಿರ್ಮಾಪಕ ದತ್ತುರಾಜ್ ಚಿ. ಸದಾಶಿವಯ್ಯನವರ ಮಕ್ಕಳು.

1924: ದಕ್ಷಿಣ ಆಫ್ರಿಕಾ-ಅಮೆರಿಕನ್ ವೈದ್ಯ ವಿಜ್ಞಾನಿ ಅಲನ್ ಮೆಕ್ ಲಿಯಾಡ್ ಕಾರ್ಮ್ಯಾಕ್ ಅವರು ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ ನಗರದಲ್ಲಿ ಜನಿಸಿದರು. ‘ಎಕ್ಸ್-ರೇ ಕಂಪ್ಯೂಟೆಡ್ ಟೊಮೋಗ್ರಫಿ’ ಕುರಿತಾದ ಸಂಶೋಧನೆಗೆ ಇವರಿಗೆ 1979 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1821: ಕವಿ ಜಾನ್ ಕೀಟ್ಸ್ ರೋಮ್ನಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ನಿಧನರಾದರು.

1969: ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂದರ್ಯಗಳಿಂದ ಬೆಳಗಿದ ಕಲಾವಿದರಲ್ಲಿ ಒಬ್ಬರಾದ ಮಧುಬಾಲ ಮುಂಬೈನಲ್ಲಿ ನಿಧನರಾದರು. ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಪ್ರಸಿದ್ಧರಾಗಿದ್ದ ಇವರು ಥಿಯೇಟರ್ ಆರ್ಟ್ಸ್‌ ನಂತಹ ಹಲವು ಅಮೆರಿಕನ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು. 1952ರ ಆಗಸ್ಟ್‌ ಸಂಚಿಕೆಯಲ್ಲಿ, ಮಧುಬಾಲಾರ ಪೂರ್ಣಪುಟದ ಭಾವಚಿತ್ರದೊಂದಿಗಿನ ದೊಡ್ಡದೊಂದು ಲೇಖನ ಪ್ರಕಟಗೊಂಡಿತ್ತು. ಆ ಲೇಖನದ ಶೀರ್ಷಿಕೆ ಹೀಗಿದೆ: “ದಿ ಬಿಗ್ಗೆಸ್ಟ್ ಸ್ಟಾರ್ ಇನ್ ದಿ ವರ್ಲ್ಡ್ (ಅಂಡ್ ಶಿ ಈಸ್ ನಾಟ್ ಇನ್ ಬೆವೆರ್ಲಿ ಹಿಲ್ಸ್)” .

1973: ಅಮೆರಿಕದ ವೈದ್ಯ ವಿಜ್ಞಾನಿ ಡಿಕಿನ್ಸನ್ ಡಬ್ಲ್ಯೂ ರಿಚರ್ಡ್ಸ್ ಅವರು ಕನೆಕ್ಟಿಕಟ್ ಬಳಿಯ ಲೇಕ್ ವಿಲ್ಲೆ ಎಂಬಲ್ಲಿ ನಿಧನರಾದರು. ಕಾರ್ಡಿಯಾಕ್ ಕ್ಯಾತೆಟಿರೈಸೇಶನ್ ಕುರಿತಾದ ಸಂಶೋಧನೆಗೆ ಇವರಿಗೆ 1956 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2004: ಕೇಂದ್ರ ಮಂತ್ರಿಗಳಾಗಿದ್ದ ಸಿಕಂದರ್ ಭಕ್ತ್ ತಿರುವನಂತಪುರದಲ್ಲಿ ನಿಧನರಾದರು. ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿ, ವಿದೇಶಾಂಗ ಖಾತೆ ಸಚಿವರಾಗಿ ಮತ್ತು ರಾಜ್ಯಪಾಲರಾಗಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದ ಇವರಿಗೆ ಪದ್ಮವಿಭೂಷಣ ಗೌರವ ನೀಡಲಾಗಿತ್ತು.

2004: ಪ್ರಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ಮತ್ತು ನಟ ವಿಜಯ್ ಆನಂದ್ ನಿಧನರಾದರು. ಗೈಡ್, ಜಾನಿ ಮೇರಾ ನಾಮ್ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳನ್ನು ಇವರು ನಿರ್ದೇಶಿಸಿದ್ದರು.

2007: ರಂಗಭೂಮಿಯ ಕಲಾ ಕಣಜ ಎಂದೇ ಖ್ಯಾತರಾಗಿದ್ದ ರಂಗ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣ್ಣಿ ವೀರಭದ್ರಪ್ಪ ತಮ್ಮ 97ನೇ ವಯಸ್ಸಿನಲ್ಲಿ ಹೂವಿನ ಹಡಗಲಿ ಪಟ್ಟಣದಲ್ಲಿ ನಿಧನರಾದರು.

2011: ಧಾರ್ಮಿಕ ನಾಯಕಿ, ‘ಸಹಜ ಯೋಗ’ ಪದ್ಧತಿಯ ಪ್ರವರ್ತಕಿ ನಿರ್ಮಲ ಶ್ರೀವಾಸ್ತವ ಅವರು ಇಟಲಿಯ ಜಿನೋವಾ ಎಂಬಲ್ಲಿ ನಿಧನರಾದರು.

2013: ಭಾರತದಲ್ಲಿ ಪ್ರಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಎನಿಸಿರುವ ಲೋತಿಕಾ ಸರ್ಕಾರ್ ನವದೆಹಲಿಯಲ್ಲಿ ನಿಧನರಾದರು.

2015: ಪ್ರಥಮ ಹಿಂದೂ ಮತ್ತು ಎರಡನೇ ಮುಸ್ಲಿಮೇತರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ರಾಣಾ ಭಗವಾನ್ ದಾಸ್ ಕರಾಚಿಯಲ್ಲಿ ನಿಧನರಾದರು.