Categories
ಲೇಖನಗಳು ಸರೋಜಾ ಪ್ರಕಾಶ

ಬಾನಕಸ (ಸ್ಪೇಸ್ ಜಂಕ್)

ಬಾನಕಸ ಅಥವಾ ಸ್ಪೇಸ್ ಜಂಕ್ ಎಂದರೆ ಭೂಮಿಯ ಸುತ್ತಲೂ ತಿರುಗುತ್ತಿರುವ ವಿವಿಧ ಆಕಾರ, ಗಾತ್ರಗಳ ಅಸಂಖ್ಯಾತ ಕಸ ಮತ್ತು ಲೋಹದ ಚೂರುಗಳು. ಬೇರೆ ಬೇರೆ ಎತ್ತರಗಳಲ್ಲಿ, ಬೇರೆ ಬೇರೆ ವೇಗಗಳಲ್ಲಿ ತಿರುಗುತ್ತಿರುವ ಇವುಗಳಲ್ಲಿ ಹೆಚ್ಚಿನವು ಮಾನವ ನಿರ್ಮಿತ ಉಪಗ್ರಹಗಳ ಭಗ್ನಾವಶೇಷಗಳು. ಮೊದಮೊದಲು ಅಗಾಧವಾದ ಭೂಸುತ್ತಲ ಅವಕಾಶದಲ್ಲಿ ಈ ಚಿಕ್ಕ, ಪುಟ್ಟ ಕಸಗಳು ಏನೂ ಮಾಡಲಾರವು ಎಂಬ ಭಾವನೆ ಇತ್ತು. ಆದರೆ ಯಾವುದೇ ಗುರಿಯಿಲ್ಲದೆ ಬಾಹ್ಯಾಕಾಶದಲ್ಲಿ ಗಿರಕಿ ಹೊಡೆಯುತ್ತಿರುವ ಬಾನಕಸ ಭೂಮಿಯಿಂದ ಉಡಾವಣೆಯಾಗುತ್ತಿರುವ ಈಗಿನ ಕೃತಕ ಉಪಗ್ರಹಗಳಿಗೆ ಅಪಾಯಕಾರಿ ಎಂಬುದು ಸಾಬೀತಾಗಿದೆ. ಬಾಹ್ಯಾಕಾಶ ಸಂಶೋಧನೆ, ಭೂ ಮತ್ತು ಹವಾಮಾನ ಅಧ್ಯಯನ, ದೂರಸಂಪರ್ಕ ಇತ್ಯಾದಿ ಹಲವಾರು ಕ್ಷೇತ್ರಗಳ ಪ್ರಗತಿಯಿಂದಾಗಿ ದಿನದಿಂದ ದಿನಕ್ಕೆ ಉಪಗ್ರಹಗಳ  ಹಾರಾಟ ಹೆಚ್ಚುತ್ತಿದೆ, ಮಾನವಸಹಿತ ಮತ್ತು ಮಾನವರಹಿತ ಬಾನನೌಕೆಗಳು ಬಾಹ್ಯ ಜಗತ್ತಿನ ಶೋಧಕ್ಕೆ ಮುನ್ನುಗ್ಗುತ್ತಿವೆ, ಹಾಗೆಯೇ ಹಳೆಯ, ಆಯಸ್ಸು ಮುಗಿದ ಉಪಗ್ರಹಗಳನ್ನು ಕೈಬಿಡುವುದು ಕೂಡ ಅನಿವಾರ್ಯವಾಗಿದೆ. ಅವು ಭೂಸಂಪರ್ಕ ಕಳೆದುಕೊಂಡರೂ, ಅವುಗಳ ಬಿಡಿಭಾಗಗಳು ಕಳಚಿ ಚೂರಾಗಿ, ಅತಿನೇರಳೆ ಕಿರಣಗಳಿಗೆ ಸತತ ಸಿಕ್ಕು ಸವೆದರೂ ಲಕ್ಷಗಟ್ಟಲೆ ವರ್ಷಗಳವರೆಗೆ ಭೂಮಿಯ ಸುತ್ತ ತಮ್ಮ ಕಕ್ಷೆಯಲ್ಲಿ ಸುತುತ್ತಲೇ ಇರುತ್ತವೆ.

ಬಾನಕಸದ ಮೂಲಗಳು

ಬಾಹ್ಯಾಕಾಶ ತಂತ್ರಜ್ಷಾನ ಅಭಿವೃದ್ಧಿಗೊಂಡು ಅದನ್ನು ಸಂಪರ್ಕಸಾಧನವಾಗಿ ಬಳಸತೊಡಗಿದಾಗಿನಿಂದ ಬಾನಕಸದ ಸಮಸ್ಯೆ ಮನುಕುಲಕ್ಕೆ ಎದುರಾಗಿದೆ. ೧೯೫೭ ರಲ್ಲಿ ಸೋವಿಯೆತ್ ರಷ್ಯಾದ ಸ್ಪುಟ್ನಿಕ್ ಉಡಾವಣೆಯೊಂದಿಗೆ ಆರಂಭಗೊಂಡ ‘ಬಾಹ್ಯಾಕಾಶ ಯುಗ’ ದಲ್ಲಿ  ಇದುವರೆಗೆ ಸುಮಾರು ೬,೦೦೦ ಉಪಗ್ರಹಗಳು ಗಗನಕ್ಕೆ ಚಿಮ್ಮಿವೆ.  ಈಗ ೨೪೬೫ ಉಪಗ್ರಹಗಳು ಮಾತ್ರವೇ ಕ್ರಿಯಾಶೀಲವಾಗಿದ್ದು ಉಳಿದವೆಲ್ಲವೂ ಬಾನಕಸವಾಗಿ ಹಾರಾಟ ನಡೆಸಿವೆ. ಮಾನವ ಬಾಹ್ಯಾಕಾಶಕ್ಕೆ ಹಾರುವ ಮೊದಲು ‘ಸ್ಪುಟ್ನಿಕ್-೨’ ಉಪಗ್ರಹದಲ್ಲಿ ಪರೀಕ್ಷಾರ್ಥವಾಗಿ ಹಾರಿಬಿಟ್ಟ ಲೈಕಾ ನಾಯಿಯ ಅವಶೇಷಗಳೂ ಭೂಮಿಯನ್ನು ಸುತ್ತುಹಾಕುತ್ತಿವೆ.

ಬಹುಹಂತದ ಉಪಗ್ರಹ ಉಡಾವಣೆಯಲ್ಲಿ ರಾಕೆಟ್ಟುಗಳು ಉಪಗ್ರಹದಿಂದ ಕಳಚಿ ಬೀಳುತ್ತವೆ. ಅವುಗಳ ಇಂಧನ ಟ್ಯಾಂಕುಗಳಲ್ಲಿ ಉಳಿದಿರುವ ಅನಿಲರೂಪದ ಇಂಧನ ಹಿಗ್ಗಿ ಟ್ಯಾಂಕು ಸಿಡಿದು ಚೂರುಚೂರಾಗಿ ದೂರ ಹಾರುತ್ತವೆ.  ನಿವೃತ್ತಿಗೊಂಡ ಉಪಗ್ರಹಗಳು ಭೂಮಿಯಿಂದ ಸಂಪರ್ಕ ಕಳೆದುಕೊಂಡರೂ ಸತತವಾಗಿ ತಮ್ಮ ಕಕ್ಷೆಯಲ್ಲಿ ಹಾರುತ್ತಲೇ ಇರುತ್ತವೆ. ಇವು ಮುಂದೆ ಬಾನಕಸವಾಗುತ್ತವೆ. ಉಪಗ್ರಹಗಳೊಳಗಿರುವ ಕ್ಯಾಮೆರಾಗಳು, ಮಸೂರಗಳು, ಪ್ಲಾಸ್ಟಿಕ್ ಹಾಳೆಗಳು, ಲೋಹದ ವೈರು ಮತ್ತಿತರ ಉಪಕರಣಗಳು ಇವೆಲ್ಲವೂ ಕಾಲ ಕಳೆದಂತೆ ಬಿಡಿಗೊಂಡು ಬಾನಕಸಕ್ಕೆ ಸೇರ್ಪಡೆಗೊಳ್ಳುತ್ತವೆ.  ಉಡಾವಣೆಯಲ್ಲಿ ಬಳಸಿದ ಬಲವರ್ಧಕ ಉಪಕರಣಗಳು, ಭೂವಾತಾವರಣವನ್ನು ಹಾದುಹೋಗುವಾಗ ಉಷ್ಣತೆಯ ಒತ್ತಡಕ್ಕೆ ಸಿಕ್ಕು ಕಿತ್ತೆದ್ದ ಉಪಗ್ರಹದ ಮೇಲ್ಮೈನ ಬಣ್ಣದ ಹೊಪ್ಪಳಿಕೆಗಳು ಇವೂ ಕೂಡ ಬಾನಕಸವೆಂದೆನಿಸಿಕೊಳ್ಳುತ್ತವೆ.

ಭೂಸಮೀಪದ ಕಕ್ಷೆಗಳಲ್ಲಿ ಹಾರಾಡುವ ಬಾನಕಸಗಳಿಗೆ ಭೂಮಿಯ ಆಕರ್ಷಣೆಯ ಸೆಳೆತ ಇದ್ದೇ ಇರುತ್ತದೆ. ವಾಯುಮಂಡಲದ ಅಂಚಿನ ಅಲ್ಪ ಒತ್ತಡದಿಂದಾಗಿ ಅಲ್ಲಿ ಹಾರಾಡುತ್ತಿರುವ ವಸ್ತುಗಳು ದೀರ್ಘಕಾಲದ ನಂತರ ವೇಗವನ್ನು ಕಳೆದುಕೊಳ್ಳುತ್ತ ನಮ್ಮ ವಾಯುಮಂಡಲದೊಳಕ್ಕೆ ಪ್ರವೇಶ ಪಡೆಯುತ್ತವೆ, ಇಲ್ಲಿನ ವಾಯು ಒತ್ತಡದಲ್ಲಿ ಅವು ಉರಿದು ಭಸ್ಮವಾಗುತ್ತವೆ.

ಎತ್ತರದ ಕಕ್ಷೆಗಳಲ್ಲಿ ಈ ಪರಿಣಾಮ ಉಂಟಾಗುವುದಿಲ್ಲ. ಅಲ್ಲಿ ಸುತ್ತುತ್ತಿರುವ ಚೂರುಗಳು ದೀರ್ಘಕಾಲದವರೆಗೆ ಅಂದರೆ ಹತ್ತು, ನೂರು ಅಥವಾ ಸಾವಿರ ವರ್ಷಗಳವರೆಗೂ ಅದೇ ಸ್ಥಿತಿಯಲ್ಲಿರುತ್ತವೆ.

ಅಮೆರಿಕದ ಮಿಲಿಟರಿ ಸಂಸ್ಥೆಯೊಂದು ಭೂಮಿಯ ಮೇಲೆ ೨೫ ಕಡೆ ಸ್ಥಾಪಿಸಿದ ಉಪಕರಣಗಳ ‘ಬಾಹ್ಯಾಕಾಶ ವೀಕ್ಷಣಾ ಜಾಲ’ (Space Surveillance Network)  ಕಲೆಹಾಕಿದ ಮಾಹಿತಿಗಳ ಪ್ರಕಾರ ೧೦ ಸೆಮೀಗಿಂತ ದೊಡ್ಡದಾಗಿರುವ ಸುಮಾರು ೧೯ ಸಾವಿರದಷ್ಟು, ೧-೧೦ ಸೆಮೀನ ಸುಮಾರು ೫ ಲಕ್ಷದಷ್ಟು ಹಾಗೂ ೧ ಸೆಮೀಗಿಂತ ಚಿಕ್ಕದಾಗಿರುವ ಕೋಟಿಗಟ್ಟಲೆ ಕೃತಕ ವಸ್ತುಗಳು ಭೂಮಿಯನ್ನು ಸುತ್ತುತ್ತಿವೆ. ಇವುಗಳಲ್ಲಿ ದೊಡ್ಡವು ಟನ್ನುಗಟ್ಟಲೆ ತೂಕ ಹೊಂದಿದರೆ ಚಿಕ್ಕವು ನಾಲ್ಕೈದು ಕೆಜಿಯಷ್ಟಿರಬಹುದೆಂದು ಅಂದಾಜಿದೆ. ಸುಮಾರು ೨-೪ ಕೆಜಿಯಷ್ಟಿದ್ದ ಚೂರುಗಳು ಅತಿ ಹೆಚ್ಚಿದ್ದು ಇವೇ ಕಾರ್ಯನಿರತ ಉಪಗ್ರಹಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆಗಳಿವೆ.

ಈ ಭಗ್ನಾವಶೇಷಗಳಲ್ಲಿ ಹೆಚ್ಚಿನವು ಭೂ ಮೇಲ್ಮೈಯಿಂದ ಎರಡು ಸಾವಿರ ಕಿಮೀ ಸುತ್ತಳತೆಯಲ್ಲಿ ಹಾರಾಡುತ್ತಿವೆ. ಸುಮಾರು ೮೦೦-೮೫೦ ಕಿಮೀ ಎತ್ತರದ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವಿವಿಧ ಅಳತೆಗಳ ಚೂರುಗಳು ಕಂಡುಬರುತ್ತಿವೆ.  ಭೂಸಮೀಪದ ಕಕ್ಷೆಯಲ್ಲಿ ಈ ಚೂರುಗಳು ಸೆಕೆಂಡಿಗೆ ಸುಮಾರು ೭-೮ ಕಿಮೀ ವೇಗದಲ್ಲಿ ಗಿರಕಿ ಹೊಡೆಯುತ್ತಿವೆ. ಒಂದಕ್ಕೊಂದು ಢಿಕ್ಕಿ ಹೊಡೆದವೋ, ಮತ್ತಷ್ಟು ಚೂರುಗಳಾಗಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.

ಕಾಲಾಂತರದಲ್ಲಿ ಭೂಮಿಯ ಆಕರ್ಷಣೆಗೆ ಒಳಗಾಗಿ ಬಹುತೇಕ ಚೂರುಗಳು ವಾತಾವರಣವನ್ನು ಪ್ರವೇಶಿಸಿ ಉರಿದು ಭಸ್ಮವಾಗಲಿವೆ, ನಿಜ. ಆದರೆ ಬಾನಕಸ ಉಂಟಾಗುತ್ತಿರುವ ವೇಗಕ್ಕೆ ಹೋಲಿಸಿದರೆ, ಅವು ನಾಶವಾಗುವ ಪ್ರಕ್ರಿಯೆ ತುಂಬ ನಿಧಾನವಾಗಿ ಆಗುತ್ತಿದೆ. ಉದಾಹರಣೆಗೆ, ೨೦೦೭ರಲ್ಲಿ ಚೀನಾ ದೇಶ ‘ಎಂಟಿ ಸೆಟಲೈಟ್ ಆಪರೇಶನ್’ ಪ್ರಯುಕ್ತ ನಿವೃತ್ತಿಗೊಂಡ ಉಪಗ್ರಹವೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿ ೧ ಸೆಮೀನಷ್ಟು ಅಗಲದ ಒಂದೂವರೆ ಲಕ್ಷದಷ್ಟು ಚೂರುಗಳನ್ನು ಉಂಟುಮಾಡಿದೆ.

ಕಕ್ಷೆಯಲ್ಲಿರುವಾಗಲೇ ಎರಡು ಉಪಗ್ರಹಗಳು ಢಿಕ್ಕಿ ಹೊಡೆದು ಬಾನಕಸದ ಸಂಖ್ಯೆಯನ್ನು ಅಧಿಕಗೊಳಿಸಿದ ಘಟನೆ ೨೦೦೯ ರಲ್ಲಿ ನಡೆದಿದೆ. ವೇಗವಾಗಿ ಹಾರಾಟ ನಡೆಸಿದ್ದ ಅಮೆರಿಕದ ‘ಇರಿಡಿಯಮ್೩೩’ ಹಾಗೂ ರಷ್ಯಾದ ‘ಕಾಸ್ಮಾಸ್ ೨೨೫೧’ ಉಪಗ್ರಹಗಳು ಒಂದಕ್ಕೊಂದು ಬಡಿದು ಚೂರುಗಳಾಗಿ ಹರಡಿವೆ. ಈ ರೀತಿಯಾಗಿ ಒಂದಕ್ಕೆ ಇನ್ನೊಂದು, ಇನ್ನೊಂದಕ್ಕೆ ಮತ್ತೊಂದು ವಸ್ತು ಅಪ್ಪಳಿಸಿ ಸರಪಳಿ ಕ್ರಿಯೆ ಉಂಟಾಗಿ ಭೂಸುತ್ತಲ ಕಕ್ಷೆಗಳಲ್ಲಿ ಬರೀ ಉಪಗ್ರಹಕಸವೇ ತುಂಬಿ ಹೋಗಬಹುದಾದ ‘ಕೆಸ್ಲರ್ ಸಿಂಡ್ರೋಮ್’ ಎಂಬ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಗಗನನಡಿಗೆ ಮತ್ತು ಬಾನಕಸ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲುಸ್ತುವಾರಿಗೆಂದು ನೌಕೆಯ ಹೊರಗಡೆ ಗಗನ ನಡಿಗೆ ನಡೆಸಿದ ತಂತ್ರಜ್ಞರು ಹಲವು ಬಾರಿ ಕೈಯ್ಯಲ್ಲಿದ್ದ ಉಪಕರಣಗಳನ್ನು ಕಳೆದುಕೊಂಡಿದ್ದಾರೆ. ಅವೆಲ್ಲವೂ ಭೂಮಿಯ ಸುತ್ತ ಸುತ್ತುತ್ತಲೇ ಇವೆ. ಕೈಗವುಸು, ಸುನೀತ ವಿಲಿಯಮ್ಸ್ ಕೈಯ್ಯಿಂದ ಜಾರಿದ ಕ್ಯಾಮೆರಾ, ಸೌರಫಲಕವೊಂದರ ಮರುಜೋಡಣೆ ಮಾಡುವಾಗ ಜಾರಿ ಹಾರಿಹೋದ ಫಲಕದ ಹಲಗೆ ಇತ್ಯಾದಿ.

ಹತ್ತು ವರ್ಷಗಳಿಂದ ಭೂವಾತಾವರಣದಿಂದ ೨೫೦-೩೨೦ ಕಿಮೀ ಎತ್ತರದಲ್ಲಿ ಹಾರಾಟ ನಡೆಸುತ್ತಿರುವ ‘ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ (ಇದೂ ಕೂಡ ಭೂಪ್ರದಕ್ಷಿಣೆ ಹಾಕುತ್ತಿರುವ ಕೃತಕ ಉಪಗ್ರಹವೇ, ಆದರೆ ಇದರ ವಿಶೇಷತೆ ಏನೆಂದರೆ ಕಳೆದ ೧೦ ವರ್ಷಗಳಿಂದ ಇದರಲ್ಲಿ ಸತತವಾಗಿ ಮಾನವ ವಾಸ್ತವ್ಯ ನಡೆದಿದೆ.) ಅನೇಕ ಬಾರಿ ಈ ಅಪಾಯವನ್ನು ಎದುರಿಸಿದೆ. ದೊಡ್ಡ ಚೂರೊಂದು ನೌಕೆಗೆ ಅಪ್ಪಳಿಸುವ ಸಾಧ್ಯತೆಗಳು ಕಂಡುಬಂದಾಗ ನೌಕೆಯ ಎತ್ತರವನ್ನು ಬದಲಿಸಿ, ಅದರೊಳಗಿರುವ ತಂತ್ರಜ್ಞರು ಸುರಕ್ಷಿತ ಸ್ಥಾನವನ್ನು ಸೇರಿಕೊಳ್ಳುವಂತೆ ಸೂಚಿಸಲಾಗುತ್ತದೆ. ಅತಿ ದೀರ್ಘ ಕಾಲ ಭೂ ಪ್ರದಕ್ಷಿಣೆ ಮಾಡಿದ ಮೀರ್ ಬಾಹ್ಯಾಕಾಶ ನೌಕೆಯ ಮೇಲ್ಮೈ ಅನೇಕ ಕಡೆ ಬಾನಕಸದಿಂದ ಘಾಸಿಗೊಂಡಿರುವ ಗುರುತುಗಳನ್ನು ಚಿತ್ರಗಳು ತೋರಿಸಿವೆ.

ಪರಿಹಾರ

ಭೂಮಿಗೆ ಬಂದು ಬೀಳಬಹುದಾದ ಬಾನಕಸದ ಬಗ್ಗೆ ಕೆಲವು ಸಂಸ್ಥೆಗಳು ಅಧ್ಯಯನ ನಡೆಸಿವೆ. ಉಪಗ್ರಹ ತಯಾರಿಸುವ ಸಂಸ್ಥೆಗಳು ಬಾನಕಸದ ಢಿಕ್ಕಿಯಿಂದ ತೊಂದರೆಗೊಳಗಾಗದ ಹಾಗೆ ಉಪಗ್ರಹಗಳ ಹೊರಭಾಗಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ. ಹಾಗೆಯೇ ಮಾನವಕೃತ ಬಾನಕಸ ಅಧಿಕಗೊಳ್ಳದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಒಂದು ಪರಿಹಾರವಾಗಿ ಉಪಗ್ರಹಗಳ ಕ್ರಿಯಾಶೀಲತೆ ಕಡಿಮೆಯಾಗುತ್ತಲೇ ಅವುಗಳನ್ನು ಆದಷ್ಟು ಭೂಸಮೀಪದ ಕಕ್ಷೆಗಳಿಗೆ ಇಳಿಸಬೇಕು. ಅಲ್ಲಿ ಅವು ಶೀಘ್ರವಾಗಿ ಭಗ್ನಗೊಂಡು, ಅವಶೇಷಗಳು ವಾಯುಮಂಡಲದ ಪ್ರಭಾವಕ್ಕೆ ಸಿಕ್ಕು ಪತನಗೊಳ್ಳುವ ಸಾಧ್ಯತೆಗಳು ಹೆಚ್ಚು.

ಈಗಿರುವ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ರಾಷ್ಟ್ರಗಳು ಪ್ರತ್ಯೇಕವಾಗಿ ಬಾನ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತಿಲ್ಲ. ಆದ್ದರಿಂದ ಸಮಸ್ತ ದೇಶಗಳು ಒಂದಾಗಿ ಈ ಸಮಸ್ಯೆಯನ್ನು ಎದುರಿಸಬೇಕಿದೆ.