Categories
ಬುಡಕಟ್ಟುಗಳು ಸಂಸ್ಕೃತಿ-ಪರಂಪರೆ

ಬುಂಡೇಬೆಸ್ತರು

ಬುಂಡೇಬೆಸ್ತರಲ್ಲಿ ಇಂದಿಗೂ ಜೀವಂತವಾಗಿರುವ ಆಚರಣೆಯಲ್ಲಿ ದೇವದಾಸಿ ಪದ್ಧತಿಯೂ ಒಂದು. ಆಧುನಿಕ ಸಮಾಜದ ಜೊತೆ ಸಮಾನಾಗಿ ನಿಲ್ಲಬಲ್ಲ ಸಾಮಾರ್ಥ್ಯವನ್ನು ಹೊಂದಿರುವ ಬೇಡ ಬುಡಕಟ್ಟು; ಪರಿಶಿಷ್ಟಜಾತಿಯ ಹೊಲೆಯ ಹಾಗೂ ಮಾದಿಗ ಸಮುದಾಯಗಳು ಮತ್ತು ಕೆಳವರ್ಗದ ಒಂದೆರಡು ಸಮುದಾಯಗಳು ದೈವಗಳ ಹೆಸರಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ದೇವರ ಹೆಸರಲ್ಲಿ ದಾಸಿಯರನ್ನಾಗಿ ಮಾಡುವ ಅನಿಷ್ಟ ಮತ್ತು ಅಮಾನವೀಯ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಈಗ ಮೇಲುನೋಟಕ್ಕೆ ಇದು ಕಾಣುವುದಿಲ್ಲವಾದರೂ ಒಳಗೊಳಗೆ ರಹಸ್ಯವಾಗಿ ತಮ್ಮ ಮನೆ ದೇವತೆಗಳಿಗೆ ಹರಕೆ ಮಾಡಿಕೊಂಡು ಹೆಣ್ಣು ಮಕ್ಕಳಿಗೆ ಭರತ ಹುಣ್ಣಿಮೆ ಮತ್ತು ಕಾಳ ಹುಣ್ಣಿಮೆ ದಿನಗಳಂದು ಗುಡಿಗೆ ಹೋಗಿ ಪೂಜಾರಿಯಿಂದ ಮುತ್ತು ಕಟ್ಟಿಸಿಕೊಂಡು ಬರುವುದು ಸಾಮಾನ್ಯವಾಗಿದೆ. ಈ ಪದ್ಧತಿ ಅವರಿಗೆ ಯಾವುದೇ ಗೌರವ ಮತ್ತು ಸಾಮಾಜಿಕ ಸ್ಥಾನಮಾನವನ್ನು ನೀಡುವುದಿಲ್ಲ. ಆದರೆ ವಂಶ ಪಾರಂಪರ್ಯವಾಗಿ ಬಂದ ಪದ್ಧತಿಯನ್ನು ತಪ್ಪಿಸಿದರೆ ಅಮ್ಮ ಕೋಪಿಸಿಕೊಂಡು ಇಡೀ ಮನೆತನವನ್ನೇ ಸರ್ವನಾಶ ಮಾಡಿಬಿಡುತ್ತಾಳೆ ಎಂದು ಹೆದರುತ್ತಾರೆ. ಆದ್ದರಿಂದ ಇಂತಹ ಆಧುನಿಕ ಯುಗದಲ್ಲಿ ದೇವದಾಸಿ ಪದ್ಧತಿ ಯಾವುದೇ ಅಳುಕು ಹಾಗೂ ಮುಜುಗರವಿಲ್ಲದೆ ನಡೆಯುತ್ತಿರುವುದು ಆ ಸಮುದಾಯಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಅವಮಾನದ ಸಂಗತಿಯೇ ಸರಿ.

ಪುರೋಹಿತಶಾಹಿಗಳು ಮತ್ತು ಭೂಮಾಲಿಕರು ದೇವರ ಹೆಸರಲ್ಲಿ ತಮ್ಮ ಸ್ವಾರ್ಥಕ್ಕಾಗಿ ಮಾಡಿ ಕೊಂಡಿರುವುದೆ ದೇವದಾಸಿ ಬಿಡುವ ಪದ್ಧತಿಯ ಉದ್ದೇಶ ಎಂದು ಹೇಳಿದರೆ ತಪ್ಪಾಗಲಾರದು. ವಿಪರ್ಯಾಸವೆಂದರೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಗುಟ್ಟಾಗಿ ಮನೆಯ ಒಳಗಿರಿಸಿ ಕೆಳವರ್ಗದ ಸಾವಿರಾರು ಹೆಣ್ಣುಮಕ್ಕಳ ಬದುಕಿನೊಡನೆ ಚೆಲ್ಲಾಟ ಹಾಡಿದ ಪರಿ ಹೇಯವಾದುದು. ದುರದೃಷ್ಟವಶಾತ್‌ ಈ ಸಮುದಾಯಗಳು ಅದನ್ನೆ ಒಂದು ರೀತಿ ‘ದೇವರ ವರ’ ವೆಂದು ಸ್ವೀಕರಿಸಿ ತಲೆ ತಲೆಮಾರಿನಿಂದಲೂ ನಡೆಸಿಕೊಂಡು ಬರುತ್ತಿರುವುದು ಪುರೋಹಿತರು ಮತ್ತು ಭೂಮಾಲೀಕರು ಇವರ ಮೇಲೆ ಹೇರಿರುವ ಭಯ ಎಷ್ಟು ಗಾಢವಾದುದು ಎಂದು ಅರ್ಥವಾಗುತ್ತದೆ. “ನೀರಿಗಿಳಿದವನಿಗೆ ಮಳೆಯಾದರೇನು, ಚಳಿಯಾದರೇನು” ಎಂಬಂತೆ ಒಮ್ಮೆ ಈ ಪದ್ಧತಿಗೆ ಶರಣಾಗಿ ಸಾರ್ವಜನಿಕ ಮನ್ನಣೆಯನ್ನು ಪಡೆದುಕೊಂಡು ಅದರ ಸುಖವನ್ನು ಅನುಭವಿಸಿದವರಿಗೆ ಬೇರೆ ಯಾವುದರ ಅರಿವು ಇರುವುದು ದುರ್ಲಭ.

ಬಹುಮುಖ್ಯವಾಗಿ ಅವರ ಸುಂದರ ಬದುಕಿಗೆ ಕಿಚ್ಚು ತಮ್ಮ ತೀಟೆ, ತೆವಲನ್ನು ತೀರಿಸಿಕೊಳ್ಳಲು ದೈವದ ಹೆಸರನ್ನು ಬಳಸಿಕೊಂಡ ಪುರೋಹಿತಶಾಹಿ ಮತ್ತು ಭೂಮಾಲೀಕ ವರ್ಗದ ಹುನ್ನಾರಗಳನ್ನು ಈ ಸಮುದಾಯಕ್ಕೆ ಆರ್ಥೈಸಿ ಹೇಳಬೇಕಾಗಿದೆ. ಅಂದು ತಮ್ಮ ಬದುಕಿಗೆ ತಾವೇ ದ್ರೋಹವೆಸಗಿಕೊಂಡುದರ ಪರಿಣಾಮ ಇಂದಿಗೂ ತಮ್ಮ ವಂಶದ ಕುಡಿಗಾಳಾದ ಹೆಣ್ಣುಮಕ್ಕಳು ಗಂಡ, ಮನೆ, ಮಕ್ಕಳು ಎಂದು ನೆಮ್ಮದಿಯಿಂದ ಬಾಳಿ ಬದುಕಲು ಸಾಧ್ಯವಾಗಿಲ್ಲ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಯಾವುದೇ ಬುಡಕಟ್ಟು ಮತ್ತು ಕೆಳವರ್ಗಗಳು ತಪ್ಪಿಯೋ ಅಥವಾ ಒಪ್ಪಿಯೋ ಒಂದು ಜೀವನ ಕ್ರಮವನ್ನು ರೂಢಿಸಿಕೊಂಡರೆಂದರೆ ಅದು ಹಿರಿಯರು ಹಾಕಿದ ಕಾನೂನು ಅಥವಾ ಶಾಸನಕ್ಕೆ ಸಮಾನ, ಅದರಿಂದ ಅವರಿಗೆ ಅಪಮಾನ, ಅವಜ್ಞೆ, ಅನಾಧಾರ, ಅಲಕ್ಷ್ಯ, ಅನಾಥಪ್ರಜ್ಞ, ಅನಾರೋಗ್ಯ ಏನೆಲ್ಲಾ ಎದುದಾರಾದರೂ ಅದು ನಮ್ಮ ಹಣೆಬರಹ ಎಂದು ಬಹಳ ಹಗುರವಾಗಿ ಪರಿಗಣಿಸಿಬಿಡುತ್ತಾರೆ. ಇಂತಹ ನಿರ್ಧಾರಗಳು ಬುಡಕಟ್ಟುಗಳ ಲಕ್ಷಣಗಳಲ್ಲಿ ಒಂದು. ಇದಕ್ಕೆ ಪೂರಕವಾಗಿ ಬುಡಕಟ್ಟೇತರ ಸಮುದಾಯಗಳು ಹೇಗೆ ಕಾಲ- ಕಾಲಕ್ಕೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಾರೆ, ಎಂಬುದಕ್ಕೆ ಒಂದು ಉದಾಹರಣೆ ಈಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಮುದ್ರವನ್ನು ದಾಟಿ ಹೋಗುವುದಕ್ಕೆ ಬ್ರಾಹ್ಮಣರಲ್ಲಿ ನಿಷೇಧವಿತ್ತು. ಒಂದು ಪಕ್ಷ ನಿಷೇಧವನ್ನು ಮೀರಿದರೆ ಜಾತಿಯಿಂದ ಬಹಿಷ್ಕಾರ ಹಾಕಲಾಗುತ್ತಿತ್ತು. ಆದರೆ ಸ್ವಾತಂತ್ರ್ಯ ಭಾರತದಲ್ಲಿ ಸಮುದ್ರವನ್ನು ದಾಟಿ ಹೋದವರಲ್ಲಿ ಬ್ರಾಹ್ಮಣರ ಪ್ರಮಾಣ ಶೇಕಡ ೯೮% ಎಂದು ಹೇಳಿದರೆ ಆಶ್ಚರ್ಯವಾಗದಿರದು. ಅಂದರೆ ಯಾವುದೇ ಬದ್ಧತೆಗೆ ಕಟ್ಟು ಬೀಳದೆ ಅನುಕೂಲವಾಗುವ ಎಂತಹ ಕ್ರಮವನ್ನಾದರೂ ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಳ್ಳುವುದು ಈ ಸಮುದಾಯಗಳ ಗುಣವೆಂಬುದು ಸ್ಪಷ್ಟ.

ವರ್ತಮಾನದ ಜೀವನಾವರ್ತನ ಆಚರಣೆಗಳು

ಸಾಮಾನ್ಯವಾಗಿ ಜಗತ್ತಿನ ಪ್ರತಿಯೊಂದು ಧರ್ಮ ಹಾಗೂ ವರ್ಗದ ಜನರು ಕುಟುಂಬದಲ್ಲಿ ಆಗಲಿರುವ ಬಹಳ ಸಂತಸ ಹಾಗೂ ಸಡಗರದಿಂದ ನಿರೀಕ್ಷೀಸುವರು. ಹಾಗೆಯೆ ನಾಮಕರಣ, ಋತುಮತಿಶಾಸ್ತ್ರ, ಮದುವೆ, ಆನಂತರದ ಒಸಗೆಶಾಸ್ತ್ರ, ಸೀಮಂತ, ಸಾವು ಹೀಗೆ ಮನುಷ್ಯನ ಹುಟ್ಟಿನಿಂದ ಆರಂಭಗೊಂಡು ಸಾವಿನ ಅನಂತರದಲ್ಲೂ ಹಲವಾರು ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ಆಚರಣೆಯನ್ನು ನೇರವೇರಿಸುವುದು ರೂಢಿಯಲ್ಲಿದೆ. ಈ ಪ್ರತಿಯೊಂದು ಆಚರಣೆಯಲ್ಲಿ ಅದರದೇ ಆದ ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ಡಾರೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಬುಂಡೇಬೆಸ್ತರು ಸಮುದಾಯದಲ್ಲಿ ಇರಬಹುದಾದ ಬುಡಕಟ್ಟು ಲಕ್ಷಣಗಳನ್ನು ಗುರ್ತಿಸುವುದು ಸಾಧ್ಯವಿದೆ.

ಹುಟ್ಟು

ಕುಟುಂಬಕ್ಕೆ ಸೇರ್ಪಡೆಯಾಗಲಿರುವ ಹೊಸದೊಂದು ಜೀವಕ್ಕಾಗಿ ನೀರೀಕ್ಷಿಸುವ  ಕ್ಷಣಗಳು ಸಂತೋಷದಾಯಕವು ಹಾಗೂ ಆರ್ಥಪೂರ್ಣವೂ ಆಗಿರುತ್ತದೆ. ಆದರೆ ಬುಡಕಟ್ಟು ಮೂಲದ ಸಮುದಾಯಗಳು ಅದೊಂದು ಸಹಜ ಪ್ರಕ್ರಿಯೆ ಎಂದು ಗ್ರಹಿಸುತ್ತಾರೆ. ಬುಂಡೇಬೆಸ್ತರಲ್ಲಿ ಹೆರಿಗೆ ಅಥವಾ ಮಗುವಿನ ಜನನವನ್ನು ಮನೆ ಅಥವಾ ತಾವಿರುವ ವಾಸದ ನೆಲೆಯಲ್ಲೇ ಹಿರಿಯ ಮಹಿಳೆ ಅಥವಾ ಸೂಲಿಗಿತ್ತಿಯ ಸಹಾಯದಿಂದ ಮಾಡಿಸುವರು. ಮಾಸಲನ್ನು ಮಣ್ಣಿನ ಕುಡಿಕೆ ಅಥವಾ ಗಡಿಗೆಯಲ್ಲಿ ಹಾಕಿ ಹಳ್ಳತೋಡಿ ಹೂಳುತ್ತಾರೆ. ಹಾಗೂ ಮಗು ಹುಟ್ಟಿದ ಸಂತಸದ ಸುದ್ದಿಯನ್ನು ಬಂಧು – ಬಳಗದವರಿಗೆ ತಿಳಿಸುವುದುಂಟು. ಮಗುವಿನ ತಂದೆ ಮನೆಯವರಿಗೆ ಸುದ್ಧಿ ತಿಳಿದಕೂಡಲೇ ಬಾಣಂತಿಗೆ ‘ಕಾರ ತರುವ ಪದ್ಧತಿ’ ಇದೆ. ಈ ಕುರಿತು ಮುಂದೆ ಪ್ರಸ್ತಾಪಿಸಲಾಗಿದೆ. ಸೂಲಿಗಿತ್ತಿಯು ಮಗು ಅನಂತರ ತಾಯಿಗೆ ಬಿಸಿ ನೀರಿನಿಂದ ಸ್ನಾನ ಮಾಡಿಸಿ ಲೋಬಾನದ ಹೊಗೆಯಿಂದ ಶಾಖ ಕೊಡುವಳು.

ಸೂತಕ ಕಳೆಯುವುದು

ಸಾಮಾನ್ಯವಾಗಿ ಬುಂಡೇಬೆಸ್ತರಲ್ಲಿ ಹುಟ್ಟಿನ ಸೂತಕ ಮೂರು ದಿನಗಳವರೆಗೆ ಇರುತ್ತದೆ. ಕೆಲವೊಮ್ಮೆ ಐದು ದಿನಗಳವರೆಗೂ ಇರುವುದುಂಟು . ಈ ಸೂತಕವು ದಾಯಾದಿಗಳು ಅಂದರೆ ಸೋದರರೆಲ್ಲರಿಗೂ ಸಂಬಂಧಪಡುತ್ತದೆ. ಈ ಮೂರು ಅಥವಾ ಐದನೇ ದಿನಗಳವರೆಗೂ ಬೇರೆಯವರು ಮನೆಗೆ ಬರುವಂತಿಲ್ಲ. ಇವರು ಸಹಾ ಬೇರೆಯವರ ಮನೆ ಒಳಗೆ ಹೋಗುವುದು ನಿಷೇಧ. ಸೂತಕ ಕಳೆಯುವುದಕ್ಕೆ ಪೂರಕವಾಗಿ ಮನೆಗೆಲ್ಲಾ ಸುಣ್ಣ ಹಚ್ಚುವುದು ಮನೆ ಅಥವಾ ತಾವಿರುವ ನಲೆಯನ್ನು ಗುಡಿಸಿ, ಸಾರಿಸಿ ಮಡಿವಾಳರಿಂದ ಮನೆಗೆ ಗೋಮೂತ್ರ ಪ್ರೋಕ್ಷಣೆ ಮಾಡಿಸಿಕೊಂಡಾಗ ಸೂತಕ ಕಳೆಯುತ್ತದೆ. ಇದು ಇಂದಿಗೂ ರೂಢಿಯಲ್ಲಿದೆ.

ನಾಮಕರಣ

ಹುಟ್ಟಿದ ಮಗುವಿಗೆ ನಾಮಕರಣ ಅಥವಾ ಹೆಸರಿಡುವ ಶಾಸ್ತ್ರವನ್ನು ಒಂದು ತಿಂಗಳ ಬಳಿಕ ಅವರವರ ಅನುಕೂಲಕ್ಕೆ ತಕ್ಕಂತೆ ಏರ್ಪಡಿಸುವರು. ಮಗುವಿನ ಹುಟ್ಟಿದ ಸಮಯವನ್ನು ಪುರೋಹಿತರಿಗೆ ತಿಳಿಸಿ ಒಂದು ಶುಭ ನಕ್ಷತ್ರ- ರಾಶಿಯನ್ನು ತಿಳಿಸುಕೊಳ್ಳುವುದು ರೂಢಿಯಲ್ಲಿದೆ. ನಾಮಕರಣಕ್ಕಾಗಿ ಶುಭದಿನವನ್ನು ನಿಗದಿಪಡಿಸುವರು. ಅಂದು ಬಂಧು- ಬಳಗದವರನ್ನು ವಿಶೇಷವಾಗಿ ಆಹ್ವಾನಿಸುವರು. ಸ್ನಾನ -ಮಡಿ ಮಾಡಿ ಸಂಜೆಯ ಸಮಯ ಮನೆಯಲ್ಲಿ ಒಂದೆಡೆ  ಸೇರುವರು. ಆನಂತರ ನಾಮಕರಣದ ಕಾರ್ಯಕ್ರಮ ಆರಂಭವಾಗುತ್ತದೆ. ಮೊದಲಿಗೆ ಸೋದರತ್ತೆಯು ಮೊದಲಿಗೆ ಕಿವಿಯಲ್ಲಿ ಮೂರು ಬಾರಿ ಹೆಸರನ್ನು ಕರೆಯಬೇಕು. ಕೆಲವು ಪ್ರದೇಶಗಳಲ್ಲಿ ಸೋದರತ್ತೆಯಲ್ಲದೆ ಸೋದರಮಾವ, ಅಳಿಯ ಮಗುವಿನ ಕಿವಿಯಲ್ಲಿ ಮೂರು ಬಾರಿ ಹೆಸರನ್ನು ಹೇಳಿಸುವುದುಂಟು. ಬಳಿಕ ಎಲೆ, ಆಡಿಕೆ, ಹಣ್ಣು, ಕೊಬ್ಬರಿ ಮತ್ತು ಐದು ಅಥವಾ ಹನ್ನೊಂದು ರೂಪಾಯಿಯು ಗಂಟನ್ನು ಸೋದರತ್ತೆಯು ಬಾಯಿಂದ ಕಚ್ಚಿಕೊಂಡು ಹೊರಗೆ ಬರಬೇಕು. ಆ ಸಂದರ್ಭದಲ್ಲಿ ಬಂದಿರುವ ನೆಂಟರಿಷ್ಟರು ತಮಾಷೆಗಾಗಿ ಬಟ್ಟೆಯಿಂದ ಹೊಡೆಯುವುದುಂಟು. ಬಳಿಕ ಸಿಹಿ ಊಟದ ವ್ಯವಸ್ಥೆ ಮಾಡುವರು. ಮಗುವು ಆಗಾಗ ರೋಗ ರುಜಿನಗಳಿಂದ ಬಳಲುತ್ತಿದ್ದರೆ ಅಥವಾ ಪದೇ ಪದೇ ಏನಾದರೂ ತೊಂದರೆಗೆ ಒಳಗಾಗುತ್ತಿದ್ದರೆ. ತಕ್ಷಣ ಹೆಸರನ್ನು ಬದಲಾಯಿಸುವ ಕ್ರಮವಿದೆ. ಇವರು ಇಡುವ ಹೆಸರುಗಳು ಈ ರೀತಿ ಇದೆ. ಎಲ್ಲಪ್ಪ, ಗಂಗಪ್ಪ, ಚೌಡಯ್ಯ, ನೀಲಪ್ಪ, ದ್ಯಾವಪ್ಪ, ಬಸಪ್ಪ, ಹುಲುಗಪ್ಪ, ನಾಗಪ್ಪ, ಸಿದ್ಧಪ್ಪ, ಪರುಸಪ್ಪ, ನಿಂಗಪ್ಪ, ಹೆಣ್ಣುಮಕ್ಕಳಿಗೆ ಗಾಳೆಮ್ಮ, ನಿಂಗಮ್ಮ, ಗಂಗಮ್ಮ, ನೀಲವ್ವ, ಎಲ್ಲವ್ವ, ಚೌಡವ್ವ, ದುರುಗಮ್ಮ, ಹುಲಿಗೆಮ್ಮ, ಮಾರಮ್ಮ ಎಂದು ಕೆರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಮೂಲ ಹೆಸರಿನ ಜೊತೆಗೆ ಅದುನಿಕವಾದ ಹೆಸರನ್ನು ಕರೆದು ಕೊಳ್ಳುವುದು ರೂಢಿಗೆ ಬಂದಿದೆ.

ಋತುಮತಿ ಶಾಸ್ತ್ರ

ಹೆಣ್ಣು ಪ್ರಬುದ್ಧಳಾದ ಪ್ರಕ್ರಿಯೆ ಋತುಮತಿಯಾಗುವುದು ಅಂದರೆ ಸಂತಾನೋತ್ಪತ್ತಿಗೆ ಸಿದ್ಧಳಾಗಿದ್ದಾಳೆ ಎಂಬುದರ ಸಂಕೇತ. ಈ ಸಂದರ್ಭವನ್ನು ಸಹ ಪ್ರತಿಯೊಂದು ಕುಟುಂಬವು ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ಶಾಸ್ತ್ರವನ್ನು ಮಾಡುವ ಕ್ರಮವಿದೆ. ಬುಂಡೇಬೆಸ್ತರಲ್ಲಿ ಹೆಣ್ಣು ಮಗಳೊಬ್ಬಳು   ಋತುಮತಿಯಾಗಿದ್ದಾಳೆ. ಎಂಬುದನ್ನು ತಿಳಿದ ಕೂಡಲೇ ಸೋದರ ಮಾವನಿಂದ  ಹಳ್ಳ ತೆಗಿಸಿ ಸೋದರ ಅತ್ತೆ ಇಲ್ಲವೆ ಮುತ್ತದೆಯರಿಂದ ಆರಿಶಿನ ಸ್ನಾನ ಮಾಡಿಸುವರು. ನೀರೆಲ್ಲಾ ಹಳ್ಳದಲ್ಲಿ ಶೇಖರಣೆಯಾದ ಬಳಿಕ ಅದನ್ನು ಮುಚ್ಚಿಸುವರು. ಈ ನೀರನ್ನು ಯಾರು ದಾಟಬಾರದು ಎಂಬ ನಂಬಿಕೆ ಇದೆ.

ಈ ಸೂತಕವು ಸಹಾ ಮೂರು ದಿನದ್ದಾಗಿರುತ್ತದೆ. ಅವಳನ್ನು ಪ್ರತ್ಯೇಕವಾಗಿ ಇರಿಸಿ ಯಾರು ಮುಟ್ಟಿಸಿಕೊಳ್ಳುವುದಿಲ್ಲ. ಒಂಭತ್ತು. ಹನ್ನೊಂದು ಅಥವಾ ಹದಿನಾರನೇಯ ದಿನದಂದು ಆರತಿಶಾಸ್ತ್ರ ಮಾಡುವರು. ಅಂದು ಋತುಮತಿಯಾದ ಹೆಣ್ಣುಮಗಳಿಗೆ ಆರಿಶಿನ ಹಚ್ಚಿ ಸ್ನಾನ ಮಾಡಿಸುವರು. ಸೋದರಮಾವ ಅಥವಾ ತಾಯಿಯ ಮನೆಯವರು ತಂದ ಹೊಸ ಬಟ್ಟೆಯನ್ನು ಉಡಿಸಿ ಬಂಧು -ಬಳಗದವರು ಸೇರಿ ಆರತಿ ಮಾಡಿ, ಸೋಬಾನೆ ಹೇಳುವರು, ಬಂದವರು ತಮ್ಮ ಶಕ್ತಾನುಸಾರ ಉಡುಗೊರೆಯನ್ನು ನೀಡುವರು. ಬಳಿಕ ಬಂಧು – ಬಳಗದವರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಒಪ್ಪಂದಶಾಸ್ತ್ರ

ಮದುವೆಗೆ ಮುಂಚಿತವಾಗಿ ಗಂಡಿನ ಮನೆಯವರು ಹೆಣ್ಣು ಕೊಡುವವರ ಜೊತೆ ಮಾಡಿಕೊಳ್ಳುವ ಒಂದು ಕರಾರು. ಇದನ್ನು ವೀಳ್ಯಾಶಾಸ್ತ್ರ ಅಥವಾ ಹೂವು ಮುಡಿಸುವುದು ಎಂದು ದಕ್ಷಿಣ ಕರ್ನಾಟಕದಲ್ಲಿ ಉತ್ತರ  ಕರ್ನಾಟಕದಲ್ಲಿ ಉಡಿ ತುಂಬುವುದು ಅಥವಾ ಸೀರೆ ಉಡಿಸುವುದು ಎನ್ನುವರು. ಅಕ್ಕನ ಮಗಳು, ಸೋದರಮಾವ ಮತ್ತು ಅತ್ತೆ ಮಗಳನ್ನು ಮದುವೆಯಾಗುವುದು ಬುಂಡೇಬೆಸ್ತರಲ್ಲಿರುವ ಪದ್ಧತಿಯಾಗಿದೆ. ಮೊದಲಿಗೆ ಹಿರಿಯರು ಹೆಣ್ಣನ್ನು ನೋಡಿ ಒಪ್ಪಿಗೆ ನೀಡಿದ ಬಳಿಕ ಪರಸ್ಪರ ಮಾತುಕತೆ ನಡೆಯುವುದು. ಒಂದು ಶುಭ ದಿನದಂದು ಕುಲದ ಹಿರಿಯರು ಜೊತೆಗೂಡಿ ಹೆಣ್ಣಿನ ಮನೆಗೆ ಹೋಗಿ ಹೊಸ ಬಟ್ಟೆಯನ್ನು ಕೊಟ್ಟು ಹಣ್ಣು, ಕಾಯಿ, ಎಲೆ, ಅಡಿಕೆ, ಹೂವನ್ನು ಉಡಿ ತುಂಬುವರು. ಅಂದಿನಿಂದ ಹೆಣ್ಣು ತಮ್ಮದಾಯಿತು ಎಂಬುದರ ಸಂಕೇತವೇ ಈ ಉಡಿ ತುಂಬುವ ಶಾಸ್ತ್ರದ ಉದ್ದೇಶ. ಈ ಶುಭ ಸಂದರ್ಭದಲ್ಲಿ ಹೆಣ್ಣು ಮತ್ತು ಗಂಡಿನ ಕಡೆಯವರು ಪರಸ್ಪರ ಸಕ್ಕರೆ ಮಿಶ್ರಿತ  ಕಡ್ಲೆಪುಡಿಯನ್ನು ಹಂಚಿಕೊಳ್ಳುವರು. ಕಾರ್ಯಕ್ರಮದ ಅನಂತರ ಸಿಹಿ ಊಟದ ವ್ಯವಸ್ಥೆ ಇರುತ್ತದೆ. ಈ ಒಪ್ಪಂದದ ಅನಂತರ ಯಾವುದೇ ಕಾರಣಕ್ಕೂ ಹೆಣ್ಣನ್ನು ತಿರಸ್ಕರಿಸುವಂತಿಲ್ಲ. ಹಾಗೇನಾದರೂ ಮದುವೆ ಮಾಡಿಕೊಳ್ಳಲು ನಿರಾಕರಿಸಿದರೆ ಪಂಚಾಯ್ತಿ ಸೇರಿ ದಂಡ ವಿಧಿಸುತ್ತಾರೆ. ಏಕೆಂದರೆ ನಿಶ್ಚಿತಾರ್ಥದ ಬಳಿಕ ಮದುವೆಯು ನಿಂತು ಹೋದರೆ ಆ ಹೆಣ್ಣನ್ನು ಬೇರೆಯವರು ಮದುವೆ ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಆದ್ದರಿಂದ ಕುಲದ ಹಿರಿಯರು ಮದುವೆಯ ಒಪ್ಪಂದದ ವಿಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುವರು. ಇಂದಿಗೂ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಈ ಶಾಸ್ತ್ರವು ಮುಂದುವರಿದೆದೆ. ಈ ಶಾಸ್ತ್ರವು  ಮುಗಿದ ಬಳಿಕ ಗಂಡಿನ ಮತ್ತು ಹೆಣ್ಣಿನ ಮನೆಯವರು ತಮಗೆ ಸೂಕ್ತವಾದ ಒಂದು ಶುಭ ದಿನವನ್ನು ನಿಗಧಿಪಡಿಸಿ ಬಂಧು -ಬಳಗದವರಿಗೆ ತಿಳಿಸುವರು.

ಮದುವೆ

ಮದುವೆಯಾಗಲಿರುವ ಗಂಡಿನ ಮನೆಯ ಮುಂದೆ ತೆಂಗಿನ ಗರಿ ಮತ್ತು ಮಾವಿನ ಸೊಪ್ಪಿನಿಂದ ಚಪ್ಪರ ಹಾಕುವರು. ಒಂದು ದಿನ ಮುಂಚಿತವಾಗಿಯೇ ಹೆಣ್ಣಿನ ಮನೆಯವರು ಬಂದು ಕುಲ ದೇವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಾರೆ. ಅವರಿಗೆ ನೀರು ಮತ್ತು ಬೆಲ್ಲ ನೀಡಿ ಸ್ವಾಗತಿಸುವುದು ಗಂಡಿನ ಮನೆಯವರ ಕರ್ತವ್ಯ. ದಣಿದು ಬಂದವರಿಗೆ ಆಯಾಸ ತಣಿಯಲೆಂದು ಮಾಡುವ ಉಪಚಾರ ಇದಾಗಿದೆ. ಇಂದು ಅದೊಂದು ಸಂಪ್ರದಾಯವಾಗಿ ಮುಂದುವರೆದಿದೆ. ಮದುವೆಯ ಹಿಂದಿನ ದಿನ ಗಂಡು -ಹೆಣ್ಣು ಇಬ್ಬರನ್ನು ಮದಲಿಂಗರನ್ನು ಮಾಡವರು. ಈ ಎಲ್ಲಾ ಕ್ರಿಯಾದಿಗಳನ್ನು ಕುಲದ ದೇವರ ಗುಡಿಯಲ್ಲಿ ಅಥವಾ ಪೂಜಾರಿ ಮನೆಯಲ್ಲೇ ಮಾಡುತ್ತಾರೆ. ಇದಕ್ಕೂ ಮೊದಲೇ ಅಕ್ಕಿ, ಬೇಳೆ, ಬೆಲ್ಲವನ್ನು ಪರಸ್ಪರರು ಕಳುಹಿಸಿಕೊಡುವುದುಂಟು. ಇದನ್ನು ‘ಬೀಜಬುತ್ತಿ’ ಕಳುಹಿಸುವುದು ಎನ್ನುತ್ತಾರೆ. ಒಳಕಲ್ಲು, ಬೀಸುವಕಲ್ಲು, ಹಂದರ, ಪೂಜೆ ಮಾಡಿಸಿದ ಬಳಿಕ ಗಂಡು ಮತ್ತು ಹೆಣ್ಣನ್ನು ಧಾನ್ಯಗಳ ಮೇಲೆ ಕೂರಿಸಿ ಅರಿಶಿನ ಹಚ್ಚುತ್ತಾ ಶಾಸ್ತ್ರ ಮಾಡುವರು.

ಬೆಳಿಗ್ಗೆ ವಧು- ವರ ಇಬ್ಬರಿಗೂ ‘ಸುರಿಗೆ ನೀರು’ ಹಾಕುವರು. ಅಂದರೆ ನೀರು ತುಂಬಿದ ನಾಲ್ಕು ಕೊಡಗಳನ್ನು ಇರಿಸಿ ಅವುಗಳಿಗೆ ಹಳದಿ ದಾರವನ್ನು ಸುತ್ತಿ ಪೂಜಿಸುವರು. ಅನಂತರ ವರನ ಅಕ್ಕ ತಂಗಿ ಮತ್ತು ವಧುವಿನ ಅಕ್ಕ ಅಥವಾ ತಂಗಿಯರು ಬಂದು ಸುರಿಗೆ ನೀರನ್ನು ಹಾಕಿ ಸ್ನಾನ ಮಾಡಿಸುವರು. ಬಳಿಕ ಪ್ರತ್ಯೇಕವಾದ ಕೊಠಡಿಗಳಿಗೆ ಕರೆದುಕೊಂಡು ಹೋಗಿ ಇಬ್ಬರಿಗೂ ಉಡುಗೆ- ತೊಡುಗೆಗಳಿಂದ ಅಲಂಕರಿಸಿ ಮದುವೆ ಮಂಟಪಕ್ಕೆ ಕರೆತರುವರು. ವಧುವನ್ನು ಮಾತ್ರ ಸೋದರಮಾವ ಕೈಹಿಡಿದು ಕರೆತರುತ್ತಾನೆ. (ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾರಣ ಸೋದರಮಾವ  ಅಂದು ವಧುವನ್ನು ಎತ್ತಿಕೊಂಡು ಬಂದು ಮದುವೆ  ಮಂಟಪದಲ್ಲಿ ಕೂರಿಸುವುದು ಸಾಮಾನ್ಯವಾಗಿತ್ತು. ಇಂದು ಬಾಲ್ಯವಿವಾಹ ಇಲ್ಲ ಬದಲಿಗೆ ಸೋದರಮಾವ ವಧುವನ್ನು ಕೈಹಿಡಿದು ಕರೆತರುವುದು ಒಂದು ಸಂಪ್ರದಾಯವಾಗಿ ಮುಂದುವರೆದಿದೆ). ಪುರೋಹಿತರು ಮಂತ್ರವನ್ನು ಹೇಳಿದ ಆನಂತರ ವಧು- ವರರಿಗೆ ಹಾಲು- ತುಪ್ಪ ಎರೆಯುವರು. ಅಂದರೆ ವಧು- ವರರನ್ನು ಎದುರು ಬದುರಾಗಿ ಕೂರಿಸಿ ವರನ ಕೈಯ ಮೇಲೆ ವಧುವಿನ ಕೈಯಿರಿಸಿ ಎಲೆ ಅಡಿಕೆ ಮತ್ತು ತೆಂಗಿನ ಕಾಯಿಯನ್ನಿಡುತ್ತಾರೆ. ಮೊದಲಿಗೆ ವಧು- ವರರ ತಂದೆ-ತಾಯಿಯಂದಿರು ಹಾಲು ತುಪ್ಪ ಎರೆದು ಅಕ್ಷತೆ ಹಾಕಿದ ಮೇಲೆ ಉಳಿದವರೆಲ್ಲರೂ ಹಾಲು ತುಪ್ಪ ಎರೆದು ಅಕ್ಷತೆ ಹಾಕುವರು.

ಹಾಲು ತುಪ್ಪ ಹಾಕುವ ಶಾಸ್ತ್ರದ ಅನಂತರದ್ದೇ ತಾಳಿಕಟ್ಟುವ ಕಾರ್ಯಕ್ರಮ. ಪುರೋಹಿತನು ಹೇಳಿಕೊಟ್ಟ ಮಂತ್ರವನ್ನು ವರನು ಪುನರುಚ್ಚರಿಸುತ್ತಾನೆ. ಹತ್ತಾರು ಜನ ಹಿರಿಯರಿಂದ ತಾಳಿಯನ್ನು ಮುಟ್ಟಿಸಿದ ಬಳಿಕ ವಧುವಿಗೆ ತಾಳಿಯನ್ನು ಕಟ್ಟುವನು. ನೆರೆದಿರುವ ಜನರೆಲ್ಲರೂ ಅಕ್ಷತೆಯನ್ನು ವಧು- ವರರ ಮೇಲೆ ಹಾಕುವ ಮೂಲಕ ಆರ್ಶೀವದಿಸುತ್ತಾರೆ. ನವ ವಧು- ವರರು ಸೂರ್ಯನಿಗೆ ನಮಸ್ಕಾರ ಮಾಡಬೇಕು. ಅನಂತರ ಇಬ್ಬರನ್ನು ಕೂರಿಸಿ ಹಾಲು- ತುಪ್ಪ ನೀರಿನಲ್ಲಿ ಉಂಗುರವನ್ನು ಹುಡುಕುವ ಆಟ, ಆಡಿಕೆಯನ್ನು ಕೈಯಲ್ಲಿ ಮುಚ್ಚಿಟ್ಟುಕೊಂಡು ಸರಿ- ಬೆಸ ಆಟ (ಸರಿಸಂಖ್ಯೆ ಬೆಸಸಂಖ್ಯೆ ಆಟ), ತೊಟ್ಟಿಲು ಆಟ (ಬಟ್ಟೆಯ ತೊಟ್ಟಿಲಲ್ಲಿ ಕಲ್ಲು ಹಾಕಿ ವಧು- ವರರಿಂದ ತೂಗಿಸುವುದು) ವನ್ನು ಹಿರಿಯ ಹೆಣ್ಣು ಮಕ್ಕಳು ಆಡಿಸುವರು. ಈ ಪ್ರತಿಯೊಂದು ಆಟದಲ್ಲೂ ವರನೇ ಗೆಲ್ಲುವಂತೆ ಎಚ್ಚರಿಕೆ ವಹಿಸುವುದು ಗಮನಿಸಬೇಕಾದ ಅಂಶವಾಗಿದೆ. ಒಟ್ಟಿನಲಿ ನವವಧು – ವರರು ಸಂಕೋಚವನ್ನು ದೂರಮಾಡಿ ಮುಕ್ತ ಮನಸ್ಸಿನಿಂದ ಬೆರೆಯುವುದಕ್ಕೆ ಈ ಆಟಗಳ್ಳೆಲ್ಲವೂ ಪೂರಕವಾಗಲು ಮಾಡಿ ಕೊಂಡಿರುವ ವ್ಯವಸ್ಥೆಯಾಗಿದೆ. ಮದುವೆಯದಿನ ಸಿಹಿ ಭೋಜನದ ವಿಶೇಷ ಇರುತ್ತದೆ. ಇದು ಅವರವರ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಅಂದು ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುವುದು. ಮಾರ್ಗ ಮಾಧ್ಯೆ ಗುಡಿಗಳು ಸಿಕ್ಕರೆ ವಧು- ವರರು ಕೈಯಲಿ ತೆಂಗಿನಕಾಯಿ, ಎಲೆ, ಅಡಿಕೆ, ಹಿಡಿದು ದೇವರಿಗೆ ನಮಸ್ಕರಿಸುವರು. ಮೆರವಣಿಗೆ ಮುಗಿಸಿ ಬಂದು ನವ ದಂಪತಿಗಳಿಗೆ ಆರತಿ ಮಾಡಿ ಕಾಲನ್ನು ತೊಳೆದು ಮನೊಯೊಳಗೆ ಕರೆದುಕೊಳ್ಳುವರು.

ಬೀಗರೂಟ

ಮದುವೆಯ ಮರುದಿನ ವಧುವಿನ ಮನೆಯಲ್ಲಿ ನಡೆಯುವ ಸಂತೋಷ ಕೂಟವನ್ನು ‘ಬೀಗರೂಟ’ ಎಂದು ಕೆರೆಯುವುದು ವಾಡಿಕೆ. ಇಂದಿನ ವಿಶೇಷ ಮಾಂಸದ ಅಡುಗೆಯಾಗಿರುತ್ತದೆ. ಜೊತೆಗೆ ಮಧ್ಯಪಾನ ಮಾಡುವುದುಂಟು. ಇದು ಬಂಧು- ಬಳಗ ಮತ್ತು ಆಪ್ತರಿಗಷ್ಟೆ ಸೀಮಿತವಾಗಿರುತ್ತದೆ ಬೀಗರೂಟವನ್ನು ಮುಗಿಸಿ ವರನು ಸ್ವಗ್ರಾಮಕ್ಕೆ ಹೋಗುವಾಗ ಅವನಿಗೆ ಸಿಹಿ ಅಡುಗೆ (ಹೋಳಿಗೆ) ಯನ್ನು ಸಿದ್ಧಪಡಿಸಿ ಕೊಡುವರು. ಆತನು ಅದನ್ನು ಹೆಗಲ ಮೇಲಿಟ್ಟು ತೆಗೆದುಕೊಂಡು ಹೋಗುವ ಸಂಪ್ರದ್ರಾಯವಿದೆ.

ಒಸಗೆ

ಹಿಂದೆ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬರುವ ಮೊದಲೇ ಮದುವೆ ಮಾಡುವ ರೂಢಿಯಲ್ಲಿತ್ತು. ಆದ್ದರಿಂದ ಮದುವೆಯನ್ನು ಮಾಡಿದ ಹಲವಾರು ವರುಷಗಳ ಅನಂತರ ಋತುಮತಿಯಾದಾಗ ಒಸಗೆ ಅಥವಾ ಮೊದಲ ರಾತ್ರಿ ಶಾಸ್ತ್ರ ನೆರೆವೇರಿಸುತ್ತಿದ್ದರು. ಅಂದು ಸಿಹಿ ಅಡುಗೆಯ ವಿಶೇಷ ಊಟವಾದ ಬಳಿಕ ಗಂಡಿಗೆ ಹತ್ತಿರದ ಸಂಬಂಧಿಗಳು ಹಾಸಿಗೆ ಅಥವಾ ಚಾಪೆಯನ್ನು ಹಾಸಿಕೊಡಬೇಕು. ಚಾಪೆ ಹಾಸುವವರಿಗೆ ಹೆಣ್ಣು ಮತ್ತು ಗಂಡುಮಕ್ಕಳಾಗಿರಬೇಕು. ಅನಂತರ ಬೆಳಿಗ್ಗೆ ಸಹ ಅವರೇ ಹಾಸಿಗೇ ಚಾಪೆಯನ್ನು ತೆಗೆಯುವುದು ಇವರಲ್ಲಿನ ಒಂದು ಪದ್ಧತಿಯಾಗಿದೆ. ಇತ್ತೀಚೆಗೆ ಒಸಗೆ ಶಾಸ್ತ್ರವು ಮದುವೆಯಾದ ಕೆಲವು ದಿವಸಗಳಿಗೆ ಒಂದು ಶುಭ ದಿನವನ್ನು ಪುರೋಹಿತರಿಂದ ಕೇಳಿ ನೆರವೇರಿಸುವರು.

ಸೀಮಂತ

ಮೊದಲ ಮಗುವಿಗೆ ಗರ್ಭಿಣಿಯಾದಾಗ ಆಕೆಯನ್ನು ಹೆರಿಗೆಯ ಸುಶ್ರೂಶೆಗಾಗಿ ತಾಯಿಯ ಮನೆಗೆ ಕಳುಹಿಸಿ ಕೊಡುವಾಗ ನಡೆಸುವ ಕಾರ್ಯವೇ ಸೀಮಂತ ಶಾಸ್ತ್ರ. ಇದನ್ನೇ ಕೆಲವು ಸಮುದಾಯಗಳಲ್ಲಿ ಸೀಮಂತ ಅಥವಾ ‘ಮನೆ ತುಂಬಿಸುವುದು’ ಎನ್ನುವರು. ಅಂದು ತವರಿನಿಂದ ಗರ್ಭಿಣಿಗೆ ಹೊಸ ಸೀರೆ, ಹಸಿರು ಬಣ್ಣದ ಬಳೆ ತಂದು ತೊಡಿಸುವುದುಂಟು. ಸಿಹಿ ಅಡುಗೆಯನ್ನು ಅಣಿಗೊಳಿಸಿ ಬಂಧು- ಬಳಗದವರೆಲ್ಲಾ ಕರೆದು ಊಟ ಹಾಕಿಸುತಾರೆ. ಮುತ್ತೈದೆಯರು ಗರ್ಭಿಣಿಗೆ ಆರತಿ ಮಾಡುವರು. ಬಳಿಕ ಗರ್ಭಿಣಿಯನ್ನು ತವರಿನವರು ಕರೆದುಕೊಂಡು ಹೋಗುವರು.

ತೊಟ್ಟಿಲು ಶಾಸ್ತ್ರ

ಮಗುವಿಗೆ ಒಂಭತ್ತು ತಿಂಗಳು ತುಂಬಿದಾಗ ತಾಯಿ ಮಗುವನ್ನು ತವರಿನಿಂದ ಆಕೆಯ ಗಂಡನ ಮನೆಗೆ ಕಳುಹಿಸಿಕೊಡುವುದು ಚೊಚ್ಚಿಲ ಹೆರಿಗೆಯಲ್ಲಿ ಸಾಮಾನ್ಯ. ತಾಯಿಗೆ ಹೊಸ ಬಟ್ಟೆ ಮತ್ತು ಮಗುವಿಗೆ ಹೊಸ ಬಟ್ಟೆ ಹಾಗೂ ಆಭರಣಗಳನ್ನು ತೊಡಿಸುವುದಲ್ಲದೆ ಮಗುವಿನ ಸೋದರಮಾವನು ಹೊಸ ತೊಟಿಲನ್ನು ಒತ್ತುಕೊಂಡು ತಾಯಿ ಮಗುವನ್ನು ಕರೆದುಕೊಂಡು ಹೋಗುತ್ತಾನೆ. ತೊಟ್ಟಿಲು ಕೊಂಡು ಹೋದವನಿಗೆ ಹೊಸಬಟ್ಟೆ ಕೊಟ್ಟು ತೊಟ್ಟಿಲಿಗೆ ಪೂಜೆ ಮಾಡಿ ಮನೆ ಒಳಗೆ ತುಂಬಿಸಿಕೊಳ್ಳುವರು. ಅಂದು ಸಿಹಿ ಅಡುಗೆ ಅಣಿಗೊಳಿಸಿ ಎಲ್ಲರೂ ಊಟ ಮಾಡುವರು. ಕುಟುಂಬಕ್ಕೆ ಮಗುವಿನ ಸೇರ್ಪಡೆಯಾಗುವುದರಿಂದ ಅವರಿಗೆ ಅಂದು ಬಹಳ ಸಂತಸದ ದಿನವಾಗಿರುತ್ತದೆ.

ದೇವದಾಸಿ ಬಿಡುವ ಶಾಸ್ತ್ರ

ಬುಂಡೇಬೆಸ್ತರಲ್ಲಿ ತಮ್ಮ ತಮ್ಮ ಮನೆ ದೇವತೆ ಹೆಸರಲ್ಲಿ ಹರಕೆ ಮಾಡಿಕೊಂಡು ಹೆಣ್ಣು ಮಕ್ಕಳನ್ನು ದೇವದಾಸಿ ಬಿಡುವುದು ರೂಢಿಯಲ್ಲಿದೆ. ಇನ್ನು ಕೆಲವರು ವಂಶಪಾರಂಪರ್ಯವಾಗಿ ಹುಟ್ಟಿದ  ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವುದಿದೆ. ಈ ಪದ್ಧತಿಯು ದಕ್ಷಿಣ ಕರ್ನಾಟಕದಲ್ಲಿ ರೂಢಿಯಲ್ಲಿರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಶ್ಯಾಗಲೆ ಕರಿಯಮ್ಮ, ಉಚ್ಛಂಗಿದುರ್ಗದ ಎಲ್ಲಮ್ಮ, ದುಗ್ಗಮ್ಮ, ಸಿದ್ದೇಶ್ವರ, ಅಂಜನೇಯಸ್ವಾಮಿ, ಚಿತ್ರದುರ್ಗದ ಎಮ್ಮೆನೂರು ಕರಿಯಮ್ಮ, ರಂಗನಾಥಸ್ವಾಮಿ, ಬರಗೇರಮ್ಮ ಮತ್ತು ಉಚ್ಚಂಗೆಮ್ಮ ಈ ದೈವಗಳ ಹೆಸರಲ್ಲಿ ಸಾಮಾನ್ಯವಾಗಿ ಭಾರತ ಹುಣ್ಣಿಮೆ, ಕಾಳ ಹುಣ್ಣಿಮೆ ಸಂದರ್ಭದಲ್ಲಿ ದೇವದಾಸಿ ಬಿಡುವುದು ಹೆಚ್ಚು.

ದೇವದಾಸಿಯಾಗಲಿರುವ ಹೆಣ್ಣುಮಗಳಿಗೆ ಹೊಸ ಬಟ್ಟೆಯನ್ನು ಹಾಕಿ ಹೂವಿನಿಂದ ಸಿಗರಿಸಿ ಗುಡಿಗೆ ಹೋಗಿ ವಿಶೇಷ ಪೂಜೆ ಮಾಡಿಸಿದ ಬಳಿಕ ಮುತ್ತಿನ ಸರವನ್ನು ದೇವರ ಸನ್ನಿಧಿಯಲ್ಲಿ ಪೂಜಾರಿಯು ಕಟ್ಟುತ್ತಾನೆ. ಅನಂತರ ಆ ಸರಕ್ಕೆ ತಾಳಿಯನ್ನು ಸೇರಿಸಿ ಕೊಳ್ಳುತ್ತಾರೆ. ಅಂದಿನಿಂದ ಆಕೆಯು ಸಾಮಾಜದ ಯಾರಾದರೂ ಶ್ರೀಮಂತ ಅಥವಾ ಪ್ರತಿಷ್ಠಿತ ವ್ಯಕ್ತಿಯ ಜೊತೆ ಲೈಂಗಿಕ ಸಂಬಂಧವನ್ನು ಹೊಂದುತ್ತಾಳೆ.

ಒಬ್ಬ ವ್ಯಕ್ತಿ ಸಂಬಂಧವನ್ನು ಕಡಿದುಕೊಂಡರೆ ತನಗಿಷ್ಟವಾದ ಮತ್ತೊಬ್ಬನ ಸಂಬಂಧವನ್ನು ಮುಂದುವರಿಸಬಹುದಾಗಿದೆ. ಹುಟ್ಟಿದ ಮಕ್ಕಳು ತಾಯಿಯ ಜೊತೆಯಲ್ಲಿರುತ್ತವೆ. ತಂದೆ ಹೆಸರನ್ನು ಹೇಳುವುದಿಲ್ಲ. ಆತನು ತನಗಿಷ್ಟವಾದಾಗ ಮಾತ್ರ ಬಂದು ಹೋಗುತ್ತಾನೆ. ಈಗಾಗಲೇ ವಿವಾಹಿತನಾಗಿ ಸಂಸಾರವನ್ನು ಹೊಂದಿರುತ್ತಾನೆ.

ಶವಸಂಸ್ಕಾರ

ಸತ್ತವರನ್ನು ಹೂಳುವ ಪದ್ಧತಿ ಇವರಲ್ಲಿ ರೂಢಿಯಲ್ಲಿದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಸುಡುವುದುಂಟು. ಹೆಣ್ಣಾಗಲಿ, ಗಂಡಾಗಲಿ, ಹಿರಿಯರಾಗಲಿ, ಕಿರಿಯಾರಾಗಲಿ, ಸಹಜವಾಗಿ ಸಾವನ್ನಪ್ಪಿದರೆ ಅವರನ್ನು ಹೂಳುತ್ತಾರೆ. ಸಾಯುವ ವ್ಯಕ್ತಿಯ ಪ್ರೀತಿ ಪಾತ್ರರಾದವರು ಬಾಯಿಗೆ ನೀರು ಬಿಡುವರು. ಸತ್ತ ಕೂಡಲೆ ಕಣ್ಣುಮುಚ್ಚಿ ಕಾಲುಗಳನ್ನು ಮಡಿಸುತ್ತಾರೆ. ಕಿವಿ ಮತ್ತು ಮೂಗಿಗೆ ಹತ್ತಿ ಇಟ್ಟು ಬಾಯಿಗೆ ಅಕ್ಕಿಯನ್ನು ಹಾಕುತ್ತಾರೆ. ಅನಂತರ ಓರ್ವ ವ್ಯಕ್ತಿಯನ್ನು ಕೋಡಿ ಆಳು ಎಂದು ಕಳುಹಿಸುತ್ತಿದ್ದರು. ಆತನು ಮೃತರ ಸಂಬಂಧಿಕರಿಗೆಲ್ಲಾ ಸಾವಿನ ಸುದ್ದಿಯನ್ನು ಮುಟ್ಟಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದರು. ಇತ್ತೀಚೆಗೆ ಆಯಾ ಕುಟುಂಬದವರೇ ದೂರವಾಣಿ ಮೂಲಕ ಸುದ್ಧಿ ತಿಳಿಸುವುದು ಸಾಮಾನ್ಯವಾಗಿದೆ.

ಸಂಬಂಧಿಕರೆಲ್ಲರೂ ಬಂದಿರುವುದನ್ನು ಖಚಿತಪಡಿಸಿಕೊಂಡು ಹೆಣಕ್ಕೆ ಸ್ನಾನಮಾಡಿಸಿ ಹೊಸ ಬಟ್ಟೆಹಾಕಿ ಎಲ್ಲರೂ ಪೂಜೆ ಮಾಡುವರು. ಅನಂತರ ಬಿದಿರಿನ ಮರದಿಂದ ಸಿದ್ಧಪಡಿಸಿದ ಚಟ್ಟದ ಮೇಲೆ ಮಲುಗಿಸಿ ಭದ್ರವಾಗಿ ಕಟ್ಟಿ ಸ್ಮಶಾನಕ್ಕೆ ಒಯ್ಯುವರು. ಹಿರಿಯ ಅಥವಾ ಕಿರಿಯ ಮಗನು ಕಿಚ್ಚನ್ನು ಹಿಡಿದು ಮುಂದೆ ಹೋಗುವನು. (ಮನೆಯ ಮುಂದೆ ಹಾಕಲಾಗಿದ್ದ ಬೆಂಕಿಯಲ್ಲಿ ಬೇಯಿಸಿದ ಅನ್ನ) ದಾರಿಯುದ್ಧಕ್ಕೂ ಹೆಣದ ಮೇಲೆ ಮಂಡಕ್ಕಿ, ಎಲೆ ಅಥವಾ ನಾಣ್ಯವನ್ನು ತೂರುತ್ತಾ ಹೋಗುತ್ತಾರೆ. ಸ್ಮಶಾನದ ಸಮೀಪಕ್ಕೆ ಹೋದಾಗ ಒಂದು ನಿರ್ಧಿಷ್ಟ ಜಾಗದಲ್ಲಿ ಹೆಣವನ್ನು ಕೆಳಗಿಳಿಸಿ ಕಿಚ್ಚನ್ನು ಹೊಡೆಯುತ್ತಾರೆ. ಅಲ್ಲಿಂದ ಹೆಣವನ್ನು  ತಿರುವು ಮುರುವು ಮಾಡಿ ಅಂದರೆ ತಲೆಯ ಹಿಂದಕ್ಕೂ ಕಾಲು ಮುಂದಕ್ಕೆ ಮಾಡಿ ಒಯ್ಯುವರು. ಹೆಣವನ್ನು ತೆಗೆದಿರುವ ಹಳ್ಳದ ಪಕ್ಕದಲ್ಲಿಟ್ಟು ಪೂಜಾಕ್ರಿಯೆಯನ್ನು ಮಾಡುವರು. ಎಲ್ಲರೂ ಅಂತಿಮ ದರ್ಶನ ಪಡೆದ ಅನಂತರ ಹೆಣವನ್ನು ಹಳ್ಳದಲ್ಲಿಟ್ಟು ಪ್ರತಿಯೊಬ್ಬರು ಮೂರು ಬೊಗಸೆ ಮಣ್ಣು ಹಾಕಿ ಹೊರಡುವರು. ಒಂದಿಬ್ಬರು ಮಾತ್ರ ಸಮಾಧಿಯನ್ನು ಕಟ್ಟಿ ಕಲ್ಲನ್ನು ಇಟ್ಟು ಅನಂತರ ಹೊರಡುವರು.

ಶವಸಂಸ್ಕಾರಕ್ಕೆ ಬಂದಿದ್ದ ಪ್ರತಿಯೊಬ್ಬರು ಮೃತನ ಮನೆಗೆ ಹೋಗಿ ದೀಪವನ್ನು ನೋಡಿ ಹೋಗುವನು. ಸಾವಿಗೆ ಬಂದವರಲ್ಲಿ ಅಣ್ಣ -ತಮ್ಮಂದಿರು ಮಾತ್ರ ಉಳಿದುಕೊಳ್ಳುವರು. ಅವರಿಗೆ ಸೂತಕವಿಲ್ಲ. ಸೂತಕದ ಮೂರನೇ ದಿನದಂದು ಮೃತನು ಇಷ್ಟಪಡುತ್ತಿದ್ದ ಎಲ್ಲಾ ಬಗೆಯ ಆಹಾರ ಮತ್ತು ತಿನಿಸುಗಳನ್ನು ತಂದು ಸಮಾದಿಯ ಮೇಲೆ ಬಾಳೆ ಎಲೆ ಹಾಸಿ ಎಡೆ ಹಾಕುವರು. ಜೀವ ಹೋದ ಸ್ಥಳದಲ್ಲಿ ಆತನು ಧರಿಸುತ್ತಿದ್ದ ಬಟ್ಟೆಗಳನಿಟ್ಟು ಪೂಜೆ ಮಾಡುವರು. ಅಂದು ಮೃತನ ಅಣ್ಣ ತಮ್ಮಂದಿರು ಮಾತ್ರ ಆ ದಿನ ಊಟ ಮಾಡುತ್ತಾರೆ. ಒಂಭತ್ತನೇ ದಿನದಂದು ಕೈಲಾಸ ಸಮಾರಾಧನೆಯನ್ನು ಮಾಡುವರು. ಬಂಧು -ಬಳಗದವರೆಲ್ಲರನ್ನೂ ಕರೆದು ಸಿಹಿ ಮತ್ತು ಮಾಂಸದ ಆಡುಗೆಯನ್ನು ಅಣಿಗೊಳಿಸುವರು. ಸಮಾಧಿಯ ಬಳಿ ಹೋಗಿ ಪೂಜೆ ಸಲ್ಲಿಸಿ ಬರುವರು. ಅನಂತರ ನೆರೆದ ಎಲ್ಲರೂ ಊಟ  ಮಾಡುವರು. ತಿಂಗಳು ತುಂಬುವುದರೊಳಗೆ ಮೃತನ ಆತ್ಮಕ್ಕೆ ಶಾಂತಿಸಿಗಲೆಂದು ಒಳಗೆ ಆತ್ಮವನ್ನು ತೆಗೆದುಕೊಳ್ಳುವ ಶಾಸ್ತ್ರ ಮಾಡುತ್ತಾರೆ.

ಸಮುದಾಯದ ಯಾರೇ ಆಗಲಿ ಅಸಹಜ ಸಾವಿಗೆ ತುತ್ತಾದಾಗ ಅಂದರೆ ನೀರಿಗೆ ಬಿದ್ದು ನೇಣು ಹಾಕಿಕೊಂಡು, ಅಪಘಾತದಲ್ಲಿ ಸತ್ತಾಗಲೂ ಅವರನ್ನು ಸುಡುವುದಿಲ್ಲ. ಆದರೆ ಬಿಳಿಮಚ್ಚೆ (ತೊನ್ನು) ಇದ್ದ ವ್ಯಕ್ತಿ ಸತ್ತಾಗ ಹೆಣವನ್ನು ಸುಡುತ್ತಾರೆ. ಬಾಣಂತಿಯಾಗಿದ್ದಾಗ ಆಕಸ್ಮಿಕವಾಗಿ ಸಾವನಪ್ಪಿದರೆ ಆಗಲೂ ಹೆಣ ಸುಡುವುದು ಕಂಡುಬರುತ್ತದೆ. ಆಸುಗೂಸುಗಳು ಸತ್ತಾಗ ಬಟ್ಟೆಯಲ್ಲಿ ಸುತ್ತಿಕೊಂಡು ಹತ್ತಿರದ ಹಳ್ಳ ಅಥವಾ ತಗ್ಗು ಪ್ರದೇಶದಲ್ಲಿ ಗುಂಡಿ ತೆಗೆದು ಹೆಣವನ್ನಿಟ್ಟು ಮಣ್ಣು ಮುಚ್ಚಿ ಮುಳ್ಳುಹಾಕಿ ಅದರ ಮೇಲೆ ಕಲ್ಲು ಇಡುತ್ತಾರೆ. ಏಕೆಂದರೆ ನಾಯಿ – ನರಿಗಳು ಸತ್ತ ಮಗುವನ್ನು ತಿನ್ನಬಾರದೆಂಬ ಉದ್ದೇಶವಿದೆ.

ಫಲಿತಗಳು

ಬುಂಡೇಬೆಸ್ತರು ಎಂಬ ಅರೆ-ಅಲೆಮಾರಿ ಸಮುದಾಯವನ್ನು ಒಳಗುಮಾಡಿ ಪ್ರಾತಿನಿಧಿಕವಾಗಿ ಎಂಟು ಜಿಲ್ಲೆಗಳಲ್ಲಿ ಮಾದರಿ ಸಮೀಕ್ಷೆಯನ್ನು ಮಾಡಿದಾಗ ಕಂಡುಬಂದ ಮುಖ್ಯಾಂಶಗಳು ಈಗಿವೆ.

. ಬುಂಡೇಬೆಸ್ತರು ಇಂದಿಗೂ ಅಸಂಘಟಿತ ಸಮುದಾಯವಾಗಿದೆ.

. ಮೀನು ಹಿಡಿಯುವ ಕಸುಬಿನಿಂದ ಅವರು ಖಾಯಂ ನೆಲೆ ಹೊಂದಲು ಸಾಧ್ಯವಾಗಿಲ್ಲ.

. ಈ ರೀತಿಯ ಅಲೆಮಾರಿ, ಅರೆ -ಅಲೆಮಾರಿ ಮಾದರಿಯ ಬದುಕು ಬುಂಡೇಬೆಸ್ತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಕಾರಣವಾಗಿದೆ.

. ಭದ್ರ ಸೂರಿಲ್ಲದೆ ಖಾಯಂ ನೆಲೆಯಿಲ್ಲದೆ ಸಮುದಾಯವು ಅತಂತ್ರ ಮತ್ತು ಆತಂಕದ ಬದುಕನ್ನು ಸಾಗಿಸುತ್ತಿದೆ.

. ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವ ಬಯಕೆ ಇದ್ದರೂ ಊರಿಂದ ಹೊರಗಿರುವ ಕಾರಣ ದೂರದ ಶಾಲೆಗೆ ಹೋಗಲಾಗುತ್ತಿಲ್ಲ.

. ಮೂಲ ಕಸುಬು ಮೀನು ಹಿಡಿಯುವುದಾದರೂ ನದಿ ಕೆರೆಗಳು ಹಣವಂತರಾದ ಗುತ್ತಿಗೆದಾರರ ಪಾಲಾಗುತ್ತಿದ್ದು ಇವರು ಕೇವಲ ಮೀನು ಹಿಡಿಯುವ ಕೂಲಿಕರರಾಗಿ ಕನಿಷ್ಟ ಬದುಕನ್ನು ಸಾಗಿಸುತ್ತಿರುವುದು ಸಮಾನ್ಯವಾಗಿದೆ.

. ಇದರಿಂದ ಅನ್ಯ. ಕಸುಬುಗಳಾದ ಕೂಲಿ, ಕೃಷಿಕೂಲಿ, ವ್ಯಾಪಾರದ ಕಡೆಗೆ ಒಲವು ತೋರುತ್ತಿದ್ದಾರೆ.

. ಬುಂಡೇಬೆಸ್ತರು ತಾವು ಯಾವ ಪ್ರವರ್ಗದಲ್ಲಿ ಸೇರಿದ್ದೇವೆ. ಎಂಬುದರ ಬಗೆಗೆ ಅರಿವು ಇದ್ದಂತಿಲ್ಲ. ಕಾರಣ ಇದೇ ಕಸುಬನ್ನು ಅವಲಂಬಿಸಿರುವ ಇವರು ಬಂಧುಗಳ ಹತ್ತಿರದ ಜಿಲ್ಲೆಗಳಲ್ಲಿ ಶಿಳ್ಳೇಕ್ಯಾತರು, (ಶಿವಮೊಗ್ಗ, ದಾವಣಗೆರೆ) ಎಂಬ ಹೆಸರಿನಿಂದ ಕರೆಸಿಕೊಂಡು ಪರಿಶಿಷ್ಟಜಾತಿ ಪಟ್ಟಿಯಲ್ಲಿದ್ದಾರೆ.

. ಧಾರವಾಡ -ಹುಬ್ಬಳ್ಳಿ, ಬೆಳಗಾಂ ಜಿಲೆಗಳಲ್ಲಿ ಕ್ರಮವಾಗಿ ಕಟ್ಟುಬರು ಮತ್ತು ಬಾಗಡಿಗಳು ಎಂದು ಕರೆಯುವುದುಂಟು. ಅಲ್ಲಿ ಇವರು ಬಿಸಿಎಂ (ಒಬಿಸಿ) ಆಗಿದ್ದಾರೆ.

ಸಲಹೆಗಳು

. ಬುಂಡೇಬೆಸ್ತರ ಸಮುದಾಯವು ಮೀನುಗಾರಿಕೆ ಕ್ಷೇತ್ರದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದು ಇಂತಹ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಆ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಪಡಿಸಲು ಸಾಧ್ಯವಿದೆ.

. ದೈಹಿಕವಾಗಿ ಪುರುಷರು ಮಹಿಳೆಯರು ಹಾಗೂ ಮಕ್ಕಳು ಬಹಳ ಚುರುಕಾಗಿದ್ದಾರೆ. ಶಿಕ್ಷಿತರಾಗಿ ಈಜಿನಲ್ಲಿ ಈ ಸಮುದಾಯದ ಯುವಕರನ್ನು ತರಬೇತಿಗೊಳಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ (ಈಜುಸ್ಪರ್ಧೆ) ಉತ್ತಮ ಸವಾಲು ನೀಡಲು ಆರ್ಹರಾಗುತ್ತಾರೆ.

. ಮೀನುಗಾರಿಕೆ ಕ್ಷೇತ್ರದಲ್ಲಿ ಬುಂಡೇಬೆಸ್ತರನ್ನು ಸೂಕ್ತ ಹುದ್ದೆಯಲ್ಲಿ ನೇಮಕ ಮಾಡಿ ಕೊಳ್ಳುವುದರಿಂದ ಇಲಾಖೆಯು ಪ್ರಗತಿ ಹೊಂದುವಲ್ಲಿ ಸಹಕಾರಿಯಾಗಬಲ್ಲದು.

. ಸಾಮಾನ್ಯವಾಗಿ ಒಂದು ಸಮುದಾಯ ಎಲ್ಲೇ ಇರಲಿ, ಹೇಗೆ ಇರಲಿ ದೈವ, ಬಳಿ/ಕುಲ ಮತ್ತು ಜೀವನಾವರ್ತನ ಆಚರಣೆಗಳನ್ನು (ಹುಟ್ಟಿನಿಂದ ಸಾವಿನವರೆಗಿನ ಆಚರಣೆ) ಎಂದಿಗೂ ಕೈಬಿಡುವುದಿಲ್ಲ. ಇವುಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿ ಇಡೀ ರಾಜ್ಯದಲ್ಲಿ ಅವರನ್ನು ಒಂದೇ ಪ್ರವರ್ಗದಲ್ಲಿ ಬರುವಂತೆ ಕ್ರಮವಹಿಸುವುದು ಸಾಧ್ಯವಿದೆ.

. ಸರ್ಕಾರವು ಸ್ವಾಮ್ಯಕ್ಕೆ ಒಳಪಟ್ಟಿರುವ ಕೆರೆ ಮತ್ತು ನದಿಯಲ್ಲಿ ಮೀನಿನ ಗುತ್ತಿಗೆಯನ್ನು ಬುಂಡೇಬೆಸ್ತರಿಗೆ ನೀಡುವುದರಿಂದ ಅವರಿಗೆ ಕಸುಬಿನ ಬಗ್ಗೆ ಭರವಸೆ ಮೂಡತ್ತದೆ.

. ಆರ್ಥಿಕವಾಗಿ ಅತ್ಯಂತ ಹಿಂದುಳಿದ ಇವರಿಗೆ ಮೀನು ಸಾಕಾಣೆಗಾಗಿ ಗುಂಪು ಸಾಲ ನೀಡುವುದು ಕಸುಬಿಗೆ ಉತ್ತೇಜನ ನೀಡಿದಂತಾಗುತ್ತದೆ. ಅಲ್ಲದೆ ಕಸುಬಿನಿಂದ ವಿಮುಖರಾಗುವುದನ್ನು ತಪ್ಪಿಸಬಹುದಾಗಿದೆ.

. ಸಾಧ್ಯವಾದರೆ ಬುಂಡೇಬೆಸ್ತರ ಮಕ್ಕಳಿಗೆ ವಸತಿ ಶಾಲೆಗಳನ್ನು ಆರಂಭಿಸಿ ಶಿಕ್ಷಣ ನೀಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಶಿಕ್ಷಣದ ಪ್ರಗತಿ  ಹೊಂದಬಹುದಾಗಿದೆ (Residence School)

. ಗುತ್ತಿಗೆದಾರರ ಅಡಿಯಲ್ಲಿ ದುಡಿಯುವ ಬುಂಡೇಬೆಸ್ತ ಕೆಲಸಗಾರರಿಗೆ ಸೂಕ್ತ ಸಂಬಳ ನಿಗದಿಪಡಿಸುವ ಮತ್ತು ಹೆಚ್ಚುವರಿ ಕೆಲಸಕ್ಕಾಗಿ ಪ್ರತ್ಯೇಕ ಸಂಭಾವನೆ ನೀಡುವ ಬಗೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬಹುದಾಗಿದೆ

. ಅಧ್ಯಯನದ ಪ್ರಧಾನ ಉದ್ದೇಶದಂತೆ ಬುಂಡೇಬೆಸ್ತರು ಮತ್ತು ಪರ್ಯಾಯ ಹೆಸರನ್ನು ಹೊಂದಿರುವ ಸಮುದಾಯಗಳನ್ನು ‘ಪರಿಶಿಷ್ಟವರ್ಗ’ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದರ ಮೂಲಕ ಈ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬಹುದಾಗಿದೆ.

ಸಮಾರೋಪ

ಭಾರತದ ಓರ್ವ ಪ್ರಜೆಯಾಗಿ ರಾಷ್ಟ್ರದ ಯಾವುದೇ ಮೂಲೆಯಲ್ಲಿರಲಿ ಅಥವಾ ಯಾವುದೇ ಧರ್ಮ, ಜಾತಿ, ಪಂಥಕ್ಕೆ ಸೇರಿ ಏನೇ ವೃತ್ತಿಯನ್ನು ಅವಲಂಬಿಸಿರಲಿ ಅವನಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು. ಆಗ ಮಾತ್ರ ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಸರ್ವರಿಗೂ ಸಮಪಾಲು, ಆರ್ವರಿಗೂ ಅಮಬಾಳು ಎಂಬ ತತ್ವವು ಅಕ್ಷರಶಃ ಅನ್ವಯವಾಗುತ್ತದೆ. ಆದರೆ ಇಂದಿನ ವಾಸ್ತವ ಚಿತ್ರಣ ಅತ್ಯಂತ ಶೋಚನೀಯಸ್ಥಿತಿಯಲ್ಲಿದೆ. ಎಂಬುದು ಮಾತ್ರ ಖೇದಕರವಾದ ಸಂಗತಿಯೇ ಸರಿ. ಸ್ವಾತಂತ್ರ್ಯ ಪಡೆದು ಅರವತ್ತಮೂರು ವರ್ಷಗಳು ಕಳೆದರು ಭಾರತದಂತಹ ವಿಶಾಲ ರಾಷ್ಟ್ರದಲ್ಲಿ ಕೋಟ್ಯಾಂತರ ಜನರು ಇಂದಿಗೂ ಖಾಯಂ ನೆಲೆಯನ್ನು ಹೊಂದದೆ ಅರೆ- ಅಲೆಮಾರಿಗಳಾಗಿ, ಅಲೆಮಾರಿಗಳಾಗಿ, ಕಾಡುವಾಸಿಗಳಾಗಿ ಬದುಕು ಸಾಗಿಸುತ್ತಿರುವುದು ಒಳ್ಳೆಯ ಸೂಚನೆಯಂತು ಅಲ್ಲ. ಇದೇ ಸಂದರ್ಭದಲ್ಲಿ ಅನಿವಾರ್ಯವೋ ಅಥವಾ ಅನಗತ್ಯವೋ ಟಿಬೆಟಿನ ನಿರಾಶ್ರಿತರನ್ನು ಭಾರತಕ್ಕೆ ಕರೆತಂದು ಅವರಿಗೆ ಫಲವತ್ತಾದ ಭೂಮಿಯಿರುವಲ್ಲಿ ವಾಸ್ತವ್ಯವನ್ನು ಒದಗಿಸಿ (ಕರ್ನಾಟಕದಲ್ಲಿ ಹುಣಸೂರಿನ ಬನ್ನಿ ಕುಪ್ಪೆ ಉತ್ತರ ಕನ್ನಡದ ಮುಂಡಗೋಡ, ಕೊಳ್ಳೆಗಾಲದ ಒಡೆಯರಪಾಳ್ಯ ಎಂಬ ಸ್ಥಳಗಳಲ್ಲಿ ಟಿಬೆಟ್‌ ನಿರಾಶ್ರಿತರ ಕೇಂದ್ರಗಳಿವೆ) ಕೇಂದ್ರ ಸರ್ಕಾರವೇ ನೇರವಾಗಿ ಸಕಲ ನೆರವನ್ನು  ನೀಡುವುದರ ಮೂಲಕ ಕಿಂಚಿತ್ತು ತೊದರೆಯಿಲ್ಲದೆ ಬದುಕು ಸಾಗಿಸಲು ವುವಸ್ಥೆಯಾಗಿರುವುದನ್ನು ಗಮನಿಸಿದಾಗ ಸರ್ಕಾರದ ಇಂತಹ ಇಬ್ಬಂದಿ ನೀತಿಯು ಬೇಸರವನ್ನುಂಟು ಮಾಡುತ್ತದೆ.  ಪರದೇಶಿಗಳಿಗೆ ಪ್ರತಿಷ್ಠೆಗಾಗಿ ಪುರಸ್ಕಾರ ನೀಡುತ್ತಿದ್ದು ದೇಶಿಯ ಜನರಿಗೆ ನಿರ್ಲಕ್ಷ್ಯ ಮಾಡಿರುವುದು ಯಾವ ಕಾರಣಕ್ಕೆ ಎಂಬುದು ತಿಳಿಯದಾಗಿದೆ. ಟಬೆಟಿನ ನಿರಾಶ್ರಿತರಿಗೆ ಮಾತ್ರ ಅನುಕೂಲವಾಗುವಂತೆ ಉತ್ತಮವಾದ ಭೂಮಿ, ಅವರ ದೇಶದ ಹವಾಗುಣಕ್ಕೆ ಹೊಂದುವಂತಹ ಪ್ರದೇಶ. ಅವರ ಕರಕುಶಲ ಕಲೆ ಮತ್ತು ಪಾರಂಪರಿಕ ಕಸುಬನ್ನು ಪ್ರೋತ್ಸಾಹಿಸುವಂತಹ ಯೋಜನೆಗಳು, ಉತ್ತಮ ಗುಣಮಟ್ಟದ ಆಹಾರಪದಾರ್ಥಗಳು, ಕೃಷಿಗೆ ಅತ್ಯಾಧುನಿಕ ಉಪಕರಣಗಳ ಸರಬರಾಜು, ಹಣಕಾಸು ನಿರ್ವಹಣೆಗಾಗಿ ಆಯಾ ಕೇಂದ್ರಗಳಲ್ಲಿ ಬ್ಯಾಂಕಿನ ವ್ಯವಸ್ಥೆ ಒಟ್ಟಾರೆ ಐಷಾರಾಮಿ ಬದುಕನ್ನು ಸಾಗಿಸಲು ಏನೆಲ್ಲಾ ಬೇಕು ಅದನ್ನು ಒದಗಿಸುವ ಮೂಲಕ ತಾರತಮ್ಯ ನೀತಿ ಅನುಸರಿಸಿದೆ. ಅಂದರೆ ಹೊರಗಿನವರಿಗೆ ಒಂದು ನ್ಯಾಯ ಒಳಗಿನವರಿಗೆ ಇನ್ನೊಂದು ನ್ಯಾಯ ಇದು ಸರ್ವಥಾ ಸಲ್ಲದು.

ಅರಣ್ಯವಾಸಿ ಬುಡಕಟ್ಟು, ಹಿಂದುಳಿದವರ್ಗ, ಅಲ್ಪಸಂಖ್ಯಾತ, ಅಲೆಮಾರಿ, ಅರೆ -ಅಲೆಮಾರಿ ಹೀಗೆ ಪ್ರತಿಯೊಂದು ಸಮುದಾಯಗಳ ಸ್ಥಿತಿಯನ್ನು ಅರಿತು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ  ಸಲುವಾಗಿ ಅನೇಕ ಆಯೋಗಗಳನ್ನು  ನೇಮಿಸಿ ವರದಿಗಳನ್ನು ಸ್ವೀಕರಿಸುವ ಸರ್ಕಾರ ಆಯೋಗಗಳ ವರದಿಯಲ್ಲಿ ಶಿಪಾರಸ್ಸು  ಮಾಡಿದ ಯಾವೊಂದು ಅಂಶವು ಕಾರ್ಯಗತವಾಗಿಲ್ಲ ಎಂಬುದು ಆಡಳಿತರೂಢ ಸರ್ಕಾರಗಳ ವೈಫಲ್ಯವೇ ಹೊರತು ಬೇರೇನು ಅಲ್ಲ. ಪ್ರಮುಖವಾಗಿ ಕಂಡುಬರುವ ಸಂಗತಿಗಳೆಂದರೆ, ರಾಜಕಾರಣಿಗಳಾಗಲಿ, ಅಧಿಕಾರಿತವರ್ಗದವರಾಗಲಿ ಕೆಳಗಿನ ಸಿಬ್ಬಂದಿ ವರ್ಗದವರಾಗಲಿ ಒಟ್ಟಾರೆ ಯಾರೊಬ್ಬರಿಗೂ ಸಮುದಾಯದ ಏಳಿಗೆ ಮುಖ್ಯವಲ್ಲ. ರಾಷ್ಟ್ರದ ಹಿತಾಸಕ್ತಿಯೂ ಮುಖ್ಯವಲ್ಲವೆಂಬುದು ಮನವರಿಕೆಯಾಗುತ್ತದೆ. ಆದಕಾರಣಕ್ಕೆ ಸ್ವಾತಂತ್ರ್ಯಕ್ಕಾಗಿ ಬಹಳ ಹುರುಪಿನಿಂದ ಹೋರಾಡಿದ ಜನತೆಯೇ  ಸ್ವಾತಂತ್ರ್ಯ ಅನಂತರದ ಸ್ಥಿತಿಯನ್ನು ಕಂಡು “ನಾವು ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಿದ್ದರೆ ಚೆನ್ನಾಗಿತ್ತು” ಎಂದು ಹಲುಬುತ್ತಿರುವುದನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕೇಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅಂದರೆ ಕಟ್ಟಕಡೆಯ ಜನರಿಗೂ ಸಹ ವ್ಯವಸ್ಥೆಯನ್ನು ಕುರಿತು ಒಂದು ರೀತಿಯ ತಿರಸ್ಕಾರ ಭಾವನೆಯಿದೆ. ಆದ್ದರಿಂದಲೇ “ರಾಮರಾಜ್ಯವಾಳಿದರೆನು ರಾಗಿ ಬೀಸುವುದು ತಪ್ಪುವುದೇ?” ಎಂಬ ಗಾದೆಯಂತೆ ಯಾರನ್ನೋ ನಂಬಿ ನಮ್ಮ ಹಸಿವನ್ನು ತಣಿಸಲು ಸಾಧ್ಯವಿಲ್ಲ. ಹಾಗೆಯೇ ಮತ್ತಾರೊ ನಮ್ಮನ್ನು ಉದ್ಧಾರ ಮಾಡಿಡುತ್ತಾರೆ. ಎಂಬ ಭ್ರಮೆಯನ್ನು ಬದಿಗಿಟ್ಟು, ಬದುಕಲು ದುಡಿಯಲೇ ಬೇಕು. ಕೈಲಾಗದಿದ್ದರೆ ಭಿಕ್ಷೆಯನ್ನಾದರೂ ಬೇಡಿ ತಿಂದು ಬದುಕಬೇಕು ಎಂಬ ತತ್ವಕ್ಕೆ ಬದ್ಧರಾಗಿ ಭಾರತದ ಕೋಟ್ಯಾಂತರ ಜನರು ಇಂದಿಗೂ  ವಸತಿ ಹೀನರಾಗಿ ಬಯಲಿನಲ್ಲೇ ಗುಡಿಸಲು ಅಥವಾ ಟೆಂಟುಗಳನ್ನು ನಿರ್ಮಿಸಿ ಬದುಕುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಆಗಿದೆ.

ಪ್ರಸ್ತುತ ಯೋಜನೆಯನ್ನು ಸಮದ್ದೇಶದಿಂದ ಹಿಂದುಳಿದ ವರ್ಗಗಳ ಆಯೋಗದ ಆರ್ಥಿಕ ನೆರವಿನಿಂದ ನಡೆಸಲಾಗಿದೆ. ನೀಡಲಾದ ಅವಧಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಂಡು ಒಂದು ಸಮುದಾಯದ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ಅವರ ಭವಣೆಗಳನ್ನು ಅವರಿಂದಲೇ ಕೇಳಿ ತಿಳಿದುಕೊಂಡು ವಿದ್ವಾಂಸರು ಕೂಡ ಚರ್ಚಿಸಿದ ಬಳಿಕ ಅಧ್ಯಯನಕ್ಕೆ ಒಳಪಡಿಸಿರುವ ಬುಂಡೇಬೆಸ್ತರು ಸಮುದಾಯಕ್ಕೆ ಈ ಯೋಜನೆಯಲ್ಲಿ ಮಾಡುವ ಶಿಫಾರಸ್ಸುಗಳು ಖಂಡಿತವಾಗಿ ಪ್ರಯೋಜನಕಾರಿ ಆಗುವಂತಿರಬೇಕು ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಆದರೆ “ಶ್ರೀಮಂತನು ರಾಗಿಗುಳಿ ಕೀಳುವ ವೇಳೆಗೆ ಬಡವನ ಪ್ರಾಣ ಹೋಯಿತು” ಎಂಬ ಗಾದೆಯಂತೆ  ಇಂತಹ ಯೋಜನೆಗಳು ಸಂಬಂಧಪಟ್ಟವರಿಗೆ ತಲುಪುವುದು ಎಷ್ಟು ಕಾಲ ಬೇಕಾಗಬಹುದೋ ತಿಳಿಯದಾಗಿದೆ.  “ನರಿಯ ಕೂಗು ಗಿರಿ ಮುಟ್ಟುತ್ತಾ” ಎಂಬ ಗಾದೆಯಂತೆ  ನಮ್ಮ ಯೋಜನೆಗಳಲ್ಲಿ ನೀಡಿದ ಶಿಫಾರಸ್ಸುಗಳು ಜಾರಿಯಾಗಿ ಸಫಲತೆಯನ್ನು ಪಡೆದುಕೊಳ್ಳವುದೇ ಅಥವಾ ನೂರಾರು ಯೋಜನೆಗಳ ಮಧ್ಯೆ ಇದು ಕಣ್ಮರೆಯಾಗುವುದೋ ಕಾಲವೇ ಉತ್ತರ ನೀಡಬೇಕಾಗಿದೆ. ಯೋಜನೆಯ ಅನುಷ್ಠಾನ, ಫಲಾವಿಫಲ ಏನೇ ಇರಲಿ ಬುಂಡೇಬೆಸ್ತ ಸಮುದಾಯ ಮಾತ್ರ ಎದುರಾಗುವ ಯಾವುದೇ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸುತ್ತ ಹೊಳೆದಂಡೆಯಲ್ಲಿರಲಿ, ಕೆರೆದಂಡೆಯಲ್ಲಿರಲಿ ಬದುಕಿಗಾಗಿ ನಿತ್ಯ ಹೋರಾಟ ಮಾಡುತ್ತಾ ಬೆಳೆಯುತ್ತಿರುವ ಕರುಳ ಕುಡಿಗಳಿಗಾಗಿ, ನಿರಂತರವಾಗಿ ಕಾಡುವ ಹಸಿವನ್ನು ತಣಿಸುವ ಸಲುವಾಗಿ ಸರ್ವಪ್ರಯತ್ನ ಮಾಡುತ್ತಲೇ ಇರುತ್ತಾರೆ. ನಮಗೂ ಒಂದು ಒಳ್ಳೆಯ ದಿನ ಬರುತ್ತೇ ಎಂದು ಕಾಯುತ್ತಲೇ ಇರುತ್ತಾರೆ… ಕಾಯುತ್ತಲೇ ಇರುತ್ತಾರೆ.

ಇತ್ತ ಯೋಜನೆಯನ್ನು ನಿರ್ವಹಿಸಿದ ಸಂಶೋಧಕರು ಅಥವಾ ಯೋಜನಾ ನಿರ್ದೇಶಕರು ತಮ್ಮ ಪಾಲಿನ ಕರ್ತವ್ಯ ಮುಗಿಯಿತು ಎಂದು ನಿರಂಬಳವಾಗಿ ಮತ್ತೊಂದು ಯೋಜನೆಯನ್ನು ನಿರ್ವಹಿಸುವ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಹಿಂದುಳಿದ ವರ್ಗಗಳ ಆಯೋಗ ಮಾತ್ರ ಹೆಚ್ಚು ಜವಾಬ್ದಾರಿಯುತವಾಗಿ ಯೋಜನೆಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಸಕಾಲಕ್ಕೆ ಸೂಕ್ತ ಕ್ರಮವನ್ನು ವಹಿಸಲು ಒತ್ತಡದ ತಂತ್ರಗಳನ್ನು ಬಳಸಿದಾಗ ಮಾತ್ರ ಯೋಜನೆಗಳು ಫಲಕಾರಿಯಾಗುತ್ತವೆ. ಒಟ್ಟಾರೆ ಹಂತ- ಹಂತವಾಗಿ ಅವರವರ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದಾಗ ಕೇವಲ ಒಬ್ಬ ವ್ಯಕ್ತಿಯಲ್ಲ. ಸಮುದಾಯವೂ ಅಲ್ಲ ಇಡೀ ರಾಷ್ಟ್ರದ ಏಳಿಗೆಯು ಅದರಲ್ಲಿ ಆಡಗಿದೆ ಎಂಬುದು ಅರ್ಥವಾಗುತ್ತದೆ.