Categories
ಪರಿಸರ

ಮರ ಏರುವ ವಿಜ್ಞಾನ

ಅಕ್ಟೊಬರ್ 17 ರಂದು ನಮ್ಮ ತಲ­ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿ­ದ್ದಾಗ, ಅತ್ತ ಮಾಲ್ಡೀವ್ಸ್ ಎಂಬ ದ್ವೀಪ­ರಾಷ್ಟ್ರದ ಹನ್ನೆರಡು ಸಂಸದರು ಸಮುದ್ರ ತಳದಲ್ಲಿ ಕೂತು ಸಂಪುಟ ಸಭೆ ನಡೆಸಿದರು. ಮೈತುಂಬ ರಬ್ಬರ್ ಉಡುಗೆ ಧರಿಸಿ, ಬೆನ್ನಿಗೆ ಆಮ್ಲಜನಕದ ಸಿಲಿಂಡರ್ ಬಿಗಿದು, ಕಾಲಿಗೆ ಜಾಲಪಾದರಕ್ಷೆ ಸಿಕ್ಕಿಸಿಕೊಂಡು, ನೀರೊಳಕ್ಕೆ ಮುಳುಗಿ ಕೈಸನ್ನೆಗಳ ಮೂಲಕ ಹನ್ನೆರಡು ನಿಮಿಷಗಳ ಸಾಂಕೇತಿಕ ಸಭೆ ನಡೆಸಿ ಮೇಲೆದ್ದು ಬಂದರು. ‘ಭೂಮಿಯ ತಾಪಮಾನ ಹೀಗೆಯೇ ಏರುತ್ತಿದ್ದರೆ ನಮ್ಮ ಇಡೀ ದೇಶ ಮುಳುಗಿ ಹೋಗುತ್ತದೆ; ನಮ್ಮನ್ನು ನಡುನೀರಲ್ಲಿ ಕೈಬಿಡಬೇಡಿ’ ಎಂಬ ಆರ್ತ ಸಂದೇಶವನ್ನು ಜಗತ್ತಿಗೆ ಬಿತ್ತರಿಸಿದರು.
ಜನಪ್ರತಿನಿಧಿಗಳೆಂದರೆ ತಮ್ಮ ಹಿತಕ್ಕಾಗಿ ದೇಶವನ್ನೇ ಮುಳುಗಿಸಲೂ ಹಿಂದೆಮುಂದೆ ನೋಡು­ವುದಿಲ್ಲ ಎಂಬ ಭಾವನೆಯನ್ನು ತೊಡೆದು ಹಾಕುವಂತೆ ಈ ಪುಟ್ಟ ರಾಷ್ಟ್ರದ ಸಂಸ­ದರು ಮೈಚಳಿ ಬಿಟ್ಟು ನೀರಿಗೆ ಧುಮುಕಿದ್ದು ವಿಶೇಷ­ವೇನೊ ಹೌದು. ಆದರೆ ಅದು ಏಕಮೇವಾದ್ವಿತೀಯವೇನೂ ಅಲ್ಲ. ಇಂಥ­ದೊಂದು ಸಾಹಸ ಹಿಂದೆಯೂ ನಡೆದಿತ್ತು.
ಏಳು ವರ್ಷಗಳ ಹಿಂದೆ ಅಮೆರಿಕದ ವಾಷಿಂಗ್ಟನ್ ರಾಜ್ಯದ 12 ಶಾಸಕರು ಒಟ್ಟಾಗಿ ಒಂದೇ ಮರವನ್ನು ಏರಿದ್ದರು. ದಟ್ಟ ಮಳೆ­ಕಾಡಿನಲ್ಲಿ 60 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿ, ಹಗ್ಗ ಮತ್ತು ರಾಟೆಯ ಮೂಲಕ ಒಬ್ಬೊ­ಬ್ಬರನ್ನಾಗಿ ಮೇಲಕ್ಕೆಳೆದು ಕೂರಿಸ­ಲಾಗಿತ್ತು. ಅಟ್ಟಣಿಗೆಯ ಮೇಲೆ ಅವರೆಲ್ಲರ ಒಂದು ಪುಟ್ಟ ಸಮ್ಮೇಳನವನ್ನು ಏರ್ಪ­ಡಿ­ಸಲಾಗಿತ್ತು. ಜತೆಗಿದ್ದ ವೃಕ್ಷವಿಜ್ಞಾನಿಗಳು ಈ ಶಾಸಕರಿಗೆ ಅಲ್ಲೇ ಅರಣ್ಯ ಜೀವಜಾಲದ ಪಾಠ ಹೇಳಿದರು. ಮಳೆಕಾಡುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸಿ ಹೇಳಿದರು. ಬರಲಿರುವ ಬಿಸಿ ಪ್ರಳಯದ ಸಂದರ್ಭದಲ್ಲಿ ಈ ವೃಕ್ಷಗಳು ಹೇಗೆ ಋತುಮಾನ ರಕ್ಷಣೆ ಹಾಗೂ ಜೀವ­ಸಂರಕ್ಷಣೆಯ ಅಂತಿಮ ಆಸರೆ ಆಗಬಹುದು ಎಂದು ವಿವರಿಸಿದರು.

ಮರಗಳ ಮಹತ್ವವನ್ನು ಸಾರಲೆಂದು ಮುಂದಿನವಾರ ವಿಶಿಷ್ಟ ‘ಕ್ಯಾನೊಪಿ ಸಮ್ಮೇಳನ’ ಬೆಂಗಳೂರಿನಲ್ಲಿ ನಡೆಯಲಿದೆ. ನಾಡಿನ ಇಕಾಲಜಿ ಮತ್ತು ಜೀವಸಂಪತ್ತಿನ ಅಧ್ಯಯನ ನಡೆಸುತ್ತಿರುವ ‘ಏಟ್ರೀ’ ಸಂಸ್ಥೆಯ ಆಶ್ರಯದಲ್ಲಿ ಏಷ್ಯದಲ್ಲೇ ಮೊದಲ ಬಾರಿಗೆ ಏರ್ಪಾಟಾಗಿರುವ ಈ ಅಂತರರಾಷ್ಟ್ರೀಯ ಮೇಳಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳ ವೃಕ್ಷತಜ್ಞರು ಬರತೊಡಗಿದ್ದಾರೆ. ಮರ ಏರುವಲ್ಲಿ ನಿಷ್ಣಾತರೆನಿಸಿದ ಇಬ್ಬರು ಹಿರಿಯ ಮಹಿಳಾ ವಿಜ್ಞಾನಿಗಳೂ ಬರುತ್ತಿದ್ದಾರೆ.
ಮರಗಳ ಮೇಲ್ಛಾವಣಿಯ ಜಗತ್ತು ಈಚಿನವರೆಗೂ ವಿಜ್ಞಾನಕ್ಕೆ ಅಪರಿಚಿತವಾಗಿಯೇ ಉಳಿದಿತ್ತು. ಇದಕ್ಕೊಂದು ವಿಲಕ್ಷಣ ಕಾರ­ಣವಿದೆ: ವಾನರನೆಂಬ ಪ್ರಾಣಿ ಮರದಿಂದ ಇಳಿದ ನಂತರವೇ ಮನುಷ್ಯನಾದ ತಾನೆ? ಕಾಡಿನಿಂದ ದೂರ ಹೋದಷ್ಟೂ ಮನುಷ್ಯ ‘ನಾಗರಿಕ’ ಎನ್ನಿಸಿಕೊಳ್ಳುತ್ತಾನೆ. ಈಗಲೂ ಮರ ಏರುವ ಸಾಮರ್ಥ್ಯ ಇರುವುದು ಮಣ್ಣಿನ ಮಕ್ಕಳಿಗೆ ಮಾತ್ರ. ಯಾವುದೇ ಹಳ್ಳಿಯ ಹೈದ ಪ್ಯಾಂಟ್ ಏರಿಸಿದ ಎಂದರೆ ಮರ ಏರುವುದನ್ನು ಮರೆತ ಎಂತಲೇ ಅರ್ಥ.
ಕಾಲೇಜು ಮೆಟ್ಟಿಲು ಹತ್ತಿ­ದ­ರಂತೂ ಮುಗಿಯಿತು. ಹೀಗಿರುವಾಗ ವಿಜ್ಞಾನಿ­ಗಳು ಮರ ಏರುವುದುಂಟೆ? ಅವರು ಯಂತ್ರಗಳ ಮೂಲಕ ಗಗನಚುಂಬಿ ಕಟ್ಟಡಗಳನ್ನು ಏರ­ಬಹುದು; ಅಥವಾ ಆಳದ ಗಣಿಗಳಲ್ಲಿ ಇಳಿ­ಯ­ಬಹುದು. ಗಗನ ನೌಕೆ ಏರಬಹುದು; ಸಬ್‌ಮರೀನ್‌ನಲ್ಲಿ ಕೂತು ಸಾಗರದ ತಳವನ್ನು ತಡಕಾಡಬಹುದು. ಆದರೆ ಮರಗಳನ್ನು ಏರಬಲ್ಲ ಯಂತ್ರ ಎಲ್ಲಿದೆ? ಯಂತ್ರವಿದ್ದರೂ ಮರ ಏರಲು ಬೇಕಾದ ಎಂಟೆದೆ ಎಲ್ಲಿದೆ?
ಮರ ಏರಲು ನಿಜಕ್ಕೂ ಎಂಟೆದೆ ಬೇಕು. ಗುರುತ್ವದ ವಿರುದ್ಧ ಏರಿ ಸಾಗುವ ಸ್ನಾಯುಬಲ ಬೇಕು. ಕೆಳಗಿನ ಆಳವನ್ನು ನೋಡಿ ತಲೆ ತಿರುಗ­ಬಾರದು. ಕೊಂಬೆ ತೊನೆದರೆ ಕೈಸಡಿಲಿಸ­ಬಾರದು. ಅಲ್ಲಿನ ಪಾಚಿ, ಅಣಬೆ, ತುರಿಕೆ ಎಬ್ಬಿಸುವ ಲೋಳೆಪೊರೆಗಳ ವಿರೋಧಗಳನ್ನೆಲ್ಲ ಮೀರಿ ಏರುವ ಛಾತಿ ಬೇಕು. ಇಷ್ಟಲ್ಲದೆ ಅಲ್ಲಿ ವಾಸಿಸುವ ಕಣಜ, ಇರುವೆ, ಸಹಸ್ರಪದಿ, ಜೇನು, ಹಾವುಚೇಳು ಅಥವಾ ಪಕ್ಷಿಗಳು ದಾಳಿ ನಡೆಸಿದರೆ ಎದುರಿಸುವ ತಾಕತ್ತು ಇರಬೇಕು. ಇಷ್ಟಕ್ಕೂ ಯಾಕೆ ಮರ ಏರಬೇಕು? ಬೆಲ್ಲ ಸಕ್ಕರೆಗಳಿಂದ ವಂಚಿತರಾದ ಕಾಡು ಜನರು ಜೇನಿಗಾಗಿ ಮರ ಏರುತ್ತಾರೆ. ನಾಡಿನ ಜನರಿಗೆ ಛಾವಣಿ ವೃಕ್ಷಗಳಿಂದ ಯಾವ ಲಾಭವಿದೆ?
ಯಾವ ಲಾಭ ಇಲ್ಲದೆಯೂ ಶಿಲಾರೋಹಣ, ಅಲೆಗಳ ಮೇಲೆ ಸರ್ಫಿಂಗ್, ವಿಮಾನಗಳಿಂದ ಧುಮುಕಾಟ, ಭೋರ್ಗರೆವ ನದಿ ಕೊರಕಲಿನಲ್ಲಿ ಕ್ಯಾನೋಯಿಂಗ್, ಆಳ ಕಮರಿಗೆ ಬಂಗೀ ಜಂಪಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೆ ಗೌರವ, ಮಾನ್ಯತೆ ಪ್ರಾಪ್ತಿಯಾದಾಗ ಮೂವತ್ತು ವರ್ಷಗಳ ಹಿಂದಷ್ಟೇ ಕೆಲವು ಯುವ ವಿಜ್ಞಾ­ನಿಗಳು ಮರ ಏರಲು ತೊಡಗಿದರು.
ಅವರು ಅಲ್ಲಿ ಹೊಸ ಲೋಕವೊಂದನ್ನೇ ಕಂಡರು. ಯಾವ ಪಠ್ಯಪುಸ್ತಕದಲ್ಲೂ ನೋಡಸಿಗದ ಅಪರೂಪದ ಅಣಬೆಗಳು, ಪಾಚಿಗಳು, ಸಸ್ಯಗಳು, ಪ್ರಾಣಿ­ಗಳು, ಅವುಗಳ ನಡುವಣ ಸಂಬಂಧಗಳು, ಮೇಲಾಟಗಳು ಎಲ್ಲವೂ ಒಂದೊಂದಾಗಿ ವಿಜ್ಞಾನ ಲೋಕಕ್ಕೆ ತೆರೆದುಕೊಂಡಾಗ ಮರ ಏರುವ ಹೊಸಹೊಸ ತಂತ್ರಗಳು ಬಳಕೆಗೆ ಬರತೊಡಗಿದವು. 1985ರಲ್ಲಿ ಕೋಸ್ಟಾರಿಕಾ ದೇಶದಲ್ಲಿ ಮರಗಳ ಛಾವಣಿಯ (ಕ್ಯಾನೊಪಿ) ಮೇಲೆ ಜಾಳಿಗೆಯನ್ನು ಹಾಸಿ ಅಲ್ಲಿ ನಿರ್ಭ­ಯವಾಗಿ ಓಡಾಡುತ್ತ ಅಲ್ಲಿನ ಜೀವಲೋಕದ ಅಧ್ಯಯನ ಕೈಗೊಂಡ ವ್ಯಕ್ತಿಗೆ ‘ವರ್ಷದ ವಿಜ್ಞಾನಿ’ ಎಂಬ ಪುರಸ್ಕಾರ ಸಿಕ್ಕಿದ ಮೇಲೆ ನಿಜಕ್ಕೂ ‘ಕ್ಯಾನೊಪಿ ಸೈನ್ಸ್’ ಎಂಬ ಹೊಸ ಶಾಖೆಯೇ ಆರಂಭವಾಯಿತು.
ಈಗ ಅದೊಂದು ತೀವ್ರ ಪೈಪೋಟಿಯ ರಂಗ­ವಾಗಿದೆ. ವೃಕ್ಷಗಳ ಮೇಲ್ಛಾವಣಿಯನ್ನು ‘ಜಗತ್ತಿನ ಎಂಟನೇ ಖಂಡ’ ಎಂದು ಬಣ್ಣಿಸತೊ­ಡಗಿದ್ದಾರೆ. ಏನೆಲ್ಲ ಸಾಹಸ ಮಾಡಿ ಆ ಹೊಸ­ಲೋಕಕ್ಕೆ ಹೋಗಿ ವಿಹರಿಸಬಲ್ಲ ಧೀರರು ತಮ್ಮನ್ನು ‘ಡೆಂಡ್ರೊನಾಟ್ಸ್’ ಎಂದು ಹೇಳಿ­ಕೊಳ್ಳುತ್ತಾರೆ (ಬಾಹ್ಯಾಕಾಶ ಯಾತ್ರಿಗಳನ್ನು ‘ಆಸ್ಟ್ರೊನಾಟ್ಸ್’ ಎನ್ನುವ ಹಾಗೆ, ಮರಗಳ ಶಾಖೋಪಶಾಖೆಗಳ ಮೇಲೆ ಚಲಿಸಬಲ್ಲವರು ‘ಡೆಂಡ್ರೊನಾಟ್ಸ್’). ಅಲ್ಲಿ ಸಾಮಾನ್ಯ ವಿಜ್ಞಾನಿ­ಗಳಿಗೆ ನಿಲುಕದ ಹೊಸ ವಿಜ್ಞಾನ ಇದೆ, ರೋಚ­ಕತೆ ಇದೆ, ರಂಜನೆ ಇದೆ; ಎಲ್ಲಕ್ಕಿಂತ ಮುಖ್ಯವಾಗಿ ಎತ್ತರದ ವೃಕ್ಷಗಳಲ್ಲಿ ಏನಾದರೂ ಹೊಸ ಕೆಮಿಕಲ್‌ಗಳು, ಹೊಸ ಮೂಲಿಕೆಗಳು, ಹೊಸ ಜೀವಿಗಳು ಸಿಕ್ಕರೆ ಪೇಟೆಂಟ್ ಮಾಡಿಕೊಳ್ಳುವ ಅವಕಾಶವಿದೆ.
ನೆಲದಿಂದ 150 ಅಡಿ ಎತ್ತರದ ವಿನೂತನ ಲೋಕದಲ್ಲಿ ನಾವು ಮುಟ್ಟಿದ್ದೆಲ್ಲ ಹೊಸದು! ಹೊಸ ಸಸ್ಯ, ಹೊಸ ಕೀಟ, ಹೊಸ ಪ್ರಾಣಿ, ಹೊಸ ಬಗೆಯ ನಡವಳಿಕೆ!? ಎನ್ನು­ತ್ತಾರೆ, ಅಮೆರಿಕದ ಪ್ರಖ್ಯಾತ ಛಾವಣಿವಿಜ್ಞಾನಿ ಪ್ರೊ. ನಳಿನಿ ನಾಡಕರ್ಣಿ.
ಅದಕ್ಕೆ ತಕ್ಕಂತೆ ಮರದ ತುದಿಯನ್ನು ತಲುಪುವ ಅನೇಕ ಬಗೆಯ ಹೊಸ ಹೊಸ ತಂತ್ರ­ಜ್ಞಾನಗಳೂ ವಿಕಾಸಗೊಂಡಿವೆ. ಆಕಾಶ­ಮಾರ್ಗ­ದಲ್ಲೇ ಅಲ್ಲಿಗೆ ಹೋಗಿ ಇಳಿಯು­ವವರಿಗಾಗಿ ವಿಶಾಲ ಬಲೆಗಳು, ಅದರೊಳಗೆ ಟೆಂಟ್‌ಗಳು, ಅದನ್ನು ಹೊತ್ತೊಯ್ದು ಮರಗಳ ಮೇಲೆ ಹಾಸಬಲ್ಲ ಬಿಸಿಗಾಳಿ ಬಲೂನು, ಏರ್‌ಶಿಪ್‌ಗಳು ಸಜ್ಜಾಗಿವೆ. ಮರದ ಬುಡದಿಂದಲೇ ಮೇಲೇರಿ ಓಡಾಡಬಯಸುವ ಸಾಹಸಿಗಳಿಗಾಗಿ ನಾನಾ ಬಗೆಯ ನೂಲೇಣಿಗಳು, ತೊಟ್ಟಿಲುಗಳು, ಕ್ರೇನ್­ಗಳು ರೂಪುಗೊಂಡಿವೆ. ಇವು ವಿಜ್ಞಾನಿಗಳಿಗಷ್ಟೇ ಅಲ್ಲ, ವಾರಾಂತ್ಯದಲ್ಲಿ ಮೋಜು ಮಾಡು­ವವರಿಗೂ ರೋಚಕ ಸಾಧನಗಳಾಗುತ್ತಿವೆ.
ಈಗಂತೂ ‘ಹವಾಗುಣ ಬದಲಾವಣೆ’ ಎಂಬ ಭಯದ ಗಾಳಿ ಎಲ್ಲೆಡೆ ಬೀಸುತ್ತಿರುವಾಗ ಸಹಜವಾಗಿಯೇ ಎತ್ತರದ ಮರಗಳ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಳಜಿ ಹೆಚ್ಚ­ತೊಡಗಿದೆ. ಐವತ್ತು ವರ್ಷಗಳ ಹಿಂದೆ ಭೂಮಿಯ ಶೇಕಡಾ 12ರಷ್ಟು ಭಾಗದಲ್ಲಿ, ಅದೂ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಮಳೆಕಾಡುಗಳಿದ್ದವು. ಕೃಷಿ ವಿಸ್ತರಣೆ, ನಾಟಾ­ಕಡಿತ, ಕಾಡಿನ ಬೆಂಕಿಯಿಂದಾಗಿ ಅದರಲ್ಲೂ ಅರ್ಧಭಾಗ ನಷ್ಟವಾಗಿದೆ. ಆದರೆ ಈಗಲೂ ಜಗತ್ತಿನ ಶೇಕಡಾ 40ರಷ್ಟು ಜೀವಿಗಳು ಉಷ್ಣವಲಯದ ಮಳೆಕಾಡುಗಳಲೇ ಇವೆ. ನಮ್ಮ ಪಶ್ಚಿಮಘಟ್ಟಗಳೂ ಸೇರಿದಂತೆ ಈ ಕಾಡು­ಗಳೇ ಜಗತ್ತಿನ ಹವಾಗುಣವನ್ನು, ಋತು­ಮಾನವನ್ನು ನಿಯಂತ್ರಿಸುತ್ತವೆ ಎಂಬುದು ಗೊತ್ತಾದ ಮೇಲೆ ಅವುಗಳ ಅಧ್ಯಯನ ಮತ್ತು ರಕ್ಷಣೆಗಾಗಿ ವಿಶೇಷ ಸಂಶೋಧನೆಗಳು ನಡೆಯತೊಡಗಿವೆ. ಒಂದೆರಡು ಉದಾಹರಣೆ­ಯನ್ನು ನೋಡಿ: ತೀವ್ರ ಒತ್ತಡಕ್ಕೆ ಸಿಲುಕಿದಾಗ ಎತ್ತರದ ಮರಗಳು ವಾತಾವರಣಕ್ಕೆ ಮಿಥೈಲ್ ಸ್ಯಾಲಿಸಿಲೇಟ್ ಎಂಬ ಅನಿಲವನ್ನು ಹೊರಸೂ­ಸುತ್ತವೆ
ಎಂದು ಅಮೆರಿಕದ ರಾಷ್ಟ್ರೀಯ ವಿಜ್ಞಾನ ನಿಧಿಯ ಥಾಮಸ್ ಕಾರ್ಲ್ ಅವರ ತಂಡವೊಂದು ಮರದ ಮೇಲೆ ನೂರಡಿ ಎತ್ತರದಲ್ಲಿಟ್ಟ ಸಲಕರಣೆಗಳ ಮೂಲಕ ಅಳೆದು ನೋಡಿದೆ. ಮೊನ್ನೆ ಆಗಸ್ಟ್ ತಿಂಗಳಲ್ಲಿ ಜೆನ್ನಿಫರ್ ಬಾಲ್ಚ್ ಎಂಬಾಕೆ ತನ್ನ 30 ಸಂಗಡಿಗರ ಜತೆ ಹೋಗಿ ಅಮೆಜಾನ್‌ನ 50 ಹೆಕ್ಟೇರ್ ದಟ್ಟ ಅರಣ್ಯಕ್ಕೆ ವ್ಯವಸ್ಥಿತವಾಗಿ ಬೆಂಕಿಕೊಟ್ಟು ಎಷ್ಟು ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾ­ವರಣಕ್ಕೆ ಸೇರುತ್ತದೆ ಎಂದು ವರದಿ ಮಾಡಿ­ದ್ದಾರೆ. ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್‍ಮೂರ್ ಲ್ಯಾಬಿನ ಗೋವಿಂದಸ್ವಾಮಿ ಬಾಲಾ ಎಂಬುವರು ಮರಗಳು ಸೂರ್ಯನ ಶಾಖವನ್ನು ಹೇಗೆ ಹೀರಿಕೊಳ್ಳುತ್ತವೆ ಎಂದು ಅಧ್ಯಯನ ಮಾಡಿ, ‘ಉತ್ತರಕ್ಕೆ ಹೋದಂತೆ ಮರಗಳನ್ನು ಬೆಳೆಸುವುದು ಅಪಾಯಕಾರಿ’ ಎಂದಿದ್ದಾರೆ. ಅವರ ಪ್ರಕಾರ ಮಳೆಕಾಡುಗಳಲ್ಲಿ ಮರಗಳು ಹೆಚ್ಚಿಗೆ ಇದ್ದಷ್ಟೂ ಭೂಮಿಗೆ ಒಳ್ಳೆಯದು. ಆದರೆ ಸೈಬೀರಿಯಾ ಅಥವಾ ಉತ್ತರ ಅಕ್ಷಾಂಶಗಳಲ್ಲಿ ಮರಗಳು ಇಲ್ಲದಿದ್ದರೇ ಭೂಮಿಗೆ ಒಳ್ಳೆಯದು. ಏಕೆಂದರೆ ಹಿಮದ ಹಾಸಿನ ಮೇಲೆ ಬಿಸಿಲು ಬಿದ್ದರೆ ಅದು ಪ್ರತಿಫಲನವಾಗಿ ಹೊರಟು ಹೋಗುತ್ತದೆ. ಅಲ್ಲಿ ಅರಣ್ಯ ಬೆಳೆಸಿದರೆ ಅದು ಶಾಖವನ್ನು ಹೀರಿಕೊಂಡು ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತದೆ!
ಆದರೆ ವಾಸ್ತವದಲ್ಲಿ ಎರಡೂ ಕಡೆ ಉಲ್ಟಾ ಆಗುತ್ತಿದೆ. ಭೂಮಿಯ ನಡುಪಟ್ಟಿಗುಂಟ ವೃಕ್ಷಗಳ ನಾಶ ಹೆಚ್ಚುತ್ತಿದೆ. ಉತ್ತರದ ದೇಶಗಳಲ್ಲಿ ಗಿಡಮರಗಳ ಪ್ರೇಮ ದಿನದಿನಕ್ಕೆ ಹೆಚ್ಚುತ್ತಿದೆ.
ಈ ಮಧ್ಯೆ ವೃಕ್ಷಗಳು ಬೆಳೆಯಬೇಕಾದಲ್ಲಿ ವೃಕ್ಷಪ್ರೇಮವನ್ನು ಹೆಚ್ಚಿಸಲೆಂದು ಬೆಂಗಳೂರಿ­ನಲ್ಲಿ ಮುಂದಿನ ಒಂದು ವಾರವಿಡೀ ಕ್ಯಾನೊಪಿ ಸಮ್ಮೇಳನ ನಡೆಯಲಿದೆ. ಪರಿಸರ ಧ್ವಂಸಕ್ಕೆ ಕಾರಣವಾಗುವ ವಿಜೃಂಭಣೆಯ ‘ಏರೋ ಶೋ’ಗಳನ್ನು ನೋಡಿದ ಇಲ್ಲಿನ ಜನರು ಈಗ ವಿಜ್ಞಾನಿಗಳ ‘ಮರ ಏರೋ ಶೋ’ವನ್ನು ಕೂಡ ನೋಡಬಹುದು.
ಆದರೆ ವಿಶೇಷ ರಂಜನೆಯನ್ನು ನಿರೀಕ್ಷಿಸಬೇಡಿ. ಅಮೆರಿಕದಲ್ಲೇನೋ ಜನಪ್ರತಿನಿಧಿಗಳನ್ನು ಮರ ಏರಿಸಬಹುದು. ಇಲ್ಲಿ ಯಾರ್‍ಯಾರನ್ನು ಏರಿಸೋಣ? ಗುಂಡ್ಯ ಅರಣ್ಯವನ್ನು ಮುಳುಗಿಸಿಯೇ ತೀರುತ್ತೇನೆಂದು ಶಪಥ ತೊಟ್ಟ ರಾಜಕಾರಣಿಗಳಿದ್ದಾರೆ; ಬೆಂಗಳೂರು ಸೆಕೆ-ಬೆಂಕಿಯೂರು ಆದರೂ ಸರಿ, ಮರಗಳನ್ನು ಕಡಿದೇ ಮೆಟ್ರೊ ರೈಲುಹಳಿ ಹಾಸುತ್ತೇನೆಂದು ಹೊರಟ ಎಂಜಿನಿಯರ್‌ಗಳು ಇದ್ದಾರೆ. ಅರಣ್ಯದ ನಡುವೆಯೇ ಗಣಿಗಾರಿಕೆ ನಡೆಸಬಹುದು ಎಂದು ವಾದಿಸಿ ಗೆಲ್ಲುವ ನ್ಯಾಯವಾದಿಗಳಿದ್ದಾರೆ. ಅವರನ್ನೆಲ್ಲ ಮರಗಳ ಮೇಲೆ ಏರಿಸಬೇಕೆಂದರೆ ಅಷ್ಟೊಂದು ಮರಗಳು ಎಲ್ಲಿವೆ ನಮ್ಮಲ್ಲಿ?