Categories
e-ದಿನ

ಮಾರ್ಚ್-07

ಪ್ರಮುಖಘಟನಾವಳಿಗಳು:

1799: ನೆಪೋಲಿಯನ್ ಬೋನಾಪಾರ್ಟೆ ಪ್ಯಾಲೆಸ್ಟೈನಿನ ಜಾಫಾ ವಶಪಡಿಸಿಕೊಂಡ. ಆತನ ಸೈನ್ಯ 2000 ಅಲ್ಬೇನಿಯನ್ ಯುದ್ಧ ಖೈದಿಗಳನ್ನು ಹತ್ಯೆಗೈಯಲು ಮುಂದಾಯಿತು.

1814: ಚಕ್ರವರ್ತಿ ನೆಪೋಲಿಯನ್ ಕ್ರಾವೋನ್ ಕದನದಲ್ಲಿ ವಿಜಯಿಯಾದ

1835: ಶೈಕ್ಷಣಿಕ ಅನುದಾನಗಳನ್ನು ಇನ್ನು ಮುಂದೆ ಪಾಶ್ಚಾತ್ಯ ತಿಳಿವಳಿಕೆ ವೃದ್ಧಿಗಾಗಿ ಬಳಸಲಾಗುವುದು ಎಂದು ಘೋಷಿಸುವ ಮೂಲಕ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ವರೂಪವನ್ನೇ ಬದಲಾಯಿಸಿದ. ಬ್ರಿಟಿಷ್ ಸರ್ಕಾರವು ‘ಇಂಗ್ಲಿಷ್ ಶಿಕ್ಷಣ’ ಪದ್ಧತಿಯನ್ನು ಅಂಗೀಕರಿಸಿತು.

1876: ಅಲೆಗ್ಸಾಂಡರ್ ಗ್ರಹಾಂ ಬೆಲ್ ಅವರಿಗೆ ಟೆಲಿಫೋನ್ ಸಂಶೋಧನೆಗಾಗಿ ಪೇಟೆಂಟ್ ನೀಡಲಾಯಿತು.

1900: ಜರ್ಮನಿಯ ‘ಎಸ್.ಎಸ್. ಕೈಸರ್ ವಿಲ್ ಹೆಲ್ಮ್ ಡೆರ್ ಗ್ರಾಸೆ’ ಮೊಟ್ಟ ಮೊದಲ ಬಾರಿಗೆ ದಡಕ್ಕೆ ವೈರ್ಲೆಸ್ ಸಂಜ್ಞೆಗಳನ್ನು ಕಳುಹಿಸಿದ ನಾವೆ ಎನಿಸಿತು.

1971: ಷೇಕ್ ಮುಜೀಬುರ್ ರಹ್ಮಾನ್ ಅವರು ಸುಹ್ರಾವಾರ್ಡಿ ಉದ್ಯಾನ್ ಎಂಬಲ್ಲಿ ಐತಿಹಾಸಿಕ ಭಾಷಣ ಮಾಡಿದರು.

1985: ‘ವಿ ಆರ್ ದಿ ವರ್ಲ್ಡ್’ ಗೀತೆ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೊಂಡಿತು.

1987: ಅಹಮದಾಬಾದಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 10,000ನೇ ರನ್ ಗಳಿಸಿ, ಈ ದಾಖಲೆ ಮಾಡಿದ ಮೊತ್ತ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1989: ‘ದಿ ಸಟಾನಿಕ್ ವರ್ಸಸ್’ ರಚನೆಕಾರ ಸಲ್ಮಾನ್ ರಷ್ದಿ ಮೇಲೆ ಫತ್ವಾ ಹೊರಡಿಸಿದ ನಿಟ್ಟಿನಲ್ಲಿ ಯುನೈಟೆಡ್ ಕಿಂಗ್ಡಂ ರಾಷ್ಟ್ರವು ಇರಾನ್ ಜೊತೆಗಿನ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದು ಹಾಕಿತು.

2003: ಎಪ್ಪತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರಸಿದ್ಧ ಪತ್ರಕರ್ತ, ಬರಹಗಾರ ಮತ್ತು ಹೋರಾಟಗಾರರಾದ ಡಾ. ಪಾಟೀಲ ಪುಟ್ಟಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಆರಂಭಗೊಂಡಿತು.

2006: ವಾರಣಾಸಿಯ ದಂಡು ರೈಲು ನಿಲ್ದಾಣ ಮತ್ತು ಸಂಕಟಮೋಚನ ದೇವಸ್ಥಾನದಲ್ಲಿ ಉಗ್ರಗಾಮಿಗಳು ಶಕ್ತಿಶಾಲಿ ಬಾಂಬ್ ಸ್ಫೋಟ ನಡೆಸಿದ್ದರಿಂದ ಕನಿಷ್ಠ 20 ಜನ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಸಂಕಟಮೋಚನ ದೇವಸ್ಥಾನದ ಒಳಗೆ ಸಂಜೆ ಪೂಜೆ ನಡೆಯುತ್ತಿದ್ದಾಗ ಮೊದಲ ಸ್ಫೋಟದಲ್ಲಿ 6 ಜನ ಮತ್ತು ಕೆಲವೇ ನಿಮಿಷಗಳಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಮತ್ತು ನಿರೀಕ್ಷಣಾ ಕೊಠಡಿಯಲ್ಲಿ ಸಂಭವಿಸಿದ ಇನ್ನೊಂದು ಬಾಂಬ್ ಸ್ಫೋಟದಲ್ಲಿ 14 ಜನ ಮೃತರಾದರು.

2007: ‘ಅಮೃತ ಮಹೋತ್ಸವ’ ಆಚರಿಸಿದ ಭಾರತೀಯ ವಾಯುಪಡೆಯು, ಚಂಡೀಗಢದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ತಾನು ಭೂ ಮೇಲ್ಮೈಯಲ್ಲಿ ಹಾಗೂ ಬಾನಿನಲ್ಲಿ ಕಾರ್ಯಾಚರಣೆಗೆ ಬಳಸುವ ಎಲ್ಲ 27 ಮಾದರಿಯ ವಿಮಾನಗಳನ್ನು ಪ್ರದರ್ಶಿಸಿತು.

2007: ಕೇರಳ ಪ್ರವಾಸೋದ್ಯಮದಲ್ಲಿ ಹೊಸತನದ ಅಲೆ ಎನಿಸಿದ ಜಗತ್ತಿನ ಅತ್ಯಂತ ದೊಡ್ಡ ಹಾಗೂ ದುಬಾರಿ ಸಮುದ್ರಯಾನದ ‘ಕ್ವೀನ್ ಮೇರಿ-2′ ಹಡಗು ಕೊಚ್ಚಿಗೆ ಬಂದಿಳಿಯಿತು. ಅಲೆಯ ಮೇಲೆ ಅಂತರಿಕ್ಷ ತೋರಿಸುವ ತಾರಾ ವೀಕ್ಷಣಾಲಯ, ಜಗತ್ತಿನ ಸಮುದ್ರದ ಮೇಲಿನ ಅತಿದೊಡ್ಡ ಗ್ರಂಥಾಲಯ ಮತ್ತು ಬಾಲ್ ರೂಂ ಈ ಹಡಗಿನ ವಿಶೇಷಗಳು.

2008: ಮೊದಲ ಬಾರಿಗೆ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರನ್ನು ಹೊತ್ತ ಪ್ರಯೋಗಾರ್ಥ ವಿಮಾನ ಹಾರಾಟ ಯಶಸ್ವಿಯಾಗಿ ನಡೆಯಿತು. ಕಿಂಗ್ ಫಿಷರ್ ಏರ್ ಲೈನ್ಸ್, ಭಾರತೀಯ ವಾಯುಪಡೆಗಳ ವಿಮಾನ ಮತ್ತು ಏರ್ ಡೆಕ್ಕನ್ ವಿಮಾನಗಳು ಈದಿನ ಬೆಳಗ್ಗೆ ಇಲ್ಲಿ ಇಳಿಯುವ ಮತ್ತು ಹಾರುವ ಮೂಲಕ ಮಾರ್ಚ್ 30ರಿಂದ ಪ್ರಾರಂಭವಾಗುವ ವಿಮಾನ ನಿಲ್ದಾಣದ ಕಾರ್ಯಾರಂಭವನ್ನು ಸುಗಮಗೊಳಿಸಿದವು.

2008: ತ್ರಿಪುರಾ ಮತ್ತು ಮೇಘಾಲಯಗಳಲ್ಲಿ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿತು. ತ್ರಿಪುರಾದಲ್ಲಿ ಎಡರಂಗ ನಾಲ್ಕನೇಯ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದರೆ, ಮೇಘಾಲಯದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಪ್ರಮುಖಜನನ/ಮರಣ:

1481: ಇಟಾಲಿಯನ್ ವಿನ್ಯಾಸಕಾರ ಮತ್ತು ಚಿತ್ರಕಾರ ಬಲ್ದಸ್ಸಾರೆ ಪೆರುಸ್ಸಿ ಸಿಯೇನಾ ಎಂಬಲ್ಲಿ ಜನಿಸಿದರು.

1765: ಪೋಟೋಗ್ರಫಿ ಸಂಶೋಧಕ ಜೋಸೆಫ್ ನೀಪ್ಸ್ ಜನಿಸಿದರು. ಫ್ರೆಂಚ್ ಸಂಶೋಧಕರಾದ ಈತ ದೀರ್ಘಕಾಲ ಬಾಳುವಂತಹ ಹೀಲಿಯೋಗ್ರಫಿ ಫೋಟೋಗ್ರಾಫ್ ತಂತ್ರಜ್ಞಾನವನ್ನು ಸೃಷ್ಟಿಸಿದರು.

1819: ಶಿಶುನಾಳ ಶರೀಫರು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳಗ್ರಾಮದಲ್ಲಿ ಜನಿಸಿದರು. ಅವರ ಮೂಲ ಹೆಸರು ಮಹಮ್ಮದ ಶರೀಫ. ಗುರುಗೋವಿಂದ ಭಟ್ಟರಿಂದ ಸುಜ್ಞಾನವನ್ನು ಪಡೆದ ಇವರು ತಾವು ಕಂಡ ಬೆಳಕನ್ನು ಇತರರೂ ಕಂಡು ಪುನೀತರಾಗಬೇಕೆಂಬ ಸದುದ್ದೇಶದಿಂದ ಹಲವಾರು ಪದ್ಯಗಳನ್ನು ರಚಿಸಿದರು. ಈ ಪದ್ಯಗಳಾದರೋ ಕಾವ್ಯ ಸೃಷ್ಟಿಗೆಂದು ರಚಿಸಿದ ಕಾವ್ಯಗಳಾಗಿರದೆ, ಜನ ಬದುಕಬೇಕೆಂದು, ಹಾಗೂ ಧರ್ಮ ಮಾರ್ಗದಿಂದ ಬಾಳಿ ಜೀವನ್ಮುಕ್ತರಾಗಬೇಕೆಂಬ ಘನ ಉದ್ದೇಶದಿಂದ ರಚಿಸಿದ ಕಾವ್ಯಗಳಾಗಿವೆ.

1857: ಆಸ್ತ್ರಿಯನ್ ವೈದ್ಯವಿಜ್ಞಾನಿ ಜೂಲಿಯಸ್ ವಾಗ್ನರ್-ಜೌರೆಗ್ ಅವರು ಆಸ್ಟ್ರಿಯಾದ ವೇಲ್ಸ್ ಎಂಬಲ್ಲಿ ಜನಿಸಿದರು. ಡಿಮೆಂಟಿಕಾ ಪ್ಯಾರಲೆಟಿಕಾ ಚಿಕಿತ್ಸೆಯಲ್ಲಿ ಮಲೇರಿಯಾ ಇನಾಕ್ಯುಲೇಶನ್ ಬಳಸಬಹುದಾದ ಸಂಶೋಧನೆಗಾಗಿ ಇವರಿಗೆ 1927 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1905: ಚಿತ್ರ ಕಲಾವಿದ, ರಾಜ್ಯ ಪ್ರಶಸ್ತಿ ವಿಜೇತ ಶಂಕರರಾವ್ ಅಳಂದಕರ ಅವರು ಕಲ್ಬುರ್ಗಿಯಲ್ಲಿ ಜನಿಸಿದರು.

1911: ಸಚ್ಚಿದಾನಂದ ಹೀರಾನಂದ ವಾತ್ಸಾಯನ ಉತ್ತರಪ್ರದೇಶದ ಡಿವೋರಿಯಾ ಜಿಲ್ಲೆಯ ಖುಷಿನಗರ ಎಂಬಲ್ಲಿ ಜನಿಸಿದರು. ‘ನಯೀ ಕವಿತಾ’ ಮತ್ತು ‘ಪ್ರಯೋಗ್’ಗಳಿಗೆ ಹೆಸರಾದ ‘ಅಜ್ನೇಯಾ’ ಕಾವ್ಯನಾಮದ ಖ್ಯಾತ ಹಿಂದಿ ಕವಿಗಳಾದ ಇವರಿಗೆ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಗೋಲ್ಡನ್ ರೀತ್ ಅವಾರ್ಡ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1934: ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿದ್ದ ನಾರಿ ಕಾಂಟ್ರಾಕ್ಟರ್ ಗುಜರಾಥಿನ ಗೋಧ್ರಾದಲ್ಲಿ ಜನಿಸಿದರು. ಭಾರತದ ಪರ 31 ಟೆಸ್ಟುಗಳಲ್ಲಿ ಪ್ರಾರಂಭಿಕ ಎಡಗೈ ಆಟಗಾರರಾಗಿದ್ದ ಇವರು 1962ರ ವರ್ಷದಲ್ಲಿ ವೆಸ್ಟ್ ಇಂಡೀಜ್ನಲ್ಲಿ ಪಂದ್ಯವನ್ನಾಡುವಾಗ ತೀವ್ರವಾಗಿ ಏಟು ಬಿದ್ದು ತಮ್ಮ ಕ್ರಿಕೆಟ್ ಆಟಕ್ಕೆ ಅಂತ್ಯ ಹೇಳಬೇಕಾಯಿತು.

1938: ಅಮೆರಿಕದ ಜೀವವಿಜ್ಞಾನಿ ಡೇವಿಡ್ ಬಾಲ್ಟಿಮೋರ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ‘ರಿವರ್ಸ್ ಟ್ರಾನ್ಸ್ ಕ್ರಿಪ್ಟೇಸ್ ಬಾಲ್ಟಿಮೋರ್ ಕ್ಲಾಸಿಫಿಕೇಶನ್’ ಕುರಿತಾದ ಕಾರ್ಯಕ್ಕೆ ಪ್ರಸಿದ್ಧರಾಗಿರುವ ಇವರಿಗೆ 1975 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1945: ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕರಾದ ಟಿ.ವಿ. ಶಂಕರನಾರಾಯಣನ್ ಅವರು ತಮಿಳುನಾಡಿನ ಮೈಲಾದುತ್ತುರೈ ಎಂಬಲ್ಲಿ ಜನಿಸಿದರು. ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1949: ಕೇಂದ್ರ ಮಂತ್ರಿಗಳಾಗಿ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿರುವ ಗುಲಾಮ್ ನಬೀ ಆಜಾದ್ ಸೋತಿ ಎಂಬಲ್ಲಿ ಜನಿಸಿದರು.

1955: ಪ್ರಸಿದ್ಧ ಚಲನಚಿತ್ರ ಮತ್ತು ರಂಗಭೂಮಿ ನಟ ಅನುಪಮ್ ಖೇರ್ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜನಿಸಿದರು. 500ಕ್ಕೂ ಹೆಚ್ಚು ಭಾರತೀಯ ಚಿತ್ರಗಳಲ್ಲಿ ನಟಿಸಿರುವ ಇವರು ಅನೇಕ ಅಂತರರಾಷ್ಟ್ರೀಯ ಪ್ರಸಿದ್ಧ ಚಿತ್ರಗಳಲ್ಲೂ ನಟಿಸಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ರಾಷ್ಟ್ರೀಯ ಚಲನಚಿತ್ರಗಳಲ್ಲಿ ಎರಡು ಬಾರಿ ಜ್ಯೂರಿ ಪ್ರಶಸ್ತಿ ಹಾಗೂ ಅನೇಕ ಫಿಲಂ ಫೇರ್ ಮತ್ತು ಇನ್ನಿತರ ಪ್ರಶಸ್ತಿಗಳು ಇವರಿಗೆ ಸಂದಿವೆ. ರಾಷ್ಟ್ರೀಯ ಸೆನ್ಸಾರ್ ಮಂಡಳಿ ಮತ್ತು ರಾಷ್ಟ್ರೀಯ ನಾಟಕ ಶಾಲೆಯ ಮುಂತಾದ ಸಂಸ್ಥೆಗಳ ಮುಖ್ಯಸ್ಥರಾಗಿ ಸಹಾ ಇವರ ಸೇವೆ ಸಂದಿದೆ.

1960: ಜೆಕೋತ್ಸ್ಲಾವಿಯಾ ಸಂಜಾತ ಅಮೆರಿಕ್ ಟೆನಿಸ್ ಆಟಗಾರರಾದ ಇವಾನ್ ಲೆಂಡ್ಲ್ ಒಸ್ಟ್ರಾವಾ ಎಂಬಲ್ಲಿ ಜನಿಸಿದರು. 19 ಗ್ರ್ಯಾಂಡ್ ಸ್ಲಾಮ್ ಫೈನಲ್ಗಳಲ್ಲಿ ಆಡಿ 8 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ನಂಬರ್ ಒನ್ ಆಟಗಾರರಾಗಿಯೂ ರಾರಾಜಿಸಿದ್ದ ಇವರು ಟೆನಿಸ್ ಆಟದ ಇತಿಹಾಸದಲ್ಲಿನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.

1984: ಚಲನಚಿತ್ರ ನಟಿ ರಾಧಿಕಾ ಪಂಡಿತ್ ಬೆಂಗಳೂರಿನಲ್ಲಿ ಜನಿಸಿದರು. ಕನ್ನಡ ಚಲನಚಿತ್ರಗಳಲ್ಲಿನ ಅಭಿನಯಕ್ಕೆ ಮೂರು ಬಾರಿ ಸತತವಾಗಿ ಫಿಲಂ ಫೇರ್ ಪ್ರಶಸ್ತಿ ಹ್ಯಾಟ್ರಿಕ್ ಗಳಿಸಿದ ಸಾಧನೆ ಮಾಡಿದ್ದ ಇವರು ‘ಮೊಗ್ಗಿನ ಮನಸ್ಸು’ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ಶ್ರೇಷ್ಠ ನಟಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

161: ರೋಮನ್ ಚಕ್ರವರ್ತಿ ಆಂಟೋನಿಯಾಸ್ ಪಿಯಸ್ ನಿಧನರಾದರು.

1932: ಫ್ರೆಂಚ್ ಪತ್ರಕರ್ತ, ರಾಜಕಾರಣಿ, ಫ್ರಾನ್ಸಿನ ಪ್ರಧಾನಿ ನೊಬೆಲ್ ಪುರಸ್ಕೃತ ಅರಿಸ್ಟೈಡ್ ಬ್ರಿಯಾಂಡ್ ಪ್ಯಾರಿಸ್ ನಗರದಲ್ಲಿ ನಿಧನರಾದರು.

1952: ‘ಆಟೋಬಯಾಗ್ರಫಿ ಆಫ್ ಎ ಯೋಗಿ’ ಎಂಬ ಪ್ರಸಿದ್ಧ ಗ್ರಂಥರಚನೆಕಾರ, ಪಾಶ್ಚಿಮಾತ್ಯ ದೇಶಿರಿಗರಲ್ಲಿ ಧ್ಯಾನ ಮತ್ತು ಕ್ರಿಯಾ ಯೋಗವನ್ನು ಪ್ರಸಿದ್ಧಿ ಪಡಿಸಿದ ಪರಮಹಂಸ ಯೋಗಾನಂದರು ಲಾಸ್ ಎಂಜೆಲಿಸ್ ನಗರದಲ್ಲಿ ನಿಧನರಾದರು. ‘ಕ್ರಿಯಾಯೋಗ’ ಎಂಬ ಧ್ಯಾನಪದ್ಧತಿಯನ್ನು ಪ್ರಸಿದ್ಧಿಗೊಳಿಸಿದ ಇವರು ವಿಶ್ವದ ವಿವಿದೆಡೆಗಳಲ್ಲಿ ಧ್ಯಾನ ಬೋಧನಾ ಕೇಂದ್ರಗಳನ್ನು ಸ್ಥಾಪಿಸಿ ಬಹಳಷ್ಟು ಶಿಷ್ಯರನ್ನು ಹೊಂದಿದ್ದರು.

1954: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಓಟ್ಟೋ ಡೀಲ್ಸ್ ಅವರು ಕಿಯೇಲ್ ಎಂಬಲ್ಲಿ ನಿಧನರಾದರು. ಡಿಯೇನ್ ಸಿಂಥೆಸಿಸ್ ಕುರಿತಾದ ಸಂಶೋಧನೆಗೆ ಇವರಿಗೆ 1950 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1961: ಸ್ವಾತಂತ್ರ್ಯ ಹೋರಾಟಗಾರ, ಉತ್ತರ ಪ್ರದೇಶದ ಪ್ರಥಮ ಮುಖ್ಯಮಂತ್ರಿಗಳಾಗಿದ್ದ ಗೋವಿಂದ ವಲ್ಲಭ ಪಂತ್ ನವದೆಹಲಿಯಲ್ಲಿ ನಿಧನರಾದರು. ಸ್ವಾತಂತ್ಯ್ರ ಹೋರಾಟದಲ್ಲಿ ಪೋಲೀಸರ ಲಾಠಿ ಏಟಿನಿಂದಇವರಿಗೆ ಅಂಗವೇ ಊನವಾಗಿತ್ತು. 1957ರಲ್ಲಿ ‘ಭಾರತ ರತ್ನ’ ಪ್ರಶಸ್ತಿಯನ್ನು ಅವರಿಗೆ ಕೊಟ್ಟು ಗೌರವಿಸಲಾಯಿತು. ಆಗ ಪಂತರು ಹೇಳಿದರು ‘‘ನಾನು ಸ್ವಾತಂತ್ರ್ಯಕ್ಕಾಗಿ ನಾಲ್ಕು ಸಲ ಜೈಲಿಗೆ ಹೋಗಿದ್ದೆ. ಅದೇ ನನಗೆ ಸಿಕ್ಕ ನಿಜವಾದ ಪುರಸ್ಕಾರ. ಅದಕ್ಕಿಂತ ಇನ್ನೇನು ಬೇಕು?’’

1997: ಅಮೇರಿಕಾದ ಭೌತವಿಜ್ಞಾನಿ ಎಡ್ವರ್ಡ್ ಮಿಲ್ಸ್ ಪರ್ಸೆಲ್ ಅವರು ಕೇಂಬ್ರಿಡ್ಜಿನಲ್ಲಿ ನಿಧನರಾದರು. ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನಾನ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1952 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2012: ಪ್ರಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ರವಿ ಶಂಕರ್ ಶರ್ಮಾ ಮುಂಬೈನಲ್ಲಿ ನಿಧನರಾದರು. ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶನಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿದ್ದವು.