Categories
e-ದಿನ

ಮಾರ್ಚ್-10

ಪ್ರಮುಖಘಟನಾವಳಿಗಳು:

1814: ಮೊದಲನೆಯ ನೆಪೋಲಿಯನ್ಗೆ ಫ್ರಾನ್ಸಿನ ಲಾವೋನ್ ಕದನದಲ್ಲಿ ಸೋಲುಂಟಾಯಿತು.

1876: ಅಲೆಗ್ಸಾಂಡರ್ ಗ್ರಹಾಂ ಬೆಲ್ ಅವರು ತಮ್ಮ ಸಂಶೋಧವಾದ ಟೆಲಿಫೋನಿನಲ್ಲಿ ತಮ್ಮ ಸಹಾಯಕ ವಾಟ್ಸನ್ ಅವರಿಗೆ ‘ಮಿಸ್ಟರ್ ವಾಟ್ಸನ್, ಕಮ್ ಹಿಯರ್, ಐ ವಾಂಟ್ ಟು ಸೀ ಯು’ ಎಂದು ಯಶಸ್ವಿಯಾಗಿ ಕರೆ ಮಾಡಿದರು.

1906: ಯೂರೋಪಿನ ಇತಿಹಾಸದಲ್ಲೇ ಭೀಕರವಾದ ಫ್ರಾನ್ಸಿನ ‘ಕೊರ್ರೀಯರಸ್ ಗಣಿ ದುರಂತದಲ್ಲಿ’ 1099 ಮಂದಿ ಗಣಿ ಕಾರ್ಮಿಕರು ಅಸುನೀಗಿದರು.

1922: ಮಹಾತ್ಮ ಗಾಂಧೀ ಅವರನ್ನು ರಾಜದ್ರೋಹದ ಆಪಾದನೆಯ ಮೇಲೆ ಬಂಧಿಸಿದ ಬ್ರಿಟಿಷ್ ಸರ್ಕಾರ ಆರು ವರ್ಷಗಳ ಜೈಲುವಾಸ ವಿಧಿಸಿತು. ಎರಡೇ ವರ್ಷಗಳ ನಂತರದಲ್ಲಿ ಅವರನ್ನು ಅಪೆಂಡಿಸೈಟಿಸ್ ಚಿಕಿತ್ಸೆಯ ಅಗತ್ಯತೆ ಇದ್ದದ್ದರಿಂದ ಬಿಡುಗಡೆ ಮಾಡಲಾಯಿತು.

1945: ಅಮೆರಿಕನ್ ವಾಯು ಪಡೆಯು ಟೋಕಿಯೋ ಮೇಲೆ ಬಾಂಬಿನ ಮಳೆಗೆರೆಯಿತು. ಇದು ಉಂಟುಮಾಡಿದ ದಳ್ಳುರಿಯಲ್ಲಿ ಒಂದು ಲಕ್ಷ ಜನ, ಬಹುತೇಕವಾಗಿ ಜನಸಾಮಾನ್ಯರು ಸಾವಿಗೀಡಾದರು

1947: ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲಿನ ‘ಅಟೋಮಿಕ್ ಎನರ್ಜಿ ಕಮಿಷನ್’ ಕುರಿತಾದ ಇಪ್ಪತ್ತನೇ ನಿರ್ಣಯವು ಅಂಗೀಕೃತಗೊಂಡಿತು.

1959: ಚೀನಾವು ದಲೈ ಲಾಮಾ ಅವರನ್ನು ಅಪಹರಣಗೈಯಲು ಯತ್ನಿಸುತ್ತದೆ ಎಂಬ ಭಯದಿಂದ ಮೂರು ಲಕ್ಷ ನೇಪಾಳಿಯರು ಅವರ ಅರಮನೆಯನ್ನು ಸುತ್ತುಗಟ್ಟಿ ರಕ್ಷಣೆಗೆ ನಿಂತರು.

1977: ಖಗೋಳ ಶಾಸ್ತ್ರಜ್ಞರು ಯುರೇನಸ್ ಸುತ್ತಲೂ ಉಂಗುರಗಳಿರುವುದನ್ನು ಪತ್ತೆ ಹಚ್ಚಿದರು.

1978: ಮೊದಲ ಮಿರೇಜ್ 2000 ಯುದ್ಧ ವಿಮಾನವು ಡಸ್ಸಾಲ್ಟ್ ಸಂಸ್ಥೆಯಿಂದ ನಿರ್ಮಾಣಗೊಂಡಿತು.

1982: ಸೂರ್ಯನ ಸುತ್ತ ಸುತ್ತುವ ಒಂಬತ್ತೂ ಗ್ರಹಗಳೂ ಸೂರ್ಯನ ಒಂದೇ ಬದಿಯಲ್ಲಿ ಸಾಲಾಗಿ ಕಂಡು ಬಂದವು.

1985: ಮೆಲ್ಬೋರ್ನಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಪರಾಭವಗೊಳಿಸುವ ಮೂಲಕ ಸುನಿಲ್ ಗಾವಸ್ಕಾರ್ ನಾಯಕತ್ವದ ಭಾರತ ತಂಡವು ‘ಬೆನ್ಸನ್ ಅಂಡ್ ಹೆಜೆಸ್’ ವಿಶ್ವ ಕ್ರಿಕೆಟ್ ಚಾಂಪಿಯನ್ ಶಿಪ್ ಅನ್ನು ಗೆದ್ದುಕೊಂಡಿತು. ರವಿಶಾಸ್ತ್ರಿ ಅವರು ‘ಚಾಂಪಿಯನ್ನರ ಚಾಂಪಿಯನ್’ ಪ್ರಶಸ್ತಿ ಪಡೆದರು.

2006 : ಅಮೆರಿಕದ ಮಾರ್ಸ್ ರೆಕನ್ನೈಸ್ಸಾನ್ಸ್ ಆರ್ಬಿಟರ್’ ಉಪಗ್ರಹವು ಮಂಗಳ ಗ್ರಹವನ್ನು ತಲುಪಿತು.

ಪ್ರಮುಖಜನನ/ಮರಣ:

1921: ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ, ಚಿತ್ರರಂಗದ ಪ್ರಥಮ ನಿರ್ಮಾಪಕಿ, ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ಎಂ.ವಿ. ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ ಜನಿಸಿದರು. 1943ರಲ್ಲಿ ‘ರಾಧಾರಮಣ’ ಚಿತ್ರವನ್ನು ನಿರ್ಮಿಸಿದ ಎಂ. ವಿ. ರಾಜಮ್ಮನವರು, ಚಿತ್ರರಂಗದ ಪ್ರಥಮ ನಿರ್ಮಾಪಕಿ ಎನಿಸಿದರು. 2000ದ ವರ್ಷದ ಜುಲೈ 6ರಂದು ನಿಧನರಾದ ಇವರಿಗೆ ಸ್ಕೂಲ್‌ಮಾಸ್ಟರ್, ಕಿತ್ತೂರು ಚೆನ್ನಮ್ಮ ಅಭಿನಯಕ್ಕಾಗಿ ಪ್ರಶಸ್ತಿ ಮತ್ತು ರಾಷ್ಟ್ರಾಧ್ಯಕ್ಷರ ಪದಕಗಳು ಸಂದಿದ್ದವು.

1923: ಅಮೆರಿಕದ ಭೌತವಿಜ್ಞಾನಿ ವಾಲ್ ಲಾಂಗ್ಸ್ಡನ್ ಫಿಚ್ ಅವರು ನೆಬ್ರಾಸ್ಕಾದ ಮೆರ್ರಿಮನ್ ಎಂಬಲ್ಲಿ ಜನಿಸಿದರು. ‘ಆಲ್ಟರ್ನೇಟಿಂಗ್ ಗ್ರೆಡಿಯಂಟ್ ಸಿಂಕ್ರೋಟ್ರಾನ್’ ಕುರಿತಾದ ಸಂಶೋಧನೆಗೆ ಇವರಿಗೆ 1980 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1932: ಉಡುಪಿ ರಾಮಚಂದ್ರ ರಾವ್ ಎಂಬ ವಿಸ್ತೃತ ಹೆಸರಿನ ಪ್ರೊ. ಯು. ಆರ್. ರಾವ್ ಅವರು ಉಡುಪಿ ಬಳಿಯ ಅಡಮಾರು ಗ್ರಾಮದಲ್ಲಿ ಜನಿಸಿದರು. ಉಡುಪಿ ರಾಮಚಂದ್ರ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಭಾರತ ಇಂದು ಬಾಹ್ಯಾಕಾಶ ಯುಗದಲ್ಲಿ ಗಳಿಸಿರುವ ಪ್ರತಿಷ್ಠಿತ ಸ್ಥಾನಕ್ಕೆ ಪ್ರಮುಖ ಕೊಡುಗೆದಾರರೆನಿಸಿದ್ದಾರೆ. ಅಮೆರಿಕದ ಪ್ರತಿಷ್ಠಿತ ‘ಸೆಟಲೈಟ್ ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾಗಿರುವ ಇವರಿಗೆ ಪದ್ಮವಿಭೂಷಣ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಸಂದಿವೆ.

1939: ಭಾರತದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಮತ್ತು ಬರಹಗಾರ ಅಸ್ಘರ್ ಅಲಿ ಇಂಜಿನಿಯರ್ ರಾಜಾಸ್ಥಾನದ ಸಲುಂಬಾರ್ ಎಂಬಲ್ಲಿ ಜನಿಸಿದರು. 2013 ವರ್ಷದಲ್ಲಿ ನಿಧನರಾದ ಇವರಿಗೆ ಪ್ರತಿಷ್ಟಿತ ರೈಟ್ ಲೈವ್ಲಿಹುಡ್ ಗೌರವ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

1942: ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ, ದಿಟ್ಟ ಪರ್ತಕರ್ತೆ, ಲೇಖಕಿ ಡಾ. ವಿಜಯಾ ಅವರು ದಾವಣಗೆರೆಯಲ್ಲಿ ಹೋಳಿ ಹುಣ್ಣಿಮೆಯ ದಿನದಂದು ಜನಿಸಿದರು. ಚಲನಚಿತ್ರ, ನಾಟಕ, ಸಾಹಿತ್ಯಗಳಲ್ಲಿ ತೊಡಗಿಕೊಂಡಿರುವ ಡಾ. ವಿಜಯಾ ಅವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಕೃತಿ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್ ಮುಂತಾದ ಅನೇಕ ಗೌರವಗಳು ಸಂದಿವೆ.

1945: ಗ್ವಾಲಿಯರ್ ರಾಜಮನೆತನಕ್ಕೆ ಸೇರಿದ, ಕೇಂದ್ರ ಮಂತ್ರಿಗಳಾಗಿದ್ದ ಮಾಧವರಾವ್ ಸಿಂಧ್ಯಾ ಮುಂಬೈನಲ್ಲಿ ಜನಿಸಿದರು. ಕೇಂದ್ರ ರೈಲ್ವೇ ಮಂತ್ರಿಗಳಾಗಿದ್ದ ಇವರು 2001 ವರ್ಷದಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

1974: ಅಮೆರಿಕದ ಉದ್ಯಮಿ ಟ್ವಿಟ್ಟರ್ ಸಹ ಸಂಸ್ಥಾಪಕ ಬಿಜ್ ಸ್ಟೋನ್ ಜನಿಸಿದರು.

1897: ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆ, ಆಧುನಿಕ ಶಿಕ್ಷಣ ಮಾತೆ, ಸಮಾಜ ಸೇವಕಿ ಎಂದು ಪ್ರಸಿದ್ಧರಾದ ಸಾವಿತ್ರಿಬಾಯಿ ಫುಲೆ ಅವರು ಪುಣೆ ಬಳಿಯ ಸಸಾನೆ ಮಾಲಾ ಎಂಬಲ್ಲಿ ಪ್ಲೇಗ್ ಕಾಯಿಲೆ ಇದ್ದವರಿಗೆ ಶುಶ್ರೂಷೆ ಮಾಡುತ್ತಾ ತಾವೇ ಆ ಕಾಯಿಲೆಗೆ ಬಲಿಯಾಗಿ ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಅನೇಕ ಶಾಲೆಗಳನ್ನು ಸ್ಥಾಪಿಸಿ, ಹೆಣ್ಣುಮಕ್ಕಳನ್ನು ಮನೆ ಮನೆಗೆ ಹೋಗಿ ಶಿಕ್ಷಣಶಾಲೆಗೆ ಕರೆತಂದರು. ಅಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಇದ್ದ ಎಲ್ಲ ವಿರೋಧಗಳಿಗೂ ಎದೆಗುಂದದೆ ಸಹಸ್ರಾರು ಮಕ್ಕಳಿಗೆ ವಿದ್ಯಾಭ್ಯಾಸದ ಧಾರೆ ಎರೆದರು.

1923: ಡಚ್ ಭೌತವಿಜ್ಞಾನಿ ಫ್ರಿಟ್ಜ್ ಜೆರ್ನಿಕೆ ಅವರು ನೆದರ್ಲ್ಯಾಂಡ್ಸಿನ ಆಮ್ಸ್ಟರ್ಡ್ಯಾಮ್ ನಗರದಲ್ಲಿ ನಿಧನರಾದರು. ‘ಫೇಸ್ ಕಾಂಟ್ರಾಕ್ಟ್ ಮೈಕ್ರೋಸ್ಕೋಪ್’ ಸಂಶೋಧನೆಗೆ ಇವರಿಗೆ 1953 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2007: ಖ್ಯಾತ ರಂಗಭೂಮಿ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಂದೋಡಿ ಶಾಂತರಾಜ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. ಶಾಂತರಾಜ್ ಅವರು ಚಿಂದೋಡಿ ಲೀಲಾ ಅವರ ಅಣ್ಣ. ಕನ್ನಡ ರಂಗಭೂಮಿ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶಾಂತರಾಜ್ ಟಿಪ್ಪು ಸುಲ್ತಾನ್ ನಾಟಕದಲ್ಲಿ ಮೀರ್ ಸಾದಕ್ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರು.