Categories
e-ದಿನ

ಮಾರ್ಚ್-11

ಪ್ರಮುಖಘಟನಾವಳಿಗಳು:

222: ರೋಮ್ ಸಾಮ್ರಾಜದಲ್ಲಿನ ದಂಗೆಯಲ್ಲಿ ಚಕ್ರವರ್ತಿ ಎಲಗಾಬಲುಸ್ ಮತ್ತು ಆತನ ತಾಯಿ ಸೋಮಿಯಾಸ್ ಅನ್ನು ಪ್ರಿಟೋರಿಯನ್ ಕಾವಲಿನೊಬ್ಬ ಹತ್ಯೆಗೈದ. ಈ ಈರ್ವರ ಜರ್ಝರಿತ ದೇಹಗಳನ್ನು ರಸ್ತೆಗಳಲ್ಲೆಲ್ಲಾ ಎಳೆದಾಡಿ ಕಡೆಗೆ ಟೈಬರ್ ನದಿಯಲ್ಲಿ ಎಸೆಯಲಾಯಿತು.

1702: ಇಂಗ್ಲೆಂಡಿನ ಪ್ರಥಮ ದಿನಪತ್ರಿಕೆ ‘ದಿ ಡೈಲಿ ಕೊರಾಂಟ್’ ತನ್ನ ಪ್ರಥಮ ಮುದ್ರಣವನ್ನು ಕಂಡಿತು.

1784: ಟಿಪ್ಪೂ ಸುಲ್ತಾನ್ ಮತ್ತು ಬ್ರಿಟಿಷರ ನಡುವೆ ಮಂಗಳೂರು ಒಪ್ಪಂದ ಏರ್ಪಟ್ಟು ಎರಡನೇ ಬ್ರಿಟಿಷ್-ಮೈಸೂರು ಯುದ್ಧ ಮುಕ್ತಾಯಗೊಂಡಿತು.

1818: ಮೇರಿ ವುಲ್ಸ್ಟೋನ್ ಕ್ರಾಫ್ಟ್ ಶೆಲ್ಲಿ ಅವರ ‘ಫ್ರಾಂಕೆನ್ಸ್ಟೀನ್’ ಅಥವಾ ‘ದಿ ಮಾಡರ್ನ್ ಪ್ರೊಮೇಥಿಯಸ್ ಪ್ರಕಟಗೊಂಡಿತು.

1872: ಬ್ರಿಟನ್ನಿನ ಸಂಪದ್ಭರಿತ ಕಲ್ಲಿದ್ದಲು ಪ್ರದೇಶದಲ್ಲಿರುವ ಸೌತ್ ವೇಲ್ಸಿನ ಸೆವೆನ್ ಸಿಸ್ಟರ್ಸ್ ಕೊಲೈರಿ ನಿರ್ಮಾಣ ಆರಂಭ

1886: ಪೆನ್ಸಿಲ್ವೇನಿಯಾದ ವುಮನ್ಸ್ ಮೆಡಿಕಲ್ ಕಾಲೇಜಿನಿಂದ ಪದವೀಧರೆಯಾಗುವ ಮೂಲಕ ಆನಂದಿಬಾಯಿ ಜೋಶಿ ಅವರು ಭಾರತದ ಮೊದಲ ವೈದ್ಯೆ ಎನಿಸಿದರು. ದಕ್ಷಿಣ ಏಷ್ಯಾದ ಪ್ರಪ್ರಥಮ ಮಹಿಳಾ ವೈದ್ಯರಲ್ಲಿ ಒಬ್ಬರು ಎಂದು ಪ್ರಸಿದ್ಧರಾಗಿರುವ ಆನಂದಿ ಗೋಪಾಲ್ ಜೋಷಿ ಅವರು 1865ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರು ಅಮೆರಿಕದಲ್ಲಿ ವೈದ್ಯಕಿಯ ಪದವಿ ಪಡೆದ ಪ್ರಪ್ರಥಮ ಭಾರತೀಯ ನೆಲದ ಮಹಿಳೆ ಎಂದೆನಿಸಿದ್ದಾರೆ. ಇವರು ಅಮೆರಿಕದ ನೆಲಕ್ಕೆ ಭೇಟಿ ಕೊಟ್ಟ ಪ್ರಪ್ರಥಮ ಹಿಂದೂ ಮಹಿಳೆ ಎಂಬ ಮಾತೂ ಇದೆ. ಅಲ್ಪಾಯುಷಿಯಾದ ಈಕೆ 1887ರ ವರ್ಷದಲ್ಲಿ ನಿಧನರಾದರು.

1918: ಅಮೆರಿಕಾದಲ್ಲಿ ಸ್ಪಾನಿಶ್ ಇನ್’ಫ್ಲುಯೆಂಜಾ ರೋಗದ ಮೊದಲ ಪ್ರಕರಣಗಳು ದಾಖಲಾದವು. ಜ್ವರ, ಗಂಟಲು ಕೆರೆತ ಮತ್ತು ತಲೆನೋವಿನ ದೂರಿನೊಂದಿಗೆ ಯುವಕನೊಬ್ಬ ಸೇನಾ ಆಸ್ಪತ್ರೆಗೆ ದಾಖಲಾದಾಗ ಇದು ಬೆಳಕಿಗೆ ಬಂತು. ಹೇಗೆ ನಿಗೂಢವಾಗಿ ಬಂತೋ ಅಷ್ಟೇ ನಿಗೂಢವಾಗಿ ಕಣ್ಮರೆಯಾದ ಈ ರೋಗ 6 ಲಕ್ಷ ಮಂದಿಯನ್ನು ಬಲಿತೆಗೆದುಕೊಳ್ಳುವ ಮೂಲಕ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ರೋಗ ಎನಿಸಿಕೊಂಡಿತು.

1982: ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟಿನಲ್ಲಿ ಮುಂಬೈ ತಂಡದ ದಿಢೀರ್ ಕುಸಿತಕ್ಕೆ ಕಾರಣರಾದ ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಮ ಭಟ್ ಅವರು ರಣಜಿ ಟ್ರೋಫಿ ಕ್ರಿಕೆಟಿನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಕರ್ನಾಟಕದ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.

1983: ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳ ಶೀತಲ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

1999: ‘ಇನ್ಫೋಸಿಸ್’ ಸಂಸ್ಥೆಯು, ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತಗೊಂಡ ಪ್ರಪ್ರಥಮ ಭಾರತೀಯ ಸಂಸ್ಥೆಯೆನಿಸಿತು.

2001: ಭಾರತದ ಪುಲ್ಲೇಲ ಗೋಪಿಚಂದ್ ಅವರು ‘ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್’ ಪ್ರಶಸ್ತಿ ಗೆದ್ದರು. ಅವರು ಚೀನಾದ ಚೆನ್ ಹಾಂಗ್ ಅವರನ್ನು ಅಂತಿಮ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪರಾಭವಗೊಳಿಸುವ ಮೂಲಕ ಈ ಪ್ರಶಸ್ತಿಯನ್ನು ಗಳಿಸಿದ ಎರಡನೇ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.

2001: ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಹರ್ ಭಜನ್ ಸಿಂಗ್ ಪಾತ್ರರಾದರು. ಎರಡನೇ ಟೆಸ್ಟ್ ಪಂದ್ಯದ ತಮ್ಮ 16ನೇ ಓವರಿನಲ್ಲಿ 2,3 ಮತ್ತು 4ನೇ ಚೆಂಡುಗಳಲ್ಲಿ ಅವರು ಸತತವಾಗಿ ಮೂರು ವಿಕೆಟ್ ಉರುಳಿಸಿದರು.

2004: ಸ್ಪೇನ್ ದೇಶದ ಮಡ್ರಿಡ್ನಲ್ಲಿ ದಿನದ ಬಿರುಸಿನ ವೇಳೆಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆದು 191 ಜನ ಮೃತರಾದರು.

2006: ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸ್ಟೀವ್ ಹರ್ಮಿಸನ್ ಅವರನ್ನು ಎಲ್. ಬಿ. ಡಬ್ಲ್ಯೂ ಬಲೆಗೆ ಕೆಡವಿ 500ನೇ ವಿಕೆಟ್ ಪಡೆದ ಕರ್ನಾಟಕದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು, ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದ ಮೊದಲ ಭಾರತೀಯರೆಂಬ ಗೌರವಕ್ಕೆ ಪಾತ್ರರಾದರು. ಇದಲ್ಲದೆ ಅತ್ಯಂತ ವೇಗವಾಗಿ 500 ವಿಕೆಟ್ ಪಡೆದ ವಿಶ್ವದ ಎರಡನೇ ಬೌಲರ್ ಎಂಬ ಕೀರ್ತಿಯೂ ಅವರದ್ದಾಯಿತು.

2007: ಭಾರತೀಯ ಆಟಗಾರ ವಿಶ್ವನಾಥನ್ ಆನಂದ್ ಮೊರೆಲಿಯಾ ಲಿನಾರೆಸ್ ಗ್ರ್ಯಾಂಡ್ ಮಾಸ್ಟರ್ ಚೆಸ್ ಟೂರ್ನಿಯಲ್ಲಿ ಉಕ್ರೇನಿನ ವೆಸೆಲಿ ಇವಾಂಚುಕ್ ಅವರನ್ನು ಪರಾಭವಗೊಳಿಸಿ, ವಿಶ್ವದ ಹೊಸ ನಂಬರ್ ಒನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ವಿಶ್ವ ಚಾಂಪಿಯನ್ ಚೀನಾದ ಲಿನ್ ಡ್ಯಾನ್ ಅವರು ಮೂರನೇ ಬಾರಿಗೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡರು.

2007: ಕೆರಿಬಿಯನ್ ದ್ವೀಪದ ಟ್ರೆಲಾನಿಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವರ್ಣರಂಜಿತ ಉದ್ಘಾಟನೆ ನೆರವೇರಿತು. 16 ತಂಡಗಳು ಪಾಲ್ಗೊಂಡಿದ್ದ ಈ ಪಂದ್ಯಾವಳಿ 46 ದಿನಗಳ ಕಾಲ ಜರುಗಿದವು.

2008: ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ಇನ್ಫೋಸಿಸ್ ಅಧ್ಯಕ್ಷ ಎನ್. ನಾರಾಯಣ ಮೂರ್ತಿ ಅವರನ್ನು ಅಮೆರಿಕದ ವುಡ್ರೋ ವಿಲ್ಸನ್ ಪ್ರಶಸ್ತಿ ಹಾಗೂ ಕಾರ್ಪೋರೆಟ್ ಪೌರತ್ವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಮೆರಿಕದ ಸ್ಮಿತ್ ಸಾನಿಯನ್ ಸಂಸ್ಥೆಯ ವುಡ್ರೂ ವಿಲ್ಸನ್ ಅಂತರರಾಷ್ಟ್ರೀಯ ಕೇಂದ್ರ ಪ್ರಕಟಿಸಿತು.

2008: ಪಾಕಿಸ್ಥಾನದ ವೈದ್ಯೆ ಬೇಗಂ ಜಾನ್ ಅವರಿಗೆ, ಅವರ ಅಸೀಮ ಸಾಹಸದ ವೈದ್ಯಕೀಯ ಸೇವೆಗಾಗಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿತು. ಅಮೆರಿಕದ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ವಾಷಿಂಗ್ಟನ್ನಿನಲ್ಲಿ ಬೇಗಂ ಜಾನ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು. ಪಾಕ್ ಗಡಿಭಾಗದ ಅಫ್ಘಾನಿಸ್ಥಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರರ ವಾಸಸ್ಥಳಗಳಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಗಳಿಗೆ ಎದೆಕೊಟ್ಟು ಬೇಗಂ ಜಾನ್ ತಮ್ಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ತಮ್ಮದೇ ಆದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಮೂಲಕ ಬುಡಕಟ್ಟು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ವೃದ್ಧಿಸಲು ಬೇಗಂ ಈ ಪ್ರದೇಶದಲ್ಲಿ ಶ್ರಮ ವಹಿಸಿದ್ದರು.

2009: ನ್ಯೂಜಿಲೆಂಡಿನಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಕೇವಲ 60 ಎಸೆತಗಳಲ್ಲಿ 13 ಬೌಂಡರಿ, ನಾಲ್ಕು ಸಿಕ್ಸರುಗಳನ್ನು ಒಳಗೊಂಡ ಶತಕ ಬಾರಿಸಿ ಭಾರತೀಯ ತಂಡಕ್ಕೆ 10 ವಿಕೆಟ್‌ಗಳ ಜಯ ತಂದುಕೊಟ್ಟರು. ಸೆಹ್ವಾಗ್ 125 ರನ್ ಗಳಿಸಿ ಔಟಾಗದೆ ಉಳಿದರು.

2011: ಜಪಾನಿನ ಸೆಂಡೈ ಪ್ರದೇಶದ 130 ಕಿಲೋ ಮೀಟರ್ ಪೂರ್ವದಲ್ಲಿ ಉಂಟಾದ 9 ಪ್ರಮಾಣದ ಭೂಕಂಪ ತಂದ ಸುನಾಮಿಯಲ್ಲಿ ಸಹಸ್ರಾರು ಸಾವಿನ ಜೊತೆಗೆ ಗಂಭೀರ ಪ್ರಮಾಣದ ಪರಮಾಣು ಅಪಘಾತ ಸಹಾ ಉಂಟಾಯಿತು.

ಪ್ರಮುಖಜನನ/ಮರಣ:

1811: ಅರ್ಬೈನ್ ಜೀನ್ ಜೋಸೆಫ್ ಲೆ ವೆರಿಯರ್ ಅವರು ಫ್ರಾನ್ಸಿನ ಸೈಂಟ್ ಲೋ ಎಂಬಲ್ಲಿ ಜನಿಸಿದರು. ಫ್ರೆಂಚ್ ಖಗೋಳತಜ್ಞರಾದ ಈತ ಕೇವಲ ಗಣಿತ ಲೆಕ್ಕಾಚಾರದ ಮೂಲಕ ನೆಪ್ಚೂನ್ ಗ್ರಹದ ಅಸ್ತಿತ್ವ ಮತ್ತು ಅದಿರುವ ಜಾಗದ ಕುರಿತು ನುಡಿದಿದ್ದರು.

1873: ಇಂಗ್ಲಿಷ್-ಅಮೆರಿಕನ್ ಚಲನಚಿತ್ರ ಉದ್ಯಮಿ ಡೇವಿಡ್ ಹಾರ್ಸ್ಲಿ ಅವರು ಡರ್ಹ್ಯಾಮಿನ ವೆಸ್ಟ್ ಸ್ಟ್ಯಾನ್ಲಿ ಎಂಬಲ್ಲಿ ಜನಿಸಿದರು. ಇವರು ಸೆಂಟೌರ್ ಫಿಲಂ ಕಂಪೆನಿ ಸ್ಥಾಪಿಸಿದರಲ್ಲದೆ, ಅದರ ಪಶ್ಚಿಮ ತೀರದ ಶಾಖೆಯಾದ ಹಾಲಿವುಡ್ಡಿನ ಪ್ರಥಮ ಸ್ಟುಡಿಯೋ ಆದ ನೆಸ್ಟರ್ ಫಿಲಂ ಕಂಪೆನಿಯನ್ನು ಸ್ಥಾಪಿಸಿದರು.

1915: ಭಾರತೀಯ ಟೆಸ್ಟ್ ಕ್ರಿಕೆಟಿನ ನಾಯಕರಾಗಿದ್ದ ವಿಜಯ್ ಹಜಾರೆ ಸಂಗ್ಲಿಯಲ್ಲಿ ಜನಿಸಿದರು. ಭಾರತೀಯ ಟೆಸ್ಟ್ ಕ್ರಿಕೆಟ್ ತಂಡವನ್ನು 1951-53 ಅವಧಿಯಲ್ಲಿ 14 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಮುನ್ನಡೆಸಿದ ಇವರ ನಾಯಕತ್ವದಲ್ಲಿ, ಭಾರತವು ಇಂಗ್ಲೆಂಡ್ ತಂಡವನ್ನು ಮಣಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ಟಿನಲ್ಲಿ ತನ್ನ ಪ್ರಪ್ರಥಮ ಜಯವನ್ನು ದಾಖಲಿಸಿತು. ಟೆಸ್ಟ್ ಕ್ರಿಕೆಟ್ಟಿನಲ್ಲಿ ಬ್ಯಾಟುದಾರರಾಗಿ ಮತ್ತು ಬೌಲರ್ ಆಗಿ ಇವರು ಗಣನೀಯ ಸಾಧನೆಯನ್ನು ಮಾಡಿ ಪದ್ಮಶ್ರೀ ಪುರಸ್ಕೃತರಾಗಿದ್ದರು.

1916: ಎರಡು ಬಾರಿ ಬ್ರಿಟಿಷ್ ಪ್ರಧಾನಿಗಳಾಗಿದ್ದ ಹರೋಲ್ಡ್ ವಿಲ್ಸನ್ ಇಂಗ್ಲೆಂಡಿನ ಹಡರ್ಸ್ ಫೀಲ್ಡ್ ಎಂಬಲ್ಲಿ ಜನಿಸಿದರು.

1918: ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯ ಮ. ರಾಮಮೂರ್ತಿ ನಂಜನಗೂಡಿನಲ್ಲಿ ಜನಿಸಿದರು. ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಇವವರು ಉತ್ತಮ ಬರಹಗಾರರಾಗಿದ್ದು ಅನೇಕ ಕೃತಿಗಳನ್ನೂ ರಚಿಸಿದ್ದರು.

1920: ಡಚ್-ಅಮೆರಿಕನ್ ಭೌತವಿಜ್ಞಾನಿ ನಿಕೊಲಾಸ್ ಬ್ಲೋಮ್ಬರ್ಗನ್ ಅವರು ನೆದರ್ಲ್ಯಾಂಡ್ಸಿನ ಡಾರ್ಡ್ರೆಕ್ಟ್ ಎಂಬಲ್ಲಿ ಜನಿಸಿದರು. ಲೇಸರ್ ಸ್ಪೆಕ್ಟ್ರಾಸ್ಕೊಪಿ ಕುರಿತಾದ ಸಂಶೋಧನೆಗಾಗಿ ಅವರಿಗೆ 1981 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1955: ಸ್ಕಾಟಿಷ್ ಜೀವವಿಜ್ಞಾನಿ ಮತ್ತು ವೈದ್ಯರಾದ ಅಲೆಗ್ಸಾಂಡರ್ ಫ್ಲೆಮಿಂಗ್ ಅವರು ಲಂಡನ್ನಿನಲ್ಲಿ ನಿಧನರಾದರು. ‘ಪೆನ್ಸಿಲಿಯನ್ ನೊಟಾಟಮ್’ ಕುರಿತಾದ ಸಂಶೋಧನೆಗಾಗಿ ಅವರಿಗೆ 1945 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1958: ಪ್ರಖ್ಯಾತ ಆಟಿಕೆಗಳ ಉದ್ಯಮವಾದ ‘ದಿ ಲೆಗೋ ಗ್ರೂಪ್’ ಸಂಸ್ಥಾಪಕ ಒಲೆ ಕಿರ್ಕ್ ಕ್ರಿಶ್ಚಿಯಾನ್ಸೆನ್ ಅವರು ಡೆನ್ಮಾರ್ಕಿನ ಬಿಲ್ಲಂಡ್ ಎಂಬಲ್ಲಿ ನಿಧನರಾದರು.

1970: ಅಮೆರಿಕದ ಪ್ರಸಿದ್ಧ ಪತ್ತೇದಾರಿ ಬರಹಗಾರ ‘ಪೆರ್ರಿ ಮೇಸನ್’ ಪಾತ್ರದ ಸೃಷ್ಟಿಕರ್ತ ಅರ್ಲ್ ಸ್ಟಾನ್ಲೆ ಗಾರ್ಡನರ್ ಅವರು ಕ್ಯಾಲಿಫೋರ್ನಿಯಾದ ಟೆಮೆಕ್ಯೂಲಾದಲ್ಲಿ ತಮ್ಮ 80ನೇ ವಯಸಿನಲ್ಲಿ ನಿಧನರಾದರು. ಇವರು ಇಪ್ಪತ್ತನೇ ಶತಮಾನದಲ್ಲಿ ತಮ್ಮ ಕಾಲದ ಅತ್ಯಂತ ಬೇಡಿಕೆಯ ಬರಹಗಾರರಲ್ಲಿ ಒಬ್ಬರಾಗಿದ್ದರು.

1980: ತಮ್ಮ 17ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದ ಚಂದ್ರ ಭಾನು ಗುಪ್ತಾ ಅವರು ರೌಲಟ್ ಖಾಯಿದೆಯ ವಿರೋಧದ ಚಳುವಳಿಯಲ್ಲಿ ಪಾಲ್ಗೊಂಡು, 1929ನೆಯ ವರ್ಷದಲ್ಲಿ ನಡೆ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮೋತಿಲಾಲ್ ನೆಹರೂ ಸೊಸೈಟಿ ಸ್ಥಾಪಕರಾಗಿ ಮಹತ್ವದ ಕೆಲಸ ಮಾಡಿದ್ದ ಇವರು, 1960-70 ಅವಧಿಯಲ್ಲಿ ಮೂರು ಅವಧಿಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದರು.

2002: ಅಮೆರಿಕದ ಅರ್ಥಶಾಸ್ತ್ರಜ್ಞ ಜೇಮ್ಸ್ ಟಾಬಿನ್ ಅವರು ಕನೆಕ್ಟಿಕಟ್ ಬಳಿಯ ನ್ಯಾ ಹ್ಯಾವೆನ್ ಎಂಬಲ್ಲಿ ನಿಧನರಾದರು. ಇವರಿಗೆ 1981 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.