Categories
e-ದಿನ

ಮಾರ್ಚ್-26

ಪ್ರಮುಖಘಟನಾವಳಿಗಳು:

1484: ವಿಲಿಯಂ ಕಾಕ್ಸ್ ಟನ್ ಅವರು ತಮ್ಮ ಈಸೋಪನ ಕಥೆಗಳ ಅನುವಾದವನ್ನು ಮುದ್ರಿಸಿದರು

1552: ಗುರು ಅಮರ ದಾಸ್ ಅವರು ಸಿಖ್ಖರ ಮೂರನೇ ಗುರುವಾದರು

1812: ಬೋಸ್ಟನ್ ಗೆಜೆಟ್ ಪತ್ರಿಕೆಯಲ್ಲಿನ ವ್ಯಂಗ್ಯಚಿತ್ರವು ‘ಜೆರ್ರಿಮ್ಯಾಂಡರ್’ ಎಂಬ ಪದವನ್ನು ಹುಟ್ಟುಹಾಕಿತು. ಅಧಿಕಾರದಲ್ಲಿರುವವರು ತಮಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಅನುಕೂಲವಾಗುವ ಹಾಗೆ, ಚುನಾವಣಾ ಕ್ಷೇತ್ರಗಳನ್ನು ಅಡ್ಡಾದಿಡ್ಡಿಯಾಗಿ ಸೃಷ್ಟಿಸಿರುವುದನ್ನು ವ್ಯಂಗ್ಯವಾಗಿ ನಿರೂಪಿಸಲು ಈ ಪದವನ್ನು ಬಳಸಲಾಗಿತ್ತು.

1934: ಯುನೈಟೆಡ್ ಕಿಂಗ್ಡಂನಲ್ಲಿ ಚಾಲನಾ ಪರೀಕ್ಷೆ(ಡ್ರೈವಿಂಗ್ ಟೆಸ್ಟ್)ಯನ್ನು ಜಾರಿಗೆ ತರಲಾಯಿತು

1959: ಲಾಹೋರಿನಲ್ಲಿ ನಡೆದ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಪಾಕಿಸ್ಥಾನದ ಪರವಾಗಿ ಆಟವಾಡಿದ ಮುಷ್ತಾಖ್ ಮಹಮ್ಮದ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಟೆಸ್ಟ್ ಆಟಗಾರ ಎನ್ನಿಸಿದರು. ಆಗ ಅವರ ವಯಸ್ಸು 15 ವರ್ಷ 124 ದಿನಗಳು.

1971: ಪೂರ್ವ ಪಾಕಿಸ್ಥಾನವು ತನ್ನ ಸ್ವಾತಂತ್ರ್ಯವನ್ನು ಘೋಷಿಸಿ ಪ್ರತ್ಯೇಕ ರಾಷ್ಟ್ರವಾಗಲು ಹೊರಟಿತು. ಇದರಿಂದ ಬಾಂಗ್ಲಾದೇಶದ ವಿಮೋಚನೆಯ ಯುದ್ಧ ಪ್ರಾರಂಭಗೊಂಡಿತು.

2005: ಬಿ.ಬಿ.ಸಿ. ತಾನು 1989ರಲ್ಲಿ ರದ್ಧುಗೊಳಿಸಿದ್ದ ‘ಡಾಕ್ಟರ್ who’ ಕಾರ್ಯಕ್ರಮ ಸರಣಿಯ ಪುನರಾರಂಭದ ಮೊದಲ ಕಂತು ‘ರೋಸ್’ ಅನ್ನು ಭಿತ್ತರಗೊಳಿಸಿತು. ಇದರಲ್ಲಿ ಕ್ರಿಸ್ಟೋಫರ್ ಎಕ್ಸೆಲ್ಸ್ಟನ್ ಅವರು ಪಾತ್ರವಹಿಸಿದ್ದರು. ಇದು ಈಗ ವಿಶ್ವದ ಅತಿ ದೊಡ್ಡ ವಿಜ್ಞಾನ ಕಾಲ್ಪನಿಕ ಕಾರ್ಯಕ್ರಮವಾಗಿ ಮುಂದುವರೆಯುತ್ತಿದೆ.

2006: ಮೆಲ್ಬೋರ್ನಿನ ಯಾರಾ ನದಿಯ ದಡದಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟವು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅಂತ್ಯಗೊಂಡಿತು. ಕ್ರೀಡಾಕೂಟದಲ್ಲಿ 22 ಸ್ವರ್ಣ ಸೇರಿ ಐವತ್ತು ಪದಕ ಪಡೆದ ಭಾರತವು , ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು.

2006: ಖ್ಯಾತ ರಂಗ ಕಲಾವಿದ ಏಣಗಿ ಬಾಳಪ್ಪ ಅವರಿಗೆ ಹೊನ್ನಾವರ ತಾಲ್ಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ‘ಶಿವರಾಮ ಹೆಗಡೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಂಭುಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2007: ಸಿದ್ದಗಂಗಾಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ‘ಕರ್ನಾಟಕ ರತ್ನ’ ಮತ್ತು ಖ್ಯಾತ ವಿಮರ್ಶಕ ಜಿ.ಎಸ್. ಆಮೂರ ಅವರಿಗೆ ‘ಪಂಪ ಪ್ರಶಸ್ತಿ’ ಘೋಷಿಸಲಾಯಿತು. ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ಹಿರಿಯ ಕಲಾವಿದರಾದ ಬಿ.ಕೆ. ಹುಬಳಿ, ಜಕಣಾಚಾರಿ ಪ್ರಶಸ್ತಿಗೆ ಶಿಲ್ಪಿ ಬಿ.ಎನ್. ಚನ್ನಪ್ಪಾಚಾರ್ಯ, ಜಾನಪದ ಶ್ರೀ ಪ್ರಶಸ್ತಿಗೆ ಈಶ್ವರಪ್ಪ ಗುರಪ್ಪ ಅಂಗಡಿ, ಕನಕ ಪುರಂದರ ಪ್ರಶಸ್ತಿಗೆ ವಿ. ರಾಮರತ್ನಂ, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸಿ.ಕೆ. ತಾರಾ ಅವರುಗಳು ಆಯ್ಕೆಯಾದರು.

2008: ‘ಗ್ರೀನ್ ಪೀಸ್’ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಕಳೆದ ಒಂದು ಶತಮಾನದಲ್ಲಿ ಭೂಮಿಯ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಏರಿದೆ. ಈ ಶತಮಾನದ ಅಂತ್ಯದ ವೇಳೆಗೆ ತೈಲ ಇಂಧನ ಬಳಕೆ ಹಾಗೂ ಭೂಮಿಯ ಅತಿಯಾದ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಅನಿಲ ಹೊರಸೂಸುವಿಕೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ಭೂ ತಾಪಮಾನ 5-6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಹೆಚ್ಚಲಿದೆ ಎಂದು ‘ಗ್ರೀನ್ ಪೀಸ್’ ಸಂಸ್ಥೆ ಹೇಳಿತು. ಉಷ್ಣಾಂಶದಲ್ಲಿ ಕೇವಲ 2 ಡಿಗ್ರಿ ಹೆಚ್ಚಾದರೂ ಭೂಮಿಯ ಬಹುತೇಕ ಭಾಗಗಳು ಮಾನವರು ವಾಸಿಸಲು ಅನರ್ಹವಾಗುತ್ತದೆ. ಹಲವು ಸಸ್ಯ, ಪ್ರಾಣಿ ಸಂಕುಲಗಳು ಭೂಮಿಯಿಂದ ಕಣ್ಮರೆಯಾಗುತ್ತವೆ ಎಂದು ಈ ವರದಿ ಹೇಳಿತು. ಮುಂದಿನ 50 ವರ್ಷಗಳಲ್ಲಿ ಬಿಸಿಗಾಳಿ ಬೀಸುವುದು ಹೆಚ್ಚಾಗಲಿದೆ. ಬೇಸಿಗೆಯಲ್ಲಿ ಇನ್ನಷ್ಟು ಉರಿ ಉಂಟಾಗಲಿದೆ.

2008: ಭಾರತದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್, ಈಗ ಪ್ರತಿಷ್ಠಿತ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) ಸ್ವಾಧೀನಪಡಿಸಿಕೊಂಡು ಜಾಗತಿಕ ಆಟೊಮೊಬೈಲ್ ರಂಗದಲ್ಲಿ ಹೊಸ ಇತಿಹಾಸ ಬರೆಯಿತು.

ಪ್ರಮುಖಜನನ/ಮರಣ:

1874: ಅಮೆರಿಕದ ಮಹಾನ್ ಕವಿ ಮತ್ತು ನಾಟಕಕಾರ ರಾಬರ್ಟ್ ಫ್ರಾಸ್ಟ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜನಿಸಿದರು. 1963ರಲ್ಲಿ ನಿಧನರಾದ ಮಹಾನ್ ಸಾಹಿತಿಗಳಾದ ಇವರಿಗೆ 1961ರಲ್ಲಿ ‘ಪೊಯೆಟ್ ಲಾರಿಯೇಟ್ ಆಫ್ ವೆರ್ಮಾಂಟ್’ ಎಂಬ ಸರ್ವೋತ್ಕೃಷ್ಟ ಗೌರವ ನೀಡಲಾಯಿತು.

1879: ಸ್ವಿಸ್-ಅಮೇರಿಕನ್ ಸೇತುವೆಗಳ ತಂತ್ರಜ್ಞ, ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್ ಮತ್ತು ವೆರ್ರಾಸಾನೋ-ನ್ಯಾರೋಸ್ ಬ್ರಿಡ್ಜ್ ಮುಂತಾದವುಗಳನ್ನು ರೂಪಿಸಿದ ಓಥ್ಮಾರ್ ಅಮ್ಮಾನ್ನ್ ಅವರು ಸ್ವಿಡ್ಜರ್ಲ್ಯಾಂಡ್ ದೇಶದ ಫ್ಯೂರೆತಲೇನ್ ಎಂಬಲ್ಲಿ ಜನಿಸಿದರು.

1906: ವರ್ಣಚಿತ್ರ ಮತ್ತು ಶಿಲ್ಪಕಲೆಯಲ್ಲಿ ಅಗ್ರಗಣ್ಯರೆನಿಸಿದ್ದ ಎಸ್.ಎನ್. ಸ್ವಾಮಿಯವರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಎಂಬಲ್ಲಿ ಜನಿಸಿದರು. ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಪಡೆದಿದ್ದ ಎಸ್ ಎನ್ ಸ್ವಾಮಿಯವರು ಡಿಸೆಂಬರ್ 27, 1969ರಲ್ಲಿ ಚಾಮುಂಡೇಶ್ವರಿ ಶಿಲಾ ವಿಗ್ರಹವನ್ನು ಕಡೆಯುತ್ತಿದ್ದಾಗ ಆ ಜಗನ್ಮಾತೆಯಲ್ಲೇ ಲೀನವಾದರೋ ಎಂಬಂತೆ ಈ ಲೋಕವನ್ನಗಲಿದರು.

1909: ಕರ್ನಾಟಕ ಸಂಗೀತದ ಶ್ರೇಷ್ಠ ಕಲಾ ಪರಂಪರೆಗೆ ಸೇರಿದ ವೀಣಾ ರಾಜಾರಾವ್ ಅವರು ಮೈಸೂರಿನಲ್ಲಿ ಜನಿಸಿದರು. ಮೈಸೂರು ವಾಸುದೇವಾಚಾರ್ಯರ ಶಿಷ್ಯರಾಗಿದ್ದ ಇವರು ಯುವವಯಸ್ಸಿನಲ್ಲೇ ಅವರೊಂದಿಗೆ ವಿನಿಕೆ ಮಾಡುವಷ್ಟು ಶ್ರೆಷ್ಟತೆ ಗಳಿಸಿದ್ದರು. ಕರ್ನಾಟಕ ಗಾನ ಕಲಾ ಪರಿಷತ್ ಮತ್ತು ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ನಡೆಸಿದ ಎರಡು ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಿಗೆ ವೀಣೆ ರಾಜಾರಾಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

1991: ಜರ್ಮನ್-ಇಂಗ್ಲಿಷ್ ಜೀವಭೌತ ವಿಜ್ಞಾನಿಗಳಾಗಿದ್ದ ಬರ್ನಾರ್ಡ್ ಕಾಟ್ಜ್ ಜರ್ಮನಿಯ ಲೀಪ್ಸಿಗ್ ಎಂಬಲ್ಲಿ ಜನಿಸಿದರು. ‘ನರ್ವ್ ಬಯೋ ಕೆಮಿಸ್ಟ್ರಿ’ ಕುರಿತಾದ ಸಂಶೋಧನೆಗೆ ಇವರಿಗೆ 1970ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1916: ಅಮೆರಿಕದ ಜೈವಿಕ ವಿಜ್ಞಾನಿ ಕ್ರಿಶ್ಚಿಯನ್ ಬಿ. ಅನ್ಫಿನ್ಸೆನ್ ಅವರು ಪೆನ್ಸಿಲ್ವೇನಿಯಾದ ಮೊನೆಸ್ಸೆನ್ ಎಂಬಲ್ಲಿ ಜನಿಸಿದರು. ‘ಅಮಿನೋ ಆಸಿಡ್ ಸೀಕ್ವೆನ್ಸ್ ಪ್ರತಿಕ್ರಿಯೆಗಳ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1972 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1929: ಅಮೇರಿಕದ ಉದ್ಯಮಿ ‘ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸಂಸ್ಥೆ’ಯ ಸಹ ಸ್ಥಾಪಕ ಎಡ್ವಿನ್ ಟರ್ನಿ ಅವರು ಬ್ರೂಕ್ಲಿನ್ ನಗರದಲ್ಲಿ ಜನಿಸಿದರು.

1938: ಇಂಗ್ಲಿಷ್-ಅಮೇರಿಕನ್ ಭೌತಶಾಸ್ತ್ರಜ್ಞ ಆಂತೋನಿ ಜೇಮ್ಸ್ ಲೆಗ್ಗೆಟ್ ಅವರು ಲಂಡನ್ನಿನ ಕೇಂಬರ್ವೆಲ್ ಎಂಬಲ್ಲಿ ಜನಿಸಿದರು. ‘ಲೋ ಟೆಂಪರೇಚರ್ ಫಿಸಿಕ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ಭೌತ ವಿಜ್ಞಾನ ಪ್ರಶಸ್ತಿ ಸಂದಿತು.

1951: ಅಮೇರಿಕನ್ ಭೌತಶಾಸ್ತ್ರಜ್ಞ ಕಾರ್ಲ್ ವೀಮ್ಯಾನ್ ಅವರು ಒರೆಗಾನಿನ ಕಾರ್ವಲ್ಲಿಸ್ ಎಂಬಲ್ಲಿ ಜನಿಸಿದರು. ಇವರು ಮತ್ತೊಬ್ಬ ವಿಜ್ಞಾನಿ ಎರಿಕ್ ಅಲ್ಲಿನ್ ಕಾರ್ನೆಲ್ ಅವರ ಜೊತೆಗೂಡಿ ಸತ್ಯೇಂದ್ರನಾಥ್ ಬೋಸ್ ಮತ್ತು ಐನ್ ಸ್ಟೀನ್ ಅವರು ಸಾಧ್ಯ ಎಂದು ಊಹಿಸಿದ್ದ, ಪ್ರಥಮ ವಾಸ್ತವದ ‘ಬೋಸ್-ಐನ್ ಸ್ಟೀನ್ ಕಂಡೆನ್ಸೇಟ್’ ಅನ್ನು ಉತ್ಪಾದಿಸಿದರು. ಈ ಮಹಾನ್ ಕಾರ್ಯಕ್ಕೆ ಈ ಜೋಡಿಗೆ 2001 ವರ್ಷದಲ್ಲಿ ನೊಬೆಲ್ ಭೌತ ವಿಜ್ಞಾನ ಪ್ರಶಸ್ತಿ ಸಂದಿತು.

1965: ಪ್ರಖ್ಯಾತ ಭಾರತೀಯ ಚಲನಚಿತ್ರ ನಟ, ಕನ್ನಡಿಗರಾದ ಪ್ರಕಾಶ್ ರೈ ಬೆಂಗಳೂರಿನಲ್ಲಿ ಜನಿಸಿದರು. ಚಲನಚಿತ್ರರಂಗದಲ್ಲಿ ಪ್ರಕಾಶ್ ರಾಜ್ ಎಂದು ಪ್ರಖ್ಯಾತರಾಗಿರುವ ಇವರು ಬಹುಭಾಷಾ ಚಲನಚಿತ್ರಗಳಲ್ಲಿ ಅತ್ಯಂತ ಬೇಡಿಕೆಯ ನಟರಾಗಿ, ನಿರ್ಮಾಪಕರಾಗಿ ಮತ್ತು ಕೆಲವೊಂದು ಚಿತ್ರಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ನಟನೆ ಹಾಗೂ ನಿರ್ಮಾಣಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ಸಲ್ಲುತ್ತಿವೆ.

1973: ಅಮೆರಿಕದ ಕಪ್ಯೂಟರ್ ವಿಜ್ಞಾನಿ, ಉದ್ಯಮಿ ಹಾಗೂ ಗೂಗಲ್ ಸಂಸ್ಥೆಯ ಸಹಸ್ಥಾಪಕರಾದ ಲ್ಯಾರಿ ಪೇಜ್ ಅವರು ಮಿಚಿಗನ್ನಿನ ಈಸ್ಟ್ ಲ್ಯಾನ್ಸಿಂಗ್ ಎಂಬಲ್ಲಿ ಜನಿಸಿದರು.

922: ಪರ್ಷಿಯನ್ ಕವಿ ಮತ್ತು ಅತೀಂದ್ರಿಯ ಸಾಧಕ ಮನ್ಸೂರ್ ಅಲ್-ಹಲ್ಲಾಜ್ ಬಾಗ್ದಾದ್ ನಗರದಲ್ಲಿ ನಿಧನರಾದರು.

1885: ಅಮೆರಿಕದ ಪ್ರಸಿದ್ಧ ಹಣಕಾಸು ಸಂಸ್ಥೆ ‘ವೆಸ್ಟರ್ನ್ ಯೂನಿಯನ್’ ಸಹ ಸ್ಥಾಪಕ ಆನ್ಸನ್ ಸ್ಟೇಜರ್ ಚಿಕಾಗೋದಲ್ಲಿ ನಿಧನರಾದರು.

1892: ಅಮೆರಿಕಾದ ಖ್ಯಾತ ಪ್ರಬಂಧಕಾರ ಹಾಗೂ ಕವಿ ವಾಲ್ಟ್ ವಿಟ್ ಮ್ಯಾನ್ ಅವರು ನ್ಯೂಜೆರ್ಸಿಯ ಕ್ಯಾಮ್ಡೆನ್ ಎಂಬಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. ಇವರ ‘ಲೀವ್ಸ್ ಆಫ್ ಗ್ರಾಸ್’ ಅಮೆರಿಕದ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಪ್ರಸಿದ್ಧಿ ಪಡೆದಿದೆ.

1902: ಈಗಿನ ಜಿಂಬಾಬ್ವೆಗೆ ರೊಡೇಷಿಯಾ ಎಂಬ ಹೆಸರು ಬರಲು ಕಾರಣರಾದ ಸಿಸಿಲ್ ರೋಡ್ಸ್ ತಮ್ಮ 48ನೇ ವಯಸ್ಸಿನಲ್ಲಿ ಈಗಿನ ದಕ್ಷಿಣ ಆಫ್ರಿಕಾದ ಮ್ಯೂಸೆನ್ ಬರ್ಗ್ ಎಂಬಲ್ಲಿ ನಿಧನರಾದರು. ಇವರು ತಮ್ಮ ವಜ್ರದ ಗಣಿಯಿಂದ ಲಭಿಸಿದ ಸಂಪತ್ತನ್ನು ವಿನಿಯೋಗಿಸಿ ಆಕ್ಸ್ ಫರ್ಡಿನಲ್ಲಿ ರ್ಹೋಡ್ಸ್ ಸ್ಕಾಲರ್ ಶಿಪ್ ಸ್ಥಾಪಿಸಿದರು.

1996: ಪ್ರಸಿದ್ಧ ಹೆವ್ಲೆಟ್-ಪ್ಯಾಕರ್ಡ್ ಸಂಸ್ಥೆಯ ಸಹಸ್ಥಾಪಕ ಡೇವಿಡ್ ಪ್ಯಾಕರ್ಡ್ ಸ್ಟ್ಯಾನ್ ಫೋರ್ಡ್ ನಗರದಲ್ಲಿ ನಿಧನರಾದರು.

2015: ಸ್ವೀಡಿಷ್ ಕವಿ, ಅನುವಾದಕ, ಮನಃಶಾಸ್ತ್ರಜ್ಞ ಥಾಮಸ್ ಟ್ರಾನ್ಸ್ಟ್ರೋಮರ್ ಸ್ಟಾಲ್ಕ್ ಹೋಮ್ ನಗರದಲ್ಲಿ ನಿಧನರಾದರು. ಇವರಿಗೆ 2011ರಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.