Categories
e-ದಿನ

ಮೇ- 02

ಪ್ರಮುಖಘಟನಾವಳಿಗಳು:

1933: ಅಡಾಲ್ಫ್ ಹಿಟ್ಲರ್ ಕಾರ್ಮಿಕ ಸಂಘಗಳನ್ನು ನಿಷೇಧಿಸಿದ.

1945: ಎರಡನೇ ಮಹಾಯುದ್ಧದಲ್ಲಿ ಬರ್ಲಿನ್ ಅನ್ನು ಆಕ್ರಮಿಸಿದ್ದಾಗಿ ಸೋವಿಯತ್ ಒಕ್ಕೂಟ ಪ್ರಕಟಿಸಿತು. ಸೋವಿಯತ್ ಸೈನಿಕರು ರೀಚ್ಸ್ಟಾಗ್ ಕಟ್ಟಡದ ಮೇಲೆ ತಮ್ಮ ಕೆಂಪು ಬಾವುಟವನ್ನು ಹಾರಿಸಿದರು.

1986: ಚೆರ್ನೋಬಿಲ್ ದುರಂತವಾದ ಆರು ದಿನಗಳಲ್ಲಿ ಚೆರ್ನೋಬಿಲ್ ಅನ್ನು ಸ್ಥಳಾಂತರಿಸಲಾಯಿತು.

2000: ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಜಿ.ಪಿ.ಅಸ್ ವ್ಯವಸ್ಥೆ, ಇನ್ನು ಮುಂದೆ ಕೇವಲ ಸೈನ್ಯದ ಉಪಯೋಗಕ್ಕೆ ಮಾತ್ರಾ ಸೀಮಿತವಲ್ಲ ಎಂದು ಪ್ರಕಟಿಸಿದರು.

2008: ಬರ್ಮಾದಲ್ಲಿ ಉಂಟಾದ ಸೈಕ್ಲೋನ್ ನರ್ಗಿಸ್ ಕಾರಣದಿಂದ, ಭೂಕುಸಿತ ಉಂಟಾಗಿ 1,38,000ಕ್ಕೂ ಹೆಚ್ಚು ನಿಧನರಾಗಿ ಹಲವು ದಶಲಕ್ಷ ಜನ ನಿರಾಶ್ರಿತರಾದರು.

2008: ಚೀನಾವು ಜಲಾಂತರ್ಗಾಮಿ ಪರಮಾಣು ಘಟಕವೊಂದನ್ನು ರಹಸ್ಯವಾಗಿ ಸ್ಥಾಪಿಸಿರುವುದು ಏಷ್ಯಾ ದೇಶಗಳಿಗೆ ಆತಂಕ ಉಂಟು ಮಾಡುವಂತಿದ್ದು, ಅಮೆರಿಕದ ಶಕ್ತಿಗೆ ಸಹಾ ಸವಾಲು ಒಡ್ಡುವಂತದ್ದಾಗಿದೆ ಆಗಿದೆ ಎಂದು ಲಂಡನ್ನಿನ ಮಾಧ್ಯಮಗಳು ವರದಿ ಮಾಡಿದವು.

2011: ಸೆಪ್ಟೆಂಬರ್ 11ರ ಅಮೆರಿಕದ ಮೇಲಿನ ಉಗ್ರರ ದಾಳಿಯ ಪ್ರಮುಖ ಸೂತ್ರಧಾರನೆಂದು ಶಂಕಿಸಲಾದ ಒಸಾಮಾ ಬಿನ್ ಲ್ಯಾಡೆನ್ ಅನ್ನು ಅಮೆರಿಕದ ವಿಶೇಷ ಕಾರ್ಯಪಡೆಗಳು ಪಾಕಿಸ್ತಾನದ ಅಬ್ಬೊಟ್ಟಬಾದ್ ಎಂಬಲ್ಲಿ ವಧೆ ಮಾಡಿತು.

2012: ನಾರ್ವೆಯನ್ ವರ್ಣಚಿತ್ರ ಕಲಾವಿದರಾದ ಎಡ್ವರ್ಡ್ ಮಂಚ್ ಅವರ ‘ದಿ ಸ್ಕ್ರೀಮ್’ ಎಂಬ ಪ್ಯಾಸ್ಟೆಲ್ ವರ್ಣಚಿತ್ರ ಕಲೆಯು 120 ಮಿಲಿಯನ್ ಡಾಲರ್ ಹಣಕ್ಕೆ ಹರಾಜುಗೊಂಡ ವಿಶ್ವದಾಖಲೆ ನಿರ್ಮಿಸಿತು.

ಪ್ರಮುಖಜನನ/ಮರಣ:

1913: ಕನ್ನಡದ ಬರಹಗಾರ್ತಿ ಮತ್ತು ಕತೆಗಾರ್ತಿ ಎಚ್. ವಿ. ಸಾವಿತ್ರಮ್ಮ ಅವರು ಬೆಂಗಳೂರಿನಲ್ಲಿ ಜನಿಸಿದರು. ‘ಸೋವಿಯತ್ ಲ್ಯಾಂಡ್ ನೆಹರು’ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ್ವರಲಿಪಿ ಪ್ರತಿಷ್ಠಾನದ ‘ಲಿಪಿ ಪ್ರಾಜ್ಞೆ’ ಗೌರವ ಮುಂತಾದ ಅನೇಕ ಪುರಸ್ಕಾರಗಳು ಸಂದಿದ್ದವು.

1920: ಹಿಂದೂಸ್ಥಾನಿ ಸಂಗೀತ ಗಾಯಕ ಮತ್ತು ಸಿತಾರ್ ವಾದಕ ವಸಂತರಾವ್ ದೇಶಪಾಂಡೆ ಮುರ್ತಿಜಾಪುರ್ ಎಂಬಲ್ಲಿ ಜನಿಸಿದರು. ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸಂದಿತ್ತು.

1921 : ನಿರ್ದೇಶಕ, ನಿರ್ಮಾಪಕ, ಚಿತ್ರಕತೆಗಾರ, ಸಂಗೀತ ಸಂಯೋಜಕ, ಕತೆಗಾರ ಮತ್ತು ಕಲಾ ವಿನ್ಯಾಸಕ – ಈ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆಎನಿಸಿದ್ದ ಸತ್ಯಜಿತ್ ರೇ ಅವರು ಕೋಲ್ಕತ್ತಾದಲ್ಲಿ ಜನಿಸಿದರು. 1978ರ ವರ್ಷದಲ್ಲಿ ಬರ್ಲಿನ್ ಚಿತ್ರೋತ್ಸವದ ನಿರ್ವಾಹಕ ಸಮಿತಿಯು ಸತ್ಯಜಿತ್ ರೇ ಅವರನ್ನು ವಿಶ್ವದ ಮೂರು ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಎಂದು ಕೊಂಡಾಡಿತು. 1992ರ ವರ್ಷದಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಯ ಗೌರವವನ್ನು ನೀಡಿತು. ಅವರಿಗೆ ಸಂದಿರುವ ಇತರ ಪ್ರಶಸ್ತಿಗಳೆಂದರೆ ಪ್ರಾನ್ಸ್ ದೇಶದ ಪ್ರತಿಷ್ಟಿತ ‘ಲೆಜೆನ್ ಡಿ ಹಾನರ್’ ಮತ್ತು ನಮ್ಮ ದೇಶದ ‘ಭಾರತರತ್ನ’ ಪ್ರಶಸ್ತಿಗಳು.

1922: ಭಾರತದ ಬಿಲಿಯರ್ಡ್ಸ್ ಆಟಗಾರ ವಿಲ್ಸನ್ ಜೋನ್ಸ್ ಅವರು ಪುಣೆಯಲ್ಲಿ ಜನಿಸಿದರು. ಇವರು 1958ರಲ್ಲಿ ಭಾರತದ ಪ್ರಪ್ರಥಮ ವೈಯಕ್ತಿಕ ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೂರು ಅಮೆಚೂರ್ ಜಾಗತಿಕ ಪ್ರಶಸ್ತಿಗಳನ್ನು ಇವರು ಗೆದ್ದುಕೊಂಡರು.

1928: ಉತ್ತರ ಭಾರತದ ನೃತ್ಯ ಪ್ರಕಾರಗಳಲ್ಲಿ ಜನಪ್ರಿಯವಾದ ಕಥಕ್‌ ನೃತ್ಯವನ್ನು ಕರ್ನಾಟಕಕ್ಕೆ ತಂದ ಅಂತರರಾಷ್ಟ್ರೀಯ ಖ್ಯಾತಿಯ ಕಥಕ್ ಕಲಾವಿದೆ ಮತ್ತು ಗುರು ಡಾ. ಮಾಯಾ ರಾವ್‌ ಅವರು ಬೆಂಗಳೂರಿನಲ್ಲಿ ಜನಿಸಿದರು. ಹೆಲ್ಸಿಂಕಿಯಲ್ಲಿ ನಡೆದ ವರ್ಲ್ಡ್ ಥಿಯೇಟರ್ ಫೆಸ್ಟಿವಲ್ನಲ್ಲಿ ಚಿನ್ನದ ಪದಕ, ದೆಹಲಿಯ ಸಾಹಿತ್ಯ ಕಲಾ ಪರಿಷತ್‌ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, 1989ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1519: ‘ಮೊನಾಲೀಸಾ’, ‘ಲಾಸ್ಟ್ ಸಪ್ಪರ್’ ಮುಂತಾದ ಮೇರು ಕೃತಿಗಳ ಸೃಷ್ಟಿಕರ್ತರಾದ ಲಿಯನಾರ್ಡೋ ಡ ವಿಂಚಿ ಅವರು ಫ್ರಾನ್ಸ್ ಸಾಮ್ರಾಜ್ಯದ ಅಂಬ್ರಾಯಿಸ್ ಎಂಬಲ್ಲಿ ನಿಧನರಾದರು. ಬಹುಮುಖ ಪ್ರತಿಭೆಯಾಗಿದ್ದ ಲಿಯನಾರ್ಡೊ ಡ ವಿಂಚಿ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ ಹೀಗೆ ಅನೇಕ ರೀತಿಯಲ್ಲಿ ಪ್ರಸಿದ್ಧರಾಗಿದ್ದಾರೆ.

1997: ಆಸ್ಟ್ರೇಲಿಯನ್ ವೈದ್ಯವಿಜ್ಞಾನಿ ಜಾನ್ ಎಕ್ಲೆಸ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಟೆನೆರೋ-ಕಾಂಟ್ರಾ ಎಂಬಲ್ಲಿ ನಿಧನರಾದರು. ‘ಸಿನಾಪ್ಸೆ’ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.