Categories
e-ದಿನ

ಮೇ-05

ಪ್ರಮುಖಘಟನಾವಳಿಗಳು:

1766: ಭಾರತದಲ್ಲಿ ಬ್ರಿಟಿಷರೊಡನೆ ನಡೆದ 7 ವರ್ಷಗಳ ಯುದ್ಧದಲ್ಲಿ ಶರಣಾಗತನಾದುದಕ್ಕಾಗಿ ಆಗ ಭಾರತದಲ್ಲಿ ಫ್ರೆಂಚ್ ಪಡೆಗಳ ನಾಯಕನಾಗಿದ್ದ ಜನರಲ್ ಕಾಮ್ಟೆ ಡೆ ಲಾಲ್ಲಿಗೆ ಪ್ಯಾರಿಸ್ಸಿನಲ್ಲಿ ಮರಣದಂಡನೆ ವಿಧಿಸಲಾಯಿತು.

1809: ಮೇರಿ ಕೀಸ್ ಅವರು ಅಮೆರಿಕದ ಪೇಟೆಂಟ್ ಪಡೆದ ಮೊದಲ ಮಹಿಳೆ ಎನಿಸಿದರು. ಅವರಿಗೆ ರೇಷ್ಮೆ ಮತ್ತು ದಾರವನ್ನು ಉಪಯೋಗಿಸಿ ನೇಯ್ಗೆ ಮಾಡುವ ತಂತ್ರಕ್ಕೆ ಪೇಟೆಂಟ್ ನೀಡಲಾಯಿತು.

1821: ಗಡೀಪಾರುಗೊಂಡಿದ್ದ ನೆಪೋಲಿಯನ್ ದಕ್ಷಿಣ ಅಟ್ಲಾಂಟಿಕ್ ಸಾಗರದ ಸೈಂಟ್ ಹೆಲೇನಾ ದ್ವೀಪದಲ್ಲಿ ನಿಧನರಾದರು.

1835: ಬ್ರಸೆಲ್ಸ್ ಮತ್ತು ಮೆಖೆಲೆನ್ ನಡುವೆ ಪ್ರಥಮ ಕಾಂಟಿನೆಂಟಲ್ ರೈಲು ಪಯಣ ಆರಂಭಗೊಂಡಿತು.

1912: ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಮುಖವಾಣಿಯಾದ ‘ಪ್ರಾವ್ಡಾ’ ತನ್ನ ಪ್ರಕಟಣೆಯನ್ನು ಆರಂಭಿಸಿತು.

1961: ಅಲನ್ ಶೆಪರ್ಡ್ ಅವರು ಅಮೆರಿಕದ ಮೊಟ್ಟ ಮೊದಲ ಬಾಹ್ಯಾಕಾಶ ಯಾತ್ರಿಯಾದರು.

1963: ಸ್ವತಂತ್ರ ಭಾರತದ ಸೇನೆಯ ಮೂರನೆಯ ಮಹಾ ದಂಡನಾಯಕರಾಗಿದ್ದ ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್ ಅವರು ಮೈಸೂರು ರಾಜ್ಯದ ಎರಡನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.

1981: 66 ದಿನಗಳವರೆಗೆ ಲಾಂಗ್ ಕೆಶ್ ಕಾರಾಗ್ರಹದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಐರಿಷ್ ರಿಪಬ್ಲಿಕನ್ ಆರ್ಮಿ ಕಾರ್ಯಕರ್ತ ಬಾಬ್ಬಿ ಸ್ಯಾಂಡ್ಸ್ ನಿಧನರಾದರು.

1992: ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆಂದೇ ಮೀಸಲಾದ ಉಪನಗರ ರೈಲ್ವೇ ಸೇವೆಯನ್ನು ಮುಂಬೈ ಪಶ್ಚಿಮ ರೈಲ್ವೇ ವಿಭಾಗ ಆರಂಭಿಸಿತು.

2016: ವೈಸ್ ಅಡ್ಮಿರಲ್ ಸುನಿಲ್ ಲಂಬಾ ಅವರನ್ನು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಲಾಯಿತು. ಲಂಬಾ ಅವರು ನೌಕಾಪಡೆಯ ಹಿಂದಿನ ಮುಖ್ಯಸ್ಥರಾಗಿದ್ದ ಅಡ್ಮಿರಲ್ ಆರ್.ಕೆ. ಧವನ್ ಅವರ ನಿವೃತ್ತಿಯ ದಿನವಾದ ಮೇ 31ರಂದು ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.

ಪ್ರಮುಖಜನನ/ಮರಣ:

1479: ಮೂರನೆಯ ಸಿಖ್ ಗುರು ಅಮರ ದಾಸ್ ಅವರು ಅಮೃತಸರದಲ್ಲಿ ಜನಿಸಿದರು.

1818: ಕಮ್ಯುನಿಸಂ ಚಿಂತನೆಯ ಮೂಲಪುರುಷರೆಂದು ಪರಿಗಣಿಸಲ್ಪಡುವ ಕಾರ್ಲ್ ಮಾರ್ಕ್ಸ್ ಅವರು ಜರ್ಮನಿಯ ಟ್ರಿಯರ್ ಎಂಬ ಪಟ್ಟಣದಲ್ಲಿ ಜನಿಸಿದರು. ತತ್ವಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಾಮಾಜಿಕಶಾಸ್ತ್ರಜ್ಞ, ಇತಿಹಾಸಜ್ಞ, ಪತ್ರಕರ್ತ ಹೀಗೆ ಹಲವು ಆಯಾಮಗಳು ಈ ಅಪೂರ್ವ ವ್ಯಕ್ತಿಯಲ್ಲಿ ಮೇಳೈಸಿದ್ದವು. ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಬಂಡೆದ್ದ ಇವರ ಚಿಂತನೆಗಳು ಕಮ್ಯೂನಿಸಮ್ ಎಂಬ ಹೊಸ ಪ್ರಪಂಚವನ್ನೇ ಸೃಷ್ಟಿಸಿತು.

1846: ನೊಬೆಲ್ ಸಾಹಿತ್ಯ ಪುರಸ್ಕೃತ ಹೆನ್ರಿಕ್ ಸಿಯೆನ್ಕೀವಿಕ್ಜ್ ಅವರು ಪೋಲೆಂಡ್ ದೇಶದ ವೋಲಾ ಓಕೃಸೆಜ್ಸ್ಕ್ ಎಂಬಲ್ಲಿ ಜನಿಸಿದರು.

1911: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ಪ್ರೀತಿಲತಾ ವಡ್ಡೇಧಾರ್ ಅವರು ಬಂಗಾಳದ ಚಿತ್ತಗಾಂಗ್ ಬಳಿಯ ಧಾಲ್ ಘಾಟ್ ಎಂಬಲ್ಲಿ ಜನಿಸಿದರು. ತತ್ವಜ್ಞಾನದಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದ ಇವರು ಕೆಲಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ನಂತರದಲ್ಲಿ ಸೂರ್ಯಸೆನ್ ಆವರ ಕ್ರಾಂತಿಕಾರಿ ಗುಂಪಿಗೆ ಸೇರಿಕೊಂಡರು. 1932ರ ವರ್ಷದಲ್ಲಿ ಇವರು ಫಹರ್ತಲಿ ಯೂರೋಪಿಯನ್ ಕ್ಲಬ್ ಮೇಲಿನ ಹದಿನೈದು ಆಕ್ರಮಣಕಾರರ ಗುಂಪಿನ ನಾಯಕತ್ವ ವಹಿಸಿದರು. ಈ ಕ್ಲಬ್ನಲ್ಲಿ ಕೀಳು ಬ್ರಿಟಿಷ್ ಅಧಿಕಾರಿಗಳು ‘ಡಾಗ್ಸ್ ಅಂಡ್ ಇಂಡಿಯನ್ಸ್ ನಾಟ್ ಅಲೋಡ್’ ಎಂದು ಫಲಕ ಹಾಕಿದ್ದರಿಂದ ಕ್ರೋಧಿತರಾದ ಈ ಕ್ರಾಂತಿಕಾರಿ ಗುಂಪು ಅದಕ್ಕೆ ಬೆಂಕಿ ಹಚ್ಚಿದರು. ಸೇರೆಯಾಗಲಿಚ್ಚಿಸದ ಇವರು ಸಯನೈಡ್ ಸೇವಿಸಿ ಅಸುನೀಗಿದರು.

1916: ಭಾರತದ ಏಳನೇ ರಾಷ್ಟ್ರಪತಿಗಳಾಗಿದ್ದ ಜ್ಞಾನಿ ಜೈಲ್ ಸಿಂಗ್ ಅವರು ಪಂಜಾಬಿನ ಸಂಧ್ವಾನ್ ಎಂಬಲ್ಲಿ ಜನಿಸಿದರು.

1921: ಅಮೆರಿಕದ ಭೌತವಿಜ್ಞಾನಿ ಆರ್ಥರ್ ಲಿಯೋನಾರ್ಡ್ ಸ್ಕಾವ್ಲೋವ್ ಅವರು ನ್ಯೂಯಾರ್ಕಿನ ಮೌಂಟ್ ವೆರ್ನಾನ್ ಎಂಬಲ್ಲಿ ಜನಿಸಿದರು. ಲೇಸರ್ಸ್ ಕುರಿತಾದ ಮಹತ್ಕಾರ್ಯಕ್ಕಾಗಿ ಅವರಿಗೆ 1981 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1945: ಕಥೆ, ಕಾದಂಬರಿ, ನಾಟಕ, ಚಿತ್ರಕಥೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬರಹ ಮಾಡಿರುವ ಬಿ.ಎಲ್. ವೇಣು ಅವರು ಚಿತ್ರದುರ್ಗದಲ್ಲಿ ಜನಿಸಿದರು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಲನಚಿತ್ರಗಳ ಚಿತ್ರಕಥೆಗಾಗಿನ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1821: ಗಡೀಪಾರುಗೊಂಡಿದ್ದ ನೆಪೋಲಿಯನ್ ದಕ್ಷಿಣ ಅಟ್ಲಾಂಟಿಕ್ ಸಾಗರದ ಸೈಂಟ್ ಹೆಲೇನಾ ದ್ವೀಪದಲ್ಲಿ ನಿಧನರಾದರು.

1921: ಜರ್ಮನ್ ಪೀಸ್ ಮೂವ್ಮೆಂಟ್ ಸ್ಥಾಪಕ ಆಲ್ಫ್ರೆಡ್ ಹರ್ಮಾನ್ ಫ್ರೀಡ್ ಅವರು ವಿಯೆನ್ನಾದಲ್ಲಿ ನಿಧನರಾದರು. ಇವರಿಗೆ 1911 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1959: ನೊಬೆಲ್ ಶಾಂತಿ ಪುರಸ್ಕೃತ ಕಾರ್ಲೋಸ್ ಸವ್ವೇಡ್ರ ಲಾಮಾಸ್ ಅವರು ಅರ್ಜೆಂಟಿನಾದ ಬ್ಯೂನೋಸ್ ಏರ್ಸ್ ಎಂಬಲ್ಲಿ ನಿಧನರಾದರು. 1936ರಲ್ಲಿ ಇವರು ನೊಬೆಲ್ ಶಾಂತಿ ಪುರಸ್ಕಾರ ಸ್ವೀಕರಿಸಿದ ಪ್ರಥಮ ಲ್ಯಾಟಿನ್ ಅಮೆರಿಕದ ವ್ಯಕ್ತಿ ಎನಿಸಿದರು.

2006: ಸಂಗೀತ ನಿರ್ದೇಶಕ ನೌಷಾದ್ ಅಲಿ ಅವರು ತಮ್ಮ 86ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಅನೇಕ ಚಲನಚಿತ್ರಗಳಲ್ಲಿನ ಇವರ ಸಂಗೀತ ಪ್ರಖ್ಯಾತಿ ಹೊಂದಿದ್ದು ದಾದಾ ಸಾಹೇಬ್ ಫಾಲ್ಕೆ ಗೌರವ, ಸಂಗೀತ ನಾಟಕ ಅಕಾಡೆಮಿ ಗೌರವ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಇವರಿಗೆ ಸಂದಿದ್ದವು.