ಮಹರ್ಷಿ ವಾಲ್ಮೀಕಿ ತನ್ನ ರಾಮಾಯಣದಲ್ಲಿ ರಾಜನೀತಿ ಮತ್ತು ಸಮಾನತೆ ಕುರಿತು ಸಾಕಷ್ಟು ವಿಚಾರಗಳನ್ನು ನಿದರ್ಶನಗಳೊಂದಿಗೆ ತೆರೆದಿಟ್ಟಿದ್ದಾರೆ. ಆಯಾ ಪ್ರಾದೇಶಿಕತೆ, ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿಗೆ ತಕ್ಕಂತೆ ಅಭಿವ್ಯಕ್ತಿಸಿರುವುದನ್ನು ವಿವಿಧ ಕಾಲಘಟ್ಟಗಳಲ್ಲಿ ಕಾಣುತ್ತೇವೆ. ಮೂಲರಾಮಾಯಣ, ಇತರ ಪ್ರಾದೇಶಿಕ ರಾಮಾಯಣಗಳ ಹಿನ್ನೆಲೆಯಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ರಾಮಾಯಣ ಮಹಾಕಾವ್ಯಗಳಲ್ಲಿನ ರಾಜನೀತಿ ಮತ್ತು ಸಂಸ್ಕೃತಿ ಕುರಿತು ಇಲ್ಲಿ ಚರ್ಚಿಸಲಾಗುತ್ತದೆ.

ವಾಲ್ಮೀಕಿ ರಾಮಾಯಣದಲ್ಲಿ ರಾಜ ಮತ್ತು ರಾಜ್ಯದ ಪರಿಕಲ್ಪನೆ ಮಾಡಿರುವುದು ಸತ್ಯ. ಆ ಮೂಲಕ ಮಹಾರಾಜ, ಮಂತ್ರಿ ದಂಡನಾಯಕ, ಸೈನಿಕ, ಯುವರಾಜ, ರಾಣಿ, ರಾಜಕುಮಾರ, ರಾಜಧಾನಿ, ಅರಮನೆ, ಸಭೆ ಮೊದಲದ ಸಂಗತಿಗಳನ್ನು ವಿವರಿಸಿದ್ದಾರೆ. ಈ ದೇಶದಲ್ಲಿ ರಾಜ ಪ್ರಜೆಗಳ ರಕ್ಷಕನೆಂದು, ಪ್ರಭು ಪ್ರಜೆಗಳ ಪರಿ ಪಾಲಕನೆಂದು ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಆದಿಕವಿ – ವಿಚಾರವಂತ ನಾಗಿದ್ದಾನೆ ವಾಲ್ಮೀಕಿ. ವಾಲ್ಮೀಕಿಯ ಪ್ರಕಾರ ರಾಜ ಎಷ್ಟೇ ನಿರಂಕುಶ ಪ್ರಭುವಾದರೂ ಪ್ರಜೆಗಳ ಮನೋಧೋರಣೆಗಳನ್ನು ಅರ್ಥಮಾಡಿಕೊಳ್ಳುವ ಮನಃಸ್ಥಿತಿ ಹೊಂದಿರಬೇಕು. ಪ್ರಪಂಚದಲ್ಲಿ ‘ರಾಮರಾಜ್ಯ’ ಕನಸು ಕಂಡವರು ಮಹರ್ಷಿ ವಾಲ್ಮೀಕಿ. ಅಂದಿನ ರಾಮೃಆಜ್ಯದ ಪರಿಕಲ್ಪನೆ ಮಹಾತ್ಮ ಗಾಂಧೀಜಿಯವರಿಗೆ “ಗ್ರಾಮರಾಜ್ಯ” ಎಂಧು ಸ್ಫೂರ್ತಿ ನೀಡಿದ್ದು ಚಾರಿತ್ರಿಕ ಸತ್ಯ. ರಾಮನ ರಾಜ್ಯ, ರಾಜ್ಯಭಾರ ಪ್ರಜೆಗಳ ಕ್ಷೇಮಪಾಲನೆ ಬಗ್ಗೆ ಗಾಂಧೀಜಿ ಸಾಕಷ್ಟು ಚಿಂತಿಸಿದ್ದಾರೆ. ಹಾಗೆಯೇ ಗ್ರಾಮದ ಅಭ್ಯುದಯವೇ ದೇಶದ ಅಭ್ಯುದಯ, ಆಗಲೇ ನಾವು ರಾಮ ರಾಜ್ಯ ಕಾಣಲು ಸಾಧ್ಯ ಎಂದು ಭಾವಿಸಿದ್ದರು. ಇದನ್ನು ಸರ್. ಥಾಮಸ್ ಮೊರ್‌ನ ಕನಸಿನ ರಾಜ್ಯ (ಯುಟೋಪಿಯಾ)ದಂತೆ ತಿಳಿಯಬಾರದು. ಮಹರ್ಷಿ ವಾಲ್ಮೀಕಿ ವರ್ತಮಾನಕ್ಕೆ ಸ್ಪಂದಿಸುವಂತೆ ಚಿಂತಿಸಿದ್ದ.

ಮಹರ್ಷಿ ವಾಲ್ಮೀಕಿ ಪ್ರಾಚೀನ ಭಾರತೀಯತೆ, ಹಿಂದೂ ಧರ್ಮದ ತಳಹದಿಯ ಮೂಲಕ ಸಂಸ್ಕೃತಿಯನ್ನು ಚಿತ್ರಿಸಿದ್ದಾನೆ. ರಾಷ್ಟ್ರದ  ಪರಿಕಲ್ಪನೆ, ಆಳ್ವಿಕೆಯ ಪೈಪೋಟಿ ಬಗ್ಗೆ ತಿಳಿಸುತ್ತಾ ರಾಜಧರ್ಮ, ಪರಧರ್ಮ, ಸಹಿಷ್ಣತ ಬಗ್ಗೆ ಚಿಂತಿಸಿದ್ದಾನೆ. ರಾಮಾಯಣದ ಮೂಲಕ ವಾಲ್ಮೀಕಿ ರಾಜಕಾರಣ ಎನ್ನುವುದು ಐಕ್ಯತೆ, ಸಮನ್ವಯತೆಯನ್ನು ಸಾಧಿಸಲಾಗದ ವ್ಯವಸ್ಥೆ ಎಂದು ಆಗಲೇ ಸಂದೇಶ ಕೊಟ್ಟಿದ್ದಾನೆ.

ರಾಜನೀತಿಯಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಪಾಲಿಸುವ ಬಗ್ಗೆ ಚಿಂತಿಸಿದ್ದಾನೆ. ಈ ಮೂಲಕ ಶ್ರೀರಾಮ, ಭರತ, ಲಕ್ಷ್ಮಣರ ಪಾತ್ರಗಳಲ್ಲದೆ, ದಶರಥ, ಕೌಸಲ್ಯ, ಕೈಕೇಯಿ ಇತರರ ಚಿತ್ರಣವನ್ನು ವಿವರವಾಗಿ ತಿಳಿಸಿದ್ದಾನೆ. ರಾಜನಾಗುವ ಅರ್ಹತೆ ಇದ್ದರೂ ಕಡೆಗಣಿಸಿ ಸ್ವಾರ್ಥಕ್ಕಾಗಿ ಸಿಂಹಾಸನದಲ್ಲಿ ಪಟ್ಟಾಭಿಷೇಕ ಮಾಡಿಸುವ ಪರಿಯನ್ನು ತೆಗಳಿದ್ಧಾನೆ. ಪಿತೃವಾಕ್ಯ ಪರಿಪಾಲನೆ ಮಾಡಿದ ಶ್ರೀರಾಮ ಆದರ್ಶ ವ್ಯಕ್ತಿ. ಅವನಿಗೆ ೧೬ ಗುಣಗಳಿದ್ದವು. ರಾಜನಾದವನು ಶ್ರೀರಾಮನಂತೆ ಹದಿನಾರು ಗುಣ – ಲಕ್ಷಣಗಳನ್ನು ಹೊಂದಿರಬೇಕೆಂದು ಸಾರಿ ಹೇಳಿದನು. ವನವಾಸವು ಕಾಡಿನ ಮತ್ತು ನಾಡಿನ ಸಂಸ್ಕೃತಿಗೆ ಮುಖಾಮುಖಿಯಾಗಿಸಿ ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕುತ್ತದೆ. ಇಲ್ಲಿ ಸಿಂಹಾಸನಕ್ಕಾಗಿ ತ್ಯಾಗ, ಆದರ್ಶ, ಉದಾರತೆಯನ್ನು ರಾಜನೀತಿಯಲ್ಲಿ ಅನುಸರಿಸಲಾಗಿದೆಗಿದೆ. ರಾಜ್ಯಾಡಳಿತ ಹೇಗಿರಬೇಕೆಂದು ವ್ಯಕ್ತಿಗಳ ಸಾಹಸ, ದುಡಿಮೆ, ತ್ಯಾಗ, ಅರ್ಪಣ ಮನನೋಭಾವ ರಾಜ ಮತ್ತು ಪ್ರಜೆಗಳ ನಡುವೆ ಸಾಮರಸ್ಯವನ್ನುಂಟು ಮಾಡಿದ್ದಾರೆ. ವಾಲ್ಮೀಕಿಗೆ ಆದರ್ಶ ರಾಜ್ಯದ ಕಲ್ಪನೆ ಇತ್ತು. ಅದಕ್ಕೆ ಪ್ರಜೆಗಳ ರಾಜ್ಯ, ಕಲ್ಯಾಣರಾಜ್ಯ (Welfare state) ಎಂದು ಕರೆದಿದ್ದ.

ರಾಜನೀತಿಯ ಉತ್ತಮ ಗುಣಗಳಿಂದ ಶ್ರೀರಾಮನ ರಾಜ್ಯದಲ್ಲಿ ಪ್ರಜೆಗಳೆಲ್ಲ ಸುಖಿಗಳು, ಬರಗಾಲ, ಕ್ಷಾಮಗಳು, ಉಲ್ಬಣಗೊಂಡಿರಲಿಲ್ಲ. ಇಂಥ ಸುಭೀಕ್ಷೆ ಕಾಲ ಹಿಂದೆ ಮೂಂದೆ ನೋಡಿದ ಅನುಭವ ವಾಲ್ಮೀಕಿಗಿಲ್ಲ ಎಂಬ ಭಾವನೆ ಮೂಡುತ್ತದೆ.

ಶ್ರೀರಾಮಚಂದ್ರ ಎಷ್ಟು ಬುದ್ಧಿವಂತ ಎಂದರೆ ಒಮ್ಮೆ ರಾಜಧರ್ಮ ಮತ್ತು ರಾಜನೀತಿಯನ್ನು ತಿಳಿಯಲು ಹಂಬಲಿಸುತ್ತಾನೆ. ಅಂದಿನ ವರ್ಣ ವ್ಯವಸ್ಥೆಯಲ್ಲಿ ಶೂದ್ರರಿಗೆ ಸರಿಯಾದ ಸ್ಥಾನ – ಮಾನಗಳು ಇರಲಿಲ್ಲ. ಪುರೋಹಿತನ ಅಗತ್ಯ ತುಂಬಾ ಇತ್ತು. ರಾಜನೀತಿ ಅನಿವಾರ್ಯ ಎಂದು ತಿಳಿದು ತನ್ನ ತಮ್ಮ ಲಕ್ಷ್ಮಣನನ್ನು ರಾವಣನ ಹತ್ತಿರ ಕಳುಹಿಸುತ್ತಾನೆ. ರಾವಣ ಬ್ರಾಹ್ಮಣನಾಗಿದ್ದ, ಪುರೋಹಿತ ಸಂಪ್ರದಾಯಗಳನ್ನು ಹೊಂದಿದ್ದ. ಆಗ ಲಕ್ಷ್ಮಣನಿಗೆ ರಾವಣ ಸಂಗೀತದ ಸ್ವರ ಲಯ – ರಾಗಗಳನ್ನು ತಿಳಿಸುತ್ತಾ. ರಾಜಧರ್ಮ, ರಾಜನೀತಿ ಬಗ್ಗೆ ಬೋಧಿಸುತ್ತಾನೆ. ಮುಂದೆ ನಡೆಯುವ ಯುದ್ಧದಲ್ಲಿ ತಾನು ರಾಮನಿಂದ ಸೋತು – ಹತನಾಗುವ ಬಗ್ಗೆ  ಎಚ್ಚರ ಇದ್ದರೂ ಲಕ್ಷ್ಮಣನಿಗೆ ಬೋಧಿಸುವ ರಾಜನೀತಿ ತತ್ವಗಳು ರಾಜಧರ್ಮದ ಪರಾಕಾಷ್ಠೆಯನ್ನು ತಲುಪಿವೆ.

ರಾಮನಿಗೆ ರಾಜನೀತಿ ತಿಳಿದಿದ್ದರೂ ತಾನು ರಾಜನಾಗಿ ಆಳ್ವಿಕೆ ನಡೆಸಿಲ್ಲ ಎಂಬ ಕಾರಣದಿಂದ ರಾಜಣ ಮೂಲಕ ರಾಜನೀತಿಯನ್ನು ಭೋಧಿಸಿಕೊಳ್ಳುವುದು, ಕೇಳುವ ನೀತಿಯನ್ನು ಪಾಲಿಸಿದ್ದಾನೆ. ಇದು ಒಂದು ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗಿದೆ.

ರಾಜನೀತಿ ಪ್ರಮುಖ ಸಂಗತಿಗಳ ಅವಲೋಕನ

ಮಹರ್ಷಿ ವಾಲ್ಮೀಕಿ ತನ್ನ ರಾಮಾಯಣ ಮಹಾಕಾವ್ಯದಲ್ಲಿ ಆದರ್ಶ ಸಮಾಜವನ್ನು ಕಟ್ಟು ನಿಟ್ಟಿನಲ್ಲಿ ರಾಜನೀತಿಯನ್ನು ಹಾಗೂ ಸಮಾನತೆಯನ್ನು ಪ್ರತಿ ಪಾದಿಸಿದ್ದಾರೆ. ರಾಮಾಯಣದ ತುಂಬಾ ರಾಜನೀತಿ ಬಗ್ಗೆ ಪ್ರಸ್ತಾಪಗಳಿವೆ. ಪ್ರಮುಖವಾಗಿ ನೋಡುವುದು ಶ್ರೀರಾಮಚಂದ್ರ ವನವಾಸಕ್ಕೆ ಹೊರಟಾಗ ಭರತನಿಗೆ ರಾಜನೀತಿ (ರಾಜ್ಯಭಾರಕ್ರಮ – ರಾಜಧರ್ಮ)ವನ್ನು ಬೋಧಿಸುವ ಪ್ರಸಂಗ ಬರುತ್ತದೆ. ಇದನ್ನು ವಾಲ್ಮೀಕಿ ಆ ಕಾಲಘಟ್ಟದ ಜೀವನ ಮೌಲ್ಯಗಳು, ರಾಜಪ್ರಭುತ್ವ ಹಗೂ ಆದರ್ಶಗಳನ್ನು ರಾಮನ ಮೂಲಕ ಸಾರುತ್ತಾನೆ. ರಾಮನು ಭರತನಿಗೆ ರಾಜ್ಯಬಾರ ವಿಧಾನವನ್ನು ವಿವರಿಸುತ್ತಾ ಅದರಂತೆ ರಾಜ್ಯವಾಳುತ್ತಿರಬೇಕೆಂದು ತಿಳಿಸುತ್ತಾನೆ. ‘ಭರತನನ್ನು ಶ್ರೀರಾಮ ಅಪ್ಪಿಕೊಂಡು, ತೊಡೆಯ ಮೇಲೆ ಮಗುವಿನಂತೆ ಕುಳ್ಳಿರಿಸಿಕೊಂಡು ರಾಜನೀತಿಯ ವಿವಿಧ ಸಂಗತಿಗಳನ್ನು ಬೋಧಿಸುವನು. ದಶರಥ ಮಹಾರಾಜ ನನ್ನ ತಂದೆ ಏನಾದರು? ನೀನು ಕಾಡಿಗೆ ಏಕೆ ಬಂದೆ? ಬಾಲಕನಾದ ನಿನಗೆ ಶಾಶ್ವತವಾದ ರಾಜ್ಯವು ತಪ್ಪಿ ಹೋಗಲಿಲ್ಲ (ಹೋಗುವುದಿಲ್ಲ)ವಷ್ಟೆ, ಸತ್ಯ, ಪರಾಕ್ರಮಿಯಾದ ರಾಜನಿಗೆ ಶೂಶ್ರೂಷೆ ಮಾಡುತ್ತಿರಬೇಕು. ಸತ್ಯ ಮತ್ತು ಯುದ್ಧ ಮಾಡುವವ, ರಾಜಸೂಯ, ಅಶ್ವಮೇಧ, ಯಜ್ಞಗಳನ್ನು ಮಾಡುವ ಧರ್ಮಗಳಲ್ಲಿ ನಂಬಿಕೆ ಇರುವ ದಶರಥನನ್ನು ರಾಮ ಕೊಂಡಾಡುತ್ತಾನೆ. ಇವು ಭರತನಲ್ಲಿರಬೇಕಾದ ಲಕ್ಷಣಗಳೆಂದು ಅವನ ಭಾವನೆ. ವಂಶಪರಂಪರೆ, ಪೂರ್ವಜರ ಸಂಪ್ರದಾಯ ಮೌಲ್ಯಗಳನ್ನು ಉಳಿಸುವ ಪರಿ ಇದು.

ಮಹರ್ಷಿಯ ಆದೇಶದಂತೆ ಭರತ ರಾಮನ ಪಾದುಕೆಗಳನ್ನು ತೆಗೆದುಕೊಂಡು ತಲೆಯ ಮೇಲಿರಿಸಿಕೊಂಡು, ಇವುಗಳನ್ನು ಅಣ್ಣನೆಂದೇ ಭಾವಿಸಿ ಸಿಂಹಾಸನದ ಮೇಲಿರಿಸಿ ಪೂಜಿಸುತ್ತಾನೆ. ಆ ಮೂಲಕ ರಾಜ್ಯಭಾರ ಮಾಡುತ್ತಾನೆ. ವಾಲ್ಮೀಕಿ ರಾಮನ ಮೂಲಕ ಭರತನಿಗೆ ರಾಜನೀತಿ, ಇಕ್ಷ್ವಾಕು ವಂಶದವರ ಚರಿತ್ರೆ ವಶಿಷ್ಠರ ಉದೇಶಗಳನ್ನು ಹೇಳಿಸುತ್ತಾರೆ.

ರಾಜನಾದವನು ತನ್ನ ಪ್ರಜೆಗಳು, ಆಡಳಿತ, ಕುಟುಂಬ, ಸಂಬಂಧ, ಅಧಿಕಾರಿಗಳು, ಮಂತ್ರಿ ಋಷಿಮುನಿಗಳು, ಪರಿಚಾರಕರು, ರಾಣಿಯರು, ಬ್ರಾಹ್ಮಣರು, ತಂದೆ – ತಾಯಿಗಳೂ ಹೀಗೆ ನೂರಾರು ಸಂಗತಿಗಳ ಮೂಲಕ ವಾಲ್ಮೀಕಿ ರಾಜನೀತಿ ಮತ್ತು ಸಮಾನತೆ ಸಂದೇಶವನ್ನು ಸಾರುತ್ತಾನೆ. ಉದಾಹರಣೆಗೆ ನೋಡುವುದಾದರೆ, ರಾಮ ಭರತನಿಗೆ ಪೂಜ್ಯಳಾದ ಕೈಕೇಯಿದೇವಿ ಸಂತೋಷದಿಂದ ಇರುವಳೆಂದು ಕೇಳವನು. ವಸಿಷ್ಠ ಪುತ್ರನಾದ ಸುಯಜ್ಞ ಎಂಬುವನು ವಿನಯ ಸಂಪನ್ನ, ಸತ್ಕುಲ ಪ್ರಸೂತ, ಅಧಿಕ ಶಾಸ್ತ್ರಜ್ಞಾನವುಳ್ಳವನು, ಅಸೂಯೆರಹಿತನೂ ವಿಮರ್ಶಾಗುಣವುಳ್ಳ ನಿನ್ನ ಪುರೋಹಿತ ನಾಗಿದ್ದವನನ್ನು ಗೌರವಿಸಿಲು ಸೂಚಿಸುತ್ತಾನೆ. ಹಾಗೆಯೇ ಸುಯಜ್ಞನು ವಿಧಿಗಳನ್ನು ಬಲ್ಲವನೂ, ಬುದ್ಧಿಶಾಲಿಯೂ ಸರಳ ಸ್ವಭಾವದವನೂ ಆದ ಆತನನ್ನು ಅಗ್ನಿ ಕಾರ್ಯಗಳಿಗೆ ನಿಯಮಿತವಾಗಿ ಹೋಮ ಮಾಡಿದ್ದನು. ಹೋಮ ಮಾಡಬೇಕಾದದ್ದನ್ನು ಕಾಲಕಾಲಕ್ಕೆ ಯಾವಾಗಲೂ ತಿಳಿಸುತ್ತಾನೆಯೇ ಎಂದು ಕೇಳುವ ಮೂಲಕ ಎಚ್ಚರಿಸುತ್ತಾನೆ.

ರಾಜನಾದವನು ದೇವತೆಗಳನ್ನು ಪಿತೃಗಳನ್ನು, ತಾಯಂದಿರನ್ನು, ಗುರುಗಳನ್ನು ಗೌರವಿಸುತ್ತಿರಬೇಕು. ಶ್ರೇಷ್ಠವಾದ ಬಾಣ ಮತ್ತು ಅಸ್ತ್ರಗಳ ಉತ್ತಮ ಜ್ಞಾನವನ್ನು ಪಡೆದಿರುವ ಅರ್ಥಶಾಸ್ತ್ರ ವಿಶಾರದನಾದ ಆಚಾರ್ಯ ಸುಧನ್ವನನ್ನು ನೀನು ಗೌರವಿಸಬೇಕೆಂದು ಭರತನಿಗೆ ಶ್ರೀರಾಮ ಹೇಳುತ್ತಾನೆ. ಮುಂದುವರೆದು ನಿನ್ನಂತೆಯೇ ಶೂರರೂ ಶಾಸ್ತ್ರಜ್ಞರೂ ಜಿತೇಂದ್ರಿಯರೂ ಸತ್ಕುಲ ಪ್ರಸೂತರೂ ಇತರರ ಮನೋಭಿಪ್ರಾಯವನ್ನು ತಿಳಿಯಬಲ್ಲವರು ಆದವರನ್ನು ನಿನ್ನ ಮಂತ್ರಿಗಳನ್ನಾಗಿ ಮಾಡಿಕೊಳ್ಳಲು ಸಲಹೆ ಮಾಡುತ್ತಾರೆ. ಎಂಥ ಮಂತ್ರಿಗಳಿರಬೇಕೆಂದು ಹೇಳುವಲ್ಲಿ ವಾಲ್ಮೀಕಿ ‘ರಘುವಂಶಜನೇ ಮಂತ್ರಾಲೋಚನ ಸಮರ್ಥ, ಶಾಸ್ತ್ರ, ಪಾಂಡಿತ್ಯವುಳ್ಳ ಮಂತ್ರಿಗಳಿದ್ದರೆ ರಾಜನಿಗೆ ಮಂತ್ರಾಲೋಚನೆಯೇ ವಿಜಯಕ್ಕೆ ಕಾರಣ ಎನ್ನುತ್ತಾನೆ.

ಪ್ರಭು (ರಾಜ) ಜಾಸ್ತಿ ನಿದ್ದೆ ಮಾಡಬಾರದು. ಬೆಳಗಿನ ಜಾವ ಬೇಗ ಏಳ ಬೇಕೆಂದು ನೀತಿ – ನಿರ್ಬಂಧಗಳಿವೆ. ರಾಜ ರಾತ್ರಿ ಮಲಗುವ ಮುನ್ನ ದ್ರವ್ಯಾರ್ಜನೆ ಸಂಪಾದನೆ, ಉಪಾಯ ಕುರಿತು ಯೋಚಿಸಬೇಕೆನ್ನುತ್ತಾನೆ. ರಾಜ ಅಥವಾ ಪ್ರಜೆ (ಪ್ರಜೆ) ಒಬ್ಬನೆ ಕುಳಿತಾಗಲಿ, ಬಹುಜನರೊಡನಾಗಲಿ ಮಂತ್ರಾಲೋಚನೆ ನಡೆಸಬೇಕಾಗುತ್ತದೆ. ಆತನ ಮಂತ್ರಾಲೋಚನೆಗೈದ ವಿಷಯವು ತನ್ನ ದೇಶದಲ್ಲೆಲ್ಲ ಹರಡಬೇಕಂತೆ.

ವಾಲ್ಮೀಕಿ ತನ್ನ ವಿಚಾರ ಲಹರಿಯಲ್ಲಿ ರಾಜನೀತಿಯನ್ನು ಹೇಳುವಾಗ ಆ ಕಾಲದ ಪ್ರತಿಯೊಂದು ರಾಜ್ಯ, ಸಂಸ್ಥಾನ, ರಾಜ, ಮಂತ್ರಿ, ಪ್ರಜೆಗಳ ಅನುಸರಿಸುವಿಕೆ ಸಾಮಾನ್ಯವಾಗಿರಬೇಕು. ಹಾಗಾಗಿ ಪದೇ ಪದೇ ರಘುವಂಶೋದ್ಭವನಾದ ಭರತನಿಗೆ ರಾಜನೀತಿ ಹೇಳುವಾಗ ಅವನು ಕಿರಿಯನು, ಅನನುಭವಿಯೂ ಮತ್ತು ಆಕಸ್ಮಿಕವಾಗಿ ಆ ಪದವಿಗೆ ಬಂದ ಕಾರಣ ರಾಜನೀತಿ ಅವಶ್ಯಕತೆ ಎದ್ದು ಕಾಣುತ್ತದೆ.

ರಾಜ ಅಲ್ಪ ಸಾಧನವೂ ಅಧಿಕ ಫಲವುಳ್ಳ ಕಾರ್ಯವನ್ನು ಆಲೋಚಿನ ಅದನ್ನು ಮಾಡುವುದಕ್ಕೆ ಬೇಗ ಆರಂಭಿಸಲು ಸೂಚಿಸಲಾಗಿದೆ. ವಿಳಂಬ ಮಾಡದಂತೆಯೂ ಎಚ್ಚರಿಸುತ್ತಾರೆ. ರಾಜ ಮಾಡತಕ್ಕ ಕಾರ್ಯಗಳೆಲ್ಲವನ್ನು ಮಾಡಿ ಮುಗಿಸಿದ ಮೇಲೆ ಇತರ ರಾಜರು ತಿಳಿಯುವರು. ಇನ್ನು ಮಾಡಬೇಕಾಗಿರುವ ಕೆಲಸಗಳ ಬಗ್ಗೆಯು ತಿಳಿಯಬೇಕು.

ರಾಜನಾಗಲಿ, ಮಂತ್ರಿಗಳಾಗಲಿ ಆಲೋಚಿಸಿದ ವಿಷಯಗಳು ಪ್ರಕಟಿಸಲ್ಪಡದಿರುವಾಗ ತರ್ಕಗಳಿಂದಾಗಲಿ, ಉಪಾಯದಿಂದಾಗಲಿ ಯಾರು ತಿಳಿಯುವುದಿಲ್ಲ. ವಾಲ್ಮೀಕಿಗೆ ಸಮಕಾಲೀನ ಸಮಾಜದಲ್ಲಿ ಅರ್ಯವರ್ಣಿಯರಾದ ಬ್ರಾಹ್ಮಣರಿಗೆ ವಿಶೇಷ ಮನ್ನಣೆಯನ್ನು ಕೊಡಬೇಕಾಗಿತ್ತು. ಇಲ್ಲಿ ಕರಿಯ – ಬಿಳಿಯ ಆರ್ಯ. ದ್ರಾವಿಡ ಲಕ್ಷಣಗಳನ್ನು ನೋಡಬಹುದಾಗಿದೆ. ಸಾವಿರ ಜನ ಮುರ್ಖರಿಗಿಂತಲೂ ಒಬ್ಬ ಪಂಡಿತನನ್ನು ಬೆಳೆಸು, ರಾಜ್ಯದಲ್ಲಿ ತೊಂದರೆ, ವಿಷಮಗಾಳಿ ಬೀಸಿದಾಗ ಪಂಡಿತರು ಅದನ್ನು ಹೋಗಲಾಡಿಸಿ ಶ್ರೇಯಸ್ಸು ತರುವ ನಂಬಿಕೆಯಿತ್ತು. ರಾಜನು ಸಾವಿರ – ಹತ್ತ ಸಾವಿ ಮಂದಿ ಮೂರ್ಖರನ್ನು ಹೊಂದಿದರೂ ಆತನಿಗೆ ಅವರಿಂದ ಯಾವ ಪ್ರಯೋಜನವಿರಲಿಲ್ಲ. ಬುದ್ದಿಶಾಲಿ , ಶೂರ, ಸಮರ್ಥ, ವಿಚಕ್ಷಣೆಯುಳ್ಳ ಒಬ್ಬ ಮಂತ್ರಿಯಿದ್ದರೆ ಸಾಕು. ರಾಜ, ರಾಜನ ಪ್ರತಿನಿಧಿ, ಅಧಿಕಾರಿಗಳಿಗೆ ಅಧಿಕವಾದ ಭಾಗ್ಯವನ್ನು ಒದಗಿಸಿಕೊಡುತ್ತಿದ್ದನು.

ಶ್ರೀರಾಮನ ರಾಜ್ಯಾಳ್ವಿಕೆ ಪೂರ್ವದಲ್ಲಿ ಪ್ರಮುಖ ಸೇವಕರು ಮುಖ್ಯ ಕೆಲಸಗಳಿಗೆ, ಮಧ್ಯಮದವರು ಸಾಧಾರಣ ಕೆಲಸಗಳಿಗೆ ಮತ್ತು ಕೀಳಾದವರೂ ಕೀಳು ಕೆಲಸಗಳಿಗೆ ನಿಯೋಜನೆಗೊಂಡಿದ್ದರು. ಉಚ್ಚ – ನೀಚ, ಶ್ರೇಷ್ಠ – ಕನಿಷ್ಠದ ಪರಿಕಲ್ಪನೆಯನ್ನು ವಾಲ್ಮೀಕಿ ಪ್ರಸ್ತಾಪಿಸುತ್ತಾನೆ.

ವಾಲ್ಮೀಕಿ ಎಂಥ ಎಚ್ಚರಿಕೆ ಕೊಟ್ಟು ಸಂಪ್ರದಾಯವನ್ನು ಪೋಷಿಸುತ್ತಾನೆಂದರೆ: ರಾಜನ ತಾತ, ತಂದೆಯರ ಕಲದಿಂದ ವಂಶಪಾರಂಪರ್ಯವಾಗಿ ಬಂದ ಶುದ್ಧರಾದ ಉತ್ತಮ ಮಂತ್ರಿಗಳನ್ನು ಉತ್ತಮ ಕೆಲಸಗಳಿಗೆ ನೇಮಿಸಲು ಸೂಚಿಸುತ್ತಾನೆ. ಮಂತ್ರಿಗಳಿಗೆ ಪಾರಂಪರಿಕ ಜ್ಞಾನ, ಅನುಭವ ಇರುವ ಬಗ್ಗೆ ವಾಲ್ಮೀಕಿಗೆ ಒಪ್ಪಿಗೆಯಿತ್ತು ಪ್ರಜೆಗಳನ್ನು ಕ್ರೂರವಾದ ಶಿಕ್ಷೆಗೊಳಪಡಿಸಿ ಬಹಳವಾಗಿ ಪೀಡಿಸತಕ್ಕ ರಾಜ್ಯವೆಂದು ನಿನ್ನ ರಾಜ್ಯವನ್ನು ಯಾವ ಮಂತ್ರಿಗಳು ತಿಳಿಯಬಾರದೆಂದು ಭರತನಿಗೆ ಶ್ರೀರಾಮ ಹೇಳುವುದನ್ನು ವಾಲ್ಮೀಕಿ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾನೆ.

ರಾಜನಿಗೆ ಸವ್ಸಂಗಗಳ ಬಗ್ಗೆ ಎಚ್ಚರಿಕೆ ಇರಬೇಕು. ಯಜ್ಞ ಮಾಡುವವರು, ಪಾಪಿಯನ್ನು ಕಾಣುವಂತೆ, ಬಲತ್ಕಾರದಿಂದ ಸೆಳೆದೊಯ್ಯುವ ಕಾಮುಕನನ್ನು ಸ್ತ್ರೀಯರು ಕಾಣುವಂತೆ, ರಾಜನನ್ನು (ಭರತ) ಯಾರು ಹೀಯಾಳಿಸಬಾರದು ಎನ್ನುತ್ತಾರೆ ನೈತಿಕೆಯನ್ನು ರಾಜ ಕಾಪಾಡಿಕೊಳ್ಳಬೇಕು.

ರಾಜನಾದವನನ್ನು ಹಣದಾಸೆಗೆ ಕೆಟ್ಟ ಜನರು ತೊಂದರೆ ಮಾಡಿದರೆ ರಾಜ ಅವರಿಂದ ದೂರ ಇರಬೇಕು. ರಾಜನಿಗೆ ದುಷ್ಟ ಶಿಕ್ಷಣ ಶಿಷ್ಟರ ರಕ್ಷಣೆ ಪ್ರಜ್ಞೆ ಇರಬೇಕು. ಚತುರೋಪಾಯಗಳಲ್ಲಿ ಸಮರ್ಥವಾದ ವೈದ್ಯನನ್ನು ಸೇವಕರನ್ನು ದೊಷಿಸುವುದರಲ್ಲೇ ಆಸಕ್ತನಾದವನನ್ನು ಐಶ್ವರ್ಯ ಕಾಮಿಯಾದ ಶೂರನನ್ನು ಕೊಲ್ಲಬೇಕು. ಇಲ್ಲವಾದರೆ ಅವರು ರಾಜನನ್ನೇ ಕೊಲ್ಲುತ್ತಾರೆ.

ರಾಮಾಯಣ ಕಾಲದಲ್ಲಿ ಸೇನಾಪತಿಗೆ ಹೆಚ್ಚಿನ ಮನ್ನಣೆ ಇತ್ತು. ಅಂದು ಸಂತೋಷವಾಗಿರುವ ಶೂರ, ಬುದ್ದಿವಂತ, ಧೈರ್ಯವಂತ, ಶುದ್ಧ, ಸತ್ಕುಲ ಪ್ರಸೂತನೂ ರಾಜನಲ್ಲಿ ವಿಶ್ವಾಸವುಳ್ಳ ದಕ್ಷನೂ ಆದವನನ್ನು ಸೇನಾಪತಿಯಾಗಿ ಹೋಂದಲು ವಾಲ್ಮೀಕಿ ಸೂಚಿಸುತ್ತಾರೆ. ಎಂಥವರನ್ನು ಯುದ್ಧಕ್ಕೆ, ಸೈನ್ಯಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳುವಾಗ ಮುಖ್ಯ ಯುದ್ಧವೀರರು, ಸೇನ ನಾಯಕರು, ಬಲಶಾಲಿಗಳಾಗಿದ್ದು, ಪೂರ್ವದಲ್ಲಿ ಸಾಹಸ ಕಾರ್ಯ ತೋರಿ ಪರಾಕ್ರಮಿಗಳಾದವರನ್ನು ರಾಜ ಕರೆಸಿ ಸನ್ಮಾನಿಸಿ, ಸತ್ಕರಿದವರನ್ನು ಮೇಲಿನ ಹುದ್ದೆಗಳಿಗೆ ನೇಮಿಸಿಕೊಳ್ಳಲು ರಾಜನೀತಿಯಲ್ಲಿ ಕಲ್ಪಿಸಲಾಗಿದೆ.

ರಾಜ್ಯಭಾರ ವ್ಯವಸ್ಥೆಯಲ್ಲಿ ರಾಜನಾದವನು ಸದೃಢ ರಾಜ್ಯವನ್ನು ಹೊಂದಿರ ಬೇಕಾದರೆ,ಸೈನ್ಯಕ್ಕೆ ನ್ಯಾಯೋಚಿತವಾಗಿ ಕೊಡಬೇಕಾದ ಭತ್ಯೆ ಹಾಗೂ ಸಂಬಳವನ್ನು ಕಾಲಕ್ಕೆ ಸರಿಯಾಗಿ ಕೊಡಬೇಕು. ಸಂಬಳ, ಭತ್ಯೆ ನಿಗದಿತ ಸಮಯದಲ್ಲಿ ಕೊಡದಿದ್ದರೆ ಸೇವಕರು ಯಜಮಾನನ ಮೇಲೆ ಕೋಪಗೊಂಡು ದೊಷಿಸುತ್ತಾರೆ ಎಂದು ತಿಳಿಸಲಾಗಿದೆ.

ರಾಜ ಸಾಕ್ಷಾತ್ ದೇವರೆಂದು ನಂಬಿದ್ದ ಕಾಲದಲ್ಲಿ ಪ್ರಜೆಗಳು ರಾಜನನ್ನು, ರಾಜನು ಪ್ರಜೆಗಳನ್ನು ಅನುಸರಿಸುವ ಲಕ್ಷಣಗಳನ್ನು ಹೇಳಲಾಗಿದೆ. ಜ್ಞಾತಿಗಳು ಇತರ ಪ್ರಧಾನ ಜನಗಳೂ ಎಲ್ಲರೂ ನಿನ್ನಲ್ಲಿ (ರಾಜ) ಅನುರಾಗವುಳ್ಳವರಾಗಿರುವರೇ ಅಥವಾ ರಾಜನ ಕಾರ್ಯಗಳಿಗಾಗಿ ಅವರು ಸಮಾಧಾನ ಚಿತ್ತರಾಗಿ ಪ್ರಾಣ ಬಿಡಲು ಸಿದ್ದರಿರುತ್ತಾರೆ. ಪ್ರಜೆಗಳ ಕಲ್ಯಾಣಕ್ಕಾಗಿ ರಾಜ ಹಾಕಿಕೊಂಡ ಯೋಜನೆ, ಕಲ್ಯಾಣ ಕಾರ್ಯಗಳು, ರಾಜನನ್ನು ಸತ್ತರೆ ಸ್ವರ್ಗ, ಮಾಡಿದರೇ ವೀರಮರಣ ಕಲ್ಪನೆ ಇಲ್ಲಿಯೂ ತ್ಯಾಗ, ಬಲಿದಾನಗಳನ್ನು ಕಾಣಬಹುದು.

ವಾಲ್ಮೀಕಿಯು ಪ್ರತಿಯೊಬ್ಬರ ಚರಿತ್ರೆ, ವ್ಯಕ್ತಿತ್ವ ಪರಿಶೀಲಿಸಿ, ಉದ್ಯೋಗಕ್ಕೆ ತೊಡಗಿಸಿಕೊಳ್ಳಲು ಎಚ್ಚರಿಕೆ, ಮುನ್ಸೂಚನೆ ನೀಡಿದ್ದಾರೆ. ಸ್ಪದೇಶದಲ್ಲಿ ಹುಟ್ಟಿ ವಿದ್ಯಾವಂತ, ಪಂಡಿತನಾಗಿ, ಸಮರ್ಥ, ಸ್ಟುರಣ ಶಕ್ತಿಯುಳ್ಳವನು, ಹೇಳಿದ ಕೆಲಸವನ್ನು ಶಿರಸಾವಹಿಸಿ ಮಾಡುವ, ತನ್ನನ್ನು ತಾನು ತನ್ನಯತೆಯಿಂದ ಕೆಲಸಕ್ಕೆ ಅರ್ಪಿಸಿ ಕೊಳ್ಳುವವರನ್ನು ರಾಜ ಗುರುತಿಸಿ ದೂತನನ್ನಾಗಿ ನೇಮಿಸಿಕೊಳ್ಳುವುದು ರಾಜ ನೀತಿ ಲಕ್ಷಣವಾಗಿತ್ತು.

ರಾಜನಾದವನು ತನ್ನ ಪೂರ್ವಜರಿಂದ ರಕ್ಷಿತವಾದ ದೇಶ, ಸುಖ, ಸಮೃದ್ಧಿ, ನದಿ, ಬೆಟ್ಟ, ದುಷ್ಟಮೃಗ ಹೀಗೆ ಎಲ್ಲ ಭಯಗಳಿಂದ ಮುಕ್ತವಾಗಿರಬೇಕು. ಪಾಪವನ್ನು ತ್ಯಜಿಸಿದ ಮನುಷ್ಯ ಸುಖವಾಗಿರಬೇಕು. ಕೃಷಿಕರು ಪಶುಪಾಲಕರು ರಾಜನಿಗೆ ಪ್ರೀತಿ ಪಾತ್ರದವರಾಗಿರುತ್ತಾರೆ.

ರಾಜನೀತಿಯಲ್ಲಿ ೧೮ ತೀರ್ಥರ (ಅಡಳಿತ ವಿಭಾಗ, ಅಧಿಕಾರಿಗಳು) ಉಲ್ಲೇಖ ಬರುತ್ತದೆ. ಹೊರಗಿನವರು ಅಥವಾ ೧೮ ತೀರ್ಥರಲ್ಲಿ ಸು. ೧೫ ತೀರ್ಥರು ಒಬ್ಬರಿಗೆ ಒಬ್ಬರು ಗೊತ್ತಿಲ್ಲದಂತೆ ಕೆಲಸ ಮಾಡುತ್ತಿದ್ದರು. ಅವರುಗಳೆಂದರೆ:

೧. ಮಂತ್ರಿ

೨. ಪುರೋಹಿತ

೩. ಯುವರಾಜ

೪. ಸೇನಾಧಿಪತಿ (Commandar In Chief)

೫. ದೌವಾರಿಕ (Aides – De – Camporchief Of Body Guard)

೬. ಅಂತರ್ವಂಶಿಕ (Palace Secretary)

೭. ಸೆರೆಮನೆಯ ಅಧಿಕಾರಿ (Superentendent Of Jails)

೮. ಭಂಡಾರದ ಅಧಿಕಾರಿ (Treasury Officer)

೯. ಕಾರ್ಯನಿಯೋಜಕ (Chief Secretary Of Government)

೧೦. ಪ್ರಾಡ್ವಿವಾಕ(Registrar Incharge Of Petitions)

೧೧. ಸೇನಾನಾಯಕ (Financial Assistant To The Commander Inchief)

೧೨. ನಗರಾಧ್ಯಕ್ಷ (Mayor Or Muncipal President)

೧೩. ಕರ್ಮಾಂತಿಕ (Finance Secretary To Government)

೧೪. ಸಭ್ಯಕ (Speaker)

೧೫. ಧರ್ಮಾಧ್ಯಕ್ಷ (Chief Justice)

೧೬. ದಂಡಪಾಲ (District Magistrate)

೧೭. ದುರ್ಗಪಾಲ (Commander Incharge Of Forts)

೧೮. ರಾಷ್ಟ್ರಾಂತಪಾಲ (Commander Incharge Of The States Boundaries)

ಈ ಮೇಲಿನ ಹದಿನೆಂಟು ಹುದ್ದೆ, ಕರ್ತವ್ಯ ನೀತಿ, ಬದ್ಧತೆಗಳ ಬಗ್ಗೆ ವಾಲ್ಮೀಕಿ ರಾಜನೀತಿಯನ್ನು ವಿಶ್ಲೇಷಿಸಿದ್ದಾರೆ.

ರಾಜನಾದವನು ಶತ್ರು ಸಂಹಾರಕನಾಗಿದ್ದರೂ, ನಿನ್ನಿಂದ ಹೊರದೊಡಲ್ಪಟ್ಟ ಶತ್ರುಗಳು ಮರಳಿ ಬಂದಾಗ ಅವರನ್ನು ದುರ್ಬಲರೆಂದು ತಿಳಿದು ಪ್ರೀತಿಸಬೇಕು ತಿರಸ್ಕಾರ ಬಾರದೆಂದು ತಿಳಿಸಲಾಗಿದೆ. ಸರ್ವಕಾಲಕ್ಕೂ ರಾಜನಾದವನು ಪ್ರತ್ಯಕ್ಷ, ಅನುಮಾನ, ಪ್ರಮಾಣಗಳನ್ನು ನಂಬುವಂತ (ನಾಸ್ತಿಕ) ಬ್ರಾಹ್ಮಣರನ್ನು ಪ್ರೋತ್ಸಾಹಿಸ ಬೇಕೆಂದಿದ್ದಾನೆ.

ಏಕಾಏಕಿ ತಾವೇ ಪಂಡಿತರೆಂದು ನಂಬಿಕೊಂಡಿರುವ ಹುಡುಗ ಬುದ್ಧಿಯವರು ಧರ್ಮಶಾಸ್ತ್ರ ಓದುತ್ತಿದ್ದರೂ, ದುರ್ಬುದ್ದಿಯುಳ್ಳವರಾಗಿ, ತರ್ಕ ಬುದ್ಧಿಯನ್ನೊಂದಿದ್ದರೆ ಅವರು ರಾಜನಿಗೆ ನಿಷ್ಟ್ರಯೋಜಕರಾಗಿರುತ್ತಾರೆ. ಈ ಬಗ್ಗೆ ರಾಜ ಎಚ್ಚರದಿಂದಿರಬೇಕು. ರಾಜಧಾನಿ, ನಗರ, ಪಟ್ಟಣ, ಹಳ್ಳಿ, ಬೀದಿ, ಇತರೆ ನಾಗರಿಕ ಲಕ್ಷಣ ಇವು ಹೇಗಿರ ಬೇಕೆಂದು ವಾಲ್ಮೀಕಿ ರಾಜನೀತಿಯಲ್ಲಿ ಈ ರೀತಿ ತಿಳಿಸಿರುವುದು ಸ್ಪಷ್ಟ: ಶ್ರೀರಾಮನ ಪೂರ್ವಜನರಿಂದ ಸ್ಥಾಪಿತವಾದ ರಾಜಧಾನಿ (ಅಯೋಧ್ಯಾ) ಭದ್ರವಾದ ಭಾಗಿಲು, ಆನೆ, ಕುದುರೆ, ರಥಗಳಿಂದ ತುಂಬಿ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾದ ಜೆತೇಂದ್ರಿಯರೂ ಬಹಳ ಉತ್ಸಾಹಶಾಲಿಗಳೂ ಆದ ಪೂಜ್ಯರಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಂದ ಸಾವಿರಗಟ್ಟಲೆಯಾಗಿ ತಂಬಿರುವ ನಾನಾ ಆಕಾರಗಳುಳ್ಳ ಮಹಡಿಗಳಿಂದ ಕೂಡಿರುವ ಅಯೋಧ್ಯೆ ಸದಾ ಕಂಗೊಳಿಸುತ್ತಿತ್ತು. ಇಲ್ಲಿನ ಜನಸಂದಣಿ, ಯಜ್ಞಮಂಟಪ, ದೇವಸ್ಥಾನ, ಅರವಟ್ಟಿಗೆ, ನೀರಿನ ಕೊಳಗಳಿಂದ ಶೋಭಿಸುತ್ತಿತ್ತು. ಉತ್ಸವ, ಪಶು ಸಮೃದ್ಧಿದ, ಹಿಂಸಾಕೃತ್ಯಗಳು, ಸಾಮಾನ್ಯವಾಗಿ ರಾಜಧಾನಿಯಲ್ಲಿ ನಡೆಯುವ ಚಟುವಟಿಕೆಗಳಾಗಿದ್ದವು.

ರಾಜನು ವ್ಯಾಪಾರ – ವ್ಯಾಪಾರವನ್ನು ಆಶ್ರಯಿಸಿರುವ ಜನರ ಕಷ್ಟ – ನಷ್ಟಗಳನ್ನು ಪರಿಹರಿಸಬೇಕು. ತನ್ನ ದೇಶದಲ್ಲಿ ವಾಸಿಸುವವರೆಲ್ಲರನ್ನು ರಾಜನು ಧರ್ಮದಿಂದ ರಕ್ಷಿಸಬೇಕು. ಸ್ತ್ರೀಯರನ್ನು ಸಮಾಧಾನಪಡಿಸಬೇಕು. ರಕ್ಷಿಸುವ, ರಹಸ್ಯವನ್ನು ಹೇಳುವ, ಆನೆಗಳ ಕಾಡು, ಕುದುರೆ, ಹೆಣ್ಣಾನೆಗಳ ಬಗ್ಗೆ ರಾಜನ ಕರ್ತವ್ಯಗಳನ್ನು ದಾಖಲಿಸಿದ್ದಾರೆ. ತನ್ನ ನೂರಾರು ಕೆಲಸಗಳಿದ್ದರೂ ರಾಜಪುತ್ರ ರಾಜಮಾರ್ಗದಲ್ಲಿ ಪ್ರತಿನಿತ್ಯವೂ, ಪ್ರಾತಃಕಾಲದಲ್ಲಿ ಅಲಂಕಾರಯುಕ್ತನಾಗಿ ಸದಾ ಜನಗಳಿಗೆ ದರ್ಶನ ಕೊಡಬೇಕು. ಯಾವುದೇ ಕೆಲಸಗಾರರನ್ನು ನಿಲ್ಲಿಸಬಾರದು, ರಾಜನೆದುರು ಅವರು ನಿಲ್ಲುವುದಿಲ್ಲ, ಅವರನ್ನು ಹಿಂತಿರುಗಿಸದೇ ಸಮಾಧಾನಪಡಿಸಬೇಕು. ರಾಜ್ಯವು ದುರ್ಗ, ಧನ, ಧಾನ್ಯ, ಆಯುಧ, ನೀರು, ಯಂತ್ರ, ಸಲಕರಣೆ ಶಿಲ್ಪಿ, ಧನುರ್ಧಾರಿಗಳಾದ ಸೈನಿಕರಿಂದ ಕೂಡಿರಬೇಕು.

ರಾಜನ ಮತ್ತು ರಾಜ್ಯದ ಆದಾಯವು ಅಧಿಕವಾಗಿದ್ದು, ಖರ್ಚು ಆದಾಯಕ್ಕಿಂತ ಪ್ರಮಾಣದಲ್ಲಿ ಕಡಿಮೆ ಇರಬೇಕೆಂಬುದು ವಾಲ್ಮೀಕಿಯ ರಾಜ ನೀತಿಯಾಗಿದೆ. ರಾಜ್ಯದ ಆದಾಯವನ್ನು ಸದ್ವಿನಿಯೋಗ ಮಾಡುವಾಗ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೆಂಬುದು ಮುಖ್ಯ. ಬೊಕ್ಕಸವು ಅಪಾತ್ರರಿಗೆ ಹೋಗುವುದಿಲ್ಲ. ರಾಜನ ಖರ್ಚು ದೇವತಾ ನಿಮಿತ್ತವಾಗಿ, ಪಿತೃಗಳಿಗಾಗಿಯೂ, ಬ್ರಾಹ್ಮಣರು ಮತ್ತು ಅತಿಥಿಗಳಿಗೂ, ಸೈನಿಕರಿಗೂ, ಮಿತ್ರರಿಗೂ, ವಿನಿಯೋಗಿಸಲು ಸೂಚಿಸಲಾಗಿದೆ.

ಯಾವುದೇ ಒಬ್ಬ ವ್ಯಕ್ತಿ ಸಜ್ಜನನಾಗಿದ್ದು ಕಳ್ಳತನ ಮಾಡಿದರೆ ಧರ್ಮಶಾಸ್ತ್ರ ಪ್ರವೀಣರಿಂದ ವಿಚಾರಣೆ ಮಾಡಿಸಬೇಕಿತ್ತು. ಧನಲೋಭದಿಂದ ಅವನನ್ನು ಕೊಲ್ಲಿಸಬಾರದು. ಕಣ್ಣಿಗೆ ಬಿದ್ದ ಕಳ್ಳನನ್ನು ಹಿಡಿದು ವಿಚಾರಿಸಲು ಸುಲಭವಾಗಿ ಕೈ ಬಿಡಬಾರದು. ರಾಜ್ಯದ ಜನತೆಯಲ್ಲಿ ಅಸಮಾನತೆಗೆ ಇರುವ ಕಾರಣಗಳನ್ನು ಪತ್ತೆ ಹಚ್ಚಲು ಅಂದರೆ ಶ್ರೀಮಂತರು ಮತ್ತು ಬಡವರ ನಡುವಿನ ವಿವಾದ – ಅಂತರವನ್ನು ಶಾಸ್ತ್ರ ತಜ್ಞರಿಂದ ನಿಜಾಂಶ ತಿಳಿಯಲು ಪ್ರಯತ್ನಿಸಲಾಗಿದೆ.

ಸುಳ್ಳು ಅಥವಾ ಅಪರಾಧ ಮಾಡಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಕಣ್ಣಲ್ಲಿ ನೀರು ಬಂದರೆ ಅದು ಭೋಗಕ್ಕಾಗಿ, ಅವನ ಮಕ್ಕಳ ಬಗ್ಗೆ ರಾಜನ ನಿರ್ಧಾರ ಇರಬೇಕು. ರಾಜನಾದವನು ವೃದ್ಧರು, ಬಾಲಕರು ಮತ್ತು ಮುಖ್ಯ ವೈದ್ಯರನ್ನು ದಾನ – ಧರ್ಮಗಳೀಂದ ಒಳ್ಳೆಯ ನಡೆನುಡಿಯಿಂದಲೂ ಕಾಣಬೇಕು. ಗುರುಗಳು, ವೃದ್ಧರು, ತಪಸ್ವಿಗಳೂ, ದೇವತೆಗಳು, ಅತಿಥಿಗಳು ಮತ್ತು ಬ್ರಾಹ್ಮಣರನ್ನು ನಾಲ್ಕು ರಸ್ತೆಗಳು ಸೇರುವ ಸ್ಥಳದಲ್ಲಿ ಅಶ್ವತ್ಥ ವೃಕ್ಷ್ವನ್ನು ನೆಟ್ಟು ನಮಸ್ಕರಿಸಬೇಕು. ವೃತ್ತದ (circle) ಪರಿಕಲ್ಪನೆ ಮೊದಲು ಪ್ರಯೋಗಿಸಿದ್ದು ವಾಲ್ಮೀಕಿ. ರಾಜ ಧರ್ಮದಿಂದ ಅರ್ಥವನ್ನು ಅರ್ಥದಿಂದ ಧರ್ಮವನ್ನು ಸುಖ, ಆಸೆ ಮತ್ತು ಕಾಮದಿಂದ ನೋಡಬಾರದು. ಕಾಲಚಕ್ರದಲ್ಲಿ ರಾಜನಾದವನು ಧರ್ಮ, ಅರ್ಥ, ಕಾಮವನ್ನು ವಿಭಾಗಮಾಡಿ ಎಲ್ಲವನ್ನು ಆಯಾಕಾಲದಲ್ಲಿ ಪೂರೈಸಿಕೊಳ್ಳಬೇಕು. ಬ್ರಾಹ್ಮಣರು ಸಕಲ ಪಂಡಿತರಾಗಿದ್ದು, ಪಟ್ಟಣಿಗರು, ಗ್ರಾಮಾಂತರ ನಿವಾಸಿಗಳು ರಾಜನ (ನಿನ್ನ) ಕ್ಷೇಮ ವಿಚಾರಿಸಿ ಮಾತನಾಡುವುದನ್ನು ಗಮನಿಸಬೇಕು. ರಾಜನು ವಿವೇಚನೆಯಿಲ್ಲದೆ ಕೆಲಸ ಮಾಡಬಾರದು. ನಾಸ್ತಿಕತೆ, ಸುಳ್ಳು, ಕೋಪ, ಅಜಾಗರೂಕತೆ, ನಿಧಾನವಾಗಿ ಕೆಲಸಗಳನ್ನು ಮಾಡುವಿಕೆ, ಜ್ಞಾನಿಗಳನ್ನು ನೋಡದಿರುವುದು, ಅಲಸ್ಯ ಪಂಚಚೇಂದ್ರಿಯಗಳಿಗೆ ದಾಸನಾಗಿರುವುದು, ಆರ್ಥಿಕ ವಿಚಾರಗಳನ್ನು ತಾನೊಬ್ಬನೇ ಯೋಚನೆ ಮಾಡುವುದು. ಲೋಕವ್ಯವಹಾರ ಅಥವ ಆರ್ಥಿಕ ಜ್ಞಾನವಿಲ್ಲದವರೊಡನೆ ಸಮಾಲೋಚನೆ, ನಿಶ್ಚಯಿಸಿದ ಕೆಲಸ ಆರಂಭ ಮಾಡದಿರುವುದು, ಸಮಾಲೋಚನೆ ವಿಷಯ ಗೌಷ್ಯವಾಗಿಡಬೇಕು, ಮಂಗಳ ಕಾರ್ಯಗಳನ್ನು ಮಾಡದಿರುವಿಕೆ, ಎಲ್ಲರಿಗೂ ಎದ್ದು ಗೌರವಿಸುವುದು ಈ ಹದಿನಾಲ್ಕು ರಾಜದ್ರೋಹಗಳನ್ನು ರಾಜನಾದವ ಬಿಡಬೇಕು.

ರಾಜ ದಶವರ್ಗಗಳಾದ ಬೇಟೆ, ಪಗಡೆ, ಹಗಲು ನಿದ್ದೆ, ನಿಂದೆ, ಸ್ತ್ರೀ ಸಂಗ, ಸುರಾಪಾನ, ನೃತ್ಯ, ಗೀತ ವಾದ್ಯ, ವ್ಯರ್ಥವಾಗಿ ಅಲೆದಾಟವನ್ನು ಕೈ ಬಿಡಲು ತಿಳಿಸಲಾಗಿದೆ. ರಾಜ ಪಂಚವರ್ಗಗಳಾದ ಜಲ, ಪರ್ವತ, ಅರಣ್ಯ, ವೃಕ್ಷ, ಶಸ್ತ್ರ, ಈ ಐದು ವಿಧಗಳಾದ ದುರ್ಗಗಳನ್ನು ರಕ್ಷಿಸಬೇಕು. ರಕ್ತ ಸಂಬಂಧಿಗಳು, ಮಿತ್ರರನ್ನು, ಆಪತ್ತಿನಲ್ಲಿರುವವರನ್ನು ರಕ್ಷಿಸಬೇಕು. ರಾಜ, ಮಂತ್ರಿ, ರಾಷ್ಟ್ರ, ದುರ್ಗ, ಕೋಶ, ಸೈನ್ಯ, ಮಿತ್ರರ ಬಗ್ಗೆ ಆಸಕ್ತಿ ಇರಬೇಕು.

ಕೃಷಿ, ವಾಣಿಜ್ಯ, ದುರ್ಗ, ಸೇತುವೆ, ಆನೆಗಳ ಸಂಗ್ರಹ, ಗಣಿಗಳ ಕೆಲಸ, ಕಂದಾಯ(ಕಾಡು), ಶೂನ್ಯ, ಪ್ರದೇಶಗಳನ್ನು ವಾಸಯೋಗ್ಯವಾಗಿ ಮಾಡುವ ಜವಾಬ್ದಾರಿ ರಾಜನದು. ರಾಜ ಪ್ರಭುಶಕ್ತಿ, ಉತ್ಸಾಹ ಶಕ್ತಿ, ಮಂತ್ರಶಕ್ತಿ ಹೊಂದಿರಬೇಕು ರಾಜನಿಗೆ ವಿದ್ಯ ಬಹು ಮುಖ್ಯ. ವೇದ (ಆಧ್ಯಾತ್ಮ ವಿದ್ಯ) ಕೃಷಿ ಗೋರಕ್ಷ ವಾಣಿಜ್ಯ ದಂಡನೀತಿ ಅಥವಾ ಯುದ್ಧಶಾಸ್ತ್ರ ಅರಿತಿರಬೇಕು. ರಾಜನಿಗೆ ಆರು ಗುಣಗಳಿರಬೇಕು; ಸಂಧಿ, ಯುದ್ಧ, ದಂಡಯಾತ್ರೆ, ತಾಟಸ್ಥ್ಯಭವನೆ, ಭೇದೋಪಾಯ ಅಥವಾ ಸಮಯವರಿತು ಪಕ್ಷ – ಪ್ರತಿಪಕ್ಷಗಳನ್ನು ಬದಲಾಯಿಸುವುದು, ಇತರರ ಅಶ್ರಯ ಪಡೆಯುವುದು. ಆಗಾಗ ಒದಗುವ ಸ್ವಾಭಾವಿಕ ವಿಪತ್ತುಗಳಾದ ಅಗ್ನಿ, ಪ್ರವಾಹ ವ್ಯಾಧಿ, ಭೂಕಂಪ ಇತ್ಯದಿ ಮತ್ತು ಮನುಷ್ಯನಿಂದಾಗುವ ವಿಪತ್ತುಗಳು: ಅಧಿಕಾರಿಗಳು ದ್ರೋಹ, ಕಳ್ಳಕಾಕರು, ಶತೃಗಳೂ, ರಾಜಬಂಧುಗಳು, ರಾಜನ ಲೋಭಗಳಿಂಧಾಗುವ ಪರಿಣಾಮಗಳನ್ನು ರಾಜ ಎದುರಿಸಬೇಕು. ಪಿಹರ ಕಂಡುಹಿಡಿಯಬೇಕು. ರಾಜ ನಾದವನು ಪರರ ರಾಜ್ಯ, ಪರಸ್ತ್ರಿ ಸ್ಥಾನ ದೇಶಗಳನ್ನು ಅಪಹರಿಸಬಾರದು. ಬಂಧುಗಳ ಧನವನ್ನು ಅಪಹರಿಸುವಿಕೆ ಮಾಡಬಾರದ. ಅಹಂಕಾರ, ಅಭಿಮಾನ, ಹಿಂಶಾಕೃತ್ಯ, ವಿಷಯಲಾಲಸೆ, ಜ್ಞಾನ, ಅರ್ಥ, ಶಕ್ತಿ, ಧರ್ಮಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ದೈವ ಸಂಘಟನೆ, ಮಿತ್ರರನ್ನು ಅವಮಾನಿಸುವುದು, ಧನಪಹಾರ, ಬಂಧುನಾಶ, ಭೂತದಯೆ ಇಲ್ಲದಿರುವಿಕೆ ತನ್ನ ಅಧಿಕಾರಿ ವರ್ಗದವರನ್ನು ನಿಂದಿಸುವುದು. ಒಂದೇ ವಿಷಯವಾಗಿ ಹಟ ಹಿಡಿಯುವುದು ಮಾಡಬಾರದು.

ರಾಜ ಮೂರು ಅಥವಾ ನಾಲ್ಕು ಜನ ಮಂತ್ರಿಗಳೊಡನೆ ಪ್ರತ್ಯೇಕ, ರಹಸ್ಯ ಸಂಭಾಷಣೆ ಮಾಡಬೇಕು. ರಾಜನ ವೇದಾದ್ಯಯನ ಸಫಲವಾಗಿರಬೇಕು. ಕೆಲಸಗಳು ಒಳ್ಳೆಯ ಫಲ ಕೊಡಬೇಕು. ರಾಜನ ಸ್ತ್ರೀಯರು ತೃಪ್ತರಾಗಿರುವರೇ ಎಂಬುದನ್ನು ಅರಿಯಬೇಕು. ಶಾಸ್ತ್ರಜ್ಞಾನದಿಂದ ಸಫಲತೆ ಸಾಧ್ಯ ಶ್ರೀರಾಮನು ಭರತನಿಗೆ ಹೇಳುವ ರಾಜನೀತಿಯಲ್ಲಿ ರಾಜನ (ಭರತನ) ಬುದ್ಧಿಯು ಆಯುರ್ವರ್ಧಕ, ಕೀರ್ತಿ, ಧರ್ಮ ಕಾಮಾರ್ಥಗಳಿಂದ ಕೂಡಿರಬೇಕು, ಸನ್ಮಾರ್ಗ ಪ್ರವರ್ತಕ, ಮಂಗಳಕರವಾದ ನಡೆಯಲ್ಲಿ ತಂದೆ, ತಾತ, ಮುತ್ತಾತಂದಿರ ನಡತೆಯನ್ನು ಅನುಸರಿಸಬೇಕಿತ್ತು. ರುಚಿಕರ ವಾದ ಮೃಷ್ಠಾನ್ನ ರಾಜನೊಬ್ಬನೇ ಊಟ ಮಾಡಬಾರದು, ಇತರರಿಗೂ ಕೊಡಬೇಕು.

ವಾಲ್ಮೀಕಿ ಮಹರ್ಷಿ ರಾಜನೀತಿ ಹೇಳುವಾಗ ಅಂತಿಮವಾಗಿ ‘ಮಹಾಬುದ್ಧಿ ವಂತನೂ ವಿದ್ಯಾವಂತನೂ ಅದ ರಾಜನು ಉಚಿತ ದಂಡವನ್ನು ಧರಿಸಿ ಪ್ರಜೆಗಳನ್ನು ಧರ್ಮದಿಂದ ಪಾಲನೆಗೈದು ಸಮಸ್ತ ಭೂಮಂಡಲವನ್ನು ಪಡೆದವನಾಗಿ ಕಾಲಕ್ರಮದಲ್ಲಿ ಇಹಲೋಕವನ್ನು ಬಿಟ್ಟು ಸ್ವರ್ಗವನ್ನು ಸೇರುತ್ತಾನೆ’ ಎಂದು ತಿಳಿಸಿದ್ದಾನೆ.

ಡಾ. ಪದ್ವಾಕರ ವಿ. ವರ್ತಕ ಅವರು ಮರಾಠಿಯಲ್ಲಿ ರಚಿಸಿರುವ “ವಾಸ್ತವ ರಾಮಾಯಣ” ಕರತಿಯನ್ನು ಹೇಮಂತರಾಜ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪ್ರಸ್ತುತ ಕೃತಿಯಲ್ಲಿ ರಾಜನೀತಿ ಕುರಿತಂತೆ ಪ್ರಸ್ತಾಪಿಸಲಾಗಿದೆ. ‘ಕೆಲವೊಂದು ದಿವಸಗಳ ತರುವಾಯ ಕಿವಿ – ಮೂಗುಗಳನ್ನು ಕತ್ತರಿಸಿಕೊಂಡ ಶೂರ್ಪ ನಖಿಯು ರಾವಣನ ಕಡೆಗೆ ಬಂದಳು, ವಿಷಯಾಸಕ್ತಿ ಹಾಗೂ ಸ್ಥೈರ(ಸ್ವೈ) ಪ್ರವೃತ್ತಿಯಿಂದ, ತನ್ನ ಚಾರರಿಂದ (ಸೇವಕ) ಸುದ್ದಿ ಸಂಗ್ರಹಿಸುವಲ್ಲಿ ವಿಫಲನಾದ ರಾವಣನನ್ನು ನಿರ್ಭರ್ತ್ಸನೆ ಮಾಡಿದಳು. ರಾಮನು ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದರೂ ನಿಷ್ಕ್ರೀಯನಾಗಿ ಕುಳಿತ ರಾವಣನನ್ನು ಹೀಯಾಳಿಸಿದಳು. ತನ್ನ ದೇಶ ಗಡಿಯಲ್ಲಿ ಬಂದೊದಗಿದ ವಿಪತ್ತನ್ನು ನಿರ್ಲಕ್ಷ್ಯಿಸಿದ ರಾವಣನನ್ನು ಮೂರ್ಖನೆಂದು ಕರೆದಳು. ರಾವಣನು ಈ ಪ್ರಸಂಗದಲ್ಲಿ ತೋರಿದ ಮೂರ್ಖತನವನ್ನೇ ಭಾರತವು ವರ್ತಮಾನ ಕಾಲದಲ್ಲಿ ತೋರಿದ್ದುಂಟು. ಶೂರ್ಪನಖಿಯಂತಹ ರಾಕ್ಷಸ ಸ್ತ್ರೀಯಲ್ಲಿದ್ದಷ್ಟೂ ರಾಜನೀತಿಯ ಜ್ಞಾನವು ನಮ್ಮವರಿಗಿಲ್ಲ ಎನ್ನುವುದು ಇದರಿಂದ ಪ್ರಕಟವಾಗುವುದು. ಶೂರ್ಪನಖೆ ಮೊದಲು ರಾಷ್ಟ್ರ ಪ್ರೇಮ, ರಾಜನೀತಿ ಮಾತನ್ನಾಡಿದಳು. ಅನಂತರ ತನ್ನ ವೈಯಕ್ತಿಕ ದುರವಸ್ಥೆಯನ್ನು ಕುರಿತು ಹೇಳಿಕೊಂಡಳು. ಆಮೇಲೆ ‘ರಾಮನ ಪತ್ನಿಯಾದ ಸೀತೆಯು ಅತ್ಯಂತ ಸುಂದರಾಂಗಿಯಾಗಿದ್ದು, ಅವಳನ್ನು ನಿನಗೆ ಅರ್ಪಿಸುವುದಕ್ಕಾಗಿಯೇ ನಾನು ಕಾರ್ಯೂನ್ಮುಖಳಾದೆ. ಆಗ ಲಕ್ಷ್ಮಣನು ನನ್ನನ್ನು ಈ ರೀತಿ ವಿರೂಪಗೊಳಿಸಿದನು. ಸೀತೆಯನ್ನು ಎತ್ತಿಕೊಂಡು ಬರುವ ವ್ಯವಸ್ಥೆಯನ್ನು ಮಾಡು’ ಎಂದು ಶೂರ್ಪನಖೆಯು ರಾವಣನಿಗೆ ಹೇಳಿದಳು. ಶೂರ್ಪನಖೆಯ ಮಾತುಗಳನ್ನಾಲಿಸಿದ ರಾವಣನಿಗೆ ಮನಸ್ಸು ಚಂಚಲವಾಯಿತು. ಕೂಡಲೇ ದಾಳಿ ಮಾಡಲುದ್ಯುಕ್ತವಾಗಿ ಹೊರಟು ನಿಂತನು. ಲಂಕೆಯನ್ನು ಬಿಟ್ಟು ಸಮುದ್ರ ಮಾರ್ಗವಾಗಿ ದಕ್ಷಿಣ ಭಾರತದ ದಂಡೆಯನ್ನು ತಲುಪಿದನು. ಅಲ್ಲಿಯೇ ಸಮೀಪದಲ್ಲಿದ್ದ ಮಾರೀಚನನ್ನು ಮತ್ತೆ ಕಾಣಲು ಹೋದನು. “ಮತ್ತೇಕೆ ಬಂದಿರುವು?” ಎಂಧು ಮಾರೀಚನು ಕೇಳಿದನು. ರಾವಣನು ಸುವಿಸ್ತಾರವಾಗಿ ಎಲ್ಲ ವಿಷಯಗಳನ್ನು ತಿಳಿಸಿ, ಮಾರೀಚನಿಗೆ ಸುವರ್ಣ ಮೃಗದ ರೂಪ ಧರಿಸಿ, ಸೀತೆಯ ಮುಂದೆ ಸುಳಿದಾಡಲು ಸೂಚಿಸಿದನು. ಸ್ವರ್ಣಮೃಗಕ್ಕೆ ಮರುಳಾಗಿ ಸೀತೆಯು ರಾಮ – ಲಕ್ಷ್ಮಣರನ್ನು ಅದನ್ನು ಹಿಡಿಯುವುದಕ್ಕಾಗಿ ಕಳಿಸುವಳೆಂಬುದು ರಾವಣನ ತರ್ಕವಾಗಿದ್ದಿತು. ಹೀಗೆ ಬಂದ ಅವರನ್ನು ತಪ್ಪಿಸುತ್ತ ದೂರ ಕೊಂಡೊಯ್ದರೆ ತಾನು ಸೀತೆಯನ್ನು ಅಪಹರಿಸಲು ಸಾಧ್ಯ ಎಂಧು ರಾವಣನು ತನ್ನ ಮನದಿಂಗಿತವನ್ನು ತಿಳಿಸಿದನು. ಪತ್ನಿಯ ಶೋಕದಲ್ಲಿ ರಾಮನು ಕೊರಗಿದಾಗ, ಅವನನ್ನು ಗುಪ್ತ ರೀತಿಯಲ್ಲಿ ತಾನು ಸಂಹರಿಸುವುದಾಗಿಯೂ ತಿಳಿಸಿದನು (ದೇ ಪು. ೭೬). ರಾವಣನು ಒಂದು ಕಲ್ಲಿನಿಂದ ಎರಡು ಪಕ್ಷಿಗಳನ್ನು ಹೊಡೆಯುವ ಉಪಾಯವನ್ನು ಯೋಜಿಸಿದ್ದನು. ಸೀತೆಯ ಉಪಯೋಗ ಹಾಗೂ ದೇಶದ ರಕ್ಷಣೆ, ರಾಮನ ನಾಶವೆಂದರೆ, ರಾಕ್ಷಸ ರಾಜ್ಯದ ರಕ್ಷಣೆ. ಇದೇ ಅವನ ಯೋಜನೆಯಾಗಿದ್ದಿತು. ಆದರೆ ರಾವಣನ ಈ ಕುಟಿಲ ಕಾರಸ್ಥಾನವನ್ನು ಮಾರೀಚನು ಒಪ್ಪಲಿಲ್ಲ. ಸ್ವಾನುಭವದಿಂದ ರಾಮನ ಸಾಮರ್ಥ್ಯವನ್ನರಿತ ಮಾರೀಚನು ವಿಧವಿಧವಾಗಿ ತಿಳಿಹೇಳೀದನು (ಅದೇ, ಪು, ೭೯). ಹೀಗೆ ಎರಡು – ಮೂರು ಕಡೆ ರಾಜನೀತಿಯ ಪ್ರಸ್ತಾಪ ರಾಮಾಯಣದಲ್ಲಿ ಉಲ್ಲೇಖಿತಗೊಂಡಿದೆ.

ಅಸಮಾನತೆಯನ್ನು ಹೊಗಲಾಡಿಸುವುದು ವಾಲ್ಮೀಕಿಯ ಉದ್ಧೇಶವಾಗಿದೆ. ರಾಮ ರಾಜ್ಯದಲ್ಲಿ ಎಲ್ಲರೂ ಸಮಾನರಾಗಿದ್ದರೆಂಬುದಕ್ಕೆ ಹೆಚ್ಚಿನ ಆದಾರಗಳಿಲ್ಲ ರಾಜನಾದವನು ಇನ್ನೊಬ್ಬ ರಾಜನಿಗೆ ಪರಸ್ಪರ ಸಹಾಯ, ಸಹಕಾರ ಮಾಡುವುದುಂಟು. ನಿಷಾದ ದೊರೆ ಗುಹಾನು ಶ್ರೀರಾಮ, ಲಕ್ಷ್ಮಣ, ಸೀತೆಯನ್ನು ಗಂಗಾನದಿ ದಾಟಿಸುತ್ತಾನೆ. ಹೆಂಡತಿಯನ್ನು ಕಳೆದುಕೋಂಡ ಸಂದರ್ಭದಲ್ಲಿ ವಾಲಿ, ಸುಗ್ರೀವರ ಭೇಟಿ, ತನ್ನ ಆತ್ಮೀಯ ಬಂಟ ಆಂಜನೇಯನು ಬಹುಮುಖ್ಯಪಾತ್ರ ವಹಿಸುತ್ತಾನೆ. ಸಮಾನತೆ ಬಯಸುವ ವಾಲ್ಮೀಕಿ ಕುಟುಂಬದಲ್ಲಿ ಏಕಪತ್ನಿತ್ವಕ್ಕೆ ಆದ್ಯತೆಕೊಟ್ಟು, ಬಹುಪತ್ನಿತ್ವದ ಮೂಲಕ ಆಗಬಹುದಾದ ಅನಾಹುತಗಳನ್ನು ಚಿಂತಿಸಿದ್ದಾನೆ. ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ವಿವಿಧ ಪ್ರದೇಶ, ಭಾಷೆ, ಸಂಸ್ಕೃತಿ ಮತ್ತು ಜನಾಂಗಕ್ಕೆ ಸೇರಿದವರನ್ನು ನೋಡಬಹುದು.

ರಾಜಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸ್ವೇಚ್ಚೆಯಿಂದ ಬದುಕುವ ಹಕ್ಕು ಇತ್ತು. ಅಧಿಕಾರಿ – ಪ್ರಭುತ್ವದೊಡನೆ ಸಾಮರಸ್ಯ ಬೆಳೆದಿತ್ತು. ಪ್ರತಿಯೊಂದು ಜಾತಿ – ವರ್ಗಗಳು, ತಳಸಮುದಾಯಗಳೇ ಇಲ್ಲಿ ಕಥಾವಸ್ತು. ಸೀತೆ, ಶೂರ್ಪನಖಿ, ಮಂಡೋದರಿ, ಶಬರಿ, ಕೌಸಲ್ಯೆ, ಕೈಕೇಯಿ, ಸುಮಿತ್ರ, ಊರ್ಮಿಳೆ, ಮಾಂಡವಿ ಮೊದಲಾದ ಸ್ತ್ರೀಯರ ಮೂಕ ಆಕಾಲದ ಸಮಾನತೆ ಬಗ್ಗೆ ತಿಳಿಸಿದ್ದಾನೆ. ರಾಜ, ಮಂತ್ರಿ ಅಧಿಕಾರಿಗಳೂ ಸಮಾಜದೊಂದಿಗೆ ಸಾಮರಸ್ಯ ಹೊಂದಿದ್ದರು. ಆರ್ಯ – ದ್ರಾವಿಡ, ಬಿಳಿಯ – ಕರಿಯರ ತಾರತಮ್ಯತೆ ಎದ್ದು ಕಾಣುತ್ತದೆ. ವಿಭಕ್ತ – ಅವಿಭಕ್ತ ಕುಟುಂಬ, ವಂಶಾಡಳಿತ, ನಿರಂಕುಶ ಪ್ರಭುತಗ್ವದಲ್ಲಿ ಶೋಷಣೆಯನ್ನು ಗುರುತಿಸಲಾಗಿದೆ. ಶ್ರೀರಾಮ ಆದರ್ಶ ವ್ಯಕ್ತಿ. ಆತನಂತೆ ಸಮಾಜದ ವ್ಯಕ್ತಿಗಳು ಇರಲು ವಾಲ್ಮೀಕಿ ಬಯಸುತ್ತಾನೆ. ಪಾತಿವ್ರತ್ಯವು ಸಮಾನತೆ ಅಸಮನತೆಗೆ ಮಾನದಂಡವೇ? ಸರ್ವೋದಯ, ಗ್ರಾಮೋದಯವೇ ರಾಮರಾಜ್ಯದ ಮುಖ್ಯಗುರಿ. ಇಲ್ಲಿ ಅಧಿಕಾರಶಾಹಿ, ಕೌಟುಂಬಿಕ ಜೀವನ, ಆದರ್ಶ ಸಮಾಜ, ಏಕಮಯವಾಗಿ ನೋಡುವ ಪ್ರಯತ್ನವಿದೆ. ನೊಂದವರು ಒಂದಾಗುತ್ತಾರೆ. ಕಳಕೊಂಡವರು ಪಡೆಯುತ್ತಾರೆ. ಕಷ್ಟ – ನಷ್ಟಗಳಿಂದ ಉನ್ನತಿ ಗೊಳ್ಳುತ್ತಾರೆ. ಹೀಗೆ ವಾಲ್ಮೀಕಿ ಸಮಾನತೆ ಹಾಗೂ ರಾಜನಿತಿಯನ್ನು ಪ್ರಚಲಿತಕ್ಕೆ ಹೋಲುವಂತೆ ವಿಶ್ಲೇಷಿಸಿದ್ದಾನೆ.

ಸಮಾನತೆ

ಇಪ್ಪತ್ತೊಂದನೆಯ ಶತಮಾನದಲ್ಲಿ ನಾವು “ಸರ್ವರಿಗೆ ಸಮಪಾಲು, ಸರ್ವರಿಗೆ ಸಮಭಾಲು” ಎಂದು ಮಾತನಾಡುತ್ತೇವೆ. ಅದರೆ ಸಾವಿರಾರು ವರ್ಷಗಳ ಹಿಂದೆ ವಾಲ್ಮಿಕಿ ಮಹರ್ಷಿಗಳು ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ್ದಾರೆ. ಬಹುಭಾಷೆ. ಧರ್ಮ, ಜಾತಿಗಳಿರುವ ಭಾರತದಲ್ಲಿ ಸಮಾನತೆ ತರುವುದು ತುಂಬಾ ಕಷ್ಟ.

ವಾಲ್ಮೀಕಿ ಒಬ್ಬ ತತ್ವಜ್ಞಾನಿಯಾಗಿ ಸಮಾನತೆ ಬಗ್ಗೆ ಚಿಂತಿಸಿದ್ದಾನೆ. ಹಿಂಸೆ, ಕ್ರೌರ್ಯ ಬಗ್ಗೆ ತೆಗಳಿದ್ದಾನೆ. ಗಂಡ ಹೆಂಡತಿ ಹೇಗಿರಬೇಕೆಂದು ಶ್ರೀರಾಮ – ಸೀತೆಯನ್ನು ಉದಾಹರಿಸುತ್ತಾನೆ. ಈತ ‘ಕುಟುಂಬದಲ್ಲಿ ಸಮಾನತೆ ಇರಲು ಏಕಪತ್ನಿ ವೃತಸ್ಥನಗಿರಬೆಕು. ಇದನ್ನು ಮೀರಿದರೆ ಜೀವನ ಅಸ್ತವ್ಯಸ್ತವಾಗುತ್ತದೆ. ಸಾತ್ವಿಕ ಗುಣಗಳ ಮೂಲಕ ನ್ಯಾಯ ಪರವಾಗಿ ನಡೆಯಲು ತಿಳಿಸಿದ್ದಾನೆ. ಅನ್ಯಾಯದ ವಿರುದ್ಧ, ಅಸಮಾನತೆ ವಿರುದ್ಧ ಪ್ರತಿಭಟನೆ ಮಾಡುವಲ್ಲಿ ತಪ್ಪಿಲ್ಲ ಎಂದಿದ್ದಾನೆ ವಾಲ್ಮೀಕಿ. ರಾವಣ, ವಾಲಿ, ಸುಗ್ರೀವ, ಆಂಜನೇಯನ ಕಥಾ ಪ್ರಸಂಗಗಳಲ್ಲಿ ಸಮಾನತೆ, ಅಸಮಾನತೆ, ಸಂಘರ್ಷ, ದುಃಖ, ಯುದ್ಧ, ಕ್ರಾಂತಿಗಳಾಗುವುದನ್ನು ಚಿತ್ರಿಸಲಾಗಿದೆ.

ಸಮಾಜದಲ್ಲಿ ಸಮಾನತೆ ಬಗ್ಗೆ ತಿಳಿಸುವಾಗ ಸ್ತ್ರೀ – ಪುರುಷರು. ರಾಜಪ್ರಜೆಗಳು, ವರ್ಣ,  ಜಾತಿ, ಕುಟುಂಬ ವ್ಯವಸ್ಥೆಯನ್ನು ವಿಶ್ಲೇಷಿಸಲಾಗಿದೆ. ವಿಭಕ್ತ – ಅವಿಭಕ್ತ ಕುಟುಂಬ, ವಂಶಾಡಳಿತ, ನಿರಂಕುಶ – ಪ್ರಜಾಪ್ರಭುತ್ವದ ಬಗ್ಗೆ ಹೇಳುವಾಗ “ದುಷ್ಟ ಶಿಕ್ಷಣಶಿಷ್ಟ ರಕ್ಷಣೆ’ ಬಗ್ಗೆ, ಜಾತಿ – ವರ್ಗ ಮೀರಿ ಶೋಷಿತರು, ನೊಂದವರು ಹೇಗಿದ್ದರೆಂದು ವಾಲ್ಮೀಕಿ ತಿಳಿಸಿದ್ದಾನೆ. ಬೇಟೆಗಾರರು, ಮೀನುಗಾರರು, ಅಂಬಿಗರು, ಲಂಭಾಣಿಗರು ಇತರ ಸಮುದಾಯಗಳ ಬಗ್ಗೆ ವಿವರಿಸಿದ್ದಾನೆ. ಇಲ್ಲಿ ಪತ್ನಿಯನ್ನು ಕಳೆದುಕೊಂಡವರು ಒಂದಾಗುವುದು, ಹೋರಾಟುವುದು ಗಮನಾರ್ಹವಾಗಿ ಚಿತ್ರಿತವಾಗಿದೆ. ದಾಯಾದಿ ಮತ್ಸರ ಸಂಘರ್ಷಗಳನ್ನು, ವಿರೋಧಿಗಳ ಉಪಟಳ, ಶತೃಗಳ ಶಮನ, ಒಂದಾಗುವಿಕೆಯನ್ನು ಎಳೆಎಳೆಯಾಗಿ ವಿಶ್ಲೇಷಿಸಿದ್ದಾನೆ. ಸಮಾನತೆ ಸಂದೇಶದಲ್ಲಿ ವಾಲ್ಮೀಕಿ ರಾಜ ಮತ್ತು ಪ್ರಜೆಗಳ ನಡುವೆ ಅವಿನಾಭಾವ ಸಂಬಂಧಕ್ಕೆ ನಾಂದಿ ಹಾಡಿದ್ದಾನೆ. ಸುರಂಗ ಕೊರೆಯುವವರು, ಗಣಿ ತೋಡುವವರು, ರಸ್ತೆ, ಹಾಗೂ ಸೇತುವೆ ನಿರ್ಮಾಕಾರರು, ಶಿಲ್ಪಿ, ತಂತ್ರಜ್ಞರು, ಮೆಸ್ತ್ರಿ, ಬಡಗಿಗಳ ಕುರಿತು ವಾಲ್ಮೀಕಿ ಚಿಂತಿಸಿದ್ಧಾನೆ. ಪರಂಪರೆ ಮತ್ತು ಅನುವಂಶಿಕ ವೃತ್ತಿಗಳೂ ಆ ಕಾಲಕ್ಕಾಗಲೇ ಇದ್ದವು. ಅನೇಕ ಸಮುದಾಯಗಳ ಸಂಘಟನೆ, ಹೋರಾಟ, ವೈರಾಗ್ಯ, ವನವಾಸ ಹೀಗೆ ಸಮಕಾಲೀನ ಜಗತ್ತನ್ನು ವಾಲ್ಮೀಕಿ ಚರ್ಚಿಸಿದ್ದಾನೆ.

ಅಸ್ತಿರತೆ

ರಾಜ್ಯ ವ್ಯವಸ್ಥೆಯನ್ನು ಕುರಿತು ವಾಲ್ಮೀಕಿ ಹೇಳುವಾಗ ದಾಯಾದಿಗಳ ಮತ್ಸರ. ಹಗೆತನ, ಅಂತಃಕಲಹ, ಅಧಿಕಾರ ಲಾಲಸೆ, ಕಪಟನತನ, ವಂಶಾಡಳಿತ, ಸ್ವಾರ್ಥ, ದುರಾಸೆಗಳ ಕಾರಣವಾಗಿ ಅಸ್ತಿರತೆ ಉಂಟಾಗಲಿದೆ. ಒಂದು ಕುಟುಂಬದಲ್ಲಿ ಅಣ್ಣ ತಮ್ಮಂದಿರು ನೆಮ್ಮದಿಯಿಂದ ಇರಲು ಯಜಮಾನ, ಹಿರಿಯರ ಮಹಿಳೆಯರ ಒಂದಾಣಿಕೆ ಅನಿವಾರ್ಯ. ಹೆಣ್ಣು, ಹೊನ್ನು, ಮಣ್ಣು ನೆಪವಾಗಿ ನಡೆದ ಕದನ, ಯುದ್ಧಗಳಂತೆ ರಾಜ್ಯಾಳ್ವಿಕೆಯಲ್ಲಿ ಅಸಮರ್ಥರು, ವಿರೋಧಿಗಳೂ, ಹಿತಶತೃಗಳು, ಅಲ್ಲಲ್ಲಿ ಸಂಘರ್ಷ, ಗಲಾಟೆ, ಕದನಗಳಿಗೆ ಆಸ್ಪದ ನೀಡಾಲಾಗಿದೆ. ಆಗಿನ ಕಾಲಕ್ಕೆ ಬಹುಭಾಷೆ, ಜಾತಿ, ಧರ್ಮಗಳ ಜನರಿರುವಾಗ ವಾಲ್ಮೀಕಿ ಅದನ್ನು ಹೇಗೆ ಗ್ರಹಿಸಿ ಚಿತ್ರಿಸಿರಬೇಕೆಂಬುದನ್ನು ಮಮವ ಮಾಡಿಕೊಳ್ಳಬೇಕು. ಒಬ್ಬ ಸಾಮಾನ್ಯ ಅಗಸನ ಮಾತಿನಿಂದ ಶ್ರೀರಾಮನು ಸೀತೆಯನ್ನು ತ್ಯಾಗ ಮಾಡುವುದೇ ಅಸ್ತಿರತೆಗೆ ಉದಾಹರಣೆ. ಕೊಂಡಿಯಂತಿರುವ ಆಡಳಿತಾಂಗ ಕುಸದುಬಿದ್ದಾಗ, ಕದಾಯಹ, ಮತ್ಸರ, ದುರಾಸೆ, ಕಪಟ, ಮೋಹದಿಂದ ಅಸ್ತಿರತೆ ಆಗುವುದು. ರಾಜ್ಯಭಾರ ಕ್ರಮದ ದೋಷ, ಯುದ್ಧ, ಅನೀತಿ, ಅಧರ್ಮಗಳು ಅಸ್ತಿರತೆಗೆ ಕಾರಣವಾಗತ್ತವೆ.

ಕುಟುಂಬ ಕಲ್ಪನೆ

ವಾಲ್ಮೀಕಿ ಆದಿಕವಿ, ಮಹಾಋಷಿಯಾಗಿ ಜೀವನದ ದಟ್ಟ ಅನುಭವವನ್ನು ಹೊಂದಿದ್ದಾನೆ. ಹಾಗಾಗಿ ಪುರಷ – ಹೆಣ್ಣನ್ನು ಮದವೆಯಾದಾಗ ಸಹಜವಾಗಿ ಸಂಸಾರ ಹೂಡಲು ಮನೆಬೇಕು, ಅದಕ್ಕೆ ಕುಟುಂಬದ ಕಲ್ಪನೆಯನ್ನು ಕೊಡಲಾಗಿದೆ. ವಿಭಕ್ತ ಮತ್ತು ಅವಿಭಕ್ತ ಕುಟುಂಬ ಪದ್ಧತಿಗಳೂ ನಮ್ಮಲ್ಲುಂಟು, ರಾಮಯಾಣ ಕಾಲದಲ್ಲಿ ಬಹುತೇಕ ಅವಿಭಕ್ತ – ಕೂಡು ಕುಟುಂಬಗಳಿದ್ದವು.ಹಾಗೆಯೇ ಬುಡಕಟ್ಟು ಜನರು ಹೆಚ್ಚಾಗಿ ಕಾಡಿನಲ್ಲಿಯೇ ವಾಸಮಾಡುತ್ತಿದ್ದರು. ಉದಾ: ಆಂಜನೇಯ ಮುಂಡಾ, ವಾಲಿಸುಗ್ರೀವ ಮೊದಲಾದವರು ಬೇರೆ ಭೇರೆ ಬುಡಕಟ್ಟು ಗಳಿಗೆ ಸೇರಿದವರಾಗಿರುತ್ತಾರೆ. ಕುಟುಂಬದಲ್ಲಿ ಏಳು ಬೀಳುಗಳ ಮೂಲಕ ಸಂಬಂಧದ ಚಹರೆ ಎದ್ದು ಕಾಣುತ್ತದೆ. ವಿರೋಧಿಗಳೂ ಒಂದಾಗುವುದು, ಇಲ್ಲವೆ ಯುದ್ಧ ಮಾಡುವುದು, ಇಲ್ಲಿ ಕಂಡು ಬರುವ ಸಾಮಾನ್ಯ ಚಿತ್ರಣವಾಗಿದೆ. ಕುಟುಂಬದ ಯಜಮಾನ ಪುರುಷನೇ ಇರುತ್ತಾನೆ. ಆರ್ಯ ಸಂಸ್ಕೃತಿಯೇ ಪ್ರಭಾವವಿದ್ದು ವಾಲ್ಮೀಕಿ ಬೌದ್ಧಧರ್ಮದ ಹಿನ್ನೆಲೆಯಲ್ಲಿ ಕುಟುಂಬ ಪದ್ಧತಿಗಳನ್ನು ವಿಶ್ಲೇಷಿಸಿದ್ದಾನೆ.

ಲೋಕಾನುಭವಿ

ಮಹರ್ಷಿ ವಾಲ್ಮೀಕಿಯ ರಾಮಾಯಣದಲ್ಲಿ ಕಲೆ, ಪ್ರಕೃತಿ, ಪ್ರಾಣಿ, ಪಕ್ಷಿ, ಪರಿಸರ ಕುರಿತ ವರ್ಣನೆಯ ವಿವರಗಳಿವೆ. ರಾಮಾಯಣದಲ್ಲಿ ವಾಲ್ಮೀಕಿಯ ವರ್ಣನೆಯ ಕೌಶಲ್ಯವನ್ನು ಭಾರತೀಯರು ಒಪ್ಪಲೇಬೇಕು. ಮಾನವ ನಿರ್ಮಿತ ಸಮಾಜದಲ್ಲಿ ಎಲ್ಲ ಸಂಗತಿಗಳನ್ನು ಮನಮುಟ್ಟುವಂತೆ ತಿಳಿಸಿರುವುದು ಗಮನಾರ್ಹ. ಪ್ರಭುತ್ವವನ್ನು ವರ್ಣಿಸುವಾಗ ಅರಮನೆ, ಗಿರಿ, ನಗರ, ಉಪ್ಪರಿಗೆ, ಅಂಗಡಿಬೀದಿ, ಶಿಖರ, ವೃಕ್ಷ ಪ್ರಕೃತಿ ಪ್ರೇಮ ಮತ್ತು ಚಿತ್ರಕಲೆಯನ್ನು ವರ್ಣಿಸಿರುವುದು ಮನನೀಯವಾಗಿದೆ ವಾಲ್ಮೀಕಿ ತನ್ನ ರಾಮಾಯಣದ ಕಿಷ್ಕಿಂಧಾಖಾಂಡದಲ್ಲಿ ಕನ್ನಡಿಗರು, ದ್ರಾವಿಡರ ಗುಣಲಕ್ಷಣಗಳಲ್ಲಿದೆ, ಪ್ರಾಕೃತಿಕ ಲಕ್ಷಣಗಳನ್ನು ವಿವರಿಸಿದ್ದಾರೆ. ಹೂವು, ದುಂಬಿ, ಮರ, ಬೆಟ್ಟ, ಎಳ ಹಸುರು, ಗರಿಕೆ, ಬಳ್ಳಿ ತಬ್ಬಿದ ಮರಗಳು, ಹೂವು – ರೆಂಬೆ, ತಂಗಾಳಿ, ವಸಂತ ಋತು, ಕೋಗಿಲೆ, ಮತ್ತುಗದ ಮರದ ಬಗ್ಗೆ ತನ್ನ ದೃಷ್ಟಿಕೋನವನ್ನು ಬೀರಿದ್ಧಾನೆ.

ವಿಶೇಷವಾಗಿ ಸೂರ್ಯ, ಚಂದ್ರ ಭೂಮಿ, ಆಕಾಶಗಳ ಪರಿಕಲ್ಪನೆ ಅಂದು  ಹೇಗಿತ್ತೋ ತಿಳಿಯದು. ಆದರೆ ಜನರ ನಂಬಿಕೆಗಳನ್ನು ದಾಖಲಿಸಿರುವುದು ಸ್ಪಷ್ಟ ಬೆಳದಿಂಗಳು, ಬಿಸಿಲು, ಚಳಿಗಾಲ, ನದಿನೀರು, ಹಾವು, ಸರ್ಪದ ಹೆಡೆ, ಗಾಳಿ, ಮೋಡ, ಅಲೆ, ಕಂಬಗಳ ಬಗ್ಗೆ ಹೇಳುವಾಗ ಸೀತೆಯನ್ನು ವರ್ಣಿಸಲಾಗಿದೆ. ರಾಜನೀತಿಯನ್ನು ಹೇಳುವಾಗ ವಾಲ್ಮೀಕಿ ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಬಿಂಬಿಸುವಂಥ ಸಂಗತಿಗಳನ್ನು ತಿಳಿಸುತ್ತಾನೆ. ಬಹುತೇಕ ತನ್ನ ವಿಚಾರಗಳು ಹಿಂದೂ ಧರ್ಮ, ಆಚಾರ – ವಿಚಾರಗಳಿಗೆ ಒಳಪಟ್ಟಂತಿವೆ. ಇನ್ನು ಕೆಲವು ಕಡೆ ಬೌದ್ಧ ಧರ್ಮದ ಪ್ರಭಾವಕ್ಕೆ ವಾಲ್ಮೀಕಿ ಒಳಗಾಗಿರುವಂತಿದೆ. ರಾಮನ ವನವಾಸ, ಸೀತಾ ಪರಿತ್ಯಾಗ, ಪಿತ್ರೃವಾಕ್ಯದ ಪರಿಪಾಲನೆ ಅನೇಕ ಸಂಗತಿಗಳು ಬೇರೆ ಧರ್ಮ, ರಾಜಧರ್ಮ ಹಾಗೂ ನೀತಿಯಿಂದ ರೂಪಿತಗೊಂಡಿವೆ.