Categories
ಕೃಷಿ ವೈದ್ಯಕೀಯ ಕೃಷಿ

ಸ್ಟಿವಿಯಾ

ಅರಿಕೆ

ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ಬೆಳೆಯುವ ವಿವಿಧ ರೀತಿಯ ಸಾಂಪ್ರದಾಯಿಕ ಬೆಳೆಗಳ ಧಾರಣೆಯು ಕುಸಿಯಲಾರಂಭಿಸಿ ರೈತರು ಕಂಗೆಡುವಂತಾಗಿದೆ. ಇದರಿಂದಾಗಿ ಇಲ್ಲಿಂದು ವಿವಿಧ ಬಗೆಯ ಹೊಸ ಬೆಳೆಗಳ ಪರಿಚಯವಾಗುತ್ತಿದೆ. ಇವುಗಳ ಪೈಕಿ ಸ್ಟಿವಿಯಾವು ಒಂದು. ಆದರೆ ಈ ಬೆಳೆಯ ಬಗ್ಗೆ ನಮ್ಮ ರೈತರಿಗೆ ಸರಿಯಾದ ಮಾಹಿತಿಯಿನ್ನೂ ದೊರಕಿಲ್ಲ. ಅಲ್ಲಲ್ಲಿ ಇದರ ಬಗ್ಗೆ ಚರ್ಚೆಗಳಾಗುತ್ತಿವೆ. ಕೆಲವೊಂದು ರೈತರು ಸ್ಟಿವಿಯಾದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಕೆಲವರು ಮಾಹಿತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.ಈ ದೃಷ್ಟಿಯಿಂದ ಸ್ಟಿವಿಯಾದ ಬಗ್ಗೆ ಪ್ರಕೃತ ಲಭ್ಯವಿರುವ ಮಾಹಿತಿಗಳನ್ನೆಲ್ಲಾ ಕಲೆ ಹಾಕಿ ಇಲ್ಲಿ ಕೊಡುತ್ತಿದ್ದೇನೆ. ಈ ಪುಸ್ತಕವು ನಮ್ಮ ರೈತರಿಗೆ ಉಪಯುಕ್ತ ವಾಗಬಹುದೆಂಬ ನಂಬಿಕೆ ನನ್ನದು. ಈ ಪುಸ್ತಕದ ರಚನೆಗಾಗಿ ಮಾಹಿತಿಗಳನ್ನು ಗ್ರೋಮೋರ್ ಬಯೋಟೆಕ್‌, ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮತ್ತು ವೆಬ್‌ಸೈಟ್‌ಗಳಿಂದ ಸಂಗ್ರಹಿಸಲಾಗಿದೆ. ಈ ಎಲ್ಲಾ ಮಾಧ್ಯಮಗಳಿಗೆ ನಾನು ಋಣಿಯಾಗಿದ್ದೇನ. ಈ ಪುಸ್ತಕವು ಕೇವಲ ಮಾಹಿತಿಯನ್ನೊದಗಿಸುವ ದೃಷ್ಟಿಯಿಂದ ರಚನೆಯಾಗಿದ್ದು, ಇದರ ಪ್ರಯೋಜನವನ್ನು ನಮ್ಮೆಲ್ಲಾ ಕೃಷಿಕರು ಪಡೆಯುವರೆಂಬ ಭಾವನೆ ನನ್ನದು.

ನನ್ನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಿರುವ ವಿವೇಕಾನಂದ ಕಾಲೇಜು ಪುತ್ತೂರು ಇದರ ಆಡಳಿತ ಮಂಡಳಿ, ಪ್ರಾಂಶುಪಾಲರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಕೆ. ಬಾಲಕೃಷ್ಣ, ಸ್ನೇಹಿತ ಡಾ.ಪಿ. ಡಬ್ಲ್ಯೂ ಪ್ರಭಾಕರ್ ಇವರುಗಳಿಗೆ ನಾನು ಋಣಿಯಾಗಿದ್ದೇನೆ.

ಮುದ್ರಣಕ್ಕೆ ಸಹಾಯ ಮಾಡಿದ ಶ್ರೀ ಲಕ್ಷ್ಮೀ ಕಾಂತ್‌ ಶೆಣೈ, ವಿಟ್ಲ ಮತ್ತು ಅಂದವಾಗಿ ಮುದ್ರಿಸಿಕೊಟ್ಟ ಶ್ರೀನಿಧಿ ಆ‌ಫ್‌ಸೆಟ್‌ ಪ್ರಿಂಟರ್ಸ್ ಅಲ್ಲದೆ ಸ್ಟಿವಿಯಾ ಕೃಷಿಯ ಬಗ್ಗೆ ವಿಶೇಷ ಮಾಹಿತಿ ಒದಗಿಸಿದ ಶ್ರೀ ಗೋವಿಂದ ರಾಜ್‌ರವರಿಗೆ ನಾನು ಕೃತಜ್ಞನಾಗಿದ್ದೇನೆ.

ನನ್ನ ಬರಹಗಳಿಗೆ ನಿಜ ಸ್ಫೂರ್ತಿ ತುಂಬುವ ನನ್ನ ಕುಟುಂಬದ ಸದಸ್ಯರುಗಳನ್ನೆಲ್ಲಾ ಇಲ್ಲಿ ನೆನೆಸುತ್ತಿದ್ದೇನೆ.

ಡಾವಿಘ್ನೇಶ್ವರ ವರ್ಮುಡಿ
ವರ್ಮುಡಿ ಗುಂಪೆ
೦೫-೦೭-೨೦೦೩.

ಸ್ಟಿವಿಯಾದ ಇತಿಹಾಸ

ದಕ್ಷಿಣ ಅಮೇರಿಕಾದ ಪೆರುಗ್ವೆಗೆ ವಲಸೆ ಹೋಗಿ ನೆಲೆಸಿದ್ದ ಭಾರತೀಯ ಮೂಲದ ಗೌರಾನಿ ನಿವಾಸಿಗಳು ಹಲವು ಶತಮಾನಗಳ ಹಿಂದೆ ಸ್ಟಿವಿಯಾವನ್ನು ಗುರುತಿಸಿದ್ದರು. ಅವರು ಇದನ್ನು ಕಾ – ಹೆ – ಹಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಕಾ-ಹೆ-ಹಿ ಎಂದರೆ ಸಿಹಿ ಮೂಲಿಕೆ ಎಂದಾಗುತ್ತದೆ. ಈ ಜನರು ಸ್ಟಿವಿಯಾದ ಎಲೆಗಳನ್ನು ಅವರು ಸೇವಿಸುತ್ತಿದ್ದ ಮೇಟ್‌ ಎಂಬ ಪಾನೀಯದಲ್ಲಿ ಬಳಸಿಕೊಳ್ಳುತ್ತಿದ್ದರು. ಇದರೊಂದಿಗೆ ಸ್ಟಿವಿಯಾದ ಎಲೆಗಳನ್ನು ಅದರಲ್ಲಿರುವ ಸಿಹಿಯಿಂದಾಗ ಸೇವನೆಯನ್ನು ಮಾಡುತ್ತಿದ್ದರು. ಅಲ್ಲದೆ ಇದರ ಔಷಧೀಯ ಗುಣಗಳ ಬಗ್ಗೆ ಅವರಿಗೆ ಅರಿವೂ ಇತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಇತಿಹಾಸಕಾರರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುತ್ತಾರೆ. ೧೮೦೦ ವೇಳೆಗೆ ಸ್ಟಿವಿಯಾದ ಬಳಕೆಯು ಪೆರುಗ್ವೆಯಿಂದ ಬ್ರೆಜಿಲ್‌ ಮತ್ತು ಅರ್ಜೆಂಟಿನಾಗಳಿಗೆ ಪಸರಿಸಿತ್ತು.

ಸ್ಟಿವಿಯಾವನ್ನು ಮೊತ್ತ ಮೊದಲು ಜಗತ್ತಿಗೆ ಪರಿಚಯಿಸಿದ ಕೀರ್ತಿ ಓರ್ವ ಇಟಾಲಿಯನ್‌ ಸಸ್ಯಶಾಸ್ತ್ರಜ್ಞನಿಗೆ ಸಲ್ಲುತ್ತದೆ. ಡಾ| ಮೊಯಿಸನ್‌ ಸಾಟಿಯಾಗೊ ಬರ್ಟೊನಿ ಎಂಬ ಇಟಾಲಿಯನ್‌ ಸಸ್ಯಶಾಸ್ತ್ರಜ್ಞನು ೧೮೮೭ ರಲ್ಲಿ ಪೆರುಗ್ವೆಯ ಪೂರ್ವ ಪ್ರಾಂತ್ಯದ ಅರಣ್ಯ ಪ್ರದೇಶದಲ್ಲಿ ಈ ವಿಶಿಷ್ಟ ಸಸ್ಯವನ್ನು ಕಂಡು ಕೊಂಡನು. ಈ ಹೊಸ ಸಸ್ಯಕ್ಕೆ ಆತನು ಪೆರುಗ್ವೆಯ  ರಸಾಯನ ಶಾಸ್ತ್ರಜ್ಞ ರಿಬೌಂಡಿಯಾರವರ ಗೌರವಾರ್ಥವಾಗಿ ಸ್ಟಿವಿಯಾ ರಿಬೌಡಿಯಾನ ಎಂಬುದಾಗಿ ಹೆಸರಿಸಿದ. ೧೯೧೩ರ ವೇಳೆಗೆ ಸ್ಟಿವಿಯಾಕ್ಕೆ ಯೋಗ್ಯ ಪ್ರಚಾರ ಸಿಗಲಾರಂಭಿಸಿತು. ಇದೇ ಸಮಯದಲ್ಲಿ ಸ್ಟಿವಿಯಾ ಸಸ್ಯದ ವಿವಿಧ ವಿಚಾರಗಳ ಬಗ್ಗೆ ಅಧ್ಯಯನವನ್ನು ಪೂರೈಸಿದ್ದ ಡಾ| ಬರ್ಟೋನಿಯು ಇದೊಂದು ಅದ್ಭುತ ಸಿಹಿಕಾರಕವೆಂದು ವರ್ಣಿಸಿದ್ದ.

ಸ್ಟಿವಿಯಾವು  ಬರ್ಟೊನಿಯ ಕಣ್ಣಿಗೆ ಬೀಳುವ ಮೊದಲು ಅದರ ಬಳಕೆ ಮೂಲ ಪ್ರದೇಶಕ್ಕೆ ಸೀಮಿತವಾಗಿತ್ತು. ಆದರೆ ಬಳಿಕ ಅದು ಅಮೇರಿಕಾದ ಸರಕಾರದ ಗಮನಕ್ಕೂ ಬಂತು. ಇದರೊಂದಿಗೆ ಅಲ್ಲಿನ ಸಕ್ಕರೆ ಉತ್ಪಾದಕರಿಗೆ ಇದೊಂದು ಸವಾಲಾಗಿ ಹೊರಹೊಮ್ಕಿತು. ಕ್ರಮೇಣ ಸ್ಟಿವಿಯಾದ ಬಗ್ಗೆ ಇನ್ನಷ್ಟು ಆಸಕ್ತಿ ಕಂಡು ಬಂದು ಇದರ ಕೃಷಿಗೆ ಮಹತ್ವ ನೀಡಲಾಯಿತು. ೧೯೬೦ ರಲ್ಲಿ ಜಪಾನಿಯರು ಸ್ಟಿವಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿ ಅದರ ಬಳಕೆಗೆ ಸಿದ್ಧರಾದರು. ಇದರೊಂದಿಗೆ ಜಪಾನಿನ ಆಹಾರ ಪದಾರ್ಥಗಳ ಉದ್ದಿಮೆದಾರರು ಸ್ಟಿವಿಯಾದ ವಿವಿಧ ಉತ್ಪನ್ನಗಳನ್ನು ಬಳಸಲಾರಂಭಿಸಿದರು. ೧೯೮೮ರ ವೇಳೆಗೆ ಜಪಾನಿನಲ್ಲಿ ಬಳಕೆಯಾಗುತ್ತಿದ್ದ ಒಟ್ಟು ಸಿಹಿ ಪದಾರ್ಥಗಳ ಮಾರುಕಟ್ಟೆಯ ಶೇಕಡಾ ೪೦ಕ್ಕಿಂತಲೂ ಹೆಚ್ಚು ಭಾಗವನ್ನು ಸ್ಟಿವಿಯಾವು ತನ್ನದಾಗಿಸಿಕೊಂಡಿತ್ತು. 

ವಿಶ್ವದಲ್ಲಿ ಸ್ಟಿವಿಯಾ ಕೃಷಿ

೧೯೬೦ರ ದಶಕ ಮತ್ತು ಆ ಬಳಿಕ ಜಪಾನು ಸ್ಟಿವಿಯಾದ ಬಗ್ಗೆ ತೋರಿದ ಒಲವು ಇನ್ನಿತರ ರಾಷ್ಟ್ರಗಳ ಗಮನಕ್ಕೆ ಬಂತು. ಇದರ ಮಹತ್ವವನ್ನು ಅರಿತುಕೊಂಡು ಇದೀಗ ವಿಶ್ವದ ಸುಮಾರು ೧೫ ರಾಷ್ಟ್ರಗಳಲ್ಲಿ ಸ್ಟಿವಿಯಾ ಕೃಷಿ ಸಾಗುತ್ತಿದೆ. ಪ್ರಕೃತ ಸ್ಟಿವಿಯಾದ ಕೃಷಿಯನ್ನು ಪೆರುಗ್ವೆ, ಬ್ರೆಜಿಲ್‌, ಚೀನಾ, ಜರ್ಮನಿ, ಮಲೇಶಿಯಾ, ಇಸ್ರೆಲ್‌, ದಕ್ಷಿಣ ಕೊರಿಯಾ, ಮೆಕ್ಸಿಕೊ, ಐರೋಪ್ಯ ರಾಷ್ಟ್ರಗಳು ಮತ್ತು ಭಾರತಗಳಲ್ಲಿ ಕೈಗೊಳ್ಳಲಾಗುತ್ತಿದೆ. ವಿಶ್ವದಲ್ಲಿಂದು ಸ್ಟಿವಿಯಾದ ಉತ್ಪಾದನೆಯೆಷ್ಟು ಎಂಬ ಬಗ್ಗೆ ನಿಖರ ಮಾಹಿತಿ ದೊರಕದಿದ್ದರೂ ಜಪಾನು ೧೯೮೭ರಲ್ಲಿ ಸುಮಾರು ೭೦೦ ಮೆಟ್ರಿಕ್‌ ಟನ್‌ಗಳಷ್ಟು ಸ್ಟಿವಿಯಾವನ್ನು ಬಳಸಿತ್ತು ಎಂಬುದಾಗಿ ತಿಳಿದು ಬಂದಿದೆ. ಪ್ರಕೃತ ಇದರ ಬಳಕೆಯು ಬ್ರೆಜಿಲ್‌, ದಕ್ಷಿಣ ಅಮೇರಿಕಾ, ದಕ್ಷಿಣ ಕೊರಿಯಾ, ಚೀನಾ, ಪೆಸಿಪಿಕ್‌ ರಿಮ್‌, ಯುರೋಪು, ಆಸ್ಟ್ರೇಲಿಯಾ, ಉತ್ತರ ಅಮೇರಿಕಾ ಇಲ್ಲೆಲ್ಲಾ ಅಧಿಕಗೊಳ್ಳುತ್ತಿದೆ.

ಸ್ಟಿವಿಯಾ ಸಸ್ಯ ಪರಿಚಯ

ಸ್ಟಿವಿಯಾ ರಿಬೌಡಿಯಾನ ‘ಕ್ರಿಸನ್‌ಥೆಮಮ್‌’ ಕುಟುಂಬಕ್ಕೆ ಸೇರಿದ ಒಂದು ಔಷಧೀಯ ಸಸ್ಯ. ಇದು ಸುಮಾರು ೬೫ ರಿಂದ ೮೦ ಸೆಂ.ಮೀ.ನಷ್ಟು ಎತ್ತರಕ್ಕೆ ಬೆಳೆಯಬಲ್ಲ ಸಣ್ಣ ಪೊದೆಗಿಡವಾಗಿದ್ದು, ಇದರ ಹೂಗಳು ಕೂಡ ಚಿಕ್ಕ ಗಾತ್ರದವು. ಆಕಾರದಲ್ಲಿ ತುಳಸಿಯಂತಿರುವ ಸ್ಟಿವಿಯಾವನ್ನಿಂದು ವಿಶ್ವದಾದ್ಯಂತ ಒಂದು ಅದ್ಭುತ ಸಿಹಿಕಾರಕ ಗಿಡಮೂಲಿಕೆಯೆಂದು ಕರೆಯಲಾಗುತ್ತಿದೆ. ಸ್ಟಿವಿಯಾ ಸಸ್ಯದ ಎಲೆಯಲ್ಲಿ ಗೈಕೋಸೈಡ್‌ ಮತ್ತು ಶೇಕಡಾ ೧೦ರ ಸ್ಟಿವಿಯೋಸೈಡ್‌ ಅಂಶಗಳಿರುವುದರಿಂದ ಇದೊಂದು ನಂಬಲಾಗದಂತಹ ಸಿಹಿಯುಳ್ಳ ಸಸ್ಯವಾಗಿದೆ.

ಸ್ಟಿವಿಯಾದ ಎಲೆಗಳಲ್ಲಿರುವ ಸ್ಟಿವಿಯೋಸೈಡ್‌ ಅಂಶವು ನಾವಿಂದು ಬಳಸುತ್ತಿರುವ ಸಕ್ಕರೆಗಿಂತ ೩೦೦ಪಟ್ಟು ಅಧಿಕ ಸಿಹಿಯನ್ನು ಹೊಂದಿದ್ದು, ಇದರ ತಾಜಾ ಎಲೆಯೇ ಸಾಮಾನ್ಯ ಬಳಕೆಯ ಸಕ್ಕರೆಗಿಂತ ೩೦ ಪಟ್ಟು ಅಧಿಕ ಸಹಿ ಹೊಂದಿದೆಯೆಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದರೊಂದಿಗೆ ಸ್ಟಿವಿಯಾವು ಶೇಕಡಾ ೧೦೦ರಷ್ಟು ಕ್ಯಾಲೊರಿ ಮುಕ್ತವಾಗಿದೆ. ಸ್ಟಿವಿಯಾದಲ್ಲಿ ವಿವಿಧ ರೀತಿಯ ಪೌಷ್ಟಿಕಾಂಶಗಳಿದ್ದು ಇದರಿಂದಾಗಿ ಈ ಸಸ್ಯಕ್ಕೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದರಲ್ಲಿ ವಿಟಾಮಿನ್‌ ಸಿ, ಬೀಟಾ – ಕೆರೋಟೀನ್‌, ಕ್ರೋಮಿಯಂ, ಕೋಬಾಲ್ಟ್‌, ಕೊಬ್ಬು, ನಾರು, ಕಬ್ಬಿಣಾಂಶ, ಮ್ಯಾಂಗನೀಸ್‌, ಮೆಗ್ನೇಷಿಯಂ, ನಿಯಾಸಿನ್‌, ಪೊಸ್ಫರಸ್‌, ಪೊಟ್ಯಾಷಿಯಂ, ಪ್ರೋಟೀನು, ರಿಬೊಫ್ಲೊವಿನ್‌, ಸೆಲೇನಿಯಮ್‌, ಸಿಲಿಕಾನ್‌, ಸೋಡಿಯಂ, ಥಿಯಾಮಿನ್‌, ನೀರು ಮತ್ತು ಸತುವಿನಂಶಗಳಿವೆ. 

ಸ್ಟಿವಿಯಾ ಕೃಷಿ ವಿಧಾನಗಳು

ಸ್ಟಿವಿಯಾ ಗಿಡ ಹೇಗಿರಬೇಕು:

ಸ್ಟಿವಿಯಾ ಸಸ್ಯಾಭಿವೃದ್ಧಿ ಮಾಡಲು ಅದರ ಬೀಜಗಳಿಂದ ಕಷ್ಟ ಸಾಧ್ಯ. ಇದಕ್ಕೆ ಮುಖ್ಯ ಕಾರಣ ಬೀಜಗಳಿಂದ ತಯಾರಿಸಿದ ಗಿಡಗಳಲ್ಲಿರುವ ಸ್ಟಿವಿಯೋಸೈಡ್‌ ಒಂದೆ ರೀತಿ ಇರಲಾರದು. ಆದ್ದರಿಂದ ನರ್ಸರಿಗಳಲ್ಲಿ ನಾಟಿಗಾಗಿ ತಯಾರು ಮಾಡಿ ಇಟ್ಟಿರುವ ಗಿಡಗಳನ್ನು ಆರಿಸುವುದು ಒಳ್ಳೆಯದು. ಆದರೆ ಇಲ್ಲಿ ಗಮನದಲ್ಲಿರಿಸಿಕೊಳ್ಳಬೇಕಾದ ಒಂದು ಮುಖ್ಯ ಅಂಶವೆಂದರೆ ಗಿಡಗಳ ಮೂಲ ಸಸ್ಯಗಳಲ್ಲಿ ಯಾವ ಪ್ರಮಾಣದ ಸ್ಟಿವಿಯೋಸೈಡ್‌ ಇತ್ತು ಎಂಬುದನ್ನು. ಗಿಡಗಳನ್ನು ಕೊಳ್ಳುವಾಗ ಅದು ಸಣ್ಣದು ಮತ್ತು ಎಳತಾಗಿದ್ದಲ್ಲಿ ಅದು ಕಡಿಮೆ ತಾಪಮಾನವನ್ನು ತಾಳಿಕೊಳ್ಳಲಾರವು. ಆದ್ದರಿಂದ ಗಿಡಗಳನ್ನು ನಾಟಿ ಮಾಡುವಾಗ ಮಣ್ಣಿನ ತಾಪಮಾನವು ಹೊಂದಿಕೆಯಾಗುವ ಸಮಯವನ್ನು ನೋಡಿಕೊಳ್ಳುವುದು ಉಚಿತ.

ಸ್ಟಿವಿಯಾ ಕೃಷಿಗೆ ಯೋಗ್ಯವಾದ ಮಣ್ಣು ಮತ್ತು ಹವಾಗುಣ

ಸ್ಟಿವಿಯಾ ಕೃಷಿಯಲ್ಲಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಲು ಕೆಂಪು ಮತ್ತು ಮರಳು ಮಿಶ್ರಿತ ಮಣ್ಣು ಉತ್ತಮ. ಜೇಡಿ ಮಣ್ಣಿನಲ್ಲಿ ಯೋಗ್ಯ ಪ್ರತಿಫಲ ನಿರೀಕ್ಷಿಸಲು ಅಸಾಧ್ಯ.

ಸ್ಟಿವಿಯಾದ ಕೃಷಿಯನ್ನು ಹಗಲಿನ ವೇಳೆ ೩೮ ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ಉಷ್ಣತೆಯೇರದ ಮತ್ತು ರಾತ್ರಿ ವೇಳೆ ೧೦ ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಕ್ಕೆ ಉಷ್ಣತೆಯಿಳಿಯದ ಪ್ರದೇಶಗಳಲ್ಲಿ ಕೈಗೊಳ್ಳಲು ಸಾಧ್ಯ.

ಕೃಷಿ ಭೂಮಿ ತಯಾರಿ

ಸ್ಟಿವಿಯಾದ ಕೃಷಿಗೆ ನಿಗದಿಪಡಿಸಿದ ಭೂಮಿಯನ್ನು ಮೊತ್ತಮೊದಲು ಸರಿಯಾದ ರೀತಿಯಲ್ಲಿ ಸಾಲು ಸಾಲಾಗಿ ಉಳುಮೆ ಮಾಡಬೇಕು. ಈ ಉಳುಮೆಯಾದಾಗ ಮಣ್ಣಿನ ಮುದ್ದೆ ಹುಡಿಯಾಗಬೇಕು. ಬಳಿಕ ಒಂದು ಎಕ್ರೆ ಕೃಷಿ ಭೂಮಿಗೆ ಸುಮಾರು ೨೫ಮೆ. ಟನ್‌ಗಳಷ್ಟು ಸಾವಯೊವ ಗೊಬ್ಬರವನ್ನು ಹಾಕಿ ಇನ್ನೊಂದು ಉಳುಮೆ ಮಾಡಿ ಇದು ಮಣ್ಣಿನೊಂದಿಗೆ ಬೆರೆಯುವಂತೆ ಮಾಡಬೇಕು.

ಎತ್ತರದ ದಿಣ್ಣೆ (ಹಾಸಿಗೆ) ತಯಾರಿ

ಸುಮಾರು ೧೫ಸೆಂ.ಮೀ. ಎತ್ತರ ಮತ್ತು ೬೦ಸೆಂ.ಮೀ. ಅಗಲದ ಮಣ್ಣಿನ ದಿಣ್ಣೆಯ ಸಾಲುಗಳನ್ನು ಸ್ಟಿವಿಯಾ ಕೃಷಿ ಭೂಮಿಯಲ್ಲಿ ಮಾಡಬೇಕು. ಎರಡು ದಿಣ್ಣೆಗಳ ಸಾಲುಗಳ ನಡುವಿನ ಅಂತರವು ೪೦ ಸೆಂ.ಮೀ. ಆಗಿರಬೇಕು. ಇದರೊಂದಿಗೆ ಇಲ್ಲಿ ನಾಟಿ ಮಾಡುವ ಪ್ರತಿ ಸ್ಟಿವಿಯಾ ಗಿಡಗಳ ನಡುವಿನ ಅಂತರ ಒಂದು ಸಾಲಿನಲ್ಲಿ ೨೩ ಸೆಂ.ಮೀ. ನಷ್ಟಿರಬೇಕು. ಈ ರೀತಿಯ ಕ್ರಮ ಬದ್ಧವಾದ ಕೃಷಿಯಾದಲ್ಲಿ ಒಂದು ಎಕರೆಗೆ ಸುಮಾರು ೩೦ ಸಾವಿರ ಗಿಡಗಳನ್ನು ನಾಟಿ ಮಾಡಬಹುದಾಗಿದೆ.

ನೀರಾವರಿ

ಸ್ಟಿವಿಯಾ ಗಿಡವು ನೀರಿನಂಶವಿಲ್ಲದೆ ಬದುಕುವುದು ಕಷ್ಟ. .ಇದರ ಅಭಿವೃದ್ಧಿಯ ಚಳಿಗಾಲದಲ್ಲಿ ಅತೀ ಸೂಕ್ಷ್ಮವಾಗಿದ್ದು, ಹೆಚ್ಚಿನ ತೇವಾಂಶ ಮತ್ತು ಮಂಜು ಅದರ ಬೆಳವಣಿಗೆಗೆ ಸಹಾಯಕಾರಿಯಲ್ಲ. ಆದ್ದರಿಂದ ನೀರುಣಿಸುವಾಗ ಅತ್ಯಂತ ಜಾಗರೂಕತೆಯನ್ನು ವಹಿಸಬೇಕು. ಉಣಿಸಿದ ನೀರು ಅಗತ್ಯಕ್ಕನುಗುಣವಾಗಿರಬೇಕಲ್ಲದೆ ಅದು ಸುಲಭವಾಗಿ ಇಂಗಿ ಹೋಗುವಂತಿರಬೇಕಲು.

ಬೇಸಿಗೆ ಕಾಲದಲ್ಲಿ ಹದವರಿತ ನೀರಣಿಸುವಿಕೆ ಆಗಲೇ ಬೇಕು. ಇದೇ ಕಾಲದಲ್ಲಿ ಸಾವಯವ ಗೊಬ್ಬರವನ್ನು ಗಿಡದ ಸುತ್ತು ಹಾಕಿದಲ್ಲಿ ಅದರ ಬೇರುಗಳು ಒಣಗಲಾರವು. ನಮ್ಮಲ್ಲಿ ಸ್ವಿಟಿಯಾದ ನೀರಾವರಿಗೆ ಸಂಬಂಧಿಸಿದಂತೆ ಮೈಕ್ರೋಸ್ಟ್ರಿಂಕ್ಲರ್ ಪದ್ಧತಿಯು ಸೂಕ್ತವೆಂದು ಪರಿಗಣಿಸಲಾಗಿದೆ. ಈ ರೀತಿಯ ನೀರುಣಿಸುವಿಕೆಯು ಚಳಿಗಾಲದಲ್ಲಿ ದಿನಕ್ಕೊಂದು ಬಾರಿ ಮತ್ತು ಬೇಸಿಗೆ ಕಾಲದಲ್ಲಿ ೨ರಿಂದ ೪ಬಾರಿ ಅಗತ್ಯಕ್ಕನುಗುಣವಾಗಿ ಆದಲ್ಲಿ ಉತ್ತಮ. ಬೇಸಿಗೆ ಕಾಲದ ನೀರುಣಿಸುವಿಕೆಯು ವಾತಾವರಣದ ಉಷ್ಣಾಂಶ ಮತ್ತು ತೇವಾಂಶಕ್ಕನುಗುಣವಾಗಿರಬೇಕು. ಈ ರೀತಿಯ ನಿರಂತರ ನೀರಾವರಿ ವ್ಯವಸ್ಥೆಯಿದ್ದಲ್ಲಿ ಗಿಡವು ಸೊರಗುವುದನ್ನು ತಪ್ಪಿಸಬಹುದು.

ಗೊಬ್ಬರ

ಸ್ಟಿವಿಯಾ ಗಿಡದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಾವಯವ ಗೊಬ್ಬರ ಅತ್ಯುತ್ತಮ ಮತ್ತು ಇದಕ್ಕೆ ಅಂತರಾಷ್ಟ್ರೀಯ ಬೇಡಿಕೆಯೂ ಅಧಿಕ. ಹೀಗಿದ್ದರೂ ಇದರ ಬೆಳವಣಿಗೆಗೆ ಶಿಫಾರಸ್ಸು ಮಾಡಿದ ರಸಗೊಬ್ಬರದ ಪ್ರಮಾಣವು ಒಂದು ಎಕರೆಗೆ ೧೧೦:೪೫:೪೫ರ NPK ಮಿಶ್ರಣವಾಗಿದೆ. ಈ ಪ್ರಮಾಣದ ಪ್ರಕಾರ ಒಂದು ಎಕರೆ ಸ್ಟಿವಿಯಾ ಕೃಷಿಗೆ ಬೇಕಾಗುವ ರಸಗೊಬ್ಬರವು ಕ್ರಮವಾಗಿ ೪.೫ಚೀಲ ಯೂರಿಯಾ, ೨ಚೀಲ ಡಿ.ಎ.ಪಿ. ಮತ್ತು ೨ಚೀಲ ಪೊಟ್ಯಾಷ್‌ ಆಗಿದೆ. ಈ ಎಲ್ಲ ಗೊಬ್ಬರವು ಗಿಡದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮೂಲವಾಗಿದೆ.

ಗಿಡಗಳ ರಕ್ಷಣೆ

ಸ್ಟಿವಿಯಾ ಗಿಡಕ್ಕೆ ಈ ತನಕ ಯಾವುದೇ ರೀತಿ ಪ್ರಬಲ ಕ್ರಿಮಿಕೀಟಗಳು ಮತ್ತು ರೋಗಗಳ ಬಾಧೆ ಕಂಡು ಬಂದಿಲ್ಲ. ಹೀಗಿದ್ದರೂ ಯಾವುದಾದರೊಂದು ಕೀಟ ಇಲ್ಲವೆ ರೋಗ ಬಂದಲ್ಲಿ ಕಹಿ ಬೇವಿನ ಎಣ್ಣೆಯನ್ನು ನೀರಲ್ಲಿ ಮಿಶ್ರಮಾಡಿ ಗಿಡಗಳಿಗೆ ಚಿಮುಕಿಸುವುದು ಉಚಿತ.

ಕಳೆ ನಿಯಂತ್ರಣ

ಸ್ಟಿವಿಯಾ ಕೃಷಿಯಲ್ಲಿ ಕಂಡು ಬರಬಹುದಾದ ಕಳೆಯನ್ನು ಕೆಲಸಗಾರರ ಮೂಲಕ ಕೀಳಬಹುದು. ಎತ್ತರದ ದಿಣ್ಣೆಯಲ್ಲಿ ಇದರ ಕೃಷಿಯಿರುವುದರಿಂದ ಇದು ಸುಲಭ ಸಾಧ್ಯ.

ಗಿಡಗಳ  ಬೆಳವಣಿಗೆ ಮತ್ತು ನಿರ್ವಹಣೆ

ಸ್ಟಿವಿಯದ ಗಿಡಗಳು ಕನಿಷ್ಟ ೪೫ರಿಂದ ಗರಿಷ್ಟ ೮೦ಸೆಂ.ಮೀ. ನಷ್ಟು ಎತ್ತರಕ್ಕೆ ಬೆಳೆಯಬಲ್ಲದು. ಸ್ಟಿವಿಯಾದ ಎಲೆಗಳಲ್ಲಿರುವ ಸ್ಟಿವಿಯೊಸೈಡ್‌ ಅಂಶ ಗಿಡ ಬೆಳೆದಂತೆ ಹೆಚ್ಚಾಗುವುದು. ಸ್ಟಿವಿಯಾದ ಕೃಷಿಯಲ್ಲಿ ನೆನಪಿಡಬೇಕಾದ ಒಂದು ಮುಖ್ಯ ಅಂಶವೆಂದರೆ ಗಿಡಗಳು ಹೂವನ್ನು ಬಿಟ್ಟಾಗ ಅವನ್ನು ಚಿವುಟಿ ಹಾಕಬೇಕು. ಗಿಡಗಳ ಅಗ್ರಭಾಗ ಚಿವುಟುವುದರಿಂದ ಅದು ಇನ್ನಷ್ಟು ಬೆಳವಣಿಗೆಯನ್ನು ಸಾಧಿಸಿ ಕವಲುಗಳು ಪುಷ್ಟಿಯಾಗಿ ಬಹುಕಾಲ ಬಾಳಲು ಸಾಧ್ಯ. ಈ ರೀತಿಯಾದ ನಿರ್ವಹಣೆಯಾದಲ್ಲಿ ಸ್ಟಿವಿಯಾ ಗಿಡವು ೩ ರಿಂದ ೫ ವರ್ಷಗಳ ತನಕ ಉತ್ತಮ ಇಳುವರಿಯನ್ನು ಕೊಡಬಹುದು.

ಕೊಯ್ಲು

ಸ್ಟಿವಿಯಾದ ಗಿಡವನ್ನು ನಾಟಿ ಮಾಡಿದ ಬಳಿಕ ಅದರ ಸರಿಯಾದ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ತೋರಿಸಿದಲ್ಲಿ ಮೊದಲನೆ ಕೊಯ್ಲು ೪ ರಿಂದ ೫ ತಿಂಗಳುಗಳಲ್ಲಿ ಸಾದ್ಯ. ಆ ಬಳಿಕ ಪ್ರತಿ ಮೂರು ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಸ್ಟಿವಿಯಾದ ಎಲೆಗಳ ಕೊಯ್ಲನ್ನು ಎಲೆಗಳ ಕೀಳುವಿಕೆಯ ಮೂಲಕ ಮಾಡಬಹುದು. ಈ ಕೀಳುವಿಕೆಯು ಸಣ್ಣ ಪ್ರಮಾಣದಲ್ಲಿ ಇಲ್ಲವೆ ಗಿಡದ ಬದಿಯ ಕವಲುಗಳನ್ನು ತುಂಡು ಮಾಡಿಯೂ ಮಾಡಬಹುದು. ಆದರೆ ಈ ಕವಲುಗಳನ್ನು ಕತ್ತರಿಸುವಗ ಗಿಡದ ತಳಭಾಗದಿಂದ ೧೦ರಿಂದ ೧೫ ಸೆಂ.ಮೀ. ನಷ್ಟು ಅಂತರವನ್ನಿಟ್ಟುಕೊಳ್ಳಬೇಕು. ಸ್ಟಿವಿಯಾದ ಗಿಡದಲ್ಲಿ ಉತ್ತಮ ಕೊಯ್ಲನ್ನು ೨ನೇ ವರ್ಷದಲ್ಲಷ್ಟೇ ಗಳಿಸಲು ಸಾಧ್ಯ. ಮೂರನೇ ವರ್ಷದ ಬಳಿಕ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುವುದರಿಂದ ಇದು ಗಿಡದ ಬದಲಾವಣೆಗೆ ಸೂಕ್ತ ಸಮಯ. ಗಿಡವು ಹೂಗಳನ್ನು ಹೊರಹೊಮ್ಮುವುದರ ಮೊದಲು ಎಲೆಗಳಲ್ಲಿ ಅತ್ಯಧಿಕ ಪ್ರಮಾಣದ ಸಿಹಿಯಿರುವುದು. ಹೂಗಳನ್ನು ಚಿವುಟಿ ಹಾಕಿ ಅದು ಪುನಃ ಚಿಗುರಿ ಮೂರು ತಿಂಗಳಲ್ಲಿ ಕೊಯ್ಲು ಸಜ್ಜಾಗುವುದು. ಸಾಮಾನ್ಯವಾಗಿ ಒಂದು ಎಕರೆ ಸ್ಟಿವಯಾ ಕೃಷಿಯಲ್ಲಿ ಸುಮಾರು ೩೦೦೦ ಕಿಲೋಗಳಷ್ಟು ಒಣ ಸ್ಟಿವಿಯಾ ಎಲೆಗಳನ್ನು ವಾರ್ಷಿಕವಾಗಿ ಗಳಿಸಲು ಸಾಧ್ಯ.

ಎಲೆಗಳ  ಒಣಗಿಸುವಿಕೆ

ಕೊಯ್ಲು ಮಾಡಿದ ಎಲೆಗಳನ್ನು ಇಲ್ಲವೆ ಕವಲುಗಳನ್ನು ಒಣಗಿಸುವುದು ಅತ್ಯಗತ್ಯ. ಇದಕ್ಕಾಗಿ ಬಿಸಿಲಿನಲ್ಲಿ ಒಂದು ಬಲೆಯನ್ನು ಹರಡಿ ಅದರಲ್ಲಿ ಇವನ್ನು ಹಾಕಿ ಒಣಗಿಸುವುದು ಸೂಕ್ತ. ಒಣಗಿಸುವ ಹಂತದಲ್ಲಿ ಇದಕ್ಕೆ ಅತೀ ಬಿಸಿಲು ಅಗತ್ಯವಿಲ್ಲ. ಆದರೆ ಗಾಳಿ ಸಂಚಾರವಿರಲೇ ಬೇಕು. ಸಾಮಾನ್ಯ ಶಾಖವಿದ್ದಾಗ ಸ್ಟಿವಿಯಾವನ್ನು ಒಣಗಿಸಲು ಸುಮರು ೧೨ ತಾಸುಗಳು ಸಾಕು. ಸೂರ್ಯನ ಶಾಖದ ಮೂಲಕ ಒಣಗಿಸುವ ವಿಧಾನವು ಸ್ಟಿವೊಯೊಸೈಡ್‌ನ ದೃಷ್ಟಿಯಿಂದ ಸೂಕ್ತ. ಒಣಗಿದ ಎಲೆಗಳನ್ನು ಬಳಿಕ ಗಾಳಿಯಾಡದ ಪಾಲಿಥಿನ್‌ ಚೀಲಗಳಲ್ಲಿ ತುಂಬಿಸಿಡಬೇಕು.

ಸ್ಟಿವಿಯಾದ ಹುಡಿಯ ತಯಾರಿ

ಒಣ ಎಲೆಗಳನ್ನು ಮಿಕ್ಸಿ ಇಲ್ಲವೆ ಗ್ರೈಂಡರ್ ಗಳ ಮೂಲಕ ಹುಡಿ ಮಾಡಲು ಸಾಧ್ಯ. ಈ ಹುಡಿಗೆ ಒಣ ಎಲೆಗಿಂತ ಅಧಿಕ ಬೆಲೆ ದೊರಕಲು ಸಾಧ್ಯ. ಇದು ಉದ್ದಕ್ಕನುಗುಣವಾದ ಲೆಕ್ಕಾಚಾರದಲ್ಲಿರಬೇಕಲು.

ಸ್ಟಿವಿಯಾ ದ್ರವ್ಯ

ಸ್ಟಿವಿಯಾ ದ್ರವ್ಯವನ್ನು ತಯಾರಿಸಲು ಚೆನ್ನಾಗಿ ಹುಡಿ ಮಾಡಿದ ಕಾಲು ಗ್ಲಾಸು ಎಲೆಗಳನ್ನು ಒಂದು ಗ್ಲಾಸು ಬಿಸಿ ನೀರಿನಲ್ಲಿ ಹಾಕಬೇಕು. ಈ ಮಿಶ್ರಣವನ್ನು ೨೫ ಗಂಟೆಗಳ ಕಾಲ ಶೀತಲೀಕರಣಕ್ಕೊಳಪಡಿಸಿದಲ್ಲಿ ಉತ್ತಮ ದ್ರವ್ಯವನ್ನು ಗಳಿಸಬಹುದ, ಅಲ್ಲದೆ ಮೇಲ್ಪದರದಲ್ಲಿ ಬಿಳಿ ಹುಡಿ ಶೇಖರಣೆಯಾಗುತ್ತದೆ.

ಸ್ಟಿವಿಯಾದ ಉಪಯೋಗಗಳು

ಸ್ಟಿವಿಯಾವನ್ನು ತಿಂಡಿ ತಿನಿಸುಗಳ ತಯಾರಿಯಲ್ಲಿ, ಬೇಕರಿ ಪದಾರ್ಥಗಳ ತಯಾರಿಗೆ ಮತ್ತು ಸಾಮಾನ್ಯ ಸಕ್ಕರೆ ಎಲ್ಲೆಲ್ಲ ಬಳಕೆಯಾಗುತ್ತಿದೆಯೊ ಅಲ್ಲೆಲ್ಲ ಬಳಸಬಹುದಾಗಿದೆ. ಪೆರುಗ್ವೆ ಮತ್ತು ಬ್ರೆಜಿಲ್‌ ರಾಷ್ಟ್ರಗಳಲ್ಲಿ ಸ್ಟಿವಿಯಾ ಸೇವಿಸಿದರೆ ಸಿಹಿ ಮೂತ್ರ ರೋಗ ತಡೆಗಟ್ಟಬಹುದೆಂದು ಜನರು ಭಾವಿಸಿದ್ದಾರೆ. ಇದರ ಸಾರ ಆರೋಗ್ಯಕ್ಕೆ ಹಾನಿಕರಕವಲ್ಲವೆಂದು ಅರಿತ ಜಪಾನೀಯರು ಅದನ್ನು ಕ್ಯಾಂಡಿ, ಐಸ್‌ಕ್ರೀಂ, ಉಪ್ಪಿನಕಾಯಿ, ತಂಪು ಪಾನೀಯ ಮಾತ್ರವಲ್ಲದೆ ವಿವಿಧ ರೀತಿಯ ಆಹಾರ ಉತ್ಪನ್ನಗಳಲ್ಲಿ ಬಳಸುತ್ತಿದ್ದಾರೆ. ಅಧ್ಯಯನಗಳ ಪ್ರಕಾರ ರಕ್ತದೊತ್ತಡವನ್ನು ಸರಿಪಡಿಸುವಲ್ಲಿ ಸ್ಟಿವಿಯಾದ ಸಾರ ಪ್ರಮುಖ ಪಾತ್ರವಹಿಸಲು ಸಾಧ್ಯ, ಅಲ್ಲದೆ ಹಲ್ಲಿನ ವಸಡುಗಳ ಸುರಕ್ಷತೆಗೂ ಇದು ಯೋಗ್ಯ. ಇದರ ದ್ರವ್ಯವು ಚರ್ಮ ರೋಗಗಳ ನಿವಾರಣೆಗೆ, ಹಲವು ರೀತಿಯ ನೋವು ನಿವಾರಣೆಗಾಗಿ ಸೂಕ್ತ ಔಷಧಿ. ಸ್ಟಿವಿಯಾವು ಒಂದು ಉತ್ತಮ ಗರ್ಭನಿರೋಧಕವಾಗಬಹುದೆಂಬ  ಅಭಿಪ್ರಾಯವನ್ನಿಂದು ವಿವಿಧ ಸಂಶೋಧನೆಗಳು ತಿಳಿಸುತ್ತಿದ್ದು, ಈ ಬಗ್ಗೆ ಇನ್ನೂ ಖಚಿತ ಅಭಿಪ್ರಾಯಗಳು ಹೊರಹೊಮ್ಮಿಲ್ಲ.

ಸ್ಟಿವಿಯಾಕ್ಕಿರುವ ಮಾರುಕಟ್ಟೆ

ಸ್ಟಿವಿಯಾದ ಒಣ ಎಲೆ, ಹುಡಿ ಇತ್ಯಾದಿಗಳಿಗಿಂದು ಸ್ಥಳೀಯವಾಗಿ ಮಾರುಕಟ್ಟೆ ಲಭ್ಯ. ಇದರೊಂದಿಗೆ ಜಿಲ್ಲಾ ಮತ್ತು ರಾಜ್ಯ ರಾಜಧಾನಿಗಳಲ್ಲಿರುವ ಔಷಧೀಯ ಸಸ್ಯಗಳ ವ್ಯಾಪಾರಸ್ಥರು, ಔಷಧಗಳ  ತಯಾರಕರು, ರಫ್ತುದಾರರು ಇವನ್ನು ಖರೀದಿಸುತ್ತಿದ್ದಾರೆ. ಪ್ರಕೃತ ಒಣ ಎಲೆಗೆ ಕಿಲೋವೊಂದರ ಕನಿಷ್ಠ ರೂಪಾಯಿ ೧೨೦ ರಿಂದ ೨೦೦, ಮತ್ತು ಹುಡಿಗೆ ರೂಪಾಯಿ ೬೦೦ರ ತನಕ ಬೆಲೆಯಿದೆ.

ಸ್ಟಿವಿಯಾದ ಭವಿಷ್ಯ

ಸ್ಟಿವಿಯಾದ ಬಗ್ಗೆ ಮತ್ತದರ ಕೃಷಿ ಬಗ್ಗೆ ಇತ್ತೀಚಿನ ವರ್ಷಗಳಲ್ಲಷ್ಟೆ ಪ್ರಾಮುಖ್ಯತೆ ಬಂದಿದೆ. ಈ ದೃಷ್ಟಿಯಿಂದ ಇದರ ಬಗ್ಗೆ ಇನ್ನೂ ಅರಿಯದ ನಮ್ಮ ಕೃಷಿಕರಿಗೆ ಇದರ ಭವಿಷ್ಯ ಬಗ್ಗೆ ಸಂಶಯ ಮೂಡುವುದು ಸಹಜ. ಆದರೆ ಸ್ಟಿವಿಯಾದಲ್ಲಿರುವ ಸ್ಟಿವಿಯೊಸೈಡ್‌ ಮತ್ತು ಅದರಿಂದ ತಯಾರಿಸಲಾಗುವ ಬಿಳಿಸಾರ, ಮತ್ತಿತರೆ ಉತ್ಪನ್ನಗಳ ಬಳಕೆಯನ್ನು ಜಪಾನಿನಂತ ದೇಶವು ಹಲವು ದಶಕಗಳಿಂದ ಮಾಡುತ್ತಿದ್ದು, ಇದರೊಂದಿಗೆ ಈ ಬಳಕೆಯು ಇನ್ನಷ್ಟು ರಾಷ್ಟ್ರಗಳಿಗೆ ವಿಸ್ತರಣೆಯಾಗುತ್ತಿರುವ ಕಾರಣ ಮುಂದೆ ಇದಕ್ಕೆ ಹೆಚ್ಚಿನ ಬೇಡಿಕೆ ಬರುವುದು ಖಚಿತ. ಸ್ಟಿವಿಯಾವು ಒಂದು ಗಿಡಮೂಲಿಕೆಯಾಗಿದ್ದು, ಇದರ ಉಪಯೋಗದಿಂದ ನಾನಾ ಕಾಯಿಲೆಗಳ ವಾಸಿ, ಹತೋಟಿ ಇತ್ಯಾದಿಗಳಿಗೆ ಅವಕಾಶವಿದ್ದು, ಇದೊಂದು ಸ್ವಾಭಾವಿಕ, ಕಾಲೋರಿ ರಹಿತ, ಪರಿಸರ ಉತ್ಪನ್ನವಾದ್ದರಿಂದ ವಿಶ್ವದ ನಾನಾ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಅಧಿಕ ಬೇಡಿಕೆ ಬರಲು ಸಾಧ್ಯ. ವಿಶ್ವದಾದ್ಯಂತ ಜನರಿಂದು ಗಿಡಮೂಲಿಕೆಗಳಿಂದ ಆರೋಗ್ಯವನ್ನು ಕಾಪಾಡುವ ಬಗ್ಗೆ ಆಸಕ್ತಿ ಹೊಂದಿರುವುದು ಇದಕ್ಕೆ ಸಾಕ್ಷಿ.

ಸ್ಟಿವಿಯಾವನ್ನು ನಾವಿಂದು ಸೇವಿಸುತ್ತಿರುವ ಚಹಾ, ಕಾಫಿ ಮತ್ತಿತರ ಪಾನೀಯಗಳಲ್ಲಿ ಬಳಸಬಹುದಾಗಿದ್ದು, ಪ್ರಕೃತ ಸಿಹಿ ಮೂತ್ರ ರೋಗಿಗಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಲು ಅಸ್ವಾಭಾವಿಕ ಸಿಹಿಕಾರಕಗಳಿಂದ ತಯಾರಾಗುತ್ತಿದ್ದು, ಇಲ್ಲೆಲ್ಲ ಸ್ಟಿವಿಯಾವನ್ನು ಬಳಸಬಹುದಾಗಿದೆ.  ಇದರೊಂದಿಗೆ ಬಿಸ್ಕತ್‌, ಜಾಮ್‌, ಚಾಕಲೇಟು ತಂಪು ಪಾನೀಯ, ಸೋಡಾ ಇವುಗಳಲ್ಲೂ ಇದರ ಬಳಕೆ ಸಾಧ್ಯ. ಇವೆಲ್ಲದರೊಂದಿಗೆ ಇದರಲ್ಲಿರುವ ಔಷಧೀಯ ಗುಣಗಳು, ಔಷಧಿಗಳ ತಯಾರಿಯಲ್ಲೂ ಬಳಸಲು ಸೂಕ್ತ. ಈ ಎಲ್ಲಾ ವಿಚಾರಗಳಿಂದ ಸ್ಟಿವಿಯಾಕ್ಕೆ ಉತ್ತಮ ಭವಿಷ್ಯವಿರಲು ಸಾಧ್ಯವೆನ್ನಬಹುದು. ಭಾರತದಲ್ಲಿಂದು ಸುಮರು ೨೧ ಮಿಲಿಯ ಪ್ರಜೆಗಳು ಸಿಹಿ ಮೂತ್ರ ರೋಗದಿಂದ ನರಳುತ್ತಿದ್ದು, ಇದರೊಂದಿಗೆ ೨೦೧೦ಕ್ಕಾಗುವಾಗ ಈ ಸಂಖ್ಯೆ ಸುಮಾರು ೬೦ ಮಿಲಿಯ ತಲುಪಬಹುದೆಂದು ಅಂದಾಜಿಸಲಾಗಿದೆ. ಈ ದೃಷ್ಟಿಯಿಂದ ಸ್ಟಿವಿಯಾ ಪರಿಣಾಮಕಾರಿ ಔಷಧಿಯಾಗುವುದರಲ್ಲಿ ಸಂಶಯವಿಲ್ಲ. ಒಟ್ಟಾರೆಯಾಗಿ ಸ್ಟಿವಿಯಾ ಒಂದು ಉತ್ತಮ ಭವಿಷ್ಯವುಳ್ಳ ಗಿಡಮೂಲಿಕೆ ಎಂಬುದನ್ನು ಈ ಎಲ್ಲಾ ವಿಚಾರಗಳಿಂದ ನಾವಿಂದು ಅರಿತುಕೊಳ್ಳಬಹುದು.

ಸ್ಟಿವಿಯಾದ ಅಂತರಾಳ

೧) ಸ್ಟಿವಿಯಾ ಒಂದು ಸಿಹಿಕಾರಕ ಗಿಡಮೂಲಿಕೆ. ಇದರ ಎಲೆಯು ಸ್ಟಿವಿಯೊಸೈಡನ್ನು ಹೊಂದಿರುವ ಕಾರಣ ಇದು ಸಿಹಿಯಾಗಿದೆ.

೨) ಸ್ಟಿವಿಯಾದ ೩೦೦ ಪ್ರಭೇದಗಳಲ್ಲಿ ಸ್ಟಿವಿಯಾ ರಿಬೌಡಿಯಾನಕ್ಕೆ ವಿಶೇಷ ಸ್ಥಾನವಿದೆ.

೩) ಸ್ಟಿವಿಯಾವನ್ನು ಪೆರುಗ್ವೆಯಲ್ಲಿ ನೆಲೆಸಿದ ಭಾರತೀಯ ಮೂಲ ನಿವಾಸಿಗಳು ಪ್ರಥಮವಾಗಿ ಕಂಡುಕೊಂಡು ಬಳಸಿದರು.

೪) ವಿಶ್ವದ ಸುಮರು ೧೫ ರಾಷ್ಟ್ರಗಳಲ್ಲಿಂದು ಇದರ ಕೃಷಿ ಮತ್ತು ಬಳಕೆಯಾಗುತ್ತಿದೆ.

೫) ೫೦ಗ್ರಾಂ ಸ್ಟಿವಿಯದ ಎಲೆಯಲ್ಲಿರುವ ಸಿಹಿ ೧ಕಿಲೋ ಸಾಮಾನ್ಯ ಸಕ್ಕರೆಗೆ ಸರಿಸಮವಾಗಿದೆ.

೬) ಸ್ಟಿವಿಯಾದ ಕೃಷಿಗೆ ನರ್ಸರಿ ಗಿಡಗಳು ಯೋಗ್ಯ. ಆದರೆ ಸಣ್ಣದು ಮತ್ತು ಎಳತಾಗಿರಬಾರದು.

೭) ಅಧಿಕ ಉಷ್ಣ ಮತ್ತು ಚಳಿಯನ್ನು ಇದು ಸಹಿಸಲಾರದು.

೮) ಸ್ಟಿವಿಯಾ ಸದಾ ತೇವಾಂಶವನ್ನು ಬಯಸುವ ಸಸ್ಯ.

೯) ಇದರ ಕೃಷಿಗೆ ಕೆಂಪು ಮತ್ತು ಮರಳು ಮಿಶ್ರಿತ ಮಣ್ಣು ಯೋಗ್ಯ.

೧೦) ಇದಕ್ಕೆ ರೋಗ ಮತ್ತು ಕೀಟಗಳ ಬಾಧೆ ಕಡಿಮೆ.

೧೧) ಸ್ಟಿವಿಯಾ ೪೫ ರಿಂದ ೮೦ ಸೆಂ.ಮೀ.ನಷ್ಟು ಎತ್ತರಕ್ಕೆ ಬೆಳೆಯಬಲ್ಲ ಸಸ್ಯ.

೧೨) ಗಿಡದಲ್ಲಿ ಬರುವ ಹೂವನ್ನು ಚಿವುಟಿದಲ್ಲಿ ಅದು ಪುನಃ ಪ್ರತಿಫಲ ಕೊಡಬಲ್ಲದು.

೧೩) ಒಂದು ಗಿಡ ೩ರಿಂದ ೫ವರ್ಷಗಳ ತನಕ ಪ್ರತಿಫಲ ನೀಡುವುದು.

೧೪) ನಾಟಿ ಮಾಡಿ ೫ ತಿಂಗಳುಗಳಲ್ಲಿ ಕೊಯ್ಲು ಸಾಧ್ಯ ಮತ್ತು ಪ್ರತಿ ೩ ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು.

೧೫) ಕೊಯ್ಲು ಮಾಡಿದ ಎಲೆಗಳನ್ನು ಸೂರ್ಯನ ಶಾಖದಲ್ಲಿ ಒಣಗಿಸಿ ಮಾರಾಟ ಮಾಡಬಹುದು.

೧೬) ಸ್ಟಿವಿಯಾದ ಎಲೆಗಳಿಂದ ದ್ರವ್ಯದ ತಯಾರಿಕೆ ಸಾಧ್ಯ. ಇದರ ಸಾರವನ್ನು ವಿವಿಧ ರೀತಿಯ ಆಹಾರ ಪದಾರ್ಥಗಳ ತಯಾರಿ, ಸಿಹಿ ತಿಂಡಿಗಳ ತಯಾರಿ , ಇತ್ಯಾದಿಗಳಿಗಾಗಿ ಬಳಸಲಾಗುವುದು.

೧೭) ಪ್ರಕೃತ ಜಪಾನಿನಲ್ಲಿ ಇದಕ್ಕೆ ಅತ್ಯಧಿಕ ಬೇಡಿಕೆಯಿದೆ.

೧೮) ಸ್ಟಿವಿಯಾದಲ್ಲಿ ಹಲವು ಔಷಧೀಯ ಗುಣಗಳಿದ್ದು ಇದರಿಂದ ರಕ್ತದೊತ್ತಡ, ಸಿಹಿ ಮೂತ್ರ ರೋಗ, ಗಾಯಗಳ ನೋವು, ಹಲ್ಲಿಗೆ ಬರುವ ಬ್ಯಾಕ್ಟೀರಿಯಾಗಳ ತೊಂದರೆ ಇತ್ಯಾದಿಗಳನ್ನು ನಿವಾರಿಸಲು ಸಾಧ್ಯವೆಂಬುದನ್ನು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ.

೧೯) ಪ್ರಕೃತ ಸ್ಟಿವಿಯಾದ ಒಣ ಎಲೆಗೆ ಕಿಲೋವೊಂದರ ರೂಪಾಯಿ ೨೦೦ರ ಧಾರಣೆಯಿದೆ. ಒಂದು ಎಕ್ರೆ ಸ್ಟಿವಿಯಾ ಕೃಷಿಯಲ್ಲಿ ಗರಿಷ್ಟ ೩೦೦೦ ಕಿಲೋ ಒಣ ಎಲೆಗಳನ್ನು ಗಳಿಸಬಹುದೆಂದು ಅಂದಾಜಿಸಲಾಗಿದೆ.

೨೦) ಅಧ್ಯಯನಗಳ ಪ್ರಕಾರ ಸಿಹಿ ಮೂತ್ರ ಯಾ ಮಧುಮೇಹಕ್ಕೆ ಸ್ಟಿವಿಯಾ ಒಂದು ಪರಿಣಾಮಕಾರಿ ಔಷಧ.

೨೧) ಭಾರತದಲ್ಲಿಂದು ಸುಮಾರು ೨೧ ಮಿಲಿಯ ಸಿಹಿ ಮೂತ್ರ ರೋಗಿಗಳಿದ್ದು ೨೦೧೯ಕ್ಕಾಗುವಾಗ ಇದು ೬೦ ಮಿಲಿಯ ತಲುಪಬಹುದೆಂದು ಅಂದಾಜಿಸಲಾಗಿದೆ. ಈ ದೃಷ್ಟಿಯಿಂದ ಸ್ಟಿವಿಯಾಕ್ಕೆ ಉಜ್ವಲ ಭವಿಷ್ಯವಿದೆ.

೨೨) ಸ್ಟಿವಿಯಾ ಒಂದು ಸ್ವಾಭಾವಿಕ ಸಿಹಿಕಾರಕವಾಗಿದ್ದು, ಇದು ಕ್ಯಾಲೋರಿ ರಹಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಇದಕ್ಕೆ ಅಧಿಕ ಬೇಡಿಕೆ ಸಾಧ್ಯ. ಈ ಬೇಡಿಕೆ ಸ್ಟಿವಿಯಾದ ಬಿಳಿಹರಳು ಸಾರ ಇತ್ಯಾದಿಗಳ ರೂಪದಲ್ಲಿರಬಹುದು.

೨೩) ಕಂಗೆಟ್ಟ ಕೃಷಿಕರಿಗೆ ಇದೊಂದು ವರದಾನವಾಗಲು ಸಾಧ್ಯ. 

ಅನುಬಂಧ

ಸ್ಟಿವಿಯಾ ಕೃಷಿಗೆ ತಗಲಬಹುದಾದ ಅಂದಾಜು ವೆಚ್ಚ ಮತ್ತು ಗಳಿಸಬಹುದಾದ ಅಂದಾಜು ಆದಾಯ

(ಎಕರೆಯೊಂದರ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ / ವಿವರಗಳು ೧ನೇ ವರ್ಷ ೨ನೇ ವರ್ಷ ೩ನೆ ವರ್ಷ
ವೆಚ್ಚ
೧. ೩೦ ಸಾವಿರ ಗಿಡಗಳಿಗೆ (ಗಿಡವೊಂದರ ರೂ. ೮ ರಂತೆ)

೨,೪೦,೦೦೦

೨. ಸಾಗಣಿ ವೆಚ್ಚ

೬,೦೦೦

೩. ಭೂಮಿಯನ್ನು ತಯಾರುಗೊಳಿಸಲು

೧,೦೦೦

೪. ದಿಣ್ಣೆಗಳ ಸಾಲಿಗಾಗಿ

೭೫೦

೫. ಸಾವಯವ ಗೊಬ್ಬರ ೨೫ ಟನ್‌ (೭೫೦/೧ನ್‌)

೧೯,೭೫೦

೧೯೭೫೦

೧೯೭೫೦

೬. ಗಿಡಗಳ ನಾಟಿ

೧,೬೦೦

೭. ಮಧ್ಯದಲ್ಲಿ ನಾಟಿಗಾಗಿ

೧೫,೦೦೦

೧೫,೦೦೦

೮. ನೀರಾವರಿ

೩,೭೫೦

೩,೭೫೦

೩,೭೫೦

೯. ಮೈಕ್ರೋಸ್ಪ್ರಿಂಕ್ಲರ್

೩೦,೦೦೦

೧೦. ರಸಗೊಬ್ಬರ

೪,೫೦೦

೪,೫೦೦

೪,೫೦೦

೧೧. ಗಿಡಗಳ ರಕ್ಷಣೆ

೧,೦೦೦

೧,೦೦೦

೧,೦೦೦

೧೨. ಕಳೆ ನಿಯಂತ್ರಣ

೪,೦೦೦

೪,೦೦೦

೪,೦೦೦

೧೩. ಒಣಗಿಸಲು ಅಗತ್ಯವಿರುವ ಸಲಕರಣೆ

೧೫,೦೦೦

೧೪. ಕೊಯ್ಲು

೫,೦೦೦

೫,೦೦೦

೫,೦೦೦

೧೫. ಒಣಗಿಸಲು ಮತ್ತಿತರೆ ಕೊಯ್ಲೊತ್ತರ

೫,೦೦೦

೫,೦೦೦

೫,೦೦೦

೧೬. ಮೇಲ್ವಿಚಾರಣೆ

೧೮,೦೦೦

೧೮,೦೦೦

೧೮,೦೦೦

೧೭. ಅನಿಶ್ಚಿತ ವೆಚ್ಚ

೨,೦೦೦

೫,೦೦೦

೫,೦೦೦

೧೮. ಒಟ್ಟು ವೆಚ್ಚ

೩,೫೭,೩೫೦

೮೧,೦೦೦

೮೧,೦೦೦

ಆದಾಯ
೧. ಮೊದಲ ವರ್ಷ ೨೭೦೦ ಕಿಲೊ ಒಣ ಎಲೆ X ರೂ. ೨೦೦

೫,೪೦,೦೦೦

೫,೪೦,೦೦೦

೫,೪೦,೦೦೦

೨. ಎರಡನೆ ವರ್ಷ ೨೭೦೦ X ೨೦೦
೩. ಮೂರನೆ ವರ್ಷ ೨೭೦೦ X ೨೦೦
ಒಟ್ಟು ಆದಾಯ

೧೬,೨೦,೦೦೦

ಲಾಭಾಂಶ
೧. ಒಟ್ಟು ಆದಾಯ ( ೩ ವರ್ಷಗಳಲ್ಲಿ)

೧೬,೨೦,೦೦೦

೨. ಒಟ್ಟು ವೆಚ್ಚ (೩ ವರ್ಷಗಳಲ್ಲಿ)

೫,೧೯,೩೫೦

ನಿವ್ವಳ ಲಾಭ

೧೧,೦೦,೬೫೦

 ಅನುಬಂಧ ೨: ಸ್ಟಿವಿಯಾ ಗಿಡಗಳ ಪೂರೈಕೆದಾರರು (ಅಧಿಕ ಪ್ರಮಾಣದಲ್ಲಿ)

1) ASR Nurseries
29, Sarakki Main Road
J.P. Nagar, Bangalore-560078.

2) Director
Growmore Biotech Ltd.
41-B SIPCOT Phase -II
Hosur-635109, Tamil Nadu

3) K.R. Agro Farms
Ram Gopal Pet, M.G. Road
Hyderabad – 500003.

4) Green Agri Biotech
402, Ratna Complex
Besidr Image Hospital
Ameepert, Hyderbad- 560016.

5) Evergreen Farms
624, 11th Cross, 6th Main Road
BTM Layout, 2nd Stage,
Bangalore – 560076.

6) Samyuck
27, Central Excise Colony
Hospital Road
Saidapet,
Chennai-600015. 

ಅನುಬಂಧ೩: ಸ್ಟಿವಿಯಾದ ವ್ಯಾಪಾರ ಕೈಗೊಳ್ಳುತ್ತಿರುವ ಸಂಸ್ಥೆಗಳು

1) Kalyan Drugs & Intermediates
99/2 RT. S.R. Nagar Play ground
Sanjeeva Reddy Nagar
Hyderabad-500038.

2) Chennai Natural Products
5/65, Butt Road
Chennai – 600016.

3) Holy Childs Educational Association
657, Anganiya Layout
Davangere-577004
Davanagere-577004. Karnataka.

4) Herbal Inc.
114, Kottur Manor
4th Main Road Extension
Kottur Gardens
Chennai-600095.

5) Saroj Agro
Shambika Path
New Dillan
Sasaram-821307.

6) Jayalaxmi Industries
3A, E And Industrial Estate
Hosur-635109.

7) Herbex
5/581 A, Rajiv Gandhi Nagar
Karamdai Road
Behind CTC Mettupalayam-641301.

8) Sediyapu Agro Sales

Puttur D.K. 574201, Karnataka.
Ph: 08251-232728

ಅನುಬಂಧ೪: ಸ್ಟಿವಿಯಾ ಕೃಷಿಯಲ್ಲಿ ಗೋವಿಂದರಾಜರ ಅನುಭವ
ಎರಡು ವರ್ಷಗಳ ಹಿಂದೆ ಸ್ಟಿವಿಯಾ ಕೃಷಿಗಿಳಲಿದ ಅಂಡೆಪುಣಿ ಗೋವಿಂದ ರಾಜರಿಂದು ಈ ಬೆಳೇಯ ಬಗ್ಗೆ ಖಚಿತಾಭಿಪ್ರಾಯ ನೀಡಬಲ್ಲ ಸಾಹಸಿ ಯುವಕ. ಹೊಸದಾಗಿ ಸ್ಟಿವಿಯಾ ಕೃಷಿಗಿಳಿಯುವ ಕೃಷಿಕರಿಂದು ಇವರ ಸ್ಟಿವಿಯಾ ಕೃಷಿಯನ್ನು ನೋಡಲೇಬೇಕು.

ಇವರ ಅನುಭವ ಪ್ರಕಾರ ಸ್ಟಿವಿಯಾದ ಗಿಡ ನಾಡಿ ಮಾಡಿದ ಏಳನೇ ದಿನಕ್ಕೆ ಎಕ್ರೆಯೊಂದರ ೨೦೦ಲೀ ನೀರಿಗೆ ನಾಲ್ಕು ಬುಟ್ಟಿ ಸೆಗಣಿ ಮತ್ತು ೬ ಕಿಲೋ ನೆಲಗಡೆಲೆ ಹಿಂಡಿಯ ಮಿಶ್ರಣವನ್ನು ಹಾಕಿ ನೀರು ಮಾಡಿ ಗಿಡಕ್ಕೆ ಉಣಿಸಬೇಕು. ಈ ರೀತಿಯ ಉಣಿಸುವಿಕೆ ವಾರಕ್ಕೊಮ್ಮೆ ಆಗುತ್ತಿದ್ದಲ್ಲಿ ಇದರ ಬೆಳವಣಿಗೆ ಉತ್ತಮ ಮಟ್ಟದ್ದಾಗಿರುತ್ತದೆ.

ಇವರು ಕಂಡಂತೆ ಸ್ಟಿವಿಯಾ ಗಿಡಕ್ಕೆ ಫಂಗಸ್‌, ಅರಸಿನ ಮತ್ತು ಚುಕ್ಕೆ ರೋಗಗಳಿವೆ. ಇದರ ಹತೋಟಿಗೆ ಡಯಾಥಿನ್‌ M-45, ಫಂಗಿಸೈಡ್‌ ಚಿಮುಕಿಸುವಿಕೆ ಆಗಬೇಕು.

ಸ್ಟಿವಿಯಾದ ಕೊಯ್ಲಿನ ವಿಚಾರದಲ್ಲಿ ಇವರ ಪ್ರಕಾರ ಗಿಡ ನೆಟ್ಟು ಪ್ರತಿ ೧೪ ದಿನಗಳಿಗೊಮ್ಮೆ ಸಾಧ್ಯ. ಈ ಕೊಯ್ಲು ಹೂ ಬರುವುದಕ್ಕಿಂತ ಮೊದಲಾಗಬೇಕು. ೧೪ನೇ ದಿನ ಕೊಯ್ಲು ಮಾಡುವಾಗ ಗಿಡದ ೨ ಗಂಟುದ ಬಿಟ್ಟು, ೨೮ ದಿನಕ್ಕಾಗುವಾಗ ೧ ಗಂಟು ಬಿಟ್ಟು ಕೊಯ್ಲು ಆಗಬೇಕು. ೧ನೇ ಕೊಯ್ಲಿನಲ್ಲಿ ೧ ರೆಂಬೆ, ೨ ರಲ್ಲಿ ಲ೪, ೩ ರಲ್ಲಿ ೮, ೪ ರಲ್ಲಿ ೧೬,ಲ೫ ರಲ್ಲಿ ೩೨ ಮತ್ತು ೬ಕ್ಕಾಗುವಾಗ ೬೪ ರೆಂಬೆಗಳ ಕೊಯ್ಲು ಮಾಡಿದ ಅನುಭವ ಇವರದ್ದು. ಈ ಕೊಯ್ಲು ಕತ್ತರಿಯ ಮೂಲಕ ಆದಲ್ಲಿ ಉತ್ತಮ.

ಇವರಲ್ಲಿ ಸ್ಟಿವಿಯಾ ಗಿಡಗಳು ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯ. ಆಸಕ್ತರಿಗಾಗಿ ದರ ಪಟ್ಟಿ ಕೆಳಗೆ ಕೊಡಲಾಗಿದೆ.

ಗಿಡಗಳ ಸಂಖ್ಯೆ ರೂ./ಗಿಡವೊಂದರ
೧೦೦ ರೊಳಗೆ ೧೦-೦೦
೨,೦೦೦ ದೊಳಗೆ ೮-೦೦
೨೫,೦೦೦ ದೊಳಗೆ ೬-೦೦
೨೫,೦೦೦ ದ ಮೇಲೆ ೩-೦೦

ಗಿಡಗಳ ಬಗ್ಗೆ ಆಸಕ್ತಿಯಿರುವವರು ಮುಂಗಡವಾಗಿ ಶೇಕಡಾ ೨೫ನ್ನು ಪಾವತಿಸಬೇಕು.

ವಿಳಾಸ: ಶ್ರೀ ಗೋವಿಂದ ರಾಜ್.
ಅಂಡೆಪುಣಿ ಮನೆ, ಅಂಚೆ ಮತ್ತು ಗ್ರಾಮ ಪಡ್ನೂರು-೫೭೪೨೨೦
ದೂರವಾಣಿ: (೦೮೨೫೧) ೨೩೪೨೧೧

One reply on “ಸ್ಟಿವಿಯಾ”

ವಲಸೆ ಬಂದ ಭಾರತೀಯ ಮೂಲದ ಗೌರಾನಿ ಜನ ಎಂದು ತಪ್ಪು ಬರೆದಿದ್ದೀರಿ, ಅದು ಅಮೆರಿಕದ ಮೂಲನಿವಾಸಿಗಳಾದ ರೆಡ್ ಇಂಡಿಯನ್ ಮೂಲದ ಎಂದಿರಬೇಕು. ಅವರು ಈ ಗಿಡವನ್ನು ಸುಮಾರು ೧೫೦೦ ವರ್ಷಗಳಿಂದಲೂ ಬಳಸುತ್ತಿದ್ದಾರೆ.