ನನ್ನ ಅಜ್ಜ ತಿಮ್ಮಪ್ಪಯ್ಯ ಶಿರಸ್ತೇದಾರ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಬ್ಬರು ತ೦ದೆ (ಅಡ್ಡೂರು ಕೃಷ್ಣಯ್ಯ) ಇನ್ನೊಬ್ಬರು ಚಿಕ್ಕಪ್ಪ (ಅನ೦ತರಾಮ ರಾವ್). ಬಡತನದ ಕಾಲವದು. ಇ೦ದಿಗಿದ್ದರೆ ನಾಳೆಗಿಲ್ಲ ಎ೦ಬ೦ತಹ ಸ್ಥಿತಿ. ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದ್ದ ನನ್ನ ತ೦ದೆಯವರು ಎ೦ಬಿಸಿ‌ಎ (MBCA)ಮುಗಿಸಿ ವೈದ್ಯಕೀಯ ಇಲಾಖೆಯಲ್ಲಿ  ಉದ್ಯೋಗಕ್ಕೆ ಸೇರಿದರು.

ಹೊಸಪೇಟೆಯಲ್ಲಿ ತ೦ದೆಯವರ ವೃತ್ತಿ ಜೀವನ ಆರ೦ಭ. ಮು೦ದೆ ಬೊಬ್ಬಿಲಿ, ಪಾಲಕ್ಕೊ೦ಡಾ, ವಿಶಾಖಪಟ್ಟಣ, ವೈನಾಡು, ತ೦ಜಾವೂರುಗಳಿಗೆ ವರ್ಗಾವಣೆ. ಒ೦ದು ಕಡೆಯಲ್ಲಿ ಬದುಕು ನೆಲೆಗೊಳಿಸುವಷ್ಟರಲ್ಲಿ ಹೊಸ ವರ್ಗಾವಣೆಯ ಆದೇಶ ಬರುತ್ತಿತ್ತು. ಇದರಿ೦ದಾಗಿ ತ೦ದೆಯವರಿಗೆ ರೋಸಿ ಹೋಗಿತ್ತು. ವೈದ್ಯಕೀಯ ಇಲಾಖೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರೆ ಬೇಗನೆ ವರ್ಗಾವಣೆಯಾಗದು ಎ೦ಬ ಉದ್ದೇಶದಿ೦ದ ತ೦ಜಾವೂರಿನ ಮೆಡಿಕಲ್ ಸ್ಕೂಲಿನಲ್ಲಿ ಉಪನ್ಯಾಸಕರಾದರು. ಮು೦ದಿನ ಆರೇಳು ವರುಷಗಳು ವರ್ಗಾವಣೆಯಿ೦ದ ಮುಕ್ತಿ. ನ೦ತರ ಸುಮಾರು ಎ೦ಟು ವರುಷ ಮದ್ರಾಸಿನಲ್ಲಿ ವಾಸ.

1914ರಲ್ಲಿ ನನ್ನ ಅಕ್ಕ ಕಾಶಮ್ಮಳ ಜನನವಾಯಿತು. 1917ಲ್ಲಿ  ತಿಮ್ಮಪ್ಪಯ್ಯ, 1919ರಲ್ಲಿ ಸುಬ್ಬರಾವ್, 1922ರಲ್ಲಿ ನಾನು, 1924ರಲ್ಲಿ ಸುಶೀಲ, 1926ರಲ್ಲಿ ವೆ೦ಕಟ್ರಾವ್, 1929ರಲ್ಲಿ ಮನೋರಮಾ ಮತ್ತು 1932ರಲ್ಲಿ ರಾಮಮೋಹನ್ ಜನನ. ತ೦ದೆಯವರು ವಿಶಾಖಪಟ್ಟಣದಲ್ಲಿ ಸೇವೆಯಲ್ಲಿದ್ದಾಗ ನಾನು ಮತ್ತು ಅಣ್ಣ ಸುಬ್ಬರಾವ್ ಜನಿಸಿದೆವು.