. ಇಮಾಮ ಹುಸೇನ ಮತ್ತು ಅಸ್ಗರ ಅಲಿ ಪದಾ

ಇಮಾಮ ಹುಸೇನಿ ತನ್ನ ಮಗನೀಗಾ
ತಗೊಂಡು ಹೋದನು ನೀರ ಹೋಳಿಮ್ಯಾಗಾ || ಪಲ್ಲವಿ ||

ಹೋಗಿ ಕೇಳತಾನಯಜೀದಗಾ
ಮೂರು ದಿವಸಾತು ನೀರಿಲ್ಲೋ ಇವಗಾ
ನೀರ ಕೊಡರಿ ತುಸು ಕೂಸಿಗಾ
ಜೀವ ಹೋಗತದರಿ ಈ ಚಣಚಾಗ || ೧ ||

ಸಣ್ಣ ಕೂಸ ಇದು ಎಲ್ಲರಿಗಾ
ತಿಳಿಯಿರಿ ನಿಮ್ಮ ಹೊಟ್ಟಿಲಿ ಹುಟ್ಟಿದಂಗಾ
ಬೇಕಾದಷ್ಟು ಮಾಡರಿ ನಮಗಾ
ಉಳಿಸಿ ಕೊಳ್ಳರಿ ಈ ಕೂಸಿಗಾ
ಕುಡಸೇನಂದರ ತಾಯಿ ಎದಿಯಾಗ
ಹಾಲಿಲ್ದೆ ಹೆಂತಾಹೊತ್ಬಂತೊ ನಮಗಾ || ೨ ||

ಕರುಣಾ ಬರಲಿಲ್ಲೊ ಯಜೀದಗಾ
ಹುಕಂ ಕೊಟ್ಟಾನೊ ತನ್ನ ದಂಡಿಗಾ
ವೈರಿ ಬಂದ ನಿಂತಾ ಎದುರಿಗಾ
ನೀರ ಕೊಡಬ್ಯಾಡ ಅಂತಾನೊ ಇವಗಾ
ಇಂಥ ಶಬ್ದಾ ಕೇಳಿ ಆ ಸ್ವಾಮೀಗಾ
ಗುಂಡು ಬಡಿದಂಗಾಯಿತ್ರಿ ಅವನ ಎದಿಯಾಗಾ || ೩ ||

ನೀರು ತಂದಿದಾನೊ ಕಣ್ಣೀರಾ
ನೋಡಿ ಅಂತಾನೊ ಸ್ವಾಮಿ ಮುಗಿಲಿಗಾ
ಹೆಂತ ಹೊತ್ತು ಬಂತರಿ ನಮಗಾ
ನೋಡಿ ಮಿಡುಕಿದೆವೋ ನೀರಿಗಾ
ಮುದ್ದತ್ತ ಆಗೊ ಈ ಹೊತ್ತಿಗಾ
ತ್ವಾಡೆ ನೀರ ಚೆಲ್ಲೊ ಕರ್ಬಲದಾಗಾ || ೪ ||

ಮುಗುಲ ಹೇಳತಾದೊ ಸ್ವಾಮಿಗಾ
ಮೀರುದಿಲ್ಲೋ ನಿಮ್ಮ ವಚನ ಈಗಾ
ಕರಕೊಂಡು ಒಯ್ದಾ ಶಿವನ ಎದುರಿಗಾ
ಮೋಹರಂ ಚಾಂದ ನೋಡಿದ ಮ್ಯಾಗಾ
ನೀರಚಲ್ಲೊ ಕರ್ಬಲದಾಗಾ
ಲಾಚೇರ ಆಗಿನಿ ಮಾಡಲಿ ಹ್ಯಾಂಗಾ || ೫ ||

ಇಮಾಮ ಹುಸೇನಿ ತನ್ನ ಬೆರಳಿಗಾ
ಕೊಟ್ಟಾನೊ ಅಸ್ಗರಗ ಬಾಯಾಗಾ
ಯಜೀದ ಬಾಣಾ ಹೊಡಿವಾಗಾ
ಹತ್ತಿತೋ ಕೂಸಿನ ಕೊರಳಿಗಾ
ಒಂದೇ ಗಟಗದಲ್ಲಿ ಆವಾಗ
ಜೀವಬಿಟ್ಟ ತಂದಿ ಸ್ವಾಮಿ ಬಗಲಾಗಾ || ೬ ||

ಇಮಾಮ ಹುಸೇನಿ ಸತ್ತ ಕೂಸೀಗ
ಒಯ್ದು ಕೊಟ್ಟಾನೊ ತನ್ನ ತಂಗೀಗಾ
ನೇತ್ತರ ಹತ್ತಿತೊ ಅವನ ಅಂಗಿಗಾ
ನೋಡಿ ಬವಳಿ ಬಂತೊ ಬೀಬಿಗಾ
ಎದಿ ಬಡದು ಕೇಳತಾಳೊ ಅಣ್ಣಗಾ
ಏನಾಗಿತ್ತೊ ಕೂಸಿನ ಕೊರಳಿಗಾ || ೭ ||

ಸುದ್ದಿ ಮುಟ್ಟಿತೊ ಹೋಗಿ ತಾಯಿಗಾ
ಓಡಿ ಬಂದಾಳೋ ಅರುವಿಲ್ಲದಾಂಗಾ
ನೋಡತಾಳ ಮಗನ ಮಾರಿಗಾ
ಉಸರ ಇಲ್ಲೊ ಕೈಕಾಲಾಗಾ
ಎದಿ ಒಡದು ಕೇಳತಾಳೋ ಗಂಡಗಾ
ಬಹಳ ಜ್ವಾಕಿಲಿಂದೆ ಹೇಳಿದ್ದೆ ನಿಮ್ಮಗಾ || ೮ ||

ಯಾವ ಹೊಡದಾನೊ ಎನ್ನ ಬಾಲಕಗಾ
ಮಮತೆ ಇಲ್ಲೇನೊ ಅವನ ಹೊಟ್ಯಾಗಾ |
ನಾಳೆ ಶಿವನಲ್ಲಿ ಹೋದಾಗಾ
ಇದರ ಜವಾಬ ಕೊಡತಾನೊ ಹ್ಯಾಗಾ |
ಹೋಗಿ ಕೇಳತೇನಿ ಶಿವನೀಗಾ
ಹೊಡದಾರೊ ನನ್ನ ಸಣ್ಣ ಶಿಶಿವಿಗಾ || ೯ ||

ಆರು ತಿಂಗಳ ನನ್ನ ಅಸ್ಗರಗಾ
ತೂಗುತ್ತಿದ್ದೆ ತೊಟ್ಟಿಲದಾಗಾ
ರಾತ್ರಿ ಹಗಲು ನಾ ಇವನೀಗಾ
ಎತಗೊಂಡು ತಿರುಗಿದೆ ಬಗಲಾಗಾ
ತೆಲಿ ಬಡಿದು ಸಾಯ್ತೇನಿನಾಗುಡಿಗಾ
ಬಹಳ ಬೆಂಕಿ ಬಿದ್ದಾದ ನನ್ನ ಹೊಟ್ಯಾಗಾ || ೧೦ ||

ಹಾಲ ಬಂದಾವ ನನ್ನ ಎದಿಯಾಗಾ
ಹೋಗಿ ಕುಡಿಸಲಿ ಇನ್ಯಾರಿಗಾ
ಮುತ್ತಿನಂತ ಈ ಬಾಲಾಗಾ
ಹ್ಯಾಂಗ ಇಡಬೇಕೋ ಮಣ್ಣಾಗಾ
ಮುದ್ದ ಕೊಡುತ್ತಿದ್ದೆನೊ ಶಿಶುವಿಗಾ
ಕೂಸಿಲ್ಲದೆ ಯಾಳೆಗಳಿಯಲಿ ಹ್ಯಾಂಗಾ || ೧೧ ||

ಕೇಳರಿ ಮಾಗಾಂವ ತಾಲೂಕದಾಗ
ಬೇವನೂರ ಹೆಸರು ದೇಶದ ಮ್ಯಾಗಾ
ಮೌಲಾಲಿ ಸಾಹೇಬ ಮತಿ ಕೊಟ್ಟ ನಮಗಾ
ಕುಂತ ಕುತಬಿ ಕಟ್ಟಿಯ ಮ್ಯಾಗಾ
ಕಾಕಿ ಗುರುವು ಹೇಳಿದ ಹೀಂಗಾ
ಬಾಳ ಜುಲ್ಮಿ ಮಾಡ್ಯಾರ ಶರಣರ ಮ್ಯಾಗಾ || ೧೨ ||

* * *

ಅಕಬರ ಅಲಿ ಜಂಗಿನ ಪದಾ

ಅಕಬರ ಅಲಿ ಸಣ್ಣ ಕೂಸಿನ ಜಂಗ ಕೇಳರಿ ನಿರ್ಮಲಾ
ಹಾ ಹಾ ಒಂಬತ್ತು ವರ್ಷದವ ಜಂಗಿಗೆ ಹೋದೇನಂತಾನಾ ಕೇಳವಲ್ಲಾ |
ಹಟಮಾಡಿ ನಿಂತಾನಾ ಸಣ್ಣ ಬಾಲಾ ತಾಯಿ ಮಾತ ಕೇಳವಲ್ಲಾ || ೧ ||

ತಾಯಿ ಅಂತಾಳೋ ನನ್ನ ಮಾತು ಮೀರಿದರ ಏನು ಫಲವಿಲ್ಲಾ |
ತಾಯಿಯ ಪಾದದ ಮೇಲಾ ಇಟ್ಟಾನೊ ಹಣೆಯ ರಣಕಮಲಾ ||
ಕೈಯವೊಳಗ ಹಿಡಿದಾನೊ ಬಾಣಬಿಲ್ಲಾ | ಬೆನ್ನ ಮೇಲೆ ಹಚ್ಚಿದ ತ್ರಿಶೂಲಾ || ೨ ||

ಯಜೀದ ಮರವಾನಾ ಮದದಾಗ ಅಂತಾನ ವಹಾವಾರೆ ಇವನ ಡೌಲಾ ||
ಯಜೀದ ಬಂದು ಎದುರಿಗೆ ನಿಂತಾರ ಮಾಡಿ ಎದಿಯ ಕಲ್ಲಾ ||
ಅಕಬರ ಹಿಡಿದಾನೋ ಡೌಲಾ | ಏಟಿಗೊಂದು ಮಾಡಿದ ಮಣ್ಣು ಪಾಲಾ || ೩ ||

ಹುಸೇನ ಸಾಹೇಬಾ ತನ್ನ ಮಗನಿಗೆ ಹೇಳತಾನೋ ಬ್ಯಾಡೋ ಕರ್ಬಲಾ |
ಜೈನುಲ್ಲಾಬೇದೀನ ಅಂದರೋ ಅಕಬರ ಆದ ಅಡವಿ  ಪಾಲಾ |
ಕುಡಿಯಲಿಕ್ಕ ನೀರ ಸಿಗೋಣಿಲ್ಲಾ | ಕುಂದರಲಾಕ ನೆರಳೆ ಇರಲಿಲ್ಲಾ  || ೪ ||

ಆಕಾಶ ಭೂಮಿ ತರತರ ನಡಗಿ ಎರಗಿದಂಗ ಸಿಡಿಲಾ ||
ಎಷ್ಟಂತ ತಾಳಿತೋ ಕೂಸಿನ ಜನ್ಮ ಶಿವ ಮುನಿದನಲ್ಲಾ |
ಅದೇ ಕ್ಷಣಕ ಬಿದ್ದಿತ್ತೊ ಕತ್ತಲಾ | ಮುಣಗಿದಂಗ ಆದಿತ್ತೊ ಹರಗೋಲಾ || ೫ ||

ಶುಮರಲೈನಾ ತರಿಸಿದಲೈನಾ ಲೆಕ್ಕವಿದ್ದಿದ್ದಿಲ್ಲಾ |
ಹಾ ಹಾ | ಬಾಗಲಕೋಟೆ ಮಡ್ಡಿಪೀರಾನ ದಾರಿ ತಿಳಿದಿತ್ತೊ ಅಸಲಾ
ಕುಂತ ಜನ ಕೇಳತಾರೋ ಕುಸಿಯಾಲಾ | ಹುಸೇನಮಿಯ್ಯಾ ತಗದಿದ್ದ ಈ ಅಕಲಾ || ೬ ||

ಯಾವ ನಿನಗ ಸರ್ವಸಾಕ್ಷಾತ್ ಗುರುವು ಸಿಕ್ಕಿಲ್ಲಾ ಅರುವು ಹೇಳುದಕ
ಪಾದಹಿಡಿ ಗುರುಬೇದ ಹೇಳತೀನಿ ಆದ ಕೌತೂಕ
ಜಿದ್ದ ಹಾಕಬೇಡ ಉದ್ದ ನೀರಿಗೆ ಬಿದ್ದ ಸಾಯುದಕ || ೭ ||

* * *

ಅಸ್ಗರಲಿ ತಾಯಿಯ ದುಃಖದ ಪದಾ

ದೈವಾ ಕೇಳರಿ ಇದು ಕತಿ ಒಂದಾ |
ಹೇಳತೀನಿ ದುಃಖಾ ಹೆಚ್ಚಿಂದಾ || ಪಲ್ಲವಿ ||
ಬಡಿತೋ ಬಾಣಾ ಹೋಯಿತೋ ಪ್ರಾಣಾ ಅಸ್ಗರಂದಾ
ತಾಯಿ ಓಡಿ ಓಡಿ ಓಡಿ ಓಡಿ ಓಡಿ ಬಂದಾ
ಮಣ್ಣ ತೂರಿ ಕಬರಾ ಹಾರಿ ಮ್ಯಾಲ ಬಿದ್ದಾ
ದುಃಖ ಮಾಡಿ ಅಳತಾಳೊ ಹಾಯ್ ಹಾಯ್ ಕಂದಾ || ೧ ||

ನಾನಾ ಪರಿಲಿಂದ ಸಲುವಿದ ಕಂದಾ
ನ್ಯಾಯವೇನು ಅಗಲಿ ಹೋಗುವದಾ ||
ತಿಳಿಯಲಿಲ್ಲೊ ಮುಂದಿನಗತಿ ಆಗುವದಾ |
ಬಂತೊ ಮಾಯಾ ಮಾಯಾ ಮಾಯಾ ಮಾಯಾ ಮಾಯಾ ಲಿಂದಾ ||
ಹೊತ್ತು ಹೆಂಗ ಕಳಿಯಲಿ ಕೂಸಿಲ್ಲದಾ
ವ್ಯರ್ಥ ಸಾಯತೇನಿ ಮಗ ಎದಿ ಬಡದಾ || ೨ ||

ನೋಡೋ ಅಸ್ಗರ ತುಸು ಕಣ್ಣ ತೆರಿದಾ |
ನಾ ಏನ ಅಂದಿಲ್ಲೊ ಮಲಗಿದಿ ಮುನಿದಾ ||
ಬಹಳ ಹೊತ್ತಾಯಿತು ಮಲಿ ಕುಡಿವಲ್ಲದಾ |
ಲಗು ಏಳೋ ಏಳೋ ಏಳೋ ಏಳೋ ಏಳೋ ಕಂದಾ ||
ಕಣ್ಮುಚ್ಚಿ ಮಲಗಿದಿ ಕುದ್ಯಾವಿಲ್ಲದಾ |
ಇದು ಎನ್ನ ಜೀವಕೆ ಅತಿಯಾದುದಾ || ೩ ||

ಅಂಗಿ ಟೊಪ್ಪಿಗಿ ತಂದೇನಿ ಕಂದಾ ಮಕಮಲ್ಲದಾ
ಇದು ಯಾರಿಗಿ ಒಯ್ದು ತೊಡಿಸಲಿ ಒಗದಾ ||
ಹಾಲ್ಗಡಗಾ ಒಪ್ಪುತ್ತಾವೊ ಬಹಳ ಚಂದಾ |
ಬಿಟ್ಟು ಹ್ವಾದೆ, ಹ್ವಾದೆ ಹ್ವಾದೆ ಹ್ವಾದೆ ಹ್ವಾದೆ ಹ್ವಾದೆ ಗೆದ್ದಾ
ಸಾರ್ಥಕ ಆಗಲಿಲ್ಲ ಹುಟ್ಟಿ ಬಂದಾ
ಇಷ್ಟೇ ಬಂದಿದ್ದೇನು ಶಿವನಲ್ಲಿ ಪಡದಾ  || ೪ ||

ಆರು ತಿಂಗಳ ಉಮರ ನಿಂದಾ |
ರೂಪ ನೋಡಿದಾರದೊ ಏನ ಚಂದಾ
ಹಲಬುತ್ತಾರೊ ನಿಂತು ಎಲ್ಲರೂ ಬಂದಾ
ಮಾತು ಆಡೋ ಆಡೋ ಆಡೋ ಆಡೋ ಆಡೋ ಕಂದಾ
ಬಾಯಿಮುಚ್ಚಿ ಮಲಗಿದಿ ಮುಂದ ಗಪ್ಹೊಡದಾ |
ನನಗ್ಯಾಕೋ ಬರಲಿಲ್ಲೊ ನಿನ್ನ ಪಾಲಿಂದಾ || ೫ ||

ಎಲ್ಲಿ ಬೀಸಾಕಲಿ ತೊಟ್ಟಿಲ ಒಯ್ದು |
ಮಲಿಹಾಲ ಯಾರ ಕುಡಿದಾರೊ ಬಂದಾ ||
ಯಾರಿಗೆ ಕರಿಯಲಿ ಅಸ್ಗರ ಎಂದಾ
ಲಗು ಬಾರೋ ಬಾರೋ ಬಾರೋ ಬಾರೋ ಬಾರೋ ಕಂದಾ
ಮರ್ತ್ಯದೊಳಗ ನೀನು ಹುಟ್ಟಿ ಬಂದಾ
ಬಿಟ್ಟು ಹೋಗಿ ಕುತಿದ್ದೋ ನಿನ್ನ ಮುತ್ಯಾನ ಮುಂದಾ || || ೬ ||

ದೇವನೂರ ಊರ ಮರ್ತ್ಯಕ ಬೆಳದಾ | ಕುಂತಾರಿ ಮೌಲಾಲಿ ದಯದಿಂದಾ
ಆಗುತ್ತದೋ ಮೊಹರಂ ಇಲ್ಲಿ ಬಾಳ ಚಂದಾ ||
ಒಳ್ಳೆ ದುಂದಾ ದುಂದಾ ದುಂದಾ ದುಂದಾ ದುಂದಾ ಲಿಂದಾ |
ಮುತ್ತು ಪೋಣಿಸಿದಂಗೆ ಅಕ್ಷರ ಸುದ್ದಾ || ೭ ||

* * *

೧೦. ಬಾನುಬೀಯ ದುಃಖದ ಪದಾ

ಬಾನುಬೀ ಅಳತಾಳೊ ಅಲಿ ಅಸ್ಗರ
ಹ್ಯಾಂಗೆ ಮರಿಯಾಲೆ ಮಗನೆ ನಿನ್ನ ಹೆಸರ
ಹೆಂತ ಹೊತ್ತು ಬಂದಿತೋ ಮಗನೆ ಕೆಟ್ಟ ಗ್ರಾಚಾರ
ಏನು ಮಾಡಲಿ ನಾನು  ಚಲುವ ಸುಂದರ || ೧ ||

ಮದೀನಾದಲ್ಲಿ ಹುಟ್ಟಿದಿ ಮಗನೆ ರೂಪದಲ್ಲಿ ಸುಂದರ
ಆರು ತಿಂಗಳು ಆಗಲಿಲ್ಲೊ ಮಗನೆ ಬಂದಿತ್ತೊ ಅತಂತರ
ಯಜೀದ ಖೋಡಿ  ಅಬ್ದುಲ್ಲಾನು ಬರೆದಿದ್ದಾ ಪತ್ತರ
ನೆಂಬಿಗಿಟ್ಟು ದಂಡು ದರಬಾರ ಮಡದ್ಹೋಯ್ತು ಸಿಂತರ || ೨ ||

ಕರ್ಬಲಂಬುದು ಆಗೇದ ಅಡವಿ ಕೆಟ್ಟ ಕಾಂತರ
ಎಪ್ಪತ್ತಗಾವುದ ಸೂತರಿಲ್ಲದೆ ಹುಸನೈನಾ ಮಂತರ
ಒಂಟಿ ಕುದರಿ ದಂಡು ದರಬಾರ ಹಾರಿತ್ತೊ ಎಚ್ಚರ
ಕಟಗಿ ಕಡಿದು ಡೇರ‍್ಯಾ ಹೊಡದಾರೊ ಗಿಡದಲ್ಲಿ ನೆತ್ತರ || ೩ ||

ಹತ್ತು ದಿನಾ ನೀರು ಇಲ್ಲದೆ ಆಗಿತ್ತೊ ಕತಂತರ
ಬಾಲನ ಸಲುವಾಗಿ ನೀರು ಬೇಡಿದರೆ ಕೊಡಲಿಲ್ಲೊ ಕಾಫೀರ
ಬಾಣಾ ಬಡದು ಗಂಟಲು ಒಡಿದು ಆಯಿತೋ ಚದುರ ಚದುರ
ನೀರ ಇಲ್ಲದೆ ನೆರೆದ ದಂಡು ಮಡಿದು ಹೋಯ್ತು ಜುಮ್ಮರ || ೪ ||

ನೀರ ಇಲ್ಲದೆ ನೆರೆದ ದಂಡು ಮಡಿದು ಹೋಯ್ತು ಜುಮ್ಮರ
ನನ್ನ ಕೊರಳಲ್ಲಿ ಕಟ್ಟಿದ ಮಂತರ ಹಾರಿಹೋಯ್ತು ಅತಂತರ
ಗಾಳಿಗೆ ಹಾರಿಹೋಯ್ತು ನನ್ನ ಜೀವದ ಮಂತರ
ಹೆಂತ ವನದೇಶಾ ಬಂದಿತ್ತೊ ಮಗನೆ ಹರಿಹರ ಶಂಕರಾ || ೫ ||

ಎತ್ತ ಹೋಗಿ ಹುಡಕಾಲಿ ಮಗನೆ ಬೆಳದಿಂಗಳ ಪುತ್ತರ
ದೈವದಲ್ಲಿ ಬಂದು ಮಡದಾ ಬಾಲಾ ಅಸ್ಗರಾ
ದಯಾಮಾಡಿ ಕಳವಿ ಕೊಡರಿ ಒಡ್ಡೇನೀ ಪದರಾ
ನನ್ನ ಪಂಜರದೊಳಗಿನ ಗಿಳಿಯು ಹಾರಿಹೋಯ್ತು ಬೆದರ || ೬ ||

ನನ್ನ ಪಾಲಿಗೆ ಮುಣುಗಿಹೋಯ್ತು ಬಿದಿಗಿಯಾ ಚಂದರ
ಮುತ್ತು ಹವಳಾ ಹರದು ಹೋಯ್ತು ನಿಂತೇವು ಅತಂತರ
ಎಲ್ಲಿ ಹೋಗಿ ಸಾಯಲಿ ಮಗನೆ ನಾನು ನಿರಂತರ
ಹುಲ್ಲಿನ ಹಾಸಿಗಿ ಮ್ಯಾಲೆ ಮಲಗುವನು ಬರೆದಿತ್ತೊಗಾರಂತರ || ೭ ||

ಕರ್ಬಲದೊಳಗ ಮದುವಿ ಆಗುವುದು ಬರೆದಿತ್ತೊ ನಕ್ಷತ್ತರ
ಮೊಹರಂ ತಿಂಗಳ ಗಮ್ಮ ಮಾಡುವುದು ಕೇಳರಿ ಕಾತಂತರ
ಸಿಣ್ಣೂರ ಒಳಗೆ ದಾಸಾ ಹುಸೇನಿ ಸಾಹೇಬ ಇರತಾನೋ ಕಿಂಕರ
ಕಾಕಿ ಗುರುವಿನ ಸೇವಾ ಮಾಡತೀವರಿ ನಾವು ವರ್ಷಾಂತರ || ೮ ||

* * *

೧೧. ಇಮಾಮ ಹುಸೇನರ ಆತ್ಮಾರ್ಪಣೆ

ಕೂಡಿರಿ ಬಂದ ಆನಂದಾ | ದಯಾ ಇರಲಿ ದೈವಾ ನಿಮ್ಮದಾ ||
ಏರು || ಬಂದೇನಿ ದೂರದಿಂದಾ | ಹಾಡುವೆ ಪ್ರೇಮದಿಂದಾ
ಸಂತೋಷದಿಂದಾ ಇಂದಾ | ಕುಂತ ಕೇಳರಿ ನೀವು ಚಂದಾ |
ಕರಜೋಡಿಸಿ ಬೇಡುವೆ ನಾ ಇಂದಾ | ಪ್ರೇಮ ಇರಲಿ ಅಣ್ಣಾ ನಿಮ್ಮದಾ || ೧ ||

ಇ|| ಹೇಳುವೆ ಬಯಾನ ನಾ ಒಂದಾ | ಚಿತ್ತವಿಟ್ಟು ಕೇಳರಿ ದೈವಾ ಮುಂದಾ
ದುಷ್ಟ ಯಜೀದ ವೃದ್ದಾ | ಹುಸೇನಗ ಮೋಸ ಮಾಡಿದಾ ||
ಶರಣರಿಗೆ ಪತ್ರ ಬರದಾ | ಕಲ್ಮಾ ಓದುವೆ ನಾನು ಇಂದ |
ದಯಮಾಡಿ ಬರಬೇಕರಿ ಇಂದಾ | ಉದ್ದಾರ ಆಗುವೆ ನಾನು ಇಂದಾ || ೨ ||

ಇ|| ಕುಶಿಲಿಂದಾ ಪತ್ರ ಓದಿದಾ | ಹುಸೇನ ಹೊಂಟ ಆಗಿ ಆನಂದ
ಕುದುರಿಗೆ ಜೀನ ಬಿಗಿದಾ | ಡಾಲ ಪಟ್ಟಿ ಕೈಯಲ್ಲಿ ಹಿಡಿದಾ |
ಹಸರ ನಿಶಾನಿ ಮುಂದಾ | ಹಚ್ಚಿದೊ ಕುದುರಿಗೆ ಚಂದಾ
ನಗಾರಿ ನೌಬತ್ತ ಆನಂದಾ | ದಂಡ ಹೊಂಟಿತ್ತೊ ವೇಗದಿಂದ || ೩ ||

ಇ|| ಬಿಲ್ಲುಬಾಣಾ ಹೆಗಲಿಗೆ ಏನು ಚಂದಾ | ಬಿಟ್ಟಿದ್ರೋ ಕುದುರಿಗೆ ರೌಸದಿಂದಾ
ಏ || ದಂಡ ಹೋಗಿ ಕೂಫೇದ ಮುಂದಾ | ನಿಂತಿತೋ ಆನಂದದಿಂದಾ |
ಕೂಫೇದ ಊರ ಮುಂದಾ | ಡೇರೆ ಹೊಡದಾರೋ ಚಂದಾ |
ಯಜೀದ ಮಸಲತ ಮಾಡಿದಾ | ನೀರಿಗೆ ಕಾವಲಾ ಇಟ್ಟಿದ್ದಾ || ೪ ||

ಇ|| ಸುತ್ತೆಲ್ಲಾ ದಂಡ ಇಟ್ಟಿದ್ದಾ | ಹುಸೇನ ನೋಡಿ ಗಾಬವಾದಾ |
ಏರು || ದಂಡಿಗೆ ನೀರವಿಲ್ಲಾ | ನೀರಡಸಿ ಆರಿತೊ ಗಂಟಲಾ
ರಣಗಂಬ ಹೂಡ್ಯಾರಲ್ಲಾ | ಲಡಾಯಿಕ ನಿಂತಾರಲ್ಲಾ
ಹುಸೇನ ತಲವಾರ ಹಿರಿದಾ | ವೈರಿಯ ಮೇಲೆ ಕೂಗ ಹೊಡದಾ || ೫ ||

ಇ|| ಮೋಸಮಾಡಿ ಪತ್ರ ಬರೆದಾ || ಕರೆಸಿದ್ದೆಲ್ಲೋ ಬಾರೊ ನನ್ನ ಮುಂದಾ
ಏರು || ವೈರಿಯ ದಂಡು ಪೂರಾ | ಹುಸೇನಗ ಹಾಕಿತೊ ಗೇರಾ
ಲಢಾಯಿ ನಡೆದಿತೊ ಜೋರಾ || ಹರಿಸಿತ್ತೋ ರಣದಾಗ ನೆತ್ತರಾ
ಹುಸೇನ ತಲವಾರದಿಂದಾ | ಕೆಡವತಿದ್ದಾ ವೈರಿಯ ದಂಡ ಕಡಿದಾ || ೬ ||

ಇ|| ವೈರಿಯ ದಂಡ ಸಾಗಿತೋ ಮುಂದಾ | ಗಾಬವಾಗಿ ಯಜೀದಾ ಕಾಲತಗಾದಾ |
ಏರು | ನಡಗತಿತ್ತೋ ಭೂಮಿ ಗಗನಾ | ಕಾಣಸಿತೊ ರಕ್ತದ ವರಣಾ |
ಇತ್ತರಿ ಶುಕ್ರವಾರ ದಿನಾ | ವೈರಿಗೆ ಕೇಳ್ಯಾರೊ ಶರಣಾ |
ಲಗುಮಾಡಿ ವೈರಿ ಹೇಳಿದಾ | ಶುಕ್ರವಾರ ದಿನಾ ಐತ್ರಿ ಇಂದಾ || ೭ ||

ಇ|| ಹುಸೇನ ಕುದರಿ ಇಳಿದಾ | ನಮಾಜ ಮಾಡುವೆ ನಾನು ಇಂದಾ |
ಏರು || ಯಜೀದಗ ಅಂತಾರೊ ಶರಣಾ | ಶಿವಧ್ಯಾನಾ ಮಾಡುವೆ ನಾನಾ |
ನಮಾಜ ಮುಗಿದ ಬಳಿಕ | ಲಡಾಯಿ ಮಾಡುನೊ ಖಡಕ
ಅಲ್ಲಾ ಹೊ ಅಕ್ಬರ ಅಂದಾ | ರಖಾತ ಕಟ್ಟಿನಿಂತ್ರೊ ಮುಂದಾ || ೮ ||

ಇ|| ದುಷ್ಟಯಜೀದ ಅಂದಾ || ಸಿಕ್ಕೆಲ್ಲೊ ವೈರಿ ಇನ್ನ ಮುಂದಾ |
ಏರು|| ದಂಡ ಹಾಕಿತೊ ಗೇರಾ | ನಡಗತಿತ್ತೊ ಶಿವನ ಸದರಾ |
ನಿಜದೆದೊಳಗ ಹುಸೇನ ಹೋದಾ | ಯಜೀದ ತಲವಾರ ಹಿರಿದಾ |
ಕರುಣವಿಲ್ಲದೆ ಯಜೀದಾ  | ಶರಣರ ರುಂಡ ಕೊಯ್ದು ಒಗದಾ || ೯ ||

ಇ|| ಮೋಸ ಮಾಡಿದಾ ಯಜಿದಾ | ಹೇಡಿಯ ಕೆಲಸ ಮಾಡಿ ಹ್ವಾದಾ ||
ಏರು|| ದೇವಗನ್ನಿ ಜಕ್ಕನಿಯರೆಲ್ಲಾ | ಅಳತಿದ್ರೊ ಅಳತೆಯಿಲ್ಲಾ ||
ಧರ್ಮದ ಸಲುವಾಗಿ ಪ್ರಾಣ | ಕೊಟ್ಟಾರೊ ಇಮಾಮ ಹುಸೇನ |
ಕೇಳಿದರ ಹುಸೇನರ ಸಂದಾ | ಕಣ್ಣೀರ ಬರತಾವರಿ ದೈವಾ ಇಂದಾ || ೧೦ ||

ಇ || ದುಡಿಯೊ ನೀ ಧರ್ಮದಸಿಂದಾ | ಸಿಗತೈತಿ ನಿನಗ ಪುಣ್ಯ ಮುಂದಾ
ಏರು || ಎಷ್ಟು ಕಷ್ಟ ಬಂದರು ಸಹಿತಾ | ಕುಂಡರಬ್ಯಾಡ್ರಿ ಸಾಂಬನ ಮರತಾ
ನಮಾಜ ಐದ ಹೊತ್ತ | ತಿಂಗಳ ರೋಜಾ ಮಾಡರಿ ಮೂವತ್ತ
ದಾನಧರ್ಮ ಮಾಡು ನೀನು ಇಂದಾ || ಸಿಗತೈತಿ ಸ್ವರ್ಗ ನೋಡೊ ಮುಂದಾ || ೧೧ ||

ಇ|| ನಾನೆ ಎಂಬುದು ನರಕಾ ಮುಂದಾ | ಅಹಂಕಾರ ಮಾಡಬ್ಯಾಡೊ ಇಂದಾ
ಏರು || ಬಟಕುರ್ಕಿ ನನ್ನ ಊರ | ಇರುವದು ನೋಡೊ ಜಾಹೀರಾ
ದಾವಲ ಮಲಿಕ ಪೀರಾ | ಅವರಿಗೆ ಮಲ್ಲಿಗೆ ಹಾರಾ |
ಬಂದಗಿ ಸಾಹೇಬರು ವಸ್ತಾದೊ | ಬರದಾರೊ ಕವಿ ಬಹಳ ಚಂದಾ || ೧೨ ||

* * *

೧೨ಕರ್ಬಾಲಾ ರಕ್ತದ ಮಹತ್ವ

ಮನಸಿಟ್ಟ ಕೇಳರಿ ದೈವೆಲ್ಲಾ
ಏರು || ತ್ರಿಲೋಕ ಚಂದ್ರ ನಾಚುವ ಇಂದ್ರ ಸ್ವಾಮಿ ಹುಸೇನಾ
ಮಡಿದ ಬಳಿಕ ಅಳುವುದು ಭೂಮಂಡಲಾ || ೧ ||

ಜಗದಲ್ಲಿ ಬಿದ್ದಿತೋ ಕಲ್ಬಲಾ
ಏರು || ಕೇಳಿ ವರ್ತಮಾನಾ ಪಕ್ಷಿಗಳ ಮಾನಾ
ಆಗಲೆ ಅವೆಲ್ಲಾ ಕರ್ಬಲದ ಹಾದಿ ಹಿಡಿದಾವ ಮೊದಲಾ || ೨ ||

ಮರ್ತ್ಯೆವಾಗಿದ್ದು ಹುಸೇನ ಹಾ ಸೇಲಾ
ಏರು|| ಶರಣರನ್ನು ನೋಡಿ ಕಣ್ಣೀರು ಸುರಸ್ಯಾವರಿ
ಪಕ್ಷಿಗಳೆಲ್ಲ ಅವರ ಮೇಲೆ ಬಿದ್ದು ಮಾಡುವವು ಗುಲ್ಲಾ  || ೩ ||

ರಕ್ತಾ ಮುಳುಗಿ ಕೆಂಪಗೆ ಮೈಕೈ ಎಲ್ಲಾ
ಏರು || ಆಗ ದುಃಖಾತೋ ಅತಿ ಬಿಟ್ಟಾವು ಅನ್ನ ನೀರಾ
ಆಗಲೆ ಅವು ಸಕಲಾ ಎದಿವೊಡಿದು ಆದಾವು ಅಡವಿ ಪಾಲಾ || ೪ ||

ಯಹೂದಿ ತೋಟ ಇತ್ತೋ ಸೇಲಾ
ಏರು || ಒಂದು ಪಕ್ಷಿ ಬಂದು ಅಲ್ಲಿ ಕೂಡತಿತ್ತೊ ಟೊಂಗಿ ಹಿಡಿದು ಮೇಲಾ
ತನ್ನ ರೆಕ್ಕಿ ಜಾಡಿಸಲು ರಕ್ತಾ ಬೀಳುವುದು ಮಳೆಹನಿ ಬಿಸಿಲಾ || ೫ ||

ಯಹೂದಿ ಮುಗಳು ತೋಟದಲ್ಲಿ ಇದ್ದಾಳೋ ಬಹುಕಾಲಾ
ಏರು || ಕಣ್ಣು ಕುರುಡಾಗಿ ರೋಗದಿಂದ ಇದ್ದಾಳೋ ಬಹುಕಾಲಾ || ೬ ||

ಮೆಲ್ಲಕ ನೋಡ್ಯಾಳು ಸೋಜಿಗ ಕೇಲಾ
ಏರು || ಕಣ್ಣುಗಳಲ್ಲಿ ರಕ್ತದ ಹನಿ ಬಿತ್ತು ತುರ್ತಾ
ಕಣ್ಣು ಕೈ ಕಮಲಾ ಆಗಿತ್ತು ರಕ್ತಾ ಮಾಣಿಕದ ಹೋಲಾ || ೭ ||

ತಿಕ್ಕಿ ಕೊಂಡಾಳು ರಕ್ತ ಮೈಮೇಲಾ
ಏರು || ಸುಂದರ ಚಿನ್ನಾ ಸೂರ್ಯನ ಕಿರಣಾ
ಮೊದಲಿನಕ್ಕಿಂತ ಮಿಗಿಲಾ ಆದಾಳೋ ಆಗ ಮನಕ್ಕೆ ಮಿಗಿಲಾ || ೮ ||

ತೋಟಕ್ಕೆ ಬಂದಾನೋ ಯಹೂದಿ ಕಂಗಾಲಾ
ಏರು || ಹಿಡಿಲಿಲ್ಲೋ ಗುರುತಾ ಆಗಿ ಸಂಶೆಯ ಚಿತ್ತಾ
ಆಗಿ ಚಂಚಲಾ ಕೇಳ್ಯಾನೋ ಸರ್ವ ಆದ ಮೂಲಾ || ೯ ||

ಒಡದ ಹೇಳ್ಯಾಳೋ ಸರ್ವ ಸಂಗತಿ
ಏರು || ಯಹೂದಿ ಮನಸ್ಸು ಆಗಿ ಸಂತೋಷ ಬಹಳ ಹರುಷ
ಆದ ಕಬೂಲಾ ಕಣ್ಮುಟ್ಟ ನೋಡಿ ಪಕ್ಷಿಯ ಕೇಲಾ || ೧೦ ||

ಕಲ್ಮಾ ಓದ್ಯಾನೋ ಲಾ ಇಲಾಹಾ ಇಲ್ಲಿಲ್ಲಾಹು
ಏರು|| ಮುಹ್ಮದುರ್ರಸೂಲಿಲ್ಲಾ ಪೃಥ್ವಿಪಾಲಾ |
ಜಗತೇಕ ಸೇಲಾ ಸಂದೇಹವಿಲ್ಲಾ ನೆನೆಯುವೆ ಹಗಲೆಲ್ಲಾ || ೧೧ ||

ಬಾಗಲಕೋಟೆ ಪ್ರಬೂಲಾ ದಸ್ತಗೀರ ಕರುಣ ನಮ್ಮ ಮೇಲಾ
ಏರು|| ಇರುವುದು ಸಂತಾ ಸಂಪೂಣಾ | ಕೇಳಿವೈರಿ ಹೋದಾನೋ
ಸುಮ್ಮನೆ ತಿರುಗಿ ನೋಡದೆ ಮನಿತಾನಾ || ೧೨ ||

* * *