1. ಕಾರಹುಣ್ಣಿಮೆ ಹುಟ್ಟಿದ ಹಾಡು

ಕಾರ ಹುಣ್ಣಿವೆ ಹುಟ್ಟಿದ ಕಾರಣ ಕೇಳರಿ
ಮದ್ಲು ಮರ್ತ್ಯ ಲೋಕದಾಗೋ
ನಮಗಿಂತ ಹೆಚ್ಚು ಯಾರಿಲ್ಲಂತ
ಗರ್ವ ಬಂದಿತು ಶಿವಗೋ                                                           ॥ಪಲ್ಲ ॥

ನಂದಿದೇವನ ಕರೆದು ಮಹದೇವ ಹೇಳತಾನ
ಹುಡುಕುನಂತ ಜಗದಾಗೋ
ಮಗ್ಗಿಯ ಮುಟ್ಟ ಕುತನಿ ಧೂಲ್ಹಾಕಿ
ಜಿಗಿದು ಕುಂತಾನ ಮ್ಯಾಗೋ
ಇಬ್ಬರು ಕೂಡಿ ಇಳದಾರ ಜೋಡಿ
ಬಂದಾರೋ ಮರ್ತ್ಯದಾಗೋ
ಬಸವಣ್ಣ ಮೊದಲು ಮರ್ತ್ಯಾಕ ಬರುವಾಗsನ
ಭೂಮಿ ನಡಗ್ಯಾವ ಕಾಲಾಗೋ                                                       ॥1 ॥

ಪಾದ ಊರ‌್ಯಾನ ಪಾತಾಳತನಕ
ಬಾಲ ಹಿಡಿದು ತಲಿಮ್ಯಾಗೋ
ಸಿಳ್ಳು ಬಿದ್ದರ ಹೊಳ್ಳಿ ಮಹಾದೇವ
ನೋಡ್ಯಾನ ಆವಾಗೋ
ನನಕ್ಕಿಂತ ಹೆಚ್ಚು ನೀನೆ
ಬಸವನೆಂದು ತಿರುಗಿ ಬಂದರಾಗೋ
ಮಡಿದಯ ಮುಂದ ಹೇಳ್ತಾ
ಮಹಾದೇವ ಪಾರ್ವತಿಗಾವಾಗೋ                                                  ॥2 ॥

ಸರ್ವಸಾಮಾನು ಹುಗ್ಗಿಯ ಹಂಡೆ
ತಂದು ಇಟ್ಟಾಳೋ ಒಲಿಮ್ಯಾಗೋ !
ಹೊನ್ನುಂಗರೊಂದು ಹೊಳಿತಿತ್ತು ಚಂದ
ಪಾರ್ವತಿ ಕೈಯಾಗೋ
ಉಕ್ಕುವ ನೀರಿನ್ಯಾಗ ಅಕ್ಕಿ
ಸುರುವುತಾಳ ಪಾರ್ವತಿ ಆವಾಗೋ
ಹೊನ್ನುಂಗರೊಂದು ಉಚ್ಚಿ ಬಿದ್ದಿತು
ಹುಗ್ಗಿ ಹಂಡೆದೊಳಗೋ                                                                 ॥3 ॥

ಅಗ್ನಿದೇವತೆ ಅವತಾರ ತಾಳಿದ್ದು
ಜಿಗಿ ಜಿಗಿದೆದ್ದ ಮ್ಯಾಗೋ
ಹೊನ್ನುಂಗರ ತೆಗೆದವ್ವ ಚ್ಯಾಜ
ಕೊಡತೀನಂತ ಪಾರ್ವತಿ ಹೇಳ್ಯಾಳಾಗೋ
ತೆತ್ತಿಸಕೋಟಿ ದೇವತರುಕೂಡಿ
ಬಂದು ನೋಡ್ಯಾರಾವಾಗೋ
ಹೊನ್ನುಂಗರ ತೆಗೆಯುವುದು ನಮ್ಮಕೈಲೆ
ಆಗಲಾರದು ಹೇಳಂದ್ರೋ ಬಸವಣ್ಣಗೋ                                          ॥4 ॥

ಕಾಲ ಕೆದುರುತ ಬಾಲ ಬೀಸುತ
ಬಸವ ಬಂದನಾಗೋ
ಅಂಬಗಾಲ ಮಂಡಿಯನ್ನೂರಿ ಕೋಡ ಹಾಕಿ
ತಿರುವ್ಯಾನ ಹುಗ್ಗಿ ಹಂಡೆದಾಗೋ
ಕೋಡಿನ ತುದಿಯ ಹತ್ತಿ ಹೊನ್ನುಂಗರ
ಬಂದಿತಪ್ಪೋ ಹೊರಗೋ
ಅಂದೆ ಹೊನ್ನೂಗ್ಗಿ ಚ್ಯಾಜಕೊಟ್ಟಳೋ
ಪಾರ್ವತಿ ಬಸವಣ್ಣಗೋ                                                                ॥5 ॥

ಖರೆ ಬಸವನೆಂದು ಕರಿಯ
ಮೆರಸ್ಯಾನೋ ಮರುದಿನ ಊರಾಗೋ
ಬಸವಣ್ಣನ ದಯದಿಂದ ಕಾರಹುಣ್ಣಿವೆ
ಹುಟ್ಟಿಬಂತು ಮರ್ತ್ಯಲೋಕದಾಗೋ
ಉಸ್ತಾದ ಕವಿ ಗೂಳಿ ಕವಿಯ ಮಾಡ್ಯಾನ
ಕಾರಹುಣ್ಣಿವೆ ಹುಟ್ಟಿದ ಭಾಗೋ
ಮಲ್ಲಾಬಾದ ಹುಡುಗರು ಹಾಡುತೇವರಿ
ನಾವು ಯಲ್ಲಾಲಿಂಗನ ದಯ ನಮಗೋ                                            ॥6 ॥

* * *

2. ಮಣ್ಣೆತ್ತಿನ ಹಾಡು

ಹಾದಿ ಮಣ್ಣsತಂದು ಗೀರಿ ಬಸವಣ್ಣನ ಮಾಡಿ
ಬಹುದೆನ್ನಬಹುದು ಬಸವಯ್ನ ಕೋಲ
ಬಹುದೆನ್ನಬಹುದು ಬಸವಯ್ನ ಪಾದಕ
ನಾನೇನವನಿಟ್ಟs ಶರಣೆಂದೆ ಕೋಲ  ॥1 ॥

ಕೆರೆಯ ಮಣ್ಣs ತಂದು ಕೆತ್ತಿ ಬಸವನ ಮಾಡಿ
ಬಹುದೆನ್ನಬಹುದು ಬಸವಯ್ನ ಕೋಲ
ಬಹುದೆನ್ನಬಹುದು ಬಸವಯ್ನ ಪಾಕದ
ನಾನೇನವನಿಟ್ಟs ಶರಣೆಂದೆ ಕೋಲ                                                 ॥2 ॥

ಕಡಲೀಯ ಕಾಳ್ಹಂಗ ಕಟದಾರ ನಮ್ಮ ಬಸವಯ್ನ
ಕಡಲೀ ನಮ್ಮಲಿ ಇಪರೀತ ಕೋಲ
ಕಡಲೀ ನಮ್ಮಲ್ಲಿ ಇಪರೀತ ನಮ್ಮ ಬಸವಯ್ನ
ಕಟದಾರ ಕಲ್ಯಾಣದs ಮಠದಾಗ ಕೋಲ                                          ॥3 ॥

ಉದ್ದೀನ ಕಾಳ್ಹಂಗ ತಿದ್ಯಾರ ನಮ್ಮ ಬಸವಯ್ನ
ಉದ್ದs ನಮ್ಮಲ್ಲಿ ಇಪರೀತ ಕೋಲ
ಉದ್ದs ನಮ್ಮಲ್ಲಿ ಇಪರೀತ ನಮ್ಮ ಬಸವಯ್ನ
ತಿದ್ಯಾರ ಕಲ್ಯಾಣದ ಮಠದಾಗ ಕೋಲ                                             ॥4 ॥

ಕೆಂಡೊಳ್ಳಿ ದಾರ‌್ಯಾಗ ಕಂಡೀರಿ ನಮ್ಮ ಬಸವಯ್ನ
ಮಂಡೀ ಜಿಗಜಿಗದ ಬರತಾನ ಕೋಲ
ಮಂಡೀಯ ಜಿಗಜಿಗದ ಬರತಾನ ಬಸವಯ್ನ
ಕೊಂಬೀನ್ಯಾಗೈತಿ ಕೈಲಾಸ ಕೋಲ                                                 ॥5 ॥

ಆಕಾಶ ಮೊದಲಾಗಿ ಧೂಪಾದ ಹೊಗಿ ಬಂದು
ಮತ್ತs ಬಸವಯ್ನs ಶಿವಪೂಜೆ ಕೋಲ
ಮತ್ತs ಬಸವಯ್ನs ಶಿವಪೂಜೆ ಯಾಳೇದಾಗ
ಆಕಾಶದ ಗಂಟೆ ಢಣಲೆಂದ ಕೋಲ                                                  ॥6 ॥

ಏರೀs ಮಣ್ಣಾ ತಂದು ಕುಟ್ಟಿ ಬಸವನಾ ಮಾಡ್ಯಾsರ
ಹಿತ್ತಲದ ಗಂಗವ್ವಾ ಹರs
ಗುತ್ತಿಯಾ ಸುಣ್ಣಾ ಗುಲಗಂಜೀ ಸುಣ್ಣಾ
ಸುತ್ತ ಸಮನಾಗಿ ಬರೆಯವ್ವಾ ॥ಸ್ವಾಮಿ ॥

ಗ್ಯಾಬೀಯ ಸುಣ್ಣಾ ಗುಲಗಂಜೀ ಸುಣ್ಣಾ
ಸುತ್ತ ಸಮನಾಗಿ ಬರೆಯವ್ವಾ ॥ಸ್ವಾಮಿ ॥

ಕಂಬಕೆ ಎದುರಾಗಿ ತುಂಬವ್ವ ಕಳಸನ
ಕಂಬದ ಮ್ಯಾಗ ಎರಡು ಅರಿಗೀಣಿ  ಸ್ವಾಮಿ
ಕಂಬದ ಮ್ಯಾಗ ಅರಗಿಣಿ  ಪುರಗಿಣಿ
ಸಂಭ್ರಮದ ನುಡಿಯಾ ನುಡಿಯವ್ವಾ

ಬುತ್ತಿಯಾ ಸುಣ್ಣಾ ಗುಲಗಂಜೀ ಸುಣ್ಣಾ
ಸುತ್ತ ಸಮನಾಗಿ ಬರೆಯವ್ವಾ  ಸ್ವಾಮಿ
ಸುತ್ತ ಸಮನಾಗಿ ಬರೆಯವ್ವಾ ಅರಗಿಣಿ
ಸುಕ್ಕಳಿಗಿ ಸಮನಾಗಿ ಬರೆಸವ್ವಾ

 * * *