ಲಕ್ಷಣಗಳು: ಏನೋ ಬೇಸರ, ದುಃಖ, ಮಂಕುತನ, ಯಾವುದೇ ವಿಚಾರ, ಚಟುವಟಿಕೆ, ಕೆಲಸ, ಕರ್ತವ್ಯಗಳಲ್ಲಿ ಆಸಕ್ತಿ ಇಲ್ಲ. ನಿರುತ್ಸಾಹ, ಹಿಂದಿನ ಯಾವುದೇ ಚಟುವಟಿಕೆ/ಹವ್ಯಾಸದಿಂದ ಸಂತೋಷವಿಲ್ಲ. ಖುಷಿ ಕೊಡದಿರುವುದು. ಒಂದು ರೀತಿಯ ಅಸಹಾಯಕತೆ, ನಿರಾಶಾಸ್ಥಿತಿ, ತಾನು ನಿಷ್ಟ್ರಯೋಜಕ/ಇತರರಿಗೆ ಹೊರೆ ಎಂಬ ಭಾವನೆ, ಕೀಳರಿಮೆ, ನಿದ್ರಾಹೀನತೆ, ಹಸಿವಿಲ್ಲ, ತಿನ್ನುವ ಆಹಾರ ರುಚಿಸುವುದಿಲ್ಲ. ಲೈಂಗಿಕವಿಚಾರದಲ್ಲೂ ನಿರಾಸಕ್ತಿ, ಲೈಂಗಿಕ ಕ್ರಿಯೆ ನಡೆಸಲು ಉದಾಸೀನ, ಮಲಬದ್ಧತೆ, ಶರೀರದಲ್ಲಿ ಯಾವುದೇ ಕಾಯಿಲೆ/ನ್ಯೂನತೆ ಇಲ್ಲದಿದ್ದರೂ, ತಲೆನೋವು, ಎದೆ ನೋವು, ಕತ್ತು/ಮೈ ನೋವು, ಕೈಕಾಲು ನೋವುಗಳು, ತಲೆಸುತ್ತು, ಸುಸ್ತು-ಆಯಾಸ, ಕೈಕಾಲು ಜೋಮು, ಕಿವಿಯಲ್ಲಿ ಗುಂಯ್ ಎನ್ನುವ ಶಬ್ಧ, ದೇಹದ ಯಾವುದೋ ಭಾಗದಲ್ಲಿ ಅಸ್ಪಷ್ಟವಾದ ಅಹಿತ-ಸಂಕಟದ ಅನುಭವ ಇತ್ಯಾದಿ. ಏಕಾಗ್ರತೆ ಇಲ್ಲದಿರುವುದು, ಮರೆವು, ಗೊಂದಲ, ನಿರ್ಧಾರ-ತೀರ್ಮಾನ ಮಾಡಲು ಆಗದಿರುವುದು, ಸಮಸ್ಯೆ, ವಿಷಯ ವಿಶ್ಲೇಷಣೆ ಮಾಡಲಾಗದಿರುವುದು. ಬದುಕು ಬೇಡ ಎನಿಸುವುದು, ಸಾವು ಬರಲಿ ಎಂದು ಹಾರೈಸುವುದು, ಆತ್ಮಹತ್ಯೆಯ ಆಲೋಚನೆ-ಪ್ರಯತ್ನ ಇವು ಖಿನ್ನತೆ ರೋಗದ ಸಾಮಾನ್ಯ ಲಕ್ಷಣಗಳು.

ಯಾರಲ್ಲಿ ಹೆಚ್ಚು

 • ಹೆಂಗಸರಲ್ಲಿ
 • ಹದಿವಯಸ್ಸಿನಲ್ಲಿ ಮತ್ತು ಇಳಿವಯಸ್ಸಿನವರಲ್ಲಿ.
 • ಒಂಟಿಯಾಗಿ ಜೀವಿಸುವವರಲ್ಲಿ, ಆಪ್ತರು-ಇಷ್ಟರಿಂದ ದೂರವಾದವರಲ್ಲಿ.
 • ಹುಟ್ಟಿದ ಊರು, ರಾಜ್ಯ, ದೇಶವನ್ನು ಬಿಟ್ಟು ಪರಸ್ಥಳ, ಪರದೇಶದಲ್ಲಿ ವಾಸಿಸುವವರಲ್ಲಿ, ವಲಸಿಗರಲ್ಲಿ.
 • ನಿರುದ್ಯೋಗಿಗಳಲ್ಲಿ.
 • ತೀವ್ರ ಕಷ್ಟ, ನಷ್ಟ, ಸೋಲು, ಅಪಮಾನ, ನಿರಾಶೆಗಳನ್ನು ಎದುರಿಸುತ್ತಿರುವವರಲ್ಲಿ, ಸ್ಥಾನಮಾನ ಅಧಿಕಾರವನ್ನು ಕಳೆದುಕೊಂಡವರಲ್ಲಿ.
 • ಪ್ರಕೃತಿ ಅಥವಾ ಮಾನವ ನಿರ್ಮಿತ ದುರಂತಗಳಲ್ಲಿ ಬದುಕಿ ಉಳಿದವರಲ್ಲಿ, ಪ್ರೀತಿಪಾತ್ರರು, ಆಪ್ತರು, ಇಷ್ಟರನ್ನು ಕಳೆದುಕೊಂಡಿರುವವರಲ್ಲಿ.
 • ಅಂಗವೈಕಲ್ಯ, ದೀರ್ಘಕಾಲ ಅಥವಾ ಪ್ರಾಣಾಂತಕವಾದ ಕಾಯಿಲೆ ಇರುವವರಲ್ಲಿ, ಸಾಮಾಜಿಕ ಅವಮಾನ/ಕಳಂಕವನ್ನು ತರುವ ರೋಗವಿರುವವರಲ್ಲಿ.
 • ಜಗಳ-ಮನಸ್ತಾಪಗಳಿಂದ ಹಾಗೂ ಪ್ರೀತಿಪಾತ್ರರಿಂದ ದೂರವಾದವರಲ್ಲಿ.
 • ದೀರ್ಘಕಾಲ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಸ್ತ್ರೀಯರಲ್ಲಿ.
 • ದೊಡ್ಡ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡವರಲ್ಲಿ.
 • ಥೈರಾಕ್ಸಿನ್ ಹಾರ್ಮೋನ್ ಕಡಿಮೆ ಇರುವವರಲ್ಲಿ.
 • ಬಂಧೀಖಾನೆಗಳು, ಅನಾಥಾಶ್ರಮಗಳಲ್ಲಿ ವಾಸಿಸುವವರಲ್ಲಿ.
 • ಕುಟುಂಬದವರು, ಆಪ್ತ ಇಷ್ಟರಿಂದ ತಿರಸ್ಕೃತವಾದವರಲ್ಲಿ, ಬಹುವಿಧಗಳಲ್ಲಿ ಶೋಷಣೆಗೆ ಒಳಗಾದವರಲ್ಲಿ.
 • ಅತ್ಯಾಚಾರ-ಅನಾಚಾರಕ್ಕೆ ಒಳಗಾದವರಲ್ಲಿ.

ಎಷ್ಟು ವಿಧಗಳಿವೆ?

ಹೊರಜನ್ಯ ಖಿನ್ನತೆ: ಯಾವುದೇ ನಕಾರಾತ್ಮಕ ಘಟನೆ, ಸಂದರ್ಭದ ಅನುಭವದಿಂದ ಈ ಬಗೆಯ ಖಿನ್ನತೆ ಉತ್ತತ್ತಿಯಾಗುತ್ತದೆ. ಹಣಕಾಸಿನ ಕೊರತೆ, ಪ್ರೀತಿ ವಿಶ್ವಾಸದ ಕೊರತೆ, ತಿರಸ್ಕಾರ, ಅಪಮಾನಗಳಿಗೆ ತುತ್ತಾಗುವುದು, ಅಗತ್ಯಗಳು ಸರಿಯಾಗಿ ಪೂರೈಕೆಯಾಗದಿರುವುದು, ದಾಂಪತ್ಯ ವಿರಸ, ಉದ್ಯೋಗದಲ್ಲಿ ನಿರೀಕ್ಷಿತ ಬಡ್ತಿ, ವರ್ಗಾವಣೆ ದೊರೆಯದಿರುವುದು, ಪಕ್ಷಪಾತ ಅನ್ಯಾಯಕ್ಕೆ ಒಳಗಾಗುವುದು, ರೋಗರುಜನಿಗಳು, ಅಂಗವೈಕಲ್ಯಗಳು, ಬಂಧು-ಮಿತ್ರ-ಸಹೋದ್ಯೋಗಿಗಳಿಂದ ಪ್ರೋತ್ಸಾಹ, ಶ್ಲಾಘನೆ ಸಿಗದೇ, ತಿರಸ್ಕಾರ, ಹೀನಾಯಗಳು, ಅಪಘಾತ, ಅವಘಡಗಳು, ಸ್ಥಾನಮಾನಗಳ ನಷ್ಟಗಳು, ಮೋಸ-ವಂಚನೆಗಳಿಗೆ, ದೌರ್ಜನ್ಯ-ಶೋಷಣೆಗಳಿಗೆ ಒಳಗಾಗುವುದು ಹೊರಜನ್ಯ ಖಿನ್ನತೆಯನ್ನುಂಟು ಮಾಡುತ್ತವೆ. ಈ ವಿಧದ ಖಿನ್ನತೆಯಲ್ಲಿ, ಖಿನ್ನತೆಯ ಲಕ್ಷಣಗಳು ಸಂಜೆಯಾಗುತ್ತಿದ್ದಂತೆ ಹೆಚ್ಚುತ್ತವೆ. ಖಿನ್ನತೆಯ ರೋಗಿ ಒಂಟಿಯಾಗಿರಲು ಇಷ್ಟಪಡುವುದಿಲ್ಲ. ಪರಿಸರದ ಘಟನೆಗಳು ಮತ್ತು ಇತರರ ಭಾವನೆಗಳಿಗೆ ಸ್ಪಂದಿಸುತ್ತಾನೆ. ನಿದ್ದೆ ಬುರುವುದು ಕಷ್ಟ. ಸಾಮರ್ಥ್ಯ ಕಡಿಮೆಯಾದರೂ ಕೆಲಸ ಕರ್ತವ್ಯಗಳನ್ನು ಮಾಡುತ್ತಾನೆ.

ಒಳಜನ್ಯ ಖಿನ್ನತೆ: ಯಾವುದೇ ಅಹಿತ ಅಥವಾ ನಕಾರಾತ್ಮಕ ಘಟನೆಗಳು ಅನುಭವಿಗಳಿರುವುದಿಲ್ಲ. ಖಿನ್ನತೆ ವಿನಾಕಾರಣ ಪ್ರಾರಂಭವಾಗಬಹುದು. ಅಥವಾ ಮುಂದುವರೆಯಬಹುದು. ರೋಗಿ ಒಂಟಿಯಾಗಿರಲು ಇಷ್ಟಪಡುತ್ತಾನೆ. ಜನಸಂಪರ್ಕದಿಂದ ದೂರವಿರುತ್ತಾನೆ. ಪರಿಸರದ ಪ್ರಚೋದನೆಗಳಿಗೆ, ಇತರರ ಭಾವನೆಗಳಿಗೆ ಸ್ಪಂದಿಸುವುದಿಲ್ಲ. ತೀರಾ ಮಂಕಾಗಿ ಏನೂ ಮಾಡದೆ ಒಂದೆಡೆ ಕುಳಿತು, ಮಧ್ಯರಾತ್ರಿ ಅಥವಾ ಬೆಳಗಿನ ಜಾವಕ್ಕೇ ಎಚ್ಚರವಾಗಿಬಿಡುತ್ತದೆ. ಊಟ-ತಿಂಡಿ ಸೇವನೆ ಮಾಡದೆ ಶರೀರದ ತೂಕ ಇಳಿಯತೊಡಗುತ್ತದೆ. ತೀವ್ರ ಪಾಪಪ್ರಜ್ಞೆ ಕಾಡುತ್ತದೆ. ಅಸಹಾಯಕತೆ-ಸ್ವನಿಂದನೆ ಹೆಚ್ಚು. ಆತ್ಮಹತ್ಯಾ ಆಲೋಚನೆ-ಪ್ರಯತ್ನವೂ ಹೆಚ್ಚು. ಒಳಜನ್ಯ ಖಿನ್ನತೆ ತೀವ್ರವಾಗಿದ್ದಾಗ, ಭ್ರಮೆಗಳೂ ಸೃಷ್ಟಿಯಾಗುತ್ತದೆ. ತನ್ನನ್ನು ಯಾರೋ ಬಯ್ಯುತ್ತಿದ್ದಾರೆ. ದೂಷಿಸುತ್ತಿದ್ದಾರೆ ಎಂದು ರೋಗಿ ಹೇಳತೊಡಗುತ್ತಾನೆ. ಸಂಶಯ, ಅನುಮಾನಗಳೂ ಪ್ರಾರಂಭವಾಗುತ್ತದೆ. ತಾನು ಎಲ್ಲರಿಗೆ ದೊಡ್ಡ ಹೊರೆಯಾಗುದ್ದೇನೆ. ತನ್ನ ಅಂಗಾಂಗಗಳು ನಾಶವಾಗಿವೆ, ತಾನು ಬದುಕಿಯೇ ಇಲ್ಲ ಎಂದು ದೊಡ್ಡ ರೋಗಿ ಹೇಳತೊಡಗುತ್ತಾನೆ. ಸಂಶಯ, ಅನುಮಾನಗಳು ನಾಶವಾಗಿವೆ, ತಾನು ಬದುಕಿಯೇ ಇಲ್ಲ ಎಂದು ರೋಗಿ ಹೇಳಬಹುದು. ತನ್ನ ಹಣ-ಆಸ್ತಿ ಎಲ್ಲಾ ಹೋಗಿ ತಾನೊಬ್ಬ ನಿರ್ಗತಿಕ ಎಂದು ರೋಗಿ ನಂಬ ಬಹುದು (ವಾಸ್ತವದಲ್ಲಿ ಆತ ನಿರ್ಗತಿಕನಾಗಿರುವುದಿಲ್ಲ) ತಾನೊಬ್ಬ ಮಹಾಪಾಪಿ. ತನಗೆ ಅತ್ಯುಗ್ರ ಶಿಕ್ಷೆಯಾಗಲಿದೆ ಎಂದು ನಂಬಬಹುದು. ತನ್ನ ಬಗ್ಗೆ ಎಲ್ಲಡೆ ಅಪಪ್ರಚಾರ, ಕೆಟ್ಟ ಹೆಸರು ಪ್ರಚಲಿತವಾಗಿದೆ ಎಂದು ಹೇಳತೊಡಗಬಹುದು. ಈ ರೀತಿಯ ಭ್ರಮೆಗಳಿರುವ ಖಿನ್ನತೆಯನ್ನು Psychotic depression ಎಂದು ಕರೆಯಲಾಗುತ್ತದೆ.

ಮುಖವಾಡ ಧರಿಸಿದ ಖಿನ್ನತೆ (Masked  Deperssion) : ಶರೀರದಲ್ಲಿ ಏನೂ ಕಾರಣವಿಲ್ಲದೆ, ಯಾವುದೇ ಭಾಗದಲ್ಲಿ ನೋವು, ಸುಸ್ತು, ಆಯಾಸ, ನಿಶ್ಯಕ್ತಿ, ತಲೆಸುತ್ತು, ಮಾಮೂಲಿನ ಕೆಲಸ ಕರ್ತವ್ಯಗಳನ್ನು ನಿರ್ಲಕ್ಷಿಸುವುದು ಅಥವಾ ಮಾಡಲಾಗದಿರುವುದು, ನೆನಪು ಕುಗ್ಗುವುದು, ಚಟುವಟಿಕೆ ಇಲ್ಲದೆ ಮಂಕಾಗುವುದು ಸಾಮಾನ್ಯ ಲಕ್ಷಣಗಳು. ಆದರೆ ರೋಗಿ ತನಗೆ ಬೇಸರ, ದುಃಖ, ನಿರಾಸಕ್ತಿ, ನಿರುತ್ಸಾಹ ಇವೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದಲೇ ಇದನ್ನು “ಮುಖವಾಡ (ಶರೀರದ ರೋಗ ಲಕ್ಷಣಗಳ) ಧರಿಸಿದ ಖಿನ್ನತೆ” ಎಂದು ಕರೆಯಲಾಗುವುದು.

ಖಿನ್ನತೆ ಏಕೆ ಬರುತ್ತದೆ?

 • ಮಿದುಳಿನ ಕೋಟಿ ಕೋಟಿ ನರಕೋಶಗಳ ತುದಿಯಲ್ಲಿರುವ ನರವಾಹಕಗಳಾದ ಡೋಪಮಿನ್, ಸೆರೋಟೊನಿನ್ ಪ್ರಮಾಣ ತಗ್ಗುವುದೇ ಖಿನ್ನತೆ ಉಂಟಾಗಲು ಕಾರಣ ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ ಒಳಜನ್ಯ ಖಿನ್ನತೆ ಡೋಪಮಿನ್ ಕೊರತೆಯಿಂದ ಬರುತ್ತದೆ. ನೋವು, ದುಃಖವನ್ನುಂಟು ಮಾಡುವ ಯಾವುದೇ ಘಟನೆ, ಸಂದರ್ಭ, ವಿಷಯ ಕೂಡ ಈ ನರವಾಹಕಗಳನ್ನು ಕುಗ್ಗಿಸುತ್ತವೆ.
 • ಥೈರಾಕ್ಸಿನ್ ಹಾರ್ಮೋನ್ ಕಡಿಮೆಯಾಗುವುದು: ಹೈಪೋಥೈರಾಯಿಡ್ ಸ್ಥಿತಿಯಲ್ಲಿ ಥೈರಾಯಿಡ್ ಗ್ರಂಥಿಯ ನಿರೀಕ್ಷಿತ ಪ್ರಮಾಣದಲ್ಲಿ, ಥೈರಾಕ್ಸಿನ್ ಹಾರ್ಮೋನನ್ನು ಉತ್ಪತ್ತಿ ಮಾಡುವುದಿಲ್ಲ. ದೇಹದಲ್ಲಿ ಥೈರಾಕ್ಸಿನ್ ಕಡಿಮೆಯಾದಾಗ ಅನೇಕ ದೈಹಿಕ ಲಕ್ಷಣ ಜೊತೆಗೆ ಖಿನ್ನತೆಯಲ್ಲಿ ಕಾಣಿಸಿಕೊಳ್ಳುತ್ತದೆ.
 • ಪಾರ್ಕಿಸನ್ ಕಾಯಿಲೆಯ ಅಂಗವಾಗಿ ಖಿನ್ನತೆ: ಮಿದುಳಿನ ತಳಗಂಟುಗಳಲ್ಲಿ (basal ganglion) ಡೋಪಮಿನ್ ಕಡಿಮೆಯಾಗುವುದೇ ಪಾರ್ಕಿಸನ್‌ಸನ್ ರೋಗಕ್ಕೆ ಕಾರಣ. ಸ್ನಾಯುಗಳ ಬಿಗಿತ, ನಿಧಾನ ಚಲನೆ, ಕೈಗಳ ಅನಿಯಂತ್ರಿತ ನಡುಕ ಪಾರ್ಕಿನ್‌ಸನ್ ಕಾಯಿಲೆಯ ಲಕ್ಷಣಗಳು. ಜೊತೆಗೆ ಖಿನ್ನತೆಯೂ ಇರುತ್ತದೆ.
 • ಔಷಧ ಸೇವನೆಯ ಅಡ್ಡಪರಿಣಾಮವಾಗಿ ಖಿನ್ನತೆ

i)          ಗರ್ಭ ನಿರೋಧಕ ಮಾತ್ರೆಗಳ ದೀರ್ಘಕಾಲದ ಸೇವನೆ

ii)         ಸ್ಪೀರಾಯಿಡ್ ಮಾತ್ರೆಗಳ ದೀರ್ಘಕಾಲದ ಸೇವನೆ

iii)        ಅಧಿಕ ರಕ್ತದೊತ್ತಡಕ್ಕೆ ಕೊಡುವ ಮಾತ್ರೆಗಳು

iv)        ವಿಶಾಲ ಶ್ರೇಣಿಯ “ಆಂಟಿಬಯಾಟಿಕ್‌”ಗಳು.

ಎಷ್ಟು ಜನಕ್ಕೆ ಖಿನ್ನತೆ ಕಾಯಿಲೆ ಇರುತ್ತದೆ?

ಸರ್ವೇಕ್ಷಣೆ ಪ್ರಕಾರ, ಯಾವುದೇ ಸಮುದಾಯದಲ್ಲಿ ಶೇಕಡಾ 8ರಷ್ಟು ಪುರುಷರು, ಶೇಕಡಾ 12ರಷ್ಟು ಮಹಿಳೆಯರು ಖಿನ್ನತೆಯಿಂದ ಬಳಲುತ್ತಾರೆ ಎಂಬುದು ತಿಳಿದುಬರುತ್ತದೆ. ಎಲ್ಲ ವರ್ಗಗಳಲ್ಲಿ, ಎಲ್ಲ ವೃತ್ತಿಗಳಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಖಿನ್ನತೆ ಕಾಯಿಲೆ ಕಂಡುಬರುತ್ತದೆ. ಇಳಿವಯಸ್ಸಿನಲ್ಲಿ, ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚು. 75 ವರ್ಷಗಳ ನಂತರದ ವಯಸ್ಸಿನವರಲ್ಲಿ ಶೇಕಡಾ 50 ಜನ ಖಿನ್ನತೆಗೆ ಒಳಗಾಗಿರುತ್ತಾರೆ.

ಖಿನ್ನತೆ ಕಾಯಿಲೆ ಚಿಕಿತ್ಸೆ ಏನು?

i) ಖಿನ್ನತೆ ನಿವಾರಕ ಔಷಧಿಗಳು: ಇಂದು ಹತ್ತಕ್ಕೂ ಹೆಚ್ಚಿನ ಖಿನ್ನತೆ ನಿವಾರಕ ಮಾತ್ರೆಗಳು ಲಭ್ಯವಿದೆ. ಇಮಿಪ್ರಮಿನ್, ಅಮಿಟ್ರಿಪ್ಟಲಿನ್, ಡಾಕ್ಸಿಪಿನ್, ಫ್ಲೂಯಾಕ್ಸಿಟಿನ್, ಸರ್ಟ್ರಾಲಿನ್, ಎಸ್ಸಿಟಲೋಪಾಂ, ವೆನ್ಲಾಫ್ಲಾಕ್ಸಿನ್, ಮಿರ್ಟ್ರಾಜೆಪಿನ್, ಈಗ ಸಾಮಾನ್ಯವಾಗಿ ಬಳಕೆಯಲ್ಲಿರುವ ಔಷಧಿಗಳು, ವೈದ್ಯರ ಮಾರ್ಗದರ್ಶನದಲ್ಲಿ ಸರಿಯಾದ ಪ್ರಮಾಣದಲ್ಲಿ ಔಷಧಿ ಸೇವನೆ ಮಾಡಬೇಕು. ಎರಡು ತಿಂಗಳುಗಳಿಂದ ಆರು ತಿಂಗಳವರೆಗೆ ಸೇವಿಸುವ ಅಗತ್ಯವಿದೆ. ಕೆಲವು ಪ್ರಕರಣಗಳಲ್ಲಿ ಈ ಅವಧಿ ಇನ್ನಷ್ಟು ವಿಸ್ತಾರವಾಗಬಹುದು.

ಔಷಧಿಗಳು ಸುರಕ್ಷಿತವೇ? ಅಡ್ಡಪರಿಣಾಮ/ವಿಷಮ ಪರಿಣಾಮಗಳಿಲ್ಲವೇ? ಇವು ಚಟವನ್ನುಂಟು ಮಾಡುತ್ತವೆಯೇ?

ಈ ಔಷಧಿಗಳು ಸುರಕ್ಷಿತವಾದವು. ತೀವ್ರ ರೀತಿಯ ಅಡ್ಡಪರಿಣಾಮ/ವಿಷಮ ಪರಿಣಾಮಗಳೇನೂ ಇಲ್ಲ. ಚಟವನ್ನುಂಟು ಮಾಡುವುದಿಲ್ಲ. ಯಾವುದೇ ಆತಂಕ/ಹಿಂಜರಿಕೆ ಇಲ್ಲದೇ, ಈ ಔಷಧಿಗಳನ್ನು ಸೇವಿಸಬಹುದು. ಕೆಲವು ವರ್ಷಗಳಿಂದ ಅಲ್ಪಮಟ್ಟದ ಅಡ್ಡಪರಿಣಾಮಗಳಾಗುವುದು ಕೆಲವರಲ್ಲಿ ಕಂಡುಬರುತ್ತದೆ. ಉದಾಹರಣೆಗೆ,

 • ಬಾಯಿ ಒಣಗುವುದು: ಪರಿಹಾರ-ನೀರನ್ನು ಸೇವಿಸಿ.
 • ಮಲಬದ್ಧತೆ ಉಂಟಾಗಬಹುದು-ಹೆಚ್ಚು ನೀರು, ತರಕಾರಿ, ಹಣ್ಣುಗಳನ್ನು ಬಳಸಿ, ವಾಕಿಂಗ್ ಮಾಡಿ.
 • ಕಣ್ಣು ಮಂಜಾಗಿ, ಸಣ್ಣ ಅಕ್ಷರಗಳನ್ನು ಓದಲಾಗದಿರುವುದು-ಇದು ತಾತ್ಕಾಲಿಕ ಸ್ವಲ್ಪ ದಿನ ಇದ್ದು ಹೋಗುತ್ತದೆ.
 • ಹೊಟ್ಟೆ ಉರಿ/ಎದೆ ಉರಿ, ಅಸಿಡಿಟಿ-ಗ್ಯಾಸ್ಟ್ರಿಕ್ ಲಕ್ಷಣಗಳು: ಆಹಾರದಲ್ಲಿ ಖಾರ, ಹುಳಿ, ಉಪ್ಪು ತಗ್ಗಿಸಿ, ಉಪವಾಸವಿರಬೇಡಿ. ಆಂಟಾಸಿಡ್‌ಗಳನ್ನು (ಡಯಾಜಿನ್,  ರ‍್ಯಾಂಟಾಕ್ ಇತ್ಯಾದಿ) ಬಳಸಿ.

   ಮೂತ್ರ ಮಾಡಲು ಕಷ್ಟ. ಮೂತ್ರ ಬಂದ್ ಆಗಬಹುದು. (ಇದು ಇಮಿಪ್ರಮಿನ್, ಅಮಿಟ್ರಪ್ಟಲಿನ್ ಮಾತ್ರೆಯ ಸೇವನೆಯಿಂದ ಆಗಬಹುದು). ತಕ್ಷಣ ಮಾತ್ರೆ      ಸೇವನೆಯನ್ನು ನಿಲ್ಲಿಸಿ ವೈದ್ಯರನ್ನು ಕಾಣಿ.

ಔಷಧಿಗಳು ಗರ್ಭಿಣಿಗೆ ಸುರಕ್ಷಿತವೇ? ಬಾಣಂತಿಯರು, ಮಗುವಿಗೆ ಹಾಲುಣಿಸಬಹುದೇ?

ಸಾಮಾನ್ಯವಾಗಿ, ಗರ್ಭಧಾರಣೆಯ ಮೊದಲು ಎರಡು ತಿಂಗಳ ಕಾಲ, ಈ ಔಷಧಿಗಳನ್ನು ಸೇವಿಸದಿರುವುದೇ ಸಂಪೂರ್ಣ ಕ್ಷೇಮ. ಆದರೆ ಔಷಧಿ ಅನಿವಾರ್ಯವಾದಾಗ, ವೈದ್ಯರು “ಔಷಧಿ ಸೇವನೆ” ಬಗ್ಗೆ ನಿರ್ಧರಿಸುತ್ತಾರೆ. ಔಷಧಿ ಸೇವನೆ ಮಾಡುತ್ತಿರುವ ಬಾಣಂತಿ, ಮಗುವಿಗೆ ಹಾಲುಣಿಸಬಹುದು.

ii) ಆಪ್ತ ಸಲಹೆಸಮಾಧಾನ: ವ್ಯಕ್ತಿಗಿರುವ ಕಷ್ಟ, ಸಮಸ್ಯೆಗಳು, ಮಾನಸಿಕ ನೋವನ್ನುಂಟು ಮಾಡುವ ವ್ಯಕ್ತಿ-ವಿಷಯಗಳನ್ನು ಪತ್ತೆ ಮಾಡಿ, ಅವುಗಳ ನಿವಾರಣೆ, ನಿಭಾವಣೆಗೆ ಸಲಹೆ-ಸೂಚನೆಗಳನ್ನು ನೀಡಲಾಗುತ್ತದೆ. ಆಸರೆ, ಪ್ರೋತ್ಸಾಹ, ಮಾರ್ಗದರ್ಶನಗಳನ್ನು ನೀಡಬೇಕಾಗುತ್ತದೆ. ಇದನ್ನು ಮನೋಚಿಕಿತ್ಸೆ-ಮಾನಸಿಕ ಸಲಹೆ (pychotherapy) ಎನ್ನುತ್ತಾರೆ. ವ್ಯಕ್ತಿ ಮತ್ತು ಮನೆಯವರು ಮುಕ್ತವಾಗಿ ಮಾತನಾಡಿ, ಪರಿಸರದಲ್ಲಿ ಬದಲಾವಣೆ ತರಬೇಕಾಗುತ್ತದೆ. ವ್ಯಕ್ತಿಯ ಸಮಸ್ಯಾ-ವಿಶ್ಲೇಷಣೆ-ನಿಭಾವಣೆ ಕೌಶಲವನ್ನು ಹೆಚ್ಚಿಸಬೇಕು. ಆತನ/ಆಕೆಯ  ಧೋರಣೆ-ಆಲೋಚನಾ ವಿಧಾನಗಳನ್ನು ಸೂಕ್ತ ರೀತಿಯಲ್ಲಿ ಬದಲಿಸಬೇಕು. ಹೆಚ್ಚು ಸಕಾರಾತ್ಮಕವಾಗಿ, ಆಶಾವಾದದೊಂದಿಗೆ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡಬೇಕು. ನಕಾರಾತ್ಮಕ ಧೋರಣೆ, ಚಿಂತನೆಗೆ ವಿದಾಯ ಹೇಳಬೇಕು.

iii) ಆರೋಗ್ಯಕರ ಮನರಂಜನಾ ಚಟುವಟಿಕೆ ಅಥವಾ ಮನಸ್ಸಿನ ಗಮನವನ್ನು ತಮ್ಮಡೆಗೆ ಸೆಳೆಯುವ ಕೆಲಸಹವ್ಯಾಸಗಳು

ಹೆಚ್ಚಿನ ಖಿನ್ನತೆ ರೋಗಿಗಳು ಯಾವ ಕೆಲಸ-ಚಟುವಟಿಕೆಗಳನ್ನು ಮಾಡದೇ ತಮ್ಮ ಕಷ್ಟ ಸಮಸ್ಯೆಗಳ ಮೆಲುಕು ಹಾಕುತ್ತಾ ಕೂರುತ್ತಾರೆ. ಇದನ್ನು ತಪ್ಪಿಸಲು ಆರೋಗ್ಯಕರ ಮನರಂಜನೆ ಮತ್ತು ಹವ್ಯಾಸಗಳನ್ನು ಹಮ್ಮಿಕೊಳ್ಳಬೇಕು. ಸಂಗೀತ ಶ್ರವಣ ಒಳ್ಳೆಯದು, ಆತ್ಮೀಯರೊಂದಿಗೆ ಮಾತುಕತೆ, ಸಣ್ಣಪುಟ್ಟ ಪ್ರವಾಸ, ಬಂಧು-ಮಿತ್ರರ ಭೇಟಿ, ತೋಟಗಾರಿಕೆ, ಮುದ್ದಿನ ಪ್ರಾಣಿಗಳ ಒಡನಾಟ, ಸಣ್ಣ ಮಕ್ಕಳೊಂದಿಗೆ ಆಟ, ವಿವಿಧ ಕ್ರೀಡೆಗಳು, ಖಿನ್ನತೆಯನ್ನು ತಗ್ಗಿಸಲು ನೆರವಾಗುತ್ತದೆ. ಸರಳವಾದ ಯೋಗಾಸನಗಳು, ಪ್ರಾಣಾಯಾಮ, ಧ್ಯಾನ್ಯ, ಧಾರ್ಮಿಕ-ಆಧ್ಯಾತ್ಮಿಕ ಚಟುವಟಿಕೆಗಳು ಸಹಾಯಕಾರಿ.

iv) ವಿದ್ಯುತ್ಕಂಪನ ಚಿಕಿತ್ಸೆ: ತೀವ್ರ ಬಗೆಯ ಒಳಜನ್ಯ ಖಿನ್ನತೆಯಲ್ಲಿ, ಭ್ರಮೆಯ ಲಕ್ಷಣಗಳಿರುವ ಖಿನ್ನತೆಯಲ್ಲಿ, ತನ್ನ ಬೇಕು-ಬೇಡಗಳನ್ನು ತೀವ್ರವಾಗಿ ನಿರ್ಲಕ್ಷಿಸುವ ರೋಗಿಗಳಲ್ಲಿ “ವಿದ್ಯುತ್ ಕಂಪನ ಚಿಕಿತ್ಸೆ” ಬೇಗ ಚೇತರಿಕೆಯನ್ನು ತರಬಲ್ಲದು. ರೋಗಿಗೆ ಅರಿವಳಿಕೆ ಕೊಟ್ಟು, ಸಣ್ಣ ಪ್ರಮಾಣದ ವಿದ್ಯುತ್ತನ್ನು (80 ರಿಂದ 120 ವೋಲ್ಟ್‌) ಅರ್ಧ ಸೆಕೆಂಡಿನ ಕಾಲ ಮಿದುಳಿಗೆ ಹಾಯಿಸಿ, ಅಲ್ಲಿ ಕಂಪನವನ್ನುಂಟು ಮಾಡಲಾಗುತ್ತದೆ. ಈ ಕಂಪನದಿಂದ, ಡೋಪಮಿನ್ ಪ್ರಮಾಣ ಮಿದುಳಿನಲ್ಲಿ ಹೆಚ್ಚುತ್ತದೆ. ಈ ಚಿಕಿತ್ಸೆಯನ್ನು ವಾರಕ್ಕೆ ಮೂರು ಸಾರಿ, ಒಟ್ಟು ಎಂಟು ಹತ್ತು ಸಲ ನೀಡಲಾಗುತ್ತದೆ. ವಿದ್ಯುತ್‌ ಕಂಪನ ಚಿಕಿತ್ಸೆ ಬಹಳ ಸುರಕ್ಷಿತವಾದದ್ದು. ಯಾವುದೇ ತೀವ್ರ, ದೀರ್ಘ ಕಾಲದ ಅಡ್ಡಪರಿಣಾಮಗಳಿಲ್ಲವಾಗಿ ಅದನ್ನುಪಡೆಯಲು ಯಾರಿಗೂ ಭಯಪಡಬೇಕಾಗಿಲ್ಲ.

ಆತ್ಮಹತ್ಯಾ ಯೋಚನೆ/ಪ್ರಯತ್ನದ ನಿವಾರಣೆ

ತೀವ್ರ ಖಿನ್ನತೆಯಿಂದ ಆತ್ಮಹತ್ಯೆ ಆಲೋಚನೆಗಳು, ಪ್ರಯತ್ನಗಳು ವ್ಯಕ್ತಿ ತನಗೆ ಅಪಾಯ ಮಾಡಿಕೊಳ್ಳುತ್ತಾನೆ ಅಥವಾ ಸಾಯುತ್ತಾನೆ. ಆತ್ಮಹತ್ಯೆಗೆ ಪ್ರಯತ್ನಿಸುವವರಲ್ಲಿ ಶೇಕಡಾ 60ರಷ್ಟು ರಜನ ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಆದರೆ ಅದನ್ನು ಯಾರೂ ಗುರುತಿಸಿರುವುದಿಲ್ಲ ಎಂಬುದು ಗಮನಾರ್ಹ. ಆದ್ದರಿಂದ ಪ್ರತಿ ಖಿನ್ನತೆ ರೋಗಿಯಲ್ಲಿ ಆತ್ಮಹತ್ಯಾ ಸಂಭವನೀಯತೆಯನ್ನು ಗಮನಿಸಬೇಕು.

“ಜೀವನ ಏಕೆ, ಜೀವಿಸುವುದರಲ್ಲಿ ಅರ್ಥವಿಲ್ಲ. ಸಾವು ಬಂದರೆ ಚಂದ. ಸಾಯೋಣ ಎನಿಸುವ ಆಲೋಚನೆ ಇದೆಯೇ” ಎಂದು ರೋಗಿಗೆ ಕೇಳಿ. ಆತ/ಆಕೆ “ಹೂಂ” ಎಂದರೆ, ರೋಗಿಯನ್ನು ಒಂಟಿಯಾಗಿ ಬಿಡಬೇಡಿ. ಸದಾ ಜೊತೆಯಲ್ಲೇ ಇರಿ. ಸ್ನಾನದ ಮನೆ, ಶೌಚಾಲಯಕ್ಕೆ ರೋಗಿ ಹೋದಾಗ ಚಿಲುಕ ಹಾಕಬೇಡ ಎನ್ನಿ. ಅಪಾಯಕಾರಿ ಆಯುಧ, ವಸ್ತುಗಳು, ಮಾತ್ರೆಗಳು, ವಿಷ ಪದಾರ್ಥಗಳು ರೋಗಿಯ ಕೈಗೆ ಸಿಗದಂತೆ ಎಚ್ಚರವಹಿಸಿ.

ರೋಗಿಯನ್ನು ಆತ್ಮೀಯವಾಗಿ ಮಾತನಾಡಿಸಿ, ಸಮಾಧಾನ ಹೇಳಿ ಉತ್ಸಾಹ, ಆಶಾವಾದವನ್ನು ತುಂಬಿ. ಅಗತ್ಯ ಬಿದ್ದರೆ, ರೋಗಿಯನ್ನು ನಿರಂತರ ಗಮನ ಕೊಡುವ ವಾರ್ಡ್‌‌ಗೆ (ಆಸ್ಪತ್ರೆ) ಸೇರಿಸಿ.

ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂಬುದನ್ನು ರೋಗಿಗೆ ಪದೇ ಪದೇ ಹೇಳಿ ಮನದಟ್ಟು ಮಾಡಿಕೊಡಿ. ನಿಮ್ಮ ಮತ್ತು ಸಂಬಂಧಪಟ್ಟ ಎಲ್ಲರ ಸಹಾಯ, ಸಹಕಾರ ಆತನಿಗೆ ಸಿಗುತ್ತದೆ ಎಂದು ಹೇಳಿ. ನಿಮ್ಮ ಆಸರೆ, ಪ್ರೋತ್ಸಾಹದ ಮಾತುಗಳಿಂದ ವ್ಯಕ್ತಿ ಬದುಕಲು ನಿರ್ಧರಿಸುತ್ತಾನೆ.