ಲಕ್ಷಣಗಳು:

  • ದೈಹಿಕ ಬೆಳವಣಿಗೆ ನಿಧಾನವಾಗುವುದು: ಬೆಳೆಯುವ ಮಗುವಿನಲ್ಲಿ ಸಾಮಾನ್ಯವಾಗಿ 3 ತಿಂಗಳಿಗೆ ಕತ್ತು ನಿಲ್ಲುತ್ತದೆ. 6 ತಿಂಗಳಿಗೆ ಮಗು ಕೂರುತ್ತದೆ, 9 ತಿಂಗಳಿಗೆ ನಿಲ್ಲುತ್ತದೆ. 12 ತಿಂಗಳಿಗೆ ಓಡಾಡುತ್ತದೆ, 18 ತಿಂಗಳಿಗೆ ಮಾತಾಡುತ್ತದೆ. ಇದು 3 ತಿಂಗಳಷ್ಟು ತಡವಾದರೆ ಅಂದರೆ ಆರು ತಿಂಗಳಾದರೂ ಕತ್ತು ನಿಂತಿಲ್ಲ. 2 ವರ್ಷವಾದರೂ ಮಗು ಓಡಾಡುವುದಿಲ್ಲ. ಮಾತಾಡಲು ಬರುವುದಿಲ್ಲ ಎಂದರೆ ಬುದ್ಧಿಮಾಂದ್ಯತೆ ಇರಬಹುದೇ ಎಂದು ಯೋಚಿಸಬೇಕು.
  • ದೈಹಿಕ ವಿಶೇಷ ಲಕ್ಷಣಗಳು: ಅತಿಸಣ್ಣ ತಲೆ, ಕಿರಿದಾದ ಕಣ್ಣುಗಳು, ಅಗಲಕಿವಿ, ದೊಡ್ಡನಾಲಿಗೆ, ಅತಿಚಿಕ್ಕಕತ್ತು, ಕೈಕಾಲುಗಳು ಬಹಳ ಗಿಡ್ಡ, ಮಂಗೋಲಿಯನ್ ಬುಡಕಟ್ಟಿನವರಂತೆ ಮುಖಚರ್ಯೆ ಇತ್ಯಾದಿ.
  • ಮಾನಸಿಕ ಬೆಳವಣಿಗೆ/ಬೌದ್ಧಿಕ ಬೆಳವಣಿಗೆ ನಿಧಾನ ಹಾಗೂ ಅಪೂರ್ಣ: ಐದಾರು ವರ್ಷಗಳಾದರೂ, ಮಗುವಿಗೆ ತಾನೇ ಊಟ ಮಾಡಲು, ಬಟ್ಟೆ ಕಳಚಲು/ಹಾಕಿಕೊಳ್ಳಲುಬಾರದು. ಮಲಮೂತ್ರ ವಿಸರ್ಜನೆಯ ಮೇಲೆ ಹತೋಟಿ ಇಲ್ಲ. ಎಲ್ಲೆಂದರೆ ಅಲ್ಲಿ ಹಾಸಿಗೆ-ಬಟ್ಟೆಯಲ್ಲೇ ಮಲಮೂತ್ರ ಮಾಡಿಕೊಳ್ಳುತ್ತಿದೆ, ಸಾಮಾನ್ಯ – ಅಪಾಯಕಾರಿ ವಸ್ತು-ಪ್ರಾಣಿ, ಸನ್ನಿವೇಶಗಳನ್ನು ಮಗು ಗುರುತಿಸುವುದಿಲ್ಲ. ಯಾವ ಆಟವನ್ನು ಕಲಿತಿಲ್ಲ., ಶಾಲೆಗೆ ಹಲವು ವರ್ಷಗಳ ಕಾಲ     ಹೋಗುತ್ತಿದ್ದರೂ ಓದಲು, ಬರೆಯಲು ಕಲಿತಿಲ್ಲ, ವಯಸ್ಸಿಗೆ ತಕ್ಕ ತಿಳುವಳಿಕೆ ಜ್ಞಾನವಿಲ್ಲ, ಸಾಮಾಜಿಕ ಕೌಶಲ್ಯವಿಲ್ಲ, ತನ್ನ ವಯಸ್ಕರೊಂದಿಗೆ ಹೇಗೆ ಬೆರೆಯಬೇಕು, ದೊಡ್ಡವರು / ಚಿಕ್ಕವರೊಂದಿಗೆ ಹೇಗೆ ವ್ಯವಹರಿಸಬೇಕು, ಸಾಮಾಜಿಕ ಸನ್ನಿವೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು, ಗಣಿತ – ಲೆಕ್ಕಾಚಾರ ಸ್ವಲ್ಪವೂ      ಬರುವುದಿಲ್ಲ, ನಿತ್ಯ ಸುತ್ತಮುತ್ತ ಕಾಣುವ ನೋಡುವ ವಸ್ತು-ವಿಶೇಷಗಳನ್ನು ಗುರುತಿಸಲು / ಬಳಸಲು ಬರುವುದಿಲ್ಲ. ಮಂಕುತನ ಇಲ್ಲವೇ ಅತೀ ತುಂಟತನ, ಆಕ್ರಮಣಶೀಲತೆ, ವಸ್ತುಗಳ ಬೆಲೆ/ಪ್ರಾಮುಖ್ಯತೆಯ ಅರಿವಿಲ್ಲ, ಶಾಲೆಯಲ್ಲಿ ಎಲ್ಲಾ ವಿಷಯಗಳಲ್ಲಿ ಹಿಂದೆ ಬಿದ್ದಿದೆ-ಇದೆಲ್ಲಾ ಬುದ್ಧಿಮಾಂದ್ಯತೆಯ ಸಾಮಾನ್ಯ ಲಕ್ಷಣಗಳು, ಬಹುತೇಕ ಎಲ್ಲರಿಂದ ಈ ಮಗು “ದಡ್ಡ”,”ಪೆದ್ದ”, “ಬುದ್ಧಿ ಇಲ್ಲದವನು/ಇಲ್ಲದವಳು” ಎನಿಸಿಕೊಳ್ಳುತ್ತಾರೆ. ವಯಸ್ಸಿಗೆ ತಕ್ಕಂತಹ ದೈಹಿಕ / ಮಾನಸಿಕ / ಬೌದ್ಧಿಕ / ಸಾಮಾಜಿಕ ಬೆಳವಣಿಗೆ ಇಲ್ಲ, ಸಾಮರ್ಥ್ಯ-ಕೌಶಲಗಳಿಲ್ಲದಿರುವುದೇ ಬುದ್ಧಿಮಾಂದ್ಯತೆಯ ಪ್ರಮುಖ ಲಕ್ಷಣ, ಜೊತೆಗೆ ಕೆಲವು ಬುದ್ಧಿಮಾಂದ್ಯ ಮಕ್ಕಳಲ್ಲಿ ಶಾರೀರಿಕ ನ್ಯೂನತೆ ನರಸಂಬಂಧಿ ಕೊರತೆಗಳು, ಫಿಟ್ಸ್, ಅತಿಚಂಚಲತೆ/ಚಟುವಟಿಕೆಗಳೂ ಕಾಣಬರುತ್ತವೆ.

ಕಾರಣಗಳು: ಇವನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು

1.   ಹೆರಿಗೆ ಪೂರ್ಣ: ವಂಶವಾಹಿನಿಗಳಲ್ಲಿ, ವರ್ಣತಂತುಗಳಲ್ಲಿ ದೋಷಗಳು, ಉದಾ: ವರ್ಣತಂತು 21ನೇ ಜೋಡಿಯಲ್ಲಿನ ವ್ಯತ್ಯಾಸದಿಂದ “ಡೌನ್ಸ್ ಸಿಂಡ್ರೋಮ್” ಅಂದರೆ ಮಗು ಮಂಗೋಲಿಯನ್ನರಂತೆ ಮುಖಚಹರೆ ಹಾಗೂ ಬುದ್ದಿಮಾಂದ್ಯತೆಯನ್ನು ಹೊಂದಿರುತ್ತದೆ. ಸಣ್ಣ ಮಿದುಳು-ತಲೆಗೆ ಕಾಣರ-ವಂಶವಾಹಿನಿಗಳ ನ್ಯೂನತೆ, ಗರ್ಭಧಾರಣೆಯ ಮೊದಲ ಎರಡು ತಿಂಗಳಲ್ಲಿ, ಗರ್ಭಿಣಿಗೆ ವೈರಸ್ ಸೋಂಕುಂಟಾಗುವುದರಿಂದ (ದಢಾರ, ಗೌತಲಮ್ಮ, ಲಿವರ್ ಊರಿಯೂತ, ಸಾಮಾನ್ಯ ಫ್ಲೂ) ಭ್ರೂಣದ ಮಿದುಳಿಗೆ ಹಾನಿಯುಂಟಾಗುತ್ತದೆ. ಹಾಗೇ ಗರ್ಭಧಾರಣೆಯ ಈ ಅವಧಿಯಲ್ಲಿ ವೈದ್ಯಕೀಯ ಮಾರ್ಗದರ್ಶನವಿಲ್ಲದೆ,           ಔಷಧಿಗಳನ್ನು ಉಪಯೋಗಿಸುವುದರಿಂದ ಕೂತ ಮಿದುಳಿಗೆ ಹಾನಿಯಾಗುತ್ತದೆ. ಗರ್ಭಿಣಿಗೆ ಪೌಷ್ಟಿಕಾಂಶ ಉಳ್ಳ ಆಹಾರ ದೊರೆಯದಿರುವುದು, ಅಯೋಡಿನ್ ಕೊರತೆ, ಆಕೆ ಗರ್ಭಪಾತಕ್ಕೆ ವಿಫಲ ಪ್ರಯತ್ನ ಮಾಡುವುದು, ಪದೇ ಪದೇ ಎಕ್ಸ್‌ರೇಗಳಿಗೆ ತನ್ನ ಶರೀರವನ್ನು ಒಡ್ಡಿಕೊಳ್ಳುವುದು, ನಿತ್ಯ ಧೂಮಪಾನ-ಮದ್ಯಪಾನ ಮಾಡುವುದು ಬುದ್ಧಿಮಾಂದ್ಯ ಮಗು ಹುಟ್ಟಲು ಕಾರಣವಾಗಬಹುದು.

2.   ಹೆರಿಗೆ ಸಮಯ: ಯಾವುದೇ ಕಾರಣದಿಂದ ಹೆರಿಗೆ ಕಷ್ಟವಾಯಿತು; ಮಗು ಜನನ ಹಾದಿಯಲ್ಲಿ ಸಿಕ್ಕಿಕೊಂಡಿದೆ. ಆಗ ಮಗುವಿಗೆ ತಲೆಗೆ ಪೆಟ್ಟಾಗಿ, ಮಿದುಳಿನಲ್ಲಿ ರಕ್ತಸ್ರಾವವಾಗಬಹುದು. ಮಗು ಸುಸ್ತಾಗಿ, ಹೊರಬಂದ ಮೇಲೆ ಉಸಿರಾಟ ಪ್ರಾರಂಭವಾಗದೇ, ಆಮ್ಲಜನಕರ ಕೊರತೆಯುಂಟಾಗುವುದು (ಹೈಪಾಕ್ಸಿಯ ಮತ್ತು ಅನಾಕ್ಸಿಯಾ) ಬುದ್ಧಿಮಾಂದ್ಯತೆಗೆ ಅತಿ ಸಾಮಾನ್ಯ ಕಾರಣ. ಏಕೆಂದರೆ, ನಮ್ಮ ದೇಶದಲ್ಲಿ ಇಂದಿಗೂ ಶೇಕಡಾ 60 ರಷ್ಟು ಹೆರಿಗೆಗಳನ್ನು ಮನೆಯಲ್ಲೇ ಮಾಡಲಾಗುತ್ತದೆ. ಹಾಗೂ ಹೆರಿಗೆ ಕಷ್ಟವಾದರೆ, ತತ್‌ಕ್ಷಣ ವೈದ್ಯಕೀಯ ನೆರವು ಸಿಗುವುದಿಲ್ಲ.

3.   ಹೆರಿಗೆಯೋತ್ತರ: ಮಗು ಹುಟ್ಟಿದ ಮೇಲೆ ಮೊದಲ ಐದು ವರ್ಷಗಳು ಮಿದುಳಿನ ಉಳಿದ-ಬೆಳವಣಿಗೆ ದೃಷ್ಟಿಯಿಂದ ಪ್ರಮುಖವಾದುವು. ಈ ಅವಧಿಯಲ್ಲಿ ಅಪೌಷ್ಟಿಕತೆ, ಪದೇಪದೇ ಫಿಟ್ಸ್‌ ಬರುವುದು, ಮಿದುಳುಜ್ವರ, ಅನೀಮಿಯಾ, ಅಯೋಡಿನ್ ಕೊರತೆ, ತಲೆಗೆ ಪೆಟ್ಟು, ಪ್ರಚೋದನೆಗಳಿಲ್ಲದ ಬರಡು ವಾತಾವರಣದಿಂದಾಗಿ ಬುದ್ಧಿಮಾಂದ್ಯತೆ ಬರಬಹುದು.

ಯಾರಲ್ಲಿ ಹೆಚ್ಚು?

ಗ್ರಾಮೀಣ ಪ್ರದೇಶಗಳಲ್ಲಿ, ಪಟ್ಟಣಗಳ ಕೆಳವರ್ಗದವರಲ್ಲಿ, ಗಿರಿಜನರಲ್ಲಿ ಬುದ್ಧಿಮಾಂದ್ಯತೆ ಮಕ್ಕಳು ಹೆಚ್ಚಾಗಿ ಕಂಡುಬರುತ್ತವೆ. ಗರ್ಭಿಣಿ ಸ್ತ್ರೀಗೆ ಮಕ್ಕಳಿಗೆ ಸಕಾಲದ ವೈದ್ಯಕೀಯ ನೆರವಿನಿಂದ, ಬಹುತೇಕ ಬುದ್ಧಿಮಾಂದ್ಯತೆ ಪ್ರಕರಣಗಳನ್ನು ನಿವಾರಿಸಬಹುದು.

ಚಿಕಿತ್ಸೆ: ಬುದ್ಧಿಯನ್ನು ಹೆಚ್ಚಿಸಬಲ್ಲ, ಮಿದುಳಿನ ಬೆಳವಣಿಗೆಯನ್ನು ಪ್ರಚೋದಿಸಬಲ್ಲ ಅಥವಾ ಮಿದುಳಿನ ಹಾನಿಯನ್ನು ತಗ್ಗಿಸಬಲ್ಲ ಔಷಧಿಗಳು ಲಭ್ಯವಿಲ್ಲವಾಗಿ, ಬುದ್ಧಿಮಾಂದ್ಯತೆಗೆ ಔಷಧಿಯ ಚಿಕಿತ್ಸೆ ಇಲ್ಲ. ಟಾನಿಕ್‌ಗಳು, ಶಕ್ತಿವರ್ಧಕಗಳಿಂದ ಪ್ರಯೋಜನವಿಲ್ಲ. ಇತರ ಆರೋಗ್ಯ ಸಮಸ್ಯೆಗಳಿದ್ದರೆ ಮಾತ್ರ ಔಷಧಿಗಳನ್ನು ಕೊಡಲಾಗುತ್ತದೆ. ಉದಾಹರಣೆಗೆ: ಫಿಟ್ಸ್ ಇದ್ದರೆ ಅದಕ್ಕೆ ಮಾತ್ರೆ, ಅತಿ ತೀಟೆ/ಚಟುವಟಿಕೆ ಆಕ್ರಮಣಶೀಲತೆ ಇದ್ದರೆ ಅದರ ಶಮನಕ್ಕೆ ಮಾತ್ರೆ ಬೇಕು.

ಪ್ರಚೋದನೆ, ಫಿಸಿಯೋಥೆರಪಿ, ತರಬೇತಿ: ಇರುವ ಮಿದುಳಿ, ಮಿದುಳಿನ ನರಕೋಶಗಳಿಗೆ ಹೆಚ್ಚು ಪ್ರಚೋದನೆ ನೀಡಬೇಕು. ಮಗುವನ್ನು ಎತ್ತಿಕೊಂಡು ಆಡಿಸುವುದು, ವಿವಿಧ ವಸ್ತು ವಿಶೇಷಗಳನ್ನು ತೋರಿಸುವುದು, ವಿವಿಧ ಶಬ್ಧ, ವಾಸನೆ, ಸ್ಪರ್ಶಗಳ ಪರಿಚಯ ಮಾಡಿಸುವುದು, ಮಗುವಿಗೆ ಕೂರಲು, ನಡೆಯಲು, ಓಡಾಡಲು, ಕೈಕಾಲುಗಳನ್ನು ಉಪಯೋಗಿಸಲು ಅಂಗಮರ್ಧನ (ಕೊಬ್ಬರಿ ಎಣ್ಣೆ ಹಚ್ಚಿ, ಇಡೀ ಮೈಕೈಕಾಲುಗಳನ್ನು ನೀವುವುದು, ಮಡಿಸಿ ಆಡಿಸುವುದು) ಹಾಗೂ ತರಬೇತಿಯನ್ನು ನೀಡಬೇಕು. ತೀವ್ರ ಬುದ್ಧಿಮಾಂದ್ಯತೆ ಇದ್ದರೆ, ಮಗು ಕಲಿಯುವುದು ತುಂಬಾ ನಿಧಾನವಾಗುತ್ತದೆ. ಅಲ್ಪಮಟ್ಟದ ಬುದ್ಧಿಮಾಂದ್ಯತೆ ಇದ್ದರೆ, ಮಗು ನಿಧಾನವಾಗಿ ಕೌಶಲಗಳನ್ನು ಕಲಿಯುತ್ತದೆ. ಪ್ರೋತ್ಸಾಹ, ಬಹುಮಾನ, ಶ್ಲಾಘನೆಗಳು ಕಲಿಯಲು ಬೇಕಾದ “ಸ್ವ ಇಚ್ಛೆ”ಯನ್ನು ಮಗುವಿಗೆ ನೀಡುತ್ತವೆ. ಅಲ್ಪಮಟ್ಟದ ಬುದ್ಧಿಮಾಂದ್ಯ ಮಕ್ಕಳು ಸಾಮಾನ್ಯ ಶಾಲೆಗೇ ಹೋಗಿ ನಿಧಾನವಾಗಿ ಓದುಬರಹ, ಲೆಕ್ಕಾಚಾರಗಳನ್ನು ಕಲಿಯಬಲ್ಲವು. ತೀವ್ರ ಬುದ್ಧಿಮಾಂದ್ಯ ಮಕ್ಕಳಿಗೆ ಇದು ಸಾಧ್ಯವಾಗುವುದಿಲ್ಲ. ಅವರಿಗೆ ನಿತ್ಯದ ದೈನಂದಿನ ಕೆಲಸ ಕಾರ್ಯಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಕಲಿಸಬೇಕು. ಅಂದರೆ ತಾವೇ ಊಟ ಮಾಡುವುದು, ಬಟ್ಟೆ ತೊಟ್ಟುಕೊಳ್ಳುವುದು, ನಿರ್ದಿಷ್ಟ ಜಾಗ, ಶೌಚಾಲಯದಲ್ಲೇ ಮಲಮೂತ್ರ ವಿಸರ್ಜನೆ ಮಾಡುವುದು, ಸಾಮಾನ್ಯ ಅಪಾಯಗಳನ್ನು ನಿವಾರಿಸಿಕೊಳ್ಳುವುದು, ಇತರರೊಂದಿಗೆ ಸಂಪರ್ಕ/ಸಂವಹನ ಮಾಡುವುದು ಇತ್ಯಾದಿಗಳನ್ನು ಇತರರ ಕನಿಷ್ಟ ನೆರವಿನಿಂದ ಮಾಡುವುದನ್ನು ಕಲಿಯಬೇಕು.

ಬುದ್ಧಿಮಾಂದ್ಯ ಮಕ್ಕಳು ಹರೆಯಕ್ಕೆ ಕಾಲಿಟ್ಟ ಮೇಲೆ, ಏನಾದರೂ ಸಣ್ಣಪುಟ್ಟ ಕೆಲಸಗಳನ್ನು ಮಾಡಿ, ಉಪಯುಕ್ತವಾಗಿ ಬದುಕುವುದಕ್ಕೆತರಬೇತಿ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಗೌರವಯುತವಾಗಿ ಬದುಕುವ ಹಕ್ಕು ಈ ವ್ಯಕ್ತಿಗಳಿಗೆ ಇದೆ ಎಂಬುದನ್ನು ಎಲ್ಲರೂ ಅರಿಯಬೇಕು.

ಸರ್ಕಾರ ಸಂಘಸಂಸ್ಥೆಗಳಿಂದ ನೆರವು

ಶೇಕಡಾ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯವಿರುವ ಬುದ್ಧಿಮಾಂದ್ಯ ಮಗುವಿಗೆ ಅಂಗವೈಕಲ್ಯ ಅಧಿ ನಿಯಮದ ಪ್ರಕಾರ ಸರ್ಕಾರದಿಂದ ಆರ್ಥಿಕ ನೆರವು, ತರಬೇತಿ, ಸ್ವಾವಲಂಬಿಯಾಗಿ ಬದುಕಲು ಬೇಕಾದ ಸರಳ ಉದ್ಯೋಗ ಮೀಸಲಾತಿ ಇತ್ಯಾದಿ ಅನುಕೂಲಗಳಿವೆ. ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ.

ಸೇವಾ ಸಂಸ್ಥೆಗಳು ಹಾಗೂ ಇತರರು ಬುದ್ದಿಮಾಂದ್ಯರ ಅನುಕೂಲ, ಒಳಿತಿಗಾಗಿ ಕೆಲಸ ಮಾಡುವ ಅಗತ್ಯವಿದೆ. ತಂದೆ ತಾಯಿಗಳಿಗೆ ಆಸರೆ-ಮಾರ್ಗದರ್ಶನವನ್ನು ನೀಡಲು ಎಲ್ಲರೂ ಮುಂದಾಗಬೇಕು.