ಆಟಿಸಮ್: ಮಗು ಸಾಮಾಜಿಕ ಸಂಬಂಧಗಳಲ್ಲಿ ಇತರರೊಡನೆ ಪ್ರೀತಿ ಸ್ನೇಹದಿಂದ ವರ್ತಿಸುವುದನ್ನು ಬಿಟ್ಟು ಒಂಟಿಯಾಗಿರುವುದು, ಮಾತನಾಡುವುದನ್ನು ನಿಲ್ಲಿಸಿ ಇತರರೊಡನೆ ಯಾವುದೇ ರೀತಿಯ ಸಂಪರ್ಕ-ಸಂವಹನೆಯನ್ನು ನಿಲ್ಲಿಸುವುದು, ತನ್ನದೇ ಲೋಕದಲ್ಲಿದ್ದು, ಮಾನಸಿಕ, ಬೌದ್ಧಿಕ ಬೆಳವಣಿಗೆ-ವಿಕಾಸವನ್ನು ಪ್ರಕಟಿಸದಿರುವುದು “ಆಟಿಸಮ್” ಎಂಬ ವಿಶಿಷ್ಟ ಕಾಯಿಲೆಯ ಲಕ್ಷಣಗಳು.

ಸಾಮಾನ್ಯವಾಗಿ ೩ ವರ್ಷಕ್ಕೂ ಮೊದಲೇ ಕಾಣಿಸಿಕೊಳ್ಳುವ ಈ ಕಾಯಿಲೆಯಲ್ಲಿ, ಅದುವರೆಗೆ ಶಾರೀರಿಕವಾಗಿ ಚೆನ್ನಾಗಿದ್ದ ಮಗುವಿನಲ್ಲಿ ಕೆಲವು ಬದಲಾವಣೆಗಳು ಕಾಣಬರುತ್ತವೆ. ತಾಯಿ ಅಥವಾ ಮನೆಯ ಇತರ ಸದಸ್ಯರೊಂದಿಗೆ ಒಡನಾಟವನ್ನು ಮಗು ಪ್ರಾರಂಭ ಮಾಡುವುದಿಲ್ಲ. ಕಣ್ಣಲ್ಲಿ ಕಣ್ಣು ಇಟ್ಟು ನೋಡುವುದಿಲ್ಲ. ಬೇಕು ಬೇಡಗಳನ್ನು ನೇರವಾಗಿ ಹೇಳುವುದಿಲ್ಲ. ಒಬ್ಬನೇ ಕುಳಿತು, ತನ್ನಪಾಡಿಗೆ ಇರತೊಡಗುತ್ತದೆ. ಯಾವುದಾದರೂ ಒಂದು ವಸ್ತುವನ್ನು ಹಿಡಿದು ಅದನ್ನು ನೋಡುತ್ತಾ ಕೂರುತ್ತದೆ. ಮಾತನಾಡುವುದನ್ನು ನಿಲ್ಲಿಸುತ್ತದೆ. ಇತರರೊಂದಿಗೆ, ಸಹವಯಸ್ಕ ಮಕ್ಕಳೊಂದಿಗೆ ಯಾವುದೇ ರೀತಿಯ ಸಂಪರ್ಕ-ಸಂವಹನ ಮಾಡುವುದಿಲ್ಲ. ಯಾವುದೇ ವ್ಯವಸ್ಥಿತ ಆಟ/ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ. ತನ್ನ ಕೈಗಳನ್ನು ತಿರುವುತ್ತಾ, ಅಂಗೈ ಬೆರಳುಗಳನ್ನು ನೋಡುತ್ತಾ, ಛಾವಣಿಯನ್ನೋ, ಶೂನ್ಯವನ್ನೋ ದೃಷ್ಠಿಸುತ್ತಾ ಕಾಲಕಳೆಯುತ್ತದೆ. ಬೆಳವಣಿಗೆ ಇದ್ದಲ್ಲೇ ಸ್ಥಿರವಾಗಿ ನಿಲ್ಲುತ್ತದೆ. ಮಾಡಿದ್ದನ್ನೇ ಮಾಡುವುದು, ಉದಾ: ಚಪ್ಪಾಳೆ ತಟ್ಟುವುದು, ಶರೀರವನ್ನು ಹಿಂದಕ್ಕೆ ಮುಂದಕ್ಕೆ ತೂಗುವುದು, ತಲೆಯನ್ನು ಗೋಡೆಗೆ ಅಥವಾ ಇನ್ನಾವುದೇ ಮೇಲ್ಮೈಗೆ ತಾಗಿಸುವುದನ್ನು ಪುನರಾವರ್ತನೆ ಮಾಡುತ್ತಲೇ ಇರುತ್ತದೆ. ಮಗುವಿಗೆ ಆಸಕ್ತಿಯ ಶ್ರೇಣಿ ಬಹಳ ಕಡಿಮೆ ಇರುತ್ತದೆ. ತನ್ನ ಪರಿಸರದಲ್ಲಿ ಸ್ವಲ್ಪ ಬದಲಾವಣೆಯಾದರೂ ಮಗು ಪ್ರತಿಭಟಿಸಿ ರದ್ಧಾಂತ ಮಾಡುತ್ತದೆ. ಅತ್ಯಲ್ಪ ಕಾರಣಗಳಿಗೆ ಮಗು ಭಾವೋದ್ವೇಗಕ್ಕೆ ಒಳಗಾಗುತ್ತದೆ. ಕೆಲವು ಆಟಿಸಂ ಇರುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆಯ ಲಕ್ಷಣಗಳೂ ಇರುತ್ತವೆ. ಕೆಲವು ಮಕ್ಕಳಲ್ಲಿ (ಶೇಕಡ 10 ರಿಂದ 25%) ಮೂರ್ಛೆರೋಗವೂ ಇರುತ್ತದೆ. ತಮ್ಮನ್ನು ತಾವೇ ಗಾಯಗೊಳಿಸುವ ಪ್ರವೃತ್ತಿ ಕೆಲವರಲ್ಲಿ ಕಂಡುಬರುತ್ತದೆ.

ಆಟಿಸಂ ಏಕೆ ಬರುತ್ತದೆ ಎಂಬುದು ಗೊತ್ತಿಲ್ಲ. ಅನುವಂಶೀಯತೆ, ಮಿದುಳಿನ ಹಾನಿ ಇದರಲ್ಲಿ ಪಾತ್ರವಹಿಸುವಂತೆ ತೋರುತ್ತದೆ.

ಚಿಕಿತ್ಸೆ: ಸತತವಾಗಿ ಸಹನೆಯಿಂದ ಮಗುವಿಗೆ ತರಬೇತಿ ನೀಡಬೇಕು. ಮಗುವಿನ ಗಮನವನ್ನು ಬೇರೆಡೆಗೆ, ಸಂವಹನ ಸಂಪರ್ಕಕ್ಕೆ, ಸಾಮಾಜಿಕ ಚಟುವಟಿಕೆಗಳ ಎಡೆಗೆ ಸೆಳೆಯಬೇಕು. ಅದರ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಆಟಿಸಂ ಲಕ್ಷಣಗಳು ಜೀವನ ಪೂರ್ತಾ ಉಳಿಯಬಹುದಾದ್ದರಿಂದ ಇದೊಂದು ಮಾನಸಿಕ ಅಂಗವೈಕಲ್ಯವೆಂದೇ ಪರಿಗಣಿಸಲಾಗುತ್ತದೆ. ಹಲೋಪೆರಿಡಾಲ್ ಔಷಧಿ ಸ್ವಲ್ಪಮಟ್ಟಿಗೆ ಉಪಯುಕ್ತ.

ಏಕಾಗ್ರತೆಯ ಕೊರತೆಅತಿ ಚಟುವಟಿಕೆಯ ಸಮಸ್ಯೆ Attention Deficit and Hyperkinetic Disorder (ADHD)

ಚಂಚಲತೆ, ಏಕಾಗ್ರತೆ ಇಲ್ಲದಿರುವುದು, ಅತಿ ಚಟುವಟಿಕೆ-ತೀಟೆ, ಥಟ್ ಎಂದು ಹಿಂದೆಮುಂದೆ ನೋಡದೆ ಏನನ್ನಾದರೂ ಮಾಡುವುದು, ನಿಂತಲ್ಲಿ ನಿಲ್ಲದೇ ಸುಮ್ಮನೆ ಪರದಾಡುವುದು, ಅಪಾಯಕಾರಿಯಾದ ಚಟುವಟಿಕೆಗಳಲ್ಲಿ ತೊಡಗುವುದು-ಈ ಕಾಯಿಲೆ ಮುಖ್ಯ ಲಕ್ಷಣಗಳು. ಇದು ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ಮಗು ಓಡಾಡಲು ಮತ್ತು ಆಟವಾಡಲು ವಯಸ್ಸನ್ನು ತಲುಪಿದಾಗ ತಂದೆ ತಾಯಿಗಳು ಈ ಕಾಯಿಲೆಯ ಇರುವಿಕೆಯನ್ನು ಗಮನಿಸುತ್ತಾರೆ. ಮಗುವಿನ ಗಮನ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಸುತ್ತಮುತ್ತಲಿನ ಸಣ್ಣ ದೊಡ್ಡ ಪ್ರಚೋದನೆಗಳಿಗೆ ತತ್‌ಕ್ಷಣ ಸ್ಪಂದಿಸಲು ಪ್ರಾರಂಭಿಸುತ್ತಾರೆ. ಯಾವುದೇ ಒಂದು ಕೆಲಸ/ಚಟುವಟಿಕೆಯಲ್ಲಿ ಅವರು ತೊಡಗಿಕೊಳ್ಳಲಾರರು, ನಿಂತಲ್ಲಿ ನಿಲ್ಲಲಾರರು, ಕುಳಿತಲ್ಲಿ ಕುಳಿತುಕೊಳ್ಳಲಾರರು. ಸುಮ್ಮನೇ ಓಡಾಡುತ್ತಾರೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಾರೆ, ಕಣ್ಣಿಗೆ ಕಂಡ ವಸ್ತುಗಳತ್ತ ಓಡುತ್ತಾರೆ, ಅವುಗಳನ್ನು ಕೈಯಲ್ಲಿ ಹಿಡಿದು ನೋಡಿ, ಇಡುತ್ತಾರೆ ಅಥವಾ ಎಸೆಯುತ್ತಾರೆ. ಜನರ ಬಳಿಗೆ ಹೋಗುತ್ತಾರೆ. ಮರುಕ್ಷಣ ಅವರನ್ನು ಬಿಟ್ಟು ಹೋಗುತ್ತಾರೆ. ತಿಂಡಿ/ಊಟ ತಿನ್ನುವಾಗಲೂ ಅಷ್ಟೆ. ಅರ್ಧ ತಿಂದು ಓಡುತ್ತಾರೆ. ಸ್ನಾನ ಮಾಡುವಾಗ ಅರ್ಧದಲ್ಲೇ ಸ್ನಾನ ಮಾಡುವುದನ್ನು ನಿಲ್ಲಿಸಿ, ಮತ್ತೇನಾದರೂ ಮಾಡಲು ಹೊರಡುತ್ತಾರೆ. ಇನ್ನು ನರ್ಸರಿ/ಶಾಲೆಗೆ ಹೋದರಂತೂ ಅವರನ್ನು ಹಿಡಿಯಲು ಸಾಧ್ಯವಿಲ್ಲ. ತೀಟೆ, ಬರೀ ತೀಟೆ, ಕೆಲವು ಸಲ ಅವರನ್ನು ಕಟ್ಟಿಹಾಕಬೇಕಾಗಬಹುದು. ಕೋಪ ಹೆಚ್ಚು. ಹಿಂದೆ-ಮುಂದೆ ಆಲೋಚಿಸದೆ, ತಂದೆ ತಾಯಿಗಳ ಮೇಲೆ, ಸಹವಯಸ್ಕರ ಮೇಲೆ, ಅಪರಿಚಿತರ ಮೇಲೆ ಸಿಟ್ಟು ತೋರಿಸುತ್ತಾರೆ. ಬೈದು ಹೊಡೆಯುತ್ತಾರೆ, ವಸ್ತುಗಳನ್ನು ಹಾಳು ಮಾಡುತ್ತಾರೆ. ರಸ್ತೆಗೆ ಥಟ್ಟನೇ ನುಗ್ಗುತ್ತಾರೆ. ರಸ್ತೆಯಿಂದ ಫುಟ್‌ಪಾತ್‌ಗೆ, ಫುಟ್‌ಪಾತ್‌ನಿಂದ ರಸ್ತೆಗೆ ಜಿಗಿದು ಓಡುತ್ತಾರೆ. ಓಡುವ ವಾಹನಗಳ ಭಯವಿಲ್ಲ, ಬೀದಿ ನಾಯಿಗಳನ್ನು ಮುಟ್ಟಿ ತಟ್ಟಿ ಖುಷಿಪಡುತ್ತಾರೆ. ಅಪಾಯದ ಅಂಜಿಕೆಯಿಲ್ಲ. ಓಡುವಾಗ, ಚಲಿಸುವಾಗ, ಬಿದ್ದು ಇತರ ವಸ್ತುಗಳಿಗೆ ಡಿಕ್ಕಿ ಹೊಡೆದು ಗಾಯಗಳಾದರೂ ಲೆಕ್ಕಿಸುವುದಿಲ್ಲ. ಚೂಪಾದ, ಹರಿತವಾದ ಚಾಕು, ಕತ್ತರಿ, ಸೂಜಿಗಳಿಂದ ತಮಗೂ ಇತರರಿಗೂ ಗಾಯಮಾಡುತ್ತಾರೆ. ಅವುಗಳನ್ನು ಉಪಯೋಗಿಸುವಾಗ ಕನಿಷ್ಠ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಅಡುಗೆಮನೆಗೆ ನುಗ್ಗಿ ಎಲ್ಲ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಬಹುದು. ಟೂತ್‌ಪೇಸ್ಟನ್ನು ಹೊರತೆಗೆದು ಗೋಡೆ ನೆಲಕ್ಕೆ ಬಳಿಯಬಹುದು. ಓದಿನಲ್ಲಿ/ಕಲಿಕೆಯಲ್ಲಿ ಸಹಜವಾಗಿ ಹಿಂದೆ ಬೀಳುತ್ತಾರೆ. ಯಾವುದೇ ಆಟವನ್ನು ವ್ಯವಸ್ಥಿತವಾಗಿ, ನಿಯಮಬದ್ಧವಾಗಿ ಆಡಲು ಕಲಿಯುವುದಿಲ್ಲ. ಹೀಗಾಗಿ ಈ ಸಮಸ್ಯೆ ಇರುವ ಮಕ್ಕಳನ್ನು ಕಂಡರೆ, ಸಹವಯಸ್ಕರು, ಶಿಕ್ಷಕರು, ಪಾಲಕರು ಹೆದರುವಂತಾಗುತ್ತದೆ. ADHD ಇರುವ ಮಕ್ಕಳನ್ನು ಸುಧಾರಿಸುವುದು ಬಹಳ ಕಷ್ಟವಾಗುತ್ತದೆ.

ಕಾರಣಗಳು: ಅನುವಂಶೀಯತೆ ಹಾಗೂ ಮಿದುಳಿಗೆ ಆದ ಸಣ್ಣ ಪ್ರಮಾಣದ ಹಾನಿಯೇ ADHDಗೆ ಕಾರಣ ಎನ್ನಲಾಗಿದೆ. ಗರ್ಭಧಾರಣೆ ಅವಧಿಯಲ್ಲಿ, ಗರ್ಭಸ್ಥ ಶಿಶುವಿನ ಮಿದುಳಿಗೆ ಹಾನಿಯಾಗಬಹುದು. ತಾಯಿಗೆ ಉಂಟಾಗುವ ವೈರಸ್ ಸೋಂಕು, ಪೌಷ್ಠಿಕಾಂಶದ ಕೊರತೆ, ಔಷಧಿಗಳ ಸೇವನೆ, ವಿಫಲ ಗರ್ಭಪಾತ – ಈ ಹಾನಿಯ ಸಾಮಾನ್ಯ ಕಾರಣಗಳು. ಹೆರಿಗೆಯಾಗುವ ಸಮಯದಲ್ಲಿ ಕಂಡುಬರುವ ತೊಡಕುಗಳಿಂದ, ಮಗುವಿನ ಮಿದುಳಿಗೆ ಹಾನಿಯಾಗುವುದು ಸರ್ವೇಸಾಮಾನ್ಯ. ಹೆರಿಗೆಯ ನಂತರದ ಸಮಸ್ಯೆಗಳಿಂದ ಹಾನಿ ಸಂಭವಿಸಬಹುದು. ಮಿದುಳು, ಜ್ವರ, ಫಿಟ್ಸ್, ತಲೆಗೆಪೆಟ್ಟಿನಿಂದ ಈ ತೊಂದರೆ ಕಾಣಿಸಿಕೊಳ್ಳುವುದು.

ಚಿಕಿತ್ಸೆ:

1)    ಔಷಧಿಗಳು: ಮೀಥೈಲ್ ಫೆನಿಡೇಟ್, ಕ್ಲೋನಿಡಿನ್, ಹೆಲೋಪಿರಿಡಾಲ್, ರಿಸ್ಟಿರಿಡಾನ್, ಅಟೆಂಟ್ರಾಲ್ ಇತ್ಯಾದಿ ಔಷಧಿಗಳು ಅತೀ ಚಟುವಟಿಕೆಗಳನ್ನು ತಗ್ಗಿಸುತ್ತವೆ. ಆರರಿಂದ ಹನ್ನೆರಡು ತಿಂಗಳ ಕಾಲ ಉಪಯೋಗಿಸಬೇಕು.

2)    ಪರಿಸರದಲ್ಲಿ ಬದಲಾವಣೆ: ಪ್ರಚೋದನೆಗಳು, ಆಕರ್ಷಣೀಯ ವಸ್ತುಗಳನ್ನು ತಗ್ಗಿಸಬೇಕು. ಪ್ರಶಾಂತ ವಾತಾವರಣವಿರಬೇಕು.

3)                ಮಗುವಿನ ಆಸಕ್ತಿಯನ್ನು ಹಿಡಿದಿಡುವ ಚಟುವಟಿಕೆಗಳನ್ನು ಮಗುವಿಗೆ ಹಮ್ಮಿಕೊಳ್ಳಬೇಕು. ಉದಾಹರಣೆಗೆ:

 • ಮರಳು – ನೀರಿನಲ್ಲಿ ಆಟ
 • ಬಣ್ಣ ಬಣ್ಣದ ಕ್ಯೂಬ್‌ಗಳು, ಆಟದ ಸಾಮಾನುಗಳು, ಚಲಿಸುವ ಆಟದ ವಸ್ತುಗಳು.
 • ಜೇಡಿಮಣ್ಣು/ಗೋಧಿ ಹಿಟ್ಟಿನಿಂದ ವಸ್ತುಗಳನ್ನು ಮಾಡುವುದು.
 • ಬಣ್ಣದ ಪೆನ್ಸಿಲ್‌ಗಳಿಂದ ಬಣ್ಣ ಹಾಕುವುದು.
 • ಕತ್ತರಿಯಿಂದ ಚಿತ್ರಗಳನ್ನು ಕತ್ತರಿಸಿ, ಅಂಟಿಸುವುದು.
 • ವಿವಿಧ ಬಣ್ಣದ ಮಣಿಗಳನ್ನು ಬಟ್ಟಲಿಗೆ ಹಾಕಿ, ಒಂದೊಂದೇ ಬಣ್ಣದ ಮಣಿಯನ್ನು ತೆಗೆದು ವಿಂಗಡಿಸುವುದು.
 • ವಿವಿಧ ಕಾಳುಗಳನ್ನು ಪಾತ್ರೆ/ತಟ್ಟೆಯಲ್ಲಿ ಹಾಕಿ ವಿಂಗಡಿಸಲು ಕೊಡುವುದು.
 • ಮುದ್ರಿತ ಹಾಳೆಯಲ್ಲಿ ಒಂದು ನಿರ್ದಿಷ್ಟ ಅಕ್ಷರವನ್ನು ಗುರುತಿಸಿ, ಕ್ರಾಸ್ ಮಾಡಲು ಹೇಳುವುದು.
 • ಬಯಲಲ್ಲಿ ಆಟವಾಡುವುದು.
 • ಯೋಗ-ಪ್ರಾಣಾಯಾಮ ಮಾಡುವುದು.
 • ಸಂಗೀತ/ನೃತ್ಯವನ್ನು ಕಲಿಸುವುದು.

ಮಗು ಬೆಳೆಯುತ್ತಿದ್ದಂತೆ, ವಯಸ್ಸಾಗುತ್ತಿದ್ದಂತೆ ADHD ಕಡಿಮೆಯಾಗುತ್ತದೆ. ಕೆಲವರಲ್ಲಿ ವಯಸ್ಕರಾದ ಮೇಲೂ, ಕೆಲವು ಸಮಸ್ಯೆಗಳು ಉಳಿದುಕೊಳ್ಳಬಹುದು. ಶೀಘ್ರಕೋಪ, ಹಠ, ಹಿಂಸಾಚಾರ, ಏಕಾಗ್ರತೆಯ ಕೊರತೆ, ದುಡುಕುತನ, ಸಮಾಜ ವಿರೋಧಿ ವರ್ತನೆ ಉಳಿದುಕೊಳ್ಳುತ್ತವೆ.

ಗುಣನಡವಳಿಕೆಯ ದೋಷಗಳ ಕಾಯಿಲೆ (Conduct Disorder)

ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಮೋಸ ವಂಚನೆ ಮಾಡುವುದು, ಕುಟುಂಬದ, ಸಮಾಜದ ಯಾವುದೇ ನೀತಿ ನಿಯಮಗಳನ್ನು ಪಾಲನೆ ಮಾಡುವುದು, ಸ್ವಾರ್ಥಕ್ಕೋಸ್ಕರ ಇತರರನ್ನು ಪೀಡಿಸುವುದು, ಬೇರೆಯವರಿಗೆ ತೊಂದರೆ ಕೊಡುವುದು, ತಂದೆ ತಾಯಿಗಳಿಗೆ, ಮನೆಯವರಿಗೆ ಕೆಟ್ಟ ಹೆಸರು ತರುವ, ಅವರ ಮರ್ಯಾದೆಯನ್ನು ಕಳೆಯುವ ಕೆಲಸಗಳನ್ನು ಮಾಡುವುದು, ಸಣ್ಣ/ದೊಡ್ಡ ಅಪರಾಧಗಳನ್ನು ಮಾಡುವುದು, ಗಲಾಟೆ ಎಬ್ಬಿಸುವುದು, ಲೈಂಗಿಕ ವಿಕೃತಿಗಳನ್ನು ಪ್ರದರ್ಶಿಸುವುದು, ಅತ್ಯಾಚಾರ ಮಾಡುವುದು, ಶಾಲೆಗೆ ಚಕ್ಕರ್ ಹಾಕುವುದು, ಮನೆ ಬಿಟ್ಟು ಓಡಿಹೋಗುವುದು, ಸಿಗರೇಟ್ ಬೀಡಿ ಸೇದುವುದು, ಗಾಂಜಾ, ಅಫೀಮು ಇನ್ನಿತರ ಮಾದಕ ವಸ್ತುಗಳನ್ನು ಸೇವಿಸುವುದು ಹೀಗೆ ಅನೇಕ ಕೆಟ್ಟ ಗುಣ-ನಡವಳಿಕೆಗಳನ್ನು ತೋರಿಸುವುದು-ಈ ಕಾಯಿಲೆಯ ಪ್ರಮುಖ ಲಕ್ಷಣಗಳು. ಒಳ್ಳೆಯ ಮಾತಿನಲ್ಲಿ, ರೇಗಿ, ಹೆದರಿಸಿ, ಶಿಕ್ಷೆಕೊಟ್ಟು ಈ ರೀತಿ ಮಾಡಬೇಡ ಎಂದರೂ, ತಪ್ಪು ನಡವಳಿಕೆಗಳನ್ನು ಈ ಮಕ್ಕಳು ಮುಂದುವರೆಸುತ್ತಾರೆ. ಮನೆಯವರಿಗೆ/ಸುತ್ತಮುತ್ತಲಿನವರಿಗೆ ದೊಡ್ಡ ತಲೆನೋವು ಸಮಸ್ಯೆಯಾಗಿ ಬಿಡುತ್ತಾರೆ.

ಕಾರಣಗಳು: ಅನುವಂಶೀಯತೆ, ಮಿದುಳಿನ ಹಾನಿ, ತಂದೆ ತಾಯಿಗಳ ನಡುವೆ ವೈಮನಸ್ಯ/ವಿರಸ, ತಂದೆ-ತಾಯಿ ಇಲ್ಲದಿರುವುದು, ತಂದೆ ತಾಯಿಯ ಅತಿಪ್ರೀತಿ-ಅತಿಶಿಸ್ತು, ಶಿಕ್ಷೆ, ತಂದೆ ಅಥವಾ ಮನೆಯ ಇತರರಲ್ಲಿ ಮದ್ಯಮಾದಕ ವಸ್ತು ಸೇವನೆಯ ಚಟ, ಕುಟುಂಬದ ಸದಸ್ಯರಲ್ಲಿ ಅಪರಾಧಿ ಚಟುವಟಿಕೆ, ಶಾಲೆಯ ಅಹಿತಕಾರಿ ಅನುಭವಗಳು, ತುಂಬಾ ಶಿಸ್ತು, ಶಿಕ್ಷೆ ವಿಧಿಸುವ ಶಾಲಾ ವ್ಯವಸ್ಥೆ, ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿಯುವುದು, ಕೀಳರಿಮೆ-ಹೀಗೆ ಹಲವು ಕಾರಣಗಳಿಂದ ಮಕ್ಕಳಲ್ಲಿ ಗುಣ-ನಡವಳಿಕೆ ದೋಷಗಳು ಕಾಣಿಸಿಕೊಳ್ಳಬಲ್ಲವು.

ಚಿಕಿತ್ಸೆ: ತಂದೆ ತಾಯಿಗಳ ಲಾಲನೆ-ಪಾಲನೆ ವಿಧಾನದಲ್ಲಿ ಬದಲಾವಣೆ ತುರುವುದು, ಸರಿಯಾದ ವರ್ತನೆ ತೋರಿಸಿದಾಗ, ಶ್ಲಾಘನೆ-ಮೆಚ್ಚುಗೆ, ಬಹುಮಾನಗಳನ್ನು ನೀಡುವುದು, ಮಗು ತಪ್ಪುಗಳನ್ನು ಮಾಡುವ ಸನ್ನಿವೇಶಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುವುದು, ಪರಿಸರದ ಬದಲಾವಣೆ, ಪ್ರೀತಿ, ಹೆಚ್ಚು ಗಮನ, ಸಹನೆಯಿಂದ ತಿದ್ದುವ ಮನೋಭಾವ ಉಳ್ಳವರು ಮಗುವಿನ ಯೋಗಕ್ಷೇಮವನ್ನು ನೋಡಿಕೊಳ್ಳುವುದು, ಸ್ವಾರ್ಥ ಕಡಿಮೆ ಮಾಡಲು ನೀತಿ ನಿಯಮಗಳನ್ನು ಸ್ವಸಂತೋಷದಿಂದ ಪಾಲಿಸಲು ತರಬೇತಿ ನೀಡುವುದು, ಅನಿವಾರ್ಯವಾದಾಗ, ಕಡೆಯ ಅಸ್ತ್ರವಾಗಿ ಶಿಕ್ಷೆಯನ್ನು ಬಳಸುವುದು, ಅದನ್ನು ಅವಮಾನವಾಗದ ರೀತಿಯಲ್ಲಿ ಕೊಡುವುದು, ಉತ್ತಮ ವ್ಯವಸ್ಥೆ ಇರುವ ಹಾಸ್ಟೆಲ್, ಸಂಸ್ಥೆಗಳಲ್ಲಿ ಈ ಮಕ್ಕಳನ್ನು ಇಡುವುದು, ಚಿಕಿತ್ಸೆಯ ಪ್ರಧಾನ ವಿಧಾನ, ಸ್ವಲ್ಪಮಟ್ಟಿಗೆ ಶಮನಕಾರಿ ಔಷಧಗಳನ್ನು ಉಪಯೋಗಿಸಬಹುದು. ನಿಧಾನವಾಗಿ, ನಿರೀಕ್ಷಿತ ಬದಲಾವಣೆಗಳನ್ನು ತರಬಹುದು. ಅಷ್ಟು ಸಹನೆ ಪಾಲಕ-ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಇರಬೇಕು.

ಹಾಸಿಗೆ ಬಟ್ಟೆಯಲ್ಲೇ ಮೂತ್ರ ವಿಸರ್ಜನೆ ಮಾಡುವುದು Bed Wetting : Enueresis

ಸಾಮಾನ್ಯವಾಗಿ 3ನೇ ವರ್ಷ ವಯಸ್ಸಿನಿಂದ 5ನೇ ವರ್ಷ ವಯಸ್ಸಿನವರೆಗೆ ಕೆಲವು ಮಕ್ಕಳು ಮೂತ್ರ ವಿಸರ್ಜನೆಯ ಹತೋಟಿ ಸಾಧಿಸಿ ಅನಂತರ, ಅದನ್ನು ಕಳೆದುಕೊಳ್ಳುತ್ತಾರೆ. ಕೆಲವರು ಹತೋಟಿಯನ್ನು ಸಾಧಿಸುವುದೇ ಇಲ್ಲ. ಪ್ರತಿದಿನ ಅಥವಾ ಅವಧಿಗೊಂದಾವರ್ತಿ, ಹಾಸಿಗೆಯಲ್ಲಿ, ಬಟ್ಟೆಯಲ್ಲಿ ಮೂತ್ರ ಮಾಡಿಕೊಂಡು, ಪಾಲಿಕರಿಗೆ ಶಿಕ್ಷಕರಿಗೆ ಮುಜುಗರವನ್ನುಂಟು ಮಾಡುತ್ತಾರೆ. ಇದಕ್ಕೆ ಹಲವಾರು ಕಾರಣಗಳಿರಬಹುದು.

i)     ಬುದ್ಧಿಮಾಂದ್ಯತೆ.

ii)    ನರಮಂಡಳದ ದೌರ್ಬಲ್ಯ ಅಥವಾ ಚಿಕ್ಕ ಮೂತ್ರ ಚೀಲ.

iii)   ಮೂತ್ರನಾಳದ ಸೋಂಕು.

iv)   ತಂದೆ ತಾಯಿಗಳು, ಮೂತ್ರ ನಿಯಂತ್ರಣಕ್ಕೆ ತರಬೇತಿ ನೀಡದಿರುವುದು.

v)    ಮಗುವಿನಲ್ಲಿ ಅರಕ್ಷಿತ ಭಾವನೆ.

vi)   ಮುಃಖ, ಕೋಪ, ಭಯದಂತಹ ನಕಾರಾತ್ಮಕ ಭಾವನೆಗಳು.

vii)  ಶಾಲೆಯಲ್ಲಿ ಶೈಕ್ಷಣಿಕ ಸಮಸ್ಯೆಗಳು, ಶಿಕ್ಷಕರು-ಸಹಪಾಠಿಗಳ ನಡುವಿನ ಸಂಬಂಧ ಸರಿಇಲ್ಲದಿರುವುದು.

viii) ಶಿಶು ತಜ್ಞರ ನೆರವಿನಿಂದ, ಈ ಕಾರಣಗಳನ್ನು ಪತ್ತೆ ಮಾಡಿ ಸರಿಪಡಿಸಬೇಕು.

ಚಿಕಿತ್ಸೆ

 • ಮಗುವಿಗೆ ಸಂಜೆ ಆರು ಗಂಟೆಯ ನಂತರ, ನೀರು ಮತ್ತು ನೀರು ಪದಾರ್ಥಗಳನ್ನು ಕೊಡಬೇಡಿ.
 • ಸಂಜೆ 7 ಗಂಟೆಗೇ ಗಟ್ಟಿ ಪದಾರ್ಥಗಳಿರುವ ಊಟ ನೀಡಿ.
 • ಮಲಗುವ ಮೊದಲು ಮೂತ್ರ ವಿಸರ್ಜನೆ ಮಾಡಿಸಿ.
 • ಮಧ್ಯರಾತ್ರಿಗೆ ಮಗುವನ್ನು ಎಬ್ಬಿಸಿ ವಿಸರ್ಜನೆ ಮಾಡಿಸಿ.
 • ಮಲಗುವ ಕೋಣೆಯಲ್ಲಿ ದೀಪ ಹಚ್ಚಿಡಿ. ಮಗುವಿಗೆ ಧೈರ್ಯ ಬರಲು ಅದರ ಜೊತೆ ಇನ್ನೊಬ್ಬರು ಮಲಗಲಿ. ಮಲಗುವ ಮೊದಲು ದೆವ್ವ, ಭೂತ, ರಾಕ್ಷಸ, ಡ್ರಾಕುಲಗಳ ಕಥೆ ಹೇಳಬೇಡಿ, ಚಿತ್ರ ತೋರಿಸಬೇಡಿ, ಕ್ರೈಂ ಚಿತ್ರಗಳನ್ನು ನೋಡಲು ಬಿಡಬೇಡಿ.
 • ಬೆಳಿಗ್ಗೆ ಎದ್ದಾಗ, ಮೂತ್ರ ಮಾಡಿಕೊಂಡಿರದಿದ್ದರೆ ಭೇಷ್ ಎನ್ನಿ, ಕ್ಯಾಲೆಂಡರಿನಲ್ಲಿ ಆ ದಿವನ್ನು ನೀಲಿ ಇಂಕಿನಿಂದ ಕ್ರಾಸ್ ಮಾಡಲಿ. ಮೂತ್ರ ಮಾಡಿಕೊಂಡಿದ್ದರೆ ಕೆಂಪು ಇಂಕಿನಿಂದ ಕ್ರಾಸ್ ಮಾಡಲಿ. ಇಡೀ ಒಂದು ವಾರ ಅಥವಾ ಎರಡು ವಾರ ನೀಲಿ ಇಂಕಿನಿಂದ ಕ್ರಾಸ್ ಮಾಡುವಂತಾದರೆ, ಮಗುವಿಗೆ ಇಷ್ಟವಾದ ಬಹುಮಾನ ಕೊಡಿ.
 • ಹಗಲು ಹೊತ್ತಿನಲ್ಲಿ, ಮೂತ್ರ ಮಾಡಲು ಅವಸರವಾದಾಗ ಸ್ವಲ್ಪ ಹೊತ್ತು ತಡೆದು ಮಾಡಲು ಪ್ರಾಕ್ಟೀಸ್ ಮಾಡಿ.
 • ವೈದ್ಯರಿಂದ IMIPRAMINE 25 ಮಿ.ಗ್ರಾಂ.ನ ಮಾತ್ರೆ ಬರೆಸಿಕೊಂಡು ರಾತ್ರಿ ಎಂಟು ಗಂಟೆಗೆ ಸೇವಿಸಲು ಕೊಡಿ. ಎಷ್ಟು ಅವಧಿಯವರೆಗೆ ಕೊಡಬೇಕೆಂಬುದನ್ನು ವೈದ್ಯರು ಹೇಳುತ್ತಾರೆ.

ಮಕ್ಕಳಲ್ಲಿ ಕಲಿಕೆಯ ಸಮಸ್ಯೆಗಳು

ಶೇಕಡಾ 20 ರಿಂದ 25ರಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಫೇಲಾಗುತ್ತಾರೆ. ಕಡಿಮೆ ಅಂಕಗಳನ್ನು ಪಡೆಯುತ್ತಾರೆ.

ಕಾರಣಗಳು

 • ಬುದ್ಧಿಮಾಂದ್ಯತೆ: ಐ.ಕ್ಯೂ. 70ಕ್ಕಿಂತ ಕಡಿಮೆ ಇದ್ದರೆ, ಕಲಿಕೆ ಕಷ್ಟ ಮತ್ತು ನಿಧಾನ.
 • ಡಿಸ್ಲೆಕ್ಸಿಯ: ಇದೊಂದು ಮಿದುಳಿನ ನ್ಯೂನತೆ. ಮಗುವಿಗೆ ಓದಲು, ಬರೆಯಲು ಹಾಗೂ ಗಣಿತ ಕಷ್ಟವಾಗುತ್ತದೆ. ಬಾಯಲ್ಲಿ ಮಗು ಹೇಳುತ್ತದೆ. ಕಿವಿಯಿಂದ ಕೇಳಿ ಅರ್ಥ ಮಾಡಿಕೊಳ್ಳುತ್ತದೆ. ಆದರೆ ಕೇಳಿದ್ದನ್ನು ನೋಡಿದ್ದನ್ನು ಬರೆಯುವಾಗ ಕಷ್ಟಪಡುತ್ತದೆ. ಮಗುವಿಗೆ p ಮತ್ತು q ಒಂದೇ ರೀತಿ, d ಮತ್ತು b ಒಂದೇ    ರೀತಿ ಕಾಣುತ್ತದೆ. ಅಕ್ಷರಗಳನ್ನು, ಪದಗಳನ್ನು ಉಲ್ಟಾ ಓದುತ್ತದೆ ಅಥವಾ ಬರೆಯುತ್ತದೆ.  PUT ಅನ್ನು TUP ಎಂದು ಓದುತ್ತದೆ. 75ನ್ನು 57 ಎನ್ನುತ್ತದೆ!      ಸ್ಪಲ್ಲಿಂಗನ್ನು ಬಾಯಲ್ಲಿ ಸರಿಯಾಗಿ ಹೇಳಿದರೂ ಬರೆಯುವಾಗ ಅಕ್ಷರ ಚೆಲ್ಲಾಪಿಲ್ಲಿಯಾಗಿರುತ್ತದೆ.  MYSORE ಪದವನ್ನು ಅದು MSYERO ಎಂದು ಬರೆಯಬಹುದು. NATION ಪದವನ್ನು NATINO ಎಂದು ಬರೆಯಬಹುದು. ಮಗುವಿಗೆ ಎಡ ಯಾವುದು ಬಲ ಯಾವುದು ಗೊಂದಲವಾಗುತ್ತದೆ. ಒಂದರಿಂದ ಹತ್ತರವರೆಗೆ, ಎಣಿಸಿದರೂ, 4 ಆದ ಮೇಲೆ ಯಾವ ಅಂಕಿ,  4ಕ್ಕೆ ಮೊದಲು ಯಾವ ಅಂಕಿ ಗೊತ್ತಾಗುವುದಿಲ್ಲ. ಸ್ಥಾನಸೂಚಕ ಪದಗಳೂ ಅರ್ಥವಾಗುವುದಿಲ್ಲ. ಮೇಲೆ ಕೆಳಗೆ, ಹಿಂದೆ ಮುಂದೆ ತಿಳಿಯುವುದಿಲ್ಲ.
 • ನಿರ್ದಿಷ್ಟ ವಿಷಯ ಕಷ್ಟ: ಮಕ್ಕಳಿಗೆ ಭಾಷೆ ಕಷ್ಟವಾದರೆ, ಇನ್ನು ಕೆಲವರಿಗೆ ವಿಜ್ಞಾನ, ಮತ್ತೆ ಕೆಲವರಿಗೆ ಗಣಿತ, ಉಳಿದ ವಿಷಯಗಳಲ್ಲಿ ಜಾಣರಿರುತ್ತಾರೆ. ಪ್ರತಿಶತ 70ಕ್ಕೂ ಹೆಚ್ಚಿನ ಅಂಕ ಗಳಿಸುತ್ತಾರೆ.
 • ಏಕಾಗ್ರತೆ ಕೊರತೆ: ADHD ಸಮಸ್ಯೆ.
 • ಭಾವೋದ್ವೇಗಗಳು: ದುಃಖ, ಬೇಸರ, ಭಯ, ಕೋಪ, ಮತ್ಸರಗಳು ಕಲಿಕೆಗೆ ಅಡ್ಡಿಯುಂಟು ಮಾಡುತ್ತವೆ.
 • ಅನೀಮಿಯಾ: ರಕ್ತದಲ್ಲಿ ಹಿಮೊಗ್ಲಾಬಿನ್ ಪ್ರಮಾಣ ಪ್ರತಿ 100 ಮಿಲಿಯಲ್ಲಿ 10 ಗ್ರಾಂಗಿಂತಲೂ ಕಡಿಮೆ ಇರುವುದು. ಇದನ್ನು ವೈದ್ಯರ ನೆರವಿನಿಂದ ಸರಿಪಡಿಸಬೇಕು.
 • ಕೀಳರಿಮೆ/ಆತ್ಮವಿಶ್ವಾಸದ ಕೊರತೆ.
 • ಕಲಿಯುವ ಇಚ್ಛೆ ಇಲ್ಲ. ಏಕೆ ಕಲಿಯಬೇಕು, ಕಲಿತರೆ ಏನು ಉಪಯೋಗ, ಕಲಿಯದೇ ಬದುಕಬಹುದು ಎಂಬ ಧೋರಣೆ.
 • ಶಿಕ್ಷಕರು, ಶಾಲೆ, ಪರೀಕ್ಷೆಯ ಬಗ್ಗೆ ಅನಗತ್ಯ ಭಯ ಅಥವಾ ತಿರಸ್ಕಾರ.
 • ತಪ್ಪು ಕಲಿಕಾ ವಿಧಾನಗಳು: ಅರ್ಥ ಮಾಡಿಕೊಳ್ಳದೇ, ನಡುವೆ ವಿರಾಮ ಪಡೆಯದೇ, ಗಂಟೆಗಟ್ಟಲೇ ಓದುವುದು, ಮನನ ಮಾಡದಿರುವುದು, ಬರೆಯದಿರುವುದು, ಅಗಾಗ ನೆನಪಿಸಿಕೊಳ್ಳದಿರುವುದು, ನಿದ್ದೆಗೆಟ್ಟು, ಉಪವಾಸವಿದ್ದು ಅಧ್ಯಯನ ಮಾಡುವುದು.

ಪರಿಹಾರ

 • ಕಲಿಯಲು/ಅಧ್ಯಯನ ಮಾಡಲು, ಪ್ರಶಾಂತವಾದ ಸಮಯ ಮತ್ತು ಸ್ಥಳವನ್ನು ಆಯ್ಕೆಮಾಡುವುದು.
 • 30 ನಿಮಿಷಗಳ ಕಾಲ, ಅರ್ಥಮಾಡಿಕೊಂಡು, ಏಕಾಗ್ರತೆಯಿಂದ ಓದುವುದು, ಅರ್ಥವಾಗದ ಭಾಗವನ್ನು ಶಿಕ್ಷಕರ ನೆರವಿನಿಂದ ಅರ್ಥ ಮಾಡಿಕೊಳ್ಳುವುದು.
 • ಓದಿದ್ದರೆ ಸಾರಾಂಶವನ್ನು ಬರೆಯುವುದು.
 • ಎರಡು ನಿಮಿಷಗಳ ಕಾಲ ವಿಶ್ರಾಂತಿಯ ನಂತರ, ಬೇರೊಂದು ವಿಷಯವನ್ನು ಓದುವುದು.
 • ಆಗಾಗ ಓದಿದ ವಿಷಯಗಳನ್ನು ನೆನಪಿಸಿಕೊಳ್ಳುವುದು, ಸಹಪಾಠಿಗಳೊಂದಿಗೆ ಚರ್ಚಿಸುವುದು, ಬರೆಯುವುದು.
 • ಪ್ರಶ್ನೆಗಳಿಗೆ ಕಾಲಮಿತಿಯಲ್ಲಿ ಉತ್ತರ ಬರೆಯುವ ಪ್ರಾಕ್ಟೀಸ್ ಮಾಡುವುದು.
 • ಆತ್ಮವಿಶ್ವಾಸದಿಂದ, ಪರೀಕ್ಷೆಗಳನ್ನು ಎದುರಿಸುವುದು.

ನಿಧಾನವಾಗಿ ಕಲಿಯುವ ಮಕ್ಕಳಿಗೆ, ಸಹನೆಯಿಂದ ನಿಧಾನವಾಗಿಯೇ ಕಲಿಸಬೇಕು. ಹೋಲಿಸಿ ಟೀಕೆ ಮಾಡಬಾರದು, ಬೆದರಿಸಿ ಶಿಕ್ಷಿಸಬಾರದು, ಶ್ಲಾಘನೆ-ಉತ್ತೇಜನಗಳಿಂದ, ಕಲಿಯುವ ಇಚ್ಚೆಯನ್ನು ಬಲಪಡಿಸಬೇಕು. ವಿದ್ಯಾಭ್ಯಾಸ ಸಾಧ್ಯವಿಲ್ಲವಾದರೆ, ವೃತ್ತಿ ತರಬೇತಿ ನೀಡಿ ಸಂಪಾದಿಸುವ ಸಾಮರ್ಥ್ಯವನ್ನು ಕಲಿಸಬೇಕು.