ಶರೀರದ ಹೊರರೂಪ, ಉಡುಗೆ-ತೊಡುಗೆ, ಜ್ಞಾನ, ತಿಳುವಳಿಕೆ, ಧೋರಣೆ, ಬುದ್ಧಿಚಾತುರ್ಯ, ಭಾವನೆಗಳನ್ನು ಪ್ರಕಟಿಸುವ ರೀತಿ, ಸ್ವಾರ್ಥ-ಪರಹಿತಕ್ಕೆ ಎಷ್ಟು ಆದ್ಯತೆ, ನೈತಿಕ ಮೌಲ್ಯಗಳು, ಯಾವುದೇ ಸಂದರ್ಭ-ಸನ್ನಿವೇಶ ವಿಷಯಕ್ಕೆ ಪ್ರಕಟವಾಗುವ ಪ್ರತಿಕ್ರಿಯೆಗಳು, ಜೀವನದ ಗುರಿ/ಉದ್ದೇಶಗಳೆಲ್ಲ ಸೇರಿ “ವ್ಯಕ್ತಿತ್ವ” ಎನಿಸಿಕೊಳ್ಳುತ್ತದೆ. ಆರೋಗ್ಯಕರ ಹಾಗೂ ಒಳ್ಳೆಯ ವ್ಯಕ್ತಿತ್ವವಿದ್ದರೆ, ವ್ಯಕ್ತಿ ತಾನೂ ಕ್ಷೇಮವಾಗಿ, ಇತರರೂ ಕ್ಷೇಮವಾಗಿರಲು ಕೆಲಸ ಮಾಡಬಲ್ಲ. ಬದುಕಿನಲ್ಲಿ ಸ್ವಾವಲಂಬಿಯಾಗಿ, ಉಪಯುಕ್ತವಾಗಿ ಬಹುತೇಕ ಜನರೊಡನೆ ಹೊಂದಿಕೊಂಡು, ಪ್ರಗತಿಯೆಡೆಗೆ ಸಾಗಬಲ್ಲ. ವ್ಯಕ್ತಿತ್ವ ವಿಕಾಸ ಹುಟ್ಟುವ ಮೊದಲೇ ಪ್ರಾರಂಭವಾಗಿ (ಜೀನ್‌ಗಳ ಪ್ರಭಾವ) ಹುಟ್ಟಿದ ಮೇಲೆ 20 ವರ್ಷಗಳ ಅವಧಿಯಲ್ಲಿ ಹಂತ-ಹಂತವಾಗಿ ನಡೆಯುತ್ತದೆ. ಅನುವಂಶೀಯತೆ, ತಂದೆ ತಾಯಿಗಳ ಲಾಲನೆ-ಪಾಲನೆ, ಕುಟುಂಬದ ಪರಿಸರ, ನೆರೆಹೊರೆ, ಶಾಲೆ-ಶಿಕ್ಷಣ, ಸಹಪಾಠಿಗಳು, ಆಗಿಂದಾಗ್ಯೆ ಘಟಿಸುವ ಘಟನೆಗಳು, ಅನಾರೋಗ್ಯಗಳು, ಆರ್ಥಿಕ ಪರಿಸ್ಥಿತಿಗಳು, ವ್ಯಕ್ತಿತ್ವ ವಿಕಸನದಲ್ಲಿ ಪಾಲ್ಗೊಳ್ಳುತ್ತದೆ. ಕೆಲವರಲ್ಲಿ ಈ ವ್ಯಕ್ತಿತ್ವ ವಿಕಸನ ಸರಿಯಾಗಿ ನಡೆಯದೆ, ಅನೇಕ ನ್ಯೂನತೆ, ಕೊರತೆಗಳು ಸೇರಿಕೊಂಡು, ವ್ಯಕ್ತಿತ್ವ ದೋಷ ಉಂಟಾಗುತ್ತದೆ. ಇದರಿಂದ ವ್ಯಕ್ತಿಯೂ, ಮನೆಯವರೂ, ಸಮಾಜದವರೂ ಅನೇಕ ಕಷ್ಟನಷ್ಟ ನೋವುಗಳಿಗೆ ತುತ್ತಾಗಬೇಕಾಗುತ್ತದೆ.

ವ್ಯಕ್ತಿತ್ವ ದೋಷದ ಹಲವು ನಮೂನೆಗಳು ಮತ್ತು ಲಕ್ಷಣಗಳು

  • ಸಂಶಯಪೀಡಿತ ವ್ಯಕ್ತಿತ್ವ: ಯಾರಲ್ಲೂ ನಂಬಿಕೆ ವಿಶ್ವಾಸಗಳಿಲ್ಲ, ಇತರರು ತನ್ನ ಹಿತಕ್ಕೆ ಕ್ಷೇಮಕ್ಕೆ ವಿರುದ್ಧವಾಗಿದ್ದಾರೆ. ತನಗೆ ಕೆಟ್ಟದ್ದನ್ನು ಮಾಡಲು, ಹಾನಿಯುಂಟು ಮಾಡಲು ಸಿದ್ಧರಾಗಿದ್ದಾರೆ. ತನಗೆ ಸೋದರ-ಸೋದರಿ, ಗಂಡ ಅಥವಾ ಹೆಂಡತಿ, ಸ್ನೇಹಿತರು, ಸಹೋದ್ಯೋಗಿಗಳು ಪ್ರಾಮಾಣಿಕರಾಗಿಲ್ಲ, ನಿಷ್ಠರಾಗಿಲ್ಲ, ಮೋಸ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಿತ್ವದ ಒಂದು ಭಾಗವಾಗಿ ಬಿಡುತ್ತದೆ. ತಾನೇ ಸರಿ, ತಾನು      ಮಾಡುವುದೇ ಸರಿ, ಇತರರು ಸರಿಯಾಗಿ ಮಾಡುವುದಿಲ್ಲ ಎಂಬ ಧೋರಣೆ ಇರುತ್ತದೆ. ಬದಲಾವಣೆ ಇಷ್ಟಪಡುವುದಿಲ್ಲ, ಜಿಗುಟುತನ ಇರುತ್ತದೆ.
  • ಅತಿ ಅಚ್ಚುಕಟ್ಟುತನದ ವ್ಯಕ್ತಿತ್ವ: ಎಲ್ಲವೂ ಪರಿಪೂರ್ಣವಾಗಿರಬೇಕು, ಪ್ರತಿಯೊಂದೂ ಅಚ್ಚುಕಟ್ಟಾಗಿರಬೇಕು, ಸಮಯಪಾಲನೆಯಾಗಬೇಕು, ಏನು ಕೆಲಸ ಮಾಡಿದರೂ ಅದು ಏ-ಒನ್ ಆಗಿರಬೇಕು, ಪ್ರತಿಯೊಂದು ವಸ್ತು ಎಲ್ಲಿರಬೇಕೋ ಅಲ್ಲಿರಬೇಕು, ವ್ಯವಸ್ಥೆ ಚೆನ್ನಾಗಿರಬೇಕು, ಸ್ವಲ್ಪ ಕೂಡ ಹೆಚ್ಚುಕಡಿಮೆಯಾಗಬಾರದು, ಎಲ್ಲಿಯೂ ಕಸ-ಕಡ್ಡಿ-ಕೊಳಕಿರಬಾರದು. ಹಿಮದಂತೆ ಸ್ವಚ್ಛವಾಗಿರಬೇಕು, 100% ಶಿಸ್ತು ಇರಬೇಕೆಂದು ಬಯಸುತ್ತಾರೆ. ಹಾಗೇ ನಡೆದುಕೊಳ್ಳಲು ಇಷ್ಟಪಡುತ್ತಾರೆ. ಇದು ಒಂದು ಮಿತಿಯಲ್ಲಿದ್ದರೆ ಚೆನ್ನ. ಆದರೆ ಮಿತಿಮೀರಿದಾಗ, ಎಲ್ಲರಿಗೂ ಕಿರಿಕಿರಿ.
  • ಉನ್ಮಾದ ವ್ಯಕ್ತಿತ್ವ (ಹಿಸ್ಟ್ರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್): ಅತಿಯಾದ ಭಾವೋದ್ವೇಗ, ನಾಟಕೀಯತೆ/ಎಲ್ಲರ ಗಮನವನ್ನು ತನ್ನಡೆಗೆ ಸೆಳೆಯುವ ಪ್ರಯತ್ನ, ಶ್ರಮಪಡಲು ತಯಾರಿಲ್ಲದ ಮನಸ್ಸು, ವಿಫಲತೆಗೆ, ನಿರಾಶೆಗೆ ತೀವ್ರವಾಗಿ ಪರಿತಪಿಸುವುದು, ಅದಕ್ಕಾಗಿ ಇತರರನ್ನು ದೂಷಿಸುವುದು, ಸಂಬಂಧಗಳಲ್ಲಿ ಗಂಭೀರತೆ ಇಲ್ಲದಿರುವುದು, ಹುಡುಗಾಟಿಕೆಯ ಪ್ರವೃತ್ತಿ ಹೆಚ್ಚು.
  • ಸಾಮಾಜಿಕ ಸನ್ನಿವೇಶಗಳಲ್ಲಿ ಅತಿಯಾದ ಆತಂಕ: ಜನರೊಂದಿಗೆ ಬೆರೆಯುವುದನ್ನು ನಿವಾರಿಸಿಕೊಳ್ಳುವ ತವಕ, ಜನಗಳ ನಡುವೆ ಇರುವಾಗ ಏನೋ ಮುಜುಗರ, ಸಂಕೋಚ, ಸಭೆ-ಸಮಾರಂಭಗಳಲ್ಲಿ ಭಾಗವಹಿಸಲು ನಿರಾಕರಣೆ-ಈ ವ್ಯಕ್ತಿತ್ವದ ಪ್ರಮುಖ ಲಕ್ಷಣ.
  • ಸಮಾಜ ವಿರೋಧಿ ವ್ಯಕ್ತಿತ್ವ: ಅತಿಸ್ವಾರ್ಥ, ಸ್ವಾರ್ಥಕ್ಕಾಗಿ ನೀತಿ ನಿಯಮಗಳು, ಮೌಲ್ಯಗಳನ್ನು ಬಿಡಲು ಸದಾ ಸಿದ್ಧ. ಬೇರೆಯವರ ಯೋಗಕ್ಷೇಮದ ಬಗ್ಗೆ ದಿವ್ಯ ನಿರ್ಲಕ್ಷ್ಯ. ಮೋಸ, ವಂಚನೆ, ಅಪರಾಧ ಮಾಡಲು ಹಿಂಜರಿಯುವುದಿಲ್ಲ. ತನ್ನ ಬೇಕು ಬೇಡಗಳ ಬಗ್ಗೆಯೇ ಸದಾ ಮಗ್ನತೆ. ಸುಖಪಡುವುದೇ ಇವರ ಗುರಿ. ಇಂಥವರು ಅಪರಾಧ ಜಗತ್ತಿನೊಳಕ್ಕೆ ಪ್ರವೇಶ ಪಡೆದರೆ, ಎಂತಹ ಹೀನವಾದ ಅಪರಾಧ ಮಾಡಲೂ ಸಿದ್ಧರಾಗಿರುತ್ತಾರೆ. ತಪ್ಪಿತಸ್ಥ ಭಾವನೆಯಾಗಲೀ, ಪಾಪಪ್ರಜ್ಞೆಯಾಗಲೀ ಇರುವುದಿಲ್ಲ. ಶಿಕ್ಷೆಯಿಂದ ಪಾಠ ಕಲಿಯುವುದಿಲ್ಲ. ಮಾಡಿದ ತಪ್ಪನ್ನೇ ಮತ್ತೆ ಮಾಡಲು ಸಿದ್ಧರಿರುತ್ತಾರೆ.
  • ಗಡಿರೇಖೆಯ ವ್ಯಕ್ತಿತ್ವದೋಷ: (ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್): ಸದಾ ಒಂಟಿತನ, ಆಗೊಮ್ಮೆ ಈಗೊಮ್ಮೆ ಅತ್ಮಹತ್ಯೆ/ಹಿಂಸಾಚಾರ, ವಿಚಿತ್ರವಾಗಿ ವರ್ತಿಸುವುದು, ಸ್ವಲ್ಪ ಅವಧಿಗೆ ಅಸಂಬದ್ಧ ನಡೆ-ನುಡಿ, ನಿರಾಶೆಗಳನ್ನು ನಿಭಾಯಿಸುವ ಶಕ್ತಿ, ಚತುರತೆ ಇಲ್ಲದಿರುವುದು, ಸಂಬಂಧಗಳನ್ನು ಉಳಿಸಿಕೊಳ್ಳುವುದು ವಿಫಲವಾಗುವುದು, ಬಹುಬೇಗ ಭಾವೋದ್ವೇಗಕ್ಕೆ ತುತ್ತಾಗುವುದು, ತನ್ನ ಬಗ್ಗೆ ಕೀಳರಿಮೆ, ಹೊಂದಿಕೊಳ್ಳಲಾಗದೆ, ತಾನೂ ಹಿಂಸೆಪಟ್ಟು, ಇತರರಿಗೂ ಹಿಂಸೆ ನೀಡುವುದು, ಹಿಂದೆ ಮುಂದೆ ನೋಡದೆ ಸಾಧಕಭಾದಕಗಳ ಬಗ್ಗೆ ಚಿಂತಿಸದೆ ದುಡುಕಿ ವರ್ತಿಸುವುದು-ಈ ವ್ಯಕ್ತಿತ್ವ ದೋಷದ ಮುಖ್ಯ ಲಕ್ಷಣ.
  • ಆಕ್ರಮಣಕಾರಿ ವ್ಯಕ್ತಿತ್ವ: ಅತ್ಯಲ್ಪ ಪ್ರಚೋದನೆ-ನಿರಾಶೆಗೆ ವಿಪರೀತಿ ಸಿಟ್ಟು, ಕೋಪಗಳನ್ನು ಪ್ರಕಟಿಸುವುದು, ಮನೆಯವರ ಮೇಲೆ, ಇತರರ ಮೇಲೆ ಆಕ್ರಮಣ ಮಾಡುವುದು, ಜಗಳ ಹಿಂಸಾಚಾರಕ್ಕೆ ಇಳಿಯುವ ಪ್ರವೃತ್ತಿ ಇವರಲ್ಲಿ ಕಂಡು ಬರುತ್ತದೆ. ನಿರಾಶೆ, ಅತೃಪ್ತಿಗಳನ್ನು ಇವರು ಸರಿಯಾಗಿ ನಿಭಾಯಿಸುವುದಿಲ್ಲ.
  • ಪರಾವಲಂಬನೆಯ ವ್ಯಕ್ತಿತ್ವ: ಎಲ್ಲದಕ್ಕೂ ಅವಲಂಬಿಸುವುದು, ಸ್ವಂತವಾಗಿ ಏನನ್ನೂ ಮಾಡಲಾರರು, ಬುದ್ಧಿ ವಿವೇಚನೆ ಇದ್ದರೂ ಅವನ್ನು ಬಳಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾರರು. ನಿರ್ಧಾರ/ತೀರ್ಮಾನ ಸಣ್ಣದಿರಲಿ, ದೊಡ್ಡದಿರಲಿ, ಬೇರೆಯವರ ಸೂಚನೆ, ಸಲಹೆಯಂತೆಯೇ ನಡೆಯಲು ಇಚ್ಛೆಪಡುತ್ತಾರೆ. ಪ್ರೌಢ ವಯಸ್ಸಿನವರೆಗೆ ತಂದೆತಾಯಿ/ಮನೆಯವರ ಮೇಲೆ ಅವಲಂಬನೆ, ಮದುವೆಯಾದ ಮೇಲೆ ಜೀವನ ಸಂಗಾತಿಯ ಮೇಲೆ ಅವಲಂಬನೆ, ತಾನು ಮಾಡಿದ್ದು ಸರಿಹೋಯಿತೇ, ತಾನು ತೆಗೆದುಕೊಂಡ ನಿರ್ಧಾರ ಅನುಕೂಲಕಾರಿಯೇ ಎಂದು ಇತರರನ್ನು ಕೇಳುತ್ತಾರೆ, ಇತರರಿಗೆ ಇಲ್ಲ ಎನ್ನಲು ಸಂಕೋಚ, ನೀನು ಮಾಡಿದ್ದು ಸರಿ ಅಲ್ಲ ಎಂದು ಹೇಳಲು ಹೆದರಿಕೆ, ಒಂಟಿಯಾಗಿರಲು ಭಯ, ಎಲ್ಲಿ ಎಲ್ಲರೂ ತಮ್ಮನ್ನು ದೂರ ಮಾಡಿಬಿಡುತ್ತಾರೋ, ತನ್ನ ನೆರವಿಗೆ ಯಾರೂ ಬರುವುದಿಲ್ಲವೇನೋ ಎಂಬ ಆತಂಕ ಸದಾ ಇರುತ್ತದೆ.
  • ಸ್ಕಿಜಾಯಿಡ್ ವ್ಯಕ್ತಿತ್ವ: ಸದಾ ತಾನಾಯಿತು, ತನ್ನ ಪಾಡಾಯಿತು ಎಂದು ಒಂಟಿಯಾಗೇ ಇರುವ ಇಚ್ಛೆ, ಯಾರೊಂದಿಗೂ ಮುಕ್ತವಾದ, ಆಳವಾದ ಸಂಬಂಧ ಇಟ್ಟುಕೊಳ್ಳಲು ಬಯಸುವುದಿಲ್ಲ. ತನ್ನ ಅನಿಸಿಕೆ, ಅನುಭವ ಭಾವನೆಗಳನ್ನು ಆಸೆ-ಆಕಾಂಕ್ಷೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಒಂಟಿಯಾಗೇ ಮಾಡಬಲ್ಲ ಕೆಲಸ-ಹವ್ಯಾಸಗಳಲ್ಲಿ ಮಗ್ನ, ಹೊಗಳಿಕೆಗೆ, ತೆಗಳಿಕೆಗೆ ಒಂದು ಬಗೆಯ ನಿರ್ಲಿಪ್ತತೆ. ಭಾವೋದ್ವೇಗ ಉಂಟು ಮಾಡುವ ಸನ್ನಿವೇಶಗಳಲ್ಲೂ ತಣ್ಣಗೆ ಇರುತ್ತಾರೆ. ಜೀವನ ಸಂಗಾತಿ ಸೇರಿದಂತೆ ಎಲ್ಲರ ಪಾಲಿಗೆ ಈತ “ಮುಚ್ಚಿದ ಪುಸ್ತಕ! ಒಳಗೇನಿದೆ ಯಾರಿಗೂ ಗೊತ್ತಾಗುವುದಿಲ್ಲ!”.
  • ಸ್ಕಿಜೋಟೈಪಲ್ ವ್ಯಕ್ತಿತ್ವ: ಇತರರು ತನ್ನ ಬಗ್ಗೆ ಮಾತನಾಡಿಕೊಳ್ಳಬಹುದು, ಆಡಿಕೊಳ್ಳಬಹುದೆನ್ನುವ ಅನುಮಾನ, ತುಂಬಾ ಮೂಢನಂಬಿಕೆ, ಅಂಧಶ್ರದ್ಧೆ, ಶಕುನಗಳಲ್ಲಿ ನಂಬಿಕೆ, ರಮ್ಯ-ಭೀಕರ ಕಲ್ಪನೆಗಳನ್ನು ಮಾಡಿಕೊಂಡು ಸಂತೋಷಪಡುವುದು ಅಥವಾ ಭಯಪಡುವುದು, ಇತರರಿಗೆ ಅರ್ಥವಾಗದ ವಿಚಾರಗಳು, ಮಾತು ವರ್ತನೆಗಳು, ಸಂಶಯಪ್ರವೃತ್ತಿ, ಸನ್ನಿವೇಶ, ಸಂದರ್ಭಗಳಿಗೆ ವೃತಿರಿಕ್ತವಾದ ಭಾವನೆಗಳ ಪ್ರಕಟಣೆ, ಆಪ್ತರಾಗಲೀ, ಸ್ನೇಹಿತರಾಗಲೀ ಇಲ್ಲ, “ವಿಚಿತ್ರ ವ್ಯಕ್ತಿ” ಎಂದು ಇತರರಿಂದ ಹಣೆಪಟ್ಟಿ.

ಕಾರಣಗಳು: ನಿರ್ದಿಷ್ಟ ಕಾರಣಗಳಿಲ್ಲ. ಹಲವು ಅಂಶಗಳು ಸೇರಿ ಈ ಬಗೆಯ ದೋಷಪೂರ್ಣ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಅನುವಂಶೀಯತೆ, ಮಿದುಳಿಗೆ ಸಣ್ಣ ಪ್ರಮಾಣದ ಹಾನಿ, ತಂದೆ ತಾಯಿಗಳ ಲಾಲನೆ-ಪಾಲನೆಯಲ್ಲಿ ದೋಷ, ಅತಿಮುದ್ದು ಅಥವಾ ಅತಿಶಿಕ್ಷೆ-ತಿರಸ್ಕಾರ, ಶ್ಲಾಘನೆ, ಮೆಚ್ಚುಗೆ ಇಲ್ಲದಿರುವುದು, ರೀತಿನೀತಿಗಳನ್ನು ಕಲಿಸದಿರುವುದು, ಕುಟುಂಬದ ಇತರ ಸದಸ್ಯರಲ್ಲಿ ನೈತಿಕ ಮೌಲ್ಯಗಳು, ಶಿಸ್ತು-ಸಂಯಮ ಇಲ್ಲದಿರುವುದು, ಯೋಗ್ಯ ಶಿಕ್ಷಣ ದೊರೆಯದಿರುವುದು, ಕೆಟ್ಟ ಮಾದರಿ ಹಾಕಿಕೊಡುವ ಮಾಧ್ಯಮಗಳು, ಸಮಾಜದ “ನಾಯಕರುಗಳು” ಹೀಗೆ ಹಲವು ಕಾರಣಗಳಿಂದ ವ್ಯಕ್ತಿತ್ವ ಬೆಳವಣಿಗೆಯಲ್ಲಿ ವ್ಯತ್ಯಯ ಉಂಟಾಗಿ, ವ್ಯಕ್ತಿಯು ವ್ಯಕ್ತಿತ್ವ ದೋಷದ ಕಾಯಿಲೆಯಿಂದ ಬಳಲುವಂತಾಗುತ್ತದೆ.

ಚಿಕಿತ್ಸೆ: ಮನೋಚಿಕಿತ್ಸೆ, ಆಪ್ತ ಸಲಹೆ, ಮಾರ್ಗದರ್ಶನ ಮತ್ತು ನಡವಳಿಕೆಯ ಸುಧಾರಣೆ, ವ್ಯಕ್ತಿಯ ಮನ ಒಲಿಸಿ, ವ್ಯಕ್ತಿತ್ವದಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಲು ಒತ್ತಾಯವಿರಬೇಕು. ಆತ/ಆಕೆಯನ್ನು ದೂಷಿಸದೇ ಬದಲಾಗಲು ಪ್ರೋತ್ಸಾಹ ನೀಡಬೇಕು. ಮನೆಯವರು, ಬಂಧು-ಮಿತ್ರರು, ಸಹೋದ್ಯೋಗಿಗಳು ಒಟ್ಟಾಗಿ ಈ ಬದಲಾವಣೆಗೆ ಬೇಕಾದ ಪರಿಸರ ಮತ್ತು ಅವಕಾಶಗಳನ್ನು ಸೃಷ್ಟಿಸಬೇಕು, ವ್ಯಕ್ತಿ ಸಮಸ್ಯಾತ್ಮಕ ಮತ್ತು ಅಸಹಜ ಧೋರಣೆ ಮತ್ತು ವರ್ತನೆಗಳನ್ನು ತೋರಿಸದಂತೆ ಒತ್ತಾಸೆ ನೀಡಬೇಕು. ಬಹುಮಾನ, ಶ್ಲಾಘನೆ, ಶಿಸ್ತು, ಶಿಕ್ಷೆಗಳನ್ನು ಹದವಾಗಿ ಬೆರೆಸಿ, ತರಬೇತಿ ನೀಡಬೇಕು. ಅಗತ್ಯ ಬಿದ್ದರೆ, ವ್ಯವಸ್ಥೆ ಚೆನ್ನಾಗಿರುವ ಪರಿಸರದಲ್ಲಿ ಇಂತಹ ವ್ಯಕ್ತಿಗಳನ್ನು ಇಟ್ಟು, ಅಗತ್ಯವಾದ ಬದಲಾವಣೆಗಳನ್ನು ಸುಧಾರಣೆಗಳನ್ನು ತರಬೇಕು. ಈ ಬದಲಾವಣೆಯ ಕಾಲದಲ್ಲಿ ವ್ಯಕ್ತಿಗೆ ಪ್ರೀತಿ-ಸಹಾನುಭೂತಿಗಳು ಬೇಕು. ಕಠಿಣವಾದ ನಿರೂಪ ಹಾಗೂ ಹೀಗೆ ಮಾಡು, ಹೀಗೆ ಮಾಡಬೇಡ, ಮಾಡಿದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಹೇಳಿ ಉಸ್ತುವಾರಿ ಮಾಡುವವರೂ ಇರಬೇಕು.

ಅವಶ್ಯಕತೆ ಇದ್ದಾಗ, ಶಮನಕಾರೀ ಮಾತ್ರೆಗಳು, ಖಿನ್ನತೆ ನಿವಾರಕ ಮಾತ್ರೆಗಳು, ಬಾವೋದ್ರೇಕಗಳನ್ನು ತಗ್ಗಿಸುವ ಔಷಧಿಯನ್ನು ವೈದ್ಯರು ಬರೆದುಕೊಡುತ್ತಾರೆ. ವ್ಯಕ್ತಿತ್ವ ದೋಷಗಳನ್ನು ಬದಲಿಸಬಹುದು. ವ್ಯಕ್ತಿ ಸುಧಾರಿಸುತ್ತಾನೆ. ಆದರೆ ಇದಕ್ಕೆ ಸಾಕಷ್ಟು ಸಮಯ ಪ್ರಯತ್ನಗಳು ಬೇಕಾಗುತ್ತವೆ.