• ಅನೋರೆಕ್ಸಿಯಾ ನರ್ವೋಸಾ: “ದಪ್ಪಗಾಗಿದ್ದೇನೆ”, “ಸಣ್ಣಗಾಗಬೇಕು” ಎಂಬ ಬಯಕೆಯಿಂದ ವ್ಯಕ್ತಿ ಆಹಾರ ಸೇವನೆಯನ್ನು ತೀವ್ರಗತಿಯಲ್ಲಿ ಕಡಿಮೆ ಮಾಡುತ್ತಾ ಹೋಗುತ್ತಾಳೆ. ತೂಕದ ತೀವ್ರ ಕುಸಿತ ವಿವಿಧ ಅಪೌಷ್ಠಿಕತೆಯಿಂದ ನರಳುತ್ತಿದ್ದರೂ ಆಹಾರ ಸೇವಿಸಲು ಒಪ್ಪುವುದಿಲ್ಲ. ಬಲವಂತವಾಗಿ ತಿನ್ನಲು ಕೊಟ್ಟರೆ ತಿಂದು ವಾಂತಿ ಮಾಡಿಕೊಳ್ಳುತ್ತಾಳೆ ಅಥವಾ ಬೇಧಿಯಾಗಲು ಔಷಧಿ ಸೇವಿಸುತ್ತಾಳೆ. ತೀವ್ರವಾದ ಖಿನ್ನತೆ, ಋತುಸ್ರಾವದ ಏರುಪೇರು ಅಥವಾ ಋತುಸ್ರಾವ ನಿಲ್ಲುವುದು, ಅನೀಮೀಯಾ, ದೇಹ ಕೇವಲ ಮೂಳೆ-ಚರ್ಮದ ತಡಿಕೆಯಂತಾಗುತ್ತದೆ. ಕಾಯಿಲೆ ಕಾರಣ ಸ್ಪಷ್ಟವಿಲ್ಲ. ತೆಳ್ಳಗಿರುವುದೇ ಸೌಂದರ್ಯ ಎಂದು ನಂಬುವವರ ನಡುವೆ ಬದುಕುವ ಹುಡುಗಿಯರಲ್ಲಿ, ಮಾಡೆಲಿಂಗ್, ಅಭಿನಯ ಮಾಡುವ, ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರಲ್ಲಿ ಇದು ಹೆಚ್ಚು.

ಚಿಕಿತ್ಸೆ: ಆಸ್ಪತ್ರೆಗೆ ದಾಖಲು ಮಾಡಿ, ಆಹಾರವನ್ನು ಕೊಡುವುದು, ಅಪೌಷ್ಠಿಕತೆಯನ್ನು ನಿವಾರಿಸುವುದು, ಮನೋಚಿಕಿತ್ಸೆ ನಡವಳಿಕೆ, ಚಿಕಿತ್ಸೆ ಸಹಕಾರಿ, ಖಿನ್ನತೆ   ಔಷಧಗಳೂ ಸಹಕಾರಿ.

 • ಬುಲೀಮಿಯಾ: ವಿಪರೀತ ತಿನ್ನುವುದು, ಹೊತ್ತೂ ಗೊತ್ತಿಲ್ಲದೆ ತಿನ್ನುವುದು, ಹೈಕ್ಯಾಲೋರಿ ಆಹಾರ ಪದಾರ್ಥಗಳನ್ನು (ಕೇಕ್, ಪೇಸ್ಟ್ರಿ, ಚಾಕೋಲೇಟ್, ಐಸ್‌ಕ್ರೀಂ, ಸಿಹಿತಿಂಡಿಗಳು, ಕರಿದ ಪದಾರ್ಥಗಳು) ಅತಿಯಾಗಿ ಸೇವಿಸುವುದು, ಇತಿಮಿತಿಯಿಲ್ಲದೇ ತಿನ್ನುವುದು-ಈ ಕಾಯಿಲೆ ಲಕ್ಷಣ. ಸಹಜವಾಗಿ ತೂಕ ಹೆಚ್ಚಿ ಬೊಜ್ಜು        ಬರುತ್ತದೆ.

ಅರಕ್ಷಿತ ಭಾವನೆ, ಅತಿಯಾದ ಭಾವೋದ್ವೇಗ, ಪಾಲಕರಿಂದ ತೀವ್ರ ನಿರ್ಲಕ್ಷ್ಯ ಅಥವಾ ಶಿಕ್ಷೆಗೆ ಗುರಿಯಾಗುವುದು, ಮಾನಸಿಕ ಒತ್ತಡಗಳಿಂದ ಬುಲೀಮಿಯಾ ಬರುತ್ತದೆ ಎನ್ನಲಾಗಿದೆ.

 • ಪೈಕಾ: ತಿನ್ನಬಾರದಂತಹ, ಅಪಾಯಕಾರಿ ವಸ್ತುಗಳನ್ನು ತಿನ್ನುವ ಬಯಕೆಯಾಗುವುದೇ ಪೈಕಾ. ಮಕ್ಕಳಲ್ಲಿ, ಹದಿಹರೆಯದವರಲ್ಲಿ, ಗರ್ಭಿಣಿ ಸ್ತ್ರೀಯರಲ್ಲಿ           ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಕಾಯಿಲೆಯಲ್ಲಿ ವ್ಯಕ್ತಿ ಮಣ್ಣು, ಮರಳು, ಕಾಗದ, ಪ್ಲಾಸ್ಟಿಕ್, ಹತ್ತಿ, ಬಟ್ಟೆ, ಪೆನ್ಸಿಲ್, ಸೀಮೆಸುಣ್ಣ, ಗಾರೆ, ಸಿಮೆಂಟ್, ಕೂದಲು, ಮರ,          ಎಲೆ, ಹಸೀ ಅಕ್ಕಿ, ಕಾಳುಗಳು ಇತ್ಯಾದಿಗಳನ್ನು ತಿನ್ನಲು ಪ್ರಾರಂಭಿಸುತ್ತಾನೆ/ಳೆ. ಅನೇಕ ಅನಾರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಭಾವೋದ್ವೇಗ, ಅರಕ್ಷಿತ ಭಾವನೆ, ಕೀಳರಿಮೆ, ಅದುಮಿಟ್ಟ ಆಕ್ರಮಶೀಲತೆ ಅಥವಾ ನೋವು, ಅವಮಾನಗಳೇ ಪೈಕಾಗೆ ಕಾರಣ ಎನ್ನಲಾಗಿದೆ.
 • ಸೋಮ್ನಾಂಬುಲಿಸಮ್: ನಿದ್ರೆಯಲ್ಲಿ ನಡೆಯುವುದು, ವಿವಿಧ ಚಟುವಟಿಕೆಗಳನ್ನು ಮಾಡುವುದು, ಅನಂತರ ಈ ಯಾವುದು ವ್ಯಕ್ತಿಗೆ ನೆನಪಿನಲ್ಲಿರುವುದಿಲ್ಲ. ಕಥೆ-ಕಾದಂಬರಿ, ಸಿನೆಮಾ, ಟಿವಿ ಧಾರಾವಾಹಿಗಳಲ್ಲಿ “ಸೋಮ್ನಾಂಬುಲಿಸಮ್‌” ಅತ್ಯಂತ ರೋಚಕವಾಗಿ ಮೂಡಿಸಲಾಗುತ್ತದೆ. ನಿದ್ರಾನಡಿಗೆಯಲ್ಲಿ ಎರಡು ವಿಧ. ಒಂದು “ಅರ್ಗ್ಯಾನಿಕ್ ಸೋಮ್ನಾಂಬುಲಿಸಂ”, ಫಿಟ್ಸ್, ಮಿದುಳಿನ ಅಂಗದೋಷದಿಂದ ಉಂಟಾಗುವ ಈ ನಿದ್ರಾನಡಿಗೆಯಲ್ಲಿ ವ್ಯಕ್ತಿ, ತನ್ನ ಕೊಠಡಿಯಲ್ಲಿ/ಮನೆಯೊಳಗೇ/ಸೀಮಿತ ಜಾಗದಲ್ಲಿ ಸ್ವಲ್ಪ ನಡೆದಾಡುತ್ತಾನೆ. ಅಡ್ಡಿ ಆತಂಕಗಳನ್ನು ಗುರುತಿಸಿ ನಿವಾರಿಸಿಕೊಳ್ಳಲಾರ. ಸಂಕೀರ್ಣವಾದ ಚಟುವಟಿಕೆ/ಕೆಲಸವನ್ನು ಮಾಡಲಾರ. ಪ್ರಜ್ಞೆ ಇರುವುದಿಲ್ಲ.

ಇನ್ನೊಂದು “ಹಿಸ್ಟರಿಕಲ್ ಸೋಮ್ನಾಂಬುಲಿಸಮ್‌” ಇದು ಸುಪ್ತ ಮನಸ್ಸಿನ ಚಟುವಟಿಕೆ. ವ್ಯಕ್ತಿ ಬೀಗ ತೆಗೆದು, ಎಲ್ಲೆಂದರಲ್ಲಿಗೆ ಹೋಗಬಲ್ಲ. ವಾಹನವನ್ನೂ ಚಲಿಸಬಲ್ಲ, ಸಂಕೀರ್ಣವಾದ ಕೆಲಸ/ಚಟುವಟಿಕೆಯನ್ನು ನಿರ್ವಹಿಸಬಲ್ಲ. ನೀರಿನಲ್ಲಿ ಈಜಿ ದಡ ಸೇರಬಲ್ಲ. ಯಾವುದೇ ಅಡ್ಡಿ ಅತಂಕವನ್ನು ಗುರುತಿಸಿ ನಿವಾರಿಸಿಕೊಳ್ಳಬಲ್ಲ. ಆನಂತರ ಅವನಿಗೆ ಸಂಪೂರ್ಣ ಮರೆವು ಅಥವಾ ಬಾಗಶಃ ಮರೆವು ಉಂಟಾಗಬಹುದು. ತಾನೇನು ಮಾಡಿದೆ ಎಲ್ಲಿಗೆ ಹೋಗಿದ್ದೆ ಎಂಬುದನ್ನು ಸ್ಪಷ್ಟವಾಗಿ ಹೇಳದಿದ್ದರೆ ಅಸ್ಪಷ್ಟವಾಗಿ ಹೇಳಬಲ್ಲ.

ಮನೋವಿಶ್ಲೇಷಣೆ-ಮನೋಚಿಕಿತ್ಸೆಯಿಂದ ಈ ಸೋಮ್ನಾಂಬುಲಿಸಮ್‌ ಗುಣವಾಗುತ್ತದೆ.

 • ಕ್ಲೆಪ್ಟೋಮೇನಿಯಾ: ಗೊತ್ತಿಲ್ಲದೇ ಕದಿಯುವುದು, ಅಗತ್ಯವಿಲ್ಲದೇ ಕದಿಯುವುದನ್ನು ಕ್ಲೆಪ್ಟೋಮೇನಿಯಾ ಎನ್ನುತ್ತಾರೆ. ವ್ಯಕ್ತಿಗೆ ಸಣ್ಣಪುಟ್ಟ ವಸ್ತುಗಳನ್ನು ಅಥವಾ        ಬೆಲೆಬಾಳುವ ವಸ್ತುಗಳನ್ನು ಎಲ್ಲರ ಕಣ್ಣು ತಪ್ಪಿಸಿ ಕದಿಯುವ ಬಯಕೆ ಮೂಡುತ್ತಿರುತ್ತದೆ. ಹೀಗೆ ಕದ್ದ ವಸ್ತುವನ್ನು ವ್ಯಕ್ತಿ ಸಾಮಾನ್ಯವಾಗಿ ಬಳಸುವುದಿಲ್ಲ. ಇದು Impulse Control Disorderನ ಒಂದು ಭಾಗ. ಕದಿಯಬೇಕೆಂಬ ಬಯಕೆ ಹುಟ್ಟುತ್ತಿದ್ದಂತೆ ಅದು ಬಲವಾಗುತ್ತಾ ಹೋಗುತ್ತದೆ. ಆ ಬಯಕೆಯನ್ನು ಹತೋಟಿಗೆ ತರಲು ವ್ಯಕ್ತಿ ಯತ್ನಿಸಿದರೂ ವಿಫಲವಾಗುತ್ತಾನೆ. ವಿಪರೀತ ಹಿಂಸೆ/ತಳಮಳ ಅನುಭವಿಸುತ್ತಾನೆ. ಕದಿಯುತ್ತಿದ್ದಂತೆ ಟೆಂಶನ್ ಕಡಿಮೆಯಾಗಿ ವ್ಯಕ್ತಿ ನಿರಾಳತೆಯನ್ನು ಅನುಭವಿಸುತ್ತಾನೆ. ಕದಿಯುವಿಕೆಯು ಉನ್ಮಾದದ ಮನೋಬೇನೆಯ ಅಂಗವಾಗಿಯೂ, ನಕಾರಾತ್ಮಕ ಭಾವನೆಗಳ ಪ್ರಕಟಣೆಯ ಒಂದು ಭಾಗವಾಗಿಯೂ ಕಾಣಿಸಿಕೊಳ್ಳುವುದು. ಕದ್ದು ಇತರರ ಗಮನ ಸೆಳೆಯಲು, ಪ್ರತಿಭಟನೆ ಸೂಚಿಸಲು ವ್ಯಕ್ತಿ ಪ್ರಯತ್ನಿಸುತ್ತಾನೆ.

ಇತರರ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ಗಳೆಂದರೆ,

 • ಪೈರೋಮೇನಿಯಾ – ಬೆಂಕಿ ಹಚ್ಚುವುದು.
 • ಕೆಟ್ಟಪದಗಳನ್ನು ಉಚ್ಚರಿಸುವುದು
 • ಕ್ಯಾಕರಿಸುವುದು, ಉಗಿಯುವುದು, ಮೂಗು ಸೀತುವುದು, ಕೂಗುವುದು.
 • ವಿವಸ್ತ್ರನಾಗುವುದು, ಜನನಾಂಗವನ್ನು ಪ್ರದರ್ಶಿಸುವುದು, ಹಸ್ತಮೈಥುನ ಮಾಡುವುದು.
 • ಬೆಟ್ ಕಟ್ಟುವುದು, ಜೂಜಾಡುವುದು
 • ತನಗೆ ಅಥವಾ ಇತರರಿಗೆ ಗಾಯ ಉಂಟು ಮಾಡುವುದು.
 • ವಸ್ತುಗಳನ್ನು ಒಡೆದುಹಾಕುವುದು ಇತ್ಯಾದಿ.

ಲೈಂಗಿಕ ಸಮಸ್ಯೆಗಳು (Sexual Disorders)

ಲೈಂಗಿಕ ಕ್ರಿಯೆಯ ನಾಲ್ಕು ಹಂತಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

1.    ಆಸೆಬಯಕೆಯ ಹಂತ: ಆಸೆ ಕಡಿಮೆ ಅಥವಾ ಇಲ್ಲವೇ ಇಲ್ಲ ಅಥವಾ ಆಸೆ ಹೆಚ್ಚಾಗುವುದು. ವಿಕೃತ ಆಸೆಗಳು ಬರುವುದು.

2.    ಜನನಾಂಗಗಳು ಉದ್ರೇಕಗೊಳ್ಳದಿರುವುದು: ಪುರುಷನಲ್ಲಿ ಶಿಶ್ನ ನಿಮಿರದಿರುವುದು. ಸ್ತ್ರೀಯಲ್ಲಿ ಯೋನಿ ಹಿಗ್ಗಿದಿರುವುದು.

3.    ಸಂಭೋಗ ಕ್ರಿಯೆಯನ್ನು ಮಾಡಲು ಆಗದಿರುವುದು. ಶೀಘ್ರವೀರ್ಯ ಸ್ಖಲನ, ನೋವಿನ ಸಂಭೋಗ, ಶಿಶ್ನ ಯೋನಿಯನ್ನು ಪ್ರವೇಶಿಸಲು ಆಗದಿರುವುದು.

4.    ಸಂಭೋಗದಿಂದ ಸುಖ/ತೃಪ್ತ ಆಗದಿರುವುದು.

ಜನನಾಂಗಗಳ ನ್ಯೂನತೆ, ಲೈಂಗಿಕ ಹಾರ್ಮೋನುಗಳ ಕೊರತೆ, ಮಾನಸಿಕ ಒತ್ತಡಗಳು, ಸಂಗಾತಿಯ ಬಗ್ಗೆ ತಿರಸ್ಕಾರ ದ್ವೇಷ, ಅಹಿತಕಾರಿ ಪರಿಸರ, ಗರ್ಭಧಾರಣೆಯ ಬಗ್ಗೆ ಭಯ, ಇತ್ಯಾದಿ ಕಾರಣಗಳಿಂದ ಲೈಂಗಿಕ ಸಮಸ್ಯೆಗಳು ಇರಬಹುದು. ಕಾರಣಗಳನ್ನು ಪತ್ತೆ ಮಾಡಿ ನಿವಾರಿಸಬೇಕು.