01

ಸೂಕ್ಷ್ಮಾಣುಜೀವಿಗಳ ಲೋಕದೊಳಗೆ ಇಣುಕಲು ನಮಗೆ ಅನುವು ಮಾಡಿಕೊಡುವ ಸಾಧನವೇ ಸೂಕ್ಷ್ಮದರ್ಶಕ. ಸಾಮಾನ್ಯ ಕಣ್ಣಿಗೆ ಗೋಚರಿಸದ ಪುಟ್ಟ ಜೀವಿಗಳ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗಿಸಿದ ಸೂಕ್ಷ್ಮದರ್ಶಕಗಳೇ, ಸೂಕ್ಷ್ಮಜೀವಾಣುವಿಜ್ಞಾನದ ಆಧಾರಸ್ಥಂಬಗಳು. ಸೂಕ್ಷ್ಮದರ್ಶಕವು, ಹೆಸರೇ ಸೂಚಿಸುವಂತೆ. ಕಣ್ಣಿಗೆ ಕಾಣದ ರಚನೆಗಳನ್ನು, ಜೀವಕೋಶಗಳನ್ನು, ಸೂಕ್ಷ್ಮಾಣು ಜೀವಿಗಳನ್ನು ಹಿಗ್ಗಿಸಿ ತೋರಿಸುವ ಸಾಧನವೇ ಆದರೂ, ಇದರ ರಚನೆ ಹಾಗೂ ವಿನ್ಯಾಸ ಅಷ್ಟೇನೂ ಸರಳವಾಗಿಲ್ಲ. ನಮ್ಮ ಕೈಯಲ್ಲಿ ಹಿಡಿದು ಉಪಯೋಗಿಸಬಹುದಾದ ಅಂಗೈಅಗಲದ ಭೂತಗನ್ನಡಿಯು ಕೂಡ ಸೂಕ್ಷ್ಮ ದರ್ಶಕವೇ; ಆದರೆ, ಮೈಕ್ರೊಮೀಟರ್ಗಳ ಅಳತೆಯಲ್ಲಿರುವ ಸೂಕ್ಷ್ಮಜೀವಾಣುಗಳ ಅಧ್ಯಯನಕ್ಕೆ ಸಂಯುಕ್ತ ಸೂಕ್ಷ್ಮದರ್ಶಕದ ಬಳಕೆಯ ಅವಶ್ಯಕತೆಯಿದೆ. ಹಾಗಾಗಿ, ಸೂಕ್ಷ್ಮಜೀವಾಣುವಿಜ್ಞಾನದ ಪರಿಧಿಯಲ್ಲಿ ಸೂಕ್ಷ್ಮದರ್ಶಕವೆಂದರೆ ಮೂಲಭೂತವಾಗಿ ಸಂಯುಕ್ತ ಸೂಕ್ಷ್ಮದರ್ಶಕವೇ.
ಸೂಕ್ಷ್ಮದರ್ಶಕದ ಇತಿಹಾಸ:
ಇಂದು ಬಳಕೆಯಲ್ಲಿರುವ ಸೂಕ್ಷ್ಮದರ್ಶಕಕ್ಕೂ, ಮೊದಲ ಬಾರಿಗೆ ವಿನ್ಯಾಸಗೊಂಡು ಉಪಯೋಗಿಸಲ್ಪಟ್ಟ ಸೂಕ್ಷ್ಮದರ್ಶಕಕ್ಕೊ ಅಜಗಜಾಂತರ ವ್ಯತ್ಯಾಸ. ಮೊದಲ ಬಾರಿಗೆ ಸಂಯುಕ್ತ ಸೂಕ್ಷ್ಮದರ್ಶಕವನ್ನು ವಿನ್ಯಾಸಗೊಳಿಸಿದವರು ಯಾರು ಎಂಬುದರ ಬಗ್ಗೆ ಖಚಿತತೆ ಇಲ್ಲ. ೧೫೯೦ರಲ್ಲೇ ಝಾಕಾರಿಯಾಸ್ ಜಾನ್ಸೇನ್ ಮತ್ತು ಅವರ ತಂದೆ ಹಾನ್ಸ್ ಜಾನ್ಸೇನ್, ಒಂದು ಉದ್ದ ಕೊಳವೆಯಲ್ಲಿ ಎರಡು ಮಸೂರಗಳನ್ನು ಒಂದರ ಮೇಲೊಂದು ಇರಿಸಿ, ಮೊದಲ ಸಂಯುಕ್ತ ಸೂಕ್ಷ್ಮದರ್ಶಕವನ್ನು ತಯಾರಿಸಿದರು ಎಂಬುದು ಒಂದು ಗುಂಪಿನ ಇತಿಹಾಸತಜ್ಞರ ಅಂಬೋಣ. ೧೬೦೯ರಲ್ಲಿ ಗೆಲಿಲಿಯೋ ಗೆಲಿಲಿ ಒಂದು ನಿಮ್ನ ಹಾಗೂ ಮತ್ತೊಂದು ಪೀನ ಮಸೂರವನ್ನು ಬಳಸಿ ಒಂದು ಸಂಯುಕ್ತ ಸೂಕ್ಷ್ಮದರ್ಶಕವನ್ನು ತಯಾರಿಸಿದ ಎಂಬ ಮಾಹಿತಿಯಿದೆ. ೧೬೨೦ರಲ್ಲಿ ಮೊದಲ ಸಂಯುಕ್ತ ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕವು ನೆದರ್ಲ್ಯಾಂಡ್ಸ್ನಲ್ಲಿ ಅಭಿವೃದ್ಧಿಗೊಂಡ ಬಗ್ಗೆ ಸಾಕ್ಷಿ ದೊರೆತಿದೆ; ಆದರೆ ಇದರ ಮೂಲ ಸಂಶೋಧಕನನ್ನು ಗುರುತಿಸುವುದು ಸುಲಭಸಾಧ್ಯವಲ್ಲ. ಕಾರ್ನೆಲ್ಲಿಸ್ ದ್ರೆಬ್ಬೆಲ್, ಮೊದಲ ಸಂಯುಕ್ತ ಸೂಕ್ಷ್ಮದರ್ಶಕದ ನಿರ್ಮಾತೃ ಆಗಿರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಇತಿಹಾಸತಜ್ಞರು. ದೂರದರ್ಶಕದ ಜನಕ ಎಂದು ಪೇಟೆಂಟ್ ಪಡೆದ ಹ್ಯಾನ್ಸ್ ಲಿಪ್ಪರ್ಷೆ, ಸೂಕ್ಷ್ಮದರ್ಶಕವೂ ತನ್ನದೇ ಕೊಡುಗೆ ಎಂಬುದನ್ನು ಭಾಗಶಃ ಸಾಬೀತು ಪಡಿಸಲು ಸಾಧ್ಯವಾಯಿತಷ್ಟೇ. ೧೬೬೫ರಲ್ಲಿ ರಾಬರ್ಟ್ ಹೂಕ್ ತನ್ನದೇ ವಿನ್ಯಾಸದ ಸೂಕ್ಷ್ಮದರ್ಶಕದ ಮುಖಾಂತರ ಸೂಕ್ಷ್ಮಾಣುಜೀವಿಗಳನ್ನೂ, ಜೀವಕೊಶಗಳನ್ನೂ ಅಭ್ಯಸಿಸಿ ತನ್ನ ‘ಮೈಕ್ರೋಗ್ರಾಫಿಯ’ ಎಂಬ ಗ್ರಂಥದಲ್ಲಿ ವಿವರಣಾತ್ಮಕ ಚಿತ್ರಗಳೊಂದಿಗೆ ದಾಖಲಿಸಿದ್ದಾನೆ. ಗಾಜನ್ನು ಪುಡಿಮಾಡಿ ಮಸೂರಗಳನ್ನು ತಯಾರಿಸುವ ತನ್ನ ಅನುಭವವನ್ನು ಬಳಸಿ, ಆಂಟೋನಿ ವಾನ್ ಲೀವನ್ಹೊಕ್, ೧೬೭೪ರಲ್ಲಿ ಸೂಕ್ಷ್ಮಜೀವಾಣುಗಳನ್ನು ೩೦೦ ಪಟ್ಟು ಹಿಗ್ಗಿಸಿ ತೋರಿಸುವ ಸೂಕ್ಷ್ಮದರ್ಶಕವನ್ನು ತಯಾರಿಸಿದ. ಜೋಸೆಫ್ ಜಾನ್ಸನ್ ಲಿಸ್ಟರ್, ಅರ್ನ್ಸ್ಟ್ ಅಬ್ಬೆ, ಅರ್ನ್ಸ್ಟ್ ರಸ್ಕ ಸೇರಿದಂತೆ ಹಲವರು, ಸೂಕ್ಷ್ಮದರ್ಶಕಗಳ ಅಭಿವೃದ್ಧಿಗೆ ಕಾಲಾನುಕ್ರಮದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ.
ವಿವಿಧ ಸೂಕ್ಷ್ಮದರ್ಶಕಗಳು:
ಸೂಕ್ಷ್ಮದರ್ಶಕಗಳು ಯಾವ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಮೇಲೆ, ಇವನ್ನು ಮೂರು ಬಗೆಯಾಗಿ ವಿಂಗಡಣೆ ಮಾಡಲಾಗಿದೆ. ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕ (ಆಪ್ಟಿಕಲ್ ಮೈಕ್ರೋಸ್ಕೋಪ್), ಎಲೆಕ್ಟ್ರಾನ್ ಸೂಕ್ಷ್ಮದರ್ಶಕ (ಎಲೆಕ್ಟ್ರಾನ್ ಮೈಕ್ರೋಸ್ಕೋಪ್) ಮತ್ತು ಕ್ರಮವೀಕ್ಷಣಾ ಶೋಧಕ ಸೂಕ್ಷ್ಮದರ್ಶಕವು (ಸ್ಕ್ಯಾನಿಂಗ್ ಪ್ರೋಬ್ ಮೈಕ್ರೋಸ್ಕೋಪ್) ಮೂರು ಪ್ರಮುಖ ವಿಧದ ಸೂಕ್ಷ್ಮದರ್ಶಕಗಳು. ಇವನ್ನು ಹೊರತು ಪಡಿಸಿ, ಇನ್ನೂ ಕೆಲವು ಬಗೆಯ ಸೂಕ್ಷ್ಮದರ್ಶಕಗಳು ಇವೆ; ಅವನ್ನು ಇವುಗಳಷ್ಟು ಬಳಕೆ ಮಾಡುವುದು ಕಂಡುಬಂದಿಲ್ಲ.
ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕವು(ಆಪ್ಟಿಕಲ್ ಮೈಕ್ರೋಸ್ಕೋಪ್) ಹೆಸರೇ ಸೂಚಿಸುವಂತೆ, ದೃಷ್ಟಿಗೆ ಗೋಚರಿಸುವ ಬೆಳಕನ್ನು ಬಳಸಿಕೊಂಡು, ನೀಡಲಾದ ಮಾದರಿಯನ್ನು ಹಿಗ್ಗಿಸಿ ತೋರಿಸುತ್ತದೆ. ಸೂಕ್ಷ್ಮದರ್ಶಕಗಳಲ್ಲೇ ಅತ್ಯಂತ ಹಳೆಯ ವಿನ್ಯಾಸವನ್ನು ಹೊಂದಿರುವುದು ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕಗಳೇ. ಇದು ಸಂಯುಕ್ತ ಸೂಕ್ಷ್ಮದರ್ಶಕಗಳ ಗುಂಪಿನ ಅತ್ಯಂತ ಸರಳ ಸದಸ್ಯ. ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕಗಳಲ್ಲಿ ಹಲವಾರು ವಿಧ. ವಿವಿಧ ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕಗಳ ಕಿರು ಟಿಪ್ಪಣಿ ಇಲ್ಲಿದೆ.
i. ದ್ವಿನೇತ್ರಿಯ ಸೂಕ್ಷ್ಮದರ್ಶಕ (ಬೈನಾಕುಲರ್ ಮೈಕ್ರೋಸ್ಕೋಪ್): ಇದು ಎರಡು ನೇತ್ರಕಗಳನ್ನುಳ್ಳ ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕ. ಸಾಮಾನ್ಯವಾಗಿ ಎಲ್ಲಾ ಬಗೆಯ ಸೂಕ್ಷ್ಮದರ್ಶಕಗಳಲ್ಲಿ, ಮೊದಮೊದಲು ಒಂದೇ ನೇತ್ರಕವನ್ನು ಬಳಸಲಾಗುತ್ತಿತ್ತು. ಆದರೆ ಎರಡೂ ಕಣ್ಣಿನ ಮೂಲಕವಷ್ಟೇ ನಾವು ಮಾದರಿಯನ್ನು ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ ಅಭ್ಯಸಿಸುವುದು ಸಾಧ್ಯ. ಹಾಗಾಗಿ ಈಗ ಪ್ರಚಲಿತವಿರುವ ಎಲ್ಲಾ ಬಗೆಯ ಸೂಕ್ಷ್ಮದರ್ಶಕಗಳ ಪ್ರಾಥಮಿಕ ಅಂಗವಾಗಿ ಎರಡು ನೇತ್ರಕಗಳನ್ನು ಬಳಸಲಾಗುತ್ತದೆ. ದ್ವಿನೇತ್ರಿಯ ಸೂಕ್ಷ್ಮದರ್ಶಕದಲ್ಲಿ ಎರಡು ನೇತ್ರಕಗಳಿದ್ದರೂ, ಮಾದರಿಯನ್ನು ಹಿಗ್ಗಿಸಲು ಇರುವುದು ಒಂದೇ ಶಕ್ತಿಯುತ ಮಸೂರ. ಹಾಗಾಗಿ ಎರಡು ಕಣ್ಣುಗಳಿಗೂ ಒಂದು ಸರಳ ಸಪಾಟಾದ ೨ ಆಯಮಾದ ‘ಮೊನೋ’ ಚಿತ್ರಿಕೆ ಮಾತ್ರ ಕಾಣುತ್ತದೆ.
ii. ಸ್ಟಿರಿಯೋ ಸೂಕ್ಷ್ಮದರ್ಶಕ: ಸ್ಟೀರಿಯೋಸ್ಕೋಪಿಕ್ / ಸ್ಟಿರಿಯೋ ಸೂಕ್ಷ್ಮದರ್ಶಕವು, ಮಾದರಿಯ ಕಡಿಮೆ ‘ವರ್ಧನ ವೀಕ್ಷಣೆ’ಗೆ ವಿನ್ಯಾಸಗೊಳಿಸಲಾದ ದೃಗ್ವಿಜ್ಞಾನ ಸೂಕ್ಷ್ಮದರ್ಶಕ. ಇಲ್ಲಿ ಮಾದರಿಯನ್ನು ಹಿಗ್ಗಿಸಲು ಅದರ ಮೂಲಕ ಹಾಯುವ ಬೆಳಕನ್ನು ಅವಲಂಬಿಸದೇ, ಅದರ ಮೇಲ್ಮೈ ಯಿಂದ ಪ್ರತಿಫಲಿತ ಬೆಳಕನ್ನು ಬಳಸಿಕೊಳ್ಳಲಾಗುತ್ತದೆ. ಎರಡು ವಸ್ತುನಿಷ್ಠ ಮಸೂರಗಳು ಮತ್ತು ಎರಡು ನೇತ್ರಕಗಳಿಗೆ ಎರಡು ಪ್ರತ್ಯೇಕ ದೃಗ್ವಿಜ್ಞಾನ ಮಾರ್ಗಗಳನ್ನು ಬಳಸಿ, ಎಡ ಮತ್ತು ಬಲ ಕಣ್ಣುಗಳಿಗೆ ಸ್ವಲ್ಪ ವಿಭಿನ್ನ ಕೋನಗಳಲ್ಲಿ ಚಿತ್ರಿಕೆಯನ್ನು ಒದಗಿಸಲಾಗುತ್ತದೆ. ಈ ವ್ಯವಸ್ಥೆಯು, ಪರೀಕ್ಷಿಸಿದ ಮಾದರಿಯ ಮೂರು ಆಯಾಮದ ದೃಶ್ಯೀಕರಣವನ್ನು ಉತ್ಪಾದಿಸುತ್ತದೆ. ಹಾಗಾಗಿ ಈ ಸೂಕ್ಷ್ಮದರ್ಶಕವು ಬಳಕೆದಾರ ಸ್ನೇಹಿಯಾಗಿದೆ.
iii. ಹೊಳಪಿನ ಕ್ಷೇತ್ರದ ಸೂಕ್ಷ್ಮದರ್ಶಕ (ಬ್ರೈಟ್ ಫೀಲ್ಡ್ ಮೈಕ್ರೋಸ್ಕೋಪ್): ಅತ್ಯಂತ ಸರಳ ಬೆಳಕಿನ ತಂತ್ರವನ್ನು ಬಳಸುವ ದೃಗ್ವಿಜ್ಞಾನ ಸೂಕ್ಷ್ಮದರ್ಶಕ ಇದಾಗಿದೆ. ಹೆಸರಿಗೆ ಅನುಗುಣವಾಗಿ, ಮಾದರಿಯನ್ನು ವೀಕ್ಷಿಸುವಾಗ, ಪ್ರಕಾಶಮಾನವಾದ ಹಿನ್ನೆಲೆಯಲ್ಲಿ ಕಪ್ಪು ಮಾದರಿ ಕಾಣಸಿಗುತ್ತದೆ. ಈ ಸೂಕ್ಷ್ಮದರ್ಶಕವನ್ನು ಬಳಸಿ, ಜೈವಿಕ ಮಾದರಿಯೊಳಗಿನ ಗಾಢ ಬಣ್ಣವುಳ್ಳ ‘ಕ್ಲೋರೋಪ್ಲಾಸ್ಟ್’ನಂತಹ ಅಂಗಾಂಶಗಳನ್ನು ವೀಕ್ಷಿಸಬಹುದು; ಸ್ವಾಭಾವಿಕವಾಗಿ ಎದ್ದು ಕಾಣುವ ಬಣ್ಣಗಳಿಲ್ಲದ ಮಾದರಿಗಳ ವೀಕ್ಷಣೆಗೆ, ಇದು ಹೇಳಿ ಮಾಡಿಸಿದ ಸೂಕ್ಷ್ಮದರ್ಶಕವಲ್ಲ. ಈ ಸಾಧನದಲ್ಲಿ, ಬೆಳಕಿನ ಮೂಲವಾಗಿ ‘ಹಾಲೋಜೆನ್ ದೀಪ’ವನ್ನು ಬಳಸುತ್ತಾರೆ.
iv. ಧ್ರುವೀಕರಣ ಸೂಕ್ಷ್ಮದರ್ಶಕ (ಪೋಲರೈಸಿಂಗ್ ಮೈಕ್ರೋಸ್ಕೋಪ್): ಮಾದರಿಯನ್ನು ಧ್ರುವೀಕೃತ ಬೆಳಕಿನಲ್ಲಿ ವೀಕ್ಷಿಸುವುದು, ಈ ಸೂಕ್ಷ್ಮದರ್ಶಕದ ಸಹಾಯದಿಂದ ಸಾಧ್ಯ. ಸಾಮಾನ್ಯ ಬೆಳಕಿನ ಮೂಲಕ್ಕೆ ೯೦ ಡಿಗ್ರೀ ಕೋನದಲ್ಲಿ ‘ಪೋಲರೈಸರ್’ ಅಥವಾ ‘ದ್ರುವೀಕರಣಕಾರಕ’ವನ್ನು ಇರಿಸಿದರೆ, ಹರಡುವ ಬೆಳಕು ಧ್ರುವೀಕರಣಗೊಳ್ಳುತ್ತದೆ, ಅಂದರೆ, ಒಂದೇ ದಿಕ್ಕಿನೆಡೆಗೆ ಕೇಂದ್ರೀಕೃತವಾಗುತ್ತದೆ; ಇದರಿಂದ, ಮಾದರಿಯ ಕೂಲಂಕುಷ ಪರಿವೀಕ್ಷಣೆ ಸಾಧ್ಯ. ವೀಕ್ಷಣೆಗೆ ಲಭ್ಯವಿರುವ ಮಾದರಿಯ ಬೆಳಕಿನ ಪ್ರಸರಣ ಗುಣಲಕ್ಷಣಗಳಲ್ಲಿರುವ ವೈವಿಧ್ಯವನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ.
v. ‘ಪ್ರಾವಸ್ಥೆ ಛಾಯಾವ್ಯತ್ಯಾಸ’ ಸೂಕ್ಷ್ಮದರ್ಶಕ (ಫೇಸ್ ಕಾಂಟ್ರಾಸ್ಟ್ ಮೈಕ್ರೋಸ್ಕೋಪ್): ಸಾಮಾನ್ಯವಾಗಿ ಯಾವುದೇ ಬಣ್ಣಗಳನ್ನು ಬಳಿಯದೆ, ಸ್ವಾಭಾವಿಕವಾಗಿ ಜೀವಂತ ಕೋಶಗಳನ್ನು ಪರಿವೀಕ್ಷಿಸಲು ಈ ಸೂಕ್ಷ್ಮದರ್ಶಕವನ್ನು ಬಳಸಲಾಗುತ್ತದೆ. ಜೀವಕೋಶಗಳ ಮೇಲ್ಮೈಯಲ್ಲಿ ಗೋಚರಿಸುವ ಅನಿಯತತೆಯನ್ನು ಅಥವಾ ಅನನುಕ್ರಮತೆಯನ್ನು ಬೆಳಕಿನ ಹಸ್ತಕ್ಷೇಪದ ಸಹಾಯದೊಂದಿಗೆ ಈ ಸೂಕ್ಷ್ಮದರ್ಶಕವು ತೋರ್ಪಡಿಸುತ್ತದೆ. ಇಲ್ಲಿ ಬೆಳಕಿನ ಪ್ರಾವಸ್ಥೆಯಲ್ಲಾಗುವ ಪಲ್ಲಟಗಳನ್ನು ಉಜ್ಜ್ವಲತೆಯ ವ್ಯತ್ಯಾಸಗಳಾಗಿ ತೋರಿಸಲಾಗುತ್ತದೆ.
vi. ಭೇದಾತ್ಮಕ ವ್ಯತಿಕರಣ ಸೂಕ್ಷ್ಮದರ್ಶಕ (ಡಿಫ್ಫ್ರೆನ್ಶಿಯಲ್ ಇಂಟರ್ಫೆರೆನ್ಸ್ ಕಾಂಟ್ರಾಸ್ಟ್ ಮೈಕ್ರೋಸ್ಕೋಪ್): ಈ ಸೂಕ್ಷ್ಮದರ್ಶಕವನ್ನು ಸಾಮಾನ್ಯ ‘ಪ್ರಾವಸ್ಥೆ ಛಾಯಾವ್ಯತ್ಯಾಸ’ ಸೂಕ್ಷ್ಮದರ್ಶಕದಂತೆಯೇ ಬಳಸಿದರೂ, ಇದರ ಮೂಲಕ ಮಾದರಿಯನ್ನು ಹೆಚ್ಚಿನ ಪೃಥಕ್ಕರಣದೊಂದಿಗೆ ವೀಕ್ಷಿಸಬಹುದಾಗಿದೆ. ಇಲ್ಲಿ ಕೂಡ ಬಣ್ಣ ಬಳಿಯದ ಪಾರದರ್ಶಕ ಮಾದರಿಗಳನ್ನು ಬಳಸಲಾಗುತ್ತದೆ. ಈ ಸೂಕ್ಷ್ಮದರ್ಶಕದ ಮುಖಾಂತರ ವೀಕ್ಷಿಸುವ ಮಾದರಿಯ ಚಿತ್ರಿಕೆಯಲ್ಲಿ, ‘ಪ್ರಾವಸ್ಥೆ ಛಾಯಾವ್ಯತ್ಯಾಸ’ ಸೂಕ್ಷ್ಮದರ್ಶಕ’ದಲ್ಲಿ ಲಭ್ಯವಾಗುವ ಚಿತ್ರಿಕೆಯಲ್ಲಿರುವಂತಹ ‘ಪ್ರಕಾಶಮಾನವಾದ ವಿವರ್ತನಾ ಪ್ರಭಾವಲಯ’ ಇರುವುದಿಲ್ಲ.
vii. ಪ್ರತಿದೀಪಕ ಸೂಕ್ಷ್ಮದರ್ಶಕ (ಫ್ಲೋರಸೆಂಟ್ ಮೈಕ್ರೋಸ್ಕೋಪ್): ಹೆಸರೇ ಸೂಚಿಸುವಂತೆ ಇದು ಪ್ರತಿದೀಪಕ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಸಾಧನ. ಇಲ್ಲಿ ಪಾದರಸದ ದೀಪಗಳಂತಹ ವಿಶೇಷ ಬೆಳಕಿನ ಮೂಲಗಳನ್ನು ಬಳಸಲಾಗುತ್ತದೆ. ಈ ಬಗೆಯ ಸೂಕ್ಷ್ಮದರ್ಶಕದಲ್ಲಿ ಇರಿಸಲಾದ ಮಾದರಿಯು ಹೀರಿಕೊಳ್ಳುವ ಬೆಳಕು ಮತ್ತು ಪ್ರತಿಫಲಿಸುವ ಬೆಳಕಿನ ಜೊತೆಜೊತೆಗೆ ಅಥವಾ ಇವನ್ನು ಹೊರತು ಪಡಿಸಿ, ಮಾದರಿಯು ಹೊರಸೂಸಿದ ಪ್ರತಿದೀಪ್ತಿಯನ್ನು ಬಳಸಿ, ಚಿತ್ರಿಕೆಯು ರೂಪುಗೊಳ್ಳುತ್ತದೆ. ಕೇವಲ ವಿಶೇಷ ಬೆಳಕಿನ ಮೂಲವಿದ್ದರೆ, ಮಾದರಿಯು ಪ್ರತಿದೀಪ್ತಿಯನ್ನು ಹೊರಸೂಸುವುದಿಲ್ಲ; ಹಾಗಾಗಿ, ಮಾದರಿಯ ಪರೀಕ್ಷೆಗೆ ಮೊದಲು, ಪ್ರತಿದೀಪಕ ಬಣ್ಣಗಳನ್ನು ಮಾದರಿಗೆ ಬಳಿದು, ನಂತರ ಪರಿವೀಕ್ಷಣೆ ನಡೆಸಲಾಗುತ್ತದೆ.
viii. ಸಂಪೂರ್ಣ ಆಂತರಿಕ ಪ್ರತಿಫಲನ ಪ್ರತಿದೀಪಕ ಸೂಕ್ಷ್ಮದರ್ಶಕ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್ ಫ್ಲೋರಸೆನ್ಸ್ ಮೈಕ್ರೋಸ್ಕೋಪ್): ಈ ಸೂಕ್ಷ್ಮದರ್ಶಕದಲ್ಲಿ, ಮಾದರಿಯ ಅತ್ಯಂತ ಸಮೀಪ ಒಂದು ಮಾಸುವ ಬೆಳಕಿನ ಅಲೆಯನ್ನು ಹಾಯಿಸಿ, ಮಾದರಿಯ ಮೇಲ್ಮೈಯನ್ನು ಮಾತ್ರ ಬೆಳಗಿಸಿ, ಇದರಿಂದ ಉಂಟಾಗುವ ಆಂತರಿಕ ಪ್ರತಿಫಲನ ಮತ್ತು ಪ್ರತಿದೀಪ್ತಿಯ ಫಲವಾಗಿ ಚಿತ್ರಿಕೆಯನ್ನು ಪಡೆಯಲಾಗುತ್ತದೆ. ಇಲ್ಲಿ ಪರಿವೀಕ್ಷಣೆಗೆ ಒಳಪಡುವ ಪ್ರದೇಶವು ಅತ್ಯಂತ ತೆಳುವಾದದ್ದು. ಇಲ್ಲಿ ಹಿನ್ನೆಲೆಯಲ್ಲಿನ ಬೆಳಕು ಕಡಿಮೆಯಿರುವ ಕಾರಣ, ಮಾದರಿಯ ಅಧ್ಯಯನವು ಆಣ್ವಿಕ ಘಟಕಗಳ ಮಟ್ಟದಲ್ಲಿ ಸಾಧ್ಯವಾಗುತ್ತದೆ.
ix. ಲೇಸರ್ ಸೂಕ್ಷ್ಮದರ್ಶಕ (ಲೇಸರ್ ಮೈಕ್ರೋಸ್ಕೋಪ್): ‘ಸಂಪೂರ್ಣ ಆಂತರಿಕ ಪ್ರತಿಫಲನ ಪ್ರತಿದೀಪಕ ಸೂಕ್ಷ್ಮದರ್ಶಕ’ಕ್ಕೆ ವ್ಯತಿರಿಕ್ತವಾಗಿ, ಲೇಸರ್ ಸೂಕ್ಷ್ಮದರ್ಶಕದಲ್ಲಿ ದಪ್ಪ ಮಾದರಿಯ ಪರಿವೀಕ್ಷಣೆ ನಡೆಸಲಾಗುತ್ತದೆ. ಇಲ್ಲಿ ಲೇಸರ್ ಕಿರಣಗಳನ್ನು ಬೆಳಕಿನ ರೂಪವಾಗಿ ಬಳಸುವ ಕಾರಣದಿಂದ, ಈ ಸಾಧನಕ್ಕೆ ಈ ಹೆಸರು ಬಂದಿದೆ. ವಿವಿಧ ತೇಜಕೇಂದ್ರದ ಅಂತರಗಳನ್ನುಳ್ಳ ದಪ್ಪ ಮಾದರಿಗಳ ಸ್ಪಷ್ಟ ವೀಕ್ಷಣೆಗೆ ಈ ಸೂಕ್ಷ್ಮದರ್ಶಕವನ್ನು ಬಳಸುತ್ತಾರೆ. ಈ ಸೂಕ್ಷ್ಮದರ್ಶಕವನ್ನು ಬಳಸಿ, ದಪ್ಪ ವಸ್ತುವೊಂದರ ವಿವಿಧ ಆಳದ ಚಿತ್ರಗಳನ್ನು ತೆಗೆದರೆ, ಅವುಗಳ ಸಂಗ್ರಹದಿಂದ ಆ ದಪ್ಪ ವಸ್ತುವಿನ ಮೂರು ಆಯಾಮದ ರಚನೆಯ ಪುನರ್ನಿರ್ಮಾಣ ಸಾಧ್ಯ.
x. ಬಹು ಫೋಟಾನ್ ಉದ್ರೇಕ ಸೂಕ್ಷ್ಮದರ್ಶಕ (ಮಲ್ಟಿ ಫೋಟಾನ್ ಏಕ್ಸೈಟೇಶನ್ ಮೈಕ್ರೋಸ್ಕೋಪ್): ಈ ಸೂಕ್ಷ್ಮದರ್ಶಕದಲ್ಲಿ ಲೇಸರ್ ಕಿರಣಗಳು ಅಥವಾ ಅತಿಗೆಂಪು ಕಿರಣಗಳನ್ನು ಬಳಸಲಾಗುತ್ತದೆ; ಮಾದರಿಯ ಚಿತ್ರಿಕೆ ರೂಪುಗೊಳ್ಳಲು ಬೇಕಾದ ಪ್ರತಿ ಪ್ರಚೋದನೆಗೆ, ಈ ಕಿರಣಗಳ ಎರಡು ಅಥವಾ ಎರಡಕ್ಕಿಂತಾ ಹೆಚ್ಚು ಫೋಟಾನ್ಗಳನ್ನು, ಮಾದರಿಯು ಹೀರಿಕೊಳ್ಳುತ್ತದೆ. ಬಹು ಫೋಟಾನ್ಗಳನ್ನು ಹೀರಿಕೊಳ್ಳುವುದರ ಫಲವಾಗಿ ಹಿನ್ನೆಲೆ ಬೆಳಕಿಗೆ ತಡೆ ಬೀಳುತ್ತದೆ. ಈ ಸೂಕ್ಷ್ಮದರ್ಶಕದ ಮುಖಾಂತರ, ಮಾದರಿಯ ಆಳವಾದ ಪ್ರದೇಶಗಳ ಉನ್ನತ ಸ್ಪಷ್ಟತೆಯ ಚಿತ್ರ ವೀಕ್ಷಣೆ ಸಾಧ್ಯ.
xi. ರಚನಾತ್ಮಕ ಬೆಳಕಿನ ಸೂಕ್ಷ್ಮದರ್ಶಕ (ಸ್ತ್ರಕ್ಚರ್ಡ್ ಇಲ್ಯುಮಿನೇಶನ್ ಮೈಕ್ರೋಸ್ಕೋಪ್): ಇದೊಂದು ಉನ್ನತ ಸ್ಫುಟತೆಯ ಚಿತ್ರಿಕೆಯನ್ನು ನೀಡುವ ಸೂಕ್ಷ್ಮದರ್ಶಕ. ಬೆಳಕಿನ ವಿವರ್ತನೆಯಿಂದ ಉಂಟಾಗುವ ಸೀಮಿತ ಪೃಥಕ್ಕರಣವನ್ನು ಜಯಿಸಲು, ಪರಿವೀಕ್ಷಣಾ ಪ್ರದೇಶದ ಹೊರಗಿನ ಆವರ್ತನ ಜಾಗದ ಮಾಹಿತಿ ಸಂಗ್ರಹಿಸುವ ಮೂಲಕ, ಸ್ಥಳವಿಸ್ತಾರದ ಪೃಥಕ್ಕರಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಸ್ಪಷ್ಟ ವೀಕ್ಷಣೆಯನ್ನು ಸಾಧ್ಯವಾಗಿಸುತ್ತದೆ.

ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು (ಎಲೆಕ್ಟ್ರಾನ್ ಮೈಕ್ರೋಸ್ಕೋಪ್) ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕಗಳಿಗಿಂತಾ ಪ್ರಮುಖವಾಗಿ
ಭಿನ್ನವಾಗಿರುವುದು, ಮಾದರಿಯನ್ನು ಬೆಳಗಿಸಲು ಬಳಸುವ ತಂತ್ರದಲ್ಲಿ. ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕಗಳಲ್ಲಿ ಬೆಳಕಿನ ವಿವಿಧ
ಕಿರಣಗಳನ್ನು ಬಳಸಿದರೆ, ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಲ್ಲಿ ‘ಎಲೆಕ್ಟ್ರಾನ್’ಗಳ ಕಿರಣಗಳನ್ನು ಬಳಸಲಾಗುತ್ತದೆ. ಹಾಗಾಗಿ,
ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕಗಳಲ್ಲಿ ಬಳಸುವ ನೇತ್ರಕ, ಮಸೂರ, ಕನ್ನಡಿಗಳ ಬದಲಿಗೆ ಇಲ್ಲಿ ಬೇರೆಯದೇ ಉಪಕರಣಗಳ
ವ್ಯವಸ್ಥೆಯಿದೆ. ಎಲೆಕ್ಟ್ರಾನ್ಗಳ ತರಂಗಾಂತರವು, ದ್ರುಗ್ಗೋಚರ ಬೆಳಕಿನ ಫೋಟಾನ್ಗಳಿಗಿಂತಾ ೧,೦೦,೦೦೦ ಪಟ್ಟು
ಕಡಿಮೆಯಿರುತ್ತದೆ; ಈ ಕಾರಣದಿಂದಾಗಿ, ಬೆಳಕಿನ ಸೂಕ್ಷ್ಮದರ್ಶಕಗಳಿಗಿಂತಾ ಹೆಚ್ಚಿನ ಪೃಥಕ್ಕರಣ ಸಾಮರ್ಥ್ಯವು ಎಲೆಕ್ಟ್ರಾನ್
ಸೂಕ್ಷ್ಮದರ್ಶಕಗಳಿಗಿದೆ. ಹಾಗಾಗಿ ಇವು ಅತೀ ಸಣ್ಣ ವಸ್ತುಗಳ ವಿವರಣಾತ್ಮಕ ರಚನೆಯನ್ನು ಚಿತ್ರಿಕೆಯ ಮೂಲಕ ತೋರ್ಪಡಿಸುತ್ತವೆ. ಟ್ರಾನ್ಸ್ಮಿಶನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್, ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ಗಳಂತಹ ಬಗೆ ಬಗೆಯ ಸುಧಾರಿತ ಬಗೆಯಲ್ಲಿ ಈ ಸೂಕ್ಷ್ಮದರ್ಶಕವು ಲಭ್ಯವಿದ್ದು, ಇವುಗಳ ಸಹಾಯದಿಂದ, ಮಾದರಿಯನ್ನು ಸರಿಸುಮಾರು ಒಂದು ಕೋಟಿ ಪಟ್ಟು ಹಿಗ್ಗಿಸಿ ಪರಿವೀಕ್ಷಣೆ ನಡೆಸಬಹುದಾಗಿದೆ.

ಕ್ರಮವೀಕ್ಷಣಾ ಶೋಧಕ ಸೂಕ್ಷ್ಮದರ್ಶಕವು (ಸ್ಕ್ಯಾನಿಂಗ್ ಪ್ರೋಬ್ ಮೈಕ್ರೋಸ್ಕೋಪ್) ಭೌತಿಕ ಶೋಧಕವನ್ನು ಬಳಸಿ, ಮಾದರಿಯ ಮೇಲ್ಮೈಯ ಸೂಕ್ಷ್ಮ ತನಿಖೆ ಮಾಡಿ, ವಿವರಣಾತ್ಮಕ ಚಿತ್ರಿಕೆಯನ್ನು ರೂಪಿಸುತ್ತದೆ. ಈ ಭೌತಿಕ ಶೋಧಕ ಮತ್ತು ಮಾದರಿಯ ಮೇಲ್ಮೈಯ ನಡುವಿನ ಪಾರಾಸ್ಪರಿಕ ಪ್ರತಿಕ್ರಿಯೆಯು, ಮಾದರಿಯ ಮೇಲ್ಮೈ ಆಕಾರ ಹಾಗೂ ಇತರೆ ಗುಣಲಕ್ಷಣಗಳನ್ನು ಅಳೆಯಲು ಸಹಾಯ ಮಾಡುತ್ತದೆ. ಪರಮಾಣು ಬಲ ಸೂಕ್ಷ್ಮದರ್ಶಕ(ಅಟೋಮಿಕ್ ಫೋರ್ಸ್ ಮೈಕ್ರೋಸ್ಕೋಪ್), ಸ್ಕ್ಯಾನಿಂಗ್ ಸಮೀಪ-ಕ್ಷೇತ್ರ ದೃಗ್ವಿಜ್ಞಾನೀಯ ಸೂಕ್ಷ್ಮದರ್ಶಕ (ಸ್ಕಾನಿಂಗ್ ನಿಯರ್ ಫೀಲ್ಡ್ ಆಪ್ಟಿಕಲ್ ಮೈಕ್ರೋಸ್ಕೋಪ್) ಇತ್ಯಾದಿ ಹಲವು ಬಗೆಯ ಕ್ರಮವೀಕ್ಷಣಾ ಶೋಧಕ ಸೂಕ್ಷ್ಮದರ್ಶಕಗಳು ಬಳಕೆಯಲ್ಲಿವೆ.

ಇವಲ್ಲದೇ, ಎಕ್ಸ್ ರೇ ಸೂಕ್ಷ್ಮದರ್ಶಕ, ಶ್ರವಣಾತೀತ ಸೂಕ್ಷ್ಮದರ್ಶಕ (ಅಲ್ಟ್ರಾಸೋನಿಕ್ ಮೈಕ್ರೋಸ್ಕೋಪ್) ಇತ್ಯಾದಿ ಸೂಕ್ಷ್ಮದರ್ಶಕಗಳು ಕೂಡ ಲಭ್ಯವಿದ್ದು, ಕೇವಲ ಸೂಕ್ಷ್ಮಜೀವಾಣುವಿಜ್ಞಾನ ಕ್ಷೇತ್ರಕ್ಕೆ ಸೀಮಿತವಾಗದೇ, ಲೋಹ ರಚನೆಯ ಅಧ್ಯಯನ, ಸ್ಫಟಿಕಗಳ ಅಧ್ಯಯನದಂತಹಾ ಹಲವಾರು ಕ್ಷೇತ್ರಗಳಲ್ಲಿ ಬಳಕೆಯಲ್ಲಿವೆ. ಒಟ್ಟಾರೆ, ಹೊಸ ಹೊಸ ತಂತ್ರಜ್ಞಾನಗಳ ಫಲವಾಗಿ ಕಾಲಾನುಕ್ರಮದಲ್ಲಿ ಸುಧಾರಿತಗೊಂಡ ಸೂಕ್ಷ್ಮದರ್ಶಕಗಳು, ನಮ್ಮ ಹಾಗೂ ಸೂಕ್ಷ್ಮಾಣುಜೀವಿಗಳ ನಡುವೆ ಅಂತರವನ್ನು ತೊಡೆದುಹಾಕುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ; ಇದರ ಫಲವಾಗಿ ಹಲವಾರು ವೈದ್ಯಕೀಯ ಸವಾಲುಗಳಿಗೆ ಉತ್ತರ ದೊರಕುತ್ತಿದೆ ಹಾಗೂ ಆಣ್ವಿಕ ನೆಲೆಗಟ್ಟಿನಲ್ಲಿ ಜಗತ್ತು ತನ್ನನ್ನು ತಾನು ನಮ್ಮೆದುರು ತೆರೆದುಕೊಳ್ಳುತ್ತಿದೆ.