ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಶಕ್ತಿ ಸಾಮರ್ಥ್ಯಗಳನ್ನು ಕುಗ್ಗಿಸುವ, ಸಾಮಾಜಿಕ ಕಳಂಕವನ್ನು ತರುವ, ಸಾಕಷ್ಟು ಪ್ರಮಾಣದಲ್ಲಿ ಅಂಗವೈಕಲ್ಯವನ್ನುಂಟುಮಾಡುವ, ಕುಟುಂಬ ಮತ್ತು ಸಮಾಜಕ್ಕೆ ಆರ್ಥಿಕ ಹೊರೆಯನ್ನುಂಟು ಮಾಡುವ ಮಾನಸಿಕ ಕಾಯಿಲೆಗಳು ಬರದಂತೆ ತಡೆಗಟ್ಟಬಹುದೇ? ಖಂಡಿತವಾಗಿ ತಡೆಗಟ್ಟಬಹುದು. ಈ ಕೆಳಕಾಣುವ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ.

1.   ಯೋಜಿತ ರೀತಿಯಲ್ಲಿ ಗರ್ಭಧಾರಣೆ ಆಗಲಿ, ಗರ್ಭಿಣಿ ಸ್ತ್ರೀಯ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಆಕೆಗೆ ಪೌಷ್ಠಿಕ ಆಹಾರ, ಮಾನಸಿಕ ನೆಮ್ಮದಿ, ಅವಧಿಗೊಂದಾವರ್ತಿ ವೈದ್ಯರ ಸಲಹೆ ಸಿಗುವಂತಾಗಲಿ.

2.   ಹೆರಿಗೆ ಕಷ್ಟವಾಗುತ್ತದೆ ಎಂಬ ಸೂಚನೆ ದೊರೆತರೆ, ಹೆರಿಗೆಯನ್ನು ತಜ್ಞರಿರುವ ಆಸ್ಪತ್ರೆಯಲ್ಲೇ ಮಾಡಿಸಿ.

3.               ಮಗುವಿನ ಲಾಲನೆ ಪಾಲನೆ ಚೆನ್ನಾಗಿರಲಿ. ಮಗುವಿಗೆ ಪೌಷ್ಠಿಕ ಆಹಾರ, ಒಳ್ಳೆಯ ಪರಿಸರ, ಕುಟುಂಬದವರಿಂದ ಸರಿಪ್ರಮಾಣ ಪ್ರೀತಿ, ಆಸರೆ, ಶಿಸ್ತು, ಶಿಕ್ಷೆ,   ಮಾರ್ಗದರ್ಶನ ಸಿಗಲಿ. ಮಗುವಿಗೆ ಯಾವುದೇ ರೀತಿಯಿಂದ ಮಾನಸಿಕ ನೋವಾಗುವಂತೆ, ಅಭದ್ರತೆಯ ಭಾವನೆ ಬಾರದಂತೆ ನೋಡಿಕೊಳ್ಳಿ. ಮಗು     ದೈಹಿಕವಾಗಿ, ಮಾನಸಿಕವಾಗಿ ಚಟುವಟಿಕೆಯಿಂದ ಇರುವಂತೆ ವ್ಯವಸ್ಥೆ ಮಾಡಿ.

4.   ಮಗುವಿನ ಬೇಕು ಬೇಡಗಳಿಗೆ ವೈಯಕ್ತಿಕ ಗಮನಕೊಡುವಂತಹ, ಶೈಕ್ಷಣಿಕ ಅಂಶಗಳಿಗೆ ಗಮನಕೊಟ್ಟಂತೆ, ಪಠ್ಯೇತರ ವಿಷಯ, ಚಟುವಟಿಕೆಗಳಿಗೂ ಸಮಾನ ಗಮನಕೊಡುವ ಶಾಲೆಗೆ ಮಗುವನ್ನು ಸೇರಿಸಿ, ಹೆಚ್ಚು ಅಂಕಗಳನ್ನು ಗಳಿಸಿದರೆ ಸಾಕು ಎಂದು ಹೇಳದೆ, ಮಗು ಭಾವನಾತ್ಮಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ, ಬೆಳೆಯಲು ಅವಕಾಶ ಕೊಡುವ ಶಿಕ್ಷಕರು ಮತ್ತು ಶಾಲಾ ವ್ಯವಸ್ಥೆ ಇರಲಿ. ನಿಧಾನವಾಗಿ ಕಲಿಯುವ ಮಕ್ಕಳನ್ನು ದಂಡಿಸದೇ, ಅವಮಾನ     ಮಾಡದೇ ಇರುವ ವ್ಯವಸ್ಥೆ ಇರಬೇಕು. ಶಾಲೆ ಮಗುವಿನ ಸ್ನೇಹಿಯಾಗಿರಲಿ.

5.               ಮಗುವಿನ ಅಭಿರುಚಿ ಸಾಮರ್ಥ್ಯಗಳನ್ನು ಗಮನಿಸಿ, ಎಸ್ಸೆಸ್ಸೆಲ್ಸಿಯಾದ ಮೇಲೆ, ಮಗು ವಿಜ್ಞಾನದ ಕೋರ್ಸ್‌ ತೆಗೆದುಕೊಳ್ಳಬೇಕೇ, ವಾಣಿಜ್ಯದ ಕೋರ್ಸ್‌ ತೆಗೆದುಕೊಳ್ಳಬೇಕೇ ಅಥವಾ ಕಲಾ ಕೋರ್ಸ್‌ ಅಥವಾ ಉದ್ಯೋಗಮುಖೀ ಕೋರ್ಸ್‌ ಅನ್ನು ಆಯ್ಕೆ ಮಾಡಬೇಕೇ ಎಂಬುದನ್ನು ನಿರ್ಧರಿಸಿ.

6.   ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಹತ್ತು ಜೀವನ ಕೌಶಲ್ಯಗಳನ್ನು ಕಲಿಯಬೇಕು.

i)          ವಿಶ್ಲೇಷಣಾತ್ಮಕ ಚಿಂತನೆ.

ii)         ವಿಮರ್ಶಾತ್ಮಕ ಚಿಂತನೆ.

iii)        ಸಮಸ್ಯೆಯ ವಿಶ್ಲೇಷಣೆ ಮತ್ತು ನಿವಾರಣಾ ಕೌಶಲ್ಯ.

iv)        ಸರಿ ನಿರ್ಧಾರಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು.

v)         ಉತ್ತಮ ಸಂವಹನ ಕೌಶಲ.

vi)        ಇತರರೊಡನೆ ಒಳ್ಳೆಯ ಸ್ನೇಹ ಸಂಬಂಧವನ್ನು ಇಟ್ಟುಕೊಳ್ಳುವುದು.

vii)       ತನ್ನ ಬಲಾಬಲಗಳನ್ನು ಅರ್ಥಮಾಡಿಕೊಂಡು, ಆತ್ಮವಿಶ್ವಾಸವನ್ನು ಹೊಂದಿರುವುದು.

viii)      ಇತರರ ನೋವು-ನಲಿವು, ಭಾವನೆಗಳನ್ನು ಅವರ ಮಟ್ಟದಲ್ಲೇ ಅರ್ಥಮಾಡಿಕೊಂಡು, ಸ್ಪಂದಿಸುವುದು.

ix)        ಭಾವನೆಗಳನ್ನು ಸರಿಯಾದ ರೀತಿಯಲ್ಲಿ ಪ್ರಕಟಿಸುವುದು ಹಾಗೂ ಭಾವೋದ್ವೇಗಕ್ಕೆ ಒಳಗಾಗದಿರುವುದು.

x)         ಮಾನಸಿಕ ಒತ್ತಡವನ್ನು ನಿಭಾಯಿಸಿ, ಸದಾ ನೆಮ್ಮದಿಯಿಂದಿರುವುದು.

7.   ಮದ್ಯಪಾನೀಯ, ಮಾದಕ ವಸ್ತುಗಳ ಸೇವನೆಯನ್ನು ಮಾಡದಿರುವುದು.

8.               ತಲೆಗೆ, ಮಿದುಳಿಗೆ ಪೆಟ್ಟು ಬಳದಂತೆ ಎಚ್ಚರವಹಿಸುವುದು.

9.               ಯಾವುದೇ ಅನಾರೋಗ್ಯ ಉಂಟಾದಾಗ, ತಡಮಾಡದೇ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆದು ರೋಗಮುಕ್ತನಾಗುವುದು ಅಥವಾ ರೋಗವನ್ನು ಹತೋಟಿಯಲ್ಲಿಡುವುದು.

10.             ನಿಮ್ಮ ಆಸೆ ಆಕಾಂಕ್ಷೆಗಳನ್ನು ಗುರಿಗಳನ್ನು ನಿಮ್ಮ ಸಾಮರ್ಥ್ಯ, ಸಂಪನ್ಮೂಲಗಳ ಚೌಕಟ್ಟಿನೊಳಗೇ ಇಟ್ಟುಕೊಳ್ಳಿ. ನಿತ್ಯ ಏನು, ಎಷ್ಟು ಲಭ್ಯವೋ ಅಷ್ಟರಲ್ಲೇ ಸಂತೋಷ/ತೃಪ್ತಿಪಡುವುದನ್ನು ಅಭ್ಯಾಸ ಮಾಡಿ.

11.             ನೀವು ಮಾಡಬೇಕಾದ ಕೆಲಸ, ಕರ್ತವ್ಯಗಳನ್ನು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಸಂತೋಷದಿಂದ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನಿರ್ವಹಿಸಿ.

12.             ನಿತ್ಯ ಒಂದು ಘಂಟೆ ಕಾಲ, ಮನಸ್ಸು ಮತ್ತು ಶಾರೀರ ಮಿರಮಿಸಲು ನೆರವಾಗುವ ಚಟುವಟಿಕೆ ಹವ್ಯಾಸಗಳನ್ನು ಹಮ್ಮಿಕೊಳ್ಳಿ. ಸಂಗೀತ, ಓದು-ಬರಹ, ನಡಿಗೆ-ವ್ಯಾಯಾಮ, ಯೋಗ-ಧ್ಯಾನ-ಆಧ್ಯಾತ್ಮಿಕ ಚಟುವಟಿಕೆ, ಬಂಧು-ಮಿತ್ರರೊಡನೆ ಸರಸ-ಸಂಭಾಷಣೆ, ಅವಧಿಗೊಂದಾವರ್ತಿ ಪ್ರವಾಸ ಮತ್ತು ಸ್ಥಳ ಬದಲಾವಣೆ, ಇತ್ಯಾದಿ.

13.             ಹೆಚ್ಚಿನ ನಿರ್ಧಾರಗಳನ್ನು ನೀವೊಬ್ಬರೇ ಮಾಡುವುದರ ಬದಲು, ಮನೆಯವರು, ಆಪ್ತ ಇಷ್ಟರ ಜೊತೆ ಸಮಾಲೋಚಿಸಿ ಮಾಡಿ.

14.             ಒಂಟಿಯಾಗಿರಬೇಡಿ, ಸದಾ ಜನರೊಡನೆ ಬೆರೆಯಿರಿ. ಮಾತನಾಡಿ, ನಿಮ್ಮ ಅನಿಸಿಕೆ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳಿ.

15.             ವಾಸ್ತವಿಕತೆಗೆ ಹೆಚ್ಚು ಗಮನ ಕೊಡಿ. ವಾಸ್ತವಿಕ ಅಂಶಗಳಿಗೆ ಹೊಂದಿಕೊಳ್ಳಿ.

16.             ಸಾಧ್ಯವಾದಷ್ಟು ಸ್ಥಿತಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಪ್ರಯತ್ನ ಮಾಡೋಣ, ಕಷ್ಟ ಸಮಸ್ಯೆಗಳನ್ನು ಎದುರಿಸೋಣ. ನಾಳೆ ಒಳ್ಳೆಯದೇ ಆಗುತ್ತದೆ ಎಂಬ ಆಶಾವಾದವಿರಲಿ.

17.             ನಿತ್ಯ ಕೆಲಸಗಳನ್ನು – ಆಹಾರ ಸೇವನೆ, ನಿದ್ರೆ, ಮನರಂಜನೆ, ವ್ಯಾಯಾಮ ಸ್ವಚ್ಛತೆ ಇವೆಲ್ಲವನ್ನೂ ಆದಷ್ಟು ಕ್ರಮಬದ್ಧವಾಗಿ ವೇಳೆಯಾಗಿ ಸರಿಯಾಗಿ ಬಿಡಿ.

18.             ಎಲ್ಲರೊಡನೆ ಸ್ನೇಹ, ಸಜ್ಜನಿಕೆಯನ್ನು ಪ್ರಕಟಿಸಿ, ಯಾರಿಂದ ಎಷ್ಟು ಮತ್ತು ಏನನ್ನು ನಿರೀಕ್ಷಿಸಬಹುದು ಎಂದು ಅರ್ಥಮಾಡಿಕೊಳ್ಳಿ. ಅಷ್ಟನ್ನು ಮಾತ್ರ ನಿರೀಕ್ಷಿಸಿ. ಟೀಕೆಗಳನ್ನು ತಗ್ಗಿಸಿ, ಶ್ಲಾಘನೆಯನ್ನು ಹೆಚ್ಚಿಸಿ.

19. ನಿಮ್ಮಜ್ಞಾನ ತಿಳುವಳಿಕೆಗಳನ್ನು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ ಹೊಸತನ್ನು ಕಲಿಯುವ ಯಾವುದೇ ಅವಕಾಶವನ್ನು ವ್ಯರ್ಥ ಮಾಡಬೇಡಿ. ಸದಾ “ಬಿಜಿ”ಯಾಗಿರಿ.

20. ಮಾನವಾತೀತ ಶಕ್ತಿಯೊಂದರಲ್ಲಿ ನಂಬಿಕೆ ಇಡಿ. ಪ್ರಾರ್ಥನೆ ಮಾಡಿ. ಅರ್ಥಮಾಡಿಕೊಳ್ಳಿ ಕಷ್ಟಕಾಲದಲ್ಲಿ ಇದು ಊರುಗೋಲು.

21. ಮೂಢನಂಬಿಕೆ, ಕಂದಾಚಾರಗಳಿಂದ ನಿಮಗೂ ಹಿಂಸೆ ಇತರರಿಗೂ ಹಿಂಸೆ. ಆದ್ದರಿಂದ ಅವನ್ನು ಬಿಡಿ. ಹೆಚ್ಚು ವಾಸ್ತವಿಕವಾಗಿ ವೈಜ್ಞಾನಿಕವಾಗಿ ಆಲೋಚಿಸಿ ಹಾಗೆಯೇ ನಡೆದು ಕೊಳ್ಳಿ.

22. ಜೀವನ ಎಂದಮೇಲೆ ಕಷ್ಟ ನಷ್ಟ, ಸೋಲು, ನಿರಾಶೆ, ಅಪಮಾನಗಳು ನಮಗೆ ಎದುರಾಗುತ್ತವೆ. ಸ್ಥಿತಿ ಪ್ರಜ್ಞತೆಯಿಂದ ಅವುಗಳನ್ನು ಎದುರಿಸಿ. ಇವು ತಾತ್ಕಾಲಿಕ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂಬ ಆಶಾವಾದ ಸದಾ ಇರಲಿ. ಸಣ್ಣಪುಟ್ಟ ಸಾಧನೆಗಳಿಂದ, ನಿರಾಶೆಯನ್ನು ಮೆಟ್ಟಿ ನಿಲ್ಲಿ.