ಲಕ್ಷಣಗಳು:

ಮಾನಸಿಕ: ಏನೋ ಭಯ, ಕಳವಳ, ಯಾವುದೋ ಕೇಡು, ದುರಂತವಾಗಬಹುದು, ಸೋಲು, ನಿರಾಶೆ ಆಗಬಹುದು. ಕಷ್ಟನಷ್ಟ ಸಮಸ್ಯೆಗಳು ಸೃಷ್ಟಿಯಾಗಬಹುದು, ಸಾವು ಬರಬಹುದು, ಪ್ರೀತಿ-ಪಾತ್ರರು ದೂರವಾಗಬಹುದು, ಮೋಸ ವಂಚನೆ ನಡೆಯಬಹುದು. ನಾಳೆ ಅಥವಾ ಭವಿಷ್ಯದಲ್ಲಿ ತೊಂದರೆ, ಸಂಕಟಗಳು, ಎದುರಾಗಬಹುದು. ಗುರಿಮುಟ್ಟಲು ಆಗದೇ ಹೋಗಬಹುದು, ಕಾಯಿಲೆ ಕಸಾಲೆ ಬರಬಹುದು, ಅಂಗವೈಕಲ್ಯ ಉಂಟಾಗಬಹುದು ಈ ರೀತಿಯ “ನಕಾರಾತ್ಮಕ ಯೋಚನೆಗಳು” ಮನಸ್ಸನ್ನು ತೊಡಗುತ್ತವೆ. ಇದರ ಅಂಗವಾಗಿ ಅಥವಾ ಫಲವಾಗಿ ಮನಸ್ಸು ಅತೀ ಚಂಚಲವಾಗುವುದು, ಏಕಾಗ್ರತೆ ಇಲ್ಲದಿರುವುದು, ಕಲಿಕೆ ಕಷ್ಟವಾಗುವುದು, ನೆನಪಿನ ಶಕ್ತಿ ಕುಗ್ಗುವುದು, ತೀರ್ಮಾನ ಅಥವಾ ನಿರ್ಧಾರ ಸಣ್ಣದೇ ಇರಲಿ ದೊಡ್ಡದೇ ಇರಲಿ, ತೀರ್ಮಾನ/ನಿರ್ಧಾರ ಕೈಗೊಳ್ಳಲು ಆಗದಿರುವುದು, ವಿಷಯ-ಸಂದರ್ಭ, ವ್ಯಕ್ತಿ, ಸಮಸ್ಯೆ ವಿಶ್ಲೇಷಣೆ ಮಾಡಲು ಕಷ್ಟ. ತರ್ಕ ಬದ್ಧವಾಗಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಆಲೋಚನೆ ಮಾಡಲಾಗದಿರುವುದು, ಆತ್ಮವಿಶ್ವಾಸವಿಲ್ಲದಿರುವುದು, ವಿಪರೀತ ಕೀಳರಿಮೆ, ಅನ್ಯಮನಸ್ಕತೆ, ಕೆಲಸ-ಕರ್ತವ್ಯಗಳನ್ನು ನಿರ್ವಹಿಸಲಾಗದಿರುವುದು, ಬೌದ್ಧಿಕ ಸಾಮರ್ಥ್ಯ ಕುಗ್ಗುವುದು.

ದೈಹಿಕ: ಹಸಿವಿಲ್ಲ, ಬಾಯಿ ರುಚಿ ಇಲ್ಲ, ಬಾಯಿ ಒಣಗಿ ಹೋಗುವುದು, ಅಜೀರ್ಣ, ಮಲವಿಸರ್ಜನೆಗೆ/ಮೂತ್ರ ವಿಸರ್ಜನೆಗೆ ಅವರಸರ ಮತ್ತು ಮಾಮೂಲಿಗಿಂತ ಹೆಚ್ಚಿನ ಸಲ ವಿಸರ್ಜನೆಯಾಗುವುದು, ನಿದ್ರಾತೊಂದರೆ-ನಿದ್ರೆ ಬರದಿರುವುದು, ಸ್ವಲ್ಪ ಶಬ್ದ-ಅಡಚಣೆಗೇ ಎಚ್ಚರವಾಗಿಬಿಡುವುದು, ನಿದ್ರೆಯಲ್ಲಿ ವಿಪರೀತ ಗಟ್ಟಿಯಾಗಿ ಮಾತನಾಡುವುದು, ಭಯದಿಂದ ಕೂಗುವುದು, ದುಃಖದಿಂದ ಅಳುವುದು, ಕೋಪದಿಂದ ಕಿರುಚುವುದು, ಹಲ್ಲು ಕಡಿಯುವುದು. ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ, ವೀರ್ಯಸ್ಖಲನ, ನಿದ್ರೆಯಲ್ಲಿ ಎದ್ದು ಓಡಾಡುವುದು, ಲೈಂಗಿಕ ತೊಂದರೆಗಳು-ಲೈಂಗಿಕ ಆಸೆ ತಗ್ಗುವುದು, ಜನನಾಂಗ ಉದ್ರೇಕಗೊಳ್ಳದಿರುವುದು, ಶೀಘ್ರ ವೀರ್ಯಸ್ಖಲನ, ಲೈಂಗಿಕ ಕ್ರಿಯೆ ನಡೆಸಲಾಗದಿರುವುದು (ಪುರುಷನಿಗೆ), ಲೈಂಗಿಕ ಕ್ರಿಯೆಯ ಅವಧಿಯಲ್ಲಿ ಯೋನಿ ಹಿಗ್ಗದೆ, ನೋವುಂಟಾಗುವುದು, ಇಬ್ಬರಿಗೂ ಲೈಂಗಿಕ ಸುಖ-ತೃಪ್ತಿ ಸಿಗದಿರುವುದು, ಲೈಂಗಿಕ ಕ್ರಿಯೆ ಎಂದರೆ ಭಯವಾಗುತ್ತದೆ. ಇತರೆ ತೊಂದರೆಗಳು ಉಸಿರು ಕಟ್ಟಿದಂತಾಗುತ್ತದೆ, ಹೆಚ್ಚು ಬೆವರು ಸುರಿಯುತ್ತದೆ, ಸ್ನಾಯುಗಳು ಬಿಗಿತದಿಂದ ಮೈ ಕೈ ನೋವು, ತಲೆನೋವು, ಬೆನ್ನು-ಸೊಂಟ ನೋವು, ಎದೆ ನೋವು, ಕೀಲುಗಳ ನೋವು, ಮಾತು ತೊದಲುವುದು, ಕೈಕಾಲುಗಳ ನಡುಕ, ಬರೆಯಲು ಆಗದಿರುವುದು, ಬರವಣಿಗೆ ಕೆಟ್ಟದಾಗಿ ಮೂಡುವುದು, ಇತರರ ಮುಂದೆ ಸಹಿ ಮಾಡಲಾಗದಿರುವುದು, ಜನರ ಮುಂದೆ-ವೇದಿಕೆಯ ಮೇಲಿರುವಾಗ ಮಾತಾಡಲು, ಹಾಡಲು, ಅಭಿನಯಿಸಲು, ನೃತ್ಯ ಮಾಡಲು, ಯಾವುದೇ ಪ್ರತಿಭೆಯನ್ನು ಪ್ರದರ್ಶಿಸಲಾಗದಿರುವುದು.

ಯಾರಲ್ಲಿ ಹೆಚ್ಚು?

   ಹದಿವಯಸ್ಸಿನವರಲ್ಲಿ, ದೊಡ್ಡ ಪರೀಕ್ಷೆಗಳಿಗೆ ಸಿದ್ಧತೆ ಮಾಡುವ ವಿದ್ಯಾರ್ಥಿಗಳಲ್ಲಿ.

   ಅತಿಯಾದ ನಿರೀಕ್ಷೆ, ಒತ್ತಡ, ಸ್ಪರ್ಧೆಯನ್ನು ಎದುರಿಸುವವರಲ್ಲಿ.

   ಸೀಮಿತ ಸಮಯ-ಸಂಪನ್ಮೂಲದ ಚೌಕಟ್ಟಿನಲ್ಲಿ ದೊಡ್ಡಗುರಿ ಸಾಧನೆಗೆ ಹೊರಟವರಲ್ಲಿ.

   ಒಂಟಿಯಾಗಿರುವವರಲ್ಲಿ.

   ಇತರರ ಅಸಹಕಾರ, ಕೊಂಕು ನೋಟ, ತಿರಸ್ಕಾರಕ್ಕೆ ಒಳಗಾಗಿರುವವರಲ್ಲಿ.

   ಹೊಸ ಸ್ಥಳ, ಹೊಸ ಜನರ ನಡುವೆ ಬದುಕ ಬೇಕಾದವರಲ್ಲಿ, ವಲಸಿಗರಲ್ಲಿ, ಪರದೇಶಗಳಲ್ಲಿ ವಾಸಿಸುವವರಲ್ಲಿ.

   ಅಪಾಯಕಾರಿ ವೃತ್ತಿ/ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡುವವರಲ್ಲಿ, ಉದಾಹರಣೆಗೆ, ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು, ವೇಗವಾಗಿ ವಾಹನ ಚಲಾಯಿಸುವವರು, ಸಂಶೋಧನೆಯಲ್ಲಿ ನಿರತರಾಗಿರುವವರು, ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವ ಮೇನೆಜ್‌ಮೆಂಟ್ ವೃತ್ತಿಯವರು, ಅಧಿಕಾರಕ್ಕಾಗಿ ಹೋರಾಡುವ ರಾಜಕಾರಣಿಗಳು, ಆದಾಯ ತೆರಿಗೆಯನ್ನು ಕಟ್ಟದೇ ಹಣ ಉಳಿಸಿಕೊಳ್ಳಲು ಪರದಾಡುವ ಶ್ರೀಮಂತರು, ಅನೈತಿಕ ವ್ಯವಹಾರ ಮಾಡುವವರು, ಯುದ್ಧಭೂಮಿಯಲ್ಲಿರುವ ಗಡಿಕಾವಲು ಕಾಯುವ ಯೋಧರು, ಅತಿ ಅಪಾಯಕಾರಿ ಅಪರಾಧಿಗಳನ್ನು ನೋಡಿಕೊಳ್ಳುವ ಜೈಲು ಸಿಬ್ಬಂದಿ, ಟಾರ್ಗೆಟ್‌ಗಳನ್ನು ಹೊಂದಿ, ನಿರ್ವಹಣೆಯ ಆಧಾರದ ಮೇಲೆ ಭಡ್ತಿ ಅಥವಾ ಸಂಬಳವನ್ನು ಪಡೆಯುವ ಸೇಲ್ಸ್‌ಮನ್‌ಗಳು, ಏಜೆಂಟ್‌ಗಳು, ದೊಡ್ಡ ಮೊತ್ತದ ಹಣವನ್ನು ನಿಭಾಯಿಸುವ, ಕ್ಯಾಶಿಯರ‍್ಗಳು, ಹಣವನ್ನು ಸಾಗಿಸುವವರು, ವಿಚಾರಣಾಧೀನ ಖೈದಿಗಳು, ವಿಶೇಷ ಪ್ರಕರಣಗಳನ್ನು ನಿರ್ವಹಿಸಲು ವಕೀಲರು ಮತ್ತು ನ್ಯಾಯಾಧೀಶರಲ್ಲಿ, ಭಯೋತ್ಪಾದಕರನ್ನು ಸೆರೆ ಹಿಡಿಯುವ ಪೋಲೀಸರಲ್ಲಿ ಆತಂಕ ಹೆಚ್ಚು.

   ವೇಗ ಜೀವನದ ಪಟ್ಟಣಿಗರಲ್ಲಿ

   ಪ್ರಾಣಾಂತಕ ರೋಗಗಳಿಂದ ಬಳಲುವವರಲ್ಲಿ (ಹೃದಯಾಘಾತ, ಲಕ್ವ, ಏಡ್ಸ್‌ರೋಗ, ಕ್ಯಾನ್ಸರ್, ಮೂತ್ರಪಿಂಡ ಸೋಲು, ಅಂಗಾಂಗ ಕಸಿ ಮಾಡಿಸಿಕೊಂಡವರು,    ಶಸ್ತ್ರಕ್ರಿಯೆಗೆ ಒಳಗಾಗುವವರು).

 

ಎಷ್ಟು ವಿಧಗಳಿವೆ?

1. ಅಕಾರಣಅತಿಭಯ (Phobia)

ನಿರ್ದಿಷ್ಟ ವಸ್ತು, ಪ್ರಾಣಿ-ಕೀಟ, ಸಂದರ್ಭದಲ್ಲಿ ಅಕಾರಣವಾಗಿ ವಿಪರೀತ ಭಯ ಈ ಪೋಬಿಯಾ ಕಾಯಿಲೆಯ ಪ್ರಮುಖ ಲಕ್ಷಣ. ಈ ವಿಪರೀತ ಭಯದ ಉಪಟಳದಿಂದ ಪಾರಾಗಲು ಅಥವಾ ಅದನ್ನು ನಿವಾರಿಸಲು ವ್ಯಕ್ತಿ ಆ ವಸ್ತು, ಸಂದರ್ಭದಿಂದ ದೂರವಿರುತ್ತಾನೆ. ಮುಖಾಮುಖಿಯಾಗಲು ಇಷ್ಟಪಡುವುದಿಲ್ಲ. ಪೋಬಿಯಾವನ್ನುಂಟು ಮಾಡುವ ಸಾಮಾನ್ಯ ಸಂಗತಿಗಳೆಂದರೆ,

   ಪ್ರಾಣಿ-ಕೀಟಗಳು, ನಾಯಿ, ಬೆಕ್ಕು, ಇಲಿ, ಜಿರಳೆ, ಜೇಡ, ಹಲ್ಲಿ, ಹುಳು, ಝರಿ ಇತ್ಯಾದಿ.

   ಎತ್ತರದ ಸ್ಥಳ, ಮಹಡಿಯ ಮೇಲಿನ ಟೆರೇಸ್, ಸಜ್ಜಾ

   ಸುರಂಗ, ಗುಹೆ, ಸೇತುವೆ.

   ಅತಿ ಸಣ್ಣ ಆವರಣ: ಥಿಯೇಟರ್

   ಜನರ ಗುಂಪು

   ಅತಿ ಜನದಟ್ಟಣೆಯ ಬಸ್, ಟ್ರೇನ್, ಕಾರು, ಥಿಯೇಟರ್, ಮಾರ್ಕೆಟ್, ಸ್ಟೇಡಿಯಂ, ಜಾತ್ರೆ, ದೇವಸ್ಥಾನದ ಪ್ರಾಂಗಣ

   ಸೂಜಿ ಸಿರೆಂಜ್, ಶಸ್ತ್ರಚಿಕಿತ್ಸೆಯ ಉಪಕರಣಗಳು

   ರಕ್ತ-ಗಾಯ-ಗಾಯಾಳುಗಳು

   ಆಸ್ಪತ್ರೆ ವಾರ್ಡ್‌, ಆಪರೇಶನ್ ಥಿಯೇಟರ್, ದಂತ ವೈದ್ಯರ ಕ್ಲಿನಿಕ್.

   ಕತ್ತಲು

   ಮನೆ-ಆಫೀಸು,-ಯಾವುದೇ ಕಟ್ಟಡದಲ್ಲಿ ಒಂಟಿಯಾಗಿರುವುದು.

   ಕೆರೆ, ಬಾವಿ, ಸರೋವರ.

   ವಿಮಾನಯಾನ.

 

2. ಹಠಾತ್ ಭಯ (Panic Disorder)

ಇದ್ದಕ್ಕಿದ್ದಂತೆ ಅತಿಯಾದ ಭಯ/ಹೆದರಿಕೆ ಪ್ರಾರಂಭವಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಈ ಭಯ ತಾರಕಕ್ಕೇರಿ ವ್ಯಕ್ತಿಗೆ ತಾನು ಕುಸಿದುಬೀಳಬಹುದು, ತನಗೆ ಹೃದಯಾಘಾತವಾಗಬಹುದು, ತನಗೆ ಹುಚ್ಚು ಹಿಡಿಯಬಹುದು, ತನ್ನ ಉಸಿರಾಟ ನಿಲ್ಲಬಹುದು, ತನಗೆ ಅಥವಾ ತನ್ನ ಮನೆಯವರಿಗೆ ಈಗಲೇ ದೊಡ್ಡ ದುರಂತ ಜರುಗಲಿದೆ ಎಂಬ ಭಯದಿಂದ ವ್ಯಕ್ತಿ ಕಂಗೆಡುತ್ತಾನೆ. ಅಕ್ಕಪಕ್ಕದಲ್ಲಿರುವವರಿಗೆ ತನ್ನನ್ನು ಬದುಕಿಸಿಕೊಳ್ಳಲು ಮೊರೆಯಿಡಬಹುದು. ಈ ಅತಿಭಯ 15 ರಿಂದ 30 ನಿಮಿಷಗಳ ಕಾಲ ಇರುತ್ತದೆ. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿರುತ್ತದೆ. ತುರ್ತು ಪರಿಸ್ಥಿತಿ ಎಂದು ತಿಳಿದು ಆತನನ್ನು ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ ಅಥವಾ ವೈದ್ಯರನ್ನು ಅಲ್ಲಿಗೇ ತುರ್ತಾಗಿ ಕರೆಸಬೇಕಾಗುತ್ತದೆ. ಸ್ವಲ್ಪ ಹೊತ್ತಿನ ನಂತರ ರೋಗಿ ಚೇತರಿಸಿಕೊಳ್ಳುತ್ತಾನೆ. ನಿರ್ದಿಷ್ಟ ಅವಧಿಯ ನಂತರ, ಭಯದ ಅಟ್ಯಾಕ್ ಮರುಕಳಿಸುತ್ತದೆ.

ಕೆಲವು ಪ್ರಕಾರಗಳಲ್ಲಿ ಫೋಬಿಯಾ ಮತ್ತು ಪ್ಯಾನಿಕ್ ಜೊತೆಜೊತೆಯಾಗಿರುತ್ತದೆ. ಫೋಬಿಯಾವನ್ನುಂಟು ಮಾಡುವ ಸನ್ನಿವೇಶ, ವಸ್ತುವನ್ನು ಕಂಡ ಕೂಡಲೇ ವ್ಯಕ್ತಿಗೆ ಪ್ಯಾನಿಕ್ ಅಟ್ಯಾಕ್ ಕಾಣಿಸಿಕೊಳ್ಳಬಹುದು. ಪದೇ ಪದೇ ಪ್ಯಾನಿಕ್ ಅಟ್ಯಾಕ್ ಬರುತ್ತಿದ್ದರೆ, ವ್ಯಕ್ತಿಯ ಬದುಕು ಅಸಹನೀಯವಾಗುತ್ತದೆ. ಕೆಲವರಲ್ಲಿ ಪ್ಯಾನಿಕ್ ಅಟ್ಯಾಕ್‌ನ್ನು ಪ್ರಾರಂಭಿಸುವ ವಿಭಿನ್ನ ಪ್ರಚೋದಕಗಳು ಅಥವಾ ಸಂದರ್ಭಗಳಿರಬಹುದು.

3. ಸಾರ್ವತ್ರಿಕ ಭಯ (Generalised Anxiety Disorder)

ಆತಂಕ, ಭಯದ ಲಕ್ಷಣಗಳು ಸದಾ ಅಥವಾ ಬಹುತೇಕ ಸನ್ನಿವೇಶಗಳಲ್ಲಿರುತ್ತವೆ. ವ್ಯಕ್ತಿ ಮಾನಸಿಕ ಮತ್ತು ದೈಹಿಕ ಭಯದ ಲಕ್ಷಣಗಳಿಂದ ಬಳಲುತ್ತಾನೆ. ಆತನ ಸಾಮರ್ಥ್ಯ ಕಾರ್ಯಕ್ಷಮತೆ ಕುಗ್ಗುತ್ತದೆ.

4. ಕೆಲವು ವಿಶೇಷ ಭಯಗಳು

ಪರೀಕ್ಷಾ ಭಯ: ಬಹುತೇಕ ವಿದ್ಯಾರ್ಥಿಗಳನ್ನು ಕಾಡುವ ಈ ಭಯ, ಕೆಲವರಲ್ಲಿ ಅತಿರೇಕಕ್ಕೆ ಹೋಗುತ್ತದೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ, ಅಥವಾ ಪರೀಕ್ಷಾ ಹಾಲ್‌ನಲ್ಲಿ ವಿಪರೀತ ಭಯ ಉಂಟಾಗಿ ಓದಿದ್ದೆಲ್ಲಾ ಮರೆತುಹೋಗುತ್ತದೆ. ತಲೆ ಖಾಲಿಯಾದಂತಾಗುತ್ತದೆ. ಬರೆಯಲು ಕೈ ಓಡುವುದೇ ಇಲ್ಲ.

ವೇದಿಕೆ ಭಯ: ವೇದಿಕೆ ಮೇಲೆ ಹೋಗಿ, ಮಾತಾಡಲು, ಹಾಡಲು, ಅಭಿನಯಿಸಲು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನೇಕರಿಗೆ ತೀವ್ರ ಭಯ ಕಾಡುತ್ತದೆ. ಮೈನಡುಗಿ, ಕೈಕಾಲು ಅದುರಿ, ಬಾಯಿ ಒಣಗಿ, ಮಾತು ಗಂಟಲಲ್ಲೇ ಸಿಕ್ಕಿ ಹಾಕಿಕೊಳ್ಳುತ್ತದೆ. ಧ್ವನಿ ಉಡುಗಿ, ಸಂಭಾಷಣೆಯ ಸಾಲು ಮರೆತು, ತಾಳತಪ್ಪಿ, ರಾಗ ಮರೆತು ಅಭಾಸವಾಗುತ್ತದೆ.

ಸಂದರ್ಶನ ಭಯ: ಕೋರ್ಸ್‌‌ಗೆ ಆಯ್ಕೆಯಾಗಲು, ಉದ್ಯೋಗದ ಸಲುವಾಗಿ, ಭಡ್ತಿ ಪಡೆಯಲು ಸಂದರ್ಶನಗಳು ನಡೆಯುತ್ತವೆ. ಎಲ್ಲಾ ಪುಸ್ತಕಗಳನ್ನು, ಆಕರ ಗ್ರಂಥಗಳನ್ನು, ಸಂದರ್ಶನದ ಮಾದರಿ ಗೈಡ್‌ಗಳನ್ನು ಓದಿ, ವಿಷಯ ಸಂಗ್ರಹಿಸಿ ಸಿದ್ಧರಾಗಿ, ಸಂದರ್ಶಕರ ಮುಂದೆ ಕುಳಿತಾಗ, ಎದೆ ನಗಾರಿ ಬಾರಿಸುತ್ತದೆ. ಹೃದಯ ಬಾಯಿಗೆ ಬಂದಂತಾಗುತ್ತದೆ. ಸಂದರ್ಶಕರು ಕೇಳಿದ ಸಾಮಾನ್ಯ/ಅಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೂ ಹೇಳಲಾಗದ ಸ್ಥಿತಿ ಅಭ್ಯರ್ಥಿಗಳದು.

ಸಾಮಾಜಿಕ ಭಯ: ವ್ಯಕ್ತಿಗಳೊಂದಿಗೆ ಮಾತಾಡಬೇಕು, ಕುಶಲ ಸಂಭಾಷಣೆ ನಡೆಸಬೇಕು, ಜೋಕ್‌ಗಳನ್ನು ಹೇಳಿ ನಗಿಸಬೇಕು, ವಿವಿಧ ವಿಷಯಗಳ ಬಗ್ಗೆ ಆಕರ್ಷಕವಾಗಿ ನನ್ನ ಅಭಿಪ್ರಾಯ ಅನಿಸಿಕೆಗಳನ್ನು ಮಂಡಿಸಿ ಭೇಷ್ ಅನಿಸಿಕೊಳ್ಳಬೇಕು ಎಂಬೆಲ್ಲ ಆಸೆಗಳು, ವ್ಯಕ್ತಿ/ವ್ಯಕ್ತಿಗಳನ್ನು ನೋಡುತ್ತಿದ್ದಂತೆ, ಮುಂಜಾನೆಯ ಮಂಜಿನಂತೆ ಮಾಯವಾಗುತ್ತವೆ. ಬಾಯಿಗೆ ಯಾರೋ ಹೊಲಿಗೆ ಹಾಕಿರಬೇಕೆನಿಸಿ, ಬಾಯಿ ತೆರೆಯಲು ಕಷ್ಟವಾಗುತ್ತದೆ. ಹೃದಯ ಢವಗುಟ್ಟುತ್ತದೆ, ಮಾತು ತೊದಲುತ್ತದೆ, ಏನು ಮಾತನಾಡಬೇಕೆಂದು ತಿಳಿಯದೆ, ಮುಖ ಬಾಡಿದ ತಾವರೆಯಂತಾಗಿ ಬಿಡುತ್ತದೆ.

ಆತಂಕ ಮನೋರೋಗಕ್ಕೆ ಕಾರಣಗಳೇನು?

         ಆತ್ಮವಿಶ್ವಾಸದ ಕೊರತೆ, ಕೀಳರಿಮೆ: ವ್ಯಕ್ತಿಗೆ ತನ್ನ ಶಕ್ತಿ ಸಾಮರ್ಥ್ಯಗಳ ಬಗ್ಗೆ ಅರಿವಿರುವುದಿಲ್ಲ. ತಾನು ನಿರ್ವಹಿಸಲಾರೆ, ಸನ್ನಿವೇಶ, ಸಮಸ್ಯೆ, ವ್ಯಕ್ತಿಗಳನ್ನು ನಿಭಾಯಿಸಲಾರೆ ಏಕೆಂದರೆ ತನಗೆ ಆ ಬಲವಿಲ್ಲ., ಚಾತುರ್ಯವಿಲ್ಲ ಎಂದು ಕೊಳ್ಳುವುದು. ಇತರರ ಟೀಕೆ ಟಿಪ್ಪಣಿಗಳನ್ನೇ ಸದಾ ಕೇಳುವ ವ್ಯಕ್ತಿಗೆ, ಮೇಲಿಂದ ಮೇಲೆ ಸೋಲು ಅಪಮಾನಕ್ಕೆ ಒಳಗಾಗುವ ವ್ಯಕ್ತಿಗೆ, ತನ್ನ ಹುಟ್ಟು, ತನ್ನ ಆಕಾರ, ರೂಪ, ಬುದ್ಧಿ ಸಾಮರ್ಥ್ಯಗಳ ಬಗ್ಗೆ ಅತೃಪ್ತಿ ಇರುವ ವ್ಯಕ್ತಿಗೆ ಕೀಳರಿಮೆ ಕಟ್ಟಿಟ್ಟ ಬುತ್ತಿ. ಕೀಳರಿಮೆಯಿಂದ ಆತಂಕ, ಭಯ ಹುಟ್ಟುತ್ತದೆ.

         ಅಪಾಯದ ಅರಿವು ಅಥವಾ ನಿರೀಕ್ಷೆ: ಭಯದ ಮೂಲ ಅಪಾಯ. ತನ್ನ ಕ್ಷೇಮಕ್ಕೆ, ಮಾನ ಪ್ರಾಣಗಳಿಗೆ ಅಪಾಯವಿದೆ ಎನಿಸಿದಾಗ ಭಯ ಸಹಜವಾದ ಭಾವನೆ. ಭಯವಾದಾಗ ನಾವು ಇತರರ ನೆರವನ್ನು ಕೇಳುತ್ತೇವೆ ಅಥವಾ ಆ ಸನ್ನಿವೇಶ-ವ್ಯಕ್ತಿಯಿಂದ ದೂರ ಓಡುತ್ತೇವೆ. ದೊಡ್ಡ ಶಬ್ದವಾದಾಗ, ಹೊಸಬರು ಬಂದಾಗ, ಪ್ರಾಣಿಯೋ, ಕೀಟವೋ ಹತ್ತಿರ ಬಂದಾಗ, ಮಗು ಭಯದಿಂದ ತಾಯಿಯ ಬಳಿಗೆ ಓಡುತ್ತದೆ. ಕಿರುಚಿ, ಇತರರ ನೆರವನ್ನು ಬೇಡುತ್ತದೆ. ವ್ಯಕ್ತಿ ಯಾವ ಸಂದರ್ಭ, ಸನ್ನಿವೇಶ, ವಿಷಯ, ಸ್ಥಳ, ವ್ಯಕ್ತಿಯನ್ನು ಅಪಾಯಕಾರಿ ಎಂದು ಯೋಚಿಸುತ್ತಾನೋ, ಆಗ ಭಯಪೀಡಿತನಾಗುತ್ತಾನೆ. ಹೀಗೆ ಭಯ ಸಹಜ ಮತ್ತು ವ್ಯಕ್ತಿಗೆ ಅನುಕೂಲಕಾರಿ. ಆದರೆ ಅದು ಅತಿಯಾದಾಗ, ಹಿಂಸೆಯಾಗುವುದಲ್ಲದೆ ಆತನ ಸಾಮರ್ಥ್ಯ ಕುಗ್ಗುತ್ತದೆ.

         ಕಲಿತ ಪ್ರತಿಕ್ರಿಯೆನಡವಳಿಕೆ: ಭಯ ಒಂದು ಕಲಿತ ಪ್ರತಿಕ್ರಿಯೆ ಮತ್ತು ನಡವಳಿಕೆ ಎನ್ನುತ್ತಾರೆ-ನಡವಳಿಕೆ ತಜ್ಞರು. ಜಿರಳೆ/ಜೇಡ ಕಂಡರೆ ಭಯಪಡುವ ತಾಯಿಯನ್ನು ಅನುಕರಿಸಿ, ಮಗ/ಮಗಳು ಇದೇ ಭಯವನ್ನು ಪ್ರದರ್ಶಿಸುತ್ತಾರೆ. ಒಮ್ಮೆ ನಾಯಿಯಿಂದ ಕಚ್ಚಿಸಿಕೊಂಡ ಮಗು, ಆನಂತರ ನಾಯಿಯ ಬೊಂಬೆಯನ್ನು ಕಂಡರೂ ಸಾಕು ಅಥವಾ ಯಾವುದೇ ಪ್ರಾಣಿಯನ್ನು ಕಂಡರೂ ಭಯಪೀಡಿತನಾಗಬಹುದು. ಒಂದು ಸಲ ವೇದಿಕೆಯ ಮೇಲೆ, ಮಾತನಾಡಲು ಪ್ರಯತ್ನಿಸಿ, ತಪ್ಪಾದಾಗ, ಸಭಿಕರ ಅಪಹಾಸಕ್ಕೆ ಒಳಗಾದ ವ್ಯಕ್ತಿಗೆ ಆನಂತರ ವೇದಿಕೆ ಎಂದರೇ ಭಯವಾಗತೊಡಗುತ್ತದೆ. ಒಂದು ಪ್ರಯೋಗದಲ್ಲಿ ಮಗುವಿಗೆ ಮೊಲವನ್ನು ತೋರಿಸಿ ಅದು ಮುಟ್ಟಲು ಬಂದಾಗ, ದೊಡ್ಡಶಬ್ದವನ್ನು ಮಾಡಲಾಯಿತು. ಇದು ಹತ್ತಾರು ಸಲ, ಪುನರಾವರ್ತನೆ ಮಾಡಿದಾಗ, ಮಗು ಮೊಲವನ್ನು ಕಂಡರೆ ಸಾಕು ಬೆಚ್ಚಿ ಬೀಳಲು, ಭಯವನ್ನು ವ್ಯಕ್ತಪಡಿಸಲು ಶುರುಮಾಡಿತು. ಹೀಗೆ ನಿರುಪಾಯಕಾರಿ ಮೊಲದ ಬಗ್ಗೆ ಅತಿಭಯ ಕಲಿತ ಪ್ರತಿಕ್ರಿಯೆಯಾಗಿತ್ತು ಎಂಬುದನ್ನು ಈ ಪ್ರಯೋಗ ನಿರೂಪಿಸಿತು.

ಚಿಕ್ಕಂದಿನಲ್ಲಿ ಅನೇಕ ತಂದೆ ತಾಯಿಗಳು ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಭೀತಿಯ ಬೀಜಗಳನ್ನು ಬಿತ್ತುತ್ತಾರೆ. “ನಾಯಿ/ಬೆಕ್ಕು ಕಚ್ಚುತ್ತೆ, ಪರಚುತ್ತೆ, ಮುಟ್ಟಬೇಡ” “ಕತ್ತಲಲ್ಲಿ ಹೊರಗಡೆ ಹೋಗಬೇಡ, ಹಾವು, ಚೇಳು, ದೆವ್ವ, ಕಳ್ಳ ಇರುತ್ತಾರೆ”, ಹೊಸಬರೊಂದಿಗೆ ಮಾತನಾಡಬೇಡ ನಿನ್ನನ್ನು ಎತ್ತಿಕೊಂಡು ಹೋಗಿಬಿಡುತ್ತಾರೆ”, “ನಿನಗೆ ಮಾತಾಡಲು ಬರುವುದಿಲ್ಲ. ಕೇಳಿದರು ನಗುತ್ತಾರೆ. ಬಾಯಿಮುಚ್ಚಿಕೊಂಡು ಸುಮ್ಮನಿರು”, “ನೀನು ಹಾಡಿದರೆ ಕೇಳುವವರು ಕಿವಿಮುಚ್ಚಿಕೊಳ್ಳುತ್ತಾರೆ, ಇವನಿಗ್ಯಾರಪ್ಪಾ ಹಾಡಲು ಹೇಳಿದ್ದು ಎಂದು ಸಿಟ್ಟಿಗೇಳುತ್ತಾರೆ. ಹಾಡಲು ಹೋಗಬೇಡ” ಇತ್ಯಾದಿ ಎಚ್ಚರಿಕೆ ಮಾತುಗಳಿಂದ ಮಗುವಿನ ಮನಸ್ಸಿನಲ್ಲಿ ಭಯೋತ್ಪಾದನೆ ಮಾಡುತ್ತಾರೆ.

ನಕರಾತ್ಮಕ ಅನುಭವಗಳನ್ನು ನೋಡಿ, ಕೇಳಿ, ಅನುಭವಿಸಿದ ವ್ಯಕ್ತಿಗೆ “ಭಯ” ಕಾಡತೊಡಗುತ್ತದೆ. ಸಾರ್ವತ್ರಿಕವಾಗುತ್ತದೆ.

         ಗಾಬಾ ನರವಾಹಕ: ಮಿದುಳಿನಲ್ಲಿ ಗ್ಯಾಮಾ ಅಮೈನೋ ಬುಟರಿಕ್ ಆಸಿಡ್ (ಗಾಬಾ)ಗೂ ಆತಂಕ/ಭಯಕ್ಕೂ ಸಂಬಂಧವಿದೆ ಎನ್ನುತ್ತಾರೆ. ಇದು ಜಾಸ್ತಿ ಉತ್ಪತ್ತಿಯಾದಾಗ, ಭಯ ಉತ್ಪತ್ತಿಯಾಗುತ್ತದೆ.

         ಹೈಪರ್ ಥೈರಾಯಿಡ್ ಸ್ಥಿತಿ: ಥೈರಾಕ್ಸಿನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾದಾಗ ಆತಂಕ/ಭಯದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

         ಮದ್ಯ-ಮಾದಕ ವಸ್ತುಗಳ ಚಟವಿದ್ದು, ಆ ವಸ್ತುವನ್ನು ಸೇವಿಸದಿದ್ದರೆ ಆತಂಕ-ಭಯ “ಹಿಂದೆಗೆತದ ಚಿನ್ಹೆ”ಯಾಗಿ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ

1. ಆತಂಕ ನಿವಾರಕ ಔಷಧಿಗಳು:

i)   ಪ್ರೊಪ್ರೆನಲಾಲ್ 20 ರಿಂದ 80 ಮಿ.ಗ್ರಾಂ.

ii)  ಬೆಂಜೋಡೈಯಾಜೆಪೀನ್ಸ್‌ : ಡಯಾಜೇಪಾರಂ, ನೈಟ್ರಾಜೆಪಾರಂ, ಅಲ್‌ಪ್ರೋಜೊಲಾಂ, ಕ್ಲೋರಾಡಯಾಜೆಪಾಕ್ಸೈಡ್, ಲೊರಾಜೆಪಾಂ, ಕ್ಲೋನಾಜೆಪಾಂ.

iii) ಖಿನ್ನತೆ ನಿವಾರಕ ಔಷಧಿಗಳು: ಅಮಿಟ್ರಿಪ್ಪಲಿನ್, ಪ್ಯಾರಾಕ್ಸಿಟೀನ್

iv) ಶಮನಕಾರಿ : ಬುಸ್ಪಿರೋನ್‌

ಅಡ್ಡ ಪರಿಣಾಮಗಳು: ಹೆಚ್ಚು ನಿದ್ರೆ ಹಗಲಲ್ಲಿ ತೂಕಡಿಕೆ (ಡೋಸ್ ಕಡಿಮೆ ಮಾಡಬೇಕು)

ಡಯಾಜೆಪಾಂ, ಅಲ್‌ ಪ್ರೊಜೊಲಾಮ್, ನೈಟ್ರಜೆಪಾಂ, ಕೆಲವರಲ್ಲಿ ಮಾನಸಿಕ ಅವಲಂಬನೆಯನ್ನುಂಟು ಮಾಡುತ್ತವೆ. ವಿಶೇಷ ಎಚ್ಚರಿಕೆ ಅಗತ್ಯ. ವೈದ್ಯರನ್ನು ಕೇಳದೇ ಔಷಧ ಪ್ರಮಾಣವನ್ನು ಹೆಚ್ಚಿಸಬೇಡಿ. ಎರಡು ಮೂರು ತಿಂಗಳ ಕಾಲಕ್ಕಿಂತ ಹೆಚ್ಚಿನ ಅವಧಿಗೆ ಸೇವಿಸಬೇಡಿ. ವೈದ್ಯರ ಮಾರ್ಗದರ್ಶನವಿದ್ದೇ ಇರಲಿ. ಆದರೆ ವೈದ್ಯರು ಸೂಚಿಸಿದಾಗ, ಆತಂಕ ನಿವಾರಕ ಮಾತ್ರೆಗಳನ್ನು ಸೇವಿಸಲು ಯಾವ ಭಯವೂ ಬೇಡ.

2. ಮನೋಚಿಕಿತ್ಸೆ/ಆಪ್ತಸಲಹೆ ಸಮಾಧಾನ: ಆತಂಕ/ಭಯದ ಮೂಲವನ್ನು ಕಂಡುಹಿಡಿದು, ಕೀಳರಿಮೆಯ ಕಾರಣಗಳನ್ನು ಪತ್ತೆಮಾಡಿ, ಅಂತರಾಳದ ಅಳುಕು ದ್ವಂದ್ವಗಳನ್ನು ಮೇಲೆ ತಂದು ಅವುಗಳ ನಿವಾರಣೆಗೆ ಸಲಹೆ ಸೂಚನೆಗಳನ್ನು ವ್ಯಕ್ತಿಗೆ ನೀಡುವ ಮನೋ ಚಿಕಿತ್ಸೆ-ಆಪ್ತ ಸಲಹೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ನಕಾರಾತ್ಮಕ ಆಲೋಚನೆಗಳನ್ನು ಅನುಮಾನ ಸಂಶಯದ ವಿಚಾರಗಳನ್ನು ಸರಿಪಡಿಸಬೇಕಾಗುತ್ತದೆ.

3. ಅಪಾಯ (ಕಲ್ಪಿತ ಅಥವಾ ನಿಜವಾದದ್ದು)ವನ್ನು ಗುರುತಿಸಿದಾಗ ಉಂಟಾಗುವ ಮನೋದೈಹಿಕ ಲಕ್ಷಣಗಳನ್ನು “ರಿಲ್ಯಾಕ್ಸೇಶನ್” ವಿಧಾನದಿಂದ ಕಡಿಮೆ ಮಾಡಬಹುದು. ಅಪಾಯ ಎಂಬುದು ಕಲ್ಪಿತವಾಗಿದ್ದರೆ, ಕಲಿತ ಪ್ರತಿಕ್ರಿಯೆಯಾಗಿದ್ದರೆ, ವಿಶ್ಲೇಷಣೆ ಮಾಡಿ, ಅಪಾಯ ನಿಜವಾಗಿ ಇಲ್ಲ ಅಥವಾ ಅಪಾಯ ಇದೆ ಎಂದಾದರೆ, ಅದು ಎಷ್ಟು ತೀವ್ರ, ಅದರ ನಿವಾರಣೆ ಹೇಗೆ, ಯಾರ ನೆರವು ಬೇಕು ಎಂಬುದನ್ನು ವ್ಯಕ್ತಿಗೆ ಹೇಳಿ, ಭಯದ ಲಕ್ಷಣಗಳನ್ನು “ವಿರಮಿಸುವ ಪ್ರಕ್ರಿಯೆ” ಮೂಲಕ ಕಡಿಮೆ ಮಾಡಲು ತರಬೇತಿ ನೀಡಲಾಗುತ್ತದೆ. ಇದನ್ನು ನಡವಳಿಕೆ ಚಿಕಿತ್ಸೆ ಎನ್ನುತ್ತಾರೆ.

ಫೋಬಿಯಾ-ಅತಿಭಯ ಕಾಯಿಲೆಗಳಲ್ಲಿ ನಡವಳಿಕೆ ಚಿಕಿತ್ಸೆ ಬಹಳ ಸಹಾಯಕಾರಿ. ಭಯವನ್ನುಂಟು ಮಾಡುವ ವಸ್ತು/ಸನ್ನಿವೇಶಕ್ಕೆ ವ್ಯಕ್ತಿಯನ್ನು ನಿಧಾನವಾಗಿ ಒಳಪಡಿಸಿ, ಆ ಸಮಯ/ಸನ್ನಿವೇಶದಲ್ಲಿ “ರಿಲ್ಯಾಕ್ಸ್” ಆಗಿರಲು ಹಾಗೂ ಆತ/ಕೆ ತಿಳಿದುಕೊಂಡಂತೆ, ಆ ವಸ್ತು/ಸಂದರ್ಭ ಅಪಾಯಕಾರಿಯಲ್ಲ ಎಂಬುದನ್ನು ವ್ಯಕ್ತಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಸತತ ತರಬೇತಿಯಿಂದ ಭಯ ತಗ್ಗುತ್ತದೆ.

4. ಕಲಾ ಚಿಕಿತ್ಸೆ (Art Therapy) : ಸಂಗೀತ (Music Therapy), ನೃತ್ಯ (Dance Therapy) ಚಿತ್ರಕಲೆ ಇತ್ಯಾದಿ ಕಲಾಪ್ರಕಾರಗಳನ್ನು ಭಯ/ಆತಂಕ ಕಡಿಮೆ ಮಾಡಲು ಯಶಸ್ವಿಯಾಗಿ ಬಳಸಬಹುದು. ಹಾಗೇ ಒಳ್ಳೆಯ ಸಾಹಿತ್ಯ/ಕಥೆ, ಕವನ, ಕಾದಂಬರಿ, ವಿಚಾರ ಸಾಹಿತ್ಯವನ್ನು ಕೂಡ ಆತಂಕ ನಿವಾರಣೆಗೆ ಬಳಸಬಹುದು. ಧಾರ್ಮಿಕ ಗ್ರಂಥಗಳು, ಆಧ್ಯಾತ್ಮಿಕ ಬರಹಗಳು ಮನಸ್ಸಿನ ಅನೇಕ ಅವ್ಯಕ್ತ, ದ್ವಂದ್ವ ನೋವುಗಳಿಗೆ ಮದ್ದಾಗುತ್ತಿವೆ.

5. ಧ್ಯಾನ-ಯೋಗ ಪ್ರಾಣಾಯಾಮಗಳು ಆತಂಕದ ದೈಹಿಕ ಮತ್ತು ಮಾನಸಿಕ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಗುರುವಿನ ಮಾರ್ಗದರ್ಶನದಲ್ಲಿ ಯೋಗಾಸನಗಳನ್ನು ಹಾಕುವುದು, ಪ್ರಾಣಾಯಾಮವನ್ನು ಮಾಡುವುದು ಮತ್ತು ಧ್ಯಾನ ಮಾಡುವುದನ್ನು ಕಲಿತು ನಿತ್ಯ ಸ್ವಲ್ಪ ಹೊತ್ತು ಮಾಡಬೇಕು. ಆತಂಕಕಾರಿ ಸನ್ನಿವೇಶದಲ್ಲಿ ಐದು ಹತ್ತು ನಿಮಿಷ ಪ್ರಾಣಾಯಾಮ/ಧ್ಯಾನ ಬಹಳ ಸಹಕಾರಿ. ಸರಳ-ಪ್ರಾಣಾಯಾಮ-ಧ್ಯಾನವನ್ನು ಈ ರೀತಿ ಮಾಡಿ.

  • ಆರಾಮವಾಗಿ ಕುರ್ಚಿಯಲ್ಲಿ, ನೆಲದ ಮೇಲೆ ಕುಳಿತುಕೊಳ್ಳಿ.
  • ಮೈಯನ್ನು ಸಡಿಲ ಮಾಡಿ, ಯಾವುದೇ ಭಾಗ ಬಿಗಿಯಾಗಿರದಂತೆ ಗಮನಿಸಿ.
  • ಈಗ ಕಣ್ಣುಮುಚ್ಚಿ ನಿಧಾನವಾಗಿ ಆಳವಾಗಿ ಉಸಿರೆಳೆದುಕೊಳ್ಳಿ
  • ಆನಂತರ, ನಿಧಾನವಾಗಿ ಉಸಿರುಬಿಡುತ್ತಾ, “ಓಂ” ಎನ್ನಿ.
  • ಓಂ ಶಬ್ದವನ್ನೇ ಗಮನಿಸಿ.
  • ಈ ರೀತಿ ಹತ್ತು ನಿಮಿಷಕಾಲ ದೀರ್ಘ ಉಸಿರಾಟ ಮತ್ತು ಓಂ ಹೇಳಿ.