1. ಗುಳ್ಳವ್ವನ ಹಾಡು

 

ಗುಳ್ಳವನ ಮಣ್ಣ ತರಲೇ ಇಲ್ಲ
ಗುಲಗಂಜಿ ಹಚ್ಚಿ ಆಡಲಿಲ್ಲ
ಈ ವರುಷ ನಾಗರಪಂಚಮಿ  ನಾರಿ  ಸುವ್ವನಾರಿ ॥

ಕರಿಯ ಸೀರೆಯನುಟ್ಟು ಕರಿಯ ಕುಪ್ಪಸ ತೊಟ್ಟು
ಕರನಾಟಕದವರು ನಮ್ಮವರು  ನಾರಿ ಗುಳ್ಳವ್ಗ
ಕರಕೀಯ ಮುಯ್ಯ ತಂದಾರ  ನಾರಿ  ಸುವ್ವನಾರಿ ॥

ಕೆಂಪ ಸೀರೆಯನುಟ್ಟು ಕೆಂಪು ಕುಪ್ಪಸ ತೊಟ್ಟು
ಮಲ್ಲಾಡದವರು ನಮ್ಮವರು  ನಾರಿ  ಗುಳ್ಳವ್ಗ
ಸಂಪಿಗಿ ಮುಯ್ಯ ತಂದಾರ  ನಾರಿ  ಸುವ್ವನಾರಿ ॥

ಬಿಳಿಯ ಸೀರೆಯನುಟ್ಟು ಬಿಳಿಯ ಕುಪ್ಪಸ ತೊಟ್ಟು
ಬೆಳವಲದವರು ನಮ್ಮವರು  ನಾರಿ  ಗುಳ್ಳವ್ಗ
ಬೆಳ್ಳನ್ನ ಮುಯ್ಯ ತಂದಾರ  ನಾರಿ  ಸುವ್ವನಾರಿ ॥

* * *

2. ಬಸವನ ಕೋಲು ಹಾಡು

ಒಂದು ಸುತ್ತಿನ ಕ್ವಾಟಿ
ಅದರೊಳು ಹೊಂದಿ ನಿಂತನು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥1 ॥

ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ತೂಗುವ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥2 ॥

ಮೂರು ಸುತ್ತಿನ ಕ್ವಾಟಿ
ಅದರೊಳು ಮೂರ್ತಗೊಂಡನ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥3 ॥

ನಾಲ್ಕು ಸುತ್ತಿನ ಕ್ವಾಟಿ
ಅದರೊಳು ನ್ಯಾಯ ಮೂರ್ತಿಯು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥4 ॥

ಐದು ಸುತ್ತಿನ ಕ್ವಾಟಿ
ಅದರೊಳು ಐಕ್ಯಮೂರ್ತಿಯು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥5 ॥

ಆರು ಸುತ್ತಿನ ಕ್ವಾಟಿ
ಅದರೊಳು ಅರಳಿನಿಂತಾನ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥6 ॥

ಏಳು ಸುತ್ತಿನ ಕ್ವಾಟಿ
ಅದರೊಳು ಜಗವನಾಳುವ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥7 ॥

ಎಂಟು ಸುತ್ತಿನ ಕ್ವಾಟಿ
ಅದರೊಳು ಕಂಟಲೆತ್ತೇನೊ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥8 ॥

ಒಂಬತ್ತು ಸುತ್ತಿನ ಕ್ವಾಟಿ
ಅದರೊಳು ತುಂಬಿ ಬಂದಾನೊ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                           ॥9 ॥

ಹತ್ತು ಸುತ್ತಿನ ಕ್ವಾಟಿ
ಅದರೊಳು ಸುತ್ತ ನೋಡಲು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ                                                         ॥10 ॥

* * *

3. ಗೊಗ್ಗವ್ವನ ಹಾಡು

ಗೊಗ್ಗಿ ಕುಟ್ಟೀನವ್ವ ಗೊಗ್ಗಿ ಕುಟ್ಟೀನವ್ವ
ಬಣ್ಣದ ಒನಕೀಲೆ ಸುವ್ವಿ  ಸುವ್ವಿ  ಸುವ್ವಾಲೆ ॥

ಅವರು ಕುಟ್ಟ್ಯಾರವ್ವ ಅವರು ಕುಟ್ಟ್ಯಾರವ್ವ
ಮುರುಕ ಒನಕೀಲೆ ಸುವ್ವಿ  ಸುವ್ವಿ  ಸುವ್ವಾಲೆ ॥

ಅಕ್ಕಿ ಕುಟ್ಟೀನವ್ವ ಅಕ್ಕಿ ಕುಟ್ಟೀನವ್ವ
ಬಣ್ಣದ ಒನಕೀಲೆ ಸುವ್ವಿ  ಸುವ್ವಿ  ಸುವ್ವಾಲೆ ॥

ಅವರು ಕುಟ್ಟ್ಯಾರವ್ವ ಅವರು ಕುಟ್ಟ್ಯಾರವ್ವ
ಮುರುಕ ಒನಕೀಲೆ ಸುವ್ವಿ  ಸುವ್ವಿ  ಸುವ್ವಾಲೆ ॥

ಅಕ್ಕಿ ಕೇರೆನವ್ವ ಅಕ್ಕಿ ಕೇರೆನವ್ವ
ಬಣ್ಣದ ಮುತ್ತಲದಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ಅವರು ಕೇರ‌್ಯಾರವ್ವ ಅವರು ಕೇರ‌್ಯಾರವ್ವ
ಹರಕ ಮರದಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ಅನ್ನ ಮಾಡೇನವ್ವ ಅನ್ನ ಮಾಡೇನವ್ವ
ತಾಂಬರ ತಪ್ಪೇಲ್ಯಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ಅವರು ಮಾಡ್ಯಾರವ್ವ ಅವರು ಮಾಡ್ಯಾರವ್ವ
ಒಡಕ ಗಡಿಗ್ಯಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ಊಟಕ್ಕೆ ನೀಡೇನವ್ವ ಊಟಕ್ಕೆ ನೀಡೇನವ್ವ
ಬೆಳ್ಳಿಯ ಬಟ್ಟಲದಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ಅವರು ನೀಡ್ಯಾರವ್ವ ಅವರು ನೀಡ್ಯಾರವ್ವ
ಹರಕ ಪತ್ತರೊಳ್ಯಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ನೀರ ಕೊಟ್ಟೇನವ್ವ ನೀರ ಕೊಟ್ಟೇನವ್ವ
ಚಿನ್ನದ ಚರಿಗ್ಯಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ಅವರು ಕೊಟ್ಟಾರವ್ವ ಅವರು ಕೊಟ್ಟಾರವ್ವ
ಮಣ್ಣಿನ ಮಗಿಯಾಗ  ಸುವ್ವಿ  ಸುವ್ವಿ  ಸುವ್ವಾಲೆ ॥

ನಾವು ಮಲಗೇವವ್ವ ನಾವು ಮಲಗೇವವ್ವ
ಮಜಲಿನ ಮನಿಯಾಗ  ರತ್ನದ ಕಂಬಳಿಮಾಗ್ಯ
ಬಣ್ಣದ ಮಂಚದಮ್ಯಾಗ

ಅವರು ಮಲಗ್ಯಾರವ್ವ ಅವರು ಮಲಗ್ಯಾರವ್ವ
ಚಿಪ್ಪಾಡಿ ಚಪ್ಪರದಾಗ  ಹರಕ ದುಬಟ್ಯಾಗ
ಬೀಸುಕಲ್ಲ ಸಂದ್ಯಾಗ.

 

 * * *

4. ತವರೂರಿನ ಹಂಬಲದ ಹಾಡು

ಆಷಾಢಮಾಸ ಬಂದಿತವ್ವ
ಖಾಸ ಅಣ್ಣ ಬರಲಿಲ್ಲ
ಎಷ್ಟು ನೋಡಲೆ ಅಣ್ಣನ ದಾರಿ  ಸುವ್ವನಾರಿ ॥ಪ ॥

ಹೊತ್ತು ಮುಳುಗುವ್ಯಾಳೆದೊಳಗ
ದೀಪ ಹಚ್ಚುವ್ಯಾಳೆದೊಳಗ
ಅಣ್ಣ ಕರಿಯಾಕ ಬಂದಾನ ನಾರಿ ॥

ರೊಟ್ಟಿ ಬುತ್ತಿ ಮಾಡಿಕೊಂಡು
ಎತ್ತಿನ ಮ್ಯಾಲೆ ಹೇರಿಕೊಂಡು
ಎಂದು ಹೋದೆನ ತವರಿಗೆ ನಾರಿ ॥

ಹಿಂದಿನೆತ್ತ ಹಿಂದ ಇರಲಿ
ಮುಂದಿನೆತ್ತ ಮುಂದ ಇರಲಿ
ಎಂದ ಕಂಡೆನವ್ವ ತಾಯಿ ಮಾರಿ ॥

ತಾಯಿ ಬಂದು ನೀರು ಕೊಟ್ಲು
ತಾಯಿ ಮಾರಿ ಕಂಡೇನವ್ವ
ಹಸಿದ ಹೊಟ್ಟಿ ಉಂಡಂಗ್ಹಾತ ನಾರಿ ॥

* * *