ಗ್ರಾಮದೇವತೆಗಳ ಕಲ್ಪನೆಯು ಬಹುಪ್ರಾಚೀನವಾದದ್ದು. ವೇದ ಉಪನಿಷತ್ತು ಮತ್ತು ಪುರಾಣಗಳಕ್ಕಿಂತಲೂ ಹಿಂದಿನದೆಂದು ಹೇಳಬಹುದು. ಹರಪ್ಪಾ ಮೊಹೆಂಜೋದಾರೊ ಸಂಸ್ಕೃತಿಯಲ್ಲಿ ಕ್ರಿ.ಶ.ಪೂ ೪ ರಿಂದ ೨ ನೆಯ ಶತಮಾನದ ನಾಗರಿಕತೆಯಲ್ಲಿ ದೇವತಾವಿಗ್ರಹಗಳು ದೊರಕಿದ ಬಗೆಗೆ ಉಲ್ಲೇಖಗಳನ್ನು ಕಾಣಬಹುದು. ಮಾನವನು ಗ್ರಾಮ ಜೀವನವನ್ನು ಪ್ರಾರಂಭ ಮಾಡಿದ ಮೇಲೆ ಗ್ರಾಮದೇವತೆಯ ಸೃಷ್ಟಿಯಾಯಿತು. ಆದರೆ ಮಾನವನು ಎಂದಿನಿಂದ ಗ್ರಾಮದಲ್ಲಿ ನೆಲೆಯೂರಿ ನಿಂತನು? ಯಾವ ಕಾಲದಲ್ಲಿ ಗ್ರಾಮದೇವತೆಗಳು ಸೃಷ್ಟಿಗೊಂಡು ಬಂದವು? ಎಂದು ಸ್ಪಷ್ಟವಾಗಿ ಹೇಳಲು ಆಧಾರ ಸಾಮಗ್ರಿಗಳ ಕೊರತೆ ಇದೆ.

ಪ್ರೊ. ಎಚ್‌.ವ್ಹಿ. ನಾಗೇಶ್‌ ಅವರು “ಗ್ರಾಮಗಳು ನೆಲೆಗೊಂಡಂದಿನಿಂದ ಅಂದರೆ ವೇದಪೂರ್ವಕಾಲದಿಂದಲೂ ಗ್ರಾಮದೇವತೆಯ ಸಂಪ್ರದಾಯ ಇದ್ದಿರಬಹುದೆಂದು” ಅಭಿಪ್ರಾಯ ಪಡುವರು. ಆದರೆ ಅಲ್ತೆಕರರು ಮೂರ್ತಿಪೂಜೆಯ ಆರಂಭ ಮತ್ತು ಬೆಳವಣಿಗೆ ವಿಷಯವಾಗಿ ಇನ್ನೂ ಕೆಲಸ ನಡೆಯಬೇಕಾಗಿದೆ. ಮನೆಯಲ್ಲಿ ಆಗಲಿ ದೇವತಾಮೂರ್ತಿಯನ್ನು ಪೂಜಿಸುವ ವಿಷಯವನ್ನು ಧರ್ಮಸೂತ್ರಕಾರರೂ ಸಾಮಾನ್ಯವಾಗಿ ಹೇಳುವುದಿಲ್ಲ. ಮನು ಕೂಡಾ ಹೇಳಿಲ್ಲ. ದೇವಸ್ಥಾನವನ್ನು ಪೂಜಿಸುವ ಸಂಪ್ರದಾಯ ಅಶೋಕನಿಗಿಂತ ಇತ್ತೀಚಿನದೆಂದು ಕಾಣುತ್ತದೆ ಎಂದಿರುವರು.

ದೇವಸ್ಥಾನಗಳು ಸಾರ್ವಜನಿಕ ಪೂಜಾ ಕೇಂದ್ರಗಳೆಂದು ಮುಂದೆ ಪರಿಗಣಿತವಾದವು. ಇಂದಿಗೂ ಕೆಲವೊಂದು ಅಂಶಗಳು ಹಳ್ಳಿಪಟ್ಟಣಗಳಲ್ಲಿ ಉಳಿದುಕೊಂಡು ಬಂದಿವೆ. ದೇವರಿಗೆ ವೀಳ್ಯೆಯನ್ನು ಸ್ವೀಕರಿಸುವ ಸಂಪ್ರದಾಯವನ್ನು ಪ್ರಾರಂಭ ಮಾಡಿದವರು ಆರ್ಯರು. ಇವರು ದ್ರಾವಿಡರಿಂದ ಸ್ವೀಕಾರ ಮಾಡಿದರು. ಈ ವೀಳ್ಯೆಯನ್ನು ಸ್ವೀಕರಿಸುವ ಸಂಪ್ರದಾಯವನ್ನು ಅವಲೋಕಿಸಿದರೆ ಗ್ರಾಮದೇವತೆಯ ಮೂಲ ಪ್ರಾಚೀನಕ್ಕೆ ಹೋಗುತ್ತದೆ. ಅರ್ವಾಚೀನಕಾಲದಿಂದ ಪ್ರಾಚೀನ ಕಾಲದವರೆಗೂ ಗ್ರಾಮದೇವತೆಗಳು ಹಳ್ಳಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡಿದ್ದವು ಎಂದು ಹೇಳಬಹುದು. ಇಂದಿಗೂ ಪ್ರತಿಯೊಂದು ಗ್ರಾಮದಲ್ಲಿ ದೇವಾಲಯಗಳು ಸ್ಥಾಪನೆಗೊಂಡಿದುದರ ಬಗೆಗೆ ಅನೇಕ ಐತಿಹ್ಯಗಳು ಕೈಗೆ ಸಿಕ್ಕುತ್ತವೆ. ಹೀಗೆ ಅನೇಕ ಅಂಶಗಳನ್ನು ಊಹಿಸಲು ಅವಕಾಶವಿದೆ.

ಜಿ.ಆರ್. ತಿಪ್ಪೇಸ್ವಾಮಿ ಅವರು ಗ್ರಾಮದೇವತೆಗಳ ಆರಾಧನೆಯು ಆರ್ಯಪೂರ್ವ ಕಾಲದಿಂದಲೂ ನಡೆಯುತ್ತ ಬಂದಿದೆ ಎಂದು ಅಭಿಪ್ರಾಯಪಡುವರು.

ಗೋರೂರು ರಾಮಸ್ವಾಮಿ ಅಯ್ಯಂಗಾರರು ಗ್ರಾಮದೇವತೆಯ ಕಲ್ಪನೆ ಅತ್ಯಂತ ಪ್ರಾಚೀನವಾದುದು, ಆರ್ಯರ ಉಪನಿಷತ್ತು ವೇದಗಳ ಕಾಲಕ್ಕೆ ಸೇರಿದವು ಎಂದು ಹೇಳಲಾಗುತ್ತದೆ. ರಾಮಾಯಣದ ಕಾಲಕ್ಕಿಂತ ಹಿಂದಿನಿಂದಲೂ ದೇವತೆ ಇದ್ದಿರಬೇಕು. ಸೀತೆ ಗಂಗೆಯನ್ನು ದಾಟುವಾಗ ಗಂಗೆಯನ್ನು ಹೀಗೆ ಪ್ರಾರ್ಥಿಸುತ್ತಾಳೆ. ನಿನ್ನ ತೀರದಲ್ಲಿರುವ ದೇವತೆಗಳಿಗೆ ಅನೇಕ ನೈವೇದ್ಯಗಳನ್ನು ಮಾಡಿಸುವೆನು. ನಿನಗೆ ಸಂತೋಷವಾಗುವ ಮರ್ಯಾದೆಯಲ್ಲಿ ಸಾವಿರಾರು ಸುರಾಘಟಗಳನ್ನು ಅನೇಕ ಮಾಂಸೋಪಹಾರಗಳನ್ನು ಬಲಿಕೊಡುವೆನು.

ಈ ಎಲ್ಲ ಅಂಶಗಳನ್ನು ಗಮನಿಸಿದರೆ ಗ್ರಾಮದೇವತೆಗಳ ಪ್ರಾಚೀನತೆಯ ಬಗೆಗೆ ವಿದ್ವಾಂಸರಲ್ಲಿಯೂ ಖಚಿತವದ ಅಭಿಪ್ರಾಯಗಳಿಲ್ಲವೆಂದು ಕಂಡುಬರುತ್ತದೆ. ಆದರೆ ಗ್ರಾಮದೇವತೆಗಳ ಬಗೆಗೆ ಊಹಿಸಲು ಸಾಕಷ್ಟು ಆಧಾರಗಳಿರುವವು. ಲಭ್ಯವಾದ ಆಧಾರಗಳ ಮೇಲಿಂದ ವಿವೇಚಿಸಿದರೆ ಖಚಿತವಾದ ಅಭಿಪ್ರಾಯ ಮೂಡಿಬರಲು ಸಾಧ್ಯವಿದೆ.