ವೈಜ್ಞಾನಿಕ ಹೆಸರು: ಅನ್ನೋನ ಸ್ಕ್ವಾಮಕೋಸ
ಕುಟುಂಬ: ಅನ್ನೋನೇಸ

ಇದು ಒಂದು ಒಣ ಹವೆಯ ಹೊದರು ಅಥವಾ ಕೆಲವು ಕಡೆ ಸುಮಾರು ೫ ರಿಂದ ೯ ಮೀ. ಎತ್ತರ ಬೆಳೆಯುವ ಮರ. ಇದರ ಹಣ್ಣಿಗಾಗಿ ಇದನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಸುಮಾರು ಶುಷ್ಕ ಪ್ರದೇಶಗಳಲ್ಲಿ ಬೆಳೆಸುವುದುಂಟು. ಹೂಗಳು ಒಂಟಿ, ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿರುತ್ತವೆ ಹಾಗೂ ಜೂನ್‌ಜುಲೈನಲ್ಲಿ ಕಾಣಿಸಿಕೊಳ್ಳುತ್ತವೆ. ಫಲಗಳು ದುಂಡು, ದಪ್ಪ ಮತ್ತು ‘ಅಗ್ರಿಗೇಟ್‌’ ರಚನೆ ಹೊಂದಿರುತ್ತವೆ ಹಾಗೂ ಹಸಿರು ಮಿಶ್ರಿತ ಬೂದು ಬಣ್ಣ ಹೊಂದಿರುತ್ತವೆ. ಇವು ಆಗಸ್ಟ್‌ನಿಂಧ ಅಕ್ಟೋಬರ್ ವರೆಗೆ ಹಣ್ಣಾಗುತ್ತವೆ. ಪ್ರತಿ ಹಣ್ಣಿನಲ್ಲಿ ಕಪ್ಪು ಬೀಜಗಳು ಸಿಹಿಯಾದ ಬಿಳಿ ತಿರುಳಿನಿಂದ ಆವರಿಸಲ್ಪಟ್ಟಿರುತ್ತವೆ.
ಪುನರುತ್ಪತ್ತಿ: ಈ ಗಿಡದ ಬೀಜಗಳು ಮನುಷ್ಯನಿಂದಲೂ ಪ್ರಾಣಿಗಳಿಂದಲೂ ಬಹಳ ಸುಲಭವಾಗಿ ಪ್ರಸಾರವಾಗುತ್ತವೆ. ಮಳೆಗಾಲದಲ್ಲಿ ಅವುಗಳು ಮೊಳೆತು ಗಿಡಗಳಾಗುತ್ತವೆ. ಗಿಡವನ್ನು ಬುಡದಲ್ಲಿ ಕತ್ತರಿಸಿದರೆ ಚಿಗುರು ಬೆಳೆದು ಗಿಡಗಳಾಗುತ್ತವೆ.

ಕಂದಕ ಮತ್ತು ದಿಣ್ಣೆ ಮಾದರಿಯ ತೋಪುಗಳನ್ನು ಮಾಡುವಾಗ , ಮಳೆಗಾಲ ಶುರುವಾಗುವ ಸ್ವಲ್ಪ ಮುಂಚೆ ಹದ ಮಾಡಿದ ದಿಣ್ಣೆಯ ಮೇಲೆ ಬೀಜಗಳನ್ನು ಬಿತ್ತಿದರೆ ಸಾಕು. ಬೀಜಗಳು ಮೊಳೆತು , ಸಸಿಗಳಾಗಿ ಗಿಡಗಳಾಗುತ್ತವೆ.

ಉಪಯೋಗಗಳಲು: ಇದರ ಹಣ್ಣು ರುಚಿಯಾಗಿರುವುದಲ್ಲದೆ, ಪ್ರೋಟೀನ್‌ ಮತ್ತು ಜೀವಸತ್ವಗಳನ್ನು ಹೊಂದಿರುತ್ತವೆ. ಉತ್ತಮ ತಳಿ ಮತ್ತು ಕಸಿ ಮಾಡಿದ ಗಿಡಗಳಿಂದ ಒಳ್ಳೆಯ ರುಚಿಯಾದ ಮತ್ತು ಹೆಚ್ಚು ಸಂಖ್ಯೆಯ ಹಣ್ಣುಗಳನ್ನು ಪಡೆಯಬಹುದು. ಇದರ ಎಲೆಯಿಂದ ಒಂದು ಬಗೆಯ ಎಣ್ಣೆಯನ್ನು ತೆಗೆದು ಔಷಧಿಯಾಗಿ ಉಪಯೋಗಿಸುತ್ತಾರೆ.  ಬೀಜಗಳಿಂದ ತೆಗೆದ ಎಣ್ಣೆಯನ್ನು ಸಾಬೂನು ತಯಾರಿಕೆಯಲ್ಲಿ ಮತ್ತು ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿಸುತ್ತಾರೆ.