ವೈಜ್ಞಾನಿಕ ಹೆಸರು: ಕ್ಯಾಶುರಿನ ಈಕ್ವೆಸೆಟಿಫೋಲಿಯ
ಕುಟುಂಬ: ಕ್ಯಾಶುರಿನೇಸಿ

ನಿತ್ಯಹರಿದ್ವರ್ಣದ ಈ ಮರ ಆಸ್ಟ್ರೇಲಿಯಾ ದೇಶದ್ದು. ಇದನ್ನು ಸುಮಾರು ೧೬೦ ವರ್ಷಗಳ ಹಿಂದೆ ತಂದು ಇಂಡಿಯಾ ದೇಶದ ಸಮುದ್ರ ತೀರಗಳಲ್ಲಿ ಸೌದೆಗಾಗಿ ನೆಟ್ಟರು. ಇದು ಬಹಳ ಬೇಗನೆ ಬೆಳೆಯುವ ಮರ. ಆದರೆ ಒಳನಾಡಿನಲ್ಲಿ ಇದು ಅಷ್ಟು ಚೆನ್ನಾಗಿ ಬೆಳೆಯುವುದಿಲ್ಲ. ಬೇಗೆ ಬೆಳೆಯುವ ಮರಗಳಲ್ಲಿ ಯೂಕಲಿಪ್ಟಸ್‌ ಪ್ರಭೇದ ಅರಣ್ಯ ಇಲಾಖೆಯವರಿಗೆ ಬಹಳ ಪರಿಚಯವಾದದ್ದು. ಯಾಕೆಂದರೆ ಸರ್ವೆಮರದ ತೋಪುಗಳಿಗೆ ಬದಲು ಲಯೂಕಲಿಪ್ಟಸ್‌ ತೋಪುಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದಾರೆ. ೧೯೪೦ರ ದಶಕದಲ್ಲಿ ‘ಬ್ಲ್ಯಾಕ್‌ ಸೂಟ್‌’ ರೋಗದಿಂದ ಸರ್ವೆ ಮರಗಳು ಎಲ್ಲಾ ತೋಪುಗಳಲ್ಲಿ ನಾಶವಾದವು. ಆಗಿನಿಂದ ಸರ್ವೆ ಮರಗಳ ನೆಡುತೋಪುಗಳನ್ನು ಮಾಡುವುದನ್ನು ಕೈಬಿಟ್ಟರು.

ಸರ್ವೆಮರದ ಕಾಂಡ ನೆಟ್ಟಗೆ ಎತ್ತರವಾಗಿರುತ್ತದೆ.. ನೆತ್ತಿಯು ಗೋಪುರಾಕಾರದ್ದು. ಎಲೆಗಳು ಉದ್ದನೆಯ ಹಸಿರು ಸೂಜಿಯ ಹಾಗಿರುತ್ತವೆ. ಗಂಡು ಹೂಗಳು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಮರಗಳಲ್ಲಿ ಬಿಟ್ಟಿರುತ್ತವೆ.

ಹೂಗಳನ್ನು ಫೆಬ್ರವರಿಯಿಂದ ಏಪ್ರಿಲ್‌ವರೆಗೂ ಮತ್ತು ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳುಗಳಲ್ಲಿ ನೋಡಬಹುದು. ಫಲಗಳು ಜೂನ್‌ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬೀಜಗಳು ಬಹಳ ಹಗುರ. ಅವು ೧ ಕಿ.ಗ್ರಾಂನಲ್ಲಿ ೭ ಲಕ್ಷದಿಂದ ೮ ಲಕ್ಷ ಬೀಜಗಳಿರುತ್ತವೆ.

ಪುನರುತ್ಪತ್ತಿ: ಬೀಜಗಳನ್ನು ತಗ್ಗು ಮಡಿಗಳಲ್ಲಿ ಬಿತ್ತಿ ಪೋಷಣೆ ಮಾಡಿದರೆ ೭-೯ ದಿನಗಳಲ್ಲಿ ಮೊಳಕೆ ಹೊರಟು ಬೆಳೆಯಲು ಶುರು ಆಗುತ್ತವೆ. ೧೦-೧೫ ಸೆಂ.ಮೀ.  ಎತ್ತರವಿರುವಾಗ ಅವುಗಳನ್ನು ಸಸಿಮಡಿಗಳಿಗೆ ವರ್ಗಾಯಿಸಬೇಕು. ಸುಮಾರು ಒಂದು ವರ್ಷದ ಮೇಲೆ, ಮಳೆಗಾಲದ ಪ್ರಾರಂಭದಲ್ಲಿ ಸಸಿಗಳು ಸುಮಾರು ೭೦ ಸೆಂ.ಮೀ. ಎತ್ತರವಿರುವಾಗ ಅವುಗಳನ್ನು ಪ್ಲಾಂಟೇಶನ್‌ ಜಾಗದಲ್ಲಿ ಮಾಡಿರುವ ೩೦ ಘನ ಸೆಂ.ಮೀ. ಗುಣಿಗಳಲ್ಲಿ ನೆಡಬೇಕು. ಸುಮಾರು  ೭-೮ ವರ್ಷಗಳಲ್ಲಿ ಅವು ೧೫-೨೦ ಮೀ. ಎತ್ತರವಿರುವಾಗ ಕಟಾವು ಮಾಡಿ ಬೇರೆ ಬೇರೆ ಉಪಯೋಗಗಳಿಗೆ ಬಳಸಬಹುದು.

ಉಪಯೋಗಗಳು: ಇದರ ಕಂಬಗಳನ್ನು ಕಟ್ಟಡಗಳನ್ನು ಕಟ್ಟುವಾಗ ‘ಸೆಂಟರಿಂಗ್‌’ಗೆ ಉಪಯೋಗಿಸುತ್ತಾರೆ. ಇದರ ಸೌದೆ, ಹಸಿಯದಾಗಿದ್ದರೂ ಚೆನ್ನಾಗಿ ಉರಿಯುತ್ತದೆ. ಇದು ಹೆಚ್ಚು ಶಾಖವನ್ನು ಕೊಡುವ ಸೌದೆ. ಇದರಿಂದ ಒಳ್ಳೆಯ ಇದ್ದಿಲನ್ನು ತಯಾರಿಸುತ್ತಾರೆ . ಇದರ ಬೇರುಗಳ ಗಂಟುಗಳ ಜೀವಾಣುಗಳು ಸಾರಜನಕವನ್ನು ಭೂಮಿಗೆ ಸೇರಿಸಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಇದು ಶ್ರೀಗಂಧದ ಮರಕ್ಕೆ ಅತಿಥೇಯ ಮರ.